ಯಾವುದೇ ವಿವಾದ ಸೃಷ್ಟಿಸದೆ, ಬದುಕನ್ನು ಹೇಗೆ ನೋಡಿದರೆ ಚೆನ್ನ ಎಂದು ಮಾರ್ಗದರ್ಶನ ಮಾಡುವ ‘ಕಂಬ್ಳಿಹುಳ’ ಸಿನಿಮಾ ಕುರಿತು ಲೇಖಕ ದಿಗಂತ್ ಬಿಂಬೈಲ್ ಅವರು ಬರೆದ ಒಂದು ಸಿನಿಮಾ ಕತೆಯನ್ನು ಮುಂದೆ ಓದಿ…
ಚಿತ್ರ : ‘ಕಂಬ್ಳಿಹುಳ’
ನಿರ್ದೇಶಕರು : ನವನ್ ಶ್ರೀನಿವಾಸ್
ನಿರ್ಮಾಪಕರು : ನವೀನ್ -ಪುನೀತ್ – ಗುರು- ವಿಜಯ್
ನಿರ್ಮಾಣ :ಗ್ರೇಯ್ ಸ್ಕೇರ್ ಸ್ಟುಡಿಯೊಸ್
ಸಿನಿಮಾ ಪ್ರಾರಂಭವಾಗುತ್ತಿದ್ದಂತೆ “ಸೋವಿರ ಸಂಗಯ್ಯ… ಸೋವಿರ ಲಿಂಗಯ್ಯ..” ಎನ್ನುವ ಅಂಟಿಗೆ ಪಂಟಿಗೆಯ ಮಲೆನೆಲದ ದನಿ ತಣ್ಣಗೆ ರೋಮಾಂಚನಗೊಳಿಸಿ ಒಳಗೆಳೆದುಕೊಳ್ಳುವ ಭಾವವಿದೆಯಲ್ಲ ಅದೊಂದು ಅವ್ಯಕ್ತ ಸಂಭ್ರಮ. ನಾನೇ ಸ್ನೇಹಿತನ ಜೊತೆ ಕುಳಿತು ಹರಟೆ ಹೊಡೆದಂತೆ, ನನ್ನ ಮನೆಯವರ ನೋವನ್ನೇ ಅರ್ಥೈಸಿಕೊಳ್ಳದೆ ಹಠ ಹಿಡಿದಂತೆ, ಚೆಂದದ ಹುಡುಗಿಗೆ ಮುದ್ದಾಗಿ ರೇಗಿಸಿದಂತೆಲ್ಲ ಆವರಿಸಿಕೊಳ್ಳುತ್ತ, ಸಂತೆಯಲಿ ಮಗು ಕಳೆದುಹೋಗದಂತೆ ಎಚ್ಚರಿಕೆಯಿಂದ ಕರೆದೊಯ್ಯುವ ತಾಯಿಯಂತೆ ನಿರ್ದೇಶಕರು ಪ್ರೇಕ್ಷಕನನ್ನ ಅತ್ತಿತ್ತ ಕದಲದಂತೆ ಕಟ್ಟಿಕೊಟ್ಟಿದ್ದು ಹೊಸ ಪ್ರಯತ್ನವೆಂಬುದನ್ನ ತಲೆಯಿಂದ ಮರೆಸಿ ಬಿಡುತ್ತದೆ.
ಚಿತ್ರದ ಹೀರೋ ನಟರಾಜನೆಂಬ ಪಾತ್ರ ನಾನೆ ಮಾಡಿದ್ದು, ತಾನು ಕಣ್ಣೀರು ಹಾಕುವುದರೊಂದಿಗೆ ಸಿನಿಮಾ ನೋಡುವವರ ಕಣ್ತುದಿ ನೀರು ತರಿಸಿದ ಆ ನಾಗೇಶನ ಪಾತ್ರವೂ ನಾನೇ ಮಾಡಿದ್ದು, ಹೊಟ್ಟೆ ಒತ್ತಿ ಹಿಡಿದುಕೊಂಡು ನಗುವಂತೆ ಮಾಡಿದ ಚೊಂಗಿಯ ಪಾತ್ರವೂ ನಾನೇ ಮಾಡಿದ್ದು. ಮೂರು ಪಾತ್ರ ಅದ್ಹೇಗೆ ಸಾಧ್ಯ ಎನ್ನಬಹುದು. ಮೂರಲ್ಲ ಅಲ್ಲಿರುವ ಬಹುತೇಕ ಪಾತ್ರಗಳು ನಾನೆ! ಹೌದು ಆ ಪಾತ್ರಗಳೇ ಹಾಗೆ ಪ್ರೇಕ್ಷಕನಿಗೆ ಇದು ನಾನೆ, ಇದು ನನ್ನ ಬದುಕಿನ ಭಾಗವೆ ಎನ್ನುವಷ್ಟು ಆಪ್ತವೆನ್ನಿಸಿ ಒಳಗೆಳೆದುಕೊಳ್ಳುತ್ತವೆ. ನಮ್ಮ ನೆಲದಲ್ಲಿ ನಮ್ಮವರೊಂದಿಗೆ ಯಾವ ಆಡಂಬರವಿಲ್ಲದೆ, ವೈಭವೀಕರಣವಿಲ್ಲದೆ, ತೋರುಗಾಣಿಕೆಯಿಲ್ಲದೆ ಓಡಾಡಿದ ಕುಣಿದಾಡಿದ ಅತ್ಯಾಪ್ತ ಅನುಭವದ ಬುತ್ತಿ ಕಂಬ್ಳಿಹುಳ.
“ಜಾರಿ ಬಿದ್ದರೂ ಏಕೀ ನಗು…” ಎಂದು ಕಚಗುಳಿ ಇಟ್ಟು, ಅದಾವುದೋ ಸಾಲುಗಳ ಹೇಳಲಾಗದೆ ತಡವರಿಸಿದ ಚೊಂಗಿ ಮನಸಾರೆ ನಗಿಸಿ, “ನಿನ್ನ ಮಡಿಲಲಿ ನಾನು ಬೆಚ್ಚಗೆ ಮಲಗಿರಲು, ಸೂರ್ಯ ಹುಟ್ಟೋದೆ ಬೇಡ ಸಾಕೆನಿಸಿತ್ತು ಮಡಿಲು…” ನಮನ್ ಕೊಪ್ಪ ಸಾಹಿತ್ಯಕ್ಕೆ ಜೀವ ತುಂಬಿದ ದನಿಯಿಂದ ಮನತುಂಬಿ ಕಣ್ಣೀರು ಹಾಕಿಸಿ, ಕ್ಷಣಕಾಲ ನಮ್ಮ ಬದುಕನ್ನೇ ನಮ್ಮೆದುರು ನಿಲ್ಲಿಸಿ ಬಿಟ್ಟ ಆ ಘಳಿಗೆ ಅದೊಂದು ಅಚ್ಚರಿ ಘಟಿಸಿದಂತೆ.
ಪ್ರೀತಿಸಿದವನಿಗೆ ತುತ್ತಿನ ಬೆಲೆ ಅರ್ಥವಾಗುವ, ತಾಯಿಯೊಂದಿಗಿನ ಮುನಿಸಿಗೆ ಉತ್ತರ ಸಿಗುವ, ಗೆಳೆಯನ ಬೆಲೆ ಇನ್ನಷ್ಟು ತೀವ್ರವಾಗಿ ಎದೆಗಿಳಿದು ಪಕ್ಕದಲ್ಲಿ ಕುಳಿತ ಗೆಳೆಯನ ಕೈ ಗಟ್ಟಿ ಹಿಡಿದು ಕೊಳ್ಳಬೇಕೆನಿಸುವ, ಆ ನಾಗೇಶನ ಮುಖದ ಭಾವ ನೋಡಿ ಎದ್ದು ತಬ್ಬಿ ಸಂತೈಸಬೇಕೆನ್ನುವ ಆ ಕ್ಷಣ ಕಂಬಳಿಹುಳ ಚಿಟ್ಟೆಯಾದಂತೆ. ಸಿನಿಮಾದಿಂದ ನಿಮಗೇನು ಬೇಕೋ, ನೀವೇನು ಬಯಸಿದ್ದಿರೋ ಅದೆಲ್ಲವನ್ನ ನಿಮ್ಮ ಮನದ ಜೇಬಿನೊಳಗೆ ತುಂಬಿ ಕಳಿಸಿದಂತೆನಿಸುವುದು ಕಂಬ್ಳಿಹುಳದ ಗಟ್ಟಿತನ.
ಏನೂ ತಪ್ಪಿಲ್ಲವೇನು ಕೇಳುತ್ತಿರ? ತಪ್ಪಿದೆ ಎಷ್ಟರ ಮಟ್ಟಿಗೆಂದರೆ ಬೆಲ್ಲದುಂಡೆಯ ಮೇಲೆ ನೊಣವೊಂದು ಕೂತೆದ್ದು ಹೋದಂತೆ. ಅದು ತಪ್ಪೆನಿಸುವುದು ಇಲ್ಲ. ಆ ಸನ್ನಿವೇಶದ ಅವಶ್ಯಕತೆ ಇತ್ತೆಂದು ಎನಿಸುವುದೂ ಇಲ್ಲ. ಆ ತಪ್ಪನ್ನ ನೊಣ ಓಡಿಸಿದಷ್ಟೇ ಸುಲಭವಾಗಿ ಬದಿಸರಿಸಿ ಇಡೀ ಬೆಲ್ಲದುಂಡೆಯನ್ನ ಸವಿದು ಬಿಡಬಹುದು.
ಇಂತಹ ನೆಲದ ಕತೆ ಹೇಳುವ, ನಮ್ಮ ಜೀವನ ಎದುರಿಡುವ, ಬದುಕು ಹೀಗೆ ನೋಡಿದರೆ ಚೆನ್ನ ಎಂದು ಮಾರ್ಗದರ್ಶನ ಮಾಡುವ, ಯಾವುದೇ ವಿವಾದ ಸೃಷ್ಟಿಸದೆಯೂ ಗೆಲ್ಲಬಹುದೆಂದು ತೋರಿಸಿದಂತಹ ಸಿನಿಮಾ ಕೊಟ್ಟ, ಸಿನಿಮಾ ಎಂದರೆ ಅದಮ್ಯ ಪ್ರೀತಿ ಎದೆಯೊಳಗಿರುವ, ಸಿನಿಮಾಗಾಗಿ ತನ್ನ ಬದುಕನ್ನೇ ತೇದು ಒಪ್ಪಿಸುತ್ತಿರುವ ಶುಭ್ರ ಮನಸ್ಸಿನ ಮುಗ್ದ ನಗುವಿನ ನವನ್ ಶ್ರೀನಿವಾಸ್ ರಂತಹ ತಂಡವನ್ನ ಗೆಲ್ಲಿಸಬೇಕು ಆ ಮುಖೇನ ನಾವೂ ಗೆದ್ದೆವೆಂದು ಕುಣಿದು ಬಿಡಬೇಕು ಹೇಗೆಂದರೆ ಕಂಬ್ಳಿಹುಳ ಚಿಟ್ಟೆಯಾಗಿ ಹಾರುವಷ್ಟೇ ಸಂಭ್ರಮ ಸಡಗರದಲ್ಲಿ.
- ದಿಗಂತ್ ಬಿಂಬೈಲ್