ಮಂಜುಳ ಅಮರಾನಾಥ್ ರವರ ಪ್ರೇಮಕವನವನ್ನು ಓದಿ ಕವಿಯತ್ರಿ ಶಕುಂತಲಾ ಪಿ ಆಚಾರ್ ಅವರು ಬರೆದ ಕವನವಿದು, ತಪ್ಪದೆ ಓದಿ…
ನೆನ್ನೆವರೆಗೆ ಗುರುತು ಪರಿಚಯವಿಲ್ಲ
ಇಂದೇಕೆ ಕನಸಲಿ ನುಸುಳಿ ಆವರಿಸಿ
ಕಳ್ಳನಿದ್ರೆಯಲು ಕುಡಿನೋಟ ಬೀರಿ
ನಕ್ಕು ಚಿಗುರುಮೀಸೆಯ ಚೆಲುವ ಕಾಡುವನಲ್ಲ
ನಸುಬಾಗಿ ಹೊಸಿಲೊಳಗೆ ಅಡಿಯಿಟ್ಟು
ಸುತ್ತೆಲ್ಲ ನೋಡಿ ಅಳೆದು ತೂಗಿ
ಗಮ್ಮೆಂದ ಕಾಫಿ, ಗಲ್ಲೆಂದ ಕೈಬಳೆಗೆ
ಅರಳಿ ಹೊರಳಿದ ಕಣ್ಣು ಸ್ಥಿರವಾಯಿತಲ್ಲ
ಹಿರಿಯರೊಪ್ಪಿದ ಗಳಿಗೆ, ಅಕಾರ
ಅಚ್ಚೊತ್ತಿ ಹಚ್ಛೆಯಂತೆ ಮುದ್ರಿಸಿತ್ತಲ್ಲ
ಕ್ಷಣಕ್ಷಣಕೂ ನವಿರಿಟ್ಟ ಕಚಗುಳಿಗೆ
ಮಲ್ಲಿಗೆಯೊಡತಿ ನಾಚಿ ನಿರಾದಳಲ್ಲ
ಎಲ್ಲಾ ಬಂಧವ ಸರಿಸಿ
ಮುನ್ನೆಲೆಯನ್ನಾಕ್ರಮಿಸಿದ
ಈ ಹೊಸ ಬೆಸಗೆಯ ನಶೆಗೆ
ಕಣಕಣವೂ ಮತ್ತೇರಿ ನಲಿಯಿತಲ್ಲ
- ಶಕುಂತಲಾ ಪಿ ಆಚಾರ್, ಚಿತ್ರದುರ್ಗ
