ಯಾರೋ ಒಬ್ಬ ಹಳೆಯ ದೋಸ್ತ ಸಿಕ್ಕರೆ ಸಾಕು, ನಮ್ಮ ಕಾಲದ ಚಿತ್ರವನೆಲ್ಲಾ ಬಿಡಿಸಿ ನನ್ನ ಮುಂದಿಡುತ್ತಾನೆ. ಅಂತವರಲ್ಲಿ ಪರನಗೌಡ ಕೂಡಾ ಒಬ್ಬ. ಊರಿಗೆ ಹೋದಾಗಲೆಲ್ಲ ಊರಿನ ಹರಕಾ ಪರಕಾ ಸುದ್ದಿ ಕೊಡುತ್ತಾನೆ. ನಮ್ಮ ಊರು,ನಮ್ಮ ಗೆಳೆಯರು, ನನ್ನ ವಿದ್ಯಾರ್ಥಿ ಸಮುದಾಯವೇ ನನ್ನ ಬರವಣಿಗೆಗೆ ಸಾಮಗ್ರಿ ವದಗಿಸಿ ಕೊಡುವ ಗೋದಾಮುಗಳು. ಹಳೆಯ ನೆನಪಿನ ತೇರನ್ನು ಹೊತ್ತು ತರುವ ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣವನ್ನು ತಪ್ಪದೆ ಓದಿ…
ಮೊನ್ನೆ ಮೊನ್ನೆ ನಮ್ಮ ಊರ ಜಾತ್ರಗೆ ಹೋಗಿದ್ದೆ. ಗ್ರಾಮೀಣ ಪ್ರದೇಶದ ಜನರಿಗೆ ಸಂಭ್ರಮ, ಸಂತೋಷವನ್ನು ತಂದು ಕೊಡುವ ಈ ಜಾತ್ರೆಗಳು ಒಂದು ರೀತಿಯಲ್ಲಿ ಭಾವೈಕ್ಯದ ಮೆಟ್ಟುಗಟ್ಟೆಗಳು. ಅಂದು ಒಂದು ದಿವಸದ ಮಟ್ಟಿಗೆ ಬಂಧು ಬಾಂಧವರನ್ನು ಬರ ಮಾಡಿಕೊಳ್ಳುತ್ತಾರೆ, ಹೊಸ ಸೀರೆ ಉಟ್ಟು, ಅಥವಾ ಹಳೆಯದನ್ನೇ ಹೊಸದೆಂಬಂತೆ ದಿರಿಸು ತೊಟ್ಟು, ಖುಷಿ ಪಡುತ್ತಾರೆ. ವರ್ಷಗಟ್ಟಲೇ ಚಟ್ನಿ ರೊಟ್ಟಿ ತಿಂದುಕೊಂಡು ಬದುಕಿದ್ದರೂ ಅಂದು ಒಂದು ದಿವಸ ಮಾತ್ರ ಪಕ್ವಾನ್ನ ಮಾಡಿ ಸವಿದು ಸಂತೋಷ ಪಡುತ್ತಾರೆ. ಹಾಗಂತ ಎಲ್ಲಾ ಸುರಳಿತವಾಗಿ ನಡೆಯುತ್ತದೆಯೆಂದು ಹೇಳುವಂತಿಲ್ಲ. ಅಲ್ಲಿ ಸಿಟ್ಟು ಸೆಡವುಗಳೂ ಇರುತ್ತವೆ. ಮನಸ್ತಾಪಗಳೂ ಇರುತ್ತವೆ. ನಮ್ಮ ಜನ ಮುಗ್ಧತೆಯ ಮನೋ ವಿಶಾಲರು. ನಮ್ಮ ಹಳ್ಳಿಯ ಬಹಳಷ್ಟು ಜನ ಅಕ್ಷರದ ಸ್ನೇಹವಿಲ್ಲದ ಅಮಾಯಕರು. ನನ್ನನ್ನು ಬೈದರೂ ಆಡಿಕೊಂಡರೂ ನಾನು ರಾಂಗ ಆಗುವುದಿಲ್ಲ. ಚೆನ್ನಾಗಿದ್ದವರನ್ನು ನೋಡಿ ಮತ್ಸರ ಪಡುವವರೂ ಇದ್ದಾರೆ. ನನ್ನ ಗೆಳೆಯನ ಹೆಂಡತಿಯೊಬ್ಬಳು ನನಗೆ ಪರದೇಶಿ ನಿನಗೆ ಮೆಟ್ಟಿಲ್ಲ ಮನೆ ಇಲ್ಲ ಎಂದೊಮ್ಮೆ ಅಂದು ಬಿಟ್ಟಳು. ಹೌದು ಅನ್ನಕ್ಕಾಗಿ ಅಲೆದಾಡುವ ನಾವುಗಳೆಲ್ಲಾ ಪರದೇಶಿಗಳೇ. ಇಂಥವರನ್ನು ನೋಡಿ ನನಗೆ ಕೋಪ ಬರುವುದಿಲ್ಲ, ಪಾಪ ಎನಿಸುತ್ತದೆ. ಇಂಥವರು ಹಲ್ಲಿಲ್ಲದ ಹಾವುಗಳು. ಕನಸನ್ನೇ ನಿಜ ಬದುಕೆಂದು ಭ್ರಮಿಸಿದವರು. ಅವರು ಮಾತಾಡಲಿಕ್ಕೆ ಬರುತ್ತದೆಯೆಂಬುದನ್ನು ತೋರಿಸಬೇಕಾಗಿರುತ್ತದೆ. ಇದಕ್ಕೆ ನಾನು ಸಿಟ್ಟಾಗುವುದಿಲ್ಲ. ಇಂಥ ಘಟನೆಗಳಿಂದಲೇ ನಾನು ಬೆಳೆದಿದ್ದೇನೆ. ಅವರಿವರ ಇಂಥ ಮಾತುಗಳೇ ನನ್ನ ಬರವಣಿಗೆಯ ಬಂಡವಲು.
ತೇರು ಎಳೆಯುವಾಗ ಒಂದೆರಡು ತಾಸು ನಾನು ಜಾತ್ರೆಗೆ ಹೋಗಿರುತ್ತೇನೆ. ದೇವರಿಗೆ ಕಾಯಿ ಕರ್ಪೂರ ಅರ್ಪಿಸುವುದು, ಜಾತ್ರೆಯಲ್ಲಿ ಅಡ್ಡಾಡುವುದು, ಮನೆಗೆ ಫಳಾರ ಹಾಕಿಸಿಕೊಂಡು ಹೋಗಿ ಬಂಧು ಬಾಂಧವರಿಗೆ ತಲುಪಿಸುವುದು, ಮನೆಯ ಹೆಂಗಳೆರು ಮತ್ತು ಬಂದ ಅಡ್ಡ ಬೀಗರ ಕ್ಷೇಮ ಸಮಾಚಾರ ತೆಗೆದುಕೊಳ್ಳುವುದು, ಮತ್ತೆ ಇಂಥ ಗೆಳೆಯರ ಜೊತೆ ಅಪಾ ಪೋಲಿಯಾಗಿ ಅಲೆಯುವ ನನ್ನನ್ನು ನೆನಪಿಸಿ ಮನೆಗೆ ಕರೆದುಕೊಂಡು ಹೋಗುವುದು ಎಲ್ಲಾ ನನ್ನ ಹೆಂಡತಿಯ ಜವಾಬ್ದಾರಿ. ಈ ಜಾತ್ರೆಯನ್ನು ನಾನೇ ಹೆಚ್ಚು ಬಳಸಿಕೊಳ್ಳುತ್ತೇನೆ. ನನ್ನ ಹೆಂಡತಿಗೆ ನಮ್ಮ ಊರು ಹೊಸದು. ನಮ್ಮ ಮನೆಯವರು, ಮತ್ತೆ ಪಕ್ಕದ ಮನೆಯವರು ನಾಲ್ಕೆಂಟು ಜನರು ಮಾತ್ರ ಆಕೆಗೆ ಪರಿಚಯ. ನನಗೋ ನನ್ನ ಚಡ್ಡಿ ದೋಸ್ತರು, ಮತ್ತೆ ಚಡ್ಡಿಯಿಲ್ಲದೆ, ಕುಂಡಿ ತೋರಿಸುತ್ತಾ ಅಡ್ಡಾಡಿದ ಕಾಲದ ದೋಸ್ತರೂ ಇದ್ದಾರೆ. ಅವರನ್ನು ಒಂದು ಸುತ್ತು ಮಾತಾಡಿಸಿ ನಮ್ಮ ಕಾಲದ ಪರಿಸರ, ಆಗಿನ ನಮ್ಮ ಜೀವನ, ತಾಪತ್ರಯ ಮುಂತಾದವುಗಳನ್ನು ಕುರಿತು ಮಾತಾಡುವುದರಿಂದ ಹಿಡಿದು, ಆಗಿನ ಒಂದೆರಡು ಫಜೀತಿಯ ಪ್ರಸಂಗಗಳನ್ನು ನೆನೆದುಕೊಂಡು ನಗೆಯ ಸವಿಯುಂಡು ಸಂತೋಷ ಪಡುತ್ತೇವೆ.
ಆಗಿನ ಬಹಳಷ್ಟು ಗೆಳೆಯರು ಈಗ ಇದ್ದಾರೆಂದು ಹೇಳುವಂತಿಲ್ಲ. ಒಂದು ಮಾತ್ರ ಗ್ಯಾರಂಟಿ ಯಾರೋ ಒಬ್ಬ ಹಳೆಯ ದೋಸ್ತ ಸಿಕ್ಕರೆ ಸಾಕು, ನಮ್ಮ ಕಾಲದ ಚಿತ್ರವನೆಲ್ಲಾ ಬಿಡಿಸಿ ನನ್ನ ಮುಂದಿಡುತ್ತಾನೆ. ಯಾರು ಕಾಲನ ಹೊಡೆತಕ್ಕೆ ಸಿಕ್ಕು ಜರ್ಝರಿತರಾಗಿ ಕಳಾ ಹೀನರಾಗಿದ್ದಾರೆ, ಯಾರು ಬದುಕಿನ ಭಾರದಿಂದ ಬೆನ್ನು ಬಾಗಿದವರಾಗಿದ್ದಾರೆ, ಸಂಸಾರದ ತಾಪತ್ರಯವನ್ನು ತಾಳಲಾರದೆ ಯಾರು ಜೋಗಿಯಾಗಿದ್ದಾರೆ, ಯಾರು ಮನೆ ಮಠ ಹೆಂಡಿರು ಮಕ್ಕಳನ್ನು ಬಿಟ್ಟು ದೇಶಾಂತರ ಹೋಗಿದ್ದಾರೆ, ಯಾರು ಬದುಕಿನಲ್ಲಿ ಏಗಿ ಜಯಶಾಲಿಯಾಗಿದ್ದಾರೆ, ಯಾರು ಲೋಕವನ್ನೇ ಬಿಟ್ಟು ಹೋಗಿದ್ದಾರೆ, ಎಂಬ ವಾರ್ಷಿಕ ವರದಿಯನ್ನು ಒಪ್ಪಿಸುತ್ತಾರೆ. ಅಂಥ ಹಳೆಯ ಗೆಳೆಯ ಯಾರಾದರೊಬ್ಬ ಸಿಕ್ಕೇ ಸಿಕ್ಕುತ್ತಾನೆ.
ನೌಕರಿ ಮಾಡಿ ಬಂದ ಒಣ ಮಾರಿಯವರಿಗಿಂತ ಹಳ್ಳಿಯ ಮುಗ್ಧ ಮುಖಗಳೇ ನನಗೆ ಹೆಚ್ಚು ಪ್ರೀಯ. ನೌಕರಿ ಮಾಡಿ ಊರು ಸೇರಿದವರಲ್ಲಿ ಕಾಲೇಜಿನ ಹುಡುಗರ ಮುಂದೆ ಪುಸ್ತಕ ಹಿಡಿದು ನಿಂತು ಉಗುಳು ಸಿಡಿಸಿದ ಪರನಗೌಡ ಪ್ರತಿ ವರ್ಷ ಸಿಕ್ಕು, ನಮ್ಮ ಊರಿನ ಹರಕಾ ಪರಕಾ ಸುದ್ದಿ ಕೊಡುತ್ತಾನೆ. ಈಗ ಹಳ್ಳಿಯಲ್ಲಿ ಮಾಸ್ತರಿಕೆ ಮಾಡುವ ಹುಡುಗರು ಸಿಕ್ಕರೂ ಅವರು ಹತ್ತಿರ ಬಂದು ಮಾತಾಡಿಸುವುದು ಕಡಿಮೆ. ತುಟಿಯ ಮೇಲೊಂದು ಅಗ್ಗದ (ಸೋವಿಯ) ನಗೆ ತೋರಿಸಿ ಹೋಗಿ ಬಿಡುತ್ತಾರೆ. ನನಗೋ ನಮ್ಮೂರಿನ ಒಂದು ವರ್ಷದ ಪುರಾಣ ಹೇಳುವವರು ಬೇಕು. ಅಂಥವರೊಬ್ಬರಿಗಾಗಿ ನಾನು ಜಾತ್ರೆಗೆ ಹೋಗಿರುತ್ತೇನೆ ಮತ್ತು ಅಂಥವರನ್ನು ಕಂಡು ಮಾತಾಡಿಸಿಕೊಂಡು ಬರುತ್ತೇನೆ. ತೇರಿಗೆ ಉತ್ತತ್ತಿ ಒಗೆದಷ್ಟೇ ಅಂಥ ಗೆಳೆಯರನ್ನು ಕಾಣುವುದು ನನಗೆ ಮುಖ್ಯ.
ನನ್ನ ಬರವಣಿಗೆಗೆ ನನ್ನ ಈ ಹಳೆಯ ನೆನೆಪುಗಳ ನೆಂಟಸ್ತನವೇ ಕಾರಣ. ನಮ್ಮ ಊರು,ನಮ್ಮ ಗೆಳೆಯರು, ಅದಕ್ಕಿಂತ ಹೆಚ್ಚಾಗಿ ಅಪಾರ ಸಂಖ್ಯೆಯ ನನ್ನ ವಿದ್ಯಾರ್ಥಿ ಸಮುದಾಯವೇ ನನ್ನ ಬರವಣಿಗೆಗೆ ಸಾಮಗ್ರಿ ವದಗಿಸಿ ಕೊಡುವ ಗೋದಾಮು. ಈ ಗೋದಾಮಿನ ಒಳಗೆ ಹೋಗಿ ಬಂದರೆ ಸಾಕು. ಏನು ಬರೆಯಲಿ, ಏನು ಬಿಡಲಿ ಎನ್ನುವಂತೆ ನೂರಾರು ಚಿತ್ರಗಳು ಕಣ್ಣ ಮುಂದೆ ಬಂದುನಿಲ್ಲುತ್ತವೆ.ನಮ್ಮ ಹಳ್ಳಿಗಳು ಈಗ ಸಾಕಷ್ಟು ಬದಲವಣೆಯನ್ನು ಹೊಂದಿವೆ. ನಮ್ಮ ಕಾಲದಲ್ಲಿದ್ದ ಮುಗ್ಧತೆ ಈಗ ಇಲ್ಲ. ರಾಜಕೀಯ ಸ್ಪರ್ಶದಿಂದಾಗಿ ಮಾನವೀಯ ಗುಣಗಳು ಕಳಚಿಕೊಳ್ಳಲಿಕ್ಕೆ
ಪ್ರಾರಂಭಿಸಿವೆಯೇನೋ ಎಂಬ ಸಂಶಯ ಬರುತ್ತದೆ. ನಮ್ಮ ವಿಕೇಂದ್ರಿಕೃತ ರಾಜತ್ವ ಹಳ್ಳಿಗಳನ್ನು ಹಾಳು ಮಾಡಿದೆ. ಗ್ರಾಮಗಳು ಸುಧಾರಣೆ ಕಂಡಿವೆ ಎಂದರೆ, ಕಸುಗಾಯಿಯನ್ನು ಹಣ್ಣು ಮಾಡಿದಂತಾಗಿದೆಯಂದೇ ಹೇಳಬೇಕು. ಜನರಲ್ಲಿ ಜಡತೆ ಬೇರು ಬಿಟ್ಟಿದೆ. ಭವಿಷತ್ತೇ ಇಲ್ಲವೆನ್ನುವಂತೆ ನಿರಾಸೆ ಹಿಡಕೊಂಡಿದೆ, ನಡೆತ ಕೆಟ್ಟಿದೆ, ಕುಡಿತ ಬೆಳೆದಿದೆ.
ಈ ಸಲ ಜಾತ್ರಗೆ ಹೋದಾಗ ನನ್ನೊಬ್ಬ ಹಳೆಯ ಗೆಳೆಯ ಉಪ್ಪಾರ ಮರಿಯಪ್ಪ ಜಾತ್ರೆಯಲ್ಲಿ ಸಿಕ್ಕಿದ್ದ. ಸ್ವಲ್ಪ ಹೆಚ್ಚು ಕಡಿಮೆ ನನ್ನ ವಯಸ್ಸೆ ಇರಬೇಕೇನೋ. ನಮ್ಮ ಹಳ್ಳಿಗಳಲ್ಲಿ ಬರ್ಥ ಡೇಟುಗಳನ್ನು ಯಾರು ಬರೆದಿಟ್ಟುರುತ್ತಾರೆ ಹೇಳ್ರಿ?. “ಎಷ್ಟು ವಯಸ್ಸು ನಿನ್ನ ಮಗಗ” ಎಂದು ನಮ್ಮ ಹಳ್ಳಿಯ ಹೆಣ್ಣು ಮಕ್ಕಳನ್ನು ಕೇಳಿದರೆ “ಈಗ ಬರ ಮುಂದಿನ ಈ ಹುಲಿಗೆಮ್ಮನ ಹುಣ್ಣಿವಿಗೆ ನಾಕಿಪ್ಪತ್ತು ಆಕಾವ ನೋಡಪ್ಪಾ” ಎಂದು ಲೆಕ್ಕಾ ಹೇಳುತ್ತಾರೆ. ನೀವು ಆ ಮಗುವಿನ ವಯಸ್ಸನ್ನು ಕಂಡು ಹಿಡಿಯಬೇಕೆಂದರೆ, ನಿಮಗೆ ಹುಲಿಗೆಮ್ಮನ ಹುಣ್ಣಿವೆ ಯಾವುದೆಂಬುದು ಗೋತ್ತಿರಬೇಕು, ಮತ್ತೆ ಇಪ್ಪತ್ತರ ಗಂಟಿನ ಲೆಕ್ಕಾ ಗೊತ್ತಿರಬೇಕು. ಈ ಕಾರಣಕ್ಕೆ ಮರಿಯಪ್ಪನ ವಯಸ್ಸು ಮತ್ತು ನನ್ನ ವಯಸ್ಸನ್ನು ಹುಣ್ಣಿವೆಯ ಲೆಕ್ಕದಲ್ಲಿ ಲೆಕ್ಕ ಮಾಡಿ ಹೇಳಲಿಕ್ಕೆ ನಮ್ಮವ್ವ, ಮತ್ತು ಅವರ ಅವ್ವ ಇಬ್ಬರೂ ಇದ್ದರೆ ಮಾತ್ರ ಸಾಧ್ಯ.
ಈ ಮರಿಯಪ್ಪ ನನ್ನ ಜೊತೆಗೆ ಕುಂಟ ರಾಮಪ್ಪನ ಸಾಲಿಗೆ ಬರುತ್ತಿದ್ದ. ಆ ಕುಂಟ ರಾಮಪ್ಪನ ಶಾಲೆಯಲ್ಲಿ ಗೋಣಿ ಚೀಲಾ ಹಾಸಿಕೊಂಡು ಆಜೂ ಬಾಜೂ ಕುಳಿತುಕೊಳ್ಳುತ್ತಿದ್ದೆವು. ಉಚ್ಚೆ ಹುಯ್ಯಲಿಕ್ಕೆ ಹೋದಾಗ ಜಗಳಾಡುತ್ತಿದ್ದೆವು. ಪೋಳಿಯಲ್ಲಿ ಬಿದ್ದು ಮೊಳಕಾಲು ಕೆತ್ತಿಸಿಕೊಂಡಾಗ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಿದ್ದೆವು. ಶಾಲೆಗೆ ಬಂದರೇನು ಆತ ಕಲಿತದ್ದೆಷ್ಟೆಂದು ಹೇಳಲಿಕ್ಕಾಗುವುದಿಲ್ಲ. ನಾವು ಶಾಲೆಯಲ್ಲಿ ಒಂದಿಷ್ಟು ಜಾಣರೆಂದು ಹೆಸರು ಮಾಡಿದ್ದರಿಂದ ಇವರೆಲ್ಲಾ ನಮ್ಮನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಆದರೆ ಓಡಲಿಕ್ಕೆ ಹಚ್ಚಿದರೆ ನನ್ನನ್ನು ಹಿಂದಿಕ್ಕಿ ಓಡುತ್ತಿದ್ದ. ಆದರೇನು ನಾನು ಊರು ಬಿಟ್ಟು ಓಡಿ ಹೋಗಿಬಿಟ್ಟೆ, ಆತ ಅಲ್ಲಿಯೇ ಉಳಿದ. ಮನಷ್ಯರು ಮನಷ್ಯರನ್ನು ಗಳಿಸಿಕೊಳ್ಳದಿದ್ದರೆ, ಯಾರು ಎಷ್ಟು ಕಲಿತರೇನು ಎಷ್ಟು ಗಳಿಸಿದರೇನು. ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂದು ಕವಿ ಹಾಡಿಕೊಂಡಂತೆ ಆ ಒಲವೇ ಬದುಕಿನಲ್ಲಿ ಮುಖ್ಯವಾದದ್ದು. ಈ ಮರಿಯಪ್ಪ ಪ್ರೀತಿ ಪ್ರೇಮದ ಸಾಕಾರ ಮೂರ್ತಿ. ಒಳಗೆ ಕಪಟವಿಲ್ಲದ ಸ್ವಚ್ಛ ಮನುಷ್ಯ. ನಮ್ಮೂರಲ್ಲಿ ನಾನು ಎಲ್ಲಾ ಗೆಳೆಯರನ್ನೂ ಭೆಟ್ಟಿಯಾಗಲಿಕ್ಕೆ ಸಾಧ್ಯವಿಲ್ಲವೆಂದರೂ ಈತನನ್ನು ಕಂಡು ಬರಲಿಕ್ಕೆ ಕಾರಣವೆಂದರೆ ಆತನ ಮತ್ತು ನಮ್ಮ ಹೊಲಾ ಅಕ್ಕ ಪಕ್ಕದಲ್ಲಿವೆ. ನಾನು ಆ ಹೊಲಕ್ಕೆ ಹೋದಾಗಲೆಲ್ಲಾ ಆತ ಅಲ್ಲಿರುತ್ತಾನೆ. ನಮ್ಮ ಹಳ್ಳಿಯ ಜನ ಕಾಯಕ ನಿಷ್ಠರು. ಆ ಕಾಯಕದಲ್ಲಿಯೇ ಅವರು ದೇವರನ್ನೂ ಸ್ವರ್ಗವನ್ನೂ ಕಾಣುತ್ತಾರೆ. ಅಲ್ಲಿ ಬೆಟ್ಟಿಯಾದರೆ, ಒಂದು ಕ್ಷಣ ನಿಂತೋ, ಕುಂತೋ ನಮ್ಮ ಹಳೆಯ ಹಾಡುಗಳನ್ನು ಹಾಡಿಕೊಳ್ಳುತ್ತೇವೆ. ನಮ್ಮ ಸಾಧನೆಯನ್ನು ಹಿಂದಿರುಗಿ ನೋಡುತ್ತೇವೆ. ನನ್ನ ಹೆಂಡತಿಯ ಜೊತೆಗೆ ಹೊಲಕ್ಕೆ ಹೋಗಿದ್ದರೆ ಬೇಡ ಬೇಡವೆಂದರೂ ಕೇಳದೆ ಹೊಲದಲ್ಲಿದ್ದ ಉಳ್ಳಾಗಡ್ಡಿ ಮೆಣಸಿನ ಕಾಯಿಗಳಿಂದ ಆಕೆಯ ಉಡಿ ತುಂಬುತ್ತಾನೆ.
ಮೊನ್ನೆ ಜಾತ್ರೆಯಲ್ಲಿ ಸಿಕ್ಕಾಗ ಆತನನ್ನು ಪ್ರೀತಿಯಿಂದ ಮಾತಾಡಿಸಿದೆ. ನನ್ನ ಹಳೆಯ ಗೆಳೆಯರೊಡನೆ ನನ್ನ ಮೈತ್ರಿ ಮೊದಲಿನಂತೆಯೇ ಇದೆ. ಅವರ ಹೆಗಲಿಗೆ ಕೈ ಹಾಕುತ್ತೇನೆ, ಅಂಗಿ ಹಿಡಿದು ತಮಾಷೆ ಮಾಡುತ್ತೇನೆ. ಅವರ ಬಕ್ಕಣಕ್ಕೆ ಕೈಹಾಕಿ ಅಲ್ಲಿರುವ ಹಣದ ಲೆಕ್ಕಾ ತೆಗೆದುಕೊಂಡರೆ ಅವರಿಗೆ ಸಿಟ್ಟು ಬರುವುದರ ಬದಲು ಖುಷಿಯಾಗುತ್ತದೆ. ತುಟಿಯ ಮೇಲೊಂದು ನಗೆಯ ನವಿಲು ಕುಣಿದಾಡಿ ಖುಷಿ ಕೊಡುತ್ತದೆ. ಈ ಸರ್ತಿ ಮರಿಯಪ್ಪ ಮಿಂಚುವ ಅಂಗಿಯನ್ನು ತೊಟ್ಟುಕೊಂಡು ಬಂದಿದ್ದ. ಮನೆಯಲ್ಲಿ ಎಂಥಾ ಬಡತನವಿದ್ದರೂ ಅಂದು ಒಂದು ದಿವಸ ಟಿಪ್-ಟಾಪ್ ಆಗಿ ಬರುವುದು ವಾಡಿಕೆ. ಆ ಅಂಗಿ ಹೊಸದೆಂದು ಹೇಳಲಿಕ್ಕಾಗುವುದಿಲ್ಲ. ಎಂದೋ ಒಮ್ಮೆ ಜಾತ್ರೆಗಾಗಿ ಹೊಲಿಸಿದ್ದಿದ್ದರೂ ಇರಬೇಕು. ಅಥವಾ ಹಲವು ವರ್ಷದ ಹಿಂದೆ ಅವರ ಮಾವ ಮದುವೆಯಲ್ಲಿ ಕೊಟ್ಟ ಅಂಗಿ ಇದ್ದರೂ ಇರಬೇಕು. ಹೀಗೆ ಜಾತ್ರೆಯಲ್ಲಿ ಮಿಂಚಿದರೂ, ಜಾತ್ರೆಯಾದ ಮರುದಿವಸ ಮತ್ತೆ ಲಂಡ ಅಂಗಿಯನ್ನು ಹಾಕಿಕೊಂಡು ಸಲಿಕೆ ಹಿಡಿದು ನೀರು ತಿರುವುತ್ತಾರೆ. ನಾನು ಎಷ್ಟು ಸಲ ನೋಡಿದರೂ ಆ ಲಂಡ ಅಂಗಿಯಲ್ಲಿಯೇ ಆತನನ್ನು ನೋಡಿದ್ದು, ಅಂದು ಮಾತ್ರ ಆ ಮಿಂಚುವ ಅಂಗಿಯಲ್ಲಿ ನೋಡಿದೆ. ಅದಕ್ಕೆ ಆತನ
ಅಂಗಿಯನ್ನು ಹಿಡಿದು, “ಏನು ಮಿಂಚು, ಏನು ಕಥಿ ಈ ಅಂಗಿ ನನಗೆ ಬೇಕು ನೋಡು” ಎಂದು ಹಿಡಿದುಕೊಂಡು ನಿಂತೆ. ಈ ಮುಗ್ಧ ಗೆಳೆಯರು ಹೇಗಿದ್ದಾರೆಂದರೆ, ನಾನು ನಿಜವಾಗಿಯೂ ಅಂಗಿಯನ್ನು ಕೇಳುತ್ತಿದ್ದೇನೆ ಎಂದು ಭಾವಿಸಿ ಬಿಡುತ್ತಾರೆ. ಆತ ನಿಜವಾಗಿಯೂ ಒಂದು ಗುಂಡಿಯನ್ನು ಬಿಚ್ಚಿದಾಗ ಆತನ ಬೆನ್ನ ಮೇಲೊಂದು ಪ್ರೀತಿಯ ಪೆಟ್ಟು ಕೊಟ್ಟು, ಉಭಯ ಕುಶಲೋಪರಿ ವಿಚಾರಿಸಿ ಕಳಿಸಿದೆ. ಆ ಮೇಲೆ ನನ್ನ ಹೆಂಡತಿ ಅವರ ಮನೆಯ ಹತ್ತಿರ ಸಿಕ್ಕಾಗ ಆಕೆಯನ್ನು ತಡೆದು ನಿಲ್ಲಿಸಿ “ನಿನ್ನ ಗಂಡ ನನ್ನ ಅಂಗಿಯನ್ನು ನೋಡಿ ಈ ಅಂಗಿ ನನಗೆ ಬೇಕು ಎಂದು ಬಿಚ್ಚಿಸಲಿಕ್ಕೆ ಹಚ್ಚಿ ಬುಟ್ಟಿದ್ದನವ್ವಾ” ಎಂದು ನಮ್ಮ ಸ್ನೇಹದ ವರದಿಯನ್ನು ಕೊಟ್ಟನಂತೆ. ನಮ್ಮ ಗ್ರಾಮೀಣ ಜನರಲ್ಲಿರುವ ಅನುಕರಣೀಯ ಬಾಂಧವ್ಯವಿದು. ಅವರು ಹೊಟ್ಟೆಯಲ್ಲಿ ಕಪಟವಿಟ್ಟುಕೊಂಡು ಮಾತಾಡುವವರಲ್ಲ. ಎಗ್ಗಿಲ್ಲದ ಹೃದಯವೆನ್ನುತ್ತಾರಲ್ಲ, ಅಂಥ ಹೃದಯವಂತರು. ಮರಿಯಪ್ಪನಂತಹ ನೂರಾರು ಗೆಳೆಯರು ನಮ್ಮ ಊರ ಸ್ನೇಹದ ವಲಯದಲ್ಲಿ ಇದ್ದಾರೆ. ಅವರಿಗೆ ಹೋಲಿಸಿದರೆ ನಾನೇ ಕೆಟ್ಟವನು. ಯಾಕಂದರೆ ಪೇಟೆಯ ಆಕರ್ಷಣೆಯಲ್ಲಿ ಅಂಥ ಜನರಿರುವ ಊರನ್ನು ಬಿಟ್ಟು ಇಲ್ಲಿ ಬಂದು ಬೀಡು ಬಿಟ್ಟೆನೆಂಬ ಅಪರಾಧಿ ಭಾವ ನನ್ನನ್ನು ಕಾಡುತ್ತಿರುತ್ತದೆ.
“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು
- ಗುಡಾರ – (ಭಾಗ ೩)ಪ್ರಾಮಾಣಿಕ ಹುಚ್ಚ – (ಭಾಗ ೪)
- ಹಳ್ಳಿಯ ನಾಟಕದ ಸೂಳೆಯ ಪಾತ್ರ – (ಭಾಗ ೫)
- ದೊಡ್ಡ ತಲೆಗೆ ಸಣ್ಣ ಮಾಲೆ – (ಭಾಗ ೬)
- ಕೊರಗಲ್ಲ ವಿರೂಪಾಕ್ಷಪ್ಪ, ಹಾವೇರಿ