ಕುವೆಂಪು ಕಥಾ ಸಾಹಿತ್ಯದಲ್ಲಿ ವೈಚಾರಿಕತೆ: ಒಂದು ಕಿರುನೋಟ

ಕುವೆಂಪು, ತಮ್ಮ ವಿದ್ಯಾಭ್ಯಾಸದ ಸಲುವಾಗಿ ಮೈಸೂರಿಗೆ ಬಂದು, ಅಲ್ಲಿ ತತ್ವಶಾಸ್ತ್ರ, ವಿಜ್ಞಾನ, ಮನಶ್ಶಾಸ್ತ್ರ ಮುಂತಾದ ಜ್ಞಾನ ಶಾಖೆಗಳಲ್ಲಿ, ಆಳವಾಗಿ ಮುಳುಗಿ ಹೋದರು. ಅದರಿಂದ ಹೊರಬಂದಾಗ, ಅವರ ವೈಜ್ಞಾನಿಕ, ವೈಚಾರಿಕ ದೃಷ್ಟಿ ಕೋನ ನಿಚ್ಚಳವಾಗಿದ್ದಿತು. ಮತ ಎನ್ನುವುದು ಮತಿಗೆಡಿಸುವ ಸಾಧನವಾಗಿರುವ ಅರಿವು ಅವರಲ್ಲಿ ಮೂಡಿದುದರ ಪರಿಣಾಮವಾಗಿ ಅವರ ‘ ಗೊಬ್ಬರ’, ನೇಗಿಲು’ ಹಾಗೂ ‘ ಕಲ್ಕಿ’ ಕವನಗಳು ಹೊರಬಂದವು.ಇನ್ನಷ್ಟು ವಿಚಾರವನ್ನು ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ತಪ್ಪದೆ ಓದಿ…

ಕುವೆಂಪು ಜನ್ಮದಿನದ ಅಂಗವಾಗಿ

ಆಧುನಿಕ ಕನ್ನಡದ ಸಂದರ್ಭದಲ್ಲಿ ವೈಚಾರಿಕ ನೆಲೆಯು ಹುಟ್ಟಿದ್ದು ಪಂಡಿತ ತಾರಾನಾಥರ’ ಧರ್ಮ ಸಂಭವ: ಕೃತಿಯೊಂದಿಗೆ. ನಮ್ಮ ಸುತ್ತಲಿನ ಬದುಕಿನ ಆಚಾರ ವಿಚಾರಗಳು, ನಂಬಿಕೆಗಳು,ಈ ಕಾಲದ ಬೆಳವಣಿಗೆಯ ದೃಷ್ಟಿಯಿಂದ ಎಷ್ಟರಮಟ್ಟಿಗೆ ಪ್ರಸ್ತುತ, ಅವುಗಳಲ್ಲಿ ಯಾವುದನ್ನು ಎಷ್ಟರಮಟ್ಟಿಗೆ ಸ್ವೀಕರಿಸಬೇಕು, ಎಂಬ ಜಿಜ್ಞಾಸೆಯನ್ನೆ ಸ್ಥೂಲವಾಗಿ ವೈಚಾರಿಕತೆ ಎಂದು ಕರೆಯಬಹುದು. ಇದನ್ನು ಇಂಗ್ಲೀಷ್ ನ ‘ Rationalism’ ಎನ್ನುವ ಪರಿಕಲ್ಪನೆಗೆ ಸಮಾನಾಂತರವಾಗಿ ಬಳಸಲಾಗುತ್ತಿದೆ. ಕಳೆದ ಶತಮಾನದ ಮೂರನೇ ದಶಕದ ವೇಳೆಗೆ ಕನ್ನಡದ ಸಂದರ್ಭದಲ್ಲಿ ಹುಟ್ಟಿದ ವಿದ್ಯಾವಂತರ ಸಮುದಾಯದ ಅನ್ಯ ಸಂಸ್ಕೃತಿಯ ವೈಜ್ಞಾನಿಕ ಸಂಪರ್ಕ ದಿಂದಾಗಿ ಈ ವೈಚಾರಿಕತೆಯನ್ನು ಗಳಿಸಿಕೊಂಡಿತು. ಅದು ಸಾಹಿತ್ಯ ಸಂದರ್ಭದಲ್ಲಿ ಪಡೆದ ರೂಪವನ್ನು ಸಾಹಿತ್ಯದಲ್ಲಿ ವೈಚಾರಿಕತೆ ಎಂದು ಗುರುತಿಸಲಾಗುತ್ತದೆ.’ ವೈಚಾರಿಕತೆ’ ಎನ್ನುವುದು ತನಗೆ ತಾನೇ ಮುಖ್ಯವಾದರೂ ,ಅದು ಸಾಹಿತ್ಯ ಕೃತಿಯೊಂದರ ಅಂಗವಾಗಿ ಮೈದಳೆದಾಗ , ವಿಶಿಷ್ಠವಾದ ಧ್ವನಿಯೊಂದನ್ನು ಪಡೆದು ಕೊಳ್ಳುತ್ತದೆ.ಇದು ನಮ್ಮ ಸಾಂಸ್ಕೃತಿಕ ಕಾರಣಗಳಿಗಾಗಿ ಬಹಳ ಮಹತ್ವದ್ದಾಗಿದೆ.

ಕುವೆಂಪು ಅವರ ವೈಚಾರಿಕತೆ ಅವರ ಕಥಾಸಾಹಿತ್ಯದಲ್ಲಿ ನೆಲೆಗೊಂಡಿರುವ ಪರಿಯನ್ನು ಗುರುತಿಸುವ ಮೊದಲು ಅವರ ವ್ಯಕ್ತಿತ್ವದ ಬೆಳವಣಿಗೆಯ ವಿಭಿನ್ನ ಹಂತಗಳನ್ನು ದಾಖಲಿಸುವುದು ಅಗತ್ಯ. ದಟ್ಟ ಮಲೆನಾಡಿನ ಪ್ರಾದೇಶಿಕ ಹಿನ್ನೆಲೆಯಿಂದ ಬಂದ ಕುವೆಂಪು ಅವರಿಗೆ ಪ್ರಕೃತಿ ಎನ್ನುವುದು ಹೊರಗಿನ ಸಂಗತಿಯಲ್ಲ. ಅದು ಅವರ ಒಳಗಿನ ಚೈತನ್ಯ. ಅವರ ವ್ಯಕ್ತಿತ್ವವನ್ನು ರೂಪಿಸಿದ ಮಹಾ ಶಕ್ತಿ. ಅಲ್ಲಿಯವರೆಗೆ ನಡೆದಿದ್ದ ದೈವಾರಾಧನೆ ಕುವೆಂಪು ಅವರ ಬರಹಗಳಲ್ಲಿ ” ಪ್ರಕೃತಿಯ ಆರಾಧನೆಯೆ ಪರಮಾರಾಧನೆ” ಯಾಗಿ ಪರಿಣಮಿಸಿತು. ಇದು ಅವರು ಸ್ವಾನುಭವದಿಂದ ಕಂಡುಕೊಂಡ ದರ್ಶನ. ಅವರ ನಿಸರ್ಗ ಕವಿತೆಗಳಲ್ಲಿ ಅಡಗಿರುವ ಮೂಲ ತತ್ವವಾದರೂ ಇದೇ ಆಗಿದೆ.

ಇದೇ ತತ್ವ ಅವರ ಕಥಾಸಾಹಿತ್ಯದಲ್ಲಿ ಮನುಷ್ಯ- ಮನುಷ್ಯರ ನಡುವಿನ ಸಂಬಂಧಗಳಲ್ಲಿ ಮಾತ್ರವಲ್ಲದೆ, ಮನುಷ್ಯ ಹಾಗೂ ಪ್ರಾಣಿ ಜಗತ್ತಿನ ಜತೆಗಿನ ಜೀವಪರ ಹುಡುಕಾಟಗಳಲ್ಲಿ ಕೂಡ ಮೈಪಡೆದುಕೊಂಡಿದೆ. ಅವರ ನೋವು- ನಲಿವು, ದು:ಖ -ದುಮ್ಮಾನ, ಕಾಮ- ಪ್ರೇಮ, ಸಾವು- ಸಂಕಟಗಳೊಂದಿಗೆ ಈ ಪ್ರಕೃತಿ ಎನ್ನುವುದು ತಳಕುಹಾಕಿಕೊಂಡಿದೆ. ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸುವದಾದರೆ – ಕಗ್ಗತ್ತಲ ಕಾಡಿನೊಳಗೆ ತಿಮ್ಮಿ ಗುತ್ತಿಯೊಂದಿಗೆ ಓಡಿಹೋಗುತ್ತಿರುವ ಸಂದರ್ಭ.ಆಗ ಮುಂಜಾನೆಯ ಕಾವಳ ಅವಳ ಕಣ್ಣಿಗೆ ಕಾಣಿಸುವುದು ಹೀಗೆ ” ಅಯ್ಯೋ ಭಾವ ….ಅಲ್ನೋಡು….. ಕೆಂಪು ಚೆಂಡು. ಮೇಲ್ನೋಟಕ್ಕೆ ಇದು ಒಂದು ಕುಗ್ರಾಮದ ಹುಡುಗಿಯ ಪ್ರತಿಕ್ರಿಯೆ. ಆದರೆ ಈ ವಿಸ್ಮಯವು ಅವಳ ಬಾಳಿನ ಅರುಣೋದಯದ ಸಂಭ್ರಮದೊಂದಿಗೆ ಸಮರಸಗೊಂಡಿದೆ. ದಿನನಿತ್ಯದ ಯಾಂತ್ರಿಕ ಕ್ರಿಯೆಯೆಂಬಂತೆ ಜರುಗುವ ಪ್ರತಿಯೊಂದು ವ್ಯಾಪಾರಕ್ಕೂ ಒಂದು ಅಲೌಕಿಕ ಗತಿ ಪ್ರಾಪ್ತವಾಗಿ ಬಿಟ್ಟಿದೆ.ಯಾಕೆಂದರೆ ವಾಚ್ಯ ವಿವರಣೆಗಳಿಗೆ ಮೀರಿದ ತಿಮ್ಮಿಯ ಅನುಭವ ಸ್ವರೂಪವನ್ನು ಹೀಗೆ ಹಿಡಿದಿಡಬೇಕಾದ ಅನಿವಾರ್ಯತೆಯನ್ನು ಅದು ಸೂಚಿಸುತ್ತದೆ.

ಇಂತಹ ಪ್ರಕೃತಿಯ ಸನ್ನಿಧಿಯಲ್ಲಿ ಬೆಳೆದ ಕುವೆಂಪು, ತಮ್ಮ ವಿದ್ಯಾಭ್ಯಾಸದ ಸಲುವಾಗಿ ಮೈಸೂರಿಗೆ ಬಂದು, ಅಲ್ಲಿ ತತ್ವಶಾಸ್ತ್ರ, ವಿಜ್ಞಾನ, ಮನಶ್ಶಾಸ್ತ್ರ ಮುಂತಾದ ಜ್ಞಾನ ಶಾಖೆಗಳಲ್ಲಿ, ಆಳವಾಗಿ ಮುಳುಗಿ ಹೋದರು. ಅದರಿಂದ ಹೊರಬಂದಾಗ, ಅವರ ವೈಜ್ಞಾನಿಕ, ವೈಚಾರಿಕ ದೃಷ್ಟಿ ಕೋನ ನಿಚ್ಚಳವಾಗಿದ್ದಿತು.ಇದು ಅವರ ಪ್ರಕೃತಿ ಪ್ರೇಮಕ್ಕೆ ಒಂದು ಬಗೆಯ ವಸ್ತುನಿಷ್ಠತೆಯನ್ನು ಒದಗಿಸಿತು.ಮಲೆನಾಡಿನ ಬದುಕಿನೊಳಗೆ ಹಾಸುಹೊಕ್ಕಾಗಿ ಸೇರಿಹೋಗಿರುವ ಅಜ್ಞಾನ, ಅಂಧಕಾರ, ಅಂಧಶ್ರದ್ದೆ,’ ಹಾಗೂ ಅವುಗಳನ್ನು ಬಂಡವಾಳವಾಗಿಸಿಕೊಂಡ ಪುರೋಹಿತಶಾಹಿ ಈ ಎಲ್ಲವುಗಳ ಅರಿವು ಅವರ ಸೃಜನಶೀಲ ಕ್ರಿಯೆಯ ಮೇಲೆ ಹೊಸ ಪರಿಣಾಮವನ್ನು ಉಂಟು ಮಾಡುವುದರೊಂದಿಗೆ, ಅವರ ಸಾಹಿತ್ಯಕ್ಕೊಂದು ಹೊಸ ಆಯಾಮವನ್ನು ರೂಪಿಸಿತು.ಆದುದರಿಂದಲೇ ಅವರು ತಮ್ಮನ್ನು ತಾವೇ ರೂಪಿಸಿದ ‘ಮನುಜಮತ ವಿಶ್ವ ಪಥ’ ಎನ್ನುವ ಘೋಷಣೆಯೊಂದಿಗೆ ಗುರುತಿಸಿಕೊಂಡರು.ಮತ ಎನ್ನುವುದು ಮತಿಗೆಡಿಸುವ ಸಾಧನವಾಗಿರುವ ಅರಿವು ಅವರಲ್ಲಿ ಮೂಡಿದುದರ ಪರಿಣಾಮವಾಗಿ ಅವರ ‘ ಗೊಬ್ಬರ’, ನೇಗಿಲು’ ಹಾಗೂ ‘ ಕಲ್ಕಿ’ ಕವನಗಳು ಹೊರಬಂದವು.ಈ ಕವನಗಳು ಕುವೆಂಪು ಕಾವ್ಯದ ದರ್ಶನವನ್ನು ವ್ಯಕ್ತಪಡಿಸುತ್ತಿವೆ ಎಂದರೆ ಅತಿಶಯೋಕ್ತಿಯೇನಲ್ಲ.

ಅವರ ‘ ಸಾಲದ ಮಗು’, ಧನ್ವಂತರಿ ಚಿಕಿತ್ಸೆ’ ಕಥೆಗಳು ಅವರ ಕಥಾಸಾಹಿತ್ಯದ ಮೂಲ ದ್ರವ್ಯಗಳಾಗಿವೆ.ಇಂದು ಸಾಲಹೊತ್ತ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿ ವರ್ತಮಾನದ ನಿತ್ಯ ಅನುಭವವಾಗಿದೆ. ನೂರು ವರ್ಷಗಳ ಹಿಂದೆ ಅದನ್ನು ಪತ್ತೆ ಹಚ್ಚಿದ ಶ್ರೇಯಸ್ಸು ಕುವೆಂಪು ಅವರಿಗೆ ಸಲ್ಲಬೇಕು. ಅಲ್ಲಿ ಬರುವ ವಿಶ್ವಾಮಿತ್ರ ಮತ್ತು ಪರಶುರಾಮ ಒಂದು ಬಗೆಯ ಬಂಡೆದ್ದ ಪುರಾಣ ಪಾತ್ರಗಳು. ಕತೆಯ ಕೊನೆಯಲ್ಲಿ ವಿಶ್ವಾಮಿತ್ರನ ಹೂಂಕಾರಕ್ಕೆ ಹುಸಿ ನಾಗರಿಕತೆಯೆಲ್ಲಾ ಸುಟ್ಟು ಬೂದಿ ಆಗುವುದನ್ನು ಗಮನಿಸಿದರೆ,ಈ ಚಿತ್ರಣದ ಹಿಂದೆ ಅವರ ಸಮಾಜವಾದಿ ದರ್ಶನದ ಒಲವನ್ನು ಗುರುತಿಸಬಹುದು.

ಇದೇ ದರ್ಶನ ಇನ್ನಷ್ಟು ವಿಸ್ತಾರವಾಗಿ ಅವರ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳಲ್ಲಿ ಮೈದಳೆದಿದೆ. ಇದರಲ್ಲಿ ವಿವಿಧ ಸಂಸ್ಕೃತಿಗಳ ಪಾತ್ರ ಪ್ರಪಂಚ ಕನ್ನಡ ಸಾಹಿತ್ಯ ಸಂದರ್ಭಕ್ಕೊಂದು ಹೊಸ ಆಯಾಮವನ್ನು ಕಲ್ಪಿಸಿದೆ. ಅಲ್ಲದೇ ಇಂದಿನ ಬಂಡಾಯ , ದಲಿತ ಸಾಹಿತ್ಯಗಳಿಗೆ ಒಂದು ಬುನಾದಿಯನ್ನು ಹಾಕಿದ ಶ್ರೇಯಸ್ಸು ಅವರದು. ಯಾಕೆಂದರೆ ಇಲ್ಲಿ ಯಾರಿದ್ದಾರೆ, ಯಾರಿಲ್ಲ.? ಬಾಡುಗಳ್ಳ ಸೋಮನಿರುವಂತೆಯೇ ,ಗುತ್ತಿ, ತಿಮ್ಮಿ, ಐತ ಪೀಂಚಲು ,ಹೂವಯ್ಯ, ಸೀತಮ್ಮ, ಮುಕುಂದಯ್ಯ,ಚಿನ್ನಮ್ಮ, ಭರಮಯ್ಯ ಹೆಗಡೆ, ಅಂತಕ್ಕ ಸೆಟ್ಟಿ, ಕಾವೇರಿ , ಹೀಗೆ ಮಲೆನಾಡಿಗೆ ಮಲೆನಾಡೆ ಅದರ ಎಲ್ಲಾ ಬಣ್ಣ, ವಾಸನೆಗಳೊಂದಿಗೆ ಪ್ರತ್ಯಕ್ಷವಾಗುತ್ತದೆ. ಇಲ್ಲಿ ಮನುಷ್ಯರು ಮಾತ್ರವಲ್ಲ, ಇಂಬಳದಂತಹ ಜಂತುವು, ಹುಲಿಯನಂತಹ ನಾಯಿಯೂ ಕಥೆಗೆ ಪೂರಕವಾಗಿ ಬರುತ್ತವೆ. ಗುತ್ತಿಯು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಲಿಯ ಪ್ರವಾಹದ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಕೊಂಡು ಹೋಗುವಾಗ, ತನ್ನ ಪ್ರೀತಿಯ ಹೆಂಡತಿ ಎಂಬುದನ್ನು ಗಮನಿಸದೆ ತಿಮ್ಮಿಯನ್ನು, ‘ ಎಲ್ಲಿಂದ ಬಂದೆ ಶನಿಮುಂಡೆ ,ನಿನ್ನ ಕಟ್ಟಿಕೊಂಡು ನನ್ನ ಹುಲಿಯ ಹೋದ ” ಎಂದು ಗುತ್ತಿ ಬಯ್ಯುತ್ತಾನೆ. ಪ್ರಾಣಿ ಮತ್ತು ಮನುಷ್ಯರ ಇಂತಹ ಅನ್ಯೋನ್ಯ ಸಂಬಂಧ ಕನ್ನಡ ಸಾಹಿತ್ಯದ ಮಟ್ಟಿಗೆ ಹೊಚ್ಚ ಹೊಸದಾದವು. ಇಲ್ಲಿಯವರೆಗೆ ಕೇವಲ ಮನುಷ್ಯ ಕೇಂದ್ರಿತವಾಗಿದ್ದ ಉದಾರವಾದಿ ವೈಚಾರಿಕತೆ ಸಮಸ್ತ ಪ್ರಾಣಿ ಜಗತ್ತನ್ನು ಒಳಗೊಳ್ಳುತ್ತಾ ಏಕಕಾಲಕ್ಕೆ ವೈವಿಧ್ಯವನ್ನು ವಿಸ್ತಾರವನ್ನು ಸಾಧಿಸಿದೆ. ಕುವೆಂಪು ಅವರ ವೈಚಾರಿಕತೆಯ ದ್ಯೋತಕವಾಗಿ ಮತಾಂತರದ ಮತ್ತು ‘ ಬೀಸೇಕಲ್ಲಿ’ ನ ಪ್ರಸಂಗಗಳು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ವಿಶಿಷ್ಟವಾಗಿ ರೂಪುಗೊಂಡಿವೆ. ಅಲ್ಲಿ ಬರುವ ಪಾದ್ರಿ ಸಂಜೀವಯ್ಯ ಮತಾಂತರದ ಸಾಧನವಾಗಿ ಬಳಸುವುದು ಬೈಸಿಕಲ್ ನ್ನು. ಅದರ ಟೈರುಗಳನ್ನು ಮುಟ್ಟಿ ನೋಡುವ ಐತ ಪೀಂಚಲುವಿನ ಮೊಲೆಗಳನ್ನು ನೆನಪಿಸುವ, ಅದರ ಮೃದುತ್ವ ದಿಂದ ರೋಮಾಂಚನಗೊಳ್ಳುತ್ತಾನೆ. ದೇವಯ್ಯನಂತವರು ಕೂಡ ಮತಾಂತರದ ಮೋಹಕ್ಕೆ ಒಳಗಾಗುವವರೆ. ( ದೇವಯ್ಯ ಸೈಕಲ್ ಕಲಿವ ಪ್ರಯತ್ನ ,ಅವನ ವೇಷಭೂಷಣಗಳಲ್ಲಿ ಆಗುವ ಬದಲಾವಣೆಗಳು).ಇದಕ್ಕೆ ತೀವ್ರ ಪ್ರತಿಭಟನೆಯನ್ನು ಅವನು ತನ್ನ ಹೆಂಡತಿಯಿಂದಲೇ ಎದುರಿಸಬೇಕಾಗುತ್ತದೆ. ಅವರಿಗೆ ಬುದ್ದಿ ಕಲಿಸುವ ಅನಂತಯ್ಯನಿದ್ದಾನೆ. ಆದ್ದರಿಂದ ಇಲ್ಲಿ ವಸಾಹತುಶಾಹಿ ಬಳಸುವ ವಿವಿಧ ಹುನ್ನಾರಗಳನ್ನು ,ಅದನ್ನು ಅನ್ಯಾನ್ಯ ನೆಲೆಗಳಲ್ಲಿ ವಿರೋಧಿಸುವ ಉಪಾಯಗಳನ್ನು ಏಕಕಾಲಕ್ಕೆ ಕುವೆಂಪು ಸೆರೆಹಿಡಿಯುತ್ತಾರೆ. ಅವರು ಪಾಶ್ಚಾತ್ಯ ದರ್ಶನವನ್ನು ಮೆಚ್ಚಿಕೊಂಡರೂ, ಅದು ಇತರ ವೇಷಗಳನ್ನು ತೊಟ್ಟು ಬರುವ ಅದರ ಅಪಾಯಗಳಿಗೆ ಕುರುಡಾಗಿರಲಿಲ್ಲ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಅದೇ ರೀತಿ ಒಕ್ಕಲು ಮಕ್ಕಳಲ್ಲಿ ಇರುವ ಮೂಢನಂಬಿಕೆಗಳನ್ನು ಅವರು ಪೋಷಿಸುವುದಿಲ್ಲ. ಹರಕೆಗೆ ಬಿಟ್ಟ ಕುರಿಯನ್ನು ಕಡಿಯಲು ಹೊರಟಾಗ, ಅದನ್ನು ತಪ್ಪಿಸಿ ಸಾಕಿಕೊಳ್ಳುವ ಹೂವಯ್ಯ, – ಇಡೀ ಪುರೋಹಿತ ಶಾಹಿ ಮತ್ತು ಒಕ್ಕಲು ಮಕ್ಕಳ ನಂಬಿಕೆಗಳಿಗೆ ಏಕಕಾಲಕ್ಕೆ ಸವಾಲಾಗಿದ್ದಾನೆ. ಪುರೋಹಿತರು ಬಳಸುವ ಮಂತ್ರ ತಂತ್ರಗಳಿಗೆ ಎಷ್ಟು ವಿರೋಧಿಯೋ, ಅಷ್ಟೇ ಹರಕೆಗೆ ಬಲಿಯೊಪ್ಪಿಸುವ ಮುಗ್ದರ ಮೂಢನಂಬಿಕೆಗಳಿಗೂ ವಿರೋಧಿಯಾಗಿದ್ದಾನೆ . ಆದ್ದರಿಂದ ಗ್ರಾಮಗಳಿಗೆ ಹಿಂದಿರುಗಿ ಎಂದು ಗಾಂಧಿಯವರು ಕೊಟ್ಟ ಅಂದಿನ ಕರೆಯನ್ನು ಕುವೆಂಪು ಹೂವಯ್ಯನ ಪಾತ್ರದ ಮೂಲಕ ಈಡೇರಿಸುತ್ತಾರೆ. – ತಾವು ನಾಡಿನ ಜಾಗೃತಿಗೆ ನಿಲ್ಲುವುದರ ಮೂಲಕ. ‌‌ ‌ ‌ಹೀಗಾಗಿ ಸಾಹಿತ್ಯದ ಮೂಲಕ ಕುವೆಂಪು ಅವರು ವಹಿಸಿದ್ದು ಒಂದು ಐತಿಹಾಸಿಕ ಮಹತ್ವದ ಪಾತ್ರವಾಗಿರುವಂತೆ, ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಂದು ಅನನ್ಯ ದಾಖಲೆಯಾಗಿ ಉಳಿಯುತ್ತದೆ. ಮನುಜ ಮತ ವಿಶ್ವಪಥ, ಸರ್ವೋದಯ, ಪೂರ್ಣ ದೃಷ್ಟಿ, ಸಮನ್ವಯತೆ – ಇವು ಅವರು ತಮ್ಮ ಸಾಹಿತ್ಯದ ಮೂಲಕ ಕೊಟ್ಟ ದರ್ಶನಗಳಾಗಿವೆ . ಅವುಗಳನ್ನು ಅರಗಿಸಿಕೊಂಡು ಬೆಳೆದಷ್ಟು ಕನ್ನಡ ಸಾಹಿತ್ಯ ಮಹತ್ವದ ದೇಣಿಗೆಯನ್ನು ಕೊಡಲು ಸಾಧ್ಯವಾಗುತ್ತದೆ.

ಇತ್ತೀಚೆಗೆ ಮೈಸೂರಿನ ಕುವೆಂಪು ಅವರ ಮನೆ ಉದಯರವಿಗೆ ಭೇಟಿಯಿತ್ತ ಸಂದರ್ಭದ ಫೋಟೋಗಳು : ಅವರ ಅಳಿಯ ಚಿದಾನಂದ ಗೌಡರೊಂದಿಗೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW