ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬ ಸ್ತ್ರೀಯು ಶಿಕ್ಷಿತರಾಗಬೇಕು. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ.ಮಹಿಳೆಯರು ತಮ್ಮ ನಿರ್ಧಾರ, ಬೇಕು ಬೇಡಗಳನ್ನು ತಾವೇ ಸ್ವತಂತ್ರವಾಗಿ ತೆಗೆದುಕೊಳ್ಳುವ ದೃಢತೆಯನ್ನು ಮೈಗೂಡಿಸಿಕೊಳ್ಳಬೇಕು – ಚೇತನ ಭಾರ್ಗವ, ತಪ್ಪದೆ ಮುಂದೆ ಓದಿ…
ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾಃ ।
ಯತ್ರೈತಾಸ್ತು ನ ಪೂಜ್ಯನ್ತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ
ಅಂದರೆ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ.ಆದ್ದರಿಂದ ಹೆಣ್ಣಿಗೆ ಸಲ್ಲಬೇಕಾದ ಸ್ವಾತಂತ್ರ್ಯ ಮತ್ತು ಗೌರವಗಳನ್ನು ನೀಡಬೇಕು. ಈಗಿನ ಡಿಜಿಟಲ್ ಯುಗದಲ್ಲಿಯೂ ಕೂಡ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಬಹಳ ವಿಷಾದನೀಯ.
ಗಂಡು ಮತ್ತು ಹೆಣ್ಣು ಸಮಾಜದ ಎರಡು ಕಣ್ಣುಗಳಿದ್ದಂತೆ. ಇವರಿಬ್ಬರೂ ಒಬ್ಬರಿಗೊಬ್ಬರು ಪೂರಕವಾಗಿರಬೇಕು ಆಗ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ. ಗಂಡು ಮತ್ತು ಹೆಣ್ಣು ಇಬ್ಬರೂ ಇಲ್ಲಿ ಸಮಾನರು ಯಾರೂ ಹೆಚ್ಚಲ್ಲ ಕಡಿಮೆಯೂ ಅಲ್ಲ.ಸ್ತ್ರೀ ಸ್ವಾತಂತ್ರ್ಯವೆಂದರೆ ಪುರುಷ ಸಮುದಾಯದ ವಿರುದ್ಧ ಹೋರಾಟ ಮಾಡುವುದು ಎಂಬುದು ತಪ್ಪು ಕಲ್ಪನೆ.
ಹಿಂದೆ ಹೆಣ್ಣು ಮಕ್ಕಳು ನಾಲ್ಕು ಗೋಡೆಯ ಮಧ್ಯವೇ ಇರಬೇಕಿತ್ತು.ಅವರಿಗೆ ವಿದ್ಯಾಭ್ಯಾಸಕ್ಕಾಗಲಿ ಬೇರೆ ಯಾವುದೇ ಸಾಂಸ್ಕೃತಿಕ ಚಟುವಟಿಕೆಯ ಕಲಿಕೆಗಾಗಲಿ
ಅವಕಾಶವಿರುತ್ತಿರಲಿಲ್ಲ.
ಅವಳು ಮನೆಯಲ್ಲಿಯೇ ಬಂಧಿಯಾಗಿರಬೇಕಿತ್ತು.ಸಂಗೀತ ನೃತ್ಯದಲ್ಲಿ ಆಸಕ್ತಿ ಇದ್ದರೂ ಜನ್ಮಜಾತವಾಗಿ ಆ ಕಲೆ ಸಿದ್ಧಿಸಿದ್ದರೂ ಅದರಲ್ಲಿ ಪರಿಣಿತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಅವಳು ಮನೆಗೆ ಮಾತ್ರ ಸೀಮಿತವಾಗಿದ್ದಳು.ಗಂಡ ಮಕ್ಕಳು ಮನೆಗೆ ಬಂದ ಅತಿಥಿಗಳ ಸತ್ಕಾರ ಇಷ್ಟೇ ಅವಳ ಪ್ರಪಂಚವಾಗಿರುತ್ತಿತ್ತು. ಆಕೆ ಮನೆಯಲ್ಲಿ ಗುಲಾಮರ ರೀತಿಯಲ್ಲಿ ಕೆಲಸ ಮಾಡುತ್ತಾ ಇರಬೇಕಿತ್ತು.ಅವಳಿಲ್ಲದಿದ್ದರೆ ಮನೆಯಲ್ಲಿ ಯಾವ ಕೆಲಸವೂ ಆಗುತ್ತಿರಲಿಲ್ಲ. ಆದರೆ ಅವಳಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಮಾತ್ರ ಸಿಗುತ್ತಿರಲಿಲ್ಲ.ಮನೆಯಿಂದ ಹೊರಗೆ ಹೋಗಬೇಕಾದರೂ ಪತಿಯ ಅಥವಾ ಮನೆಯ ಹಿರಿಯವರ ಒಪ್ಪಿಗೆ ಬೇಕಾಗಿರುತ್ತಿತ್ತು. ಹೆಣ್ಣು ಮಕ್ಕಳಿಗೆ ಸೈಕಲ್ ಹೊಡೆಯುವ ಸ್ವತಂತ್ರವೂ ಇರುತ್ತಿರಲಿಲ್ಲ. ಒಂದು ವೇಳೆ ಹುಡುಗಿಯೊಬ್ಬಳು ಸೈಕಲ್ ಕಲಿತು ಹೊಡೆಯಲು ಆರಂಭಿಸಿದರೆ ಅವಳಿಗೆ ನೋಡಿದವರೆಲ್ಲಾ ಬಜಾರಿಯ ಹಣೆಪಟ್ಟಿ ಕಟ್ಟಿ ಅಪಹಾಸ್ಯ ಮಾಡಿ ಅವಳನ್ನು ಗದರುತ್ತಿದ್ದರು.ಅವಳಿಗೆ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡುವ ಸ್ವತಂತ್ರವೂ ಇರಲಿಲ್ಲ. ಅವಳು ಹೊಂದಾಣಿಕೆ ಎಂಬ ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಯುವವರೆಗೂ ಕುಂಟ ಅಥವಾ ಕುರುಡನಾದರೂ ಅವನೊಂದಿಗೆ ಬಾಳಬೇಕಾಗಿತ್ತು. ಹೆಣ್ಣು ಧ್ವನಿ ಏರಿಸಿ ಮಾತನಾಡುವ ಹಾಗೂ ಇರಲಿಲ್ಲ.

ಫೋಟೋಕೃಪೆ : google
ಆದರೆ ಈಗ ಕಾಲ ಬದಲಾಗಿದೆ. ಅವಳು ನಾಲ್ಕು ಗೋಡೆಯ ಮಧ್ಯೆಯೇ ಬಂಧಿ ಆಗಿರುವ ಪರಿಸ್ಥಿತಿ ಈಗ ಇಲ್ಲ. ಆಕೆ ಇಚ್ಚಿಸುವಷ್ಟು ವಿದ್ಯಾಭ್ಯಾಸವನ್ನು ಮಾಡಬಹುದು.ಅದು ಅವಳ ಮೂಲಭೂತ ಹಕ್ಕು ಕೂಡ ಹೌದು. ಇಂದಿನ ಮಹಿಳೆಯರು ಮನೆ ಮತ್ತು ಮನೆಯ ಹೊರಗೂ ದುಡಿಯುತ್ತಾರೆ.ಪುರುಷರಿಗೆ ಸಮನಾಗಿ ಕೆಲವು ವೇಳೆ ಅವರಿಗಿಂತ ಒಂದು ಕೈ ಮೇಲೆಯೇ ಜವಾಬ್ದಾರಿಯನ್ನು ತೆಗೆದುಕೊಂಡು ನಿಭಾಯಿಸುತ್ತಿದ್ದಾರೆ.ಆಕೆ ಸೈಕಲ್ ನಿಂದ ಹಿಡಿದು ವಿಮಾನವನ್ನು ಚಲಾಯಿಸುವಷ್ಟು ಶಕ್ತಳಾಗಿದ್ದಾಳೆ. ಆದರೂ ಹೆಣ್ಣು ಅಂದರೆ ಒಂದು ತೆರನಾದ ಅಸಡ್ಡೆ ಮಾತ್ರ ಕಡಿಮೆಯಾಗಿಲ್ಲ.ಅವಳಿಗೆ ಸಿಗಬೇಕಾದ ಸ್ವಾತಂತ್ರವು ಸಿಗುತ್ತಿಲ್ಲ.
ಹೆಣ್ಣು ಎಷ್ಟು ಚೆನ್ನಾಗಿ ಓದಿಕೊಂಡಿದ್ದರೂ ಸಹ ಅವಳು ಉದ್ಯೋಗಕ್ಕೆ ಹೋಗುವುದೋ ಬೇಡವೋ ಎಂಬ ನಿರ್ಧಾರ ಬಹಳ ಸಲ ಆಕೆಯ ಪತಿಯ ಹಾಗೂ ಮನೆಯವರ ಮೇಲೆ ಅವಲಂಬಿತವಾಗಿರುತ್ತದೆ. ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ತನ್ನ ಪರಿವಾರದ ಹಿತದೃಷ್ಟಿಯಿಂದ ಮನೆಯಲ್ಲಿಯೇ ಗೃಹಿಣಿಯಾಗಿದ್ದರೆ ಹೊರಗಡೆ ದುಡಿಯುವವರ ಕಷ್ಟ ನಿನಗೇನು ಗೊತ್ತು ಎಂಬ ಧೋರಣೆ ಕಮ್ಮಿ ಆಗಿಲ್ಲ. ಈಕೆ ಬೆಳಗ್ಗೆಯಿಂದ ರಾತ್ರಿಯವರೆಗೆ ದುಡಿದರೂ ಅದು ಗಣನೆಗೆ ಬರುವುದಿಲ್ಲ.ಆಕೆಯ ಮನಸ್ಸಿಗೆ ಹಾಗೂ ಭಾವನೆಗಳಿಗೆ ಇಂದಿಗೂ ಸರಿಯಾದ ಬೆಲೆ ಸಿಕ್ಕುತ್ತಿಲ್ಲ.
ಹೆಣ್ಣನ್ನು ಶಕ್ತಿ, ಜನನಿ, ಮೂಲ ಸ್ವರೂಪಿಣಿ ಹೀಗೆ ಬಗೆ ಬಗೆಯಾಗಿ ವರ್ಣಿಸಿದರೂ ಹೆಣ್ಣು ಮಗುವೊಂದು ಜನಿಸಿದಾಗ ಅಯ್ಯೋ ಹೆಣ್ಣು ಮಗುವಾ ಎಂಬ ರಾಗವನ್ನು ಎಳೆಯುವುದು ಮಾತ್ರ ನಮ್ಮ ಸಮಾಜ ಬಿಟ್ಟಿಲ್ಲ. ಇನ್ನೂ ಹೆಣ್ಣು ಮಕ್ಕಳಿಗೆ ಸ್ವತಂತ್ರವನ್ನು ಕೊಟ್ಟಾಗ ಅವರು ಅದನ್ನು ದುರುಪಯೋಗ ಮಾಡಿಕೊಂಡರೆ ಅದು ಅವರ ತಂಗಿಯಂದಿರು ಹಾಗೂ ಅವರಿಗಿಂತ ವಯಸ್ಸಿನಲ್ಲಿ ಕಡಿಮೆ ಇರುವ ಹೆಣ್ಣು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾಲ ಬದಲಾದರೆ ಪ್ರಯೋಜನವಿಲ್ಲ,ಜನರ ಸಮಾಜದ ನೋಡುವ ದೃಷ್ಟಿ ಪರಿಕಲ್ಪನೆ ಬದಲಾಗಬೇಕು.
ಭ್ರೂಣ ಹತ್ಯೆ,ದೇವದಾಸಿ ಪದ್ಧತಿ,ವೇಶ್ಯಾವಾಟಿಕೆ, ಬಾಲ್ಯವಿವಾಹ,ಬಾಲಕಾರ್ಮಿಕ ಪದ್ಧತಿ,ಲೈಂಗಿಕ ಶೋಷಣೆ, ಇನ್ನಿತರ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳಿಂದ ಮುಕ್ತಗೊಳಿಸಿ ಸರಿಯಾದ ರೀತಿಯ ಶಿಕ್ಷಣ ಮಹಿಳೆಯರಿಗೆ ದೊರಕುವಂತಾದರೆ ಸ್ತ್ರೀ ಸ್ವಾತಂತ್ರ್ಯಕ್ಕೆ ನಿಜವಾದ ನ್ಯಾಯ ದಕ್ಕಂತೆ ಆಗುತ್ತದೆ.ಮಹಿಳೆಯರು ಯಾವುದೇ ಆತಂಕವಿಲ್ಲದೆ ನಿರ್ಭಯವಾಗಿ ನಡುರಾತ್ರಿಯಲ್ಲಿ ಒಡಾಡುವಂತಾಗಬೇಕು.

ಫೋಟೋಕೃಪೆ : google
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬ ಸ್ತ್ರೀಯು ಶಿಕ್ಷಿತರಾಗಬೇಕು. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ.ಮಹಿಳೆಯರು ತಮ್ಮ ನಿರ್ಧಾರ, ಬೇಕು ಬೇಡಗಳನ್ನು ತಾವೇ ಸ್ವತಂತ್ರವಾಗಿ ತೆಗೆದುಕೊಳ್ಳುವ ದೃಢತೆಯನ್ನು ಮೈಗೂಡಿಸಿಕೊಳ್ಳಬೇಕು.
ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರವಾಗಬಾರದು. ಉದಾಹರಣೆಗೆ ಮಹಿಳೆಯರು ಅರೆಬರೆ ಉಡುಗೆ ತೊಟ್ಟು ಅಪರಾತ್ರಿಯಲ್ಲಿ ಪಬ್ಬು ಬಾರುಗಳಲ್ಲಿ ಕಾಣಿಸಿಕೊಳ್ಳುವುದನ್ನು ಸ್ವಾತಂತ್ರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.
ಸ್ತ್ರೀಯು ಶಿಕ್ಷಿತಳಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳಲ್ಲಿ ಸಲಹೆ ನೀಡುವ, ದೌರ್ಜನ್ಯದ ವಿರುದ್ಧ ದ್ವನಿ ಎತ್ತುವ ಮುಕ್ತವಾತಾವರಣ,ಅಭಿವ್ಯಕ್ತಿ ಸ್ವಾತಂತ್ರ್ಯವು ಮಹಿಳೆಯರದ್ದಾಗಬೇಕು. ಆಗ ಸ್ತ್ರೀ ಯರಿಗೆ ಸ್ವಾತಂತ್ರ್ಯ ದೊರೆತಂತೆ ಆಗುತ್ತದೆ.
- ಚೇತನ ಭಾರ್ಗವ
