ಕಾಳೀ ಕಣಿವೆಯ ಕತೆಗಳು ಭಾಗ – 5

ಇಸ್ವಿ- 1970 – ಈ ಕಾಳೀ ನದಿಯ ಕಾಡು ಹೊಕ್ಕವರ ಹಿಂದೆ ಒಂದೊಂದು ಕತೆ ಇದ್ದೇ ಇತ್ತು. ‘ಪರಿಸ್ಯಾ ಊರಿನಲ್ಲಿ ಹುಡುಗೀ ವಿಚಾರದಲ್ಲಿ ಒಂದು ಮರ್ಡರ್‌ ಮಾಡಿ ತಲೆಮರೆಸಿಕೊಂಡು ಬಂದೀದ್ದ.

ಇಲ್ಲಿಯವರೆಗೆ –

ಸೂಪಾದಲ್ಲಿದ್ದ ಹನುಮಂತ್ಯಾನ ಆಯಿ ಗೋವಾ ಕಡೆ ಹೋದವಳು ಇನ್ನೂ ಬಂದಿಲ್ಲ. ಇವನ ಕತೆ ಸಿನಿಮಾದಂತೆ ಸರಿದು ಹೋಗಿದೆ. ಸೂಪಾದಲ್ಲಿ ಮಲಯಾಳೀ ಮೂಸಾ ಕಾಕಾನ ಲಕ್ಕೀ ಹೊಟೆಲ್ಲು ಊರ ಜನರ ನಾಲಿಗಗೆಗೆ ಹೊಸ ರುಚಿ ಹತ್ತಿಸಿದೆ. ಕಾಳೀ ಮತ್ತು ಪಾಂಡ್ರಿ ನದಿಗಳ ಸಂಗಮದ ಬಳಿ ಇದ್ದ ಬ್ರಿಟಿಷ್‌ ಬಂಗಲೆ ಕೆಲವರಿಗಷ್ಟೇ ಪ್ರಿಯವಾಗಿದೆ. ಬೈಲುಪಾರೆಯಲ್ಲಿದ್ದ ಕುಣಿಲಾಬಾಯಿ ಸೂಪಾದ ಮಟ್ಟಿಗೆ ಸುರಸುಂದರಿಯೇ. ನಮ್ಮ ತಂಡದ ಇಂಜಿನಿಯರ ನಾಗೇಶ ಶಿರೋಡ್ಕರರಿಗೆ ಕುಣಿಲಾಬಾಯಿಯ ಗುಡಿಸಲಲ್ಲಿ ಸಿಗುತ್ತಿದ್ದ ಗೋವಾ ಫೆನ್ನಿ ಅಂದರೆ ಸ್ವರ್ಗ. ಹನುಮಂತ್ಯಾ ಅವಳ ಬಳಿಯೇ ಕೆಲಸ ಮಾಡುತ್ತಿದ್ದವ ಈಗ ನಮ್ಮ ಸರ್ವೇ ತಂಡ ಸೇರಿಕೊಂಡಿದ್ದಾನೆ.

ಮುಂದೆ ಓದಿರಿ…


ಶಿರೋಡ್ಕರ ಎಚ್ಚರಿಸಿದರು

ಏನ್ರೀ ಶೇಖರ್‌…. ಕನಸು ಕಾಣೂಕ್‌ ಹತ್ತೀರೇನು?

ಶಿರೋಡಕರ ಎಚ್ಚರಿಸಿದರು. ಗಾಬರಿಯಾಗಿ ಸುತ್ತಲೂ ನೋಡಿದೆ. ಎಲ್ಲರೂ ಆ ಕಾಡು ಗೌಳಿ ನೌವಲೂ ಸುತ್ತ ನಿಂತಿದ್ದರು. ಪಿಚ್ಚೆನಿಸಿತು. ನಾನೆಲ್ಲೋ ಭ್ರಮಾಲೋಕದಲ್ಲಿದ್ದೇನೆಂದುಕೊಂಡೆ. ಸಮಯ ಸಿಕ್ಕರೆ ಈ ಹನುಮಂತ್ಯಾನ ಕತೆಯನ್ನು ಅದ್ಭುತವಾಗಿ ಬರೆದಿಡಬೇಕು ಅನಿಸಿತು. ಮನಸ್ಸು ಈಗ ವಾಸ್ತವಕ್ಕೆ ತಿರುಗಿತು. ಚಹಾಕ್ಕಾಗಿ ಒಂದು ಕ್ವಾರ್ಟರ್‌ ಬಾಟಲು ಹಾಲು ಖರೀದಿಸುವುದು ಎಂದು ಎಲ್ಲ ತೀರ್ಮಾನಿಸಿದೆವು. ಗೌಳಿ ನೌವಲೂ ಖುಶಿಯಾಗಿ ಹೋದ. ‘ನಾನು ಅವನ ಗುಡಿಸಲು ಎಲ್ಲಿದೆ ಎಂದು ಕೇಳಿದೆ. ಇಲ್ಲೇ ಚಾಂದೇವಾಡಿ ಹತ್ತಿರ ತಮ್ಮ ವಾಡೇ ಇರುವುದಾಗಿಯೂ, ಎಂಟು ಗುಡಿಸಲು ಇರುವೆ ಎಂದೂ ಹೇಳಿದ. ಒಂದು ಮನೆಗೆ ಐದು-ಆರರಂತೆ ಎಮ್ಮೆಗಳಿವೆ. ಎಲ್ಲವೂ ಹಾಲು ಕೊಡುತ್ತವೆ ಎಂದೂ ಹೇಳಿದ. ತಾನು ಕೊಡುವ ಹಾಲಿನಲ್ಲಿ ನೀರೇ ಇರುವುದಿಲ್ಲ. ಬೇಕಾದ್ರೆ ಜಗಲಬೇಟ, ಕ್ಯಾಸ್ಟಲ್‌ ರಾಕ್‌ ತನಕ ಹೋಗಿ ಕೇಳಿ. ಹಮ್‌ಚಾ ಘಟ್‌ ದೂಧ ಅಸಾ…’ ಎಂದು ಹೇಳಿದ.

arunima

ಫೋಟೋ ಕೃಪೆ : DownToEarth

ಅವನು ಚಾಂದೇವಾಡಿ ಅಂದದ್ದೇ ತಡ. ಇಂಜನಿಯರ್‌ ಲಿಂಗರಾಜ ನನ್ನತ್ತ ನೋಡಿ ಹೇಳಿದರು.

‘‘ಚಾಂದೇವಾಡೀಲಿ ನಾವು ಸ್ಯಾಂಡ್‌ ಕ್ವಾರೀ ಸರ್ವೇ ಮಾಡೋದಿದೆ. ಅಲ್ಲಿ ಒಂದು ವಾರದ ಕೆಲಸ. ಅಲ್ಲಿಯ ಸರ್ವೇ ಕೆಲಸ ಮುಗಿಸಿ ಮತ್ತೆ ನಾವು ಎಫ್.ಆರ್‌.ಎಲ್‌. ಸರ್ವೇಗೆ ವಾಪಸಾಗಬೇಕು. ವಾರದ ಕೆಲಸ ಇದ್ದರೂ ನಾವು ಇಲ್ಲಿಂದ ಟೆಂಟು ಕೀಳೋದು ಅನಿವಾರ್ಯ. ಅಲ್ಲಿ ಉಳಿಯೋಕೆ ಜಾಗ ಹೇಗಿದೆ ಅಂತ ಒಮ್ಮೆ ನೋಡ್ಕೊಂಡು ಬಂದು ಬಿಡಿ ಶೇಖರ್‌. ಹ್ಯಾಗೂ ಮುಂದಿನ ರವಿವಾರ ಇ.ಇ.ಆಫೀಸಿನಿಂದ ಜೀಪು ಬರುತ್ತಲ್ವಾ. ಟೆಂಟು ಶಿಫ್ಟು ಮಾಡೋಣ’ ಅಂದರು. ಉಳಿದವರೂ ಅದಕ್ಕೆ ‘ಹೌದೌದು’ ಅನ್ನುತ್ತ ದನಿಗೂಡಿಸಿದರು. ಅದು ನನಗೂ ಸರಿ ಅನಿಸಿತು. ಹೇಗೂ ಈ ನವಲೂ ಗೌಳಿ ಆ ಕಡೆಯ ಕಾಡಿನವನೇ. ದಾರಿಯ ಗುರುತೂ ಹೇಳುತ್ತಾನೆ. ಇವತ್ತೇ ಹೋಗಿ ಬಂದರೆ ಹೇಗೆ ಎಂದು ಯೋಚಿಸಿದೆ. ಅದನ್ನು ನಮ್ಮ ಸೀನಿಯರ್‌ ಶಿರೋಡ್ಕರರಿಗೂ ಹೇಳಿದೆ.

‘ಆಯ್ತು ಹೋಗಿ. ಜೊತೆಗೆ ಪರಸ್ಯಾನನ್ನು ಕರೆದುಕೊಂಡು ಹೋಗಿ. ಕಾಡಿನ ದಾರಿ. ಒಬ್ಬರೇ ಹೋಗೋದು ಬೇಡ’ ಅಂದರು.

ಸರ್ವೇ ಉಪಕರಣಗಳನ್ನು ಹೊತ್ತು ಕಾಡು ಹೊಕ್ಕರು.

ಉಳಿದವರೆಲ್ಲ ಕಾಲಿಗೆ ಹಂಟರ್‌ ಶೂ ಹಾಕಿಕೊಂಡು, ತಲೆಗೆ ಹ್ಯಾಟು, ಕ್ಯಾಪು ಧರಿಸಿ ಸಿದ್ಧರಾದರು. ಲೆವೆಲ್‌ ಬಾಕ್ಸ, ಅಳತೆಯ ಸ್ಟಾಪ್‌, ಮೂವತ್ತು ಮೀಟರ್‌ ಉದ್ದದಷ್ಟು ಅಳತೆ ಮಾಡುವ ಬಟ್ಟೆಯ ಸ್ಕೇಲು ಪಟ್ಟಿ, ಕೊಯ್ತ, ಊಟದ ಡಬ್ಬಿ, ನೀರಿನ ಕ್ಯಾನು, ಪ್ರಾಣಿಗಳನ್ನು ಹೆದರಿಸಲು ಕೋಲಿಗೆ ಸಿಕ್ಕಿಸಿದ ಬಣ್ಣದ ಬಟ್ಟೆ, ಒಂದಿಬ್ಬರ ಕೈಗೆ ಸದ್ದು ಮಾಡಲು ಗಂಟೆ-ಸೀಟಿಗಳನ್ನು ಹಿಡಿದು ನಿತ್ಯದ ಸರ್ವೇ ಕೆಲಸಕ್ಕೆ ಹೊರಟು ನಿಂತರು.

ಕಾಡಿನ ನಡುವೆ ದಾರಿಯೇ ಇಲ್ಲದ ಕಡೆ ಕಾಲು ಹಾದಿ ಮಾಡಿಕೊಂಡು ಅವರೆಲ್ಲ ನಡೆದಾಗ ನಾನು ಎಲ್ಲರಿಗೂ ಬಾಯ್‌ ಹೇಳಿದೆ. ಕಾಡಿನ ಮಧ್ಯ ದಾರಿ ತಪ್ಪದಿರಲೆಂದು ಶಿರೋಡ್ಕರರ ಬಳಿ ದಿಕ್ಕು ತೋರಿಸುವ ಕಂಪಾಸು ಇತ್ತು.

arunima

ಫೋಟೋ ಕೃಪೆ : indiatimes.com

ಸುಬ್ರಮಣಿ, ಹನುಮಂತ್ಯಾ, ಶಿರೋಡ್ಕರ, ಶ್ರಿನಿವಾಸ ಸೆಟ್ಟಿ ಮತ್ತು ಲಿಂಗರಾಜ ಅವರು ಗುಂಪು ಮಾಡಿಕೊಂಡು ಕಾಡಿನೊಳಕ್ಕೆ ಹೋದರು. ದೂರದಲ್ಲಿ ಬೆಟ್ಟದ ಕಣಿವೆಯಿಂದ ಕೆಳಗೆ ಧುಮುಕುತ್ತಿದ್ದ ಝರಿಯೊಂದರ ನೀರಿನ ಸದ್ದು ಟೆಂಟಿನವರೆಗೂ ಕೇಳುತ್ತಿತ್ತು.

ಅಡುಗೆಯ ಅಪ್ಪೂಕುಟ್ಟಿ ಎಲ್ಲರಿಗೂ ಆಗುವಷ್ಟು ಚಪಾತಿ, ಆಲೂಗಡ್ಡೆ ಪಲ್ಯ, ಮೊಸರನ್ನ ಮಾಡಿ ಊಟದ ಡಬ್ಬಿ ತುಂಬಿಸಿ ಕಳಿಸಿದ್ದ. ಸಂಜೆ ಐದು ಗಂಟೆ ಹೊತ್ತಿಗೆ ಯಾರು ಎಲ್ಲಿಯೇ ಇದ್ದರೂ ಅವರೆಲ್ಲ ಟೆಂಟಿಗೆ ವಾಪಸಾಗಬೇಕೆಂಬುದು ನಾವು ಹಾಕಿಕೊಂಡ ನಿಯಮವಾಗಿತ್ತು. ಅದರಿಂದ ಆತಂಕವಿರಲಿಲ್ಲ.

ಎಲ್ಲರೂ ಹೊರಗೆ ಹೋದ ಮೇಲೆ ಟೆಂಟು ಕಾಯಲು ಒಬ್ಬರಾದರೂ ಬೇಕಿತ್ತಲ್ಲ. ಅದಕ್ಕೆ ಮಾಮೂಲಿನಂತೆ ಅಡುಗೆಯ ಅಪ್ಪೂ ಕುಟ್ಟೀ ಒಬ್ಬನೇ ಟೆಂಟಿನಲ್ಲಿ ಉಳಿಯಬೇಕಾಯಿತು. ಅಲ್ಲಿ ದಿನವೆಲ್ಲ ಅವನಿಗೂ ಕೆಲಸವಿರುತ್ತದೆನ್ನಿ. ಸಂಜೆಗೆ ಒಲೆ ಉರಿಸಲು ಕಟ್ಟಿಗೆ ತಂದು ಹಾಕುವುದು, ಅಲ್ಲಿಯೇ ಇದ್ದ ಝರಿಯಿಂದ ನೀರು ತಂದು ಶೇಖರಿಸಿಟ್ಟುಕೊಳ್ಳುವುದು, ಅಕ್ಕಿ, ಬೇಳೆ ಸ್ವಚ್ಛ ಮಾಡಿಕೊಳ್ಳುವುದು, ಸಾಧ್ಯವಾದರೆ ಪಾತ್ರೆ ತೊಳೆದಿಟ್ಟುಕೊಳ್ಳುವುದು. ಟೆಂಟಿನ ಕಂದೀಲು ಗ್ಲಾಸು ಒರೆಸುವುದು ಇತ್ಯಾದಿ ಕೆಲಸಗಳಿದ್ದವು.

ನಾನು ಪರಸ್ಯಾನೊಂದಿಗೆ ಹೊರಟೆ

ಎಲ್ಲರೂ ಅತ್ತ ಹೋದ ಮೇಲೆ ನಾನು ಮತ್ತು ಪರಸ್ಯಾ ನವಲೂ ಗೌಳಿಯೊಂದಿಗೆ ಚಾಂದೇವಾಡಿಯತ್ತ ಹೊರಟೆವು. ನಾನು ಹಂಟರ್‌ ಶೂ ಹಾಕಿದ್ದೆ. ಖಾಕೀ ಪ್ಯಾಂಟು ಬಿಳೀ ಶರ್ಟು ಹಾಕಿ ತಲೆಯಮೇಲೆ ಹ್ಯಾಟು ಹಾಕಿಕೊಂಡಿದ್ದೆ. ತಲೆಯ ಮೇಲೆ ಹ್ಯಾಟು ಇಲ್ಲದೆ ನಾನೆಂದೂ ಹೊರಗೆ ಹೋದವನೇ ಅಲ್ಲ.

pexels-photo-4553112
ಫೋಟೋ ಕೃಪೆ – Pexels.com

‘ಸಂಜೆ ಬೇಗ ಬನ್ನಿ. ರಾತ್ರಿ ಊಟಕ್ಕೆ ಏನಾದ್ರೂ ಪೇಶಲ್‌ ಅಡುಗೆ ಮಾಡುವಾ’

ಎಂದು ಅಪ್ಪೂ ಆಸೆ ತೋರಿಸಿದ. ಕಾಡಿನಲ್ಲಿ ಪೇಶಲ್‌ ಅಡುಗೆ ಅಂದರೆ ಏನಿರುತ್ತದೆ. ಶಾಖಾಹಾರಿಗಳಾದರೆ ಸುಕ್ಕಾ ಬಟ್ಟಾಟೆ ಪಲ್ಯ, ಬದನೇಕಾಯಿ ಗೊಜ್ಜು, ಇಲ್ಲದಿದ್ದರೆ ಬೆಂಡೇಕಾಯಿ ಮಸಾಲಾ [ಸ್ಟಾಕ್‌ ಇದ್ದರೆ ಮಾತ್ರ], ಪೂರಿ, ಅನ್ನ, ತಿಳಿಸಾರು ಖಾಯಂ.

ಮಾಂಸಾಹಾರಿಗಳಾಗಿದ್ದರೆ ಸಂದರ್ಭಕ್ಕೆ ತಕ್ಕಂತೆ ಸಿಗುವ ಕೋಳಿ ಮಾಂಸ, ಮೊಟ್ಟೆ ಪದಾರ್ಥ, ಇತ್ಯಾದಿ. ಅಪ್ಪೂ ಕುಟ್ಟಿ ಎರಡೂ ಅಡುಗೆಗಳನ್ನು ಕೇರಳ ಮಾದರಿಯಲ್ಲಿ ತಯಾರಿಸುವುದರಲ್ಲಿ ನಿಸ್ಸೀಮನಾಗಿದ್ದ. ನಾನು, ಲಿಂಗರಾಜ, ಸುಬ್ರಮಣಿ ಪಕ್ಕಾ ಶಾಖಾಹಾರಿಗಳಾಗಿದ್ದೆವು. ಅಪ್ಪೂ ಮಾಂಸಾಹಾರ ಮಾಡುವ ದಿನ ನಮ್ಮ ಅಡುಗೆಯನ್ನು ನಾವೇ ತಯಾರಿಸಿಕೊಳ್ಳಲೂ ಕಲಿತಿದ್ದೆವು. ಅವತ್ತು ಒಲೆ ಬೇರೆ ಇರುತ್ತಿತ್ತು. ನಮಗೆ ಪೇಶಲ್‌ ಊಟ ಅಂದರೆ ಅನ್ನದ ಜೊತೆ ಬದನೇ ಪಲ್ಯ, ಬೆಂಡೀ ಮಸಾಲಾ ಅಗಿರುತ್ತಿತ್ತಷ್ಟೇ. ಕಾಡಿನಲ್ಲೇ ಸಿಗುತ್ತಿದ್ದ ಮಾವಿನ ಕಾಯಿಯ ಉಪ್ಪಿನಕಾಯಿ ನಮ್ಮಲ್ಲೇ ಇರುತ್ತಿತ್ತು.

ಚಾಂದೇವಾಡಿಯ ದಾರಿಯಲ್ಲಿ

ನಮ್ಮ ಟೆಂಟಿನಿಂದ ಚಾಂದೇವಾಡಿಯ ನದೀ ಪ್ರದೇಶ ದೂರವೇನಿರಲಿಲ್ಲ. ಹೆಚ್ಚೆಂದರೆ ಆರು ಮೈಲಿಯಷ್ಟೆ. ಒಂದು ತಾಸು ಕಾಡಿನ ಕೊರಕಲು ದಾರಿಯಲ್ಲಿ ನಡೆಯಬೇಕಾಗಿತ್ತು. ಗೌಳಿ ನವಲೂನ್ನು ಮುಂದಿಟ್ಟುಕೊಂಡು ನಡೆದೆವು.

bright daylight environment forest
ಫೋಟೋ ಕೃಪೆ – Pexels.com

ಅಪ್ಪೂ ನಮಗೆ ದಾರಿಯಲ್ಲಿ ಹಸಿವಾದರೆ ಇರಲಿ ಎಂದು ಹತ್ತು ಚಪಾತಿ, ಆಲೂ ಪಲ್ಯ ಕಟ್ಟಿಕೊಟ್ಟಿದ್ದ. ಚಪಾತಿಯೊಂದಿಗೆ ನನಗೆ ಒಂದೆರಡು ಹಸೀ ಮೆಣಸಿನಕಾಯಿ ತಿನ್ನುವುದೂ ರೂಢಿಯಾಗಿತ್ತು. ಅಪ್ಪೂ ಅದರ ವ್ಯವಸ್ಥೆಯನ್ನೂ ಮಾಡಿದ್ದ. ಊಟದ ಡಬ್ಬಿಯಿರುವ ಚೀಲವನ್ನು ಪರಸ್ಯಾ ಹೆಗಲಿಗೇರಿಸಿಕೊಂಡಿದ್ದ.

ನಾನು ನೀರಿನ ಕ್ಯಾನನ್ನು ಬಗಲಿಗೆ ಹಾಕಿಕೊಂಡಿದ್ದೆ. ಮತ್ತು ಕೈಯಲ್ಲಿ ಪ್ರಾಣಿಗಳನ್ನು ಹೆದರಿಸಲು ಬಣ್ಣದ ಬಟ್ಟೆಯ ಕೋಲನ್ನು ಧ್ವಜದಂತೆ ಎತ್ತರಕ್ಕೆ ಹಿಡಿದಿದ್ದೆ.

ಎಲ್ಲಕ್ಕಿಂತ ಮುಂದೆ ನವಲೂ ಗೌಳಿ, ಅವನ ಹಿಂದೆ ನಾನು, ನನ್ನ ಹಿಂದೆ ಪರಸ್ಯಾ.

ನಮ್ಮಿಬ್ಬರ ಬಳಿ ಆಫೀಸಿನವರು ಕೊಟ್ಟಿದ್ದ ಹರಿತಾದ ಕೊಯ್ತಗಳಿದ್ದವು. ಎಂದಿನಂತೆ ಅವನ್ನು ಪ್ಯಾಂಟಿನ ಬೆಲ್ಟಿಗೆ ಸಿಕ್ಕಿಸಿಕೊಂಡಿದ್ದೆವು. ನನ್ನ ಇನ್ನೊಂದು ಕೈಯಲ್ಲಿ ದಿಕ್ಸೂಚಿ ಕಂಪಾಸು ಇತ್ತು. ಅದರ ಸಹಾಯದಿಂದ ನಾನು ದಾರಿಯ ದಿಕ್ಕನ್ನು ಗುರುತಿಸಲು ಅಲ್ಲಲ್ಲಿ ಮರದ ಟೊಂಗೆಗಳನ್ನು ಅರ್ಧ ಕತ್ತರಿಸಿ ಕೆಳಗೆ ಬಗ್ಗಿಸಿದೆ. ಪರಸ್ಯಾನೂ ನೆರವಾದ. ಕಾಡಿನಲ್ಲಿ ಅಡ್ಡಾಡುವಾಗ ನಮ್ಮ ಮೂಲ ಕ್ಯಾಂಪಿಗೆ ವಾಪಸು ಬರಲು ಇಂಥ ಗುರುತುಗಳು ತುಂಬ ಸಹಾಯ ಮಾಡುತ್ತವೆ.

ನವಲೂ ಗೌಳಿ ಬಳಿ ಹಳೆಯ ಕೊಯ್ತ ಇತ್ತು. ಅದು ಅವನ ಅಪ್ಪನ ಕಾಲದ್ದಿರಬೇಕು. ಅದನ್ನು ಕಂದು ಬಣ್ಣಕ್ಕೆ ತಿರುಗಿದ ತನ್ನ ಲಂಗೋಟಿಗೆ ಸಿಕ್ಕಿಸಿಕೊಂಡಿದ್ದ. ಕೊರಳಲ್ಲಿ ಆತ ಹಾಕಿಕೊಂಡಿದ್ದ ಬಣ್ಣ-ಬಣ್ಣದ ಹವಳದ ಸರಗಳು ನನಗೆ ಕುತೂಹಲ ಮೂಡಿಸಿದ್ದವು. ಅವನ ಕಮಟು ಹಿಡಿದ ಕೆಂಪಂಗಿಯ ದುರ್ವಾಸನೆ ನನ್ನ ಮೂಗಿಗೂ ಬಡಿಯುತ್ತಿತ್ತು.

ದಾರಿ ಸವೆಸಲು ಪರಿಸ್ಯಾನ ಕತೆ ಕೇಳಿದೆ

ಮಾತಿಲ್ಲದೆ ದಾರಿ ಸಾಗುವಂತಿರಲಿಲ್ಲ. ಪರಸ್ಯಾ ಹೆಚ್ಚು ಮಾತಾಡುವವನಲ್ಲ. ನಾನೇ ಮಾತು ಸುರು ಮಾಡಿದೆ. ಆತ ಹೀಗೆ ಯಾವತ್ತೂ ಒಬ್ಬಂಟಿಗನಾಗಿ ಸಿಕ್ಕಿರಲಿಲ್ಲ. ಅವನ ಬಗ್ಗೆ ಕೇಳುವ ಕುತೂಹಲವಾಯಿತು. ನಮ್ಮ ಸರ್ವೇ ತಂಡದಲ್ಲಿದ್ದವರದು ಒಬ್ಬೊಬ್ಬರದು ಒಂದೊಂದು ಕತೆ. ಆದರೆ ಯಾರೂ ಬಹು ಬೇಗ ವಯಕ್ತಿಕವಾಗಿ ಒಡ್ಡಿಕೊಳ್ಳುತ್ತಿರಲಿಲ್ಲ.

arunima

‘ಪರಿಸ್ಯಾ… ನಿನ್ನ ಉರು ಯಾವುದಂತ ಹೇಳೇ ಇಲ್ಲ ನೀನು?’

ಎಂದು ನಾನೇ ಕೇಳಿದೆ. ಅಷ್ಟು ಕೇಳಿದ್ದೇ ಸಾಕಾಯಿತೇನೋ. ಪರಿಸ್ಯಾ ತನ್ನ ಕತೆ ಹೇಳಿದ. ಅವನು ಅಲ್ಲೆಲ್ಲೋ ಬಯಲು ಸೀಮೆಯವನಂತೆ. ಮರ ಕಡಿಯುವ ಕೆಲಸಕ್ಕೆಂದು ಮಮದಾಪುರ ಎಂಬ ಕಂತ್ರಾಟುದಾರರು ಒಂದಷ್ಟು ಜನರನ್ನು ಲಾರಿಯಲ್ಲಿ ತುಂಬಿಕೊಂಡು ಜೊಯಿಡಾ ಕಾಡಿಗೆ ಕರೆತಂದು ಬಿಟ್ಟರಂತೆ. ಹಾಗೆ ಬಂದವರಲ್ಲಿ ಪರಸ್ಯಾನೂ ಒಬ್ಬ. ಇಪ್ಪತೈದರ ತರುಣ.

ಒಂದು ರೂಪಾಯಿ ನಾಲ್ಕಾಣೆ ದಿನಗೂಲಿ ಎಲ್ಲರಿಗೂ. ರವಿವಾರ ರಜೆ. ಅವತ್ತು ದಿನಗೂಲಿ ಸಂಬಳ ಇಲ್ಲ. ವಾರದ ಹಿಂದಿನ ದಿನವೇ ಇವರಿಗೆ ಪಗಾರ. ಒಬ್ಬೊಬ್ಬರಿಗೆ ಆರು ರೂಪಾಯಿ ವಾರದ ಸಂಬಳ. ಪ್ರತಿ ರವಿವಾರ ಎಲ್ಲರೂ ಆರು ಕಿ.ಮೀ. ದೂರವಿದ್ದ ಸೂಪಾ ಪಟ್ಟಣಕ್ಕೆ ರೇಶನ್ನು ತರಲು ಹೋಗುತ್ತಾರೆ. ಕಾಡಿನ ದಾರಿಯಲ್ಲೇ ನಡೆದುಕೊಂಡು ಹೋಗಬೇಕು. ಪೆಡ್ನೇಕರ ಅಂಗಡಿಯಲ್ಲಿ ರೇಶನ್ನು ಖರೀದಿಸಿ ತಲೇ ಮೇಲಿಟ್ಟುಕೊಂಡು ಮತ್ತೆ ಜೋಯಿಡಾ ಕಡೆ ಮುಖ ಮಾಡುತ್ತಾರೆ. ಸೂಪಾ ಊರ ಹೊರಗಿದ್ದ ಗುಡಿಸಲೊಂದರಲ್ಲಿ ಸಿಗುತ್ತಿದ್ದ ಹನ್ನೆರಡಾಣೆಯ ಗೋವಾ ಕ್ವಾರ್ಟರು ಸಾರಾಯಿ ಕುಡಿದು, ಕರಿದ ಒಣ ಮೀನು ಕುರುಕಾಡಿಸಿ ತಿಂದು ತೂರಾಡುತ್ತ ಸಾಲಾಗಿ ಮತ್ತೆ ಕಾಡು ದಾರಿ ತುಳಿಯುತ್ತಾರೆ.

ಅದೊಂದು ದಿನ ಜೊಯಿಡಾ ಕಾಡಿನಲ್ಲಿ ಎತ್ತರದ ದೊಡ್ಡ ಮರವೊಂದನ್ನು ಕಡಿಯುವಾಗ ಅನಾಹುತ ನಡೆದು ಹೋಯಿತು. ಭಾರೀ ಗಾತ್ರದ ಬೊಡ್ಡೆಯಿರುವ ಮರ ಅದು. ಒಳಗೆ ಟೊಳ್ಳು ಇತ್ತೇನೋ. ಇವರ ಕೊಡಲಿಯೇಟಿಗೆ ದಿಢೀರನೆ ಉರುಳೇ ಬಿಟ್ಟಿತು. ಕೆಳಗೆ ಕೊಡಲಿ ಹಿಡಿದ ನಾಲ್ಕು ಜನ ಅಲ್ಲಿಯೇ ಅಪ್ಪಚ್ಚಿಯಾದರು. ಎಲ್ಲ ಇವನ ಕಣ್ಮುಂದೆಯೇ ಆಯಿತು.

ಇವನೂ ಮರದ ಬುಡಕ್ಕೆ ಸಿಕ್ಕುವವನಿದ್ದ. ಯಾರೋ ಸಮಯಕ್ಕೆ ಬಂದು ಎಳೆದುಕೊಂಡುಬಿಟ್ಟರು. ಪರಸ್ಯಾ ಬಚಾವ್‌ ಆದ. ಆ ಮೇಲೆ ಮರ ಕಡಿಯುವ ಈ ಕೆಲವೇ ಬೇಡ ಎಂದು ಅಲ್ಲಲ್ಲಿ ಅಲೆದಾಡಿ ಕೊನೆಗೆ ನಮ್ಮಲ್ಲಿ ದಿನಗೂಲಿ ಕೆಲಸಕ್ಕೆ ಬಂದು ಸೇರಿಕೊಂಡ.

ಪರಸ್ಯಾ ಎಲ್ಲವನ್ನೂ ಹೇಳಿಕೊಂಡ. ಹೀಗೇ… ನಮ್ಮ ತಂಡದಲ್ಲಿದ್ದ ಒಬ್ಬೊಬ್ಬರದೂ ಒಂದೊಂದು ಕತೆ. ಆದರೆ ನನಗೆ ಆತ್ಮೀಯನಾಗಿದ್ದ ಅಡುಗೆಯ ಅಪ್ಪೂ ಇವನ ಬಗ್ಗೆ ಹೇಳುವುದೇ ಬೇರೆ ಕತೆ. ಆತ ಇವನ ಬಗ್ಗೆ ಇನ್ನೊಂದು ಕತೆ ಹೇಳಿದ್ದ.

ಪರಿಸ್ಯಾನ ಇನ್ನೊಂದು ಕತೆ

‘ಸಾರ್‌ ಈ ಪರಿಸ್ಯಾನ ನಂಬಬೇಡಿ. ನಿಮಗ್ಗೊತ್ತಿಲ್ಲ ಇವ್ನ ಕತೆ. ಇವ್ನು ಊರಿನಲ್ಲಿ ಹುಡುಗೀ ವಿಚಾರದಲ್ಲಿ ಒಂದು ಮರ್ಡರ್‌ ಮಾಡಿ ತಲೆಮರೆಸಿಕೊಂಡು ಬಂದೀದಾನಂತೆ. ಪೋಲೀಸರ ಕೈಗೆ ಸಿಗಬಾರದೂಂತ ಇಲ್ಲಿ ಬಂದು ಕಾಡು ಸೇರಿಕೊಂಡೀದಾನಂತೆ. ಅಲ್ಲಿ ಊರ್‌ ಕಡೆ ಪೋಲೀಸ್ರು ಇವನನ್ನು ಹುಡುಕ್ತಾ ಇದಾರಂತೆ…ಮರ್ಡರ್‌ ಕೇಸಿದೆ ಸಾರ್‌ ಇವ್ನ ಮೇಲೇ…!’

ಎಂದು ಹೇಳಿದ್ದ. ಅಂತೂ ಈ ಕಾಳೀ ನದಿಯ ಕಾಡು ಹೊಕ್ಕವರ ಹಿಂದೆ ಒಂದೊಂದು ಕತೆ ಇದ್ದೇ ಇತ್ತು. ನನಗೆ ಅವೆಲ್ಲ ಕುತೂಹಲವಾಗಿ ಕಂಡವು. ಸಮಯ ಸಿಕ್ಕಾಗ ಎಲ್ಲವನ್ನೂ ನೆನಪಿಸಿಕೊಂಡು ಎಲ್ಲರ ಕತೆ ಬರೆದುಬಿಡಬೇಕು ಎಂದೂ ಅಂದುಕೊಂಡೆ.

ಹುಲಿ ಮನುಷ್ಯನನ್ನು ಬೇಟೆಯಾಡಿದ ಜಾಗದಲ್ಲಿ ನಾನು…

ಅಷ್ಟರಲ್ಲಿ ಮುಂದೆ ಹೋಗುತ್ತಿದ್ದ ನವಲೂ ಗೌಳಿ ಇದ್ದಕ್ಕಿದ್ದಂತೆ ನೆಲಕ್ಕೆ ಅಡ್ಡಬಿದ್ದು ಕೈಮುಗಿದು ಕೂತುಬಿಟ್ಟ. ನೋಡಿದರೆ ಎದುರಿಗೆ ಅಡ್ಡಲಾಗಿ ಒಂದು ಶೀಳು ರಸ್ತೆ ಹೋಗಿತ್ತು. ಅಚ್ಚ ಹಸುರಿನ ಎಲೆಗಳು ಅಲ್ಲಿ ನೆಲಕ್ಕೆ ಹಾಸಿಗೆ ಹಾಸಿದ್ದವು. ಎದುರಿಗೆ ಒಂದು ಎಳೆಯ ಕಂಟಿ ಕಡಿದು ಗುಡ್ಡೆಯಂತೆ ಹಾಕಿದ್ದ ಒಣಗಿದ ಎಲೆ-ಚೊಂಗೆಗಳು ಕಂಡವು.

arunima

ಫೋಟೋ ಕೃಪೆ : Flickr

‘ಏನಾಯ್ತು ನವಲೂ’ ಎಂದು ಗಾಬರಿಯಿಂದ ಕೇಳಿದೆ. ಆತನೂ ಗಾಬರಿಯಾಗಿದ್ದ.

‘ವಾಘ್‌…! ವಾಘ…! ಸಾಹೇಬ್‌. ವಾಘ ಖಾಯಿಲಾ ಇತಾ… ಏಕ ಮಾನುಷ್‌ ಮರಲಾ ಇಕಡೆ’ [ಹುಲೀ…!

ಸಾಹೇಬ್‌. ಹುಲೀ…! ಒಬ್ಬ ಮನುಷ್ಯನನ್ನು ಇಲ್ಲೇ ತಿಂದದ್ದು] ಅಂದ.

ಅವನು ‘ವಾಘ’ ಅಂದಕೂಡಲೇ ನಾನು ಮತ್ತು ಪರಿಸ್ಯಾ ಗಾಬರಿಯಿಂದ ಕೊಯತಾ ಎತ್ತಿ ಹಿಡಿದೆವು.

‘ಹುಲೀನಾ…? ಮನುಷ್ಯನನ್ನು ಇಲ್ಲೇ ತಿಂದಿದೆಯಾ?’

ಕಾಡಿನಲ್ಲಿ ಹುಲಿ ಒಮ್ಮೆ ಒಂದು ಪ್ರಾಣಿಯನ್ನು ಕೊಂದರೆ ಸಾಕು. ಮೂರು ದಿನ ಅದೇ ಜಾಗಕ್ಕೆ ಮತ್ತೆ-ಮತ್ತೆ ಬರುತ್ತದೆ. ಅದಷ್ಟೇ ಅಲ್ಲ. ಸತ್ತ ಪ್ರಾಣಿಯ ವಾಸನೆ ಹಿಡಿದು ಶೀಳು ನಾಯಿಗಳ ದಂಡೂ ಬರುತ್ತದೆ.

ಇಲ್ಲಿ ಮನುಷ್ಯನನ್ನು ಹುಲಿ ಕೊಂದಿದೆ. ಇಲ್ಲಿಯೇ ಸತ್ತವನ ಮಾಂಸವನ್ನೂ ತಿಂದಿದೆ. ಇಂಥ ಜಾಗಕ್ಕೆ ಬಂದಾಗ ಎಚ್ಚರಿಕೆ ಅವಶ್ಯಕ. ಇಲ್ಲಿ ಹುಲಿಗಳು ಇವೆ ಎಂದು ಅರಿವೆಗೆ ಬಂತು. ಗಾಬರಿಯಿಂದ ಸುತ್ತ ನೋಡಿದೆ. ಈ ಕಾಡಿನಲ್ಲಿ ಹುಲಿ ಇರುವ ಮಾಹಿತಿ ನಮಗಿತ್ತು. ಅದು ಪೊದರುಗಳ ಮರೆಯಿಂದ ನೆಗೆದು ಬಂದರೆ ನಮ್ಮ ಕೊಯತಾ ಯಾವ ಉಪಯೋಗಕ್ಕೂ ಬರುತ್ತಿರಲಿಲ್ಲ. ಇಂಥ ಸಮಯದಲ್ಲಿ ಉಪಾಯಗಳೇ ಹೆಚ್ಚು ಅನುಕೂಲಕ್ಕೆ ಬರುತ್ತವೆ.

ಎಗರಿ ಬಂತು ಕೋರೆ ಹಲ್ಲಿನ ಕಾಡು ಹಂದಿ

ನಾನು ಕಡುಗೆಂಪು ಬಣ್ಣದ ಅಂಗಿ ತೊಟ್ಟಿದ್ದೆ. ಪರಿಸ್ಯಾ ಕಡು ಹಸಿರು ಶರ್ಟು ಹಾಕಿಕೊಂಡಿದ್ದ. ಕೂಡಲೇ ಇಬ್ಬರೂ ನಮ್ಮ ಅಂಗಿಯನ್ನು ತಗೆದು ಮೊದಲೇ ಕೈಯಲ್ಲಿದ್ದ ಕೋಲಿಗೆ ಸಿಕ್ಕಿಸಿಕೊಂಡು ಅದನ್ನು ಎತ್ತರಕ್ಕೆ ಹಿಡಿದೆವು. ಧ್ವಜ ಹಿಡಿದವ ರಂತೆ. ಅದೇನಾಯಿತೋ. ಇಬ್ಬರೂ ಜೋರಾಗಿ ಪ್ರಾಣಿಗಳನ್ನು ಹೆದರಿಸುವ ರೀತಿಯಲ್ಲಿ ಕೇಕೆ ಹಾಕಿದೆವು. ಈಗ ಕಾಡುವಾಸಿ ನವಲೂ ಗೌಳಿ ಕಣ್ಣರಳಿಸಿ ನಮ್ಮನ್ನು ವಿಚಿತ್ರವಾಗಿ ನೋಡಿದ. ಅದೇ ಹೊತ್ತಿಗೆ ನಮ್ಮ ದನಿ ಕೇಳಿದ್ದೇ ತಡ.

arunima

ಫೋಟೋ ಕೃಪೆ : pinterest

ಅಲ್ಲಿಯೇ ಇದ್ದ ಪೊದೆಯೊಂದರಿಂದ ಕಾಡಿನ ಕೋರೆ ಹಲ್ಲು ಇದ್ದ ಕಾಡುಹಂದಿಯೊಂದು ಚಂಗನೆ ಹಾರಿ ನಮ್ಮತ್ತ ನುಗ್ಗಿ ಬಂತು. ಪರಸ್ಯಾ ಜೋರಾಗಿ – ‘ಸರ್ರ…! ಕಾಡಂದಿ ಬಂತ್ರೀ…’ ಎಂದು ಅರಚಿದ.

ನಾನು ಎಚ್ಚರಿಕೆಯಲ್ಲೇ ಇದ್ದೆ. ಈ ಹಿಂದೆಯೂ ಅನೇಕ ಬಾರಿ ನಾನು ಇಂಥ ಕಾಡಿನ ಕೋರೇಹಂದಿಗಳನ್ನು ನೋಡಿದ್ದೆ. ಇದರ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಕಲೆ ಹಾಕಿದ್ದೆ.

ಕಾಡು ಹಂದಿ ಬಲು ಗಟ್ಟಿ ಪ್ರಾಣಿ. ಕಪ್ಪು ಮೈಯ ಈ ಪ್ರಾಣಿಗೆ ಮುಂದೆ ಎರಡು ಉದ್ದ ಕೋರೇ ಹಲ್ಲುಗಳಿರುತ್ತವೆ. ಈ ಕೋರೇ ಹಲ್ಲುಗಳೇ ಅದರ ಆಯುಧಗಳು. ಕಾಡಂದಿ ನೇರವಾಗಿ ಓಡಿ ಬಂದು ತನ್ನ ಎದುರಿಗಿದ್ದ ಶತ್ರುಗಳನ್ನು ಕೋರೆಗಳಿಂದ ಇರಿದು ಶರೀರವನ್ನು ಛಿದ್ರಗೊಳಿಸುತ್ತದೆ. ಅದರ ಪೂರಾ ದೃಷ್ಟಿ ಆ ಹೊತ್ತಿನಲ್ಲಿ ನೇರವಾಗಿರುತ್ತದೆ. ಹಂದಿ ಆಕ್ರಮಣ ಮಾಡುವ ಸಂದರ್ಭದಲ್ಲಿ ನಾವು ನೇರವಾಗಿ ಓಡಬಾರದು. ಅಡ್ಡಡ್ಡ ಓಡಬೇಕು. ಅದರಿಂದ ಹಂದಿಯ ದೃಷ್ಟಿಯ ಗುರಿ ತಪ್ಪುತ್ತದೆ ಎಂದು ಬೇಟೆಗಾರರಿಂದ ಕೇಳಿ ತಿಳಿದಿದ್ದೆ. ಹಂದಿಯು ಹತ್ತಿರ ಓಡಿ ಬರುವವರೆಗೆ ಸುಮ್ಮನಿದ್ದು ನಂತರ ಪಕ್ಕಕ್ಕೆ ಜರುಗಿದರೆ ಓಡಿ ಬರುವ ಹಂದಿಯ ಕೋರೇ ಏಟಿನಿಂದ ತಪ್ಪಿಸಿಕೊಳ್ಳಬಹುದು.

ಬೇಟೆಗಾರರಿಗೆ ಇದರ ಮಾಂಸ ಅಚ್ಚುಮೆಚ್ಚು. ರಾತ್ರಿ ಹೊತ್ತು ನಿಶ್ಯಬ್ದ ಕಾಡಿನಲ್ಲಿ ಆಗಾಗ ಗುಂಡಿನ ಸದ್ದು ಕೇಳಿದರೆ ಅಲ್ಲೊಂದು ಕಾಡು ಹಂದಿ ಬಿತ್ತು ಎಂತಲೇ ಅರ್ಥ. ಅರಣ್ಯ ಇಲಾಖೆಯವರು ಎಂಥಾ ಕಾವಲು ಹಾಕಿದರೂ ಈ ಕಾಡು ಹಂದಿಯ ಬೇಟೆಯನ್ನು ನಿಲ್ಲಿಸಲಾಗಿಲ್ಲ.

ನಮ್ಮತ್ತ ಎಗರಿ ಬಂದ ಕಾಡಂದಿ ಓಡಿ ಬಂದರೂ ನಮ್ಮ ತಂತ್ರದ ಫಲವಾಗಿ ತಪ್ಪಿಸಿಕೊಂಡೆವು. ಅದಕ್ಕೂ ಭಯ ವಿತ್ತೇನೋ. ಅದು ಹಾಗೆಯೇ ಸೀದಾ ಮುಂದೆ ಜೋರಾಗಿ ಓಡಿ ಗಿಡ ಮರಗಳ ಸಂದಿನಲ್ಲಿ ಮರೆಯಾಗಿ ಹೋಯಿತು. ಕೂಡಲೇ ನವಲೂ ಗೌಳಿ ಸುಮ್ಮನಿರಲು ನಮಗೆ ಸನ್ನೆ ಮಾಡಿದ.

ಅವನನ್ನು ಹುಲಿ ಮುರಿದದ್ದು ಇದೇ ಜಾಗದಲ್ಲಿ

‘ತಾಂಬಾ… ತಾಂಬಾ…! ಅಸಾ ಚಿಲ್ಲಾಽನಕಾ. ವಾಘ ಏತಲಾ…’ [ಹಾಗೆಲ್ಲ ಕೂಗ ಬೇಡಿ. ಹುಲಿ ಓಡಿ ಬಂದಾವು] ಎಂದೂ ಎಚ್ಚರಿಸಿದ. ನಮಗೆ ಇನ್ನೂ ಗಾಬರಿಯಾಯಿತು. ಹೌದು. ಈ ಸ್ಥಳದಲ್ಲಿ ವರ್ಷದ ಹಿಂದೆ ಹುಲಿಯೊಂದು ಚಾಂದೇವಾಡಿಯ ಒಬ್ಬ ಕಾಡು ಗೌಳಿಯನ್ನು ಮುರಿದು ತಿಂದ ಸುದ್ದಿಯನ್ನು ಆಫೀಸಿನವರು ನಮಗೂ ಹೇಳಿದ್ದರು. ಇವತ್ತು ನಾನು ಅದೇ ಜಾಗದಲ್ಲಿ ಬಂದು ನಿಂತಿದ್ದೆ.

pexels-photo-4001798
ಫೋಟೋ ಕೃಪೆ – Pexels.com

ಹುಲಿ ಅಂದರೆ ಕಾಡಿನಲ್ಲಿರುವ ಇನ್ನೊಂದು ದೇವರು. ಈ ದೇವರನ್ನು ಶಾಂತಗೊಳಿಸಲು ಗೌಳೀ ದೊಡ್ಡಿಯ ಜನ ಆಗಾಗ ಇಲ್ಲಿಗೆ ಬಂದು, ಹುಲಿಯು ಮನುಷ್ಯನ್ನು ತಿಂದ ಜಾಗದಲ್ಲಿ ಪೂಜೆ ಸಲ್ಲಿಸಿ ಹೋಗುತ್ತಾರಂತೆ. ಈ ದಾರಿಯಲ್ಲಿ ಯಾರೇ ಬಂದರೂ ಈ ಸ್ಥಳದಲ್ಲಿ ನಿಂತು ಗಿಡದ ಎಲೆ-ಸೊಪ್ಪು ಮುರಿದು ಹಾಕಿ ನಮಸ್ಕಾರ ಮಾಡಿ ಹೋಗುವುದು ವಾಡಿಕೆ ಯಾಗಿದೆ. ಬಂದವರೆಲ್ಲ ಎಲೆ ಮುರಿದು ಗುಡ್ಡೆಯ ಮೇಲೆ ಹಾಕಿ ಅಲ್ಲಿ ದೊಡ್ಡದೊಂದು ಎಲೆಯ ಗುಪ್ಪೆಯೇ ಆಗಿದೆ. ಇವತ್ತು ಅಕಸ್ಮಾತ್‌ ನಾವು ಅದೇ ಜಾಗಕ್ಕೆ ಬಂದ ಕಾರಣ ನವಲೂ ಗೌಳಿ ನಮಗೂ ಹಾಗೆ ಮಾಡಲು ಹೇಳಿದ. ನಾನು

ಮನಸ್ಸಿನಲ್ಲಿ ಕಾಳೀಕಾ ದೇವಿಯ ವಾಹನ ಹುಲಿಯನ್ನು ಸ್ಮರಿಸಿಕೊಂಡು ಗಿಡದ ಟೊಂಗೆಯೊಂದನ್ನು ಮುರಿದು ಗುಪ್ಪೆಯ ಮೇಲೆ ಹಾಕಿ ಕಣ್ಣು ಮುಚ್ಚಿ ನಮಸ್ಸಿನಲ್ಲಿಯೇ ನಮಸ್ಕಾರ ಹೇಳಿದೆ.

ಪರಸ್ಯಾನ ಮಾತುಗಳೇ ಸತ್ತುಹೋಗಿದ್ದವು. ಇಬ್ಬರಿಗೂ ಒಳಗೊಳಗೇ ಭಯ. ನಾನು ತಪ್ಪು ಮಾಡಿದೆನೇನೋ ಅನ್ನಿಸಿತು. ಹೀಗೆ ನಾವಷ್ಟೇ ಬರುವ ಬದಲು. ಒಟ್ಟಿಗೇ ಎಲ್ಲರನ್ನೂ ಕರೆದುಕೊಂಡು ಈ ಕಾಡಿನ ದಾರಿಗೆ ಬರಬೇಕಿತ್ತೆಂದು ಮತ್ತೆ ಅನ್ನಿಸದಿರಲಿಲ್ಲ. ಪರಿಸ್ಯಾ ಮತ್ತು ನಾನು ಭಯದಲ್ಲೇ ಮುಂದೆ ಸಾಗಿದೆವು. ನವಲೂಗೆ ಭಯವೆಂಬುದೇ ಇರಲಿಲ್ಲ. ಕಾಡಿನಲ್ಲಿಯೇ ಹುಟ್ಟಿ ಬೆಳೆದ ಅವನಿಗೆ ಇಡೀ ಕಾಡೇ ಅವನ ಮನೆಯಾಗಿ ಹೋಗಿತ್ತು.

ಅಬ್ಬಾ…! ಕರಿಯ ಬೆಟ್ಟದಂತೆ ಕಂಡ ಭಯಾನಕ ಕಾಡಾನೆ

ಅಷ್ಟರಲ್ಲಿ ಇದ್ದಕ್ಕಿದ್ದಂತೆ ಹಸಿರು ಮರಗಳ ಸಂದಿನಿಂದ ಟೊಂಗೆಗಳು ಅಲ್ಲಾಡಿದವು. ಅಲ್ಲಿ ಕೂತಿದ್ದ ಪಕ್ಷಿಗಳು ಪುರ್ರನೆ ಹಾರಿ ಹೋದವು. ನಾವು ಗಾಬರಿಗೊಂಡು ಕತ್ತೆತ್ತಿ ನೋಡಿದೆವು. ಅಬ್ಬಾ…! ಎದುರಿನ ಗಿಡದ ಪೊದರಿನ ಹಿಂದೆ ಎತ್ತರವಾದ ಮತ್ತು ಅಷ್ಟೇ ಭಯಾನಕವಾದ ಉದ್ದ ಕೋರೆಯ ಆನೆಯೊಂದು ನಮ್ಮನ್ನೇ ನೋಡುತ್ತ ನಿಂತಿತ್ತು. ನಮ್ಮನ್ನು ನೋಡಿದ್ದೇ ಸೊಂಡಿಲನ್ನು ಮೇಲೆತ್ತಿ ಒಮ್ಮೆ ಜೋರಾಗಿ ಘೀಳಿಟ್ಟಿತು. ಅದರ ಸದ್ದಿಗೆ ನಮ್ಮ ಎದೆ ಗಡಗಡ ಅಂದಿತು. ಆದರೆ ಈಗ ಧೈರ್ಯ ಕಳೆದುಕೊಳ್ಳುವ ಸಮಯವಾಗಿರಲಿಲ್ಲ. ನವಲೂ ಗೌಳಿ ಜೋರಾಗಿ ಕೂಗಿದ.

arunima

ಫೋಟೋ ಕೃಪೆ : IUCN

‘ಸಾಹೇಬ್‌ ಪುಡಚ್ಯಾ ಚಲ್‌ ನಕಾ…ಹಾಥೀ ಆಽಲಾ. ಹಟ್‌… ದೂರ್‌…! ಹಟ್‌’ [ಸಾಹೇಬ್ರೇ… ಮುಂದ ಹೋಗಬ್ಯಾಡ್ರಿ. ಆನೆ ಬಂದೈತಿ. ದೂರ ಸರೀರಿ]

ಎಂದು ಕೂಗಿದ. ನಾನು ಜೋರಾಗಿ ಪರಿಸ್ಯಾನಿಗೆ ಹೇಳಿದೆ.

‘ಪರಿಸ್ಯಾ… ಜಲ್ದೀ…ಯಾವುದಾದ್ರೂ ಗಿಡದ ಹಿಂದ ಮರೆಯಾಗಿ ನಿಲ್ಲೂ… ಆನೇ ಕಣ್ಣೀಗೆ ಕಾಣಿಸ್ಕೋಬೇಡ’ ಅಂದೆ. ಮತ್ತು ತಡಮಾಡದೆ ಮೂವರೂ ಒಂದೊಂದು ಮರದ ಹಿಂದೆ ಹೋಗಿ ಅವಿತುಕೊಂಡೆವು. ಮರದ ಹಿಂದೆ ನಿಂತರೆ ಆನೆ ತಕ್ಷಣ ದಾಳಿ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಆನೆ ಕಾಡಿನಲ್ಲಿ ಓಡಿದರೆ ಅದರ ವೇಗ ಕೇವಲ ಹತ್ತು ಕಿ.ಮೀ. ಮಾತ್ರ ಎಂದು ಕೇಳಿ ತಿಳಿದಿದ್ದೆ. ಹಾಗೊಮ್ಮೆ ಅದು ಓಡಿ ಬಂದರೆ ಗುಡ್ಡದ ಇಳಿಜಾರು ಪ್ರದೇಶದತ್ತ ನಾವು ಓಡಿ ಹೋಗಬೇಕು. ಇಳಿಜಾರಿನಲ್ಲಿ ಆನೆಗೆ ಓಡಲು ಆಗುವುದಿಲ್ಲ ಎಂದೂ ಗೊತ್ತಿತ್ತು.

ಈಗ ಕೆಂಪು ಕಣ್ಣಿನ, ಕಪ್ಪು ಮೈಯ ಪುಟ್ಟ ಪರ್ವತವೇ ಆಗಿದ್ದ ಆ ಗಜರಾಜ ಸುತ್ತಲೂ ಒಮ್ಮೆ ನೋಡಿತು. ಏನು ಅನಿಸಿತೋ. ಮತ್ತೊಮ್ಮೆ ಘೀಳಿಟ್ಟು ಅಲ್ಲಿಂದ ಹೊರಟು ಹೋಯಿತು. ನಿಟ್ಟುಸಿರು ಬಿಟ್ಟೆವು.

ತುಸು ಸಮಯದ ನಂತರ ಮೆಲ್ಲಗೆ ಮೂರೂ ಜನ ನಿರಾಳವಾಗಿ ಈಚೆ ಬಂದು ಸೇರಿಕೊಂಡೆವು. ಮತ್ತು ಚಾಂದೇವಾಡಿಯ ಕಾಡು ದಾರಿಯತ್ತ ಹೊರಳಿದೆವು. ನಾನು ಕಂಪಾಸಿನಲ್ಲಿ ದಿಕ್ಕನ್ನು ಗುರುತಿಸುತ್ತ ನಡೆದೆ.

ಹಸಿರು ತಲೆಯ ಕಡ್ಡಿಯಂಥ ಚಿಣಗೀ ಹಾವು

ಸುತ್ತಲೂ ದಟ್ಟ ಹಸಿರು. ಗಿಡ ಬಳ್ಳಿಗಳು ಬಲೆಯಂತೆ ತೊಡಕು ಹಾಕಿಕೊಂಡಿದ್ದವು. ನಡೆದು ಹೋಗುತ್ತಿದ್ದ ನಮ್ಮ ಮುಂದೆ ಮತ್ತೊಂದು ಅವಘಡ ನಡೆಯಿತು. ಇವತ್ತು ಟೆಂಟಿನಿಂದ ಹೊರಟ ಸಮಯ ಏನಿತ್ತೋ. ಕಾಡು ಪ್ರಾಣಿಗಳ ದರ್ಶನ ಆಗುವುದಕ್ಕೂ ಪುಣ್ಯ ಮಾಡಿರಬೇಕು ಸಾರ್‌ ಎಂದ ಪರಿಸ್ಯಾ. ನಮಕ್ಕಿಂತ ಈ ಗೌಳಿಗೇ ಪುಣ್ಯ ಹೆಚ್ಚಿರಬೇಕು. ಯಾವ ಪುಣ್ಯ ಆದರೇನು. ಬದುಕು ಬದುಕೇ.

arunima

ಫೋಟೋ ಕೃಪೆ : Flickr

ಈ ಕಾಡಿನಲ್ಲಿ ಅವಘಡಗಳ ಸರಮಾಲೆ ಯಾವಾಗಲೂ ಇದ್ದದ್ದೇ. ಕಾಡುವಾಸಿಗಳಿಗೆ ನಿತ್ಯ ಹೋರಾಟವೇ ಅವರ ಬದುಕಾಗಿರುತ್ತದೆ. ತಲೆ ಬೀಳುವ ತನಕ ಅವರು ಹೋರಾಡುತ್ತಲೇ ಇರುತ್ತಾರೆ. ಅವರು ಹುಟ್ಟಿದ್ದೂ ಸುದ್ದಿಯಲ್ಲ. ಸತ್ತದ್ದೂ ಸುದ್ದಿಯಲ್ಲ. ಬದುಕಿದ್ದೂ ಸುದ್ದಿಯಾಗುವುದಿಲ್ಲ. ಎಷ್ಟೋ ಸಲ ಅವರಿಗೆ ಹೊರಗೊಂದು ಜಗತ್ತಿದೆ ಎಂಬ ್ರಿವೂ ಬರುವುದಿಲ್ಲ.

ನನ್ನ ಬಲಬದಿಯ ದೊಡ್ಡ ಹಸಿರು ಎಲೆಯ ಮೇಲೆ ಅದೇ ಬಣ್ಣದ ಅಚ್ಚ ಹಸಿರಿನ ಕಡ್ಡಿಯಂಥ ಮಾರುದ್ದ ಹಾವು ಕಂಡಿತು. ನಾನು ಇಬ್ಬರನ್ನೂ ಎಚ್ಚರಿಸಿ ನೋಡುತ್ತ ನಿಂತೆ. ನೋಡಲು ತುಂಬ ಚೆಂದವಿತ್ತು. ಸೀರೆಗೆ ಹಚ್ಚಿದ ರೇಶ್ಮೆ ದಡಿಯ ಹಾಗೆ. ಆದರೆ ಅದು ನಮ್ಮನ್ನು ಕಂಡದ್ದೇ ತಡ. ಅಲ್ಲಿ ನಿಲ್ಲಲಿಲ್ಲ. ನಾವು ನೋಡುತ್ತಿದ್ದ ಹಾಗೆ ನಮ್ಮ ಕಣ್ಣ ಮುಂದೆಯೇ ವೇಗವಾಗಿ ಸರಸರ ಎಂದು ಹರಿದು ಹೋಯಿತು.

ನನಗೆ ಕಾಡಿನಲ್ಲಿ ಹಾವಿನ ಭಯವಿರಲಿಲ್ಲ. ಕಾರಣ ಎಲ್ಲ ಹಾವುಗಳಲ್ಲಿಯೂ ವಿಷ ಇರುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಹಾವು ಅಂದರೆ ಕೇವಲ ವಿಷಜಂತುಗಳಲ್ಲ. ಅದು ಕಾಡಿನಲ್ಲಿ ಓಡಾಡುವವರಿಗೆ ಚನ್ನಾಗಿ ಗೊತ್ತು.

ಹೆಬ್ಬಾವು ನುಂಗಿ ಸಾಯಿಸುತ್ತದೆ. ನಾಗರಹಾವು ತನ್ನ ವಿಷದಿಂದ ಸಾಯಿಸುತ್ತದೆ. ಉರಿಮಂಡಲ ಹಾವು ಕಚ್ಚಿದರೆ ವಿಷ ನೆತ್ತಿಗೇ ಏರುತ್ತದೆ. ಕೊಳಕುಮಂಡಲ ಹಾವು ಇನ್ನೂ ಅಪಾಯಕಾರಿ. ಅದು ಕಚ್ಚಿದರೆ ವಿಷ ಏರಿದಂತೆಲ್ಲ ದೇಹ ಕೊಳೆಯುತ್ತ ಹೋಗುತ್ತದೆ. ಆದರೆ ಈ ಹಸಿರು ಹಾವು ಕಚ್ಚಿದರೆ ಏನೂ ಆಗುವುದಿಲ್ಲ ಎಂದು ನನಗೆ ಗೊತ್ತಿತ್ತು. ಅಷ್ಟೇ ಅಲ್ಲ. ಕಾಡಿನಲ್ಲಿಯ ಯಾವ ಹಾವುಗಳೂ ಬಯಲು ಸೀಮೆಯ ಹಾವುಗಳಂತೆ ಚುರುಕಾಗಿರುವುದಿಲ್ಲ.

ಅದೇ ಮಾತನ್ನು ಇಬ್ಬರಿಗೂ ಹೇಳುತ್ತ ನಡೆದೆ. ಮತ್ತು ಅವಸರದಿಂದ ಚಾಂದೇವಾಡಿಯ ದಾರಿ ತುಳಿದೆವು.


ಮುಂದಿನ ಸಂಚಿಕೆಯಲ್ಲಿ-

ಚಾಂದೇವಾಡಿಯಲ್ಲಿ ಮರಳು ದಿಬ್ಬದ ಮೇಲೆ ನಮ್ಮ ಹೆಜ್ಜೆಯ ಗುರುತು. ನದಿಯ ನೀರಿನಲ್ಲಿ ಅರೆ ಬೆತ್ತಲೆಯಲ್ಲಿ ಸ್ನಾನ ಮಾಡುತ್ತಿದ್ದ ಕಾಡುವಾಸಿ ಹೆಂಗಸರು. ಕ್ಯಾಸ್ಟಲ್‌ ರಾಕ್‌ನಲ್ಲಿ ಚರ್ಚು ಹಬ್ಬವೊಂದರಲ್ಲಿ ಮೈಮರೆತವರ ಜೊತೆಯಲ್ಲಿ ಒಂದು ದಿನ. ಚಾಂದೇವಾಡಿಯ ಮರಳು ದಿಬ್ಬದ ಸರ್ವೇ ಮಾಡಿದ್ದು. ನಿಮಗೆ ಗೊತ್ತಿರದ ಕಾಡಿನ ಕತೆಗಳು. ಓದಿರಿ


  •  ಹೂಲಿ ಶೇಖರ್‌ ( ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ನಾಟಕಕಾರ-ಚಿತ್ರಸಂಭಾಷಣೆಕಾರ)

bf2fb3_58479f997cba4852bd3d7a65d4c785a4~mv2.png

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW