ಗಂಧದ ಮರ ಬೆಲೆ ಬಾಳುವ ಮರ ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅದರ ಕುಡಿ ಎಲೆಗಳು ಕೂಡಾ ಹೊಟ್ಟೆಗೆ ಅಷ್ಟೇ ಸಮೃದ್ಧಿಯನ್ನು ಕೊಡುತ್ತದೆ ಎಂದು ನಳಪಾಕ ಪ್ರವೀಣೆ ಮತ್ತು ಲೇಖಕಿ ಭಾರತಿ ಹೆಗಡೆ ಅವರು ಮಾಡಿದ ಚಟ್ನಿ ಮತ್ತು ತಂಬುಳಿಯಿಂದ ಅರ್ಥವಾಗುತ್ತದೆ, ಅದನ್ನು ಹೇಗೆ ತಯಾರಿಸುವುದು ಎಂಬುದನ್ನು ತಪ್ಪದೆ ಮುಂದೆ ಓದಿ…
ನಾನು ಮತ್ತು ಎಚ್.ಎಲ್.ಪುಷ್ಪ (ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು) ಇಬ್ಬರೂ ಕಾರ್ಯ ನಿಮಿತ್ತ ಪ್ರೆಸ್‌ಕ್ಲಬ್ ಗೆ ಹೋಗಬೇಕಾಗಿ ಬಂತು. ಕೆಲಸ ಮುಗಿದ ಮೇಲೆ ಪ್ರೆಸ್‌ಕ್ಲಬ್ ಹೊರಗೆ ಬರುವಷ್ಟರಲ್ಲಿ ಯಾರೋ ಒಬ್ಬರು ಪುಷ್ಪಾ ಅವರಿಗೆ ಸಿಕ್ಕು ಸಿಕ್ಕಾಪಟ್ಟೆ ಮಾತನಾಡತೊಡಗಿದರು. ಎಷ್ಟೊತ್ತಾದರೂ ಅವರು ಮಾತು ನಿಲ್ಲಿಸುತ್ತಿಲ್ಲ. ನನಗೋ ನಿಂತು ಸಾಕಾಯಿತು. ಅಷ್ಟರಲ್ಲಿ ಅಲ್ಲೇ ಇದ್ದ ಗಂಧದ ಮರವೊಂದು ಕಣ್ಣಿಗೆ ಬಿತ್ತು. ಸಾಕಷ್ಟು ಸೊಪ್ಪುಗಳು ಬಿಟ್ಟ ಟೊಂಗೆಗಳು ಇಳಿಬಿದ್ದು ಕೈಗೆಟುಕುವ ಹಾಗಿದ್ದವು. ಸರಿ ಇವರು ಮಾತು ನಿಲ್ಲಿಸುವ ಥರ ಕಾಣಿಸ್ತಿಲ್ಲ. ನಾನ್ಯಾಕೆ ಸುಮ್ಮನಿರಲಿ ಎಂದು ನಿಧಾನಕ್ಕೆ ಪಕ್ಕಕ್ಕೆ ಸರಿದು ಟೊಂಗೆ ಬಗ್ಗಿಸಿ ಒಂದಷ್ಟು ಎಲೆಗಳನ್ನು ಕಿತ್ತು ಬ್ಯಾಗಿಗೆ ಸೇರಿಸಿದೆ. ಅಷ್ಟೊತ್ತಿಗೆ ಇವರ ಮಾತೂ ಮುಗಿದಿತ್ತು. ಇಬ್ಬರೂ ಮನೆಯ ಹಾದಿ ಹಿಡಿದೆವು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್.ಎಲ್.ಪುಷ್ಪ ಮತ್ತು ಭಾರತಿ ಹೆಗಡೆ
ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಇಳಿದು ಮನೆಗೆ ಬರುವ ಹಾದಿಯ ಬದಿಯಲ್ಲಿ ಕಾಕಿಗಿಡ (ಗಣಿಕೆ ಸೊಪ್ಪು) ಕಾಣಿಸಿತು. ಅದೂ ಸೊಂಪಾಗಿ ಬೆಳೆದಿತ್ತು. ಇನ್ನೇನು ಎಂದು ಅದನ್ನೂ ಕಿತ್ತುಕೊಂಡು ಮನೆಗೆ ಬಂದೆ. ಮನೆಯ ಕಾಂಪೌಂಡ್ ಒಳಗೆ ಬರುವಷ್ಟರಲ್ಲಿ ಒಂದಷ್ಟು ಹೊನಗನೆ ಸೊಪ್ಪು ಕಾಣಿಸಿತು. ಅದನ್ನೂ ಕಿತ್ತುಕೊಂಡೆ. ಎಲ್ಲ ಸೊಪ್ಪುಗಳನ್ನೂ ಸೇರಿಸಿದೆ. ಅಮ್ಮ ಒಂದಷ್ಟು ನುಗ್ಗೆಸೊಪ್ಪು, ಚಕ್ರಮುನಿ ಸೊಪ್ಪುಗಳನ್ನು ಕೊಟ್ಟಿದ್ದಳು. ಅದನ್ನು ಸೇರಿಸೋಣವೆಂದರೆ ಆಗಲೇ ಅವನ್ನು ಚಟ್ನಿಪುಡಿಗೆ ಹಾಕಿ ಖಾಲಿ ಮಾಡಿದ್ದೆ. ಹಾಗಾಗಿ ಗಂಧ, ಕಾಕಿ, ಹೊನಗೊನೆ ಸೊಪ್ಪು ಈ ಮೂರನ್ನೇ ಹಾಕಿ ಸೊಗಸಾದ ಚಟ್ನಿ ಮಾಡಿ ಬಿಸಿಬಿಸಿ ಅನ್ನಕ್ಕೆ ಹಾಕಿಕೊಂಡು ಮೇಲೊಂದು ಚಮಚ ಕೊಬ್ಬರಿ ಎಣ್ಣೆಯನ್ನೂ ಹಾಕಿ ಚೆನ್ನಾಗಿ ಕಲಸಿ ಊಟ ಮಾಡಿದರೆ ಆಹಾ…ಸ್ವರ್ಗ ಸುಖ.
ಪಾಪ, ಪುಷ್ಪ ಮೇಡಂಗೆ ತಲೆ ತಿನ್ನಿಸಿಕೊಂಡ ಯೋಗವಾದರೆ ನನಗೆ ಗಂಧದ ಎಲೆ ಸಿಕ್ಕ ಯೋಗ..
ಗಂಧದ ಕುಡಿ ಚಟ್ನಿ :
ಬೇಕಾಗುವ ಸಾಮಗ್ರಿಗಳು :
- ಗಂಧದ ಚಿಗುರೆಲೆಗಳು – 4 ಮುಷ್ಟಿ
- ಉದ್ದಿನಬೇಳೆ – ಒಂದು ಚಮಚ
- ಹಸಿಮೆಣಸಿನಕಾಯಿ ಅಥವಾ ಒಣಮೆಣಸಿನಕಾಯಿ – 5-6, (ಹಸಿಮೆಣಸಿನಕಾಯಿ ಹಾಕಿದ್ರೆ ರುಚಿ ಹೆಚ್ಚು.)
- ಕೊಬ್ಬರಿ ತುರಿ – ಅರ್ಧ ಕಪ್,
- ಹುಣಿಸೆಹಣ್ಣು- ಅರ್ಧ ನಿಂಬೆ ಗಾತ್ರದಷ್ಟು,
- ಉಪ್ಪು- ರುಚಿಗೆ ತಕ್ಕಷ್ಟು.
ವಿಧಾನ: ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಕಾಳು ಹಾಕಿ ಚಿಟಿ ಗುಡಿಸಿ. ನಂತರ ಉದ್ದಿನ ಬೇಳೆ ಹಾಕಿ ಹುರಿಯಿರಿ. ಅದು ಸ್ವಲ್ಪ ಹೊಂಬಣ್ಣಕ್ಕೆ ಬರುವ ಹೊತ್ತಿಗೆ ಮೆಣಸಿನ ಕಾಯಿ, ಗಂಧದ ಎಲೆಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ಹುರಿದ ಮೇಲೆ ಉಪ್ಪು, ಹುಣಿಸೆ ಹಣ್ಣು, ಹುರಿದ ಅಷ್ಟೂ ಸಾಮಗ್ರಿ ಮತ್ತು ಕೊಬ್ಬರಿ ತುರಿಯನ್ನು ಹಾಕಿ ನುಣ್ಣಗೆ ರುಬ್ಬಿ.
(ಈ ಚಟ್ನಿ ಸ್ವಲ್ಪ ಗಟ್ಟಿ ಇದ್ರೇ ಒಳ್ಳೆಯದು. ಒಣಕೊಬ್ಬರಿ ಇಲ್ಲದಿದ್ದರೆ ಹಸಿ ತೆಂಗಿನ ತುರಿಯಾದರೂ ನಡೆಯುತ್ತದೆ.)

ಇದನ್ನು ಹೀಗೂ ಮಾಡಬಹುದು.
ಬೇಕಾಗುವ ಸಾಮಗ್ರಿಗಳು :
- ಗಂಧದ ಎಲೆ
- ನುಗ್ಗೆಸೊಪ್ಪು
- ಚಕ್ರಮುನಿ ಸೊಪ್ಪು
- ಕರಿಬೇವಿನ ಸೊಪ್ಪು
- ಗಣಿಕೆ ಸೊಪ್ಪು
- ಹಸಿ ಮೆಣಸಿನ ಕಾಯಿಯ ಚಿಗುರು
- ಹೊನ ಗೊನೆಸೊಪ್ಪು,
- ಬಿಲ್ವಪತ್ರೆ ಎಲ್ಲವೂ ಒಂದೊಂದು ಮುಷ್ಟಿ ಹಾಕಿ.
ಇದಕ್ಕೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿ ಹಾಕಿ, ಜೊತೆಗೆ ಒಂದು ಚಮಚ ಬಿಳಿ ಎಳ್ಳನ್ನು ಸೇರಿಸಿ ಕೊಬ್ಬರಿ ಜೊತೆಗೆ ರುಬ್ಬಿದರೆ ಚಟ್ನಿ ತಯಾರು. ಇದಕ್ಕೆ ನಾವು ಕುಡಿ ಚಟ್ನೆ ಎನ್ನುತ್ತೇವೆ.
ಈ ಮೇಲೆ ಹೇಳಿದ ಅಷ್ಟೂ ಸೊಪ್ಪನ್ನೂ ಪ್ರತ್ಯೇಕವಾಗಿಯೇ ಚಟ್ನಿ ತಯಾರಿಸಬಹುದು. ಅದರಲ್ಲಿ ನುಗ್ಗೆ ಸೊಪ್ಪಿನ ಚಟ್ನಿ, ಚಕ್ರಮುನಿ ಸೊಪ್ಪಿನಚಟ್ನಿ ತುಂಬ ರುಚಿಯಾಗಿರುತ್ತದೆ. ನುಗ್ಗೆಸೊಪ್ಪು 2-3 ಕಪ್ ಹಾಕಿ. ಕಾಯಿ ತುರಿ ಸ್ವಲ್ಪವೇ ಹಾಕಿ ಚಟ್ನಿ ಮಾಡಬೇಕು.
ಈ ಚಟ್ನಿ ದೋಸೆ, ಅನ್ನ, ಚಪಾತಿಗೆಲ್ಲ ಚೆನ್ನಾಗಿರುತ್ತದೆ. ಅದರಲ್ಲೂ ಬಿಸಿ ಬಿಸಿ ಅನ್ನಕ್ಕೆ ಈ ಚಟ್ನಿ ಹಾಕಿ, ಮೇಲೊಂದು ಚಮಚ ಕೊಬ್ಬರಿ ಎಣ್ಣೆಹಾಕಿ ಕಲಸಿ ತಿಂದರೆ ಒಳ್ಳೆರುಚಿ. ಅಥವಾ ಕೆಂಪಕ್ಕಿ ಗಂಜಿಗೆ ಈ ಚಟ್ನಿ ಒಳ್ಳೆ ಕಾಂಬಿನೇಷನ್.

ಫೋಟೋ ಕೃಪೆ :youtube
ಗಂಧದ ಕುಡಿ ತಂಬುಳಿ :
ಬೇಕಾಗುವ ಸಾಮಗ್ರಿಗಳು :
- ಗಂಧದ ಕುಡಿ ಒಂದು ಮುಷ್ಟಿ, ಜೀರಿಗೆ ಒಂದು ಚಮಚ, ಎರಡು ಕಾಳುಮೆಣಸು.
ವಿಧಾನ: ಅಷ್ಟನ್ನೂ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಅರ್ಧ ಕಪ್ ಹಸಿ ತೆಂಗಿನ ತುರಿ ಸೇರಿಸಿ ಚೆನ್ನಾಗಿ ರುಬ್ಬಿ. ಅದಕ್ಕೆ ಅರ್ಧ ಲೋಟ ನೀರು, 2 ಲೋಟ ಕಡೆದ ಮಜ್ಜಿಗೆ ಮತ್ತು ಉಪ್ಪು ಸೇರಿಸಿದರೆ ರುಚಿಕಟ್ಟಾದ ತಂಬುಳಿ ತಯಾರಾಗುತ್ತದೆ.
ತಂಬುಳಿಗೂ ಅಷ್ಟೇ ಈ ಎಲ್ಲಾ ಸೊಪ್ಪುಗಳನ್ನೂ ಸೇರಿಸಿ ಹುರಿದು ಮಾಡಿದರೆ ಕುಡಿ ತಂಬುಳಿ ಆಗುತ್ತದೆ. ಅಥವಾ ಪ್ರತ್ಯೇಕವಾಗಿಯೂ ಸೊಪ್ಪುಗಳನ್ನು ಹುರಿದೂ ಮಾಡಬಹುದು.
ಬಿಸಿಬಿಸಿ ಅನ್ನಕ್ಕೆ ಮೊದಲ ತುತ್ತನ್ನು ತಂಬುಳಿಯೊಂದಿಗೆ ಸೇವಿಸಿದರೆ ರುಚಿಯೂ ಹೌದು. ಹೊಟ್ಟೆಯೂ ಶಾಂತವಾಗಿರುತ್ತದೆ.
- ಭಾರತಿ ಹೆಗಡೆ
