ಕವಿತೆಯ ನಡಿಗೆ ತಿಳಿದಿಲ್ಲ ಕವಿಗೆ ಖುದ್ದು ಕವಿತೆ ಮುಟ್ಟುವ ಗಮ್ಯ…ಕವಿ ಜಬೀವುಲ್ಲಾ ಎಂ. ಅಸದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮೌನದ ಬಲೆಯಲಿ ಸಿಕ್ಕಿ ಹಾಕಿಕೊಂಡ ಕವಿತೆ
ನುಡಿದಿತು ಹೇಗೆ?
ನೋವನೆ ನುಂಗಿ ಬಿಕ್ಕುವ ಭಾವ ಸಂಹಿತೆ
ನಕ್ಕಿತು ಹೇಗೆ?
ಕಾಣದ ದಾರಿಯ ಅಲೆಮಾರಿ ಸಂಚಾರಿ
ಬಯಲಲ್ಲಿ ಗೆರೆ ಎಳೆದಂತೆ ಹರಿದು
ಕಾಣದಾಗುವ ನದಿಯ ಪರಿ
ಕವಿತೆಯ ಚಲನೆಯ ವೈಖರಿ
ಹೊಳೆಯಿತು, ಉಳಿಯಲಿಲ್ಲ
ಮರೆವಿನ ಬೇಲಿ ದಾಟಿ ಬಲಿ
ಸುಪ್ತವಾಗಿ ಎಲ್ಲೊ ಕತ್ತಲೆ ಬೆಳಕಿನ ನಡುವೆ
ಮತ್ತೆ ಹುಟ್ಟಿ, ಬೆಳೆದು
ಕಾಡುವುದು ಮುಗುಮ್ಮಾಗಿ
ಅಳಿವು ಉಳಿವಿನ ಯಕ್ಷಪ್ರಶ್ನೆ
ಉತ್ತರವೆ ಸಿಗದಾಗಿ
ಬಿಳಿ ಹಾಳೆಯ ಹೃದಯದ ಮೇಲೆ
ಕವಿ ಬಿತ್ತ ಅಕ್ಷರಗಳು
ಮೊಳೆಯಬಹುದು ಇಂದಿಲ್ಲದಿರೆ ನಾಳೆ
ಬದುಕೇ ಭರವಸೆಯಿಲ್ಲದ ನಾವೆ
ಇಹದ ಕಡಲ ನಡುವೆ ಮುಳುಗಬಹುದು
ಮುಳುಗಿ ತೇಲಿ ಮತ್ತೆ ದಡ ಅರಸಬಹುದು
ಅಲ್ಲವೇ?
ಬಯಸಿದ್ದು ಸಿಗುವ ನಂಬಿಕೆಯೆ ಗೌಣ
ಕತ್ತಲಲ್ಲಿ ಕುರುಡ ಹಿಡಿದ ಕಂದಿಲು
ದಾರಿಯ ಅಡಿಗಡಿಗೆ ಬೆಳಕ ಹನಿಸುತ್ತ ಸಾಗಿದಂತೆ ಥೇಟು
ಕವಿತೆಯ ನಡಿಗೆ
ತಿಳಿದಿಲ್ಲ ಕವಿಗೆ ಖುದ್ದು
ಕವಿತೆ ಮುಟ್ಟುವ ಗಮ್ಯ
ಸುಮ್ಮನಿರಲಾಗದೆ ಚಡಪಡಿಸಿ ಬಿಮ್ಮನೆ
ಮನದ ಅಂಗಳದಿ
ಮಗು ಹರವಿದ ಆಟಿಕೆಗಳ ತೆರದಿ
ಹೆಕ್ಕುವನು ಬೇನಾಮಿ ಭಾವಗಳ ಒಟ್ಟುಗೂಡಿಸಿ
ಕೂಡಿ ಕಳೆದು ಭಾಗಿಸಿ
ಮೌನದ ಅಮೂರ್ತ ದಾರದಿ ಹೂಮಾಲೆಯೋಪದಿ
ಪದಗಳ ಪೋಣಿಸಿ, ಗಟ್ಟಿಯಾಗಿ ಕಟ್ಟಿ
ಕನಸು ಕಲ್ಪನೆಗಳ ಅತ್ತರ್ ಸಿಂಪಡಿಸಿ
ಚಂದದ ಪದ್ಯವಾಗಿಸಿ
ಹೀಗೆ……………………….
ಲೋಕದ ಕಣ್ಣಿಗೆ ತೆರೆದಿಟ್ಟು
ತಾನು ಬಯಲಾಗಿ
ಹೊರಡುವನು
ಕವಿತೆಯ ಜಾಡು ಹಿಡಿದು
ಮತ್ತೆ… ಮತ್ತೆ… ಮತ್ತೆ…. ಏಕಾಂತವರಸಿ
- ಕಲಾಕೃತಿ ಮತ್ತು ಕವಿತೆ : ಜಬೀವುಲ್ಲಾ ಎಂ. ಅಸದ್
