ಕನ್ನಡಮ್ಮನ ತೇರು ಬಳಗ ಸಾಹಿತ್ಯಸೇವೆಗಾಗಿ ಮುಡುಪಾಗಿ ಇಟ್ಟಂತಹ ಒಂದು ಬಳಗ. ಈ ಬಳಗದ ವಿಶೇಷತೆ ಏನೆಂದರೆ ಛಂದೋಬದ್ಧ ರಚನೆಗಳನ್ನು ಕಲಿಸಿಕೊಡಲಾಗುತ್ತದೆ. ಬಳಗದಿಂದ ಕಲಿತು ಸ್ವತಂತ್ರ ಕವಿತೆಗಳನ್ನು ಬರೆಯುತ್ತಿರುವ ಕವಿಗಳು ಹಾಗು ಕವಿಯತ್ರಿಯರ ಮನದ ಮಾತುಗಳನ್ನು ತಪ್ಪದೆ ಮುಂದೆ ಓದಿ…
ಕನ್ನಡಮ್ಮನ ತೇರು ಬಳಗದ ಕಿರುಪರಿಚಯ :
(ಕನ್ನಡಮ್ಮನ ತೇರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಹಲವು ಪ್ರಕಾರಗಳಿದ್ದು ಹಳೆಗನ್ನಡ ಹಾಗು ನಡುಗನ್ನಡ ಕಾಲಘಟ್ಟದಲ್ಲಿ ಛಂದೋಬದ್ಧ ಕಾವ್ಯ ರಚನೆಗಳು ಉತ್ತುಂಗದ ಸ್ಥಿತಿಯಲ್ಲಿದ್ದವು. ಕಾಲ ಕಳೆದಂತೆ ಪರಕೀಯರ ಆಕ್ರಮಣ ಹಾಗು ನವ್ಯ ನವೋದಯ ಸಾಹಿತ್ಯದ ಬಳಕೆಯಿಂದ ಹಲವು ಕನ್ನಡ ಸಾಹಿತ್ಯ ಪ್ರಕಾರಗಳ ಬಳಕೆ ಕಡಿಮೆಯಾದವು.
ಕನ್ನಡ ಸಾಹಿತ್ಯದಲ್ಲಿ ಮಾತ್ರಗಣ, ಅಕ್ಷರಗಣ ಹಾಗು ಅಂಶಗಣ ಆಧಾರಿತ ಪದ್ಯಗಳನ್ನು ಕಾಣಬಹುದು. ಇವುಗಳಲ್ಲಿ ಸಾಕಷ್ಟು ಮಾದರಿಯಲ್ಲಿ ಪದ್ಯಗಳನ್ನು ರಚಿಸಿಬಹುದು.
ಛಂದೋಬದ್ಧ ರಚನೆಗಳನ್ನು ಕಲಿಸುವ ದೃಷ್ಟಿಯಿಂದಲೇ ಕನ್ನಡಮ್ಮನ ತೇರು ಬಳಗವನ್ನು ಪ್ರಾರಂಭಿಸಿದ್ದು ಈಗಾಗಲೇ ಸಾವಿರಾರು ಕವಿಮನಗಳು ಛಂದಸ್ಸು ಕಲಿತು ಬರೆಯಲು ಪ್ರಾರಂಭಿಸಿದ್ದಾರೆ.)
ಕನ್ನಡಮ್ಮನ ತೇರು ಬಳಗವನ್ನು ನವೆಂಬರ್ ೧, ೨೦೨೨ ರಲ್ಲಿ ಚನ್ನಕೇಶವ ಜಿ ಲಾಳನಕಟ್ಟೆ ಹಾಗು ಶಕುಂತಲಾ ಪಿ ಆಚಾರ್ ರವರು ಸ್ಥಾಪಿಸುರುತ್ತಾರೆ.
ಶ್ರೀಮತಿ ವಿಜಯಲಕ್ಷ್ಮಿ ಎಸ್
ಶ್ರೀಮತಿ ಸಹನಾ ಎಲ್.ಪಿ,
ಶ್ರೀಮತಿ ಮಂಗಳಗೌರಿ ಭಟ್
ಶ್ರೀಮತಿ ಸುಜಾತಾ ರವೀಶ್
ಶ್ರೀಯುತ ಜಗದೀಶ್ ನಾಗರಾಜು
ಶ್ರೀಯುತ ಅಮೃತಗೌಡ ಪಾಟೀಲ್
ಶ್ರೀಮತಿಭುವನೇಶ್ವರಿ ಪ್ರೇಮರವರು ಹಲವು ಆಯೋಜನೆಗಳನ್ನು ಹಮ್ಮಿಕೊಂಡ ನಿರ್ವಾಹಕರ ಸ್ಥಾನ ನಿರ್ವಹಿಸುತಿದ್ದಾರೆ.
ಕನ್ನಡಮ್ಮನ ತೇರು ಬಳಗದ ಅಭಿಪ್ರಾಯಗಳು :
- ಮೊದಮೊದಲಿಗೆ ನನಗೆ ಆನ್ಲೈನ್ ವೇದಿಕೆಗಳ ಬಗ್ಗೆ ಹೆಚ್ಚು ಸುರಕ್ಷಿತ ಭಾವನೆ ಇರಲಿಲ್ಲ. ಅದಕ್ಕಾಗಿಯೇ ಕೇವಲ ಹೆಣ್ಣು ಮಕ್ಕಳಿಗಾಗಿ ಮಾತ್ರ ಮೀಸಲಿರುವ ಒಂದೇ ಒಂದು ವೇದಿಕೆಯಲ್ಲಿ ನನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಅದನ್ನು ಹೊರತುಪಡಿಸಿ ಬೇರೆ ವೇದಿಕೆಗಳತ್ತ ಗಮನವೂ ಹರಿಸುತ್ತಿರಲಿಲ್ಲ.ಆದರೆ ಏಪ್ರಿಲ್ ತಿಂಗಳಿನಲ್ಲಿ ಅನಿರೀಕ್ಷಿತವಾಗಿ ಪರಿಚಯವಾದ ಅಕ್ಷರ ಮಾಂತ್ರಿಕ ಮೋಹನ್ ಸರ್ ರವರನ್ನು ಹಿಂಬಾಲಿಸುವಾಗ ಕನ್ನಡಮ್ಮನ ತೇರು ಎಂಬ ಬಳಗವನ್ನು ನೋಡಿದೆ. ಈ ಬಗ್ಗೆ ಹೆಚ್ಚು ತಿಳಿದಾಗ ಇಲ್ಲೇನೋ ವಿಶೇಷತೆ ಇದೆ ಎನಿಸಿತು. ಮೊದಲಿಂದಲೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ನಾನು ಇಲ್ಲಿ ಸೇರಿದೊಡನೆ ಅಂಶಗಣ ಛಂದಸ್ಸಿನ ರಗಳೆಗಳ ಪಾಠವಾಗುತ್ತಿತ್ತು. ಕನ್ನಡ ಸ್ನಾತಕೋತ್ತರ ಅಧ್ಯಯನ ಮಾಡುವಾಗಲೂ ಇಷ್ಟು ಸಾವಕಾಶವಾಗಿ ರಗಳೆಗಳ ಪಾಠ ಕಲಿತಿರಲಿಲ್ಲ! ಹಾಗಾಗಿ ಕ್ಷಣಮಾತ್ರದಲ್ಲಿ ಸೂಜಿಗಲ್ಲಿನಂತೆ ಈ ವೇದಿಕೆ ನನ್ನನ್ನು ಸೆಳೆಯಿತು. ಮುಂದೆ ಮುಕ್ತಕಗಳನ್ನು ಬರೆಯಲು ಅವಕಾಶ ನೀಡಿದಾಗ, ನಾನು ಈ ಮೊದಲು ಬರೆದಿದ್ದ ಮುಕ್ತಕಗಳನ್ನು, ‘ನನಗೂ ಬರುತ್ತದೆ’ ಎಂಬ ಧೋರಣೆಯಲ್ಲಿ ಪ್ರಕಟಿಸಿದೆ. ಆದರೆ ಒಂದಲ್ಲ, ಎರಡಲ್ಲ ಹಲವಾರು ತಪ್ಪುಗಳಿತ್ತು! ಎಲ್ಲವನ್ನು ಸಾವಕಾಶವಾಗಿ ವೇದಿಕೆಯ ಗುರುಗಳು ಸಾಕ್ಷಿ ಸಮೇತ ತಿದ್ದಿದರು.
ಆಗ ಅರಿವಾಯಿತು…! ನಾನು ಬಹಳಷ್ಟು ಕಲಿಯಬೇಕು ಎಂದು. ಮತ್ತು ಕಲಿಯುವ ಹಠವೂ ನನ್ನೊಂದಿಗೆ ಅದಾಗಲೇ ಒಡಮೂಡಿ ಬಿಟ್ಟಿತ್ತು.
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ವಿಜ್ಞಾನ ಶಿಕ್ಷಕಿಯಾದರೂ ನಾನು, ಕನ್ನಡ ವಿಷಯವನ್ನೂ ಬೋಧಿಸುತ್ತೇನೆ ಹಾಗೂ ಕನ್ನಡ ಕಲಿಯುವ ನಿರಂತರ ವಿದ್ಯಾರ್ಥಿ.ಈ ವೇದಿಕೆಯಲ್ಲಿ ಮೊದಲು ಪಾಠವನ್ನು ಹೇಳಿಕೊಟ್ಟು, ಮತ್ತೆ ಬರೆಯಲು ಅವಕಾಶ ಕೊಟ್ಟು, ತಪ್ಪುಗಳನ್ನು ಹಂತ ಹಂತವಾಗಿ ತಿದ್ದುತ್ತಾ, ನಮ್ಮನ್ನು ಸರಿದಾರಿಗೆ ಕರೆದುಕೊಂಡು ಬರುವ ಬಗ್ಗೆ ನನಗೆ ವಿಶೇಷ ಅಭಿಮಾನವಿದೆ.
ಜೊತೆಗೆ ಇಲ್ಲಿನ ಗುರು ಸ್ವರೂಪಿ ನಿರ್ವಾಹಕರು ಪ್ರತಿಯೊಬ್ಬರ ಬರಹಗಳಿಗೂ ನೀಡುವ ಮನ್ನಣೆ ಹಾಗೂ ಸಂಭೋಧನೆಗಳು ಹೃದಯ ತಟ್ಟುತ್ತವೆ. ಗುರುಗಳಾದ ಶ್ರೀ ಚನ್ನಕೇಶವ ಜಿ ಲಾಳನಕಟ್ಟೆ ರವರು ಅಕ್ಕಯ್ಯಾ ಎಂದು ಕರೆಯುವಾಗ ಯಾವುದೋ ಅವಿನಾಭಾವ ಸಂಬಂಧ ಏರ್ಪಡುತ್ತದೆ.
ಬನ್ನಿ ಛಂದಸ್ಸು ಕಲಿಯೋಣ, ಬನ್ನಿ ಮುಕ್ತಕ ಬರೆಯೋಣ, ಬನ್ನಿ ಕಥೆ ಬರೆಯೋಣ, ಬನ್ನಿ ಚುಟುಕು ಬರೆಯೋಣ, ಬನ್ನಿ ನಕ್ಕು ನಗಿಸೋಣ…. ಎನ್ನುವಾಗ ನನ್ನನ್ನೇ ನೇರವಾಗಿ ಕರೆದಂತೆ ಆಗಿ, ಬೇರೆಲ್ಲಾ ಕೆಲಸಗಳ ಮಧ್ಯೆ ಮೊದಲ ಆದ್ಯತೆ ಇಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸುವುದು ಆಗುತ್ತದೆ. ಚಿತ್ರಕ್ಕೊಂದು ಕವನ ಬರೆಯುವಾಗ ಸರಳವಾಗಿ ನಿಮ್ಮಿಷ್ಟದ ಶೈಲಿಯಲ್ಲಿ ಬರೆಯಿರಿ ಎಂದಾಗಲೂ, ಇಷ್ಟು ಜನ ದಿಗ್ಗಜರ ನಡುವೆ ಯಾವುದಾದರೂ ಒಂದು ಛಂದಸ್ಸಿನ ಪ್ರಕಾರದಲ್ಲಿ ಬರೆಯಲು ಪ್ರಯತ್ನಿಸು ಎಂದು ಮನಸ್ಸು ಹೇಳುತ್ತದೆ. ಆಗ ಬುದ್ಧಿಗೆ ಕಸರತ್ತಾಗಿ ಪಡುವ ಹರಸಾಹಸ ಆ ದೇವರಿಗೇ ಪ್ರೀತಿ! ಆದರೂ ಬರೆದು ಮುಗಿಸಿದಾದ ಮೇಲೆ ಒಂದು ನೆಮ್ಮದಿಯ ಭಾವ!
ಹಳೆಗನ್ನಡದ ಕಲಿಕೆ ಒಂದು ಹಂತದಲ್ಲಿ ನಿಂತು ಹೋದಮೇಲೆ ಮತ್ತೆ ಹೊಸ ಚಿಗುರಿನಂತೆ ಈಗ ಕಲಿಯುತ್ತಿರುವುದು ನಮ್ಮ ಸಂಸ್ಕೃತಿ ಪರಂಪರೆಯ ನಿಜವಾದ ತೇರನ್ನು ಎಳೆದಂತೆ. ಮತ್ತು ಇಲ್ಲಿರುವ ಎಲ್ಲಾ ಬರಹಗಾರರು ಆ ಕೈಂಕರ್ಯದಲ್ಲಿ ನಿರ್ವಾಹಕರ ಮಾರ್ಗದರ್ಶನದಲ್ಲಿ ಸಕ್ರಿಯವಾಗಿ ಸಾಗುತ್ತಿರುವಾಗ, ಅವರ ಜೊತೆ ನಾನು ಒಬ್ಬಳು ಎಂಬುದನ್ನು ನೆನೆದಾಗ ನಿಜಕ್ಕೂ ಧನ್ಯತೆ ಮೂಡುತ್ತದೆ.
ನನ್ನ ಮತ್ತೊಂದು ಹೆಮ್ಮೆಯ ವಿಷಯವೆಂದರೆ ಈ ವೇದಿಕೆಯಿಂದ ನಾನು ಪುಸ್ತಕ ಬಹುಮಾನವನ್ನು ಪಡೆದಿರುವುದು. ಇದೇ ರೀತಿ ಮುಂದೆಯೂ ನಾನು ತಮ್ಮೆಲ್ಲರ ಒಲವಿನಲ್ಲಿ ಮುಂದುವರೆಯಲು ಪಣತೊಟ್ಟಿರುವೆ.
ಒಟ್ಟಾರೆ ಕನ್ನಡಮ್ಮನ ತೇರಿನ ಯಶಸ್ಸಿನ ರುವಾರಿಗಳೆಲ್ಲರಿಗೂ ನನ್ನ ಸಾಷ್ಟಾಂಗ ಪ್ರಣಾಮಗಳು.
- ಮಂಜುಳಾ ಪ್ರಸಾದ್
- ವರ್ಷವೊಂದುರುಳಿರಲು
ಹರ್ಷವದು ಹೊನಲು
ಸ್ಪರ್ಶವದು ನವಿರಾಗಿರಲು
ದರ್ಶವದು ಮುಗಿಲು..
ನಾಡು ನುಡಿ ಕಟ್ಟುವ ಕಾರ್ಯಕ್ಕೆ ಮುಂದಾಳುಗಳಷ್ಟೆ ಆಗಬೇಕಿಲ್ಲ. ಪ್ರಾಂಜಲ ಪ್ರಾಮಾಣಿಕ ಮನಸಿನ ಯಾರಾದರು ಸರಿ – ನಿಜವಾದ ಕಾಳಜಿಯಿದ್ದರೆ ಸಾಕು. ಆಗ ಅಲ್ಲಿ ಪ್ರಚಾರ, ಅಬ್ಬರ, ತೋರ್ಪಡಿಕೆಗಳ ಹಂಬಲವನ್ನು ಮೀರಿದ ನೈಜ ಆಶಯವಷ್ಟೆ ಪ್ರಮುಖವಾಗುತ್ತದೆ. ಅಂಥಹ ಮನಸುಗಳು ಸೇರಿ ಕಟ್ಟುವ ಸಮೂಹದಲ್ಲಿ, ಅಂಥದ್ದೆ ಮನಸುಗಳು ಸೇರಿಕೊಂಡಾಗ ಅಲ್ಲೊಂದು ಸಾತ್ವಿಕ ನೆಲೆಗಟ್ಟಿನ ಅಪೂರ್ವ ಸಂಗಮವಾಗುತ್ತದೆ. ಹಾಗಾದಾಗ, ಅಲ್ಲಿ ನೆರೆಯುವ ಮನಗಳೆಲ್ಲ ಕೋಗಿಲೆಯ ದನಿಗಳೆ, ನವಿಲಿನ ನಾಟ್ಯದ ಸಾಕಾರ ರೂಪವೆ ಎಂದನಿಸುವುದು ಅತಿಶಯವೇನಲ್ಲ.
ಅಂಥದ್ದೂಂದು ಬಳಗವನ್ನು ನಿರ್ಮಿಸುವುದು , ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಅದರ ಹಿಂದೆ ಅಪಾರ ಇಚ್ಛಾಶಕ್ತಿ, ಜ್ಞಾನ ಮತ್ತು ಕ್ರಿಯಾಶಕ್ತಿಯ ಸಂತುಲಿತ ಪ್ರೇರಣೆ ಮತ್ತು ಕಾಣಿಕೆ ಇರಬೇಕಾಗುತ್ತದೆ. ಅರ್ಥಾತ್ – ಯಾವುದೆ ಬಳಗವನ್ನು ಮುನ್ನಡೆಸುವ ಶಕ್ತಿ ಅದರ ಹಿನ್ನಲೆಯಲ್ಲಿರುವ ವ್ಯಕ್ತಿಗಳೇ ಅಗಿರುತ್ತಾರೆ. ಅಂಥಹವರ ಮಾರ್ಗದರ್ಶನದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳು ಅರ್ಥಪೂರ್ಣವಾಗಿಯೆ ಇರುತ್ತವೆ ಎನ್ನುವುದು ಅತಿಶಯೋಕ್ತಿಯೇನಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಇಂಥಹ ಕೆಲವೆ ಕೆಲವು ಸಮೂಹಗಳಲ್ಲಿ ಒಂದಾದ ‘ಕನ್ನಡಮ್ಮನ ತೇರು’ ಬಳಗ ಕನ್ನಡ ಮನಸುಗಳನ್ನು ಬೆಳೆಸುವ, ಕಲಿಕೆಯ ಮತ್ತು ಅನಾವರಣದ ವೇದಿಕೆಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸುತ್ತಿರುವುದು ಸಂತಸದ ವಿಷಯವೆ ಸರಿ.
ವಾರ್ಷಿಕೋತ್ಸವ ಸಂಭ್ರಮಾಚರಣೆಯ ವಿಷಯವಾಗಿರುವಂತೆ, ತಂಡದ ಹೆಚ್ಚಿರುವ ಜವಾಬ್ದಾರಿಯ ಸೂಚಕವು ಹೌದು. ಏಕತಾನತೆಯನ್ನು ಮೀರಿದ, ಹೊಸತಿನ ಜತೆಗೆ ಹಳತನ್ನು ಹದವಾಗಿ ಬೆರೆಸಿದ ಸತ್ವವನ್ನು ಉಣಬಡಿಸುವುದು ಸುಲಭದ ಮಾತಲ್ಲ. ಆದರೆ ಅದನ್ನು ನಿರ್ವಹಿಸಿ, ನಿಭಾಯಿಸಬಲ್ಲ ಸಾಮರ್ಥ್ಯ, ಆಶಯವುಳ್ಳ ತಂಡವು ಹಿನ್ನಲೆಯಲ್ಲಿದೆ ಎನ್ನುವುದು ಕನ್ನಡದ ಮಟ್ಟಿಗೆ ಸಂತಸದ ವಿಷಯ.
ಈ ವಾರ್ಷಿಕೋತ್ಸವ ಮುಂದಿನ ಹಲವಾರು ಮೈಲಿಗಲ್ಲುಗಳಿಗೆ ನಾಂದಿಯಾಗಲಿ, ಕನ್ನಡ ಬಾವುಟವನ್ನು ಎತ್ತಿ ಹಿಡಿಯುವ ಸಂತ ಮನಸಿನ ವೇದಿಕೆಯಾಗಲಿ, ಮತ್ತಷ್ಟು ಬೆಳೆದು ಎಲ್ಲರ ಹೃನ್ಮನಗಳಲ್ಲಿ ಸ್ಥಾನ ಗಳಿಸಲಿ ಎಂದು ಆಶಿಸುತ್ತೇನೆ.
- ನಾಗೇಶ ಮೈಸೂರು
- ಮೊದಲಿಗೆ ನನ್ನನ್ನು ಈ ಬಳಗಕ್ಕೆ ಆಹ್ವಾನಿಸಿದ ಬಳಗದ ಅಡ್ಮಿನ್ ಆದಂತಹ ಶ್ರೀಯುತ ಅಮೃತಗೌಡ ಪಾಟೀಲ ಸರ್ ಗೆ ನನ್ನ ಅನಂತ ಧನ್ಯವಾದಗಳು. ಬಳಗ ಪ್ರಾರಂಭವಾದ ಸ್ವಲ್ಪ ದಿನಗಳಲ್ಲೇ ನಾನು ಬಳಗ ಸೇರಿಕೊಂಡೆ… ಪಠ್ಯ ಪೂರಕವಾಗಿ ಅಷ್ಟೇ ಮೊದಲು ನನಗೆ ಛಂದಸ್ಸು ಗೊತ್ತಿತ್ತು. ಬಳಗ ಸೇರಿದ ಮೇಲೆ ಛಂದಸ್ಸಿನ ಪಾಠವು ಪ್ರಾರಂಭವಾಯಿತು ..ಬಹಳ ತಿದ್ದಿ ಸಮಾಧಾನವಾಗಿ ಎಷ್ಟು ಸಾರಿ ಕೇಳಿದರು..ಬೇಜಾರು ಮಾಡಿಕೊಳ್ಳದೇ ತಿದ್ದಿದವರು ಸಹೋದರ ಚೆನ್ನಕೇಶವ ಲಾಳನಕಟ್ಟೆಯವರು ಅಣ್ಣನಿಗೆ ನನ್ನ ತುಂಬೊಲವಿನ ಧನ್ಯವಾದಗಳುನಾನು ಸ್ವಲ್ಪಮಟ್ಟಿಗೆ ಏನಾದರೂ ಛಂದಸ್ಸಿನಲ್ಲಿ ಕವಿತೆಗಳನ್ನು ಬರೆಯುತ್ತೇನೆಂದೆರೆ ಅದಕ್ಕೆ ಕನ್ನಡಮ್ಮನ ತೇರು ಬಳಗವೇ ಕಾರಣ..ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ..ಬಳಗದಿಂದ ಬಹಳಷ್ಟು ಕಲಿತಿದ್ದೇನೆ ಇನ್ನೂ ಕಲಿಯುತ್ತಿದ್ದೇನೆ..ಇತ್ತಿಚೇಗೆ ಕಥೆ ಬರೆಯೊದು ಚುಟುಕು ಭಾವಾನುಭೂತಿ ಛಂದಸ್ಸಿನ ಪುನರ್ ಮನನ್ ಹಾಗೂ ಗುರುವಾರ ಮುಕ್ತಕ ಪ್ರತಿ ಭಾನುವಾರ ಚಿತ್ರಕ್ಕೊಂದು ಕವಿತೆ..ಈಗ ಮತ್ತೇ ಹಾಸ್ಯ ಬರಹ..ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಒಳಗೊಂಡು ಸದಸ್ಯರೆಲ್ಲರಿಗೂ ಬರೆಯುವ ಹುರುಪು ಪ್ರೋತ್ಸಾಹ ತುಂಬುತ್ತಾ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ..ಎಲ್ಲ ತರಹದ ಸಾಹಿತ್ಯದ ಪ್ರಕಾರಗಳನ್ನು ಕಲಿಸುವ ನಿಟ್ಟಿನಲ್ಲಿ ಕನ್ನಡಮ್ಮನ ತೇರು ಬಳಗ ಬಹಳ ಎತ್ತರದಲ್ಲಿದೆ..ಹೀಗೆ ಹಲವಾರು ಪ್ರತಿಭೆಗಳು ಸಾಹಿತಿಗಳು ಬಳಗದಿಂದ ಹೊರ ಹೊಮ್ಮುಲಿ..ಬಳಗವು ಬೆಳೆಯುತ್ತಿರಲಿ.. ತಿಂಗಳ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಅವೀಸ್ಮರಣಿಯ..ಸಮಸ್ತ ಆಡಳಿತ ವೃಂದಕ್ಕೆ ಸಂಸ್ಥಾಪಕ ವ್ಯವಸ್ಥಾಪಕರಿಗೆ ನನ್ನ ಅನಂತ ಧನ್ಯವಾದಗಳು.. ಹೊಸತನ ತುಂಬುತಲಿ ಒಂದು ವರ್ಷಕ್ಕೆ ಕಾಲಿಡುತ್ತಿರುವ ನಮ್ಮಹೆಮ್ಮೆಯ ಕನ್ನಡಮ್ಮನ ತೇರು ಬಳಗಕ್ಕೆ ತುಂಬು ಮನದ ಅಭಿನಂದನೆಗಳು. ಮನದಾಳದ ಮಾತುಗಳನ್ನು ಬರೆಯಲು ಅವಕಾಶ ಕಲ್ಪಿಸಿದ ಬಳಗಕ್ಕೆ ಧನ್ಯವಾದಗಳು..
ನಾನು ಪ್ರಾರಂಭದಲ್ಲಿ ಬಳಗದ ಬಗ್ಗೆ ಬರೆದ ಕವಿತೆ :
ಕುಸುಮ ಷಟ್ಪದಿಯಲ್ಲಿ
ಕನ್ನಡಮ್ಮನ ತೇರು ಬಳಗ
ಅಂದವಿಹ ಪದಗಳನು ಹೊಂದಿಸುವ ರೀತಿಯಲಿ ಛಂದಸ್ಸು ಪಾಠವನು ಕಲಿಸುತಿರುವ ಸುಂದರವಿ ಬಳಗವನು ಮುಂದಾಗಿ ನಡೆಸುತಿಹ ಚೆಂದವಿಹ ಸಾಹಿತ್ಯ ಬಳಗವಿಹುದು. ಒಪ್ಪಿಗೆಯ ಹೇಳಿದರು ತಪ್ಪುಗಳ ತಿದ್ದುಪಡಿ ತಪ್ಪದೆನೆ ತಿದ್ದುತಲಿ ಹೇಳುತಿಹರು ಅಪ್ಪುತಲಿ ತಪ್ಪುಗಳ ತಪ್ಪರಿದ ಕವಿತೆಗಳ ತುಪ್ಪವನ ಸವಿದಂತೆ ಹೊಗಳುತಿಹರು. ಶುರುವಾಗಿ ಪ್ರಾಸಗಳ ಮರೆತಂತ ಗಣಗಳನು ಹರುಪಿನಲಿ ಲಯಗಳನು ಕಲಿಸುತಿಹರು ಅರೆಗಳಿಗೆ ರಗಳೆಗಳ ಮರುಗಳಿಗೆ ಷಟ್ಪದಿಯ ಕರಗತವ ಮಾಡಿಸುವ ಕವಿಗಳಿವರು
- ಇಂದಿರಾ ಮಾದಾಪುರ
- ಆಕೃತಿಕನ್ನಡ