‘ಇನ್ನು ಕಾಯಿಸಬೇಡ ಕುದಿವ ನೀರು, ಕುದಿಕುದಿದು ಆವಿಯಾಗಿ ಹೋದಂತೆ ನೀ ಬರದಿರೆ ಬೇಗ’ …ಕವಿ ಡಾ.ಲಕ್ಷ್ಮಣ ಕೌಂಟೆ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಓದಿ…
ಕಾಯುತ್ತ ಕೂಡುವೆ ಹೀಗೆಯೇ
ನಿನ್ನ ಆಗಮನವ ನಿರೀಕ್ಷಿಸುತ..
ಹೊಳೆಯ ಆಚೆಯೇ ಇರುವೆಯೋ?
ಉಕ್ಕಿ ಹರಿವ ನದಿಯೊಂದಿಗೆ
ಸಮುದ್ರದಲ್ಲೇ ಸಂಗಮಗೊಂಡಿರುವೆಯೋ?
ಏನೇ ಆದರೂ ಮರಳಿ ಬರುವೆ ಎಂಬ
ನಂಬಿಕೆ ನನ್ನದು
ಕೂಡಿ ಬಾಳಿದವರು ನಾವಲ್ಲವೇ
ದೇಹ ಎರಡಾದರೂ
ಜೀವ ಒಂದಾಗಿ
ನೀನೇ ಪ್ರಾಣ, ನಾನೇ ಒಡಲು
ಜೀವ ಹೋದರೆ ದೇಹ ಉಳಿವುದೇ?
ಉಸಿರೆಳೆದುಕೊಳ್ಳುತ್ತಿರುವೆ ನಾನು
ಇನ್ನೂ ಎಂದರೆ
ನೀನು ಇರುವೆ ಜೀವಂತ ಎಲ್ಲೋ ಒಂದೆಡೆ..
ಆ ಭರವಸೆಯೇ ಎನ್ನ
ಎಳೆದು ತಂದಿರುವುದು ಇಲ್ಲಿಯವರೆಗೆ
ಮಳೆ ಬಂದರೆ ನೀ ನೆನೆಯದಿರಲೆಂದು
ಜೊತೆಗೆ ಕೊಡೆಯೂ ತಂದಿರುವೆ
ಹೊತ್ತು ಕಂತುವುದರೊಳಗೆ
ಬಂದುಬಿಡು ನೀ..
ಇನ್ನು ಕಾಯಿಸಬೇಡ
ಕುದಿವ ನೀರು
ಕುದಿಕುದಿದು ಆವಿಯಾಗಿ ಹೋದಂತೆ
ನೀ ಬರದಿರೆ ಬೇಗ
ನಾನು ಬೆಂದುಹೋಗುವೆ ನೋಡು
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
