ಸೂತ್ರವಿಲ್ಲದ ಗಾಳಿಪಟ – ಬಿ ವಿ ಭಾರತಿಗಾಳಿಪಟ ಸೂತ್ರವಿಲ್ಲದೆ ವಿದ್ಯುತ್ ತಂತಿಯ ಮೇಲೆ ಬಿದ್ದಾಗ ಅದರ ಅಸಹಾಯಕತೆ, ಅದರ ವೇದನೆಯನ್ನು ಕವಿಯತ್ರಿ ಬಿ ವಿ ಭಾರತಿ ಅವರು ಜೀವನದ ತೊಳಲಾಟಕ್ಕೆ ಹೋಲಿಸಿ ಸುಂದರ ಕವನವನ್ನು ಓದುಗರ ಮುಂದಿಟ್ಟಿದ್ದಾರೆ.

ಅಷ್ಟು ಆಸೆಯಿಂದ
ಯಾರೋ ತಯಾರಿಸಿದ ಆ ನೀಲಿ ಗಾಳಿಪಟ
ವಿದ್ಯುತ್ ತಂತಿಗೆ ಸಿಕ್ಕಿ
ಅನಾಥವಾಗಿ ಹಾರಾಡುತ್ತಲೇ ಇದೆ
ಹಲವಾರು ತಿಂಗಳುಗಳಿಂದ.

ಬಿಸಿಲಿಗೆ ಬೆವರುತ್ತದೆ,
ಮಳೆಗೆ ತೋಯುತ್ತದೆ,
ಗಾಳಿ ರಭಸದಿಂದ ಬೀಸಿದಾಗ
ಒಂದಿಷ್ಟು ದೂರ ಅತ್ತಿಂದಿತ್ತ ಸರಿಯುತ್ತದೆ;
ಒಂದು ದಿನ ಅಡಿಗೆಮನೆಯ ಕಿಟಕಿಯ,
ಮರುದಿನ ಹಾಲ್ ಕಿಟಕಿಯ,
ಮತ್ತೂ ಒಂದು ದಿನ
ಹಿತ್ತಲಿನ ಜಾಲರಿಯ ನೇರಕ್ಕೆ ಕಾಣಿಸುತ್ತದೆ
ಆದರೆ ತಂತಿಗೆ ಸುತ್ತಿದಂತೆಯೇ ಅದರ ಓಡಾಟ!

ಕರೆಂಟು ಹೊಡೆದು ಸಾಯುವುದಿಲ್ಲ
ತಾನಾಗಿ ಬೀಳುವುದೂ ಇಲ್ಲ,
ಯಾರೂ ಬಿಡಿಸುವುದೂ ಇಲ್ಲ…

ನನಗಂತೂ ಅದನ್ನು ಕಂಡಾಗೆಲ್ಲ
ಒಲ್ಲದ ಮದುವೆಗಳಲ್ಲಿ ಸಿಕ್ಕಿಬಿದ್ದು
ಮುಕ್ತಿಯೇ ಇಲ್ಲದ ಜೀವಗಳ ಹಾಗೆ
ಭಾಸವಾಗುತ್ತದೆ…
ಅಲ್ಲಿಯೇ ತಿರುಗುತ್ತ ತಿರುಗುತ್ತ ತಿರುಗುತ್ತ
ಬದುಕದೇ
ಸವೆಯದೇ
ಸಾಯದೇ…

ಹಾರುವಾಗ ಆಗಸದಲ್ಲಿನ ಹಕ್ಕಿಯಂತೆ ಕಂಡರೂ
ಗಾಳಿಪಟಕ್ಕೆ ರೆಕ್ಕೆಗಳಿಲ್ಲ
ಅನ್ನುವುದಷ್ಟೇ ಕೊನೆಗುಳಿವ ಸತ್ಯ…


  • ಬಿ ವಿ ಭಾರತಿ

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ಗಾಳಿಪಟಕೆ ರೆಕ್ಕೆಗಳಿಲ್ಲ….. ತುಂಬ ಚೆನ್ನಾಗಿದೆ.

1
0
Would love your thoughts, please comment.x
()
x
%d bloggers like this:
Aakruti Kannada

FREE
VIEW