‘ಜನುಮ ಜನುಮಕೂ’ ಕಾದಂಬರಿ ಪರಿಚಯ

ಹೂಲಿಶೇಖರ್ ಅವರ ಜನುಮ ಜನುಮಕೂ ಕಾದಂಬರಿಯಲ್ಲಿ ಬರುವ ಸುಮಾಳಿಗೆ ತಂದೆಯ ವಯಸ್ಸಿನ ರಾಣಾರಲ್ಲಿ ಬೆಳೆದ ಬಾಂಧವ್ಯ ಯಾವ ರೀತಿಯದ್ದು? ತಪ್ಪದೆ ಮುಂದೆ ಓದಿ ಜನುಮಕೂ ಕಾದಂಬರಿಯ ಕುರಿತು ಸುಮಾ ಭಟ್ ಅವರು ಬರೆದ ಕೃತಿ ಪರಿಚಯ…

ಪುಸ್ತಕದ ಹೆಸರು: ಜನುಮ ಜನುಮಕೂ
ಲೇಖಕರು: ಹೂಲಿ ಶೇಖರ್
ಪ್ರಥಮ ಮುದ್ರಣ:೨೦೧೪
ಬೆಲೆ:೧೨೫
ಪ್ರಕಾಶಕರು: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
ಪುಟಗಳು : ೧೯೨

ಲೇಖಕರ ಕಿರು ಪರಿಚಯ

ಹೂಲಿ ಶೇಖರ್ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಹೂಲಿ ಎಂಬ ಗ್ರಾಮದಲ್ಲಿ ಜನಿಸಿದವರು. ಬಾಲ್ಯದಿಂದಲೂ ಅವರ ತಂದೆ ಹೇಳಿದ ಕತೆಗಳಿಂದ ಪ್ರೇರಿತರಾಗಿ ಪ್ರೈಮರಿ ಸ್ಕೂಲಿನಲ್ಲಿಯೇ ಬಡತನದ ಭೂತ ಎಂಬ ನಾಟಕ ಬರೆದಿದ್ದರು.ಕನ್ನಡ ಸಾಹಿತ್ಯ ಪ್ರಪಂಚಕ್ಕೆ ನಾಟಕ,ಕಥೆಗಳು, ಕಾದಂಬರಿಗಳ ಕೊಡುಗೆ ನೀಡಿರುವ ಇವರು ಕಿರುತೆರೆಯ ಮೂಡಲಮನೆ, ಮಹಾನವಮಿ, ಸೌಭಾಗ್ಯವತಿ, ಕಿಚ್ಚು, ಕಿನ್ನರಿ, ಕುಂತಿ ಮುಂತಾದ ಖ್ಯಾತ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ನಾಟಕಕಾರ, ಕತೆಗಾರ, ಕಾದಂಬರಿಕಾರ, ಧಾರಾವಾಹಿಗಳ ಕಥೆ, ಚಿತ್ರಕಥೆ, ಸಂಭಾಷಣೆಕಾರ, ರಂಗಭೂಮಿಯ ನಟ, ಮೇಕಪ್ ಮ್ಯಾನ್ ಹೀಗೆ ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಕನ್ನಡ ಸಾಹಿತ್ಯಲೋಕದ ಎಲೆ ಮರೆಯ ಕಾಯಂತಿರುವ ಲೇಖಕರು ಎಂದರೆ ತಪ್ಪಿಲ್ಲಾ. ೨೦೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದಿರುವ ಹೂಲಿ ಶೇಖರ್ ಸರಳ ಜೀವಿ ಮತ್ತು ಚಿತ್ರರಂಗದೊಂದಿಗೂ ನಂಟು ಹೊಂದಿರುವ ಸಕಲ ಕಲಾ ವಲ್ಲಭ ಎನ್ನಬಹುದು.

ಕೃತಿ ಪರಿಚಯ

ಕೆಲವೊಮ್ಮೆ ಕೆಲವರನ್ನು ಕಂಡಾಗ ನಮಗೆ ಅರಿವಿಲ್ಲದೇ ಅವಿನಾಭಾವ ಸಂಬಂಧ ಅವರೊಂದಿಗೆ ನಾವು ಪಡೆದುಕೊಂಡು ಬಿಡುತ್ತೇವೆ. ಪರಿಚಯವೇ ಇಲ್ಲದ ವ್ಯಕ್ತಿಯೇ ಪರಿಚಯದ ಸುತ್ತಲಿನವರಿಗಿಂತ ಹೆಚ್ಚು ಆಪ್ತವೆನಿಸುತ್ತಾರೆ. ಹಿಂದಿನ ಜನ್ಮದ ನೆನಪು ಎಲ್ಲರಿಗೂ ಇರೋಲ್ಲಾ ಅದು ಕೆಲವೊಮ್ಮೆ ಕೆಲವರಿಗೆ ಮಾತ್ರ ಬರುವಂತದ್ದು, ಅಂತಹದೇ ಹಿಂದಿನ ಜನ್ಮದ ನೆನಪುಗಳು ಅರಿಯದ ಕೆಲ ಘಟನೆಗಳ ಪುಟಗಳನ್ನು ತೆರೆವಂತೆ ಮಾಡುತ್ತವೆ. ಅಂತಹಾ ಏಳೆಯೊಂದನ್ನು ಇಟ್ಟುಕೊಂಡು, ಚಿತ್ರರಂಗದ ಒಳ ಹೊರವನ್ನು ತಿಳಿಸುತ್ತಾ, ಉತ್ತರ ಕನ್ನಡದ ಭಾಷೆಯ ಸೊಬಗನ್ನೂ ಕಾದಂಬರಿಯ ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ಲೇಖಕ ಹೂಲಿ ಶೇಖರ್ ಅವರು ಬರೆದ ಪುಸ್ತಕವೇ “ಜನುಮ ಜನುಮಕೂ”

ಬೆಂಗಳೂರಿನಿಂದ ನಿರ್ಮಾಪಕ ಚಂದೂ ಪಾಟೀಲ್ ಮತ್ತು ನಿರ್ದೇಶಕ ರಾಣಾ ತಮ್ಮ ಹೊಸ ಚಿತ್ರದ ಚಿತ್ರೀಕರಣಕ್ಕೆಂದು ಮಡಿಕೇರಿಗೆ ಬರುವುದರಿಂದ ಕಾದಂಬರಿ ಆರಂಭವಾಗುತ್ತದೆ. ನಿಸರ್ಗದತ್ತ ಪ್ರಕೃತಿಯ ಮಡಿಲಿನಲ್ಲಿರುವ ಮಡಿಕೇರಿ ಬಗ್ಗನಮನೆ ಕಾಫಿ ಎಸ್ಟೇಟಿಗೆ ಚಿತ್ರತಂಡದವರು ಚಿತ್ರೀಕರಣಕ್ಕೆಂದು ಬಂದಿಳಿಯುತ್ತಾರೆ. ಕನ್ನಡದ ಪ್ರತಿಭೆಗಳನ್ನು ಬಳಸಿಕೊಂಡು ಸಿನಿಮಾ ಮಾಡುವ ಉದ್ದೇಶ ಸದಭಿರುಚಿಯ ನಿರ್ದೇಶಕ ರಾಣಾ ಅವರಿಗಿತ್ತು. ರಾಣಾರವರ ಪ್ರಕಾರ ಸಿನಿಮಾ ಅಂದರೆ ಬರೀ ಮನರಂಜನೆಯಲ್ಲಾ, ಸಿನಿಮಾ ಜನರಿಗೆ ಸಾಮಾಜಿಕ, ನೈತಿಕ ಜವಾಬ್ದಾರಿ ಹೆಚ್ಚಿಸುವಂತಿರಬೇಕೆಂಬುದು ಎಂದಾಗಿತ್ತು. ಆದರೆ ಗ್ಲಾಮರ್ನೊಂದಿಗೆ ಬಟ್ಟೆ ಬಿಚ್ಚಿ ಕುಣಿದು, ಪಡ್ಡೆ ಹುಡುಗರ ಎದೆ ಬಡಿತ ಎರಿಸುವಂತಹಾ ನಟಿ ಚಲನಚಿತ್ರದಲ್ಲಿದ್ದರೆ ಜನ ನೋಡುತ್ತಾರೆಂಬ ಧೋರಣೆ ನಿರ್ಮಾಪಕ ಪಾಟೀಲರದಾಗಿತ್ತು. ಅದಕ್ಕೆ ನಿರ್ಮಾಪಕ ಪಾಟೀಲರು ಅನುಷ್ಕಾ ಚಾವ್ಲಾ ಎಂಬ ನಟಿಯನ್ನು ಹಿಂದಿ ಚಿತ್ರರಂಗದಿಂದ ಕೋಟಿ ಹಣ ನೀಡಿ ಕರೆಸಿರುತ್ತಾರೆ.

ಜನುಮ ಜನುಮಕೂ

ಸದಭಿರುಚಿಯ ಚಿತ್ರಗಳ ನಿರ್ದೇಶಕ ರಾಣಾರವರಿಗೆ ನಿರ್ಮಾಪಕರ ಧೋರಣೆ ಇಷ್ಟವಿಲ್ಲದಿದ್ದರೂ ನಟ ಶಯನಕುಮಾರ್ ಮತ್ತು ನಟಿ ಅನುಷ್ಕಾ ಚಾವ್ಲಾರೊಂದಿಗೆ ಚಿತ್ರೀಕರಣಕ್ಕೆ ತೊಡಗುತ್ತಾರೆ. ಇತ್ತ ಅನುಷ್ಕಾಳ ತಾಯಿಯನ್ನೇ ಚಿತ್ರೀಕರಣದ ಮೊದಲ ದಿನ ನಟ ಶಯನ್ ಕುಮಾರ್ ಹಿರೋಯಿನ್ ಎಂದು ಭ್ರಮಿಸುವಂತಾಗುತ್ತದೆ. ಅಲ್ಲದೇ ಅನುಷ್ಕಾಳನ್ನು ನಿರ್ಮಾಪಕ ಚಂದೂ ಪಾಟೀಲ್ ಕೊಡಿಸಲು ಕರೆದೊಯ್ದ ಕಾರಣ ಚಿತ್ರೀಕರಣ ಪ್ರಾರಂಭವಾಗದಿರುವುದು ನಿರ್ದೇಶಕರಿಗೆ ಮಾತ್ರವಲ್ಲದೇ ಇಡೀ ಚಿತ್ರರಂಗಕ್ಕೆ ಬೇಸರ ತರುತ್ತದೆ.

ಬಾಳೆಲೆ ತೋಟದ ಸೇನೆಯಲ್ಲಿದ್ದ ಅಪ್ಪಚ್ಚು ಮತ್ತು ಕಾವೇರಮ್ಮನವರಿಗೆ ಸುಮಾ ಮತ್ತು ಪೂವಯ್ಯ ಎಂಬ ಇಬ್ಬರು ಮಕ್ಕಳು.ಸುಮಾ ಪದವಿ ಮುಗಿಸಿ ಎಸ್ಟೇಟಿನ ಕೆಲಸಗಳಲ್ಲಿ ತೊಡಗಿಸಿಕೊಂಡ ಧೈರ್ಯವಂತ,ಸುಂದರ ಹುಡುಗಿ. ಬಗ್ಗನಮನೆಯ ತೋಟದ ಮಾಚಯ್ಯ ಅಂಕಲ್ ಸುಮಾಳಿಗೆ ಸಿನಿಮಾದಲ್ಲೊಂದು ಪಾತ್ರ ಕೊಡಿಸುವ ಸಲುವಾಗಿ ಚಿತ್ರೀಕರಣದ ಜಾಗಕ್ಕೆ ಕರೆದಿರುವ ವಿಷಯ ತಮ್ಮ ಪೂವಯ್ಯ ಅಮ್ಮ ಅಕ್ಕನಿಗೆ ಹೇಳುತ್ತಾನೆ. ಕಾವೇರಮ್ಮನವರು ಚಿತ್ರೀಕರಣ ಬೇಕಾದರೆ ನೋಡು ಆದರೆ ನಟಿಸುವುದು ಬೇಡವೆಂದಿರುತ್ತಾರೆ.

ಚಿತ್ರೀಕರಣದ ಜಾಗಕ್ಕೆ ಬಂದು ಮ್ಯಾನೇಜರ್ ರಘುರಾಮನ ಮೂಲಕ ನಿರ್ದೇಶಕ ರಾಣಾರನ್ನು ಸುಮಾ ಭೇಟಿಯಾಗುತ್ತಾಳೆ. ಆಶ್ಚರ್ಯದಿಂದ ಸುಮಾಳನ್ನು ಕಂಡ ರಾಣಾರವರಿಗೆ ತಮ್ಮ ಮೊದಲ ಆಪ್ತ ಗೆಳತಿ ರೋಜಿಯಂತೆ ಭಾಸವಾಗಿ ಅವಳನ್ನು ರೋಜಿ ಎಂದು ಕರೆದರೆ, ಸುಮಾಳು ಅವರ ಮೋಡಿಗೆ ಒಳಗಾಗಿ ಪಪ್ಪೂ ಎಂದು ಕರೆಯುತ್ತಾಳೆ. ಈ ವಿಚಾರದ ಬಗ್ಗೆ ತಮ್ಮ ಪೂವಯ್ಯನು ಪ್ರಶ್ನಿಸಿದಾಗ ಮಾತ್ರ ಸುಮಾಳ ಬಳಿ ಯಾವ ಉತ್ತರವೂ ಸಿಗೋಲ್ಲಾ…ಅಲ್ಲದೇ ರಾಣಾನ ಭೇಟಿಯ ನಂತರ ಸುಮಾ ಓಂಥರಾ ಆಗಿ ಬಿಡುತ್ತಾಳೆ.

ಇದರ ನಂತರ ಸುಮಾ ಚಿತ್ರೀಕರಣದಿಂದ ವಾಪಾಸಾಗಿ ಮನೆಗೆ ಬರುವಾಗ ಇಗ್ಗುತ್ತಪ್ಪನ ಗುಡಿಯಲ್ಲಿ ಮೈಮೇಲೆ ಬಂದ ಬೆಟ್ಟದ ಮಾರಮ್ಮ ಸುಮಾಳನ್ನು ಕರೆಸಿ ನೀನು ಕೊಡಗಿನ ಮಗಳಲ್ಲವೆಂದು ಹೇಳಿದ್ದಲ್ಲದೇ ಸುಮಾಳ ಬಗ್ಗೆ ವಿಚಿತ್ರವಾಗಿ ಮಾತನಾಡುತ್ತದೆ.ಈ ಬೆಳವಣಿಗೆಗಳಿಂದ ಮ್ಲಾನವದನಳಾದ ಮಗಳನ್ನು ತಾಯಿ ಕಾವೇರಿ ಸಮಾಧಾನಿಸುತ್ತಾಳೆ.

ಈ ಘಟನೆಯ ನಂತರ ಕಾದಂಬರಿಯಲ್ಲಿ ಚಿತ್ರೀಕರಣ, ಸುಮನ ಮನೆಯ ವಿದ್ಯಮಾನಗಳೊಂದಿಗೆ ರಾಣಾರವರು ನೆನಪಿಸಿಕೊಳ್ಳೋ ಅವರ ಬಾಳಿನ ಹಿಂದಿನ ಘಟನೆಗಳು ಜೊತೆ ಜೊತೆಯಲ್ಲಿ ಸಾಗುತ್ತದೆ. ನಿರ್ದೇಶಕ ರಾಣಾ ಅವರನ್ನು ಭೇಟಿಯಾದ ನಂತರ ಅದೇಕೋ ಸುಮಾಳಿಗೆ ಹೇಳಲಾರದ ಅನುಭೂತಿ ಮತ್ತು ಸೆಳೆತ ಅವರೊಂದಿಗೆ ಉಂಟಾಗುತ್ತದೆ.ಅಲ್ಲದೇ ರಾಣಾರ ಭೇಟಿಯ ನಂತರ ಕೆಲವು ಘಟನೆಗಳು ಸುಮಾಳ ಕನಸಿನಲ್ಲಿ ಬರಲಾರಂಭಿಸುತ್ತದೆ.

 

ರಾಣಾರ ನೆನಪಿನಲ್ಲಿ ತಮ್ಮ ಹೈಸ್ಕೂಲಿನ ಜೀವನ ಹಾದು ಹೋಗಿ, ಅಲ್ಲಿ ತನಗಿದ್ದ ತನ್ನ ಆಪ್ತ ಗೆಳತಿ ರೋಜಿಯ ನೆನಪುಗಳು ಕಾಡಲಾರಂಭಿಸುತ್ತದೆ. ರೋಜಿಯೊಂದಿಗೆ ಮೊದಲ ಭೇಟಿ ಅದು ನಂತರ ಸ್ನೇಹವಾಗಿದ್ದು, ಇಬ್ಬರೂ ಒಬ್ಬರಿಗೊಬ್ಬರು ಆತ್ಮೀಯವಾಗಿದ್ದು, ತಮ್ಮ ಬೆಳಗಾವಿ ಹೈಸ್ಕೂಲಿನ ದಿನದ ನೆನಪುಗಳಿಗೆ ಜಾರುತ್ತಾರೆ.

ಈ ಬೆಳವಣಿಗೆಗಳ ಮಧ್ಯದಲ್ಲಿ ರಾಣಾರವರು ನಿರ್ದೇಶಿಸುತ್ತಿರುವ ಹೆಸರಿಡದ ಚಲನಚಿತ್ರಕ್ಕೆ ಸುಮಾ ಮತ್ತೊಬ್ಬ ನಟಿಯಾಗಿ ಆಯ್ಕೆಯಾಗುತ್ತಾಳೆ. ಹೊಸ ನಟಿಯಾದ ಸುಮಾಗೆ ಚಿತ್ರೀಕರಣದವರು ನೀಡುವ ಗೌರವ, ಅವಳಲ್ಲಿರುವ ಅಭಿನಯ ಕಲೆ, ಅವಳ ಮುಗ್ಧ ಸೌಂದರ್ಯ, ರಾಣಾರವರು ಅವಳಿಗೆ ನೀಡೋ ಪ್ರಾಮುಖ್ಯತೆ ಹಿಂದಿ ನಟಿಗೆ ಕಿರಿಕಿರಿಯೆನಿಸಿ ಸುಮಾಳನ್ನು ಅನುಷ್ಕಾ ಕಡೆಗಣಿಸಲಾರಂಭಿಸುತ್ತಾಳೆ.

ಮಡಿಕೇರಿಗೆ ಚಿತ್ರೀಕರಣ ನೋಡಲೆಂದು ಬಂದ ರಾಣಾರ ಪತ್ನಿ ಶಾಂತಮ್ಮ ಅವರಿಗೆ ಗಂಡ ಮತ್ತು ಸುಮಾಳಲ್ಲಿದ್ದ ಗಾಢತೆ ಇರಿಸುಮುರಿಸೆನಿಸುತ್ತದೆ.
ಸುಮಾ ನಟಿಯಾಗಿ ಆಯ್ಕೆಯಾಗಿದ್ದಕ್ಕೆಂದು ಆಯೋಜಿಸಿದ್ದ ಪಾರ್ಟಿಯಲ್ಲಿ ಅನುಷ್ಕಾ ಸುಮಾಳಿಗೆ ಅವಮಾನ ಮಾಡಿ ಕೆನ್ನೆಗೆ ಹೊಡೆಯುತ್ತಾಳೆ. ಆಗ ಸುಮಾ ಅನುಷ್ಕಾಳಿಗೆ ವೈನ್ ಎರಚಿದಾಗ ಅನುಷ್ಕಾಳ ತಾಯಿ ರೋಶನಿ ಕೆಟ್ಟದಾಗಿ ಮಾತಾಡಿ ವಾದಕ್ಕೆ ವಾದ ಬೆಳೆದು ಅಮ್ಮ ಮಗಳು ಇಬ್ಬರಿಗೂ ಸುಮಾ ಹೊಡೆದು ಬಿಡುತ್ತಾಳೆ. ಆದರೆ ಈ ಘಟನೆಯಲ್ಲಿ ಸುಮಾ ಹೇಳಿದ ಮಾತುಗಳು ರಾಣಾರ ಮಡದಿ ಶಾಂತಮ್ಮರಲ್ಲಿ ಗಂಡನ ಮತ್ತು ಸುಮಾಳ ಸಂಬಂಧದ ಬಗ್ಗೆ ಹಲವು ಅನುಮಾನ ಹುಟ್ಟಿಸುತ್ತದೆ. ಪಾರ್ಟಿಯ ನಂತರ ಶಾಂತಮ್ಮ ಗಂಡನ ಬಳಿ ರೋಜಿ ಇಲ್ಲಾ ಸುಮಾಳ ವಿಷಯ ತೆಗೆದು ಜಗಳವಾಡುತ್ತಾಳೆ.

ಘಟನೆಯ ನಂತರ ಚಿತ್ರೀಕರಣಕ್ಕೆ ಬರದೇ ಹಿಂದಿ ನಟಿ ಹಠ ಹಿಡಿದು ತನಗೆ ಹೊಡೆದು ಅವಮಾನ ಮಾಡಿದ ಸುಮಾಳನ್ನು ಚಲನಚಿತ್ರದಿಂದ ತೆಗೆದು ಹಾಕಬೇಕೆಂದು ಮತ್ತು ಸುಮಾ ತನ್ನ ಬಳಿ ಕ್ಷಮೆ ಕೇಳಬೇಕೆಂದು ಪಾಟೀಲರಿಗೆ ನಿರ್ದೇಶಕನೆದುರಿಗೆ ಕರಾರನ್ನು ಹಾಕುತ್ತಾಳೆ. ಸುಮಾಳೊಂದಿಗಿದ್ದ ಹೇಳಲಾಗದ ಅನುಬಂಧ, ಅವಳಲ್ಲಿದ್ದ ಕಲೆ , ಅಲ್ಲದೇ ಪಾರ್ಟಿಯ ಘಟನೆಯಲ್ಲಿ ತಪ್ಪಿಲ್ಲದ ಸುಮಾಳನ್ನು ತೆಗೆದರೆ ತಾನು ಸಿನೆಮಾ ನಿರ್ದೇಶನ ಮಾಡುವುದಿಲ್ಲ ಎಂದು ರಾಣಾ ಹೇಳಿ ಬಿಡುತ್ತಾರೆ.

ರಾಣಾರ ನಿರ್ಧಾರದಿಂದ ವಿಚಲಿತರಾದ ಅನುಷ್ಕಾ, ರೋಶನಿ ತಮ್ಮದೇ ತಪ್ಪೆಂದು ಚಿತ್ರೀಕರಣಕ್ಕೆ ಬರುತ್ತೇವೆಂದು ಹೇಳಿ ತಮ್ಮ ಅಸಲಿ ಬಣ್ಣವನ್ನು ತೋರುತ್ತಾರೆ. ಅಂದಿನ ಚಿತ್ರೀಕರಣಕ್ಕೆಂದು ಸುಮಾ ಉರುಫ್ ರೋಜಿಯನ್ನು ರಾಣಾರು ಕರೆಯಲು ಹೋದಾಗ, ತಾಯಿ ಕಾವೇರಮ್ಮ ಮನೆಯೊಳಗೆ ಕಾಫಿಗೆ ಆಹ್ವಾನಿಸುತ್ತಾರೆ. ಸುಮಾಳ ಮನೆಯಲ್ಲಿ ಕಂಡ ಆಲ್ಬಮ್ಮಿನಲ್ಲಿದ್ದ ಹಸಿರಿನ ಎಲೆಗಳ ಮಧ್ಯ ನೆರಳಿನಲ್ಲಿದ್ದ ಹಸುಗೂಸಿನ ಫೋಟೋ ಬಗ್ಗೆ ರಾಣಾರು ವಿಚಾರಿಸಿದಾಗ ಅದು ಎಸ್ಟೇಟಿನಲ್ಲಿ ಯಾರೋ ಇಟ್ಟು ಹೋದ ಕೂಸು ಅದನ್ನು ಮಡಿಕೇರಿ ಚರ್ಚಿಗೆ ಕೊಟ್ಟೆವು ಎಂದು ಕಾವೇರಮ್ಮ ತಿಳಿಸುತ್ತಾರೆ.

ಗಂಡನ ಹಳೇ ಪ್ರೇಮಿ ರೋಜಿಯ ಮಗಳು ಸುಮಾ ಇರಬಹುದೆಂಬ ಅನುಮಾನದಿಂದ ಶಾಂತಮ್ಮ ಸಹಾ ಸುಮಾಳ ಮನೆಗೆ ಮಗಳು ಬಬ್ಲಿ, ಮ್ಯಾನೇಜರ್ ಜೊತೆ ಬಂದು ಕಾವೇರಮ್ಮನವರನ್ನು ಕಂಡಾಗ ಅವಳ ಲೆಕ್ಕಾಚಾರ ತಪ್ಪೆಂದು ಅವಳಿಗೆ ಅನಿಸುತ್ತದೆ. ಇತ್ತ ರಾಣಾರಿಗೆ ಸುಮಾ ತನ್ನ ಕನಸಿನ ಬಗ್ಗೆ ಹೇಳಿದಾಗ ತಮ್ಮ ಮತ್ತು ರೋಜಿ ಮದುವೆ ತಪ್ಪಿ ಶಾಂತಾರೊಂದಿಗೆ ಮದುವೆಯಾದ ಘಟನೆಗೆ ಜಾರುತ್ತಾರೆ. ಸಿನೆಮಾಗಾಗಿ ತಂದ ನಕಲಿ ಮಾಂಗಲ್ಯ ಸುಮಾ ಚಿತ್ರದ ದೃಶ್ಯಕ್ಕಾಗಿ ಹಾಕಬೇಕೆಂದಿರುವುದನ್ನು ಯೂನಿಟ್ಟಿನವರಿಂದ ದೂರ ಹೋಗಿ, ಅವಳು ಹೇಳಿದಂತೆ ಅವಳ ಕುತ್ತಿಗೆಗೆ ಕಟ್ಟುವುದನ್ನು ಅವರ ಮಡದಿ, ಮಗಳು ನೋಡಿ ಬಿಡುತ್ತಾರೆ.

ಆ ದಿನವೇ ನಿರ್ದೇಶಕ ರಾಣಾ ಸುಮಾಳೊಂದಿಗೆ ಸುಮಾಳ ಮನೆಯಲ್ಲಿ ಕಂಡ ಹಸುಗೂಸನ್ನು ನೀಡಿದ ಮಡಿಕೇರಿಯ ಹಳೇ ಚರ್ಚಿಗೆ ಭೇಟಿ ಮಾಡುತ್ತಾನೆ. ಈ ಭೇಟಿಯಲ್ಲಿ ಸಿಕ್ಕ ಆ ಚರ್ಚಿನ ಫಾದರ್ ಸುಮಾಳನ್ನು ಕಂಡು ದಿಗ್ಭ್ರಮೆಯಾಗುತ್ತಾನೆ. ಈ ಘಟನೆಯ ನಂತರ ಕಾದಂಬರಿಯಲ್ಲಿ ಕೆಲವು ಸತ್ಯಗಳ ಅನಾವರಣವಾಗುತ್ತದೆ. ನಂತರದ ಆಗುಹೋಗುಗಳು ಕಾದಂಬರಿಯ ಓದಿಗೆ ಕುತೂಹಲ ಮೂಡಿಸಿ ರೋಜಿಯ ಸತ್ಯ, ಪುನರ್ಜನ್ಮದ ಬಂಧ ಮುಂತಾದ ರೋಚಕ ವಿಷಯವನ್ನು ಓದುಗರಿಗೆ ತಿಳಿಸುತ್ತದೆ.

ಹಿಂದಿ ನಟಿಯರ ಬಗ್ಗೆ ನಿರ್ಮಾಪಕ ಚಂದೂ ಪಾಟೀಲನ ನಿಲುವೇನಾಗಿತ್ತು??? ನಟಿಯರು, ಚಿತ್ರಗಳು ಇವುಗಳ ವಿಷಯದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರ ಆಲೋಚನೆಯಲ್ಲಿದ್ದ ವ್ಯತ್ಯಾಸಗಳೇನು??? ಮ್ಯಾನೇಜರ್ ರಘುರಾಮ್ ನಿರ್ದೇಶಕ ರಾಣಾರ ಬಳಿ ಏಟು ಏಕೆ ತಿಂದ??? ಚಿತ್ರೀಕರಣದ ಮೊದಲ ದಿನದ ಚಿತ್ರೀಕರಣ ಪ್ರಾರಂಭವಾಗಲು ತಡವಾಗಲು ನಿರ್ಮಾಪಕ ಮತ್ತು ನಟಿ ಹೇಗೆ ಕಾರಣರಾದರು???

ಚಿತ್ರದಲ್ಲಿ ನಟಿಸುವೆನೆಂದ ಸುಮಾಳನ್ನು ಅವಳ ತಮ್ಮ ಯಾವ ರೀತಿ ಆಡಿಕೊಳ್ಳುತ್ತಾನೆ??? ಕಾವೇರಮ್ಮ ಸುಮಾಳನ್ನು ನಟಿಸುವುದು ಬೇಡ ಎಂದು ಹೇಳಿದ್ದೇಕೆ??? ನಿರ್ದೇಶಕ ರಾಣಾರನ್ನು ಮೊದಲು ಭೇಟಿಯಾದ ಸುಮಾ ಅವರನ್ನು ಪಪ್ಪೂ ಅಂದಿದ್ದೇಕೆ, ರಾಣಾ ಸುಮಾಳನ್ನು ಕಂಡು ರೋಜಿ ಅಂದಿದ್ದೇಕೆ??? ಇಗ್ಗುತ್ತಪ್ಪನ ಗುಡಿಯಲ್ಲಿ ಮೈಮೇಲೆ ಬಂದ ಬೆಟ್ಟದ ಮಾರಮ್ಮ ಸುಮಾಳನ್ನು ಕರೆಸಿ ನೀನು ಕೊಡಗಿನ ಮಗಳಲ್ಲವೆಂದು ಹೇಳಿದ್ದಲ್ಲದೇ ನುಡಿದ ಭವಿಷ್ಯವೇನು??? ಸುಮಾಳನ್ನು ಕಂಡ ನಂತರ ರಾಣಾ ತನ್ನ ಮತ್ತು ರೋಜಿಯ ನೆನಪುಗಳಿಗೆ ಜಾರಿದಾಗ ಓದುಗರಿಗೆ ಸಿಗುವ ಕುತೂಹಲ ಘಟನೆಗಳಾವುವು???

ಸುಮಾಳಿಗೆ ತಂದೆಯ ವಯಸ್ಸಿನ ರಾಣಾರಲ್ಲಿ ಬೆಳೆದ ಬಾಂಧವ್ಯ ಯಾವ ರೀತಿಯದ್ದು?? ಸುಮಾ ಮತ್ತು ರಾಣಾರ ನಿಕಟತೆ ಶಾಂತಾಳಿಗೆ ಯಾರ ನೆನಪು ತರಿಸಿ, ಗಂಡನ ಬಗ್ಗೆ ಅನುಮಾನಪಟ್ಟಳು??? ಪಾರ್ಟಿಯಲ್ಲಿ ಅನುಷ್ಕಾ, ರೋಶನಿ, ಸುಮಾ ಇವರ ಮಧ್ಯೆ ಜಗಳವಾಗಲು ಕಾರಣವೇನು??? ರಾಣಾರು ಸುಮಾಳ ಮನೆಯಲ್ಲಿ ಕಂಡ ಹಸುಗೂಸಿನ ಫೋಟೋದಲ್ಲಿದ್ದ ಮಗು ಯಾರು??? ರಾಣಾ ಸುಮಾ ಹೇಳಿದಂತೆ ಶಿವಲಿಂಗದ ಮುಂದೆ ತಮ್ಮ ಅರಿವಿಗೆ ಬಾರದಂತೆ ತಾಳಿ ಕಟ್ಟಿದ್ದೇಕೆ??? ಮಗು ತಲುಪಿದ ಚರ್ಚಿಗೆ ಹೋದಾಗ ರಾಣಾರಿಗೆ ತಿಳಿದ ಸತ್ಯಗಳೇನು???

ಕಾದಂಬರಿಯಲ್ಲಿ ಬರುವ ಇತರ ಮುಖ್ಯ ಪಾತ್ರಗಳಾವುವು??? ರೋಜಿ ಮತ್ತು ರಾಣಾರ ಕಡೆಯ ಭೇಟಿ ಎಲ್ಲಾಗಿತ್ತು ಮತ್ತು ಅವಳು ಎಲ್ಲಿಗೆ ಹೋಗುವೆ ಎಂದಿದ್ದಳು??? ರೋಜಿ ಕ್ರೈಸ್ತ ಸನ್ಯಾಸಿಯಾಗಲು ಕಾರಣವೇನು??? ಕಾದಂಬರಿಯಲ್ಲಿ ಸುಮಾಳು ಹಾಕಿದ್ದ ನಕಲಿ ಮಾಂಗಲ್ಯದಿಂದ ಸುಮಾಳ ಮದುವೆ ತಪ್ಪಿದ್ದಾದರೂ ಹೇಗೆ??? ಕಾವೇರಮ್ಮ ಸುಮಾಳ ಬಗ್ಗೆ ಬಚ್ಚಿಟ್ಟ ಸತ್ಯ ಯಾವುದು???

ರಾಣಾರು ಹುಡುಕಿದ ರೋಜಿ ಮತ್ತು ಸುಮಾ ಒಬ್ಬರೇನಾ ಇಲ್ಲಾ ಬೇರೆಯವರಾ???ಶಾಂತಮ್ಮರಿಗೆ ರೋಜಿ ಮತ್ತು ಸುಮಾರ ಬಗ್ಗೆ ತಿಳಿದ ಸತ್ಯದಿಂದ ಪಶ್ಚಾತ್ತಾಪ ಪಡುವಂತಾಗಿದ್ದೇಕೆ??? ಚಿತ್ರೀಕರಣದ ಕೊನೆಯ ಸೀನ್ ಮಲ್ಲಳ್ಳಿ ಫಾಲ್ಸಿನಲ್ಲಿ ಚಿತ್ರೀಕರಿಸಲು ಹೋದಾಗ ಆದ ಅನಾಹುತವೇನು??? ಈ ಅನಾಹುತದಿಂದಾಗಿ ನಿರ್ದೇಶಕ ರಾಣಾ ಜೈಲು ಪಾಲಾಗಿದ್ದೇಕೆ??? ಇಂತಹಾ ಹಲವು ಕುತೂಹಲಗಳಿಗೆ ಹೂಲಿ ಶೇಖರ್ ಅವರ ಜನುಮ ಜನುಮಕೂ ಕಾದಂಬರಿಯ ಸಂಪೂರ್ಣ ಓದು ಸಹಕರಿಸುತ್ತದೆ.

ದುರಂತ ಅಂತ್ಯವಾದರೂ ಪ್ರೇಮದ ಹೊಸ ಪರಿಭಾಷೆಯೊಂದನ್ನು ನಿರೂಪಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಲೇಖಕ ಹೂಲಿ ಶೇಖರ್ ಅಚ್ಚುಕಟ್ಟಾಗಿ ಮಾಡಿದ್ದಾರೆಂದರೆ ತಪ್ಪಾಗಲಾರದು. ಲೇಖಕರು ಚಲನಚಿತ್ರರಂಗದೊಂದಿಗೆ ಹೊಂದಿದ್ದ ನಿಕಟವಾದ ನಂಟಿನಿಂದ ಚಿತ್ರೀಕರಣ, ಪಾತ್ರಗಳ ಪರಕಾಯತೆ, ಚಿತ್ರೀಕರಣಕ್ಕೆ ಬೇಕಾದಂತಹಾ ಜಾಗಗಳ ಆಯ್ಕೆ, ಪ್ರಕೃತಿಯ ವರ್ಣನೆ, ಅಂದಿನ ಇಂದಿನ ಚಿತ್ರತಂಡಗಳಿಗಿದ್ದ ವ್ಯತ್ಯಾಸ, ಮ್ಯಾನೇಜರ್ ರಘುರಾಮನಿಗೆ ಪುಟ್ಟಣ್ಣ ಕಣಗಾಲ್ ಅವರಿಗಿದ್ದ ಸಂಬಂಧಗಳು ಮುಂತಾದ ಅನೇಕ ವಿಚಾರಗಳನ್ನು ಓದುಗರಿಗೆ ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೇನೋ ಎನಿಸುತ್ತದೆ. ಅಲ್ಲದೇ ಕಾದಂಬರಿಯ ನಿರೂಪಣೆಯಲ್ಲಿ ಹೊಸತನವಿದೆ, ಗೂಢವಾದ ತಿರುವುಗಳಿಂದ ಕೂಡಿದ ಈ ಕಾದಂಬರಿಯ ಓದು ವಿಶಿಷ್ಟವಾದ ಅನುಭವ ನೀಡುತ್ತದೆ.

ಲೇಖಕರಾದ ಹೂಲಿ ಶೇಖರ್….ಇವರ ಬಗ್ಗೆ ಅವರ ಮಗಳಾದ ಆಕೃತಿ ಕನ್ನಡದ ಶಾಲಿನಿಯವರಿಂದ ಕೆಲ ವಿಷಯಗಳು ತಿಳಿದಿದ್ದರೂ, ವಸಂತಾ ಮೇಡಂ ಪುಸ್ತಕ ಅವಲೋಕನ ತಂಡದಿಂದ ಮಾಡಿದ ಸಂದರ್ಶನ ಇವರ ಬಗ್ಗೆ ಹೆಚ್ಚು ತಿಳಿವಂತೆ ಮಾಡಿ ಇವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿತು. ಕೆಲವು ಲೇಖಕರ ಬಗ್ಗೆ ನಮಗೆ ತಿಳಿದೇ ಇರುವುದಿಲ್ಲಾ, ಅವರ ಪುಸ್ತಕಗಳ ಬಗ್ಗೆ ಸಹಾ ಅಂತಹ ಮಾಹಿತಿ ನಮಗೆ ಇರುವುದಿಲ್ಲಾ, ಇಂತಹ ಸಂದರ್ಶನಗಳು ಅವರ ಬಗ್ಗೆ ಅರಿತು ಅವರ ಪುಸ್ತಕ ಓದುವಂತೆ ಮಾಡುತ್ತದೆ.ದೇಹಕ್ಕೆ ಸಾವಿದೆ ಆತ್ಮಕ್ಕೆ ಸಾವಿಲ್ಲಾ…ಎಂಬ ಮಾತನ್ನು ನಿರೂಪಿಸುವ ಜನ್ಮ ಜನ್ಮಾಂತರದ ಪ್ರೇಮಕಥೆಯಿದು.ಸಿಕ್ಕರೆ ಒಮ್ಮೆ ಓದಿ.


  • ಸುಮಾ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW