‘ಕಾಂತಾರ’ ಸಿನಿಮಾದ ಕುರಿತು – ರಂಜಿತ್ ಕವಲಪಾರ

‘ಕಾಂತಾರ’ ಸಿನಿಮಾ ಎಲ್ಲ ಚಿತ್ರಮಂದಿರಗಳಲ್ಲಿ ಭರ್ತಿಯಾಗಿದ್ದಷ್ಟೇ ಅಲ್ಲ, ಬಾಕ್ಸ್ ಆಫೀಸ್ ನಲ್ಲೂ ಕೊಳ್ಳೆಯೊಡೆಯಿತು. ಸಿನಿಮಾದ ಬಗ್ಗೆ ಎಲ್ಲರೂ ಒಂದೊಂದು ಬರಹ ಬರೆದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಈಗ ಅದೇ ಕಾಂತಾರದ ಕುರಿತು ಲೇಖಕ ರಂಜಿತ್ ಕವಲಪಾರ ಅವರು ಬರೆದ ಲೇಖನವನ್ನು ತಪ್ಪದೆ ಓದಿ…

ಚಿತ್ರ ಮುಗಿದ ಮೇಲೆ ಒಂದು ಆಳವಾದ ವಿಷಾದವನ್ನು ಉಳಿಸಿಬಿಡುತ್ತದೆ. ಚಿತ್ರದಲ್ಲಿ ಮೋಹನ್ ಲಾಲ್ ಕಣ್ಣುಗಳಿಂದ ಕಾಡಿಗೆಯ ಬಣ್ಣ ಮರೆಯಾಗುವುದೇ ಇಲ್ಲ. ಅವನು ಹಾಕಿದ ಹಲವು ವೇಷಗಳ ಉಳಿಕೆಯಂತೆ ಅದು ಅವನ ಕಣ್ಣುಗಳಿಗೆ ಒಂದು ಪ್ರೇಂ ಕಟ್ಟಿಕೊಡುತ್ತದೆ. ಆ ಪ್ರೇಂ ಒಳಗಡೆ ಒಂದೊಂದು ಭಾವವೂ ಚೌಕಟ್ಟು ಹಾಕಿದಂತೆ ಕಾಣುತ್ತದೆ. ಈ ಚಿತ್ರವನ್ನು ಅಷ್ಟು ಗಾಢವಾಗಿಸುವುದು ಏನು ಎಂದು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಕಥೆಯೋ, ಚಿತ್ರಕಥೆಯೋ, ನಿರ್ದೆಶನವೋ, ನಟನೆಯೋ, ಸಂಗೀತವೋ, ನೃತ್ಯವೋ ಅಥವಾ ಇವೆಲ್ಲವೂ ಗೆದ್ದಾಗ ಇಂತಹ ಚಿತ್ರ ಮೂಡುತ್ತದೆಯೋ ಗೊತ್ತಿಲ್ಲ.

******

ಈ ಮೇಲಿನ ಸಾಲುಗಳನ್ನು ಬರೆದಿರುವುದು ಕನ್ನಡದ ಲೇಖಕಿಸಂಧ್ಯಾ ರಾಣಿ ಅವರು. ಅಸಲಿಗೆ ಇದು ಅವರು ಬರೆದ ಲೇಖನದ ಕೊನೆಯ ಪ್ಯಾರಾ. ಇಲ್ಲಿ ನಾನು ಹೇಳಲು ಹೊರಟಿರುವುದು ‘ಕಾಂತಾರ’ ಸಿನಿಮಾದ ಕುರಿತು. ಅದಕ್ಕೂ ಮೊದಲು ಇದ್ಯಾಕೇ ಹೇಳುತ್ತಿದ್ದೇನೆ ಎಂದು ನಿಮಗೆ ಈ ಓದಿನ ಕೊನೆಯೊಳಗೆ ಅರ್ಥವಾಗುವಂತೆ ಬರೆಯಲು ಪ್ರಯತ್ನಿಸುತ್ತೇನೆ.

‘ವಾನಪ್ರಸ್ಥಂ’ ಎನ್ನುವ ಶಾಜಿ ಕರುಣ್ ನಿರ್ದೇಶನ ಮಾಡಿರುವ ಮಲಯಾಳಂ ಸಿನಿಮಾ ತೆರೆಕಂಡು ಹಲವು ವರ್ಷಗಳು ಸಂದಿವೆ. ನಾನು ನೋಡಿ ಒಂದು ವರ್ಷಗಳಾಗಿಬೇಕು. ನನಗೆ ನಟನೆ, ಸಿನಿಮಾದ ಆಶಯ, ಅದರ ಆಳ, ಇತ್ಯಾದಿ ವಿಚಾರಗಳು ಇತ್ತೀಚಿಗಷ್ಟೇ ಕೊಂಚ ಕೊಂಚ ಅರ್ಥವಾಗಲು ತೊಡಗಿದೆ. ಸಿನಿಮಾವನ್ನು ಸೀರೆ ನೈದಂತೆ ನೈದಿರುತ್ತಾರೆ. ಅದರ ಒಂದೊಂದು ಎಳೆಗೂ ಅದರದೇ ಆದ ಮಹತ್ವವನ್ನು ನಿರ್ದೇಶಕ ತುಂಬಿರುತ್ತಾನೆ. ಒಂದು ಎಳೆ ತಪ್ಪಿದರೂ ಸೀರೆ ಅಪೂರ್ಣ. ಸಿನಿಮಾ ಕೂಡ.
‘ವಾನಪ್ರಸ್ಥಂ’ ಸಿನಿಮಾ ನೋಡಿದ ತಕ್ಷಣ ನಾನು ಅದರ ಲಿಂಕ್ ಅನ್ನು ಸಂಧ್ಯಾ ಅವರ ವಾಟ್ಸ್ ಆ್ಯಪ್‌ಗೆ ಹಾಕಿ “ಇದನ್ನು ನೋಡಿ ಅಂದೆ”. ಅವರು ಅದಾಗಲೇ ನೋಡಿ ಆ ಕುರಿತು ಕಾಂಜಿಪುರಂ ಸೀರೆ ನೈದಷ್ಟೇ ಅಂದವಾಗಿ ಬರೆದಿಟ್ಟಿದ್ದರು. ಆ ಲೇಖನ ನಿಮಗೆ ಅವರ ‘ಮಾಯಾಲೋಕ’ ಪುಸ್ತಕದ 175ನೇ ಪುಟದಲ್ಲಿ ಪೂರ್ತಿಯಾಗಿ ಸಿಕ್ಕುತ್ತದೆ. ಈಗಷ್ಟೇ ಅದನ್ನು ನಾನು ಮತ್ತೊಮ್ಮೆ ಓದಿ ಇದನ್ನು ಬರೆಯಲು ಕುಳಿತಿದ್ದೇನೆ.

ಫೋಟೋ ಕೃಪೆ : Public TV

ನಿನ್ನೆ ‘ಕಾಂತಾರ’ ವನ್ನು ಸಂಜೆಯ ಫಸ್ಟ್ ಶೋ ಟಿಕೇಟ್ ಸಿಗದ ಕಾರಣ, ಏಳುಗಂಟೆಗೆ ಟಿಕೇಟ್‌ಗಾಗಿ ಸಾಲಿನಲ್ಲಿ ನಿಂತು, ಹೇಗೋ ಟಿಕೇಟ್ ಗಿಟ್ಟಿಸಿಕೊಂಡು, ಒಂಭತ್ತು ಕಾಲಿನ ಸೆಕೆಂಡ್ ಶೋವಿನಲ್ಲಿ ನೋಡಿದೆ.

ಸಿನಿಮಾ ಕ್ಲೈಮ್ಯಾಕ್ಸ್ ಮುಗಿಯುತ್ತಿದ್ದಂತೆ ನನಗೆ ಮೋಹನ್ ಲಾಲ್ ಹಾಗೂ ವಾನಪ್ರಸ್ಥಂ ಸಿನಿಮಾ ಬಹುವಾಗಿ ನೆನಪಾಯಿತು. ಆ ಸಿನಿಮಾಗೂ ಈ ಸಿನಿಮಾಗೂ ಹೋಲಿಕೆ ಏನೂ ಇಲ್ಲ. ಕಥಕ್ಕಳಿ ಪಾತ್ರಧಾರಿಯನ್ನು ಮುಖ್ಯಪಾತ್ರವನ್ನಿಟ್ಟುಕೊಂಡು ಹೆಣೆದಿರುವ ದುರಂತ ಕಥೆಯ ಸಿನಿಮಾ ‘ವಾನಪ್ರಸ್ಥಂ’ ಸಿನಿಮಾದಲ್ಲೂ ಮುಖಕ್ಕೆ ಬಣ್ಣ ಇರುವುದರಿಂದ ಹಾಗೂ ‘ಕಾಂತಾರದಲ್ಲೂ’ ಮುಖಕ್ಕೆ ಬಣ್ಣ ಬಳಿದ ಪಾತ್ರಧಾರಿಯೇ ಮುಖ್ಯ ಕಥಾ ಪಾತ್ರವಾಗಿರುವುದರಿಂದ ನನಗೆ ಹಾಗೆ ಅನ್ನಿಸಿರುವ ಸಾಧ್ಯತೆ ಉಂಟು.

ಸಂಧ್ಯಾರಾಣಿ ಅವರ ಮೇಲಿನ ಸಾಲುಗಳನ್ನು ನೀವು ಮೊದಲೇ ಓದಿದ್ದೀರಿ.‌ ಮೀಸೆ ಇಲ್ಲದ ಕಣ್ಣಿಗೆ ಕಾಡಿಗೆ ಬಳಿದ, ಮುಖದ ಸ್ನಾಯುಗಳನ್ನು ಕುಣಿಸುವ, ಮುದ್ರೆಗಳಲ್ಲಿ ಮಾತನಾಡುವ, ಕಣ್ಣಿನಲ್ಲೇ, ಮೌನದಲ್ಲೇ ಅಭಿನಯಿಸುವ ಮೋಹನ್ ಲಾಲ್ ಆ ಸಿನಿಮಾದ ಮೂಲಕ ನನ್ನ ಮನಸ್ಸಿನಾಳಕ್ಕೆ ಇಳಿದವರು.

ಕಾಂತಾರದ ಕುರಿತು ‘ಕನ್ನಡ ಪ್ರಭ’ ತಂಡ ಆರಂಭದಲ್ಲಿ ಕೊಟ್ಟ ಫಸ್ಟ್ ಕ್ಲಾಸ್ ಸರ್ಟಿಫಿಕೇಟ್ ಒಂದು ಟ್ರೆಂಡ್ ಆಗಿ ಮಾರ್ಪಾಟ್ಟಾಗಿ ಈಗ ಸಿನಿಮಾದ ಕುರಿತು ಮುಗಿಬಿದ್ದು ಅಭಿಪ್ರಾಯ ಬರೆಯುವ ಹಂತಕ್ಕೆ ಬಂದು ನಿಂತಿದೆ. ಇಲ್ಲಿ ಸಿನಿಮಾದ ಕುರಿತು ಈಗಾಗಲೇ ಹಲವರು ಸಿಕ್ಕಾಪಟ್ಟೆ ಆಯಾಮದಲ್ಲಿ ಬರೆದಿರುವುದರಿಂದ ನಿಮಗೆ ಅದೇ ಅಭಿಪ್ರಾಯವನ್ನು ಮತ್ತೇ ಮತ್ತೇ ಹೇಳಿ ನಾನು ನಿರಾಸೆ ಮಾಡಲಾರೆ.

ಫೋಟೋ ಕೃಪೆ : News 18 kannada

 

ಈ ಸಿನಿಮಾದಿಂದ ನಿರ್ಮಾಪಕರಿಗೆ ಎಷ್ಟು ಲಾಭವಾಗಿದೆಯೋ ಅಷ್ಟು ಅಲ್ಲದಿದ್ದರೂ ಒಂದಿಷ್ಟು ಲಾಭ ಮುಂಬರುವ ದಿನಮಾನಗಳಲ್ಲಿ ಕೋಲಕಟ್ಟುವ ಬಡಪಾಯಿ ಕಲಾವಿದರಿಗೆ ಆಗುತ್ತದೆ ಎಂದು ನಾನು ನಂಬುತ್ತೇನೆ.

ಮಡಿಕೇರಿಗೂ ದಕ್ಷಿಣ ಕನ್ನಡಕ್ಕೂ ಅಷ್ಟೇನೂ ದೂರ ಇಲ್ಲದಿರುವ ಕಾರಣ ಅಲ್ಲಿನ ಆಚಾರ ವಿಚಾರಗಳು ಕೊಡಗಿನವರಿಗೂ ಚಿರಪರಿಚಿತ, ಕೊಡಗು ಜಿಲ್ಲೆ ಕೇರಳಕ್ಕೂ ಹತ್ತಿರ ಇರುವುದರಿಂದ ನಮಗೆ ಪೊನ್ನು ಮುತ್ತಪ್ಪನ ಸೇಂದಿ ಹಾಗೂ ಒಣಗಿದ ಮೀನಿನ ಪ್ರಸಾದದ ರುಚಿಯೂ ಚೆನ್ನಾಗಿ ತಿಳಿದಿರುತ್ತದೆ.

ನಾನು ಬೆಳೆದ ಪ್ರದೇಶದ ಕುರಿತು ಹೇಳುತ್ತೇನೆ. ಮಡಿಕೇರಿಯ ಹೊರವಲಯದಲ್ಲಿ ಒಂದಿಷ್ಟು ಮುಸಲ್ಮಾರು, ತುಳು ಪೂಜಾರಿಗಳು, ಮೊಗೆರರು, ಮಲಯಾಳಿಗಳು, ಕ್ರಿಶ್ಚಿಯನ್‌ನರು ಹಾಗೂ ತಮಿಳರು ವಾಸಿಸುವ ಸಣ್ಣ ಗ್ರಾಮದ ಸೆರಗಿನಲ್ಲಿ ನನ್ನ ಬಾಲ್ಯ ಹಾಗೂ ಪ್ರೌಡ ವಯಸ್ಸನ್ನು ಕಳೆದಿದ್ದೇನೆ. ಹಾಗಾಗಿ ನನಗೆ ಈ ಗುಳಿಗಾ, ಪಂಜುರ್ಲಿ, ಕೊರಗಜ್ಜನ ಪರಿಚಯ ಮೊದಲಿನಿಂದಲೂ ಉಂಟು.

ನಮ್ಮ ಮನೆಯಬಳಿಯಿದ್ದ ಸುಳ್ಯ ಸೀಮೆಯ ನೆಂಟರಿಷ್ಟರನ್ನು ಹೊಂದಿದ್ದ ಗೆಳೆಯರೊಂದಿಗೆ ನನಗೆ ಒಡನಾಡ ಹೆಚ್ಚಿದ್ದ ಕಾರಣ ಸುಳ್ಯದ ಅರಂತೋಡಿನಲ್ಲಿ ಭೂತಕೋಲ ಇದ್ದರೆ. ನಾನು ಅವರೊಂದಿಗೆ ಹೋಗುತ್ತಿದ್ದೆ. ರಾತ್ರಿ ನಿದ್ದೆಗೆಡಲು ಕಷ್ಟ ಆಗಬಾರದು ಎನ್ನುವ ನಿಟ್ಟಿನಲ್ಲಿ ಮೊದಲೇ ನಾನು ಸ್ಪ್ರೈಟ್ ಬಾಟಲಿಗೆ ಓಡ್ಕ ರೆಡಿ ಮಿಕ್ಸ್ ಮಾಡಿ ಇಟ್ಟುಕೊಳ್ಳುತ್ತಿದ್ದೆ. ನಾನು ಅಲ್ಲೊಂದು ಪ್ಲಾನ್ ಕಂಡುಕೊಂಡಿದ್ದೆ. ಭೂತಕೋಲಕ್ಕೆ ಬಡಿಯುವ ವಾದ್ಯ ವಾಚಕರನ್ನು ಬಹುಬೇಗನೇ ಫ್ರೇಂಡ್ ಮಾಡಿಕೊಂಡು, ಅವರಿಗೆ ಬಡಿಯಲು ಉತ್ಸಾಹ ಸಿಗಲೆಂದು ಇಟ್ಟುಕೊಂಡಿರುತ್ತಿದ್ದ ಗೇರುಹಣ್ಣಿನ ರುಚಿಯಾದ ಜ್ಯೂಸಿಗೆ ನಾನು ಓಡ್ಕಾವನ್ನು ಎಕ್ಸ್‌ಚೇಂಜ್ ಮಾಡಿ ಕೊಳ್ಳುತ್ತಿದ್ದೆ. ದಾಹ ಆದಾಗಲೆಲ್ಲಾ ಒಂದೊಂದು ಸಿಪ್ ಕುಡಿಯುತ್ತಾ ಬೆಳಗಿನ ಜಾವದವರೆಗೂ ನಾನು ಕೋಲವನ್ನು ಪೂರ್ತಿಯಾಗಿ ನೋಡುತ್ತಿದ್ದೆ.

ಫೋಟೋ ಕೃಪೆ : chitraloka.com

ನನಗೆ ವೇಷಧಾರಿಯ ಎನರ್ಜಿಯ ಕುರಿತು ಆಶ್ಚರ್ಯ ಉಂಟಾಗುತ್ತದೆ. ಆ ಆವೇಶದಲ್ಲಿ ನಾವು ಕುಣಿದರೆ ಬಹುಶಃ ಸತ್ತೇ ಹೋಗಬಹುದು ಅಂತಲೂ ಅನಿಸುತ್ತಿರುತ್ತದೆ. ವೇಷಧಾರಿ ತಲೆಯ ಮೇಲೆ ಕೈ ಇಟ್ಟಾಗ ಮನೆಯವರಿಗೂ ದರ್ಶನ ಬರುವುದು ನನಗೆ ಇನ್ನೂ ಆಶ್ಚರ್ಯ ಮೂಡುತ್ತಿದ್ದಾದರೂ ಒಳಗೊಳಗೆ ಸಣ್ಣ ನಗು ಬರುತ್ತಿತ್ತು. ವೇಷಧಾರಿಯ ಕೈಯಲ್ಲಿರುವ ಪಂಜಿನಿಂದ ಎಲ್ಲಿ ನನಗೆ ಘಾಸಿಯಾಗುತ್ತದೋ.. ಎಂದು ಭಯದಿಂದಲೇ ಎಲ್ಲವನ್ನೂ ನಾನು ನೋಡುತ್ತಿದ್ದೆ. ಮತ್ತೆ ಕೆಲವು ಕಡೆ ನಾನು ಭೂತಕೋಲ ವೇಷಧಾರಿ ಇಂಗ್ಲೀಷ್, ಮಲಯಾಳಂ ಸೇರಿದಂತೆ ಇತರೆ ಭಾಷೆಗಳಲ್ಲೂ ಮಾತನಾಡುವುದನ್ನು ಗಮನಿಸುವಾಗ ದೇವರಿಗೆ ಎಲ್ಲಾ ಭಾಷೆಯೂ ಬರುತ್ತದೆ ಎಂದು ನಂಬಿಕೊಂಡಿದ್ದೆ.

ನಾವು ವರ್ಷಕ್ಕೊಮ್ಮೆ ನಮ್ಮ ತಾತ ಕೇರಳದಿಂದ ಕೊಡಗು ದೇಶಕ್ಕೆ ಓಡಿ ಬಂದಾಗ ಜೊತೆಗೆ ಬಂದಿದೆ ಎನ್ನಲಾದ ಚೌಂಡಿಗೆ ನಮ್ಮ ದೊಡ್ಡಪ್ಪನ ಮನೆಯಲ್ಲಿ ಪೂಜೆ ಕೊಡುತ್ತಿದ್ದೊ. ಅಲ್ಲಿ ಎರಡು ಕಾಲು, ನಾಲ್ಕು ಕಾಲಿನ ಪ್ರಾಣಿಗಳನ್ನೂ ಬಲಿ ಕೊಡುತ್ತಿದ್ದೊ. ಆಗ ಅಲ್ಲಿ ನನ್ನ ಅಜ್ಜಿಯ ಮೈಮೇಲೆ ದರ್ಶನ ಬರುತ್ತಿತ್ತು. ನನ್ನನ್ನು ಬಲುವಾಗಿ ಪ್ರೀತಿಸುತ್ತಿದ್ದ ನನ್ನ ಅಜ್ಜಿ ಅಲ್ಲಿ ಮಾತ್ರ ಬೇರೆ ಅವಳಂತೆ ನನಗೆ ಕಾಣುತ್ತಿದ್ದಳು. ಕಾಂತಾರದಲ್ಲಿ ದೈವ ಬೊಬ್ಬೆ ಹಾಕುವ ಹಾಗೆ ಅವಳು‌ ಎದೆ ಎದೆ ಹೊಡೆದುಕೊಂಡು ‘ಓ……ಓ……ಓ… ಎಂದು’ ಬೊಬ್ಬೆ ಹಾಕುತ್ತಿದ್ದಳು, ಕೈಯಲ್ಲಿ ಬೆತ್ತ ಹಿಡಿದುಕೊಂಡು ಅವಳಿಗೆ ಅವಳೇ ಹೊಡೆದುಕೊಳ್ಳುತ್ತಿದ್ದಳು. ನಾನು ಹೆದರಿ ದೂರ ನಿಲ್ಲುತ್ತಿದ್ದೆ. ಆಶೀರ್ವಾದ ಪಡೆಯಲು ಹತ್ತಿರ ಹೋದಾಗ ನೀನು ದುಷ್ಟರ ಸಂಘ ಬಿಡು. ಎಂದು ಗದರುತ್ತಿದ್ದಳು. ಈಗ ಅವಳು ತೀರಿ ಹೋಗಿ ಒಂದು ತಿಂಗಳಾಯಿತು.

ಒಂದು ಸಿನಿಮಾ ನನ್ನನ್ನು ಇಷ್ಟೇಲ್ಲಾ ನೆನಪಾಗುವಂತೆ ಮಾಡಿದೆ ಎಂದರೆ ಅದು ಸಿನಿಮಾದ ಶಕ್ತಿ.

ಕಾಂತಾರದಲ್ಲಿ ಒಂದಿಷ್ಟು ‌ನೆಗೆಟಿವ್ ಹೇಳುವುದಾದರೆ ಹೇಳಬಹುದು. ಕಷ್ಟಪಟ್ಟು ಸಿನಿಮಾ ಮಾಡುವುದು ಅವರು ಸುಮ್ಮನೆ ಕೂತು ಕುಟ್ಟುವ ನಮಗೆ ಏನನ್ನು ಬೇಕಾದರೂ ಬರೆಯಬಹುದು. ಒಟ್ಟಿನಲ್ಲಿ ಸಿನಿಮಾ ಚೆನ್ನಾಗಿದೆ. ರಿಷಭ್ ನಟನೆ, ನಿರ್ದೇಶನ, ಚಿತ್ರಕಥೆ ಚೆನ್ನಾಗಿದೆ. ಕೊನೆಯಲ್ಲಿ ರಿಷಭ್ ಮುಖಭಾವ ವರ್ಕೌಟ್ ಆಗಿದೆ. ಭೂತಕೋಲ ವೇಷಧಾರಿ ‘ಓ…. ಎಂದಾಗ ನಾನು ‘ಓ…ಎನ್ನುವಷ್ಟು’ ಎಕ್ಸ್ಟೈಟ್‌ಮೆಂಟ್ ಈ ಸಿನಿಮಾ ಕೊಟ್ಟಿದೆ.

ನನ್ನ ನೆಚ್ಚಿನ ನಟ ಕಿಶೋರ್ ಅನ್ನು ನಾವು ಪೊಲೀಸ್ ಆಗಿ ದುನಿಯಾದಲ್ಲೂ, ಬಿರುಗಾಳಿಯಲ್ಲೂ ನೋಡಿ ಮೆಚ್ಚಿದ್ದೇವೆ. ಇಲ್ಲಿಯೂ ಅವರು ಫಾರೆಸ್ಟ್ ಆಫಿಸರು. ಅವರನ್ನು ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆಯಲ್ಲಿ ಬೇರೆ ರೀತಿ ತೋರಿಸಿ ಗೆದ್ದಿದ್ದಾರೆ ಇನ್ನೂ ವಿಭಿನ್ನವಾಗಿ ತೋರಿಸಬಹುದಿತ್ತು.

ಹಿರೋಹಿನ್ ನ್ಯಾಚುರಲ್ ಬ್ಯೂಟಿ, ತಮಿಳು ಸಿನಿಮಾಗಳಲ್ಲಿ ಈ ಸ್ಟ್ರಾರ್ಟಜಿ ವರ್ಕೌಟ್ ಆಗಿದೆ. ಕನ್ನಡಕ್ಕೆ ಹೊಸದು. ಮಿಲ್ಕಿ ಬ್ಯೂಟಿಗಳು ಇಂತಹಾ ಪಾತ್ರಗಳಿಗೆ ಒಪ್ಪುವುದಿಲ್ಲ.
ಮತ್ತೆ ಕೊನೆಯಲ್ಲಿ ಫೈಟಿಂಗಿಗೆ ಹತ್ತಿರದಿಂದಲೇ ಯಾರನ್ನಾದರೂ ಕರೆಯಿಸಬಹುದಿತ್ತು. ಮಲಯಾಳಿಗಳು ಬಂದಾಗ ಜೊತೆಗಿದ್ದ ಗೆಳೆಯರು ನೀವು ಮಲಯಾಳಿಗಳು ಸರಿ ಇಲ್ಲ ಮಾರೇ.. ಎಂದು ನನ್ನನ್ನು ಗೇಲಿ ಮಾಡಿದ್ದು ವಿಶೇಷವಾಗಿತ್ತು.

ರಂಜಿತ್ ಕವಲಪಾರ


  • ರಂಜಿತ್ ಕವಲಪಾರ – ಪತ್ರಕರ್ತರು, ಲೇಖಕರು, ಮಡಿಕೇರಿ.

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW