ʻಮಹಾಭಾರತ – ಪ್ರೇಮ ಮತ್ತು ಯುದ್ದʼ ಪುಸ್ತಕದಲ್ಲಿ ಮಹಾಭಾರತಕ್ಕೆ ಸಂಬಂಧ ಪಟ್ಟ ಹೆಚ್ಚಿನ ಪ್ರೇಮ ಕಥೆಗಳನ್ನು ಕುಂಟಿನಿಯವರು ನೇರವಾಗಿ ಹೇಳಿದ್ದಾರೆ. ಈ ಪುಸ್ತಕದ ಕುರಿತು ಪತ್ರಕರ್ತರಾದ ಮಾಕೋನಹಳ್ಳಿ ವಿನಯ್ ಮಾಧವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ವಾಲ್ಮೀಕಿ ರಾಮಾಯಣವನ್ನೂ ಮತ್ತು ವ್ಯಾಸರು ಮಹಾಭಾರತವನ್ನೂ ರಚಿಸದೇ ಹೋಗಿದ್ದರೆ ಏನಾಗುತ್ತಿತ್ತು? ಗೋಪಾಲಕೃಷ್ಣ ಕುಂಟಿನಿಯವರು ಹೇಳುವಂತೆ, ನಮ್ಮ ದೇಶದಲ್ಲಿ ಸಾಹಿತ್ಯ ಎನ್ನುವುದು ಪ್ರಬುದ್ಧವಾಗಿ ಬೆಳೆಯುತ್ತಿರಲಿಲ್ಲ.
ಅದು ಸತ್ಯ ಎನ್ನುವುದು ನನಗೆ ಬಹಳಷ್ಟು ಸಲ ಅನ್ನಿಸಿದೆ. ಏಕೆಂದರೆ, ಇವೆರೆಡು ಕಥೆಗಳಿಗಿಂತ ಬಹಳ ಮುಂಚೆಯೇ ನಡೆದ ಇನ್ನೊಂದು ಕಥೆ ಇದೆ. ಅದೇ ನಳ ಚರಿತ್ರೆ. ನಾನು ಎಲ್ಲೋ ಓದಿದಂತೆ, ನಳ ಚರಿತ್ರೆಯನ್ನು ತ್ರೇತಾಯುಗದಲ್ಲಿ ಶ್ರೀರಾಮನಿಗೆ ಮಾರ್ಕಂಡೇಯ ಮುನಿಗಳು ಹೇಳಿದ್ದರನೀನೆಂದ
ಆದರೆ ಅದನ್ನು ಮಹಾ ಕಾವ್ಯವಾಗಿ ಯಾರೂ ಬರೆಯಲಿಲ್ಲ. ಅದೊಂದು ದುಷ್ಯಂತ-ಶಾಕುಂತಲೆ ಪ್ರೇಮ ಕಥೆಯಂತೆ ಇನ್ನೊಂದು ಕಥೆಯಾಗಿ ಹೋಯಿತಷ್ಟೆ. ಆದರೆ ಅದೂ ಸಹ ಮೋಸದಿಂದ ರಾಜ್ಯ ಭ್ರಷ್ಟನಾಗಿ, ಹೆಂಡತಿಯೊಂದಿಗೆ ಕಾಡುಪಾಲಾದ ಒಬ್ಬ ರಾಜನ ಕಥೆಯೇ. ಆದರೆ ಮಹಾ ಕಾವ್ಯಗಳಲ್ಲಿ ಸಿಕ್ಕಂತೆ, ಬೇರೆ ಪಾತ್ರಗಳಿಗೆ ಈ ಚರಿತ್ರೆಯಲ್ಲಿ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿಲ್ಲವಾದ್ದರಿಂದ, ಯಾರೂ ಅದನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ನನಗೆ ಅನ್ನಿಸುತ್ತದೆ.

ಆದರೆ ರಾಮಾಯಣ ಮತ್ತು ಮಹಾಭಾರತ ನೋಡಿದರೆ, ಅವುಗಳ ಮುಂದುವರೆದ ಭಾಗಗಳು, ಮೂಲ ಕೃತಿಗಳಿಗಿಂತ ಹೆಚ್ಚು ಪ್ರಚಲಿತವಾಗಿಯೂ, ರೋಚಕವಾಗಿಯೂ ಇವೆ. ಇದಕ್ಕೆ ಕಾರಣ ಎಂದರೆ, ಈ ಇಬ್ಬರು ಮಹಾ ಕವಿಗಳು ಆ ಕಾವ್ಯಗಳನ್ನು ಬರೆದ ರೀತಿ. ಈ ಮಹಾ ಕಾವ್ಯಗಳಲ್ಲಿ, ಪ್ರತೀ ಪಾತ್ರಗಳಿಗೂ ಅವುಗಳದೇ ಆದ ಒಂದು ವ್ಯಕ್ತಿತ್ವ ಇದೆ. ಆ ವ್ಯಕ್ತಿತ್ವಗಳನ್ನು ಮುಂದಿನ ಪೀಳಿಗೆಯ ಕವಿಗಳು ತಮಗೆ ಅನ್ನಿಸಿದಂತೆ ವ್ಯಾಖ್ಯಾನಿಸಿ, ಮುಂದುವರೆಸುತ್ತಾ ಹೋಗಿದ್ದಾರೆ. ಕೆಲವರು ಭಾವನಾತ್ಮಕವಾಗಿ ಕೆಲವು ಪಾತ್ರಗಳೊಂದಿಗೆ ಹೊಂದಿಕೊಂಡಿದ್ದಾರೆ. ನಮಗೆ ಸಿಗುವ ಹೊತ್ತಿಗೆ, ಈ ಎರಡು ಮಹಾ ಕಾವ್ಯಗಳಲ್ಲಿ ಅದೆಷ್ಟೋ ಉಪ ಕಥೆಗಳು, ಮೂಲ ಕಥೆಗಳಿಗಿಂತ ಸ್ವಾರಸ್ಯಮಯವಾಗಿವೆ. ಹಾಗೆಯೇ, ಎಷ್ಟೋ ಉಪ ಕಥೆಗಳು ನಮಗೆ ಸಿಗದೆ, ಎಲ್ಲೋ ಒಂದು ಮೂಲೆಯಲ್ಲಿ ಹುಗಿದು ಹೋಗಿರುತ್ತವೆ.
ಹಾಗಾಗಿಯೇ ತುಳಸೀ ದಾಸರಿಂದ ಹಿಡಿದು, ಕುವೆಂಪುರವರ ವರೆಗೆ ಮತ್ತು ರನ್ನ, ಕುಮಾರ ವ್ಯಾಸರಿಂದ ಹಿಡಿದು, ಎಸ್ ಎಲ್ ಭೈರಪ್ಪನವರವರೆಗೆ, ನಮಗೆ ಎಷ್ಟೋ ಪ್ರಕಾರದ ರಾಮಾಯಣ ಮತ್ತು ಮಹಾಭಾರತಗಳು ಓದಲು ಸಿಗುತ್ತವೆ. ಆದರೆ ಮೂಲ ಕೃತಿಯ ಕಥಾಹಂದರಕ್ಕೆ ಯಾವುದೇ ಧಕ್ಕೆ ಬಂದಿರುವುದಿಲ್ಲ.
ಎಷ್ಟೋ ಸಲ ಅನ್ನಿಸುತ್ತದೆ. ನಮ್ಮ ಪೀಳಿಗೆಯವರು ಮೂಲ ಕೃತಿಯನ್ನು ಶೋಧಿಸಲು ಹೋಗಬಾರದು ಅಂತ. ಏಕೆಂದರೆ, ಮುಂದಿನ ಪೀಳಿಗೆಯವರು ಈ ಕೃತಿಗಳ ಒಂದೊಂದು ಪಾತ್ರಗಳಿಗೆ ಎಷ್ಟು ರಸಗಳನ್ನು ತುಂಬಿದ್ದಾರೆ ಎಂದರೆ, ಮೂಲ ಕೃತಿಯ ಬಗ್ಗೆ ತಿಳಿದುಕೊಂಡಾಗ ಆ ರಸ ಭಂಗವಾಗುವುದು ಖಂಡಿತ. ಇತ್ತೀಚೆಗೆ ನಮ್ಮ ಜಗದೀಶ್ ಶರ್ಮ ಸಂಪ ಅವರು ಬರೆದ ದಶಕಂಠ ರಾವಣ ಪುಸ್ತಕ ಓದಿದಾಗ ಇದು ನನಗೆ ಅರ್ಥವಾಗಿದ್ದು. ಏಕೆಂದರೆ, ಶರ್ಮ ಅವರು ರಾಮಾಯಣ ಮತ್ತು ಮಹಾಭಾರತದ ಮೂಲ ಕೃತಿಗಳನ್ನು ಅರೆದು ಕುಡಿದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಬರೆದ ಈ ಪುಸ್ತಕದಲ್ಲಿ, ʻನನ್ನ ಪ್ರೀತಿಯ ರಾವಣʼ ಸಂಪೂರ್ಣವಾಗಿ ಕಣ್ಮರೆಯಾಗಿದ್ದ.
ಹಾಗೆಯೇ, ಕೃಷ್ಣನ ಅವಸಾನದ ಕಥೆ ಮತ್ತು ಅತನನ್ನು ಕೊಂದ ಬೇಡನು ವಾಲಿಯ ಪುನರ್ಜನ್ಮ ಎಂದು ನಾನು ಓದಿದ್ದ ಉಪ ಕಥೆಯೂ ಸಹ ಮೂಲ ಮಹಾಭಾರತದಲ್ಲಿ ಇಲ್ಲ ಎನ್ನುವುದನ್ನು ನನಗೆ ದೃಢ ಪಡಿಸಿದವರು ಕೂಡ ಸಂಪ ಅವರೇ.
ಹಾಗಿದ್ದಾಗ, ರನ್ನನ ಗದಾಯುದ್ದದಲ್ಲಿ ದುರ್ಯೋಧನ ಭೀಷ್ಮನಿಗೆ ಹೇಳುವ:
ʻನೆಲಕಿರಿವೆನೆಂದು ಬಗೆದಿರೆ!
ಚಲಕಿರಿವೆಂ ಪಾಂಡುಸುತರೊಳೀನೆಲವಿದು ಪಾ!!
ಳ್ನೆಲನೆನಗೆ ದಿನಪಸುತನಂ!
ಕೊಲಿಸದ ನೆಲನೊಡನೆ ಮತ್ತೆ ಪುದುವಾರರ್ದಿಪೆನೇ!!ʼ
ಎಂಬ ಅದ್ಭುತವಾದ ವೀರಾವೇಶದ ಮಾತಿಗೆ ಆಸ್ಪದವೇ ಇರುವುದಿಲ್ಲ.
ಅಥವಾ ಗದುಗಿನ ಭಾರತದಲ್ಲಿ ಕುಮಾರ ವ್ಯಾಸ, ಕರ್ಣನಿಗೆ ಕೃಷ್ನನು ಜನ್ಮ ರಹಸ್ಯ ಹೇಳಿದಾಗ ಬರುವ ಭಾವೋದ್ವೇಗದ ಸನ್ನಿವೇಶದಲ್ಲಿ ಹೀಗೆ ಬರೆಯುತ್ತಾನೆ:
ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಗುದೆ ತನ್ನ ವಂಶದ
ಎಂದು ಹೇಳಿ… ಕೃಷ್ಣನು ಕರ್ಣನಿಗೆ ಮತ್ತೆ ಮಾತನಾಡಲು ಹೇಳಿದಾಗ, ಕರ್ಣ ಹೇಳುತ್ತಾನೆ:
ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ
ಇಂಥಹ ಒಂದು ಅದ್ಭುತವಾದ ಸಂವಾದಕ್ಕೆ ಮೂಲ ಮಹಾಭಾರತದಲ್ಲಿ ಆಸ್ಪದವಿಲ್ಲ. ಅಥವಾ, ಬಹಳಷ್ಟು ಜನರು ಬರೆದ ಮಹಾಭಾರತದ ವ್ಯಾಖ್ಯಾನಗಳಲ್ಲಿ ಈ ಸಂವಾದ ಕೃಷ್ಣನ ತಂತ್ರಗಾರಿಕೆ ಎನ್ನುವುದರಲ್ಲಿ ಪರ್ಯಾವಸಾನವಾಗುತ್ತದೆಯೇ ಹೊರತು, ಕರ್ಣನ ಅಂತಃಕರಣ ದರ್ಶನವಾಗುವುದಿಲ್ಲ.
ಇಂತಿರ್ಪ ಸಂದರ್ಭದಲ್ಲಿ, ಜಗದೀಶ ಶರ್ಮ ಸಂಪರಷ್ಟೇ ಆಸಕ್ತಿಯಿಂದ ಮೂಲ ಮಹಾಭಾರತ ಮತ್ತು ರಾಮಾಯಣವನ್ನು ಅಭ್ಯಸಿಸುವ ಮತ್ತು ದ್ವೈಪಾಯನ ಕೃಷ್ಣ ಅಥವಾ ವ್ಯಾಸರ ಬಹು ದೊಡ್ಡ ಅಭಿಮಾನಿಯಾದ ಕುಂಟಿನಿಯವರು ʻಮಹಾಭಾರತ – ಪ್ರೇಮ ಮತ್ತು ಯುದ್ದʼ ಎನ್ನುವ ಪುಸ್ತಕ ಬರೆಯುತ್ತಿದ್ದಾರೆ ಎನ್ನುವಾಗಲೇ ನಾನು ಗಾಭರಿಯಾಗಿದ್ದೆ.

ಏಕೆಂದರೆ ಮಹಾಭಾರತ ಯುದ್ದದ ಕಥೆಯಾದರೂ, ಅದರಲ್ಲಿ ಬರುವ ಪ್ರೇಮ ಕಥೆಗಳಿಗೆ ಲೆಖ್ಖವೇ ಇಲ್ಲ. ಪ್ರತಿಯೊಂದ ಪಾತ್ರದ ಹಿಂದೆ ಒಂದೊಂದು ಪ್ರೇಮ ಅಥವಾ ಕಾಮದ ಕಥೆ ಇದ್ದೇ ಇರುತ್ತದೆ.
ಮಹಾಭಾರತದ ಉಗಮವೇ ಪ್ರೇಮ ಮತ್ತು ಕಾಮಗಳ ಸಮ್ಮಿಳನದಲ್ಲಿ. ಅದು ಸತ್ಯವತಿ ಮತ್ತು ಪರಾಶರ ಮುನಿಗಳ ಸಮಾಗಮದಿಂದ ಆರಂಭವಾಯಿತೋ ಅಥವಾ ಶಂತನು ಮತ್ತು ಗಂಗೆಯರ ಪ್ರೇಮದಿಂದ ಆರಂಭವಾಯಿತೋ ಎನ್ನುವುದೇ ಒಂದು ಜಿಜ್ಞಾಸೆ. ಏಕೆಂದರೆ, ಇವರಿಬ್ಬರಲ್ಲಿ ಯಾರು ಮೊದಲು ಎನ್ನುವುದು ಪ್ರಶ್ನೆಯಲ್ಲ. ಯಾರು ಕಾರಣೀಭೂತರು ಎನ್ನುವುದು.
ಸತ್ಯವತಿ ಮತ್ತು ಪರಾಶರ ಮುನಿಗಳ ಸಮಾಗಮದಲ್ಲಿ ವ್ಯಾಸರು ಹುಟ್ಟಿದರೆ, ಶಂತನು ಮತ್ತು ಗಂಗೆಯರ ಪ್ರೇಮದಿಂದ ಭೀಷ್ಮ ಹುಟ್ಟಿದ. ಅವರಿಬ್ಬರಲ್ಲಿ ಮಹಾಭಾರತಕ್ಕೆ ಕಾರಣ ಯಾರು? ತಾನು ಬ್ರಹ್ಮಾಚಾರಿಯಾಗಿ ತನ್ನ ತಂದೆಯ ಮದುವೆ ನೆರವೇರಿಸಿ, ತಂದೆಯ ಎರಡನೇ ಹೆಂಡತಿಯ ಮಕ್ಕಳು ಮತ್ತು ಮೊಮ್ಮಕ್ಕಳ ಸೇವೆ ಮಾಡುತ್ತಾ ಕಳೆದ ಭೀಷ್ಮನೇ, ಅಥವಾ ತನ್ನ ತಾಯಿಯ ಆಜ್ಞೆಯಂತೆ ತನ್ನ ತಮ್ಮನ ಹೆಂಡತಿಯರ ಜೊತೆ ಸಮಾಗಮ ನಡೆಸಿ, ದೃತರಾಷ್ಟ್ರ ಮತ್ತು ಪಾಂಡುವಿನ ಜನ್ಮಕ್ಕೆ ಕಾರಣವಾದ ವ್ಯಾಸರೇ? ಹೇಳುವುದು ಕಷ್ಟ.
ಅದು ಹಾಳಾಗಿ ಹೋಗಲಿ. ಮಹಾಭಾರತದ ಪ್ರತೀ ಪಾತ್ರಗಳ ಪ್ರೇಮ ಕಥೆಗಳು? ಮಹಾಭಾರತದಲ್ಲಿ ಅತೀ ದೊಡ್ಡ ಪ್ರೇಮಿ ಎಂದರೆ ಕೃಷ್ಣ ಎಂದು ಎಲ್ಲರೂ ಹೇಳುತ್ತಾರೆ. ಹೌದು… ಎಂಟು ಪತ್ನಿಯರು ಮತ್ತು ಹದಿನಾರು ಸಾವಿರ ಉಪ ಪತ್ನಿಯರು(???) ಅದರಲ್ಲಿ, ಸತ್ಯಭಾಮೆಗೆ ತಾನು ಸುಂದರಿ ಮತ್ತು ತನ್ನನ್ನೇ ಹೆಚ್ಚು ಪ್ರೀತಿಸುತ್ತಾನೆ ಎಂಬ ಭ್ರಮೆ ಮತ್ತು ಬೇರೆಯವರ ಬಗ್ಗೆ ಅಷ್ಟೇ ಅಸೂಯೆ ಇತ್ತು. ಹಾಗಾಗಿ, ಆಕೆ ದ್ರೌಪದಿಯ ಹತ್ತಿರ ಹೋಗಿ, ಗಂಡಂದಿರನ್ನು ಹೇಗೆ ವಶದಲ್ಲಿ ಇಟ್ಟುಕೊಳ್ಳಬೇಕು? ಎನ್ನುವುದರ ಬಗ್ಗೆ ಕೇಳುತ್ತಾಳೆ. ಏಕೆಂದರೆ, ತಾನು ಒಬ್ಬನೇ ಗಂಡನನ್ನು ವಶದಲ್ಲಿ ಇಟ್ಟುಕೊಳ್ಳಲು ಹೆಣಗುವಾಗ, ದ್ರೌಪದಿ, ಐದು ಜನ ಗಂಡಂದಿರನ್ನು ಹೇಗೆ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುತ್ತಾಳೆ? ಎನ್ನುವುದು ಆಕೆಯ ಕುತೂಹಲ.
ಆದರೆ ಕೃಷ್ಣನ ಇನ್ನೊಬ್ಬ ಹೆಂಡತಿ ರುಕ್ಮಿಣಿಗೆ ಅಂತಹ ಯಾವುದೇ ಆತಂಕ ಇರುವುದಿಲ್ಲ. ಎಷ್ಟೋ ಬಾರಿ ಸತ್ಯಭಾಮೆಗೆ, ರುಕ್ಮಿಣಿ ತನಗಿಂದ ಒಂದು ಕೈ ಹೆಚ್ಚು ಎಂದು ಅರ್ಥವಾಗಿದ್ದೂ ಇದೆ. ಹಾಗಂತ ರುಕ್ಮಿಣಿಯೂ ಎಲ್ಲಾ ವಿಷಯದಲ್ಲಿ ಸಂತುಷ್ಟಳಾಗಿದ್ದಳು ಎಂದು ಹೇಳಲು ಬರುವುದಿಲ್ಲ. ಕೃಷ್ಣನು, ಸಿಗದ ರಾಧೆಯನ್ನು ಇನ್ನೂ ತನಗಿಂತ ಹೆಚ್ಚು ಪ್ರೀತಿಸುತ್ತಾನೆ ಎನ್ನುವ ಕೊರಗು ರುಕ್ಮಿಣಿಗೂ ಇತ್ತು. ಹಾಗೆ ನೋಡಿದರೆ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತನ್ನ ಪಾಡಿಗೆ ತಾನಿದ್ದ ಮುಗ್ದೆ ಎಂದರೆ ಜಾಂಬವತಿ. ಕೃಷ್ಣನ ಹೆಂಡತಿಯರಲ್ಲಿ ಬಹಳ ಸುಖವಾಗಿದ್ದವಳು ಅವಳೇ ಎಂದು ಅನ್ನಿಸುತ್ತದೆ.
ಕೃಷ್ಣನ ಮುಂದೆ ಮಹಾಭಾರತದಲ್ಲಿ ಎಲ್ಲಾ ಪ್ರೇಮಿಗಳು ಕೊಚ್ಚಿ ಹೋದಂತೆ ಅನ್ನಿಸುತ್ತದೆ. ಏಕೆಂದರೆ, ಕೃಷ್ಣನ ಪ್ರೇಮ ನಮ್ಮ ಮೇಲೆ ಎಷ್ಟೊಂದ ಪ್ರಭಾವ ಬೀರಿತೆಂದರೆ, ರಾಜನನ್ನು ಮದುವೆಯಾದ ಮೀರಾಭಾಯಿ ಸಹ ಎಲ್ಲಾ ವೈಭೋಗಗಳನ್ನು ಬಿಟ್ಟು, ತನ್ನನ್ನು ತಾನು ಕೃಷ್ಣನಿಗೆ ಅರ್ಪಿಸಿಕೊಳ್ಳುತ್ತಾಳೆ. ನಮ್ಮ ಇಂದಿನ ಹಿರಿಯ ಕವಿಗಳಾದ ಎಚ್ ಎಸ್ವಿ, ಬಿ ಆರ್ ಲಕ್ಷ್ಮಣರಾಯರು ಸಹ, ಕೃಷ್ಣ-ರಾಧೆಯರ ಪ್ರಣಯ ಪ್ರಸಂಗಗಳನ್ನು ನೆನಪಿಸಿಕೊಂಡು, ಪೆಡ್ಡೆ ಹುಡುಗರು ಬರೆದಂತೆ ಭಾವೋನ್ಮತ ಪ್ರೇಮ ಕವಿತೆಗಳನ್ನು ಬರೆಯುತ್ತಾರೆ.
ಆದರೆ ಕೃಷ್ಣನ ಸಖನಾದ ಅರ್ಜುನನು ಸಹ ಏನೂ ಕಡಿಮೆ ಇರಲಿಲ್ಲ. ಅವನಪ್ಪ ಇಂದ್ರನಂತೆ ಅವನೂ ದೊಡ್ಡ ರಸಿಕನೇ. ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದವನು ಅರ್ಜುನನೇ ಆಗಿದ್ದರೂ, ಆಕೆ ಪಾಂಡವರ ಐದೂ ಜನಕ್ಕೆ ಪತ್ನಿಯಾಗಿದ್ದಳು. ಅರ್ಜುನ ಚಂಚಲ ಎನ್ನುವುದು ದ್ರೌಪದಿಗೆ ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದನ್ನು ಮುಂದೆ ಉಲೂಚಿ, ಚಿತ್ರಾಂಗದೆ ಮತ್ತು ಸುಭದ್ರೆಯರನ್ನು ಅಧಿಕೃತವಾಗಿಯೇ ವರಿಸಿ ಸಾಬೀತುಪಡಿಸಿದ ಕೂಡ. ಹಾಗಾಗಿ, ಮುಗ್ದತೆಯಿಂದ ಮೊದಲ ರಾತ್ರಿಯಲ್ಲೇ ತನ್ನ ಮೊದಲ ಪತ್ನಿಯಾದ ಹಿಡಿಂಬೆಯ ಬಗ್ಗೆ ಹೇಳಿಕೊಂಡ ಭೀಮನನ್ನು ದ್ರೌಪದಿ ಎಲ್ಲರಿಗಿಂತ ಸ್ವಲ್ಪ ಹೆಚ್ಚು ಪ್ರೀತಿಸುತ್ತಿದ್ದಳು. ಅವಳಿಗೆ ಯಾವುದೇ ಕಷ್ಟ ಬಂದಾಗ ಅಥವಾ ಆಕೆಗೆ ಏನಾದರೂ ಬೇಕಾದಾಗ, ದ್ರೌಪದಿ ಭೀಮನನ್ನೇ ಅವಲಂಭಿಸುತ್ತಿದ್ದಳು.
ಹಾಗೆ ನೋಡಿದರೆ, ಕೃಷ್ಣನ ಒಡ್ಡೋಲಗದಲ್ಲಿ ಜಾಂಬವತಿ ಎಷ್ಟು ಸುಖಿಯಾಗಿದ್ದಳೋ, ದ್ರೌಪದಿಯ ಒಡ್ಡೋಲಗದಲ್ಲಿ ಭೀಮನೂ ಅಷ್ಟೇ ಸುಖವಾಗಿದ್ದನು. ಕುಂಟಿನಿಯವರ ಪುಸ್ತಕ ಕೈಗೆತ್ತಿಕೊಂಡಾಗ ನನಗಿದ್ದ ಆತಂಕವೆಂದರೆ, ನನ್ನ ಈ ಕಥೆಗಳಿಗೆ ಎಲ್ಲಿ ರಸ ಭಂಗವಾಗುತ್ತದೆಯೋ ಎಂದು.
ಆದರೆ, ಹಾಗೇನೂ ಆಗಲಿಲ್ಲ. ಮಹಾಭಾರತದಲ್ಲಿ ಬರುವ ಅಸಂಖ್ಯಾತ ಪಾತ್ರಗಳನ್ನು ನೆನಪಿಡುವುದೇ ಕಷ್ಟ. ಅದರಲ್ಲಿ, ಅವರ ಅಜ್ಜ, ಮುತ್ತಜ್ಜ ಮತ್ತು ಅದಕ್ಕಿಂತಲೂ ಹಿಂದಿನವರನ್ನು ನೆನೆಪಿಸಿಕೊಳ್ಳುವುದೇ ಸಾಧ್ಯವಿಲ್ಲ. ಅದರ ಮಧ್ಯೆ, ಆ ಅಜ್ಜ, ಮುತ್ತಜ್ಜಂದಿರ ಪ್ರೇಮ ಕಥೆಗಳು, ಅವುಗಳಿಗೆ ಅಂಟಿಕೊಂಡ ಶಾಪಗಳೂ ಮತ್ತು ಅವು ಮಹಾಭಾರತದ ಸಮಯದಲ್ಲಿ ಈ ಪಾತ್ರಗಳನ್ನು ಕಾಡುವುದನ್ನು ನೆನಪಿಸಿಕೊಳ್ಳುವುದು ನನಗಂತೂ ಸಾಧ್ಯವಿಲ್ಲದ ವಿಷಯ.
ಕುಂಟಿನಿಯವರ ಪುಸ್ತಕ ಓದುತ್ತಾ ಹೋದಂತೆ, ಮಹಾಭಾರತ ಎನ್ನುವುದು ಓದಿದಷ್ಟೂ ಮುಗಿಯದ ಒಂದು ಮಹಾ ಕಾವ್ಯ ಎನ್ನುವುದು ನನಗೆ ಗೊತ್ತಾಗುತ್ತಾ ಹೋಯಿತು. ಇದರಲ್ಲಿ ಬರುವ ಪ್ರೇಮಗಳೂ, ಕಾಮಗಳೂ ಅದ್ಭುತ ಎನಿಸಿತು. ಇಲ್ಲಿ ಬರುವ ಸಂಕರಗಳೂ, ವರ್ಣ ಸಂಕರಗಳೂ ಅತೀತ ಎನ್ನಿಸುತ್ತವೆ. ಕೆಲವು ಕಥೆಗಳಲ್ಲಿ, ಕಾಮೋದ್ರೇಕದಿಂದ ಸ್ಖಲನವಾದ ವೀರ್ಯಗಳನ್ನು, ಪ್ರಾಣಿ, ಮೀನುಗಳು ನುಂಗಿ, ಅವುಗಳಿಂದ ಮಕ್ಕಳು ಹುಟ್ಟುವ ಕಥೆಗಳನ್ನು ಓದಿ ಆಶ್ವರ್ಯವಾಯಿತು.
ಏಕೆಂದರೆ, ಮಹಾಭಾರತ ಹೆಚ್ಚಾಗಿ ವೈದಿಕ ಧರ್ಮದೊಂದಿಗೆ ತಳುಕು ಹಾಕಿಕೊಂಡಿದೆ. ಒಂದು ಕಥೆಯಲ್ಲಿ, ಮೀನೊಂದು ಇಂಥಹ ಸ್ಖಲನವಾದ ವೀರ್ಯವನ್ನು ನುಂಗಿ, ಮಗುವೊಂದು ಜನ್ಮ ತಾಳುತ್ತದೆ. ಆ ವೀರ್ಯ ಹರಿ-ಹರ ಸಮ್ಮಿಳನವೋ ಅಥವಾ ಹನುಮಂತ ಸೀಮೋಲಂಘನ ಮಾಡುವಾಗ, ಆತನ ಬೆವರಿನ ಜೊತೆ ವೀರ್ಯ ನೀರಿಗೆ ಬಿದ್ದಾಗ ಅದನ್ನು ಮೀನು ನುಂಗಿದ್ದೋ ಎಂದು ಗೊತ್ತಿಲ್ಲ. ಏಕೆಂದರೆ, ಎರಡೂ ಕಥೆಗಳನ್ನು ನಾನು ಓದಿದ್ದೇನೆ ಮತ್ತು ಆ ಮಗುವಿನ ಹೆಸರು ಮತ್ಸೇಂದ್ರನಾಥ ಅಥವಾ ಮಚ್ಚೇಂದ್ರ ನಾಥ.
ಆತ ಪಶುಪತಿ ನಾಥನ ಶಿಷ್ಯ ಮತ್ತು ಗೋರಖ ನಾಥನ ಗುರು. ಸನಾತನ ಧರ್ಮದ ಮೂಲವಾದ ನಾಥ ಪಂಥ ಪರಂಪರೆಯ ಹರಿಕಾರ.
ಈ ಪುಸ್ತಕದಲ್ಲಿ ಮಹಾಭಾರತಕ್ಕೆ ಸಂಬಂಧ ಪಟ್ಟ ಹೆಚ್ಚಿನ ಪ್ರೇಮಕಥೆಗಳನ್ನು ಕುಂಟಿನಿಯವರು ನೇರವಾಗಿ ಹೇಳಿದ್ದಾರೆ. ಆ ಕಥೆಗಳು ನಮ್ಮನ್ನು ಭಾವನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗುವುದಕ್ಕಿಂತ ಹೆಚ್ಚಾಗಿ, ಯೋಚನೆಗೆ ಹಚ್ಚುತ್ತವೆ. ಮಹಾಭಾರತದ ಹೊಸ ಆಯಾಮಗಳನ್ನು ನಮಗೆ ಪರಿಚಯ ಮಾಡಿಕೊಡುತ್ತವೆ.
ಈ ಪುಸ್ತಕದ ಎರಡನೇ ಭಾಗವಾದ ಮಹಾಭಾರತದ ಯುದ್ದದ ಬಗ್ಗೆ ನಾನು ಹೆಚ್ಚೇನೂ ಬರೆಯಲು ಇಷ್ಟ ಪಡುವುದಿಲ್ಲ. ಏಕೆಂದರೆ, ನನಗೆ ಬೇಕಾದ ಭೀಮ, ದುರ್ಯೋಧನ, ಕರ್ಣ, ಅಭಿಮನ್ಯು ಮುಂತಾದವರನ್ನು ನಾನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ…
- ಮಾಕೋನಹಳ್ಳಿ ವಿನಯ್ ಮಾಧವ – ಪತ್ರಕರ್ತರು, ಲೇಖಕರು, ಬೆಂಗಳೂರು
