ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಅನೇಕ ರೀತಿಯ ಪ್ರಶ್ನೆಗಳು ಸದಾ ಮೂಡತ್ತಲೇ ಇರುತ್ತದೆ. ಅವುಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿ ಸಾಕಷ್ಟು ಬಾರಿ ನಾವು ಸದಾ ಗೊಂದಲಮಕ್ಕೆ ಈಡಾಗುತ್ತೇವೆ. ಚಂದನ್ ಅವರ ಲೇಖನಿಯಲ್ಲಿ ಜೀವನದಲ್ಲಿನ ಸಾಕಷ್ಟು ಪ್ರಶ್ನೆ ಉತ್ತರಗಳು, ತಪ್ಪದೆ ಮುಂದೆ ಓದಿ…
ನಮ್ಮ ಮನಸ್ಸು ಹಾಗು ನಮ್ಮ ಆಲೋಚನೆಗಳಲ್ಲಿ ಚಿಗುರೊಡೆಯುವ ಪ್ರಶ್ನೆಗಳಿಂದಲೇ ಕೆಲವೊಮ್ಮೆ ನಮ್ಮ ಜೀವನದಲ್ಲಿ ಅನೇಕ ಸಂಘರ್ಷಗಳಿಗೆ ನಾವೇ ಕಾರಣರಾಗಿರುತ್ತೇವೆ.
ಹಿಂದಿನ ಇತಿಹಾಸದ ರಾಮಾಯಣದಿಂದ ಹಿಡಿದು ಮಹಾಭಾರತದ ಕಥೆಗಳಲ್ಲಿಯೂ ಸಹ ಮನಸ್ಸಿನಲ್ಲಿ ಹಾಗು ಆಲೋಚನೆಗಳಲ್ಲಿ ಬಂದಂತಹ ಕೆಲವೊಂದು ಪ್ರಶ್ನೆಗಳಿಂದಲೇ ಯುದ್ಧಗಳು ಜರುಗಿರುವುದನ್ನು ಕಾಣಬಹುದು.
ಇಂದಿನ ನಮ್ಮ ಜೀವನದಲ್ಲಿಯೂ ಸಹ ಪ್ರತಿಯೊಂದು ಹಂತದಲ್ಲಿಯೂ ಅನೇಕ ರೀತಿಯ ಪ್ರಶ್ನೆಗಳು ನಮ್ಮ ಮನಸ್ಸು ಹಾಗು ಆಲೋಚನೆಗಳಲ್ಲಿ ಮೂಡುತ್ತಿರುತ್ತದೆ. ಅವುಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿ ಸಾಕಷ್ಟು ಬಾರಿ ನಾವು ಸದಾ ಗೊಂದಲಮಯವಾಗಿ ಇರುವುದು ಕೂಡ ಸಹಜ.
ಈ ಪ್ರಕೃತಿಯಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತೆ ಅಂತಾರೆ. ಸೂಕ್ತ ಸಮಯ ಅನ್ನೋದು ಬಂದಾಗ ಎಲ್ಲದಕ್ಕೂ ಉತ್ತರ ಸಿಕ್ಕೇ ಸಿಗುತ್ತೆ ಅಂತಾರೆ. ಆದರೆ, ಅದೇ ಪ್ರಕೃತಿಯಲ್ಲಿ ಬದುಕುವ ಮನುಷ್ಯನ ಮನಸ್ಸು ಹಾಗು ಆಲೋಚನೆಗಳಿಗೆ ಬರುವ ಅನೇಕ ಪ್ರಶ್ನೆಗಳಿಗೆ ಉತ್ತರ ಕೆಲವೊಮ್ಮೆ ಇಡೀ ಜೀವನಪೂರ್ತಿ ಕಾಯುತ್ತಲಿದ್ದರೂ ಅಥವಾ ಎಷ್ಟೇ ಪ್ರಯತ್ನ ಪಟ್ಟರೂ ಸಿಗಲಾರದು.
ಉತ್ತರ ಹುಡುಕಲು ನಾವು ಎಷ್ಟೇ ಪ್ರಯತ್ನ ಪಟ್ಟರೂ ಅದು ಇಡೀ ಜೀವನಪೂರ್ತಿ ಪ್ರಶ್ನೆಯಾಗಿಯೇ ಇದ್ದು, ಗೊಂದಲವನ್ನು ನಮ್ಮ ಮನಸ್ಸಿನಲ್ಲಿ ಬೆಳೆಸುತ್ತ ಹೋಗುತ್ತದೆಯೇ ವಿನಃ ನಮ್ಮ ಮನಸ್ಸು ಹಾಗು ಆಲೋಚನೆಗೆ ಒಪ್ಪುವಂತಹ ಉತ್ತರ ಖಂಡಿತ ಕೆಲವೊಂದು ಪ್ರಶ್ನೆಗಳಿಗೆ, ಕೆಲವೊಮ್ಮೆ ಖಂಡಿತ ಸಿಗಲಾರದು.
ಮನಸ್ಸು ಹಾಗು ಆಲೋಚನೆಗಳಿಗೆ ಒಪ್ಪುವ ಹಾಗೆ ಉತ್ತರ ಸಿಗುವವರೆಗೂ ಗೊಂದಲಮಯ ಮನಸ್ಸು ಹಾಗು ಆಲೋಚನೆಗಳನ್ನು ಹೊತ್ತು ಯಾರು ತಾನೇ ಜೀವನದಲ್ಲಿ ಪ್ರಶಾಂತತೆಯಿಂದ ಹಾಗು ನೆಮ್ಮದಿಯಿಂದ ಇರಲು ಸಾಧ್ಯ.
ಮಾಡುವ ಪ್ರತಿ ಕೆಲಸ, ಆಡುವ ಪ್ರತಿ ಮಾತು, ಯಾವುದರಲ್ಲಿಯೂ ಆಸಕ್ತಿ ಇಲ್ಲದೆ, ಸದಾ ಆಲೋಚಿಸುತ್ತ, ಚಿಂತಿಸುತ್ತ ಇರುವ ಮನುಷ್ಯ ಹೇಗೆ ಎಲ್ಲರೊಂದಿಗೆ ಸ್ಪಂದಿಸಲು ಸಾಧ್ಯ. ಸದಾ ಮೌನವಾಗಿದ್ದು ಏಕಾಂತತೆಯನ್ನು ಬಯಸುವ ಹಂತಕ್ಕೆ ಮನುಷ್ಯ ಬಂದರೆ ಅದು ಯಾರಿಗೆ ತಾನೇ ಇಷ್ಟವಾಗುತ್ತೆ. ಅಂತಹ ವ್ಯಕ್ತಿಯ ನಡೆ ಅಥವಾ ನುಡಿ ಯಾರಿಗೆ ತಾನೇ ಇಷ್ಟವಾಗುತ್ತೆ. ಅಂತಹ ವ್ಯಕ್ತಿಯ ಪರಿಸ್ಥಿತಿಯನ್ನು ಯಾರು ತಾನೇ ಅರ್ಥ ಮಾಡಿಕೊಳ್ಳಬಲ್ಲರು.
ಅಂತಹ ಪರಿಸ್ಥಿತಿಯಲ್ಲಿ ತನ್ನ ಅಂತರಂಗದ ಗೊಂದಲಗಳನ್ನು ವಿವರಿಸಿ ಯಾರಲ್ಲಿಯೂ ಹೇಳಲಾರದೆ ತನ್ನಲ್ಲಿ ತಾನು ಕುಗ್ಗಿಹೋಗುತ್ತಾ, ಇತ್ತ ತನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗದೆ ಅತ್ತ ತನ್ನ ಗೊಂದಲಮಯ ಮನಸ್ಥಿತಿಯಿಂದ ಹೊರಬರಲಾರದ ವ್ಯಕ್ತಿ ಪಡುವ ನರಕಯಾತನೆ ಎಲ್ಲರಿಗೂ ಸುಲಭವಾಗಿ ಅರ್ಥವಾಗಲ್ಲ. ಅಂತಹ ವ್ಯಕ್ತಿಯ ಬಗ್ಗೆ ಇತರರು ತಮಗೆ ಅನಿಸಿದ ಹಾಗೆ ತಮಗೆ ತಾವೇ ನಿರ್ಧರಿಸಿಕೊಂಡುಬಿಡುತ್ತಾರೆ.
ಮನುಷ್ಯನಿಗೆ ಜೀವನದಲ್ಲಿ ಏನಿಲ್ಲದಿದ್ದರೂ ನೆಮ್ಮದಿ, ಪ್ರಶಾಂತತೆ ಅನ್ನೋದು ಇದ್ದರೆ ಸಾಕು. ಅಸಲಿಗೆ ಅದು ಎಲ್ಲಿ ಸಿಗುತ್ತೆ? ಯಾವುದರಲ್ಲಿ ಸಿಗುತ್ತೆ? ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಬಯಸುವುದು ಹಾಗು ಹುಡುಕುತ್ತ ಸಾಗುವುದೂ ಇದನ್ನೇ ಆದರೂ ಅದು ಎಷ್ಟರ ಮಟ್ಟಿಗೆ ಎಷ್ಟು ಜನಕ್ಕೆ ಸಿಕ್ಕಿದೆ ಅಂತ ಹೇಳಲು ಸಾಧ್ಯವೇ.
ಈ ಪ್ರಶಾಂತತೆ ಹಾಗು ನೆಮ್ಮದಿಯ ಹುಡುಕಾಟದಲ್ಲಿ ಗೆದ್ದವರು ಯಾರು ಅಂತ ಕೇಳಿದರೆ ಉತ್ತರ ಸಿಗಲ್ಲ. ಅದೇ ಸೋತವರು ಯಾರು ಅಂತ ಪ್ರಶ್ನೆ ಮಾಡಿದರೆ ಬಹುಶಃ ಎಲ್ಲರೂ ತಮ್ಮನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳಬಹುದೇನೋ. ಯಾಕೆಂದರೆ ಎಲ್ಲರ ಮನಸ್ಸು ಹಾಗು ಆಲೋಚನೆಗಳಲ್ಲಿ ಈ ಪ್ರಶ್ನೆಗೆ ಖಂಡಿತ ಸರಿಯಾದ ಉತ್ತರ ಅನ್ನೋದು ಸಿಗಲಾರದು.
- ಚಂದನ್
