ಕತೆಗಾರರೆಂದು ಪ್ರಸಿದ್ಧರಾದ ಕೇಶವರೆಡ್ಡಿ ಹಂದ್ರಾಳರು ಮೊದಲ ಬಾರಿಗೆ ‘ಅಣು’ ಶೀರ್ಷಿಕೆಯ ಕಾದಂಬರಿ ಬರೆದಿದ್ದಾರೆ.ಅದನ್ನು ನನ್ನ ಸಹಪಾಠಿಗಳಾದ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ತಮ್ಮ ಅಂಕಿತ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ತಮ್ಮ ಎರಡು ಸಲದ ಧಾರಾವಿ ಮತ್ತು ಕಾಮಾಟಿಪುರದ ಪ್ರವಾಸದಿಂದ ಚಿಗುರಿದ ಕಾದಂಬರಿ ಇದು ಎಂದು ಲೇಖಕರು ಹೇಳಿಕೊಂಡಿದ್ದಾರೆ.ರಘುನಾಥ್ ಕೃಷ್ಣಮಾಚಾರ್ ಅವರು ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ….
ಕಳೆದ ನಾಲ್ಕು ದಶಕಗಳಿಂದ ಮುಂಬೈ ವಾಸಿಯಾದ ನಾನು ಕಾಣದ ಮುಂಬೈಯನ್ನು, ಕಾಣಿಸಿದ ಶ್ರೇಯಸ್ಸು ಈ ಲೇಖಕರದು. ಈಚೆಗೆ ತಾನೇ ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ ಅವರಿಗೆ ಕನ್ನಡ ವಿವಿ.ದ ಪುಸ್ತಕ ಬರೆಯಲು ಆಹ್ವಾನದ ಮೇರೆಗೆ, ಕಾಮಾಟಿಪುರದ ದರ್ಶನ ಮಾಡಿ ಬಂದೆವು. ಇಲ್ಲಿಯವರೆಗೂ ಮುಂಬೈನಲ್ಲಿ ಇದ್ದರೂ ಅದನ್ನು ನೋಡುವ ಅವಕಾಶ ದೊರೆತಿರಲಿಲ್ಲ. ನನ್ನ ಸಂಗಾತಿ ಅದನ್ನು ನೋಡುವ ಮೊದಲೇ ‘ ಕಾಮಾಟಿಪುರದ ಅತ್ತರು, ಮುಂಬೈ ತೆವಲಿನ ನೆತ್ತರು-” ಎಂದು ಅದನ್ನು ಕುರಿತು ಕವನ ಬರೆದಿದ್ದರು.

ಈ ಕಾದಂಬರಿ ಓದಿದ ಮೇಲೆ ,ಅದು ಎಷ್ಟು ನಿಜ ಎಂದು ಅರಿವಾಯಿತು. ಕರ್ನಾಟಕ ಮೂಲದ ಲಕುಮಿಬಾಯಿ ಧಾರಾವಿಯಲ್ಲಿ ನೆಲೆಸಿ, ತನ್ನ ದೇಹವನ್ನು ಮಾರಾಟ ಮಾಡಿಕೊಂಡರೂ, ಮನಸ್ಸನ್ನು, ಶುದ್ಧವಾಗಿ ಇಟ್ಟುಕೊಂಡು, ನಿರೂಪಕರಿಗೆ ,ಅವರಿಗೆ ಕಾಣದ ಮುಂಬೈ ದರ್ಶನ ಮಾಡಿಸುವಲ್ಲಿ ಯಶಸ್ವಿಯಾಗುತ್ತಾಳೆ.ಕಾದಂಬರಿಯ ಕೊನೆಯಲ್ಲಿ ಅವಳು ನಿರೂಪಕನ ಮಾತಿಗೆ ಮರುಳಾಗಿ, ತಾನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದ ಗಟ್ಟಿ ನಿಲುವಿನೊಂದಿಗೆ, ರಾಜಿ ಮಾಡಿಕೊಂಡು, ಹಣದ ಆಮಿಷಕ್ಕೆ ಒಳಗಾಗಿ, ಸ್ವಂತ ಮಗನಿಂದಲೇ ಕೊಲೆಗೆ ಈಡಾಗುವುದು, ದುರಂತದಲ್ಲಿ ಕಾದಂಬರಿ ಕೊನೆಗೊಳ್ಳಲು ಕಾರಣವಾಗುತ್ತದೆ. ನಿರೂಪಕನ ದೌರ್ಬಲ್ಯ ಕೂಡ ಇದಕ್ಕೆ ಸಾಧನವಾಗಿ ಪರಿಣಮಿಸುತ್ತದೆ.

ಇಷ್ಟಾದರೂ ಹಸಿವು ಮತ್ತು ಕಾಮವನ್ನು ಮೂಲದ್ರವ್ಯಗಳನ್ನಾಗಿ ಹೊಂದಿದ, ಈ ಕಾದಂಬರಿ ಕಾಣಿಸುವ ಕಾಣ್ಕೆ ಅನನ್ಯ. ಮನುಷ್ಯ ಸಮಾಜ ಕಟ್ಟಿಕೊಂಡ ಕೃತಕವಾದ ನೀತಿ ಅನೀತಿಗಳ ಕಲ್ಪನೆಗಳನ್ನು, ಹಸಿವು ಮತ್ತು ಕಾಮಗಳು ಬುಡಮೇಲು ಮಾಡುತ್ತವೆ. ಒಂದು ಜೀವಿ ಇನ್ನೊಂದು ಜೀವಿಯನ್ನು ಅವಲಂಬಿಸಿಯೇ, ಈ ಜೀವ ಜಾಲ ಅಸ್ತಿತ್ವದಲ್ಲಿರುವ ಪ್ರಾಥಮಿಕ ಸತ್ಯವನ್ನು ,ಈ ಕೃತಿ ಅನಾವರಣ ಮಾಡುವ ಬಗೆ ಅಸದೃಶವಾಗಿದೆ. ಅದಕ್ಕೆ ಈ ಕಾದಂಬರಿಯಲ್ಲಿ ಬರುವ ವಿಭಿನ್ನ ವರ್ಗಗಳಿಗೆ ಸೇರಿದ ಪಾತ್ರಗಳು ನಿದರ್ಶನವಾಗಿವೆ. ಇಂತಲ್ಲಿ ಜಾತಿ ಮತ ಧರ್ಮಗಳ ಕೃತಕ ಬೇಲಿಯನ್ನು ಇವು ದಾಟುತ್ತವೆ.ಹಿಂದೂ ಲಕುಮಿಬಾಯಿ ಮುಸ್ಲಿಂ ಖಾಸಿಂ ಬಾಯಿಯನ್ನು ರಕ್ಷಿಸುತ್ತಾಳೆ.ಕ್ರೈಸ್ತ ಫೆರ್ನಾಂಡಿಸ್ ಹಿಂದೂ ಮರಾಠಿ ಊರ್ಮಿಳಾ ಥಾಪರನನ್ನು( ಅಂದಹಾಗೆ ಥಾಪರ್ ಬೆಂಗಾಲಿ ಹೆಸರು ಅವಳು ಮರಾಠಿ?) ಕೈ ಹಿಡಿದಿದ್ದಾನೆ. ಅವನ ಅಕ್ಕನಿಗೆ ಕನ್ನಡದ ನಿರೂಪಕನ ಜೊತೆ ಮಲಗಲು ಅವಳ ಧರ್ಮ ಅಡ್ಡಿ ಬರುವುದಿಲ್ಲ.
ಮೇಲೆ ಉಲ್ಲೇಖಿಸಿದಂತೆ, ಹಸಿವು ಮತ್ತು ಕಾಮಗಳು ಎಲ್ಲ ಜೀವಿಗಳ ಸಾಮಾನ್ಯ ಮೂಲಭೂತ ಪ್ರವೃತ್ತಿಗಳಾದ್ದರಿಂದ, ಮೇಲಿನವು ಅವರನ್ನು ಬಾಧಿಸುವುದಿಲ್ಲ. ಬದಲಿಗೆ ದಾಟುವ ಸಾಧನಗಳಾಗುತ್ತವೆ.

ಇಲ್ಲಿ ಬರುವ ಮೇಲ್ವರ್ಗದ ಪ್ರತೀಕಗಳಾದ ಊರ್ಮಿಳಾ ಥಾಪರ್ ,ಚಿಮನ್ ಲಾಲ್, ಫೆರ್ನಾಂಡಿಸ್ ರು ಅವರ ಶಕ್ತಿ ದೌರ್ಬಲ್ಯಗಳನ್ನು ಅರಿತು, ಅದಕ್ಕೆ ಅನುಗುಣವಾಗಿ ಸಾಮ ದಾನ ಭೇದ ದಂಡೋಪಾಯಗಳನ್ನು ಬಳಸಿ , ತಮ್ಮ ಗಾಳಕ್ಕೆ ಸಿಕ್ಕ ಮೀನುಗಳನ್ನಾಗಿಸಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನವಾಗಿ ಬುದ್ಧಿಜೀವಿ ವರ್ಗಕ್ಕೆ ಸೇರಿದ ನಿರೂಪಕನನ್ನು ,ಅವನ ದೌರ್ಬಲ್ಯಗಳಾದ ಹೆಣ್ಣು, ಹೆಂಡಗಳ ಮೂಲಕ ವಶಪಡಿಸಿಕೊಂಡು, ಅವನನ್ನು ಡ್ರಗ್ಸ್ ಉತ್ಪಾದಿಸುವ ಚಿಮನಲಾಲ್ ನ ವಿರುದ್ಧ ಸಿಡಿದೆದ್ದು, ಕೋರ್ಟ್ ಗೆ ಹೋದ ಲಕುಮಿಬಾಯಿಯನ್ನು ,ಹಣದ ಆಮಿಷ ಒಡ್ಡುವ ಮೂಲಕ ಹಣಿಯುವ ಸಾಧನವಾಗಿ ಬಳಸಿಕೊಳ್ಳುವುದನ್ನು ನೋಡಬಹುದು. ತಮಗೆ ಬೇಕಾದ ಹಲಾಲ್ ಕೋರ ಧವಳಗಿರಿಯನ್ನು, ಕ್ರೈಸ್ತ ಧರ್ಮದ ಹೆಸರಿನಲ್ಲಿ ಕ್ಷಮಿಸುವುದು ಇದೇ ಹುನ್ನಾರದ ಭಾಗ.
ಕಾದಂಬರಿ ಈ ಮೂಲಕ ದಾಟಿಸುವ ದರ್ಶನ ಸಾರ್ವಕಾಲಿಕ. ಅದಕ್ಕೆ ಸಾಧನಗಳಾಗಿ ಹಸಿವಿನ ಪ್ರತೀಕವಾಗಿ ಇಲ್ಲಿ ಧಾರಾವಿ ಬಂದಿದ್ದರೆ, ಕಾಮದ ಪ್ರತೀಕವಾಗಿ ಕಾಮಾಟಿಪುರ ಬಂದಿವೆ. ಇವೆರಡನ್ನೂ ಬೆಸೆದು ,ಅಧಿಕೃತವಾಗಿ ಚಿತ್ರಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಚಿತ್ತಾಲರು ಮತ್ತು ಬಲ್ಲಾಳರು ತಮ್ಮ ಕಾದಂಬರಿಗಳ ಮೂಲಕ ,ಮುಂಬೈನ ಬಂಡವಾಳಶಾಹಿ ಮತ್ತು ಕಾರ್ಮಿಕ ಲೋಕದ ಅನಾವರಣ ಮಾಡಿದ್ದರೆ, ಇವರು ಮುಂಬೈನ ಅಧೋಲೋಕವನ್ನು, ಅದನ್ನು ಶೋಷಿಸುವ ಮೇಲ್ವರ್ಗದ ಅನಾವರಣ ಮಾಡಿದ್ದಾರೆ.
ಮೊದಲ ಬಾರಿಗೆ ಕನ್ನಡ ಕಾದಂಬರಿ ಪರಂಪರೆಯಲ್ಲಿ ಈ ಬಗೆಯ ಚಿತ್ರಣ ಮೂಡಿಬಂದಿದೆ. ಹಾಗಾಗಿ ಕನ್ನಡ ಕಾದಂಬರಿಗೆ ಹೊಸ ಆಯಾಮವನ್ನು ಕಲ್ಪಿಸಿದಂತಾಗಿದೆ. ಕೆಲವು ಪುನರುಕ್ತಿ ಮತ್ತು ಲಿಪಿ ಸ್ಖಾಲಿತ್ಯಗಳನ್ನು ಹೊರತು ಪಡಿಸಿದರೆ,ತಮ್ಮ ಮೊದಲ ಪ್ರಯತ್ನದಲ್ಲೇ ಇಂತಹ ಯಶಸ್ಸು ಸಾಧಿಸಿದ ಲೇಖಕರಿಗೆ ಮತ್ತು ಪ್ರಕಟಿಸಿದ ಅಂಕಿತದ ಪ್ರಕಾಶ್ ಪ್ರಭಾ ದಂಪತಿಗೆ ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
