ಜೇಡರ ದಾಸಿಮಯ್ಯನವರ ‘ನಡುವೆ ಸುಳಿವಾತ್ಮನು’ ವಚನ ವಿಶ್ಲೇಷಣೆ

ಹೆಣ್ಣು ಗಂಡಿಗಿಂತ ಯಾವುದರಲ್ಲಿಯೂ ಕಡಿಮೆಯೇನಿಲ್ಲವೆಂಬುದನ್ನು ವಚನಕಾರರು ಕಂಡುಕೊಂಡಿದ್ದರು. ಸುಳಿವಾತ್ಮ ಪದವನ್ನು ಶರಣರು ಅನೇಕ ಕಡೆ ಬಳಸಿದ್ದಾರೆ. ಅಕ್ಕಮಹಾದೇವಿಯೂ ಇದನ್ನೇ ಹೇಳಿದ್ದಾಳೆ. ಒಳಗಿರುವ ಸುಳಿವಾತ್ಮ ಗಂಡೂ ಅಲ್ಲ. ಹೆಣ್ಣೂ ಅಲ್ಲ ಅಂದಿದ್ದಾಳೆ. ಅನೇಕರು ಅನೇಕ ರೀತಿ ಅರ್ಥ ಹುಡುಕಿದ್ದಾರೆ. ಚಿಂತನಕಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರ ಲೇಖನಿಯಲ್ಲಿ ಒಂದು ಚಿಂತನ ಲೇಖನ ತಪ್ಪದೆ ಓದಿ…

“ಮೀಸೆ ಕಾಸೆ ಬಂದರೆ ಗಂಡೆಂಬರು, ಮೊಲೆ ಮು(ಮೂ)ಡಿ ಬಂದರೆ ಹೆಣ್ಣೆಂಬರು, ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ ಕಾಣಾ ರಾಮನಾಥ”

-ಶರಣ ಜೇಡರ ದಾಸಿಮಯ್ಯ

ಇದು ಹೆಣ್ಣು ಗಂಡಿನ ಮತ್ತು ಹೆಣ್ಣು-ಗಂಡು ಎರಡೂ ಅಲ್ಲದವರ ಲಿಂಗತ್ವ ಸ್ಥಾನದ ಸಮಾನತೆಯನ್ನು ಕುರಿತ ವಚನ.

ಹೆಣ್ಣು-ಗಂಡೆಂಬ ಉಭಯ ಸಂಕಟದಲ್ಲಿ ಸಿಲುಕುವುದನ್ನು ತಪ್ಪಿಸಲು ‘ನಡುವೆ ಸುಳಿವಾತ್ಮ’ ಎಂಬ ದಿಟದ ಮೂಲಕ ನಿವಾರಿಸುವ ಉತ್ತರವನ್ನು ಕೂಡಾ ಈ ವಚನ ನೀಡಿದೆ. ಅಂದರೆ ಗಂಡು-ಹೆಣ್ಣು ಎಂಬುದು ಸಂಭ್ರಮಿಸುವ ಸಂಗತಿಯಲ್ಲ. ಅಂತೆಯೇ ಗಂಡು-ಹೆಣ್ಣು ಎರಡೂ ಅಲ್ಲ ಎಂಬುದು ನೋವಿನ ಸಂಗತಿಯಲ್ಲ.

ಸ್ತ್ರೀ- ಪುರುಷ ಇಬ್ಬರ ದೇಹರಚನೆಯ ದೈಹಿಕ ವ್ಯತ್ಯಾಸಗಳು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಪುರುಷ ಮತ್ತು ಸ್ತ್ರೀ ಎಂಬ ಜೈವಿಕ ಅಸ್ತಿತ್ವಗಳ ನಡುವೆ ಹುಟ್ಟು ಪಡೆದಿರುವ ಮಾನವನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ನಡೆಯುತ್ತಿದ್ದ ತಾರತಮ್ಯದ ಬಗ್ಗೆ ತಿಳಿಸಿಕೊಡಲು ದಾಸಿಮಯ್ಯ ಮುಂದಾಗಿದ್ದಾರೆ.

ಹೆಣ್ಣು ಗಂಡಿಗಿಂತ ಯಾವುದರಲ್ಲಿಯೂ ಕಡಿಮೆಯೇನಿಲ್ಲವೆಂಬುದನ್ನು ವಚನಕಾರರು ಕಂಡುಕೊಂಡಿದ್ದರು. ಹಾಗಾಗಿಯೇ ಅಕ್ಕಮಹಾದೇವಿ ಹುಟ್ಟಿದ ನಿರ್ವಾಣ ಸ್ಥಿತಿಯಲ್ಲಿ ಪುರುಷರ ಎದುರು ನಿಲ್ಲಲು ಸಾಧ್ಯವಾಗಿದೆ. ಆದುದರಿಂದ ಈ ವಚನವನ್ನು ಕೇವಲ ಸ್ತ್ರೀ- ಪುರುಷರ ಲಿಂಗ ರಾಜಕಾರಣವನ್ನು ಮಂಡಿಸದೆ, ದೇಹ ರಚನೆಯ ಹೊರ ಆಕಾರದಲ್ಲಿ ಹೆಣ್ಣಾಗಿಯೂ ಮತ್ತು ಗಂಡಾಗಿಯೂ ವ್ಯತ್ಯಾಸಗಳು ಕಂಡುಬರುವ ಜೀವವೊಂದರ ಅಸ್ತಿತ್ವದ ಬಗ್ಗೆ ದಾಸಿಮಯ್ಯ ಮಾತಾಡಲು ಒಲವು ತೋರಿಸಿದ್ದಾರೆ. ಪುರುಷನಿಗಿಂತಲೂ ಸ್ತ್ರೀ ಕೀಳೆಂದು ಪರಿಗಣಿಸುವ ಪ್ರಶ್ನೆಗಿಂತಲೂ ಸ್ತ್ರೀ- ಪುರುಷರಿಬ್ಬರಿಂದಲೂ ಶೋಷಣೆಗೀಡಾಗಿರುವ ಮಾನವನ ಸಂಕಟವನ್ನು ನಿರ್ವಹಿಸಬೇಕಿದೆ ಎಂಬುದು ದಾಸಿಮಯ್ಯನವರ ಪ್ರಶ್ನೆ.

ಸ್ತ್ರೀ ಪುರುಷರ ಅಂಗಾದಿಗಳ ಹೊರರೂಪಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಆದರೆ ಮೊಲೆ ಮುಡಿ- ಮೀಸೆ ಕಾಸೆ ಎರಡೂ ಲಕ್ಷಣಗಳನ್ನು ತನ್ನಲ್ಲೇ ಅಡಗಿಸಿಕೊಂಡಿರುವ ಮಾನವಾಸ್ತಿತ್ವದ ದೇಹ ಪ್ರಕೃತಿಯ ಬಗ್ಗೆ ಈ ವಚನ ಹೆಚ್ಚು ಗುರುತಿಸುತ್ತದೆ.

ದಾಸಿಮಯ್ಯನವರ ಈ ವಚನ ಕುರಿತ ನಮ್ಮ ಇಲ್ಲಿಯವರೆಗಿನ ಓದು ವಿಶ್ಲೇಷಣೆ ಮತ್ತು ನಿರೂಪಣೆಗಳು ಹೆಚ್ಚಾನೆಚ್ಚು ಗಂಡು ಹೆಣ್ಣಿನ ಲಿಂಗರಾಜಕಾರಣವನ್ನು ಮಾತ್ರ ಕೇಂದ್ರೀಕರಿಸಿವೆ. ಇದಕ್ಕೆ ಬಹುಮುಖ್ಯ ಕಾರಣ ಹೆಣ್ಣನ್ನು ಅಬಲೆ ಎಂದು ನೋಡುವ ಪುರುಷ ಪಾರಮ್ಯವೇ ಆಗಿರುತ್ತದೆ. ಇಂತಹ ವ್ಯಸ್ತತೆಯು ಹೆಣ್ಣನ್ನು ಭೋಗವಸ್ತುವೆಂದು ಪರಿಗಣಿಸಿ ಆರ್ಥಿಕ ಮತ್ತು ಸಾಮಾಜಿಕ ಅಧಿಕಾರ ಸಂಬಂಧಗಳಿಂದಾಚೆಗಿರಿಸಿದೆ. ಹಾಗೂ ಪುರುಷ ನಿರ್ಮಿತಿಗಳ ರಕ್ಷಣೆಗಾಗಿ ಹೆಣ್ಣನ್ನು ನಿಯಮಿಸಿದೆ.

ಇಂತಹ ಅಧಿಕಾರ ಸಂಬಂಧಗಳ ಮಾತಿರಲಿ ಕನಿಷ್ಠ ಕುಟುಂಬ ಸಂಬಂಧಗಳ ಮಟ್ಟಿಗಾದರೂ ಘನತೆಯಿಂದ ಬದುಕಲು ‘ನಡುವೆ ಸುಳಿವಾತ್ಮ’ ಎಂಬ ವ್ಯಕ್ತಿಗೆ ನಮ್ಮ ಸಮಾಜ ಉಪಚಾರ ನೀಡಿದೆಯೇ ? ಎಂಬುದು ದಾಸಿಮಯ್ಯನ ಪ್ರಶ್ನೆ. ಗಂಡು ಹೆಣ್ಣಿನ ದೈಹಿಕ ವ್ಯತ್ಯಾಸವಿರುವಂತೆಯೇ ಗಂಡು ಹೆಣ್ಣಿನ ಕರ್ತವ್ಯಗಳಲ್ಲೂ ವ್ಯತ್ಯಾಸ ಇರುತ್ತದೆ. ಅದರಂತೆ ಗಂಡು ಹೆಣ್ಣು ಸೇರಿದಾಗಲೇ ಮಾನವನ ಪೀಳಿಗೆ ಮುಂದುವರೆಯಲು ಸಾಧ್ಯ. ಆದರೆ ಅದಕ್ಕಿಂತ ಮುಖ್ಯವಾದದ್ದು ಆತ್ಮ. ಆತ್ಮ‌ಗಳು ಸಂಸಾರ ಸ್ಥಾಪಿಸಲು ನಮಗೆ ಅಡ್ಡಿಯಾಗಿರುವುದಾದರೂ ಏನು ? ಆತ್ಮಕ್ಕೆ ಹೆಣ್ಣು ಗಂಡೆಂಬ ಯಾವ ತಾರತಮ್ಯವೂ ಇಲ್ಲ ತಾನೆ ? ಧಾರ್ಮಿಕತೆಯಾಗಲೀ, ಆರ್ಥಿಕತೆಯಾಗಲೀ, ಸಾಮಾಜಿಕ ಸಂಗತಿಯಾಗಲೀ, ಅಧ್ಯಾತ್ಮವಾಗಲೀ ವ್ಯಕ್ತಿಯ ಆತ್ಮೋನ್ನತಿ ಎಂಬುದು ಆತ್ಮ ಸಾಧನೆಯ ಪ್ರತೀಕವೇ ತಾನೆ ? ಅದಕ್ಕೆ ಪುರುಷನಷ್ಟೇ ಸ್ತ್ರೀ ಕೂಡ ಹೇಗೆ ಸಮರ್ಥಳೋ ಹಾಗೆಯೇ ಸ್ತ್ರೀ-ಪುರುಷರ ನಡುವಿನ ಆತ್ಮಕ್ಕೂ ಸಾಧ್ಯ ತಾನೆ ? ಅಂತಹ ಆತ್ಮವನ್ನು ಪುರುಷನಿಗಿಂತ ಅಥವಾ ಸ್ತ್ರೀಗಿಂತಲೂ ಕೀಳೆಂದು ಕಡೆಗಣಿಸಲು ಸಾಧ್ಯವೇ? ಇಂತಹ ಸಮಾನತೆಯ ದೃಷ್ಟಿಯಿಂದ ‘ನಡುವೆ ಸುಳಿವಾತ್ಮವನ್ನು’ ಪರಿಗಣಿಸಬೇಕೆಂಬುದೇ ದಾಸಿಮಯ್ಯನವರ ಆಶಯ.

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ದಾಸಿಮಯ್ಯ ಅಂದೇ ಬಹಳ ಸೂಕ್ಷ್ಮವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆಂದು ಹೇಳುವುದಕ್ಕಿಂತಲೂ ಹೆಚ್ಚಾಗಿ ಇವತ್ತು ನಾವು ಲೈಂಗಿಕ ಅಲ್ಪಸಂಖ್ಯಾತರೆಂದು ಯಾರನ್ನು ಬೊಟ್ಟು ಮಾಡಿ ತೋರಿಸುತ್ತಿದ್ದೇವೆಯೋ ಅಂತಹ ಮನುಷ್ಯಲೋಕದ ಸಮಾನತೆಯನ್ನು ದಾಸಿಮಯ್ಯ ಪ್ರತಿಪಾದಿಸಿದ್ದಾರೆ ಎಂಬುದೇ ಹೆಚ್ಚು ಸರಿ. ಇದು ಇಂದಿನ ನಮ್ಮ ಆದರ್ಶವಾಗಬೇಕು. ಇದನ್ನು ಇಂದಿನ ನಮ್ಮ ಕವಿಗಳು ತಮ್ಮ ಕಾವ್ಯದಲ್ಲಿ ಹಿಡಿಯಲು ಪ್ರಯತ್ನಿಸಬೇಕು.


  • ಡಾ.ವಡ್ಡಗೆರೆ ನಾಗರಾಜಯ್ಯ – ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW