ಪೂರ್ಣಿಮಾ, ಚಂದ್ರಶೇಖರ ಮೊದಲರಾತ್ರಿಯಲ್ಲಿ ಎಲ್ಲರ ಮೊದಲರಾತ್ರಿಯಂತೆ ಇರಲಿಲ್ಲ. ಒಂದೆರೆಡು ತಿಂಗಳಾದರೂ ಪೂರ್ಣಿಮಾ ಗಂಡ ಚಂದ್ರಶೇಖರನ ಜೊತೆಗಾಗಲಿಲ್ಲ. ಅದಕ್ಕೆ ಪೂರ್ಣಿಮಾ ಅನುಭವಿಸಿದ ನೋವುಗಳಿದ್ದವು. ಅದೇನು ನೋವುಗಳು? ತಪ್ಪದೆ ಪೂರ್ತಿ ಓದಿ ಪ್ರಬಂಧ ಅಂಬುತೀರ್ಥ ಅವರ ಕತೆ…
ಪೂರ್ಣಿಮ ನಿಧಾನವಾಗಿ ಕಣ್ಣು ತರೆದು ಟೆಂಪೊ ಟ್ರಾವೆಲರ್ ನಿಂದ ಹೊರ ಜಗತ್ತಿನೆಡೆಗೆ ದೃಷ್ಠಿ ಹಾಯಿಸಿದಳು. ಆಕೆ ಜೀವಮಾನದಲ್ಲೇ ಮೊಟ್ಟಮೊದಲ ಬಾರಿಗೆ ಮಲೆನಾಡಿನ ವಾತಾವರಣ ನೋಡುತ್ತಿರುವುದು. ಆ ಹೊಸ ಊರಿನ ನಸುಕಿನ ಹೊಸ ಬೆಳಕು ಅವಳಲ್ಲಿ ಪುಳಕ ತಂದಿತ್ತು. ಟಿ ಟಿ ವಾಹನ ತೀರ್ಥಹಳ್ಳಿ ಪಟ್ಟಣ ದಾಟಿ “ಬೊಬ್ಬಿ” ಊರಿನತ್ತ ಸಾಗುತ್ತಿತ್ತು. ಮಲೆನಾಡಿನ ಇಬ್ಬನಿ ಮುಸುಕಿದ ಸುಂದರ ಬೆಳಗು ಅದು. ಜನ ಶಾಲು ಸ್ವೆಟರ್ ತೊಟ್ಟು ಬೆಳಗಿನ ಅದು ಇದು ಕೆಲಸ ಮಾಡ್ತಿದ್ದಾರೆ.
ಹಸಿರ ಹಾದಿಗೆ ಇಬ್ಬನಿಯ ಸಿಂಚನ. ಅದು ಬೊಬ್ಬಿ ನಾರಾಯಣ ಬಾಯಾರ್ ಮಗ ಚಂದ್ರಶೇಖರ ನ ಮದುವೆ ದಿಬ್ಬಣದ ವಾಹನ. ಹಿಂದಿನ ದಿನ ಬೆಳಗಾವಿಯ ಮಠವೊಂದಕ್ಕೆ ಸೇರಿದ ಅಬಲಾಶ್ರಮದಲ್ಲಿ ಸರಳವಾಗಿ ಚಿ ಸೌ ಪೂರ್ಣಿಮಾಳನ್ನು ಮದುವೆ ಮಾಡಿಕೊಂಡು ಮನೆಗೆ ಬರುತ್ತಿದ್ದಾರೆ. ಪೂರ್ಣಿಮಾ ಅನಾಥೆಯಾದರೂ ಅತ್ಯಂತ ಸುಂದರಿ. ಚಂದ್ರಶೇಖರನಲ್ಲದೇ ಆಶ್ರಮಕ್ಕೆ ವಿವಾಹಾಪೇಕ್ಷೆಯಿಂದ ಹೆಣ್ಣು ನೋಡಲು ಬಂದವರೆಲ್ಲರೂ ಪೂರ್ಣಿಮಾಳನ್ನು ಮದುವೆ ಆಗ್ತೀನಿ ಅಂದರೂ ಹದಿನೈದು ವರ್ಷ ಅಂತರವಾದರೂ ಚಂದ್ರಶೇಖರನ ನೇರ ನಡೆ ನುಡಿಗೆ ಮನಸೋತು ಒಪ್ಪಿ ಮದುವೆ ಯಾಗಿ ಬೊಬ್ಬಿಯ ಮನೆ ತುಂಬಲು ಬಂದಳು.
ಒಂದು ದೊಡ್ಡ ಗೇಟು ದಾಟಿ ಟಿ ಟಿ ಮನೆಯ ಅಂಗಳಕ್ಕೇ ಹೋಗಿ ನಿಂತಿತು. ಕೆಲವೇ ದಿನಗಳ ಹಿಂದೆ ಮಳೆಗಾಲ ಸಂಪೂರ್ಣವಾಗಿ ನಿಂತ ಗುರುತು ಆ ಪರಿಸರದಲ್ಲಿ ಕಾಣುತ್ತಿತ್ತು.
ಅದು ದಿಬ್ಬಣ ಬರುವ ಮನೆ ಅಂತ ಮಾವಿನ ತೋರಣದ ಘಂ ಎಂಬ ಸುವಾಸನೆ ಹೇಳುತ್ತಿತ್ತು. ಚಂದ್ರಶೇಖರನ ಅಕ್ಕಂದಿರು ಅತ್ತೆಯಂದಿರು ಮನೆಯೊಳಗೆ ದಾಟಿ ಅಕ್ಕಿ ಸೇರು ಇಟ್ಟು ಒಳಗೆ ಸ್ವಾಗತಿಸಲು ಸಿದ್ದವಾದರು.
ಈ ಮಲೆನಾಡು ಈ ಕೌಟುಂಬಿಕ ಜಗತ್ತು ಪಾಪ ಅಬಲಾಶ್ರಮದಲ್ಲಿ ಬೆಳೆದ ಪೂರ್ಣಿಮಾಗೆ ಹೊಸತು. ಅಕ್ಕಿ ಸೇರು ಒದ್ದು ಒಳಬಂದವಳಿಗೆ ಆ ವಿಶಾಲವಾದ ಎರಡು ಅಂತಸ್ತಿನ ಹಂಚಿನ ಉಪ್ಪರಿಗೆ ಮನೆ ಅದ್ಬುತ ಅರಮನೆಯಂತೆ ಕಂಡಿತು. ಮನೆಯಲ್ಲಿ ನೆಂಟರಿಷ್ಟರು ಸೇರಿ ಮದುವೆ ಮನೆ ಗೌಜು ಶುರುವಾಯಿತು. ಆ ದಿನ ಎಲ್ರಿಮಾಡ ವಿರಾಮ. ಮಾರನೇ ದಿನ ಹತ್ತಿರದ ಬಳಗ ಊರುಮನೆ ಆಪ್ತೇಷ್ಟರಿಗೆ ಒಂದು ಔತಣ ಕೂಟ ಮತ್ತು ಗಣಪತಿ ಹೋಮ.
ಆ ರಾತ್ರಿಯೇ … ಪ್ರಸ್ಥ
ರಾತ್ರಿ ಶಯನೋತ್ಸವಕ್ಕೆ ಹೋಗುವ ನೂತನ ವಧು ವರರಿಗೆ ಅಕ್ಕ ಭಾವ ಕಾಡಿಸಿಟ್ಟರು. ಪೂರ್ಣಿಮಾ ನಾಚಿ ನೀರಾದಳು. ಅಕ್ಕಂದಿರು ಪೂರ್ಣಿಮಾಗೇ ಹೆಣ್ಣು ಕೊಡ್ತಿಯಾ ಹೊನ್ನು ಕೊಡ್ತಿಯಾ ಅಂತ ಕೇಳತೊಡಗಿದರು. ಶಯನೋತ್ಸವಕ್ಕೆ ಹಾಸಿಗೆ ಶೃಂಗಾರ ಮಾಡಿದವರಿಗೆ ಮಲೆನಾಡಿನ ಕಡೆಯಲ್ಲಿ ಹಣ ಉಡುಗೊರೆ ಕೊಡ ಬೇಕು. ಅಕ್ಕಂದಿರು ಅಷ್ಟು ಸುಲಭವಾಗಿ ಬಿಟ್ಟು ಕೊಡಲಿಲ್ಲ… ತಮ್ಮ ನನ್ನು ರೇಗಿಸಿ ಕಾಡಿಸಿ ಒಂದಷ್ಟು ಹಣ ಕಿತ್ತುಕೊಂಡು ಕೋಣೆ ಬಿಟ್ಟು ಹೊರ ಬಂದರು.
ರಾತ್ರಿ ಕೋಣೆಯ ಹೊರಗಿನಿಂದ ಗಲಾಟೆ ಮಾಡಿದರು… ಅಲರಾಂ ಸದ್ದು ಮಾಡತೊಡಗಿತು. ನೂತನ ವಧುವರರು ಒಂದು ನಿಮಿಷವೂ ನಿದ್ರಿಸಬಾರದೆಂದು ಕುಟುಂಬ ಸ್ಥರ ಆಶಯ….
ಆದರೆ
ಆದರೆ
ಆದರೆ…. ಆದದ್ದೇ ಬೇರೆ… ಪೂರ್ಣಿಮಾ, ಚಂದ್ರಶೇಖರನಿಗೆ ಮೈ ಮುಟ್ಟಲೇ ಬಿಡಲಿಲ್ಲ…!!!
ಮೊದಮೊದಲಿನ ದಿನಗಳಲ್ಲಿ ಚಂದ್ರಶೇಖರನಿಗೆ ಆಕೆ ಅಬಲಾಶ್ರಮ ದ ವಾತಾವರಣದಲ್ಲಿ ಬೆಳೆದವಳು. ಗಂಡ ಸಂಸಾರದ ಕಲ್ಪನೆ ಹೇಗೆ ಬರಬೇಕು ಒಂದೆರೆಡು ವಾರದೊಳಗೆ ಸರಿಯಾಗಬಹುದು ಅಂತ ಯೋಚಿಸಿ ಸುಮ್ಮನಾದ.
ಮನೆಯಲ್ಲಿ ಅಮ್ಮ ಶಾರದಮ್ಮ ಸೊಸೆ ಪೂರ್ಣಿಮಾಗೆ ಮನೆಯ ರೀತಿ ನೀತಿ, ಆಚಾರ ವಿಚಾರ, ಮಡಿ ಮೈಲಿಗೆಯ ಬಗ್ಗೆ ತಿಳಿವಳಿಕೆ ಕೊಟ್ಟು ತರಬೇತು ಮಾಡತೊಡಗಿದರು. ಪೂರ್ಣಿಮಾ ಎಲ್ಲವನ್ನೂ ಶ್ರದ್ದೆಯಿಂದ ಕಲಿತು ಕೊಳ್ಳತೊಡಗಿದಳು. ನೋಡ ನೋಡುತ್ತಲೇ ಊರು ಮನೆಯವರಿಗೆ ಈಕೆ ಸ್ವಜಾತಿಯ ಹುಡುಗಿಯೇ ಎಂಬಷ್ಟರಮಟ್ಟಿಗೆ ತಯಾರು ಮಾಡಿದರು ಶಾರದಮ್ಮ.
ಊಟಕ್ಕೆ ಕೂತಾಗ ಅತ್ತೆ ಶಾರದಮ್ಮ ಸೊಸೆಗೆ..
“ನೋಡು ಪೂರ್ಣಿ .. ಉಣ್ಣೋ ಬಲದೇ ಕೈಯಿಂದ ಸೌಂಟಿನಲ್ಲಿ ಹುಳಿ ಬಡಿಸಿಕೊಳ್ಳಕಾಗ್ದು… ಎಡದೇ ಕೈಯಲ್ಲಿ ಒಂದು ಕಾಲಿ ಬಟಲಿಗೆ ನೀರು ಹಾಕಿ ಕೊಂಡು ಕೈ ಶುದ್ದ ಮಾಡಿಕೊಂಡು ಸೊಟಗ ಮುಟ್ಟಬೇಕು.”… ಈ ತರ ತರಬೇತಿ ನೆಡಿತಿತ್ತು.
ನೋಡು ಪೂರ್ಣಿ ಇದು ನೀ ಬಲ ಗಾಲಿಟ್ಟು ಒಳಗೆ ಬಂದ ” ವಾಸ್ತು ಬಾಗಲು'”.. ಈ ಮನೆಗೆ ನೀನು ಇನ್ನು ಮೇಲೆ “ಭಾಗ್ಯ ಲಕ್ಷ್ಮಿ” , ಸಂತಾನ ಲಕ್ಷ್ಮೀ, ಧನ ಲಕ್ಷ್ಮೀ, ಧಾನ್ಯ ಲಕ್ಷ್ಮೀ “…
ಎಲ್ಲಾ ನೀನೇ… ” ಆ ಎಲ್ಲಾ ಲಕ್ಷ್ಮೀ ಆಗುವ ಭಾಗ್ಯ ಕೊಟ್ಟ ಈ ಮನೆಯ ವಾಸ್ತು ಬಾಗಿಲನ್ನು ಪ್ರತಿ ದಿನ ಬೆಳಿಗ್ಗೆ ತೊಳೆದು … ನೋಡು ಹೀಗೆ ರಂಗೋಲಿ ಎಳೆ ಎಳೆದು, ಕುಂಕುಮ ಅರಿಷಿಣ ಹಚ್ಚಿ ನಮಸ್ಕಾರ ಮಾಡಬೇಕು…. ಅಂತ ಮಾಹಿತಿ ಕೊಡತೊಡಗಿದರು. ಈ ಎಲ್ಲಾ ತರಬೇತಿಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾದಳು ಪೂರ್ಣಿಮಾ. ಗಂಡ ಅತ್ತೆ ಮಾವರಿಗೆ ವಿಧೆಯಳಾಗಿ ನಡೆದುಕೊಂಡು ಇಡೀ ಊರಿನವರು ಚಂದ್ರಶೇಖರನ ಅದೃಷ್ಟ ದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಚಂದ್ರಶೇಖರನಿಗೆ ಮದುವೇನೇ ಇಲ್ಲವೇನೋ ಎಂದಾದಾಗ ಅನಾಥ ಹುಡುಗಿಯಾದರೂ ಅದ್ಬುತ ಗುಣ ನಡತೆಯ ಹುಡುಗಿ ಸಿಕ್ಕಿ ಕುಟುಂಬಸ್ಥರಿಗೆ ನೆಮ್ಮದಿ ಮೂಡಿಸಿದ್ದಳು ಪೂರ್ಣಿಮಾ. ಸರಿ ಒಂದೆರೆಡು ತಿಂಗಳಾದರೂ ಪೂರ್ಣಿಮಾಳ ಒಸುಗೆ ಚಂದ್ರಶೇಖರ ನ ಜೊತೆಗಾಗಲಿಲ್ಲ….!!!??? ಚಂದ್ರಶೇಖರನಿಗೆ ಇದು ಯಾರೊಂದಿಗೋ ಹೇಳಿಕೊಳ್ಳಲಾಗದ ಒಡಲ ಸುಡುವ ದಳ್ಳುರಿ.
ಹಗಲೆಲ್ಲ ತುಂಬಾ ಚೆನ್ನಾಗಿಯೇ ಚಂದ್ರಶೇಖರನ ಜೊತೆಗೆ ಅನ್ಯೋನ್ಯ ದಾಂಪತ್ಯ ಮಾಡುವ ಪೂರ್ಣಿಮಾ ರಾತ್ರಿ ಕೋಣೆಯಲ್ಲಿ ಒನಕೆಮುಂಡಿಗೆ ಹುಳದ ತರ ಸುರಳಿ ಸುತ್ತಿ ಮಲಗಿ ಬಿಡ್ತಾಳೆ..!?
ಹೆಚ್ಚು ಒತ್ತಡ ಮಾಡಿದರೆ ಕಣ್ಣೀರು ಹಾಕ್ತಾಳೆ… ಹೇಗೆ ಹೆಂಡತಿಯನ್ನು ಸರಿ ದಾರಿಗೆ ತರೋದೆಂದೇ ಅರಿಯದೇ ಯಾರೊಂದಿಗೂ ಹೇಳಿಕೊಳ್ಳದೇ ಮಂಕಾಗುತ್ತಾನೆ ಚಂದ್ರು. ತುಂಬಾ ಯೋಚನೆ ಮಾಡಿದ ಚಂದ್ರುಗೆ ಇದನ್ನು ಒಮ್ಮೆ ದೊಡ್ಡಪ್ಪನ ಮಗಳು ಅಕ್ಕ ಡಾಕ್ಟರ್ ನಾಗರತ್ನಳ ಬಳಿ ಸಲಹೆ ಕೇಳಬೇಕು ಎನಿಸಿತು. ಅವರು ಬೆಂಗಳೂರಿನಲ್ಲಿ ಪ್ರಖ್ಯಾತ ಪ್ರಸೂತಿ ತಜ್ಞೆ.
ಒಂದಿನ ಅಕ್ಕನ ಬಿಡುವಿನ ವೇಳೆ ನೋಡಿ ಚಂದ್ರು ಕರೆ ಮಾಡಿ ನನ್ನ ಕೋಣೆಯೊಳಗಿನ ದಾ0ಪತ್ಯ ಹೀಗಿದೆ ಅಂತ ಅಳಲು ತೋಡಿಕೊಂಡ. ಸರಿ ಆಕೆಯನ್ನು ಇಲ್ಲಿಗೇ ಕರೆದುಕೊಂಡು ಬಾ ಒಮ್ಮೆ ಟೆಸ್ಟ್ ಮಾಡಿ ಸಮಾಲೋಚನೆ ಮಾಡಿ ಸರಿ ಪಡಿಸೋಣ… ಇದೆಲ್ಲಾ ಬಗೆ ಹರಿವ ಸಮಸ್ಯೆ … ಚಿಂತೆ ಬೇಡ ನಾನಿರುವೆ. ಅಂತ ಅಭಯ ನೀಡಿದರು.
ಒಂದಿನ ಬೊಬ್ಬಿಯಿಂದ ಚಂದ್ರಶೇಖರ ಪೂರ್ಣಿಮಾ ದಂಪತಿಗಳು ಬೆಂಗಳೂರಿಗೆ ಪ್ರಯಾಣ ಬೆಳಸಿದರು. ಅಕ್ಕ ಡಾಕ್ಟರ್ ನಾಗರತ್ನರ ಕ್ಲಿನಿಕ್ ಗೆ ಹೋಗಿ ಭೇಟಿ ಮಾಡಿದರು. ಚಂದ್ರುವನ್ನು ಕೋಣೆಯಿಂದ ಹೊರಗೆ ಕಳುಹಿಸಿ ಪೂರ್ಣಿಮಾನನ್ನು ತಪಾಸಣೆ ಮಾಡಿದಾಗ ಡಾಕ್ಟರ್ ನಾಗರತ್ನ ಆಘಾತಕ್ಕೊಳಗಾದರು. ಮುಖ ಚಿಕ್ಕದಾಗಿ ಮಾಡಿಕೊಂಡು ಹೊರಬಂದು ತಮ್ಮ ಛೇರ್ ಮೇಲೆ ಕೂತು.
ಯಾಕೆ ಹೀಗೆ ಮಾಡ್ತಿದ್ದೀಯ…?
ನಾನು ಡಾಕ್ಟ್ರು… ನನಗೆ ನೀನು ಸುಳ್ಳು ಹೇಳಬೇಡ… ಆ ಮುಗ್ದ ಹುಡುಗನಿಗೆ ಅನ್ಯಾಯ ಮಾಡಬೇಡ ಹೇಳು. ಅಂತ ಗದರಿಸಿದರು. ಮರುಕ್ಷಣವೇ ಪೂರ್ಣಿಮಾ ಡಾಕ್ಟರ್ ನಾಗರತ್ನರ ಕಾಲು ಹಿಡಿದು ಅಳ ತೊಡಗಿದಳು. ಮೇಡಂ ನಾನೊಬ್ಬ “ಮಾಜಿ ವೇಶ್ಯೆ”. ಇದೆಲ್ಲಾ ಪ್ರಾರಂಭವಾಗಿದ್ದು ಹತ್ತು ವರ್ಷಗಳ ಹಿಂದೆ. ನಮ್ಮೂರು ಬೆಳಗಾವಿ ಜಿಲ್ಲೆಯ ಸಮೀಪದಲ್ಲಿ ಕೃಷ್ಣಾ ನದಿಯ ಅಂಚಿನಲ್ಲಿದೆ.
ನಾನು, ನನ್ನ ಅಣ್ಣ, ಒಬ್ಬಳು ತಂಗಿ, ಅಪ್ಪ ಅಮ್ಮರ ಕುಟುಂಬ ನಮ್ಮ ದು. ನಾಲ್ಕೈದು ಎಕರೆ ಹೊಲ ನಮ್ಮದು , ಒಂದೊಂದು ವರ್ಷ ಒಂದೊಂದು ಬಗೆ ಧಾನ್ಯ ಬೆಳಿತಿದ್ವಿ. ಅದೊಂದು ವರ್ಷ ಪೂರ್ತಿ ನಾಲ್ಕು ಎಕರೆಗೆ ಯಾರ ಬಳಿಯೋ ಸಾಲ ಮಾಡಿ ಕಬ್ಬು ಹಚ್ಚಿದ್ವಿ (ಹಾಕಿದ್ವಿ) . ನಮ್ಮ ದುರ್ದೈವಕ್ಕೆ ಆ ವರ್ಷ ಕೃಷ್ಣೆ ಮುನಿದು ಪ್ರವಾಹ ಬಂದು ನಮ್ಮ ಬೆಳೆ ಕೊಚ್ಚಿಕೊಂಡು ಹೋಯಿತು.
ಆ ಅಘಾತ ಮತ್ತು ಸರ್ಕಾರದಿಂದ ನಷ್ಟ ಪರಿಹಾರವೂ ಸಿಗದೇ ಅಪ್ಪ ಆತ್ಮಹತ್ಯೆ ಮಾಡಿಕೊಂಡರು. ಅಮ್ಮ ಹಾಸಿಗೆ ಹಿಡಿದರು. ಅಣ್ಣ ಅಂಗವಿಕಲ.. ನಾನು ಹದಿನೈದರ ಹುಡುಗಿ… ತಂಗಿ ಚಿಕ್ಕವಳು. ದಿನ ದಿನದ ಬದುಕು ಕಳೆಯುವುದೂ ಕಷ್ಟವಾಗಿತ್ತು. ಆಗ ನಮ್ಮೂರಿನವಳೂ ಸೊಲ್ಲಾಪುರದಲ್ಲಿದ್ದ ಗೆಳತಿ ಭಾರತಿ ಬಂದಿದ್ದಳು. ಅವಳು ನನಗೆ ಸೊಲ್ಲಾಪುರದಲ್ಲಿ ಕೆಲಸ ಕೊಡಿಸುತ್ತೇನೆಂದು ಹೇಳಿ ಕರೆದುಕೊಂಡು ಹೋದದ್ದು ಒಬ್ಬ ವೇಶ್ಯೆ ಮನೆಗೆ.
ನೋಡಿ ಮೇಡಂ ನಮಗೆ ಊಟ ತಿಂಡಿ ಶೌಚದ ತರಹ ” ಕಾಮ” ಕೂಡ ಕಾಮನ್ ಆದದ್ದು ಅಂದುಕೊಂಡಿದ್ದೆವು. ನಮ್ಮ ಕಡೆಯ ಬಡತನ , ಬರಗಾಲ ಅತಿವೃಷ್ಠಿ ಅನಾವೃಷ್ಟಿಗಳು ಬಹಳಷ್ಟು ಹೆಣ್ಣು ಮಕ್ಕಳನ್ನು ಮುಂಬಯಿ, ಪೂನ , ಸಾಂಗ್ಲಿ ಗೋವಗೆ ಕರೆದೊಯ್ದು ಬಿಟ್ಟಿದೆ.
ನಮ್ಮ ಹಾಗಿನ ಅಸಾಹಯಕರಿಗೆ ಯಾರ ನೆರವೂ ಸಿಗದಿದ್ದರೆ ಬದುಕುವ ಬಗೆ ಹೇಗೆ…!? ನಮಗೆ ವಿದ್ಯಾಭ್ಯಾಸ, ಕೌಶಲ್ಯ ಇಲ್ಲ… ! ಎಲ್ಲೇ ಹೋದರೂ ನಮ್ಮ ಮೇಲೆ ದೌರ್ಜನ್ಯ ಗ್ಯಾರಂಟಿ. ನನಗೆ ಕಾಮದ ಪರಿಚಯ ಮೊದಲಾದದ್ದು ನನ್ನ ಅಂಗವಿಕಲ ಅಣ್ಣನಿಂದ. ರಾತ್ರಿ ಒಟ್ಟಿಗೆ ಮಲಗುತ್ತಿದ್ದೆವು.
ರಾತ್ರಿ ಗಾಢ ನಿದ್ರೆಯ ಮಂಪರಿನಲ್ಲಿ ನನ್ನ ಅತ್ಯಾಚಾರ ಮಾಡ್ತಿದ್ದ. ಅದೆಲ್ಲ ನನಗೆ ಗೊತ್ತಾಗುವಷ್ಡರಲ್ಲಿ ಬಹಳ ದಿನವಾಗಿತ್ತು…. ಸದ್ಯ ಆಗ ನಾನು ಬಸುರಾಗದ್ದು ಪುಣ್ಯ. ಆಗ ಒಂಬತ್ತನೇ ತರಗತಿ ಮುಂದಿನ ವರ್ಷ ಎಸ್ ಎಸ್ ಎಲ್ ಸಿ ಗಾಗಿ ಈ ವರ್ಷದಿಂದಲೇ ಸಿದ್ದತೆ ನೆಡೆಯುತ್ತಿತ್ತು.
ನಾವು ಕೆಲವರು ಗಣಿತದಲ್ಲಿ ತುಂಬಾ ಹಿಂದಿದ್ದೆವು ನಮ್ಮ ಶಾಲೆಯ ಗಣಿತ ಮೇಷ್ಟ್ರು ನಮಗೆ ಟ್ಯೂಷನ್ ಮಾಡಲು ಅವರ ಮನೆಗೇ ಬರಲು ಹೇಳಿದ್ದರು. ನನಗೆ ಹತ್ತೊಂಬೊತ್ತರ ಮಗ್ಗಿ ಬಹಳ ಕಷ್ಟ. ಆ ಮೇಷ್ಟ್ರು ಆ ಮಗ್ಗಿ ಹೇಳಲು ಪೀಡಿಸುತ್ತಿದ್ದರು. ಆಗ ನನ್ನ ವಯಸ್ಸಿಗೆ ಮೀರಿದ ಬೆಳವಣಿಗೆ ಅವರ ಕಣ್ ಕುಕ್ಕಿ ಆ ಮೇಷ್ಟ್ರೂ ಸಮಯ ಸಾದಿಸಿ ನನ್ನ ಮೇಲೆ ಅತ್ಯಾಚಾರ ಮಾಡಿದರು.
ಆಗಿನ ನಮ್ಮ ಮನೆಯ ಬಡತನಕ್ಕೆ ಸಹಾಯ ಮತ್ತು ನನಗೆ ಬಟ್ಟೆ ಬರೆಯನ್ನೂ ಕೊಡಿಸಿದರು. ನಮಗೆ ಅದೇ ದೊಡ್ಡ ಸಂತಸವಾಗಿತ್ತು. ಅದರ ಬದಲಿಗೆ “ಕಾಮ”… ಅದರಿಂದ ನಾನು ಕಳೆದುಕೊಳ್ಳುವುದೇನು… ? ಅಂತ ಮನಸಿಗೆ ಅನ್ನಿಸಿ ಸಮಾಧಾನವಾಗ್ತಿತ್ತು.
ಈ ಮೇಷ್ಟ್ರು ಕಿತಾಪತಿ ನನ್ನ ಸಹಪಾಠಿ ಹುಡುಗನಿಗೆ ಗೊತ್ತಾಗಿ ಅವನೂ ನನ್ನ ಒತ್ತಾಯ ಮಾಡಿ ಸಂಭೋಗಿಸಿದ. ಹೀಗೆ ಕಾಮ ಎನ್ನೋ ಸಂಗತಿ ಕಾಮನ್ ಆಗಿತ್ತು. ಆದರೆ ಸೊಲ್ಲಾಪುರದ ಆ ಮನೆ ಸೇರಿದ ಮೇಲೆ ಕಾಮ ದ ವಿರೂಪ ಕಾಣಿಸತೊಡಗಿತು. ಊರಿನಲ್ಲಿ ಕಂಡ ಕಾಮಕ್ಕಿಂತ ಕುರೂಪದ ಕಾಮಲೋಕವದು… ವಯಸ್ಸಾದವರು, ಕುಡುಕರು , ಪರಮ ಗಲೀಜಿನವರು ಬಂದು ಕಾಡಿಸುತ್ತಿದ್ದರು.
ಮೇಡಂ ಅಲ್ಲಿ ಪ್ರತಿ ದಿನವೂ ನಾವು ನರಕ ಧರ್ಶನ ಮಾಡುತ್ತಿದ್ದೆವು.. ಬಲಿಷ್ಟವಾದ ಗಂಡಸರು ಮೈ ಕೈ ಮುರಿದುಬಿಡುವಷ್ಟು ಹಿಂಡಿ ಹಿಪ್ಪೆ ಮಾಡುತ್ತಿದ್ದರು. ನಯ ನಾಜೂಕಿಲ್ಲ…
ಮನೆಯಲ್ಲಿ ಹೆಂಡತಿಗೆ ಪ್ರಯೋಗ ಮಾಡಲಾಗದ ವಿರೂಪ ವಿಕಾರ ಕಾಮ ಬಂಗಿಯನ್ನು ಇಲ್ಲಿ ನಮಗೆ ಪ್ರಯೋಗ ಮಾಡಲು ಪ್ರಯತ್ನ ಪಡ್ತಿದ್ದರು. ಸಂಜೆಯಾದೊಡನೇ ಇವತ್ತು ಎಂತಹ ರಾಕ್ಷಸ ಬರ್ತಾನೋ ಎಂಬ ಭಯ ಮೂಡ್ತಿತ್ತು. ನಿಧಾನವಾಗಿ ಅಲ್ಲಿನ ಹೆಣ್ಣು ಮಕ್ಕಳು ತಮ್ಮ ಸಂವೇದನಾ ಶೀಲತೆ ಕಳೆದುಕೊಂಡು ಕಲ್ಲಿನಷ್ಟು ಒರಟಾಗುತ್ತಿದ್ದರು.
ಅದೊಂದು ದಿನ ಒಬ್ಬ ಆಜಾನುಭಾಹು ಪೋಲಿಸ್ ಎಸ್ ಐ ಯೊಬ್ಬ ರೇಡ್ ನೆಪದಲ್ಲಿ ಬಂದು ನನ್ನ ಮೇಲೆ ಭೀಕರವಾಗಿ ದಾಳಿ ಮಾಡಿದ. ಆತ ಒಬ್ಬ ವಿಕೃತ ಕಾಮಿಯಾಗಿದ್ದ…!
ಆತನ ದಾಳಿಯಿಂದ ನನಗೆ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾಯಿತು. ಡಾಕ್ಟರ್ ಮತ್ತು ಪೋಲಿಸ್ ಇಲಾಖೆಯವರು ನನ್ನ ಅಲ್ಲಿಂದ ಬೆಳಗಾವಿಯ ಈ ಅಬಲಾಶ್ರಮ ಕ್ಕೆ ಸೇರಿಸಿದರು.
ನಾನು ಹಲವಾರು ವರ್ಷಗಳ ಕಾಲ ನನಗೇ ನಾನ್ಯಾರೆಂಬುದೇ ಅರಿವಿಗೆ ಬರದಷ್ಟು ಕುಗ್ಗಿಹೋಗಿದ್ದೆ. ನಿಧಾನವಾಗಿ ನಾನು ಚೇತರಿಸಿಕೊಂಡೆ. ಒಂದಿನ ಅಮ್ಮನ ಮನೆಗೆ ಹೋದರೆ ಅಲ್ಲಿ ಯಾರೂ ಇರಲಿಲ್ಲ. ಹಲವಾರು ವರ್ಷಗಳ ನಂತರ ಅವರಿಗೆ ಪರಿಹಾರ ಸಿಕ್ಕಿ ಬೆಂಗಳೂರಿನ ಕಡೆ ಸೇರಿದ್ದಾರೆಂದರು.
ಆದರೆ ಯಾರಿಗೂ ನಮ್ಮ ಮನೆಯವರ ವಿಳಾಸವಾಗಲಿ ದೂರವಾಣಿ ಸಂಖ್ಯೆಯಾಗಲಿ ಗೊತ್ತಿರಲಿಲ್ಲ. ನಾನು ಅವರ ಸಂಪರ್ಕ ಮಾಡಲು ಸಾಧ್ಯವಿರಲಿಲ್ಲ. ಆದರೆ ಅವರು ನನ್ನ ಮೈ ಮಾರಿದ ದುಡಿಮೆಯ ಅನ್ನ ತಿಂದಿದ್ದರು.ಆ ಋಣಕ್ಕಾದರೂ ಅವರು ನನ್ನ ಸಂಪರ್ಕಿಸಬಹುದಿತ್ತು.
ಎಲ್ಲೋ ಒಂದು ಕಡೆಯಲ್ಲಿ ನಾನು ಅವರನ್ನು ಭೇಟಿ ಮಾಡಬಾರದೆಂದೇ ಹಾಗೆ ದೂರ ಹೋಗಿದ್ದಾರೆಂದು ನನಗನ್ನಿಸಿತು. ಆ ಕ್ಷಣದಿಂದ ನಾನು ಸಂಪೂರ್ಣವಾಗಿ ಅನಾಥಳಾದೆ. ಆಶ್ರಮದಲ್ಲಿ ಸೇವೆ ಮಾಡ್ತಾ ಕಾಲ ಕಳಿತಿರುವಾಗ ಅಲ್ಲಿ ನ ಹಿರಿಯರು ನೀನು ಮದುವೆ ಮಾಡಿಕೊಳ್ಳಲೇಬೇಕೆಂದು ಒತ್ತಾಯ ಮಾಡಿ ಈ ಹುಡುಗನ ಜೊತೆಗೆ ಮದುವೆ ಮಾಡಿಸಿದರು.
ಆ ಪೋಲಿಸ್ ನವನ ಆಕ್ರಮಣ ಮತ್ತು ಅದರಿಂದಾದ ಮಾನಸಿಕ ದೈಹಿಕ ಆಘಾತ ನನಗೆ ನನ್ನ ದೇಹವನ್ನು ಮನ ಪೂರ್ವಕವಾಗಿ ಚಂದ್ರುರವರಿಗೆ ಒಪ್ಪಿಸಲಾಗುತ್ತಿಲ್ಲ.
ಈಗ ಗಂಡಸಿನ ಸ್ಪರ್ಶ ಎಂದರೆ ಆ ದೂರ್ತನ ನೆನಪೇ ಹೆಚ್ಚಾಗಿ ಚೇಳು ಕುಟುಕಿದಂತಾಗುತ್ತದೆ. ಇಲ್ಲಿ ಬಂದಾಗ ಇಲ್ಲಿನ ಕುಟುಂಬ ಅವರ ಪ್ರೀತಿ ನನಗೆ ನನ್ನ ವ್ಯಕ್ತಿತ್ವಕ್ಕೆ ಹೆಚ್ಚು… ನಾನು ಅಪಾತ್ರ ಅಯೋಗ್ಯ ಹೆಣ್ಣು… ಇಂತಹ ಗೌರವಾನ್ವಿತ ಕುಟುಂಬದ ಸದಸ್ಯಳಾಗಿ ಇವರಿಗೆ ಅನ್ಯಾಯ ಮಾಡ್ತಿದ್ದೇನೆ ಅನ್ನಿಸುತ್ತದೆ. ಆದರೆ ಈ ಪ್ರೀತಿಯನ್ನು ನಾನು ತೊರೆಯಲಾರೆ ಮೇಡಂ.
ದಯಮಾಡಿ ನನ್ನ ಇವರಿಂದ ಅಗಲಿಸ ಬೇಡಿ.
ನಾಗರತ್ನ ಡಾಕ್ಟ್ರು ಈ ಹುಡುಗಿಯ ಹೇಳಿಕೆಯಿಂದ ದುಃಖಾಘಾತಕ್ಕೆ ಒಳ ಗಾಗಿ ಕ್ಷಣಕಾಲ ಏನೂ ತೋಚದಂತಾದರು. ನೀನು ಹೆಚ್ ಐ ವಿ ಟೆಸ್ಟ್ ಮಾಡಿಸಿದ್ಯ ಅಂದರು. ಹೌದು ಮೇಡಂ… ನನಗೆ ಯಾವ ಖಾಯಿಲೆಯೂ ಇಲ್ಲ ಮೇಡಂ. ಸೊಲ್ಲಾಪುರದ ಮನೆ ಮಾಲಕಿ ಆ ವಿಷಯದಲ್ಲಿ ನಮ್ಮ ಆರೋಗ್ಯ ದ ವಿಷಯದಲ್ಲಿ ತುಂಬಾ ಸ್ಟಿಕ್ಟ್…
ಕಾಂಡೋಮ್ ಇಲ್ಲದೇ ಯಾವ ಗಂಡಸರನ್ನು ಒಳಗೆ ಬಿಡುತ್ತಿರಲಿಲ್ಲ ಮತ್ತು ಹೆಚ್ಚು ಹೆಚ್ಚು ಜನರೊಂದಿಗೆ ತೀರಾ ಅಸಭ್ಯ , ಅನುಮಾನಾಸ್ಪದ ವ್ಯಕ್ತಿಗಳೊಂದಿಗೆ ನಮ್ಮ ಸಂಪರ್ಕ ವಾಗದಂತೆ ಆದಷ್ಟು ಜಾಗೃತೆ ವಹಿಸುತ್ತಿದ್ದರು. ಅಂತದ್ದರಲ್ಲೂ ಅಪರೂಪಕ್ಕೆ ಇಂತಹ ಒಂದೊಂದು ಅನಾಹುತ ಆಗ್ತಿತ್ತು.
ಆದರೆ ನಾನು ಆರೋಗ್ಯವಂತೆ. ಮೇಷ್ಟ್ರು ಜೊತೆಗಿನ ಸಂಬಂಧದಲ್ಲಿ ಒಂದು ಬಾರಿ ಗರ್ಭದರಿಸಿದ್ದೆ. ಆಗ ಮೇಷ್ಟ್ರು ಒಮ್ಮೆ ನಂಗೆ ಅಬಾರ್ಶನ್ ಮಾಡಿಸಿದ್ದರು. ಅದೊಂದೇ ಅಬಾರ್ಶನ್ ಆಗಿದ್ದು. ಮುಂದೆ ಆ ವಿಷಯದಲ್ಲಿ ಸದಾ ಜಾಗೃತೆವಹಿಸುತ್ತಿದ್ದೆ ಡಾಕ್ಟ್ರೆ…
ನೋಡು ಪೂರ್ಣಿಮಾ ಇಲ್ಲಿ ಇನ್ನೊಮ್ಮೆ ನಾನು ಎಲ್ಲಾ ತಪಾಸಣೆಗೆ ಬರೆದು ಕೊಡ್ತೀನಿ ಮಾಡಿಸು. ನಂತರ ಬಾ. ಮತ್ತೆ ಸ್ವಲ್ಪ ದಿನಗಳ ಕಾಲ ಬೆಂಗಳೂರಿನಲ್ಲಿರುವ ಚಂದ್ರುವಿನ ಹತ್ತಿರದ ನೆಂಟರಿಷ್ಟರ ಮನೆಗೆ ಹೋಗಿ ಬಂದು ತಪಾಸಣೆಯ ರಿಪೋರ್ಟ್ ಬಂದ ಮೇಲೆ ಅಕ್ಕ ನಾಗರತ್ನರ ಬಳಿ ಅದನ್ನು ತೆಗೆದುಕೊಂಡು ಹೋಗಿ ಒಪ್ಪಿಸಿದಾಗ ನಾಗರತ್ನರವರು ಪರಾಮರ್ಶೆ ಮಾಡಿ ಸಮಾಧಾನದ ನಿಟ್ಟುಸಿರಿಟ್ಟರು.
ನಂತರ ಮತ್ತೆ ಪೂರ್ಣಿಮಾ ಒಬ್ಬಳನ್ನೇ ಒಳಗೆ ಕೂರಿಸಿಕೊಂಡು ಪೂರ್ಣಿಮಾಗೆ ಆಪ್ತ ಸಮಾಲೋಚನೆ ಮಾಡಿ ಗಂಡ ಚಂದ್ರಶೇಖರನ ಜೊತೆಗೆ ಲೈಂಗಿಕ ಸಂಬಂಧವನ್ನು ಮಾಡಲು ಒಪ್ಪಿ ಸಿದರು….ಇದೊಂದು ಎಲ್ಲಾ ಅಡೆ- ತಡೆ, ಕಷ್ಟ – ಕಾರ್ಪಣ್ಯಗಳ ನಡುವೆ ಯಾವುದೋ ಋಣಾನುಭಂದದಿಂದ ಜೋಡಣೆಯಾದ ಸಂಬಂಧವಾಗಿದೆ.
ಒಂದು ವರ್ಷದ ನಂತರ ಬೊಬ್ಬಿ ಕುಟುಂಬದಲ್ಲಿ ಮಗುವಿನ ಬೊಬ್ಬೆ ಕೇಳತೊಡಗಿತು. ಅಪ್ಪ ಅಮ್ಮ ಯಾರೂ ಇಲ್ಲದ ಅನಾಥ ಹುಡುಗಿ ಸೊಸೆ ಪೂರ್ಣಿಮಾಗೆ ಅತ್ತೆ ಶಾರದಮ್ಮರೇ ಅಮ್ಮನೂ ಆಗಿ, ಬಾಣಂತನ ಮಾಡಿ ಮಗುವನ್ನು ಎತ್ತಾಡಿಸಿ ತಮ್ಮ ಸಂತಸ ನೂರ್ಮಡಿ ಮಾಡಿಸಿಕೊಂಡರು.
ಕತೆಗಾರ : ಪ್ರಬಂಧ ಅಂಬುತೀರ್ಥ.

- ಸಂಗ್ರಹ : ಅರುಣ್ ಪ್ರಸಾದ್ – ಮಲ್ಲಿಕಾ ವೆಜ್ ಹೋಟೆಲ್ ಮಾಲೀಕರು, ಹೋಟೆಲ್ ಉದ್ಯಮಿ, ಲೇಖಕರು, ಆನಂದಪುರಂ
