ಪ್ರೀತಿ ಎಂಬುದು ಪ್ರತಿ ಜೀವಕ್ಕೂ ಬೇಕಾದ ಸುಂದರ, ಭಾವಪೂರ್ಣ ಅನುಭೂತಿ. ಆದರೆ ನಂಬಿಕೆ, ಪ್ರಮಾಣಿಕತೆ ಎಂಬ ಜೀವ, ಜಲ, ಪ್ರೀತಿಗೆ ಬಹು ಮುಖ್ಯವಾದವು ಹಾಗೂ ಪ್ರೀತಿ ಉಳಿಯಲು, ಬೆಳೆಯಲು ಸಹಾಯಕಾರಿಯಾದವು. ಕಾಲ ಯಾವುದಾದರೇನು? ಸ್ಥಳ ಯಾವುದಾದರೇನು ? ಪ್ರೀತಿ ಎಲ್ಲವನ್ನು ಒಂದಾಗಿಸುತ್ತದೆ. ಪ್ರೀತಿಯಿಂದ ಇಲ್ಲಿ ಬೇಧ- ಭಾವ ಇಲ್ಲ. ಇಂತಹ ಒಲವು ಬದುಕಿನ ಬಲವೂ ಹೌದು, ಸಂಭ್ರಮದ ದೀವಿಗೆಯು ಹೌದು. ಪ್ರೀತಿಯನ್ನು ಪ್ರೀತಿಯಿಂದಲೇ ಆರಂಭಿಸಿ ಪ್ರೀತಿ ಪಡೆಯಿರಿ ಮತ್ತು ನೀಡಿರಿ…
ಪ್ರೀತಿ ಕವಿವಾಣಿಯಲ್ಲ
ಗತಕಾಲದ ರೋಚಕವಲ್ಲ
ವರ್ತಮಾನದ ಸತ್ಯ
ಇದ ಕಾಣಲು, ಸೇರಲು ಬಯಸುವದು
ಸದಾ ಕೋಟಿ ಕೋಟಿ ಮನಗಳು
ಒಲವಿನ ಸಾಕ್ಷತ್ಕಾರ ಓದಿನ
ಮಾತಲ್ಲ
ಬದುಕಿನ ದಿವ್ಯ ಶಕ್ತಿ
ಇದಕ್ಕಿಲ್ಲ ಯಾವ ತಂತ್ರ
ನಿರ್ಮಲ ಅನುರಾಗ ಒಂದೇ ಮಂತ್ರ
ಪ್ರೇಮ ಅಗೋಚರ ಅಲ್ಲ
ಉದ್ವೇಗ ಉತ್ಸವ ಅಲ್ಲ
ನಿರಂತರ ಹರಿಯುವುದು ತೊರೆಯಾಗಿ
ಬಾಳ ಅಲೆಗಳಲಿ ಜೊತೆಯಾಗಿ
ಪ್ರೀತಿಗೆ ಚೆಲುವು ಆಸರೆ ಯಲ್ಲ
ಮೋಹಕ ಮೋಡಿ ಎಂದಿಗೂ ಅಲ್ಲ
ಬತ್ತಿದ ಜೀವಕೆ ಜೀವನ್ಮುಖಿಯಾಗಿ
ಜೀವನದ ಅಗಣಿತ ತಿರುವುಗಳ
ನಡುವೆಯು ಸಂದರ್ಶಿಸುವದು
ತಣ್ಣನೆಯ ತಂಗಾಳಿಯಂತೆ
ಒಲಿದ ಹೃದಯಕೆ ಕಾವಲಂತೆ
- ರೇಶ್ಮಾಗುಳೇದಗುಡ್ಡಾಕರ್