ಮನಃಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡಿದ್ದ ಸಲೀನಾ, ನಚಿಕೇತನಿಗೆ ತಾನು ಅವನಿಗೆ ಒಲಿಯಬೇಕೆಂದರೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾಳೆ, ಕಾಸಾನೋವಾ ವ್ಯಕ್ತಿತ್ವದಿಂದ ವಿಮುಕ್ತಿ ಹೊಂದುವನೆ!? ಎನ್ನುವಲ್ಲಿ ಲೇಖಕ ಮನೋಜ್ ಪಿ.ಎಂ ಅವರು ಸೊಗಸಾದ ತಿರುವನ್ನು ನೀಡಿದ್ದಾರೆ, ಈ ಪುಸ್ತಕದ ಕುರಿತು ಲೇಖಕಿ ಭಾಗ್ಯ.ಕೆ.ಯು ಅವರು ಸೊಗಸಾಗಿ ಪರಿಚಯಿಸಿದ್ದಾರೆ, ತಪ್ಪದೆ ಓದಿ…
ಕಾದಂಬರಿ: ಕಾಸನೋವ
ಕರ್ತೃ: ಮನೋಜ್ ಪಿ.ಎಂ
ಪುಟಗಳು:೨೩೨
ಬೆಲೆ:ರೂ.೨೦೦/-
ಪ್ರಕಾಶಕರು : ಯೋಗಮಾಯ ಪಬ್ಲಿಕೇಷನ್
ಪೂರೀಗಾಲಿ ಮರಡೇಶಮೂರ್ತಿ ಸಾಹಿತಿಗಳು – ಪತ್ರಕರ್ತರು ಮೈಸೂರು ಇವರು ಬಹಳ ಸೊಗಸಾಗಿ ಮುನ್ನುಡಿಯನ್ನು ಬರೆದಿರುತ್ತಾರೆ.
ಎದೆಯ ಅಂಬುಧಿ (ಸಮುದ್ರ) ಯ ಭೋರ್ಗರೆತ ಅಗಮ್ಯದಲ್ಲಿ ಸಂಧಿಸುತ್ತದೆಯೆ!? ಎಂಬ ಆರಂಭದ ಸಾಲುಗಳನ್ನೋದಿ ನನ್ನಲ್ಲಿ ಮೊಳಗಿತ್ತು! ಅಕಾರಣ ಎಂದೇ ಅದನ್ನು ತಳ್ಳಿ ಹಾಕಿ ಓದಲು ಅನುವಾದೆ. ನನ್ನದು ಸಾಹಿತ್ಯ ಸಂಬಂಧಿತ ಪುಸ್ತಕದ ಮೊದಲ ಓದು ಇದಾದ್ದರಿಂದಲೋ ಏನೋ ಅದೊಂದು ಬಗೆಯ ಅವ್ಯಕ್ತ ಭಾವ ನನ್ನನ್ನು ಬಹುವಾಗಿ ಕಾಡಿತ್ತು. ಓದಿನ ಒಸಗೆ ಬಿಚ್ಚುತ್ತಾ ಹೋದಂತೆ ಕಾದಂಬರಿಯ ಒನಪು ಕಣ್ಮುಂದೆಯೇ ಮೇಳೈಸಿ ತಣಿಸಿದ ಹಾಗೊಂದು ಅರಿವು. ಆರಂಭವು ಒಂದು ದುಃಸ್ವಪ್ನದಿಂದ ತೆರೆದುಕೊಂಡ ಪುಟವಾದರೆ ನಿರೂಪಣೆಯಲ್ಲಿ ವೀರನೆಂಬ ಪಾತ್ರದೊಂದಿಗೆ ಆಪ್ತತೆ ಬೆಸೆಯುತ್ತಾ ಸಾಗುತ್ತದೆ. ಕನಸನ್ನು ತಡವಿದ ವೀರ ಧಗ್ಗನೆಂದು ಹೊತ್ತಿಕೊಂಡ ಬೆಂಕಿಯ ಹಾಗೆದ್ದು ಕೂರುತ್ತಾನೆ! ಕನಸುಗಳಿಗೆ ಅರ್ಥವನ್ನು ಹುಡುಕುತ್ತಿಲ್ಲ! ಕನಸಿಗೆ ಕಾರಣವಾದ ನನ್ನ ಅಲೋಚನೆಗೆ ಅರ್ಥವನ್ನು ಹುಡುಕುತ್ತಿದ್ದೇನೆಂದು ಸ್ವಗತದಲ್ಲಿ ಹೇಳಿಕೊಳ್ಳುತ್ತಾ ಕತೆಯ ಒಂದೊಂದು ಪುಟವನ್ನು ತೆರೆದಿಡುತ್ತಾ ಸಾಗುತ್ತಾನೆ.
ಕಾದಂಬರಿಯ ಭೂಮಿಕೆಯಲ್ಲಿ ನಚಿಕೇತ ಮತ್ತು ಚಾರುದತ್ತ ಎರಡು ಪ್ರಮುಖ ಪಾತ್ರಗಳೆನಿಸಿಕೊಂಡರೂ ವೀರ, ಸಿಂಧೂರಿ, ಸಲೀನ ಎಂಬ ಮೂರು ಪಾತ್ರಗಳು ಸಹ ಅದೇ ಗಟ್ಟಿತನವನ್ನು ಪಡೆದುಕೊಂಡಿವೆ ಎಂಬಂತೆ ಕಾಣುತ್ತವೆ. ಕಾಸನೋವ ಎಂಬುದೊಂದು ಜರ್ಮನ್ ವ್ಯಕ್ತಿಯ ಹೆಸರು ವ್ಯಕ್ತಿತ್ವ ವಿಶೇಷ ಹೆಸರಾಗಿ ಮಾರ್ಪಾಡಾಯಿತು ಎಂಬುದು ತಿಳಿದ ಸಂಗತಿಯೆ. ಆ ವಿಶೇಷ ವ್ಯಕ್ತಿತ್ವವನ್ನೇ ಆಧಾರವಾಗಿಟ್ಟುಕೊಂಡು ಬರೆದ ಕಾದಂಬರಿ ಕಾಸನೋವ. ಒಂದೇ ವ್ಯಕ್ತಿತ್ವದ ಎರಡು ಪಾತ್ರಗಳನ್ನು ಧನ ಮತ್ತು ಋಣ ಎಂಬ ಎರಡು ಅಂಶಗಳ ಸೂಚಕಗಳೆಂದು ಗುರುತಿಸಬಹುದಾಗಿದೆ.
ನಚಿಕೇತನ ಬಾಲ್ಯವೂ ನಿರ್ಮಲವಲ್ಲದ ಸನ್ನಿವೇಶಗಳನ್ನು ಸಾಕ್ಷ್ಯಗಳಾಗಿ ಅವನೆದುರು ಹುಟ್ಟುಹಾಕುತ್ತಾ.. ಸಮಾಜದ ಮೇಲಿನ ನಂಬಿಕೆಯನ್ನೆ ತೊಡೆದುಹಾಕುತ್ತಾ ಸಾಗುತ್ತದೆ. ಬಾಲ್ಯದಲ್ಲಿ ಓದಿದ ‘ಬಾಲಮಂಗಳ’ ದಲ್ಲಿನ ಕಥೆಗಳಂತೆ ಸಮಾಜದಲ್ಲಿ ಒಳಿತೂ ಇದೆಯೆಂದು ನಂಬಬೇಕಾಗಿದ್ದ ಎಳವೆಯಲ್ಲಿ ಕಾಲನ ನಿಲುಮೆಯ ಕೇವಲ ಕೆಡುಕುಗಳ ಪ್ರದರ್ಶನವಷ್ಟೇ ಅವನ ಕಣ್ಣುಗಳು ಸೆರೆಮಾಡಿವೆಯೋ!?ಅಥವಾ ಅದಷ್ಟೇ ಅವನ ಕಂಗಳಿಗೆ ಗೋಚರಿಸಿದವೋ? ಎಂಬಂತೆ ಭಾಸವಾಗುತ್ತದೆ. ಬಾಲ್ಯವು ಸ್ವಸ್ಥ ರೂಪವಾಗದೆ ಅವನಲ್ಲಿ ತಳಮಳ, ಕೀಳರಿಮೆ ಅಪನಂಬಿಕೆಗಳನ್ನು ಬಿತ್ತುತ್ತದೆ.

ಮೊದಲನೆಯ ಘಟನೆಯಲ್ಲಿ ನಚಿಕೇತನು ಓರ್ವ ತಂದೆ ಅದೂ ತನ್ನ ತಂದೆಯ ಗೆಳೆಯ, ತನ್ನ ಗೆಳತಿಯೂ ಅಲ್ಲದೆ ಅವನದೇ ಮಗಳಾದವಳ ಮೇಲೆ ತನ್ನ ಕಣ್ಣ ಮುಂದೆಯೇ ಅತ್ಯಾಚಾರವೆಸಗಿ ಕೊಲ್ಲುವ ದೃಶ್ಯ ಜರುಗಿ ತಾನಲ್ಲಿ ಮೂಕಪ್ರೇಕ್ಷಕನಾಗಿ ನಿಲ್ಲುತ್ತಾನೆ!. ಎರಡನೆಯ ಘಟನೆಯಲ್ಲಿ ತನ್ನ ನೆರೆಯ ಆಂಟಿಯ ಅಸಭ್ಯ ವರ್ತನೆ!, ಹೆಣ್ಣಿನ ಬಾಹ್ಯ ಚಿತ್ರ ನಚಿಕೇತನಲ್ಲಿ ಆಳವಾದ ಕದಡುವಿಕೆಗೆ ಕಾರಣವಾದರೆ.. ಆಕೆಯ ನಡೆಯೂ ಒಂದು ಬಗೆಯಲ್ಲಿ ಅವನ ವಿಹ್ವಲ ವಿರೂಪ ಸ್ಥಿತಿಗೆ ಕಾರಣವಾಗುತ್ತದೆ. ಹೀಗೆ ಕಂಡ ಪ್ರತೀ ಸನ್ನಿವೇಶಗಳನ್ನು ತಾಳೆ ಹಾಕುತ್ತಾ ಬೆಳೆಯುತ್ತಿದ್ದವನಲ್ಲಿ ಕಾಸನೋವ ಹುಟ್ಟಿಕೊಳ್ಳುತ್ತಾನೆ, ಪ್ರೌಢಾವಸ್ಥೆಗೆ ಜಾರಿದಾಗ ಸಮಾಜದ ಮೇಲಿನ ದ್ವೇಷದಲ್ಲಿ ಕೆಡುಕಿನ ವಿರುದ್ಧ ತಾನು ಕಂಡ ದೌರ್ಜನ್ಯಗಳ ವಿರುದ್ಧ ಸೇಡುತೀರಿಸಿಕೊಳ್ಳಲು ಅವನು ಆಯ್ಕೆ ಮಾಡುವುದೇ ಹೆಣ್ಣನ್ನು!!.
ಹೆಣ್ಣನ್ನು ತಾನಾಗಿ ಸೆಳೆಯುವ ಅನಿವಾರ್ಯ ಇಲ್ಲವೆನ್ನುವಂತೆ ಹೆಣ್ಣುಗಳು ನಚಿಕೇತನ ಆಕರ್ಷಣೆಗೆ ಜಾರುತ್ತಾ ಸಾಗುವುದು ವಿಪರ್ಯಾಸ. ಸಿಂಧೂರಿ, ಸುಹಾಸಿನಿ, ಸಂಭ್ರಮ, ಸಮಕ್ಷಮ, ಕಲ್ಪಕಂ, ಕೀರ್ತನ, ಸಲೀನ ಎಂಬ ಹೆಣ್ಣುಮಕ್ಕಳು ಹೀಗೆ ನಚೀಕೇತನ ಬಾಳಿನ ಪುಟಗಳಲ್ಲಿ ಬರುತ್ತಾರೆ. ಸಿಂಧೂರಿಯ ಮೇಲಿನ ಸೆಳೆತದಲ್ಲಿ ಬಿದ್ದ ನಚಿಕೇತ, ಸಿಂಧೂರಿ ತನ್ನ ಗೆಳೆಯ ವೀರನನ್ನು ಪ್ರೇಮಿಸುತ್ತಾಳೆ ಎಂದು ತಿಳಿದಾಗ ವಿಕಾರನಾಗುತ್ತಾನೆಯಾದರೂ ತನ್ನ ಆಪ್ತ ಸ್ನೇಹಿತನಿಗಾಗಿ ಸಿಂಧೂರಿಯ ವಿಚಾರದಲ್ಲಿ ತನ್ನನೆ ತಡೆದು ಹಿಡಿಯುತ್ತಾನೆ. ನಚಿಕೇತ ಹುಡುಗಿಯರನ್ನು ಸೆಳೆದರೂ ಅವರಿಗೆ ಕೆಡುಕು ಬಯಸುವುದಿಲ್ಲ ಎಂಬುದು ಅವನಲ್ಲಿನ ಧನಾತ್ಮಕ ಅಂಶವನ್ನು ತೋರುತ್ತದೆ. ಆದಾಗ್ಯೂ ಹುಡುಗಿಯ ವಿಚಾರದಲ್ಲಿ, ಸಮಾಜದ ವಿಚಾರದಲ್ಲಿ ನಚಿಕೇತನ ಧೋರಣೆ ಸರಿಯಾದುದಲ್ಲವೆಂದು ಮನಗಂಡ ಸ್ನೇಹಿತ ವೀರ ತನ್ನ ಬಾಲ್ಯಗೆಳತಿ, ಅಮ್ಮನ ಸಮನಾದ ಸ್ನೇಹಿತೆ ಸಲೀನಾಳನ್ನು ಅವನಿಗೆ ಪರಿಚಯಿಸಲು ಮುಂದಾಗುತ್ತಾನೆ.
ಮನಃಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡಿದ ಸಲೀನಾಳಲ್ಲಿ ಗೆಳೆಯನನ್ನು ಸರಿಪಡಿಸೆಂದು ಕೋರಿಕೊಂಡ ನಂತರ ಸಲೀನ ನಚಿಕೇತನಿಗೆ ತಾನು ಅವನಿಗೆ ಒಲಿಯಬೇಕೆಂದರೆ ಒಂದು ಕಾರ್ಯ ಮಾಡಬೇಕೆಂದು ಅವನಿಂದ ಸಂಕಲ್ಪ ಮಾಡಿಸಿಕೊಳ್ಳುತ್ತಾಳೆ. ನಚಿಕೇತ ಸಲೀನಾಳನ್ನು ಒಲಿಸಿಕೊಳ್ಳಲು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾ ಕಾಸಾನೋವಾ ವ್ಯಕ್ತಿತ್ವದಿಂದ ವಿಮುಕ್ತಿ ಹೊಂದುವನೆ!? ಎಂಬ ಪ್ರಶ್ನೆ ಓದುತ್ತಾ ಸಾಗಿದಂತೆ ಕಾಡುತ್ತದೆಯಾದರೆ.. ಅಲ್ಲಿಯೇ ಲೇಖಕಕರು ಸೊಗಸಾದ ತಿರುವನ್ನು ನೀಡಿರುವುದು!.
ನಚಿಕೇತ ಒಲಿಸಿಕೊಂಡ ಹೆಣ್ಣುಮಕ್ಕಳು (ಸಿಂಧೂರಿಯ ಹೊರತು!) ಬೇರೊಬ್ಬ ಹೊಸ ಹುಡುಗನ ಪರಿಚಯದೊಂದಿಗೆ ಬೆಸೆಯಲ್ಪಡುತ್ತಾ ಸಾಗುವಾಗ ನಚಿಕೇತ ಸಹಿಸದಾಗುತ್ತಾನೆ!. ಕಾಸನೋವಾ ವ್ಯಕ್ತಿತ್ವವೇ ಹಾಗಿರುತ್ತದೆ, ಹುಡುಗಿಯರ ನಿರ್ಧಾರದ ಮೇಲಿನ ಹಿಡಿತ ಸಾಧನೆಗೆ ತುಡಿಯುತ್ತಾನೆ ನಚಿ, ಅದೇ ಸಮಯ ಆ ಹುಡುಗಿಯರು ಆಯ್ದುಕೊಂಡ ಹುಡುಗ ಚಾರುದತ್ತನೇ ಎಂಬುದನ್ನು ಮನಗಾಣಲು ಸ್ವಲ್ಪ ಸಮಯವೇ ಹಿಡಿಯುತ್ತದೆ.
ಚಾರುದತ್ತನ ಸಂಪೂರ್ಣ ಪಾತ್ರ ಪರಿಚಯ ಎರಡನೇ ಅಧ್ಯಾಯದಿಂದ ಆರಂಭವಾಗುತ್ತದೆಯಾದರೂ ವೀರ ಮೊದಲನೇ ಅಧ್ಯಾಯದಿಂದಲೂ ಚಾರುದತ್ತನ ಬಗೆಗೆ ಸೂಕ್ಷ್ಮವಾಗಿ
ತಿಳಿಸುತ್ತಲೇ ಬಂದಿರುತ್ತಾನೆ. ನಚಿಕೇತ ಒಲಿಸಿಕೊಂಡ ಹುಡುಗಿಯರನ್ನೆಲ್ಲಾ ಓಲೈಸಿಕೊಂಡು ಪ್ರೇಮ ಎಂಬ ಬಲೆಬೀಸಿ ಎಲ್ಲರನ್ನು ಕೊಲ್ಲುವ ಮೂಲಕ ನಚಿಕೇತನ ಮೇಲಿನ ಸೇಡನ್ನು ಚಾರುದತ್ತ ತೀರಿಸಿಕೊಳ್ಳುತ್ತಾನೆ!. ಇದಕ್ಕೆ ಕಾರಣವಾಗುವುದು ಒಂದು ಕೊಲೆ!. ತನ್ನವರನ್ನು ಕೊಂದ ಹೆಂಗಸನ್ನು ಚಾರುದತ್ತ ಕೊಂದು ಬಿಡುತ್ತಾನೆ. ಅಲ್ಲದೇ ಆಕೆಯ ಮಗ ನಚಿಕೇತನ ಎಂಬ ತಪ್ಪು ತಿಳುವಳಿಕೆಯಿಂದ ಆತನನ್ನು ಮತ್ತು ಆತನ ಪ್ರೇಮದ ಬಲೆಯಲ್ಲಿ ಬಿದ್ದ ಹೆಣ್ಣುಮಕ್ಕಳನ್ನು ಕೊಲ್ಲುವ ಹುನ್ನಾರದಲ್ಲಿ ಬೀಳುತ್ತಾನೆ ಚಾರುದತ್ತ. ಆದರೆ ತನ್ನ ತಪ್ಪುಗ್ರಹಿಕೆಯಿಂದ ತನ್ನ ಬಾಲ್ಯವನ್ನು ದ್ವೇಷದಿಂದಲೇ ತುಂಬಿಕೊಂಡು ಬೆಳೆದೆನೆಂದು ಆತನಿಗರಿವಾಗುವ ಮುನ್ನವೇ ಆತನೊಳಗೆ ಕಾಸನೋವ ಹುಟ್ಟಿಯಾಗಿರುತ್ತದೆ!. ಹೀಗೆ ಎರಡು ಪಾತ್ರಗಳ ವ್ಯಕ್ತಿತ್ವ ಒಂದೇ ಆಗಿ ನಚಿಕೇತ ಸಲೀನಾಳಿಗಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಿದರೆ, ಅದೇ ಸಲೀನಾಳನ್ನು ಪ್ರೇಮಿಸಿದ್ದ ಚಾರುದತ್ತ ಆಕೆಯನ್ನು ಕೊಲ್ಲುತ್ತಾನೆ ನಚಿಕೇತನ ಮೇಲಿನ ಹಗೆ ಸಾಧಿಸಲು!.
ತಿಳಿಸುತ್ತಲೇ ಬಂದಿರುತ್ತಾನೆ. ನಚಿಕೇತ ಒಲಿಸಿಕೊಂಡ ಹುಡುಗಿಯರನ್ನೆಲ್ಲಾ ಓಲೈಸಿಕೊಂಡು ಪ್ರೇಮ ಎಂಬ ಬಲೆಬೀಸಿ ಎಲ್ಲರನ್ನು ಕೊಲ್ಲುವ ಮೂಲಕ ನಚಿಕೇತನ ಮೇಲಿನ ಸೇಡನ್ನು ಚಾರುದತ್ತ ತೀರಿಸಿಕೊಳ್ಳುತ್ತಾನೆ!. ಇದಕ್ಕೆ ಕಾರಣವಾಗುವುದು ಒಂದು ಕೊಲೆ!. ತನ್ನವರನ್ನು ಕೊಂದ ಹೆಂಗಸನ್ನು ಚಾರುದತ್ತ ಕೊಂದು ಬಿಡುತ್ತಾನೆ. ಅಲ್ಲದೇ ಆಕೆಯ ಮಗ ನಚಿಕೇತನ ಎಂಬ ತಪ್ಪು ತಿಳುವಳಿಕೆಯಿಂದ ಆತನನ್ನು ಮತ್ತು ಆತನ ಪ್ರೇಮದ ಬಲೆಯಲ್ಲಿ ಬಿದ್ದ ಹೆಣ್ಣುಮಕ್ಕಳನ್ನು ಕೊಲ್ಲುವ ಹುನ್ನಾರದಲ್ಲಿ ಬೀಳುತ್ತಾನೆ ಚಾರುದತ್ತ. ಆದರೆ ತನ್ನ ತಪ್ಪುಗ್ರಹಿಕೆಯಿಂದ ತನ್ನ ಬಾಲ್ಯವನ್ನು ದ್ವೇಷದಿಂದಲೇ ತುಂಬಿಕೊಂಡು ಬೆಳೆದೆನೆಂದು ಆತನಿಗರಿವಾಗುವ ಮುನ್ನವೇ ಆತನೊಳಗೆ ಕಾಸನೋವ ಹುಟ್ಟಿಯಾಗಿರುತ್ತದೆ!. ಹೀಗೆ ಎರಡು ಪಾತ್ರಗಳ ವ್ಯಕ್ತಿತ್ವ ಒಂದೇ ಆಗಿ ನಚಿಕೇತ ಸಲೀನಾಳಿಗಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಿದರೆ, ಅದೇ ಸಲೀನಾಳನ್ನು ಪ್ರೇಮಿಸಿದ್ದ ಚಾರುದತ್ತ ಆಕೆಯನ್ನು ಕೊಲ್ಲುತ್ತಾನೆ ನಚಿಕೇತನ ಮೇಲಿನ ಹಗೆ ಸಾಧಿಸಲು!.

ಕಾಸನೋವ ಕಾದಂಬರಿ ಲೇಖಕ ಮನೋಜ್ ಪಿ.ಎಂ
ಸಲೀನಾಳ ಕೊಲೆಯನಂತರ ನಚಿಕೇತನೊಳಗಿದ್ದ ಕಾಸನೋವ ವ್ಯಕ್ತಿತ್ವ ನಾಶವಾಗುವ ಸನ್ನಿವೇಶದಲ್ಲಿ ಚಾರುದತ್ತನಿಂದ ತನಗೆ ಸಾವು ಸಂಭವಿಸುತ್ತದೆ ಎಂದು ತಿಳಿದೂ ತಾನಾಗಿಯೆ ನಚಿಕೇತ ಅವನಿಗೆ ಶರಣಾಗುತ್ತಾನೆ!! ಚಾರುದತ್ತನೊಳಗಿನ ಕಾಸನೋವನಿಗೆ ಅದೊಂದು ಅನುಭವಿಸಲಾಗದ ಪೆಟ್ಟಾಗುತ್ತದೆ!. ಅಲ್ಲಿ ಮತ್ತೊಂದು ಕಾಸನೋವಾ ವ್ಯಕ್ತಿತ್ವ ಅಲ್ಲಿಗೆ ಹತವಾಗುತ್ತದೆಯೆ!?.
ಎರಡು ಪಾತ್ರದ ವ್ಯಕ್ತಿತ್ವದ ಅದಲು – ಬದಲು ಮಾಡಿ ಕಾಸನೋವನನ್ನು ಧನ ಮತ್ತು ಋಣ ಅಂಶಗಳಾಗಿ ತುಂಬಿ ನಚಿಕೇತನೆಂಬ ಕಾಸನೋವ ವ್ಯಕ್ತಿತ್ವ ತನಗೆ ಕೆಡುಕುಬಯಸಿದವರಿಗೆ ಮಾತ್ರ ಕೆಡುಕು ಬಯಸುವವನೆಂದೂ ಅಥವಾ ದುರುಳರ ಮೇಲಿನ ಹಗೆ ಮಾತ್ರ ಸಾಧಿಸುವನೆಂದೂ ಅವನ ಸಮಾಜಮುಖಿ ಚಿಂತನೆಗಳಿಂದ ಅವನಲ್ಲಿಯೂ ಒಳಿತು ಇತ್ತೆಂದು ಸಾಬೀತು ಮಾಡುವ ಚಾಕಚಕ್ಯತೆಗೆ ಲೇಖಕರ ಬರಹವು ಸಾಕ್ಷಿಯಾಗಿದೆ. ಲೇಖಕರ ಕೌಶಲವನ್ನು ಇಲ್ಲಿ ಮೆಚ್ಚಲೇಬೇಕು ಗೂಡುಬಿಟ್ಟು ಗೂಡಿಗೆ ಸಾಗುವ ಮಂತ್ರ – ತಂತ್ರ ವಿದ್ಯೆಯಂತೆ ಕಾಸನೋವ ನಚಿಕೇತನಿಂದ ಚಾರುದತ್ತನಲ್ಲಿ ಸಾಗಿದನೊ?? ಎಂಬ ಗೊಂದಲವೂ ಆಗುವುದು ಸಹ. ಹಾಗಾಗಿ ನಚಿಕೇತ ಮತ್ತು ಚಾರುದತ್ತರಲ್ಲಿ ಕಾಸನೋವ ವ್ಯಕ್ತಿತ್ವದ ಹುಟ್ಟಿಗೆ ಸರಿಯಾದ ಕಾರಣವೇನು? ಮತ್ತು ಅದರ ಬೆಳವಣಿಗೆ, ವೀರ ಮತ್ತು ಸಿಂಧೂರಿಯ ಸಹಾಯದಿಂದ ಚಾರುದತ್ತ ಪಾರಾಗುತ್ತಾನೆಯೆ!? ಸಲೀನಾಳ ಮರಣ ಕಾದಂಬರಿಯ ಓಘಕ್ಕೆ ಸೂಕ್ತವೇ!?, ನಚಿಕೇತನ ಮರಣದ ನಂತರ ಚಾರುದತ್ತ ಏನು ಮಾಡುತ್ತಾನೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕಾದಂಬರಿಯನ್ನು ಓದಿಯೇ ತಿಳಿಯಬೇಕು.
ಒಂದು ಅದ್ಭುತ, ಉತ್ಕೃಷ್ಟ ರೋಚಕ ಕಾದಂಬರಿಯೆಂದೇ ಹೇಳಬೇಕು. ಮನೋವೈಜ್ಞಾನಿಕವಾಗಿ ಹೆಣೆದಿರುವ ಈ ಕಾದಂಬರಿ ಕೈಗೆತ್ತಿಕೊಂಡಂತೆ ಓದಿಸಿಕೊಂಡು ಹೋಗುವುದಲ್ಲದೆ ಪಾತ್ರಪೋಷಣೆ, ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟಿದ ಹಾಗಿನ ವಿವರಣೆಗಳು ಬಹಳ ಸೊಗಸಾಗಿ ಹೆಣೆಯಲ್ಪಟ್ಟ ಜೇಡರ ಬಲೆಯ ಕಸೂತಿಯಂತೆ ಕಾಣುತ್ತದೆ. ಓದಿನ ಆರಂಭದಲ್ಲಿ (ಹಲವರಿಗೆ) ಸಹ್ಯವೆನಿಸದ ಸನ್ನಿವೇಶಗಳನ್ನಷ್ಟೇ ತಾಳೆಹಾಕಿ ಮುಂದಿನ ಓದಿನ ಮನಸ್ಥಿತಿಗೆ ಭಂಗ ತಂದುಕೊಳ್ಳದೆ ಓದಿದಲ್ಲಿ ನಿಜಕ್ಕೂ ಇದೊಂದು ಅದ್ಭುತ ಪಯಣ ಅನ್ನಿಸುವುದರಲ್ಲಿ ಎರಡು ಮಾತಿಲ್ಲ!. ಭಾಷಾಬಳಕೆ, ವಾಕ್ಯರಚನೆ, ಬರಹದ ಶೈಲಿ ಎಲ್ಲವೂ ನಿಪುಣ ಬರಹಗಾರರನ್ನು ಸೂಚಿಸುವಂತಿದೆ! ಆದರೆ ಮನೋಜ್ ಅವರದ್ದು ಇದು ಮೊದಲನೇ ಕಾದಂಬರಿ ಎಂಬುದು ಸೋಜಿಗ ನನಗೆ!. ಕಾಸನೋವ ಮತ್ತಷ್ಟು ಓದುಗ ಮನಗಳಿಗೆ ತಲುಪಬೇಕು!, ಇದರ ಆಸ್ವಾದನೆ ಮತ್ತಷ್ಟಾಗಬೇಕು!, ಮನೋಜ್ ಅವರ ಬರಹಗಳ ಧಾರ್ಷ್ಟ್ಯ ಅದರಲ್ಲಿನ ಸತ್ವ ಮತ್ತಷ್ಟು ಎಲ್ಲೆಡೆ ಪಸರಿಸಬೇಕು ಎಂಬುದು ನನ್ನ ಆಶಯ. ಓದದವರು ಕೊಂಡು ಓದಿ, ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಂಡು ಉತ್ತಮ ಬರಹಗಳನ್ನು ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇನೆ. ಮತ್ತೊಮ್ಮೆ ಶುಭವಾಗಲಿ ಮನೂ
- ಭಾಗ್ಯ.ಕೆ.ಯು, ಗೃಹಿಣಿ, ಹವ್ಯಾಸಿ ಬರಹಗಾರ್ತಿ, ಬೆಂಗಳೂರು
