ಕಾವೇರಿ ನೋಡಲು ಸುಂದರವಾಗಿದ್ದಳು. ಓದಿನಲ್ಲಿ ಚುರುಕಾಗಿದ್ದಳು. ಮನೆಯರ ಪ್ರೀತಿ ಸಹ ಗೆದ್ದಿದ್ದಳು. ಮುಂದೆ ಓದಿಗಾಗಿ ಹಾಸ್ಟೆಲ್ ಸೇರಿದಳು, ಅಲ್ಲಿ ಕಾವೇರಿಗೆ ಹುಟ್ಟಿದ ಪ್ರೀತಿ, ಅವಳ ಬದುಕನ್ನೇ ಬದಲಾಯಿಸಿತು. ಯುವ ಕತೆಗಾರ ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ನೈಜ್ಯ ಕತೆ ತಪ್ಪದೆ ಓದಿ….
“ಈಗ ಅವರೆಲ್ಲರು ಬೇಕೆಂದು ಎಷ್ಟು ಬೇಡಿಕೊಂಡರು ನನಗೆ ಸಿಗುವುದಿಲ್ಲ. ನನ್ನಂತ ನತದೃಷ್ಟೆ ಯಾರಿಲ್ಲ ”
ಕಾವೇರಿ ( ಹೆಸರು ಬದಲಿಸಲಾಗಿದೆ ) ಹೇಳಿದ ಮಾತಿದು. ಹಾಸಿಗೆ ಮೇಲೆ ಬಳಲುತ್ತಿದ್ದ ಆಕೆಗೆ ಅದೆಷ್ಟೊ ನೋವುಗಳು ಕಾಡುತ್ತಿದ್ದವು. ತನ್ನ ನೋವನ್ನು ಯಾರೊಂದಿಗು ಹೇಳಿಕೊಳ್ಳಲಾಗದೆ ಒಳಗೊಳಗೆ ನೊಂದು ಬೆಂದಿದ್ದಳು. ಕಣ್ಣಲ್ಲಿ ನೀರು ತುಂಬಿತ್ತು, ಮುಖವು ತೇಜಸನ್ನು ಕಳೆದುಕೊಂಡಿತ್ತು. ಹೇಳಲು ತುಂಬಾ ವಿಷಯಗಳಿದ್ದರು ಮಾತು ಬಾರದೆ ಮೌನಿಯಾಗಿ ಒದ್ದಾಡುತ್ತಿದ್ದಳು. ಅವಳ ಬದುಕೆ ಅವಳಿಗೆ ಸೂತಕದಂತೆ ಕಂಡಿತ್ತು. ಇದು ಅವಳದಷ್ಟೆ ಕತೆಯಲ್ಲ ಕಾವೇರಿಯಂತಹ ಸಾವಿರಾರು ಹೆಣ್ಣುಮಕ್ಕಳು ನಮ್ಮ ಸಮಾಜದಲ್ಲಿ ಬದುಕುತ್ತಿದ್ದಾರೆ. ಮೌನವಾಗಿ ಕೊರಗುತ್ತಿದ್ದಾರೆ. ಅವರಿಗೆ ದ್ವನಿಯಾಗಲು ನನ್ನದೊಂದು ಸಣ್ಣ ಪ್ರಯತ್ನ.
ಕಾವೇರಿ ತುಂಟತನದಿಂದ ಬೆಳೆದ ಹುಡುಗಿ. ತಂದೆ ತಾಯಿ ಮಧ್ಯಮ ವರ್ಗದವರಾಗಿದ್ದು ಮಗಳನ್ನು ರಾಣಿಯ ತರ ಸಾಕಿದ್ದರು. ಅವಳು ಬಯಸಿದ್ದೆಲ್ಲವನ್ನು ತಂದುಕೊಟ್ಟು ಯಾವುದೆ ಕೊರತೆ ಬರದ ಹಾಗೆ ಮುದ್ದಾಗಿ ಸಾಕಿದ್ದರು. ಅಕ್ಕನಿಗೆ ಸರಿಸಾಟಿಯಾಗಿ ಒಬ್ಬ ತಮ್ಮನಿದ್ದ. ಸ್ವಲ್ಪ ತರಲೆ ಹಾಗು ಓದಿನಲ್ಲಿ ಹಿಂದೆ ಇದ್ದ ಕಾರಣ ತಂದೆ ತಾಯಿಯ ಪ್ರೀತಿ ಕೊಂಚ ಕಡಿಮೆಯಿತ್ತು. ಕಾವೇರಿ ನೋಡಲು ಸುಂದರವಾಗಿದ್ದಳು ಓದಿನಲ್ಲಿ ಚುರುಕಾಗಿದ್ದಳು. ಆದಕಾರಣ ಅವಳನ್ನು ಎಲ್ಲರು ಹಚ್ಚಿಕೊಂಡಿದ್ದರು. ಅಜ್ಜಿ ಮಾಡಿಸುವ ಪೂಜೆ ಪುನಸ್ಕಾರ, ಅತ್ತೆ ಹೇಳುವ ಕತೆಗಳು, ಅಪ್ಪ ಅಮ್ಮನ ಪ್ರೀತಿ, ಚಿಕ್ಕಪನ ವಾತ್ಸಲ್ಯದ ವಾತಾವರಣದಲ್ಲಿ ಬೆಳೆದ ಆಕೆಗೆ ವರ್ಷಗಳು ಹೇಗೆ ಉರುಳಿದವೆಂದು ಗೊತ್ತಾಗಲೆ ಇಲ್ಲ. ನೋಡನೊಡುತ್ತಲೆ ಹತ್ತನೆ ತರಗತಿಗೆ ಬಂದಳು.
ಫೋಟೋ ಕೃಪೆ : google
ಅವತ್ತು 10ನೇ ತರಗತಿಯ ಫಲಿತಾಂಶ ಬರುವ ದಿನ. ಮನೆಯಲ್ಲಿ ಕುತೂಹಲ ಎದ್ದು ಕಾಣುತಿತ್ತು. ಕಾವೇರಿ 92% ತಗೆದಿದ್ದಾಳೆಂದು ಗೊತ್ತಾದ ಮೇಲೆ ಇಡಿ ಹಳ್ಳಿಗೆ ಸಂತಸದ ಕ್ಷಣವಾಗಿತ್ತು. ಮನೆಯವರ ಕಾಲು ಭೂಮಿಯ ಮೇಲೆ ಇರಲೆ ಇಲ್ಲ. ತಂದೆ ಎಲ್ಲರೆದುರು “ನನ್ನ ಮಗಳು, ನನ್ನ ಮಗಳು ” ಎಂದು ಕೊಂಡಾಡಿದರೆ ತಾಯಿ ಮಗಳಿಗೆ ಕೆಟ್ಟ ಕಣ್ಣು ಬೀಳಬಾರದೆಂದು ದೃಷ್ಟಿ ತಗೆದಿದ್ದಳು. ಕಾವೇರಿಗೆ ಅದು ಮರೆಯಲಾಗದ ದಿನ. ಈಗಲು ನೆನೆಸಿಕೊಂಡರೆ ಸಣ್ಣ ನಗುವು ಮುಖದಲ್ಲಿ ಕಾಣುತ್ತದೆ.
ಮಗಳನ್ನು ಒಳ್ಳೆಯ ಕಾಲೇಜಿಗೆ ಸೇರಿಸಿ ಎಂದ ಹಿರಿಯರ ಮಾತನ್ನು ಕೇಳಿದ ಆಕೆಯ ತಂದೆ, ತಮ್ಮ ಹೊಲದ ಮೇಲೆ ಸಾಲಮಾಡಿ ಲಕ್ಷಗಟ್ಟಲೆ ಖರ್ಚು ಮಾಡಿ ಒಳ್ಳೆ ಪ್ರತಿಷ್ಟಿತ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸಿದರು. ಕಾಲೇಜಿಗೆ ಹೋಗಿ ಬರಲು ತುಂಬಾ ದೂರವಾಗುವುದೆಂದುಕೊಂಡು ಹಾಸ್ಟೆಲ್ಲಿಗೆ ಸೇರಿಸಿದರು. ಆಕೆ ಮೊದಲದಿನ ಕಾಲೇಜಿಗೆ ಹೋಗುವಾಗ ಎಲ್ಲರ ಕಣ್ಣಲ್ಲು ನೀರು ಬಂದಿತ್ತು. ತಂದೆಯಂತು ಬಿಕ್ಕಿ ಬಿಕ್ಕಿ ಅತ್ತಿದ್ದನು. ಚಿಕ್ಕಪ್ಪ ತನ್ನ ಮಗಳು ಸಾಧನೆ ಮಾಡುವಳೆಂಬ ಕನಸನ್ನು ಕಾಣುತ್ತಿದ್ದ. ಹಳ್ಳಿಯಿಂದ ಬಂದ ಹುಡುಗಿಗೆ ಪೇಟೆಯ ವಾತಾವರಣ ಹೊಸದಾಗಿ ಕಂಡಿತ್ತು. ಮೊದಮೊದಲು ಭಯವಾಗುತ್ತಿತ್ತು. ಮುಂದೆ ಪೇಟೆಯ ಸಂಗಡಿಗರ ಸಹವಾಸದಿಂದ ಎಲ್ಲವು ಸಾಮಾನ್ಯವೆನಿಸಿತು. ಹೀಗೆ ದಿನ ಕಳೆದಂತೆ 1st puc ಯಲ್ಲಿ 85% ತಗೆದಳು. ಮನೆಯಲ್ಲಂತು ಈ ಸಿಹಿ ಸುದ್ದಿ ಕೇಳಿ ಹಬ್ಬದ ವಾತಾವರಣವಾಗಿದ್ದಂತು ಸತ್ಯ.
16-18 ರ ವಯಸ್ಸೆ ಹಾಗೆ. ಮನಸಲ್ಲಿ ಏನೇನೊ ಆಸೆಗಳು ಚಿಗುರುತ್ತವೆ. ಯಾವುದು ಬೇಡವಾಗಿರುತ್ತದೊ ಅದೆ ಬೇಕೆನಿಸುತ್ತದೆ. ಹೊಸ ಹೊಸ ಅನುಭವಕೆ ಬೇರೆ ಲೋಕದಲ್ಲಿ ತೇಲುವಂತೆ ಭಾಸಾವಾಗುತ್ತದೆ. ಕನಸಿನನಲ್ಲಿ ಬರುವ ಹುಚ್ಚು ಕಲ್ಪನೆಗಳಿಗೆ ರೋಮಾಂಚನವಾಗುತ್ತದೆ. ಇದು ಹದಿಹರಿಯದ ವಯಸ್ಸಿನ ತಪ್ಪೊ ಇಲ್ಲ ಹಿಡಿತವಿಲ್ಲದ ಮನಸ್ಸಿನ ತಪ್ಪೊ ಗೊತ್ತಿಲ್ಲ. ಕಾವೇರಿಗೂ ಈ ಅನುಭವಗಳಾದವು.
ಹಾಸ್ಟೆಲ್ಲಿನಿಂದ ಕಾಲೇಜಿಗೆ ಹೋಗುವ ದಾರಿಯಲ್ಲಿ ತನಗಾಗಿ ಕಾಯುತ್ತಿದ್ದ ಹುಡುಗನ ಮೇಲೆ ಮೋಹವಾಯಿತು. ಗೆಳೆತನದಿಂದ ಶುರುವಾಗಿ ಪ್ರೀತಿಗೆ ಅಡಿಪಾಯ ಬಿದ್ದಿತು. ಓದುವ ಪುಸ್ತಕದಲ್ಲಿ ಪ್ರಿಯಕರನ ಹೆಸರು ಬರೆಯುವುದು ರೂಡಿಯಾಯಿತು. ಓದಿಗೆ ಟಾಟಾ ಹೇಳಿ ಹುಡುಗನ ಜೊತೆ ಸುತ್ತುವುದು, ದಿನರಾತ್ರಿ ಮಾತಾಡುವುದು, ಪತ್ರಗಳನ್ನು ಬರೆಯುವುದು ಶುರುವಾಯಿತು. ಕಾಲೇಜಿನ ಯಾವುದೊ ಮೂಲೆಯಲ್ಲಿ ಹುಟ್ಟಿದ ಪ್ರೀತಿಯ ವಿಷಯ ಇಡಿ ಕಾಲೇಜಿಗೆ ಹರಡಿ ಕೊನೆಗೆ ಮನೆಯ ಹೊಚ್ಚಲು ದಾಟಿತ್ತು. ಮೊದಮೊದಲು ನಂಬದ ಪಾಲಕರು ಅವಳನ್ನು ಕರೆಸಿಕೊಂಡು ಕೇಳಿದರು. ಪಾಲಕರ ಹಿತನುಡಿಗಳು ಅವಳಿಗೆ ಚುಚ್ಚುವ ಮಾತುಗಳಂತೆ ಕಂಡವು. ಕಣ್ಣಲ್ಲಿ ತುಂಬಿದ್ದ ಪ್ರೀತಿ ನೆತ್ತಿಗರಿ ಜಗತ್ತೆ ಬೇಡವೇನಿಸಿತು. “ನೀನಿಲ್ಲದಿದ್ದರೆ ಸಾಯುತ್ತೇನೆ” ಎಂದು ಹೇಳಿದ ಪ್ರೀಯಕರನ ಮಾತು ನಿಜವೆಂದುಕೊಂಡು ಕೊನೆಗೆ ಮನೆಬಿಟ್ಟು ಓಡಿ ಹೋದಳು.
ಫೋಟೋ ಕೃಪೆ : google
ಅತಿಯಾದ ಪ್ರೀತಿಯಿಂದ ಸಾಕಿದ ಮಗಳು ಓಡಿಹೋಗಿದ್ದಾಳೆಂದು ಗೊತ್ತಾದ ಮೇಲೆ ಪಾಲಕರಿಗೆ ಆಗಸವೆ ಮುಗುಚಿ ಬಿದ್ದಂತಾಯಿತು. ಎಷ್ಟು ಹುಡುಕಿದರು ಅವಳು ಸಿಗಲೆ ಇಲ್ಲ. ದಿನರಾತ್ರಿ ಕಣ್ಣಿರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಎರಡು ದಿನದ ನಂತರ ಫೋನಿಗೆ ಬಂದ ಕಾವೇರಿಯ ಮದುವೆ ಫೋಟೊ ನೋಡಿ ಕುಸಿದು ಬಿದ್ದರು. ಮರ್ಯಾದೆ ಬೀದಿಗೆ ಬಂದು ನಾಲ್ಕು ಜನರ ಬಾಯಿಗೆ ಸಿಲುಕಿಕೊಂಡಿತು. ಹೊರಗೆ ಹೋದಾಗ ಚಿಮಾರಿ ಹಾಕುವ ಜನರಿಂದ ರೋಸಿಹೋದರು. ಆದ ಅವಮಾನವನ್ನು ತಾಳಲಾರದೆ ಕಾವೇರಿಯ ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡರು. ತಂದೆ ತಾಯಿಯನ್ನು ಕಳೆದುಕೊಂಡ ಮಗ ಹುಚ್ಚನಾದ. ಸದಾ ಖುಷಿಯಲ್ಲಿ ಮುಳುಗಿದ್ದ ಮನೆಗೆ ಬಿರುಗಾಳಿ ಬೀಸಿ ಸ್ಮಶಾನವಾಯಿತು. ತಂದೆ ತಾಯಿಯರ ಸುದ್ದಿ ಕೇಳಿದ ಕಾವೇರಿ ಓಡಿ ಬಂದಳು ಆದರೆ ಅವರ ಮುಖದರ್ಶನ ಅವಳಿಗೆ ಆಗಲಿಲ್ಲ. ವಾತ್ಸಲ್ಯದಿಂದ ಸಾಕಿದ ಚಿಕ್ಕಪ್ಪ ಅವಳನ್ನು ನೋಡಲು ನಿರಾಕರಿಸಿದ. ಕುಟುಂಬದವರಿಗೆ ಅವಳು ಬೇಡವಾದಳು. ಹಳ್ಳಿಯ ಜನ ತಂದೆ ತಾಯಿಯರನ್ನು ಕೊಂಡ ಕೊಲೆಗಡಕಿ ಎಂದು ಚಿಮಾರಿ ಹಾಕಿದರು.
ತಂದೆ ತಾಯಿಯನ್ನು ಕಳೆದುಕೊಂಡ ಮೇಲೆ ಕಾವೇರಿಗೆ ಗಂಡನೆ ಆಸರೆಯಾಗಿದ್ದ. ಆದರೆ ಮದುವೆಯಾದ ಒಂದು ವರ್ಷದ ಮೇಲೆ ಅವನ ನಿಜವಾದ ಮುಖ ಬಯಲಾಯಿತು. ಬದುಕು ಬಂಗಾರವಾಗುತ್ತದೆಂದು ತಿಳಿದಿದ್ದ ಆಕೆಗೆ, ಗಂಡ ಬೇರೆ ಹೆಣ್ಣಿನ ಸಹವಾಸ ಮಾಡುತ್ತಿರುವ ಸಂಗತಿ ತಿಳಿದು ಎದೆ ಒಡೆದು ಹೊಯಿತು. ಪ್ರತಿದಿನ ಜಗಳವಾಗುವುದು ಸಹಜವಾಯಿತು. ಕುಡಿದು ಬರುವ ಗಂಡನ ಸಿಟ್ಟಿಗೆ ಮೈಮೇಲೆ ಗಾಯವಾದವು. ತವರು ಮನೆಗೆ ಬೇಡವಾದ ಆಕೆ ಈಗ ಗಂಡನ ಮನೆಯಲ್ಲಿ ಮನೆಕೆಲಸದವಳಂತೆ ಇರತೊಡಗಿದಳು. ಮಾಡದ ತಪ್ಪಿಗೆ ಪೆಟ್ಟು ತಿನ್ನುವಾಗ ತಂದೆ ತಾಯಿಯ ನೆನಪಾಯಿತು. ನೋವಿನಲ್ಲಿ ಮಲಗಿದಾಗ ತವರು ಮನೆಯ ಕನಸು ಬೀಳತೊಡಗಿತು. ತಂದೆ ತಾಯಿಯ ಸಾವಿಗೆ ತಾನೆ ಕಾರಣವೆಂಬ ಕೊರಗು ಸದಾ ಕಾಡಲಾರಂಬಿಸಿತು. ಕಥೆಯು ವ್ಯಥೆಯಾಗಿ ಅನಾರೋಗ್ಯದಿಂದ ಬಾಳತೊಡಗಿದಳು. ಕೊನೆಗೆ ಆಕೆಯ ಬದುಕು ಮಸಣವಾಯಿತು.
ಇದು ಕಾವೇರಿಯ ಕತೆಯಷ್ಟೆಯಲ್ಲ. ಅವಳಂತಹ ಹಲವಾರು ಯುವತಿಯರು ನಮ್ಮ ಸಮಾಜದಲ್ಲಿ ಬಳಲುತ್ತಿದ್ದಾರೆ. ಅದೆಷ್ಟೊ ಮುಗ್ದ ಜೀವಿಗಳು ತಮ್ಮ ಬದುಕನ್ನು ತಾವೆ ಹಾಳು ಮಾಡಿಕೊಂಡಿದ್ದಾರೆ. ಪ್ರೀತಿಸುವುದು ತಪ್ಪಲ್ಲ ಆದರೆ ಮನೆಯಲ್ಲಿ ಒಪ್ಪಿಸದೆ ಓಡಿಹೋಗುವುದು ತಪ್ಪು. ಮನೆಯವರು ಒಪ್ಪಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವುದು ಇನ್ನೂ ದೊಡ್ಡ ತಪ್ಪು. ಮುಂದೆ ಹೆಜ್ಜೆ ಇಡುವ ಮುನ್ನ ಒಮ್ಮೆಯಾದರು ತಂದೆ ತಾಯಿ ಅಣ್ಣ ತಂಗಿ ಬಗ್ಗೆ ಯೋಚಿಸಿ. ನಿಮ್ಮ ಒಂದು ತಪ್ಪು ನಿರ್ಧಾರ ಬೇರೆಯವರ ಬದುಕಿಗೆ ಮುಳುವಾಗಬಹುದು. ಓಡಿಹೋದವರೆಲ್ಲರ ಬದುಕು ಹೀಗೆ ಆಗಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಓಡಿಹೋಗಿ ಮದುವೆಯಾಗಿ ಕೊನೆಗೆ ವಿಚ್ಚೆದನ ಪಡೆದ ಅದೆಷ್ಟೊ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಅಂತಹ ಕತೆಗಳ ಸಾಲಿನಲ್ಲಿ ಕಾವೇರಿಯ ಕತೆ ಕೂಡ ಒಂದು. ಪ್ರೀತಿಸಿ ಹಾಗೆ ಮನೆಯಲ್ಲಿ ಒಪ್ಪಿಸಿ.
- ವಿಕಾಸ್. ಫ್. ಮಡಿವಾಳರ – ಯುವ ಲೇಖಕರು,