ಅಪ್ಪ ಅಮ್ಮ ಸಾಕಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸಿರುತ್ತಾರೆ. ಅವರಿಗಾಗಿ ಏನಾದರೂ ಮಾಡುವ ಸೌಭಾಗ್ಯ ಮಕ್ಕಳಿಗೆ ಸಿಕ್ಕಾಗ ಮನಸ್ಸಿಗೆ ಆನಂದ, ಆ ಸಾರ್ಥಕ ಕ್ಷಣಗಳ ಬಗ್ಗೆ ಲೇಖಕಿ ವಸಂತ ಗಣೇಶ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
ಸುಮಾರು 20 ವರ್ಷಗಳ ಹಿಂದೆಯೇ ಕೋಣಾರ್ಕನ ಸೂರ್ಯ ದೇವಾಲಯದಿಂದ ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆಯವರೆಗೆ ಸಾಕಷ್ಟು ದೇವಾಲಯಗಳನ್ನು ಸಂದರ್ಶಿಸಿರುವರ ನಮ್ಮ ಅಪ್ಪ ಅಮ್ಮ ಇನ್ನೂ ನೋಡಬೇಕಾಗಿರುವ ದೇವಾಲಯಗಳ ಪಟ್ಟಿಯಲ್ಲಿ ಒಂದಿಷ್ಟು ದೇವಾಲಯಗಳು ಇವೆ. ಅವುಗಳಲ್ಲಿ ಮೊದಲ ಎರಡು ಸ್ಥಾನ ಎಂದರೆ ಒಂದು ಕಾಶಿ ವಿಶ್ವನಾಥ ಮತ್ತೊಂದು ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ.
ಈಗ ಇಪ್ಪತ್ತೆರಡು ವರ್ಷಗಳ ಹಿಂದೆಯೆ ಕನ್ಯಾಕುಮಾರಿ ಗೆ ಹೋಗಿ ಬಂದಿದ್ದರೂ, ಅಲ್ಲಿಂದ ಕೇವಲ 100km ನಲ್ಲಿ ಇರುವ ಅನಂತ ಪದ್ಮನಾಭಸ್ವಾಮಿಯನ್ನು ನೋಡಲು ಆಗಲಿಲ್ಲ ಎಂದು ಆಗಾಗ ಹೇಳುತ್ತಾ ಇದ್ದರೂ ಹೋಗಲು ಮಾತ್ರ ಆಗಿರಲೇ ಇಲ್ಲ.

ಈಗ ಎರಡು ವಾರಗಳ ಹಿಂದೆ ಒಬ್ಬಳು ತಂಗಿ ಅವಳ ಗಂಡ, ಮಗನ ಜೊತೆ ರಾಜಸ್ಥಾನಕ್ಕೆ ಹೋಗಿ ಬಂದಳು. ಹೋಗುವ ಮೊದಲು ಊರಿನಲ್ಲಿ ಇರುವ ಅಪ್ಪ ಅಮ್ಮನ ಹತ್ತಿರ ಮಾತಾಡಿದ್ದಾಳೆ. ನಂತರ ಅಪ್ಪ ಯಾರ ಹತ್ತಿರವೋ ಮಾತನಾಡುತ್ತಾ ಎತ್ತಿನ ಗಾಡಿಯಿಂದ ಟ್ರೈನ್ ವರೆಗೂ , ಬರಿಗಾಲಿನಿಂದ ಸಮುದ್ರದಲ್ಲಿ ಮೋಟರ್ ಬೋಟ್ ವರೆಗೂ ಎಲ್ಲದರಲ್ಲಿಯೂ ಒಡಾಡಿದ್ದೇವೆ. ಅದ್ಯಾಕೋ ಇನ್ನೂ flight ಒಂದು ಹತ್ತಲು ಆಗಲಿಲ್ಲ ಎಂದಿದ್ದಾರೆ. ಅಪ್ಪ ಅಂದ ಈ ಮಾತನ್ನು ಕೇಳಿಸಿಕೊಂಡ ತಮ್ಮ ಎರಡೇ ದಿನದಲ್ಲಿ ಟ್ರಿಪ್ ಪ್ಲಾನ್ ಮಾಡಿ ಅಪ್ಪ ಅಮ್ಮನನ್ನು ತಿರುವನಂತಪುರಕ್ಕೆ ಕರೆದುಕೊಂಡು ಹೋಗಿ ಬಂದ. ಅದೂ ಅವರು ಆಸೆ ಪಟ್ಟ ಹಾಗೆ flight ನಲ್ಲಿ.
ನಾವೆಲ್ಲ ಚಿಕ್ಕಂದಿನಲ್ಲಿ ಏನನ್ನಾದರೂ ಕೇಳುವ ಮೊದಲೇ ನಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಟ್ಟು, ನಮ್ಮನ್ನೆಲ್ಲ ಒಂದು ನೆಲೆ ತಲುಪಿಸುವಲ್ಲಿ ಯಶಸ್ವಿ ಆದ ಅಪ್ಪ ಅಮ್ಮ, ಅವರಿಗಾಗಿ ಯಾವತ್ತೂ ಏನೂ ಕೇಳುವುದಿಲ್ಲ. ಮೊನ್ನೆ ಏನೋ ಮಾತಿಗೆ ಹೇಳಿದ್ದನ್ನು ಕೇಳಿ ತಮ್ಮ ಕೂಡಲೇ ಕರೆದುಕೊಂಡು ಹೋಗಿ ಬಂದ. 1008 ಸಾಲಿಗ್ರಾಮಗಳಿಂದ ನಿರ್ಮಿತವಾದ ಶ್ರೀ ಅನಂತ ಪದ್ಮನಾಭಸ್ವಾಮಿಯನ್ನು, ಎರಡೆರಡು ಬಾರಿ ಕಣ್ಣು ತುಂಬಿಕೊಂಡು, ಅವರು ಆಸೆ ಪಟ್ಟಂತೆ flight ನಲ್ಲಿ ವಾಪಸ್ ಬಂದಾಗ ಅಪ್ಪ ಅಮ್ಮನ ಕಣ್ಣಿನಲ್ಲಿ ಇದ್ದ ಹರ್ಷ, ಸಂಭ್ರಮ ಕಂಡಾಗ ನಮ್ಮ ಮನಸ್ಸಿಗೂ ಒಂದು ರೀತಿಯ ಸಂತೋಷ.

ಇದೆಲ್ಲವನ್ನು ನಾವೇನೋ ಸಾಧಿಸಿದ್ದೇವೆ ಎಂದು ಹೇಳಿಕೊಂಡಿದ್ದು ಅಲ್ಲ. ಅಪ್ಪ ಅಮ್ಮ ನಮಗಾಗಿ ಏನೇನೆಲ್ಲ ಮಾಡಿರುತ್ತಾರೆ, ಎಷ್ಟೆಷ್ಟೋ ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿರುತ್ತಾರೆ. ಅವರಿಗಾಗಿ ಏನಾದರೂ ತೃಣಮಾತ್ರದಷ್ಟು ಮಾಡುವ ಅವಕಾಶ ಸಿಕ್ಕಾಗ ಮಕ್ಕಳು ಅವರ ಆಸೆಗಳನ್ನು ಪೂರೈಸಿದರೆ ಅವರ ಮನಸ್ಸು ಸಂತೋಷದಿಂದ ತುಂಬಿ ತುಳುಕುತ್ತದೆ. ಹೆತ್ತ ತಂದೆ ತಾಯಿಯರಿಗೆ ಅಷ್ಟಾದರೂ ಮಾಡುವ ಅವಕಾಶ ಸಿಕ್ಕಾಗ ಅದನ್ನು ಉಪಯೋಗಿಸಿಕೊಂಡರೆ ಮಕ್ಕಳಾದ ನಮಗೂ ಅವರ ಒಂದು ಸಣ್ಣ ಆಸೆಯನ್ನು ಪೂರೈಸಿದ ತೃಪ್ತಿ ನೆಮ್ಮದಿ.
ನಯ್ಯಾರ್ ನದಿ ಸಮುದ್ರ ಸೇರುವ ಜಾಗ
ವಯೋಸಹಜ ಅನಾರೋಗ್ಯಗಳು, ಆಗಾಗ ಮನಸ್ಸಿನ ಮೇಲೆ ಬೀಳುವ ಹೊಡೆತಗಳು ಇವೆಲ್ಲದರಿಂದ ಆಗಿರುವ ವಯಸ್ಸಿಗಿಂತ ಹೆಚ್ಚೇ ಮುಪ್ಪು ಕಾಡುತ್ತಿದ್ದರೂ, ದೇವಾಲಯ ದೇವರ ದರ್ಶನ ಅದರಲ್ಲೂ ಅನಂತ ಪದ್ಮನಾಭಸ್ವಾಮಿ ಎಂದ ಕೂಡಲೇ ಅಪ್ಪ ಅಮ್ಮ ಇಬ್ಬರೂ ಇಪ್ಪತ್ತು ವರ್ಷಗಳಷ್ಟು ಚಿಕ್ಕವರೆ ಆಗಿದ್ದರು. ದೇವರ ದರ್ಶನ ಪಡೆದು, ಅಲ್ಲಿಗೆ ಸಂಬಂಧಪಟ್ಟ ಕಥೆಗಳನ್ನು ಅವರ ಬಾಯಿಂದ ಕೇಳುತ್ತಾ ವಾಪಸ್ ಬರುವಾಗ ತಮ್ಮ ಹಾಗೂ ನಾನು ಭಕ್ತಿ ಹಾಗೂ ಸಂತೋಷದಲ್ಲಿ ಮೈ ಮರೆತಿದ್ದೆವು. ಅಪ್ಪ ಅಮ್ಮನ ಮನಸ್ಸಿಗೆ ಸಣ್ಣದೊಂದು ಖುಷಿ ಕೊಟ್ಟ ಸಾರ್ಥಕ ಕ್ಷಣದಲ್ಲಿ ನಾವು ಭಾಗಿ ಆಗಿದ್ದೆವು ಎನ್ನುವುದೇ ಒಂದು ಸಂತೋಷ.
ಪರಶುರಾಮ ಕ್ಷೇತ್ರ
ಆದಷ್ಟು ಶೀಘ್ರವಾಗಿ ಕಾಶಿ ವಿಶ್ವನಾಥನ ದರ್ಶನ ಭಾಗ್ಯ ಅಪ್ಪ ಅಮ್ಮನಿಗೆ ಲಭಿಸಲಿ. ಅವನ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಬೇಡಿಕೊಳ್ಳುವೆ.
- ವಸಂತ ಗಣೇಶ್ (ಸಾಹಿತಿಗಳು, ಲೇಖಕರು,ಕವಿಯತ್ರಿ)
