‘ಕಡಲಿಗೆ ಕಡೆಗೋಲು’ ಪುಸ್ತಕ – ಟಿ.ಪಿ.ಉಮೇಶ್



”ಶ್ರೀಯುತ ವಾಸುದೇವ ನಾಡಿಗರು ಕನ್ನಡ ಕಾವ್ಯ ಲೋಕದಲ್ಲಿ ಸದಾ ಹೊಸ ಭರವಸೆಯ ಕವಿತೆಗಳ ಹೊಸೆಯುವ ಬಹು ನಿರೀಕ್ಷೆಯ ಕವಿಗಳು. ಜೀವನದ ಕಡಲ ಕಡೆಯುವ ಮಹಾ ಯಾನವಿದು ಕಾವ್ಯದೊಡಲಲ್ಲಿ ಉಕ್ಕಿ ಹರಿದ ಅಮೃತ ಕಥನವಿದು. ಅವರ ಕಾವ್ಯ ದಶಕಗಳ ಚಿಂತನ ಮಂಥನದ ಬದುಕಿನ ಅನುಭಗಳ ಸಾರ”. – ಟಿ.ಪಿ.ಉಮೇಶ್, ಮುಂದೆ ಓದಿ…

ಕಾವ್ಯ ಪಂಥಗಳ ಪಟ್ಟುಗಳಿಗೆ ಸಿಗದೆ ಒಂದು ತೆರನಾಗಿ ಎಲ್ಲ ಪಂಥಗಳೆಲ್ಲೆ ಮೀರಿ ದಿಗ್ದಿಗಂತವಾಗಿ ಏರಿ ಎಂಬಂತೆ ಅವುಗಳಿಗೆ ತಮ್ಮನ್ನು ಒಡ್ಡಿಕೊಳ್ಳದೆ ನಿಜ ಬದುಕನ್ನೇ ಧ್ಯಾನಿಸುವ, ಕಾವ್ಯವನ್ನೇ ಬದುಕುವ ನಮ್ಮೊಡನಿರುವ ಮಹತ್ವದ ಕವಿಗಳು. ಅವರ ಕಾವ್ಯ ಕೃತಿ “ವಿರಕ್ತರ ಬಟ್ಟೆಗಳು” ಸಂಕಲನದ ಒಂದು ಮಹೋನ್ನತ ಕವಿತೆ ‘ಕಡಲಿಗೆ ಕಡಗೋಲು’. ಈ ಕವಿತೆಯ ರಚನಾ ವಿನ್ಯಾಸ ಹಾಗೂ ಅದು ಕಟ್ಟಿಕೊಡುವ ತಾತ್ವಿಕತೆ ಮತ್ತು ಕಾಣಿಸುವ ದರ್ಶನವನ್ನೊಂದಿಷ್ಟು ಕಾವ್ಯ ವಿಶ್ಲೇಷಣೆ ನೆಪದಲ್ಲಿ ಮನಗಾಣುವ.

ಮೊದಲಿಗೆ ಇಂದಿನ ವಾಸ್ತವದ ಸಂದರ್ಭದಲ್ಲಿ ಬಹುತೇಕ ಮನೆಗಳಲ್ಲಿ ಮುಂದುವರೆದು ಹಳ್ಳಿಯ ಮನೆಗಳಲ್ಲು ಸಹ ಕಡಗೋಲು ಇಲ್ಲ; ಇದ್ದರು ಕಡೆಯಲು ಕೆನೆಮೊಸರು ಇಲ್ಲ. ಒಂದು ವೇಳೆ ಹಸು ಎಮ್ಮೆಗಳ ಸಾಕುವ ಪರಿಪಾಠ ಇದ್ದರು ಇಂದು ಕಡಗೋಲಿನ ಸ್ಥಾನವನ್ನು ಎಲೆಕ್ಟ್ರಾನಿಕ್ ಕಡಗೋಲು ಆಕ್ರಮಿಸಿಕೊಂಡುಬಿಟ್ಟಿದೆ. ಶ್ರಮಜೀವನದಿಂದ ಕೂಡಿದ ದಿನ ಬೆಳಗಿನ ತಾಯಂದಿರ ಲಘು ವ್ಯಾಯಾಮದಂತ ಲವಲವಿಕೆಯ ಒಂದು ಪ್ರಮುಖ ಭಾಗ ಇಂದು ಕೊನೆಯಾಗುತ್ತಿದೆ. ಅಂತು ಗಂಡಸರಿಗೆ ಕರೆವ ಶ್ರಮವಿಲ್ಲ ಹೆಂಗಸರಿಗೆ ಕಡೆವ ನೆವವಿಲ್ಲ. ಇಂತಲ್ಲಿ ಕಡಲ ಕಡೆವ ಕಡಗೋಲ ಕಲ್ಪನೆಯೂ ರೋಚಕ ಮತ್ತು ಅದ್ಭುತವಾದುದು. ಕವಿತೆಯ ಶೀರ್ಷಿಕೆಯ ಕಂಡೊಡನೆ ಬಹುಶಃ ಸುರಾಸುರರು ಸೇರಿಕೊಂಡು ಸಮುದ್ರ ಮಥಿಸಿದ ಪೌರಾಣಿಕ ಘಟನೆಯು ಕಣ್ಮುಂದೆ ಬಾರದಿರದು. ಇಲ್ಲಿನ ‘ಕಡಲಿಗೆ ಕಡಗೋಲು’ ಮನುಷ್ಯನ ದೇಹದ ಅಂತರಾಳವ ಕಡೆದು ಅಮೃತದಂತ ವ್ಯಕ್ತಿತ್ವವ ಹೊರ ಹೊಮ್ಮಿಸುವಂತ ರೂಪಕದ ಸಂಕೇತವಾಗಿದೆ. ಮನೆಯ ಅಡಿಗೆ ಕೋಣೆಯ ಮೂಲೆಯಲ್ಲಿನ ಕಡಗೋಲು ಕೆಲವು ಶುಭ ಸಂದರ್ಭಗಳ ಪೂಜೆಗಷ್ಟೇ ಸಂಕೇತವಾಗಿ ಮಾರ್ಪಟ್ಟು ಧೂಳಿಡಿದು ನಿಂತಿದ್ದರೆ ಇಲ್ಲಿನ ಕವಿ ಕಲ್ಪನೆಯ ಕಡಗೋಲು ಕ್ಷಣಂಪ್ರತಿಕ್ಷಣ ದೇಹವ ಕಡೆಯುತ್ತಲೇ ಮನಸ್ಸನ್ನು ಮಥಿಸುತ್ತಲೇ ಜೀವಂತಿಕೆಯನ್ನು ಮೈತುಂಬಿಕೊಂಡಿದೆ.

‘ಒಳಗಿಂದ ಮೇಲೆದ್ದು
ಬರುವ ಬೆಣ್ಣೆಯಿದು’

ಎಂದು ಆರಂಭಗೊಳ್ಳುವ ಕವಿತೆಯ ಮೊದ ಮೊದಲ ಸಾಲುಗಳು ಅಂತರಂಗದಲ್ಲಿ ಅಡಗಿರುವ ಅಮೃತವು ಹೊರ ಬರುವ ತವಕದಲ್ಲಿರುವಂತೆ ಧ್ವನಿಸುತ್ತದೆ. ಇನ್ನು ಕಡಗೋಲ ಕಡತವೂ ಶುರುವಿಟ್ಟುಕೊಳ್ಳದೆ ಕವಿ ಇಲ್ಲಿ ಅದಾಗಲೇ ಬೆಣ್ಣೆ ಬಂದ ಸೂಚನೆ ಕಾಣಿಸುತ್ತ ಬದುಕಿನಲಿ ಯಾವತ್ತೂ ಒಳಿತಾಗುವುದರ ಕುರಿತು ನಂಬಿಕೆ ಮುಖ್ಯ ಎಂಬುದನ್ನ ಮನಗಾಣಿಸುತ್ತಾ ಕವಿತೆಯ ಮುಂದಿನ ಸಾಲುಗಳ ವಾಚನಕ್ಕೆ ಓದುಗರ ಕುತೂಹಲ ಸೃಷ್ಟಿಸಿಕೊಳ್ಳುತ್ತಾರೆ.

‘ಒಳಮನೆಯಲ್ಲಿ ಮೌನವಾಗಿ
ಕೂತವುಗಳನ್ನು ಮಾತಾಡಿಸಬೇಕು’

ಈ ದೇಹದ ಮನೆಯಲ್ಲಿ ನಾನಾ ಆಕಾರಗಳ ಸುಂದರತೆಯ ಜೊತೆ ವಿಕಾರಗಳ ಕೂಪಗಳೂ ಇವೆ. ಪ್ರಶ್ನೆಗಳ ಕಂತೆಗಳ ಜೊತೆ ಉತ್ತರಗಳ ಬೊಂತೆಗಳು ಬಿದ್ದಿವೆ. ಉರಿಗಲ್ಲ ಕೂರೆ ಮೊನೆಗಳಂತೆ ಘಮಗುಡುವ ಮೃದು ಹೂಗಳು ಕುಂತಿವೆ. ಇಂತಲ್ಲಿ ಕತ್ತಲೆಯ ಕಡೆಯುತ್ತಾ ವಿಚಾರಗಳ ಗುಡುಗುಡಿಸುತ್ತಾ ಘಟವ ಬಡಬಡಾ ಅಲುಗಾಡಿಸಬೇಕು. ಇದೇ ಕಾರ್ಯವ ಮಾಡಬೇಕು ಎನ್ನುತ್ತಾ ಕವಿಗಳು ಅಕಸ್ಮಾತ್ ಮಾಡದಿದ್ದರೆ…

‘ಬಿಟ್ಟಲ್ಲೇ ಬಿಟ್ಟರೆ
ಮಾತು ಬರಿ ಹಳಸು ಹುಳಿಮೊಸರು

ಎಂದು ಬರೆಯುತ್ತಾ ಬದುಕು ಮೌನದರಮನೆಯ ಉಪ್ಪರಿಗೆಯ ರತ್ಮಸಿಂಹಾಸನವಲ್ಲ ರಣಕಣದ ಕಲಿಗಳ ಕಾದಾಟದ ಅಸ್ತ್ರಶಸ್ತ್ರಗಳ ಮಸೆಗೊಳಿಸೊ ಕಲುಮೆಯ ಮನೆ. ನಿತ್ಯ ಸಿದ್ಧಗೊಳ್ಳಬೇಕು ದಿನವ ಎದುರುಗೊಳ್ಳಬೇಕು ಬದುಕು ಉರಿಗೊಳಿಸಿಕೊಳ್ಳಬೇಕು ಇಲ್ಲದಿದ್ದರೆ ಬದುಕು ಹುಳಿಮೊಸರಾಗುವುದು ಖಚಿತ ಅದ ಕಡೆದರೂ ಸ್ವಾದಿಷ್ಟ ಬೆಣ್ಣೆ ಬರುವುದು ಕನಿಷ್ಟ ಎಂದು ಎಚ್ಚರಿಸುತ್ತಾರೆ. ‘ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಿಗೆಗೆ’ ಎಂಬ ಜಿ ಎಸ್ ಎಸ್ ರ ಕಾವ್ಯದ ಸಾಲುಗಳಿಗೆ ವಾಸುದೇವ ನಾಡಿಗರ ಸಾಲುಗಳು ಸಂವಾದಿಯಾಗಿವೆ ಅನಿಸುತ್ತದೆ. ಆದರೆ ಶಿವರುದ್ರಪ್ಪನವರ ಕವಿತೆಯ ಸಾಲುಗಳ ಔಚಿತ್ಯದ ಘನತೆಗೂ ನಾಡಿಗರ ಸಾಲುಗಳ ಸಂದರ್ಭದ ಘಟನೆಗೂ ವ್ಯತ್ಯಾಸವಿದೆ ಅದಕ್ಕೆ ಎದುರು ಬದುರಾಗಿವೆ ಅನ್ನಿಸುತ್ತದೆ. ಅಲ್ಲಿ ಸಾರ್ವತ್ರಿಕ ಶಾಂತಿಯಿಂದ ಪ್ರಗತಿ ಸ್ಥಾಪಿಸಲು ಹೊರಟರೆ ಇಲ್ಲಿ ಮನಸ್ಸಿನ ಹಿಡಿತದಿಂದ ದೇಹದ ನಿಯಂತ್ರಣ ಸ್ಥಾಪಿಸಲು ಉದ್ಯುಕ್ತವಾಗಿವೆ. ಮತ್ತೊಂದು ರೀತಿಯಲ್ಲಿ ಕಲಕುವುದೇ ಬೇರೆ ಕಡೆಯುವುದೇ ಬೇರೆ. ಸಂಬಂಧಗಳ ಕಲಕಿದರೆ ಕೆಡುಕು ಕಡೆದರೆ ಮಾತ್ರ ಬೆಳಕು. ಈ ಹಿನ್ನೆಲೆಯಲ್ಲಿ ಜಿ.ಎಸ್.ಎಸ್ ರ ಕವಿತೆಯ ವಿಸ್ತಾರದ ಮುಂದುವರಿಕೆಯನ್ನು ವಾಸುದೇವರ ಕವಿತೆಯಲ್ಲಿ ದರ್ಶಿಸಬಹುದು.

ಕವಿ ವಾಸುದೇವ ನಾಡಿಗರು

ಎರಡನೆ ಪ್ಯಾರಾದ ಕವಿತೆ ಆರಂಭಗೊಳ್ಳುವ ಮುಂಚೆ ಕವಿಗಳು ಸಹೃದಯ ಓದುಗನಲ್ಲಿ ಒಂದು ಕಡೆ ಬದುಕ ಗೆಲ್ಲುವ ಭರವಸೆಯ ಮುನ್ನೋಟವನ್ನು ಇನ್ನೊಂದು ಕಡೆ ಯಾವತ್ತು ಮುಂದಡಿಗೆ ಅವಿರತ ಪ್ರಯತ್ನವಿರದಿದ್ದರೆ ಸೋಲಿನ ಹಿನ್ನೋಟವನ್ನು ಎದುರುಗೊಳ್ಳಲು ಮಾನಸಿಕವಾಗಿ ಸಿದ್ದಗೊಳಿಸುತ್ತಾರೆ.

‘ಹೋಗುತ್ತಾ ಕಡೆದು ಬರುತ್ತಾ ಕಡೆದು
ಕಡೆದಿಟ್ಟ ಪಾತ್ರೆಯಂಚಿಗೆ
ಕನಸುಗಳ ತೆಳುಗೆರೆ’

ಈ ಸಾಲುಗಳು ಮತ್ತೆ ಜೀವ ಚೈತನ್ಯ ಪುಟಿದೇಳಿಸುತ್ತವೆ. ಬದುಕು ಇನ್ನೇನು ಮುಗಿದೇ ಹೋಯಿತು ಎನ್ನುವಾಗ ಸುಳಿಯಲಿ ಸಿಕ್ಕವಗೆ ಸಿಗುರೊಂದು ಆಸರೆ ಎಂಬಂತೆ ಕನಸೊಂದುಕೈದೀವಿಗೆಯಾಗುವುದು ಬದುಕ ದೂರ ಪಯಣದ ದಾರಿಗೆ. ಈ ಕನಸುಗಳು ಮಾಯಾ ಜಿಂಕೆಯಂತೆ ಬಿಸಿಲ್ಗುದುರೆಯಂತೆ ಕಂಡಂತೆ ಹೊಳೆದು ಮಾಯವಾಗುವುದೇ ಹೆಚ್ಚು. ಅದಕ್ಕೇ ಚಿಂತನೆಯ ಕಡಗೋಲಿನಿಂದ ಅವುಗಳ ಕಡೆದು ಗಟ್ಟಿಮಾಡಿಕೋಬೇಕು. ಯಾವುದೇ ಹೊಸ ಅನ್ವೇಷಣೆಗೆ ಸಾಧನೆಗೆ ಕನಸುಗಳೇ ಮೊದಲ ದಾರಿ. ಹುದುಗಿದ ಭಾವನೆಗಳ ಚಿಂತನೆಯ ಅರದಿಂದ ಉಜ್ಜಿ ತೇಯದೆ ಅವು ಹೊಳಪುಳ್ಳ ಕೃತಿಯಾಗಲಾರವು. ಮನುಷ್ಯನ ಮನ ಮಂಥನದಿಂದ ಉಕ್ಕಿ ಬರುವ ದಿವ್ಯೋದಾತ್ತ ಚಿಂತನೆಗಳೇ ಕನಸ ಸಾಕಾರದ ಮೆಟ್ಟಿಲುಗಳಾಗುವವು. ಬದುಕು ಮುಗಿಲ ಬೆಳ್ಳಿ ತಾರೆಗಳಾಗುವವು ಅವೆ.

‘ಕಡವಾಯಿ ಮಧ್ಯೆ
ಇಳಿಬಿಟ್ಟರೆ ತಾನೆ ಕಡೆಗೋಲು
ಹೊತ್ತು ತರಬಲ್ಲದು ಗಡಸ ಗಡ್ಡೆ’

ಕಡೆಯದೆ ಬೆಣ್ಣೆ ಮೇಲೆ ಬರದು ಹಾಗೆ ಮನಸ ಕಡೆಯದೆ ಗಡುಸಾದ ಪಕ್ವವಾದ ವಿಚಾರಗಳು ಹೊರಹೊಮ್ಮವು. ಇದು ಬಹಳ ಸಲೀಸು ಎನಿಸಿದರೂ ಸರಳವಲ್ಲ. ಕವಿಗಳ ಮೈ ಮನಸು ಪೂರ್ಣ ಬದುಕ ಕಡಲಲ್ಲಿದೆ. ವಾಚಕರನ್ನ ಜೀವನದ ಕಡಲಲಿ ಮುಳುಗಿಸುವ ಹವಣಿಕೆ ಇಲ್ಲಿಲ್ಲ. ದಡದಲ್ಲಿಯೇ ವಿಶ್ರಮಿಸುವ ಸುಖ ನೀಡುತ್ತಾ ಬದುಕ ಕಡಲ ಕಡೆವ ಶ್ರಮವ ಕಾಣಿಸುತ್ತಿದ್ದಾರೆ. ಕಡಲಲಿ ಸಾಮಾನ್ಯವಾಗಿ ಮಂಜುಗಡ್ಡೆ ಮೇಲಿದೆ ಎನಿಸಿದರೂ ಅದರರ್ಧ ಮುಳುಗಿರುತ್ತದೆ. ಕಡೆದಾಗ ಬರುವ ಬೆಣ್ಣೆಯುಂಡೆಯೂ ಮಜ್ಜಿಗೆಯ ಕಡಬಾನಿಯಲಿ ತೇಲುತ ಮೇಲರ್ಧ, ಮುಳುಗುತ ಕೆಳಗರ್ಧವಾಗಿರುತ್ತದೆ. ಪೂರ ದಡಕ್ಕೆ ಎಳೆದು ತರುವ ಮಹತ್ಕಾರ್ಯ ಆಗಬೇಕಲ್ಲ. ಒಟ್ಟಾರೆ ಕನಸ ರೂಪ ಆಕೃತಿಯಾಗಿ ಎದುರು ನಿಂತಿದೆ. ಮನಸ ಮಾಡಿ ಅದ ಧಕ್ಕಿಸಿಕೊಳ್ಳಬೇಕು. ಅಂಗೈ ಮೇಲಿನ ಬೆಲ್ಲದಚ್ಚಾಗಿಸಿಕೊಳ್ಳಬೇಕು. ಅದಕ್ಕಾಗಿ ಇನ್ನೊಂದಿಷ್ಟು ದೂರ ಸಾಗಬೇಕಿದೆ ಅರ್ಥಾತ್ ಕಡಗೋಲ ಹಗ್ಗವಿಡಿದು ಇನ್ನಷ್ಟು ಮತ್ತಷ್ಟು ಹುರುಪಿಂದ ಎಳೆದಾಡಬೇಕಿದೆ. ಆಗ ಆಗ ನೋಡಿ ತಡಬಡಾಯಿಸಿ ಮೇಲೆದ್ದು ಬಳಿ ಬರುವುದು ಗಡಸ ಗಡ್ಡೆ ಬೆಣ್ಣೆ ಮುದ್ದೆ. ಆಗಲೇ ತಾನೇ ಅದೆಲ್ಲಿಯೋ ಕೂತ ಗುರಿಯೂ ಬದುಕ ನೆಲೆಯೂ ಕಾಲ ತಳವಾಗುವುದು ತಲೆಯ ಸೂರಾಗುವುದು ಹೃದಯದ ಬೆಳಕಾಗುವುದು. ಅಂತು ಶ್ರಮಯೇವ ಜಯತೇ.



ಜೀವನ ಏರುಪೇರಿನ ದಾರಿಯಂತೆ ಕಲ್ಲು ಮುಳ್ಳುಗಳ ಹಾದಿಯೂ ಹೌದು. ಬದುಕಲಿ ನೂರಾರು ಕಷ್ಟಗಳು ಬರುವವು. ನಷ್ಟಗಳು ಆಗುವವು.

‘ಕಡಗೋಲ ಮೈಸುತ್ತ
ಮುಳ್ಳು ಮೊನೆಗಳು’

ಕವಿಗಳು ಕವಿತೆಯ ಮೂರನೇ ಪ್ಯಾರಾದಲ್ಲಿ ಕಷ್ಟ ನೋವು ಅನುಭವಿಸಬೇಕು ಒಂದು ಹಿತದ ಭದ್ರತೆಗಾಗಿ ಇದು ಕೇವಲ ನಮ್ಮಿಷ್ಟಕ್ಕನುಸಾರ ಬಂದ ಸೊಬಗಲ್ಲ. ಹಲವಾರು ನೆರೆಹೊರೆಯವರು ಕೂಡ ನೆಮ್ಮದಿಯ ಹರಸುತ್ತಿರುತ್ತಾರೆ ಆಗ ನಮ್ಮಿಂದ ಅವರಿಗೂ ಅವರಿಂದ ನಮಗೂ ನೂಕಾಟ ತಿಕ್ಕಾಟ ಘರ್ಷಣೆ ಸಹಜ ಎಂದು ಮನಗಾಣಿಸುತ್ತಾರೆ. ಕಡಗೋಲ ಮುಳ್ಳ ಓರೆಗಳು ಚುಚ್ಚದೆ ಚಚ್ಚದೆ ತಿರುಗಿಸಿ ಮುಳುಗಿಸಿ ಅಲ್ಲಾಡಿಸದೆ ಅಮೃತವದು ತೇಲದು. ಹಾಗೆಯೇ ಬದುಕು ನೋವ ಕಹಿ ಉಣ್ಣದೆ ಹಿತದ ಜೊನ್ನ ಸವಿಯಲಾಗದು. ನೇರ ದಾರಿಗೆ ಹೊರಳಲಾಗದು. ಸುಖದ ನಾವೆಗೆ ಏರಲಾಗದು. ನೆಮ್ಮದಿಯ ಕಡಲಲಿ ತೇಲಲಾಗದು ಎಂಬುದನ್ನ ಕವಿ ಸೂಚಿಸುತ್ತಿದ್ದಾರೆ.

‘ನೆಪದ ಕಣ್ಣಿಗೆ ರೆಪ್ಪೆಗಳಿಲ್ಲ
ನಿದ್ದೆಯಲ್ಲಿಯೂ ಒದೆವ ನಮ್ಮದೇ ಮಗು
ಉಸಿರಿನ ಮರದ ತುಂಬಾ
ಗೂಡನರಸುತ್ತಿರುವ ಹಕ್ಕಿಗಳು’

ನರಮಾನವ ಎಲ್ಲ ಬಲ್ಲವ ಆದರೂ ತಿಳಿಯದಂತೆ ವರ್ತಿಸುವವ. ನಿದ್ದೆಯಲ್ಲಿರುವವರ ಎಚ್ಚರಿಸಬಹುದು ನಿದ್ದೆ ಬಂದಂತೆ ನಟಿಸುವವರ ಎಚ್ಚರಿಸಲಾಗದು ಎಂಬಂತೆ ನೆಪ ಮಾತ್ರಕೆ ರೆಪ್ಪೆ ಮುಚ್ಚಿದಾಕ್ಷಣ ಕಣ್ಣು ಕಾಣುತ್ತಿಲ್ಲವೆಂದರ್ಥವಲ್ಲ ಹೊರಗಿನ ಅರಿವಿದೆ ಒಳಗೆ ಅದಕ್ಕೇಕೆ ರೆಪ್ಪೆಗಳ ಹಂಗು? ಬಂಧನದ ಸಿಕ್ಕು? ನೋಡುವ ನೋಟದ ಮನಸಿಗೆ ತಡೆಯಿಲ್ಲ. ತಡೆಯೊಡ್ಡುವ ಗೋಡೆಗಳ ದಾಟಿ ನಾ ಚಿಂತಿಸಬಲ್ಲೆ ಎಂಬ ಭರವಸೆಯ ಬಯಕೆಯ ಪ್ರತಿನಿಧಿಸುತ್ತಿವೆ ಇಲ್ಲಿನ ಮಗು ಮತ್ತು ಹಕ್ಕಿಗಳು. ಸಾಧಿಸುವ ಕನಸುಗಳ ತುಂಬಿಕೊಂಡ ಮನಕೆ ನಿದ್ದೆ ಬಂದರೂ ಅದೂ ಒಂದು ಕ್ಷಣದ ಆಯಾಸದ ಪರಿಹಾರಕ್ಕಷ್ಟೇ. ಅರ್ಜುನನ ಕ್ಷಣ ನಿದ್ದೆಯಂತೆ. ಅಂತರಂಗದ ಬೆಳೆವ ಕನಸಿನ ಮಗು ತನ್ನ ಹುಟ್ಟಿನ ಉದ್ಧೇಶದ ಸಾಕ್ಷಾತ್ಕಾರಕ್ಕೆ ಎದೆಯ ಒದೆದು ಹೊರಬರಲು ಹವಣಿಸುತ್ತಿದೆ. ಮಧ್ಯಮನು ಸದಾ ತನ್ನ ಗುರಿಯ ಈಡೇರಿಕೆಗೆ ಹಂಬಲಿಸುತ್ತಾನೆ. ಉಸಿರ ಜೀವ ತುಂಬಿಕೊಂಡ ಈ ದೇಹದಿ ಸಾಧನೆಯ ಹಕ್ಕಿಗಳು ವಿಶ್ರಾಂತಿಗೋ ತಮ್ಮ ಪ್ರಗತಿ ವಿಗತಿಗಳ ಫ್ರೇಮ್ ಗಳ ನೇತು ಹಾಕಲೊ ವಿಜಯದ ಕೂಗು ಹಾಕಲೋ ಗೂಡನರಸುತಿವೆ. ಈ ಗೂಡು ಬದುಕಿನ ಒಂದು ಸಾಧನೆಯ ನಿಲ್ದಾಣ.

ಕವಿತೆ ನಾಲ್ಕನೇ ಪ್ಯಾರಾದಲ್ಲಿ ಮುಂದೆ ಸಾಗಿದಂತೆ ತನ್ನ ತಾ ತನು ಮನ ಮಥಿಸಿಕೊಂಡದ್ದ ನಿಲಿಸಿ ಬೇರೆಯವರು ತನ್ನ ಮಂಥನ ಮಾಡಿದ್ದ ಹಿಂದಿನ ಸಾಲುಗಳಂತೆಯೇ ಇಲ್ಲಿಯೂ ನೆನೆಯುತ್ತದೆ….

‘ಎಷ್ಟು ಮಂದಿ ಬಂದು ಹೋದರು ಇಲ್ಲಿ
ಕಡೇತನಕ ಕಡೆದದ್ದೇ ಕಡೆದದ್ದು”

ಜೀವ ದೇಹ ಪಡೆದು ಬಂದವರದಷ್ಟೇ ಅಲ್ಲವಲ್ಲ. ಅದ ನಂಬಿದವರು ಬಹಳಷ್ಟು. ಬದುಕು ನಮ್ಮೊಬ್ಬರದೇ ಅಲ್ಲ ತಂದೆ ತಾಯಿ ಮಡದಿ ಮಕ್ಕಳು ಬಂಧು ಬಳಗ ನೆರೆ ಹೊರೆ ಸ್ನೇಹಿತರು ಎಲ್ಲರಿಗೂ ಅನುಕೂಲಕ್ಕೆ ಹೆಣಗಬೇಕಿದೆ. ಎಲ್ಲರೂ ಅನುಕೂಲಕ್ಕೆ ಹಂಬಲಿಸುವರು. ಬದುಕಿದು ಯಾರ ಬಿಟ್ಟು ನಡೆಯುವುದಿಲ್ಲ. ಯಾರಿಗೆ ಏನು ಅಗತ್ಯವೋ ಅದ ಪಡೆಯಲು ಪ್ರೀತಿಸುವರು ದ್ವೇಷಿಸುವರು ಹಿಂಜುವರು ಗುಂಜುವರು ದೂರುವರು ದೂರಾಗುವರು ಹಾರುವರು ಮುಗಿ ಬೀಳುವರು… ಇದು ನಿಲ್ಲದ ರಾಗ ತಾಳಗಳ ಏಳು ಬೀಳುಗಳ ತಿರುಗಣಿ. ಇಂತಲ್ಲಿ ಕವಿ ಮುಂದುವರೆದು

‘ಕಂಠ ತುಂಬಿದ ಪಾತ್ರೆ
ಕುದಿದು ಹಾಡಿದ ರಾಗ
ಉಳಿದದ್ದು ತೊಟ್ಟು ಘಮಲು
ಸವೆದ ಕಡಕೋಲು ಟೊಳ್ಳಾದ ಹಗ್ಗ
ತಿರುತಿರುಗಿ ಬಸವಳಿದ ಬದುಕ ಮಡಕೆ
ಜೀವಪರ್ವತಗಳು ತಿರುಗುತ್ತಲಿವೆ
ಮಥನದುದ್ದಕ್ಕು ದಕ್ಕಿದ್ದು
ಅದೇ ಮೋಹಿನಿಯ ಅತೃಪ್ತ ಸಖ್ಯ’

ಇಲ್ಲಿಯೇ ನಮಗಿಲ್ಲಿಯೇ ಕವಿ ನಿಸಾರ್ ಅಹಮದ್ ರ ‘ಕಳೆದದ್ದಕ್ಕೆ ಕೊರಗಬೇಡ’ ಕವಿತೆಯ

“ಬದುಕಿನ ನಿಗೂಢ ಮರ್ಮ ಇದೇ ನೋಡು
ವಿಲಾಪಿಸಬೇಡ ಕಳೆದುಹೋದದ್ದಕ್ಕೆ
ನೀನೇ ಕಳೆದು ಹೋಗುವ ಮುನ್ನ”

ಸಾಲುಗಳು ಎದೆತಾಕುವವು. ಎಲ್ಲ ಕೊಟ್ಟ ಮೇಲೆ ಕಳೆದುಕೊಂಡ ಮೇಲೆ ಬದುಕಲಿ ಉಳಿವುದೇನಿಲ್ಲ ಅತೃಪ್ತ ಸಖ್ಯ.

ಮಥನದುದ್ದಕ್ಕು ಬಂದದ್ದನ್ನೆಲ್ಲ ಆಗಾಗಲೇ ಬಂದವರು ಪಡೆದುಕೊಂಡು ಹೋದಾಗ ಕಡಲ ಕಡೆದ ಶ್ರಮ ಬದುಕಿಗೆ ಉಳಿದದ್ದು ಮತ್ತೇನಿಲ್ಲ? ಬರೀ ಮಿಥ್ಯವೆಂದು ಸಂಕೇತಗಳ ಮೂಲಕ ತೋರುತ್ತಿದ್ದಾರೆ. ಆದರೆ ಬದುಕಂತು ಉಳಿದಿದೆಯಲ್ಲ ಎಂಬುದೇ ಶಾಶ್ವತ ಸತ್ಯ.

ಕಡೆಯ ಪ್ಯಾರಾದಲ್ಲಿ ಇಡೀ ಜೀವನಕ್ಕೆ ಪ್ರೇರಣಾದಾಯಿಯಾಗುವ ನುಡಿಗಳ ಕಟ್ಟಿಕೊಡುತ್ತಾರೆ. ಓದುಗರ ಚಕಿತತೆಯೊಂದಿಗೆ ಜೀವನ ಪ್ರೀತಿಗಾಗಿ ಉತ್ತೇಜಿಸುತ್ತಾರೆ.

“ಪ್ರತಿ ಜೀವ ಎದ್ದರೆ ಕತ್ತಲೆಯ
ಕಡೆದು ನಿಂತ ಸೂರ್ಯ!
ಮಲಗಿದರೆ ಮೋಡಗಳ ಕೂಡ
ತಕರಾರು ತೆಗೆವ ಚಂದ್ರ!
ಇಟ್ಟ ಹೆಜ್ಜೆಗಳೆಲ್ಲ ಉರಿಉರಿವ ನಕ್ಷತ್ರ!”

ಎಂದು ಜೀವನದ ಗತಿಯ ಮಹೋನ್ನತಿಯ ಸಾರುತ್ತಾರೆ. “ಸಾವಿಗೊಂದು ನಾವು ಹೆದರದೆ ಇದ್ದರೆ ಸಾಯಿಸುವವರು ನಮಗೆ ಅಂಜುತ್ತಾರೆ” ಎಂಬ ಗೋಪಾಲಕೃಷ್ಣ ಅಡಿಗರ ಮಾತ ಸಾರ್ವಕಾಲಿಕತೆ ಇಲ್ಲಿನ ಸಾಲುಗಳಲಿ ಪ್ರಜ್ವಲಿಸುತ್ತಿದೆ.

ವಾಸುದೇವ ನಾಡಿಗರು ಕೇವಲ ಪದಗಳ ಪೋಣಿಸುವ ಕವಿಗಳಲ್ಲ ಜೀವನದ ಅನುಭವಗಳನೇ ನೇಯುವ ಕವಿ. ಭಾವನೆಗಳ ರಸಪಾಕವನೇ ಉಣಬಡಿಸುವ ಕವಿ. ಜೀವನದ ಸಾರವನೇ ತುಂಬಿಕೊಡುವ ಕವಿ. ಕವಿತೆಯ ಐದು ಪ್ಯಾರಗಳ ನಲವತ್ತೊಂಬತ್ತು ಸಾಲುಗಳಲ್ಲಿ ಒಂದಷ್ಟು ಕೂರಿಸಿರುವ ಸಾಲುಗಳ ಉದ್ದವೋ ಚಿಕ್ಕದೋ ಮಾಡಬಹುದೇನೋ ಆದರೆ ಯಾವ ಪದಗಳನು ತೆಗೆಯಲಾಗದು. ಒಂದು ಪದ ತೆಗೆದು ಓದಿಕೊಂಡರು ಮುಂದಿನ ಸಾಲಿನ ಭಾವದೀಪ್ತಿ ಆರಿಹೋಗುತ್ತದೆ. ಪದದಿಂದ ಪದಕ್ಕೆ ಜೀವನ ಪ್ರೀತಿಯ ದೀಪವ ಹಚ್ಚುತ್ತಾ ಹೋಗುವರು. ಕಡೆಗೆ ಸೂರ್ಯನಾಗಿ ಬದುಕು ಬೆಳಗಲೆಂದು ಚಂದ್ರನಾಗಿ ಹೊಳೆಯಲೆಂದು ನಕ್ಷತ್ರಗಳಾಗಿ ಮಿನುಗಲೆಂದು ಆಶಿಸುತ್ತಾರೆ. ಆ ಶಕ್ತಿ ಪ್ರತಿ ಮಾನವನೆದೆಯಲಿ ಇರುವುದೆಂದು ಘಂಟಾಘೋಷವಾಗಿ ಉದ್ಘೋಷಿಸುತ್ತಾರೆ. ಕವಿತೆಯ ಯಾವ ಭಾಗದಲ್ಲು ನಿಲುಗಡೆ ಚಿಹ್ನೆ ಅರ್ಧವಿರಾಮ ಮತ್ತಿತರ ಲೇಖನ ಸಂಜ್ಞೆಗಳ ಕವಿಗಳು ಉದ್ಧೇಶಪೂರ್ವಕವಾಗಿಯೇ ಬಳಸಿಲ್ಲ. ಕವಿತೆಯ ಭಾವಬನಿಯನ್ನ ಅರ್ಥವಿಸ್ತಾರವನ್ನ ಧ್ವನಿಪೂರ್ಣತೆಯನ್ನ ಹಿನ್ನೆಲೆ ಮುನ್ನೆಲೆಗಳನ್ನ ಸಹೃದಯ ಓದುಗರೆ ತಮ್ಮ ಇಚ್ಛಾನುಸಾರ ಗ್ರಹಿಕೆಯನುಸಾರ ಹೊಂದಲೆಂದು ಬಿಟ್ಟಿದ್ದಾರೆ. ಆದರೆ ಕೊನೆಯ ಪ್ಯಾರಾದ ಸಾಲುಗಳ ಅಂತ್ಯದಲ್ಲಿ ಮಾತ್ರ ಆಶ್ಚರ್ಯಸೂಚಕ ಚಿಹ್ನೆಯ ಪ್ರಜ್ಞಾಪೂರ್ವಕವಾಗಿಯೇ ಛಾಪಿಸಿದ್ದಾರೆ. ಜೀವನ ಎದ್ದು ಕತ್ತಲೆ ಕಡೆದು ಸೂರ್ಯ! ಆಗಲೆಂದು ಇರುಳು ಕೂಡ ಎಚ್ಚರದ ಚಂದ್ರ! ಆಗಲೆಂದು ಹೆಜ್ಹೆಗಳೂರಿ ನಕ್ಷತ್ರ! ಆಗಲೆಂದು. ಇದು ಕವಿಗೆ ಮಾನವ ಜೀವದ ಮೇಲಿರುವ ಅಪಾರ ಪ್ರೇಮ ಮತ್ತು ಅಪ್ಪಟ ವಿಶ್ವಾಸ.



ಕವಿತೆಯ ಆರಂಭದ ಎರಡನೆ ಸಾಲಿನ ವಾಚನದಲ್ಲಿ ಕಾಣುವ ಒಳಗಿನಿಂದ ಮೇಲೆದ್ದು ಬರುವ ಬೆಣ್ಣೆಯು ಕೊನೆಯ ಸಾಲಿನಲಿ ಬರುವ ಇಟ್ಟ ಹೆಜ್ಹೆಗಳೆಲ್ಲ ಉರಿ ಉರಿವ ನಕ್ಷತ್ರವಾಗುವ ಪರಿ ಬದುಕು ಬೆಳೆದು ಪಕ್ವಗೊಂಡು ಹರಡುವ ಬಗೆಗೆ ದ್ಯೋತಕವಾಗಿದೆ. ಮೊದಲ ಸಾಲಿನ ಜೀವನ ನಂಬಿಕೆಯ ಪ್ರಾಮಾಣಿಕತೆಯನ್ನ ಕೊನೆಯ ಸಾಲಿನಲ್ಲಿ ಮುಗಿಲಿಗೇರಿಸಿ ಧೀರ್ಘ ನಿಟ್ಟುಸಿರಿನೊಂದಿಗೆ ವಿಶ್ರಮಿಸುತ್ತಾರೆ. ಓದುಗರ ಗೆಲುವ ನಗೆಯ ತೃಪ್ತಿ ಗಳಿಸುತ್ತಾರೆ.

ವಾಸುದೇವ ನಾಡಿಗ ಕವಿಗಳು ಬದುಕಿನ ಕಡು ಅನುಭವಗಳಿಂದೊಡಗೂಡಿದ ನೆನಪುಗಳ ದಟ್ಟತೆಯನ್ನು ತಮ್ಮೆಲ್ಲ ಕವಿತೆಗಳಲ್ಲಿ ಹಿಡಿದಿಡುತ್ತಾ ಬಂದಿದ್ದಾರೆ. ಮೊದಲ ಸಂಕಲನ ವೃಷಭಾಚಲದ ಕನಸಿನಲ್ಲಿಯೂ ‘ಈ ಮಣ್ಣಿನೊಳಗಿನ ಕಣ್ಣು’ ‘ ನೂರಾರು ತಿರುವುಗಳು’ ಕವಿತೆಗಳಲ್ಲಿಯೂ ಬದುಕ ಮುಗ್ಧತೆಯ ಜೊತೆ ಅದರ ಹರಾಕಿರಿಗಳ ದಾಟುವ, ಗುರಿ ಸೇರುವ ಭರವಸೆಯನ್ನೇ ಧೇನಿಸುತ್ತಾರೆ. ಹೊಸ್ತಿಲು ಹಿಮಾಲಯದ ಮಧ್ಯದ ‘ಜೀವ ಕುಲುಮೆ’ ಕವಿತೆಯಲ್ಲಿ

“ಮಣ್ಣೊಡಲೊಳಗಿನ ಬೀಜ
ಮುಗಿಲಲ್ಲೋಲಾಡುವ ನೀರು”

ಎಂದು ಹಾಡುತ್ತಾ ಜೀವನದ ವೈರುಧ್ಯಗಳ ಅಪಾರ ಗಜಿಬಿಜಿಯಲ್ಲೇ ಬದುಕು ಸಂಬಂಧಗಳು ಕೊನರುವುದನು ಸೂಚಿಸುತ್ತಾರೆ. ಕಡಲಿಗೆ ಕಡಗೋಲು ಕವಿತೆಯೂ ಬದುಕಿಗೊದಗುವ ಏನೆಲ್ಲ ಪರೀಕ್ಷೆಗಳನು ಗೆಲ್ಲಬಹುದೆಂದೇ ಹೇಳುತ್ತಾರೆ.

ಕೃಷ್ಣನಿಗೂ ಪೂತನಿಯಿಂದ ಬಕನಿಂದ ಕಾಳೋರಗದಿಂದ ಕಂಸನಿಂದ ಶಿಶುಪಾಲನಿಂದ ಏನೆಲ್ಲ ಎಷ್ಟೆಲ್ಲ ಸಂಕಷ್ಟಗಳು ಬಂದರೂ ಎದುರಿಸಿ ಬೃಂದಾವನವ ಕಟ್ಟಿದ ಮಥುರೆಯ ಉಳಿಸಿದ ದ್ವಾರಕೆಯ ಬೆಳೆಸಿದ. ತನ್ನ ನಂಬಿದವರ ಅನವರತ ಪೊರೆದ. ತಾನೂ ಬೆಳೆದೇ ಬೆಳೆದ. ಮಾನವನಾಗಿ ಹುಟ್ಟಿ ಬಂದು ದಾನವ ಗುಣಗಳ ಅಡಗಿಸಿ ಮಾನವತೆಯ ಉಳಿಸಿದ. ವಿಶ್ವಪ್ರೀತಿಯ ಗಳಿಸಿದ. ಪ್ರತಿ ಮಾನವನು ತನ್ನ ತಾನು ಮಥಿಸಿಕೊಳ್ಳಬೇಕು ಇತರರ ತಿಕ್ಕಾಟ ತಾಕಲಾಟಕ್ಕೆ, ಕಿಚ್ಚು ಚಿತ್ತು ಚಿತಾವಣೆಗೆ ಒಳಗಾಗಲೇಬೇಕು ಆಗಲೇ ತಾನೆ ವ್ಯಕ್ತಿತ್ವ ಹುರಿಗೊಂಡು ಅರಳುವುದು. ಸ್ಪರ್ಧೆ ಪ್ರತಿಸ್ಪರ್ಧಿ ಇರದೆ ಗೆಲುವು ತಿಳಿಯದು ಒಳಿತು ಕೆಡುಕು ಅರಿವಾಗದು. ಮಾನವ ಮಹಾ ಮಾನವನೋ ದೇವ ಮಾನವನೋ ಆಗಲಾಗದು. ಅಂತೆ ಕಡಲಿಗೆ ಕಡೆಗೋಲು ಜೀವಸಾಧ್ಯತೆಗಳ ಸಂಕೇತಿಸುವ ಕವಿತೆ. ಬದುಕ ಭರವಸೆಗಳ ಬೆಳೆಸುವ ದಾರ್ಶನಿಕ ಕವಿತೆ. ಮನುಷ್ಯ ಹುಟ್ಟಿನ ಮಹಾ ಯಾನದಲ್ಲಿ ಕಾವ್ಯ ಕೊಡಬಹುದಾದದ್ದು ಒಂದು ನೆರಳ ಅರಿಕೆ ನಯವಾದ ನೇವರಿಕೆ ಬೆನ್ ಚಪ್ಪರಿಸುವಿಕೆ. ವಾಸುದೇವ ನಾಡಿಗರ ಕಡಲಿಗೆ ಕಡಗೋಲು ಕವಿತೆಯು ಸಾವಧಾನವಾಗಿ ವಾಚಕರೆಲ್ಲರಿಗೂ ಅಂತ ಒಂದು ದಿವ್ಯ ನೆರಳ ಅನುಭೂತಿಯನ್ನ ಭವ್ಯ ಸುಖದ ನೇವರಿಕೆಯನ್ನ ಅದಮ್ಯ ಅಚಲವಾದ ಬೆನ್ ತಟ್ಟುವಿಕೆಯ ಉತ್ಸಾಹನ್ನ ಉದ್ಧೀಪಿಸುತ್ತದೆ.


  • ಟಿ.ಪಿ.ಉಮೇಶ್, (ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕೃತರು, ಲೇಖಕರು, ವಿಮರ್ಶಕರು) ತುಪ್ಪದಹಳ್ಳಿ, ಹೊಳಲ್ಕೆರೆ .ತಾ, ಚಿತ್ರದುರ್ಗ .ಜಿ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW