ಡಾ ನಾರಾಯಣಾಚಾರ್ಯ ಅವರ ‘ಕೃಷ್ಣಾವತಾರದ ಕೊನೆಯ ಗಳಿಗೆಗಳು’ ಯಲ್ಲಿನ ವಿಚಾರ ಗ್ರಹಣೆ ಹಾಗೂ ಅದನ್ನು ಹೇಳುವ ಬಗೆಗೆ ಅವರೇ ಸಾಟಿ ಎನ್ನುತ್ತಾರೆ ವಿಮರ್ಶಕಿ ಚೇತನ ಭಾರ್ಗವ ಅವರು, ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಕೃಷ್ಣಾವತಾರದ ಕೊನೆಯ ಗಳಿಗೆಗಳು
ಲೇಖಕರು: ಡಾ. ನಾರಾಯಣಾಚಾರ್ಯ
ಪ್ರಕಾಶನ: ಸಾಹಿತ್ಯ ಪ್ರಕಾಶನ
ನಾನು ಇತ್ತೀಚಿಗೆ ಓದಿದ ಡಾ ನಾರಾಯಣಾಚಾರ್ಯ ಅವರ ಕೃಷ್ಣಾವತಾರದ ಕೊನೆಯ ಗಳಿಗೆಗಳು ನನ್ನ ಪ್ರಕಾರ ವಿಮರ್ಶೆಗೆ ಅತೀತವಾದುದು . ಆಚಾರ್ಯರ ವಿದ್ವತ್ತು ಕಲ್ಪನಾ ಪ್ರಾಗಲ್ಭ್ಯ ಹಾಗೂ ವಿಚಾರ ಗ್ರಹಣೆ ಹಾಗೂ ಅದನ್ನು ಹೇಳುವ ಬಗೆಗೆ ಅವರೇ ಸಾಟಿ . ಓದುಗರು ಅದನ್ನು ಓದಿ ಮಂಥನ ಮಾಡಬಹುದು ಆದರೆ ವಿಮರ್ಶೆ ಮಾಡುವ ಪ್ರಯತ್ನ ಪಾಂಡಿತ್ಯ ಸಾಮಾನ್ಯ ಓದುಗರಿಗೆ ಆಗದು.
![]()
ಕೃಷ್ಣಾವತಾರದ ಕೊನೆಯ ಭಾಗ ಒಂದು ತೆರನಾದ ದುರಂತ ಅಂತ್ಯ ಕಾಣುವ ಚಿತ್ರ ಕಥೆ ಇದ್ದಂತೆ . ಮಹಾಭಾರತದ ಸೂತ್ರದಾರ ಅವತಾರಿ ಕೃಷ್ಣನ ಅಂತ್ಯಕ್ಕೆ ಕಾರಣವಾಗುವ ಘಟನೆಗಳು ಕುರುಕ್ಷೇತ್ರ ಯುದ್ಧಾನಂತರ 36 ವರುಷಗಳ ಬಳಿಕ ಕಾಣ ಬರುತ್ತದೆ . ಎಲ್ಲರೂ ಧರ್ಮರಾಯನ ಆಳ್ವಿಕೆಯಲ್ಲಿ ನೆಮ್ಮದಿಯಿಂದ ಇದ್ದಾರೆ ಎಂದಾಗಲೇ ಗಾಂಧಾರಿಯ ಶಾಪ ಫಲ ನೀಡುವ ಗಳಿಗೆ ಸನ್ನಿಹಿತವಾಗುತ್ತದೆ . ಎಲ್ಲಾ ಬಲ್ಲ ಕೃಷ್ಣ ಇದನ್ನು ತಡೆಯುವ ಗೋಜಿಗೆ ಹೋಗುವುದಿಲ್ಲ . ಯಾದವರಲ್ಲಿ ಅಧರ್ಮ ವ್ಯಭಿಚಾರ ಮೈಗೂಡಿ ದೂರ್ವಾಸರಿಂದ ಶಾಪ ಹೊಂದಿ ಕಬ್ಬಿಣದ ಒನಕೆ ರೂಪದಲ್ಲಿ ಮಹಾಪಾನ ಕೂಟದಲ್ಲಿ ಅಂತ್ಯವಾಗಿ ಅವರೇ ಹೊಡೆದಾಡಿ ಸಾಯುತ್ತಾರೆ . ಅದರ ಒಂದು ಚೂರು ಜರಾ ಎಂಬ ಬೇಡನ ಬಾಣವಾಗಿ ಕೃಷ್ಣನ ಕಾಲು ಸೀಳುತ್ತದೆ , ಅವತಾರಿಯ ಅಂಕ ಪರದೆ ಹರಿಯುತ್ತದೆ . ಕೃಷ್ಣ ನ ರಾಣಿಯರು ಅರ್ಜುನನ ಸಂರಕ್ಷಣೆಯಲ್ಲಿದ್ದಾಗಲೇ ದಸ್ಯುಗಳಿಂದ ಅಪಹರಿಸಲ್ಪಟ್ಟು ಅಸು ನೀಗುತ್ತಾರೆ . ಅರ್ಜುನನ ಧನುರ್ವಿದ್ಯೆ ಕೈಕೊಟ್ಟು ಅವತಾರಿಯ ಆಣತಿಯಂತೆ ನಾಟಕ ಮುಗಿಯುವ ಸಮಯ ಮುಗಿಯುತ್ತದೆ . ಪಾಂಡವರ ಮಹಾಪ್ರಸ್ಥಾನದೊಂದಿಗೆ ಅಂತ್ಯವಾಗುತ್ತದೆ.

ಇದಿಷ್ಟೇ ಆಗಿದ್ದರೆ ಬರಿಯ ಅವತಾರಿಯ ಕಥೆಯಾಗುತ್ತಿತ್ತು . ಆದರೆ ಆಚಾರ್ಯರು ಕೃಷ್ಣನ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯನ್ನೂ ಪರೀಕ್ಷೆಗೊಳಪಡಿಸುತ್ತಾರೆ , ಗಾಂಧಾರಿ , ದ್ರೌಪದಿ ಕರ್ಣ ಕೊನೆಗೆ ಪೂತನಿ ಯ ಪಾತ್ರವೂ ಕೃಷ್ಣನ ಮಾನಸ ಪಟಲದಲ್ಲಿ ಬಂದು ಹೋಗುತ್ತದೆ . ತಮ್ಮ ತಪ್ಪು ಒಪ್ಪುಗಳನ್ನು ಹೇಳುತ್ತವೆ ಅಪೂರ್ಣತೆಯಲ್ಲಿ ಬೇಯುತ್ತವೆ ಕೃಷ್ಣನ ಧರ್ಮ ಜಿಜ್ಞಾಸುತನಕ್ಕೆ ಸೋಲುತ್ತವೆ ಆದರೆ ಅಚ್ಚರಿಯಾಗುವಂತೆ ವಿಷದ ಹಾಲೂಣಿಸಿದ ತಾಯಿಯೇ ಆದರೂ ಪೂತನಿಯ ಶರಣಾಗತಿ ಪುಟ್ಟ ಕೃಷ್ಣನ ಸಾನಿಧ್ಯದಲ್ಲಿ ಶುಚಿಯಾಗಿ ರಾಕ್ಷಸಿ ಭಾವ ತೊರೆದು ಮರಣ ಹೊಂದಿದ ಆಕೆ ಎಲ್ಲಕ್ಕಿಂತ ಶ್ರೇಷ್ಠವಾಗಿ ಕಾಣುತ್ತಾಳೆ.
ಮಹಾಭಾರತದ ಈ ಸೂಕ್ಷ್ಮ ವಿಷಯವನ್ನು ಪ್ರಸ್ತುತ ಪಡಿಸುವ ಆಚಾರ್ಯರಿಗೆ ಅವರೇ ಸಾಟಿ . ಈ ರೀತಿಯ ವಸ್ತು ವಿಷಯ ಹಾಗೂ ಅದನ್ನು ವಿಷದ ಪಡಿಸುವ ಹಾಗೂ ಪ್ರಸ್ತುತ ಪರಿಸ್ಥಿತಿಗೆ ಅಳವಡಿಸಿ ಹೇಳಿರುವ ಆಚಾರ್ಯರು ಅಮೋಘ ಕೃತಿಯನ್ನು ಕೊಟ್ಟು ಹೋಗಿದ್ದಾರೆ . ಎಲ್ಲರೂ ತಪ್ಪದೆಯೇ ಓದಬೇಕಾದ ಕೃಷ್ಣನ ಮತ್ತೊಂದು ಮಹಾನತೆಯ ಪರಿಚಯ ಪಡಿಸುವ ಅಮೋಘ ಕೃತಿ ಆಚಾರ್ಯರ ಕೃಷ್ಣಾವತಾರದ ಕೊನೆಯ ಗಳಿಗೆಗಳು
- ಚೇತನ ಭಾರ್ಗವ
