ಡಾ. ಹರಿಕೃಷ್ಣ ಭರಣ್ಯ ಅವರು ಬರೆದ ಚೊಚ್ಚಲ ಕಾದಂಬರಿ ‘ಮೂಡು ಮಜಲು’ ಎರಡು ಮುದ್ರಣ ಕಂಡಿದೆ. ಈ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಮೂಡು ಮಜಲು
ಲೇಖಕರು : ಡಾ. ಹರಿಕೃಷ್ಣ ಭರಣ್ಯ
ಮಧು ಪಬ್ಲಿಕೇಶನ್ ಅಂಡ್ ಎಂಟರ್ ಪ್ರೈಸಸ್
ಮುದ್ರಣದ ವರ್ಷ: ೧೯೯೮.&೨೦೧೪.
ಪುಟಗಳು:೩೪೪.
ಬೆಲೆ: ರೂ. ೨೦೦.
ಡಾ. ಹರಿಕೃಷ್ಣ ಭರಣ್ಯ ಅವರು ಬರೆದ ಮೊದಲನೇ ಈ ಕಾದಂಬರಿಯು ಎರಡು ಮುದ್ರಣ ಕಂಡಿದೆ. ಇಲ್ಲಿಯ ಕಥಾನಾಯಕ ರಾಜೀವ ಎನ್ನುವ ಸಾಮಾನ್ಯ ವ್ಯಕ್ತಿ. ಬಾಲ್ಯದಿಂದ ಅವನ ವ್ಯಕ್ತಿತ್ವ ವಿಕಸನದ ಹಂತ ಹಂತವಾದ ಬೆಳೆವಣಿಗೆಯೇ ಇಲ್ಲಿನ ಕಥಾವಸ್ತುವಾಗಿದೆ. ದಕ್ಷಿಣ ಕನ್ನಡದ ಡಿಸೆಂಬರ್ ತಿಂಗಳ ಚಳಿಗಾಲದ ವರ್ಣನೆ ಯೊಂದಿಗೆ ‘ಅರಳೆ ಪದವು’ ಎನ್ನುವ ಊರಿನ ಶಾಲೆಯಲ್ಲಿ ಭಾವುಕ ವ್ಯಕ್ತಿತ್ವದ ರಾಜೀವನ ಬಾಲ್ಯ ಅರಳಿದ ಬಗೆಯ ಕುರಿತಾಗಿ ಬರೆದಿರುವುದಾಗಿದೆ.
ಹುಲ್ಲು ಮೇದು ಮುಂದೆ ಹೋಗುವ ದನಕರುಗಳ ಬದುಕಿನ ತತ್ವವೇನು?. ಮಳೆಗಾಲದ ನೆರೆಯ ನೀರು ಹೋಗುವು ದೆಲ್ಲಿಗೆ?… ಅದು ಇಲ್ಲೇ ನಿಂತರೆ ನಾವು ಮುಳುಗಿ ಹೋಗುವುದಿಲ್ಲವೇ?.. ಪ್ರತೀ ತಿಂಗಳು ಮೂರುದಿನ ಅಮ್ಮ ಹೊರಗೆ ಕೂರುವುದೇಕೆ? ಇಂತಹ ಹತ್ತಾರು ಪ್ರಶ್ನೆಗಳು ಅವನನ್ನು ಕಾಡಿದಾಗಲೆಲ್ಲಾ ಉತ್ತರ ಉತ್ತರ ಕೊಡುತ್ತಿದ್ದದ್ದು ಅವನ ಅಮ್ಮ.

ಆಲೆಮನೆಯ ಕಬ್ಬಿನಹಾಲು ಕುಡಿದು, ದೊಡ್ಡ ಆಟದಮೈದಾನದಲ್ಲಿ ಆಡಿ, ಯಕ್ಷಗಾನ ಬಯಲಾಟ, ನಾಟಕ ನೋಡುತ್ತಾ, ಕಥೆ ಪುಸ್ತಕ ಓದುತ್ತಾ ಒಳ್ಳೆಯದು ಕೆಟ್ಟದ್ದು ಯಾವುದೆಂದು ತಿಳಿಯುತ್ತಾ, ತನ್ನದೇ ವಯಸ್ಸಿನ ಗೆಳೆಯರ ಜೊತೆ ಶಾಲೆಗೆ ಹೋಗುವಾಗಿನ ಅನೇಕ ಪ್ರಸಂಗಗಳನ್ನು ಇಲ್ಲಿ ಹೇಳಿದ್ದಾರೆ.
ಅವನ ಇಬ್ಬರು ಸೋದರ ಮಾವಂದಿರಲ್ಲಿ ಊರೂರು ಸುತ್ತಿದ ಪುಟ್ಟು ಮಾವ ತರುವ ಬಾಯಲ್ಲಿ ನೀರೂರಿಸುವ ಸಿಹಿ ತಿಂಡಿಗಳು, ಕಥೆ ಪುಸ್ತಕಗಳು, ರಜೆಯಲ್ಲಿ ಈಜುವುದು ಅಪರೂಪಕ್ಕೆ ಸಿನೇಮಾ ನೋಡುವುದರ ನಡುವೆ ಹೈಸ್ಕೂಲು ಸೇರುವ ದಿನ ಬಂದಿತ್ತು.
ಹೊಸ ಪುಸ್ತಕಗಳ ಖರೀದಿ ಅದರ ಕಂಪು ಮೂಸುತ್ತಾ ಓದುವುದು, ಪಬ್ಲಿಕ್ ಪರೀಕ್ಷೆಗಳು, ಅಡಿಕೆ ಮಾಳದಲ್ಲಿ ಪತ್ತೇದಾರಿ ಇತರೇ ಕಾದಂಬರಿ ಓದುವ ಮಾವನ ಪುಸ್ತಕ ಕದ್ದು ಓದಿದ್ದು, ಶಾಲಾ ಮಾಸ್ತರರು ಆರಂಭಿಸಿದ ‘ದೀವಿಗೆ’ ಪತ್ರಿಕೆಗಾಗಿ ಬರೆದಿದ್ದು,ಮುಂದೆಯೂ ಬೇರೆ ಪತ್ರಿಕೆಗೆ ಬರೆದ ಕಥೆಗಳು, ನಂತರದ ಮಂಗಳೂರಿನ ಕಾಲೇಜು ದಿನಗಳು ಹೀಗೆ ರಾಜೀವ ಬರಹಗಾರನಾಗಿ ರಾರಾಜಿಸಿದ ವಿಷಯವಿದೆ.
ಮನೆಗೆ ಮೊದಲ ಬಾರಿಗೆ ರೇಡಿಯೋ ತಂದಾಗಿನ ಸಂಭ್ರಮ ಟೆಲಿಫೋನ್ ಕಂಬಗಳನ್ನು ಕಂಡ ಸಂತಸ ತನ್ನ ಸಹಪಾಠಿ ಹುಡುಗಿಯರು ಚಿಕ್ಕ ವಯಸ್ಸಿಗೇ ಮದುವೆ ಮಾಡಿಕೊಂಡು ತಾಯಂದಿರಾಗಿ ಕಂಡಿದ್ದು, ಡಾಕ್ಟರ್ ಮೂರ್ತಿ ಎಂಬ ಸಾಹಿತ್ಯ ಪ್ರೇಮಿಯ ಪರಿಚಯ ರಾಜೀವನಲ್ಲಿಯ ಓದುವ ಆಸಕ್ತಿಯನ್ನು ಬೆಳೆಸಿದ ಹಾಗೂ ಪಿಟೀಲು ಶ್ರುತಿ, ತಾಳ ತಿಳಿಸಿದ ಬಗೆಯನ್ನು ಇಲ್ಲಿ ವಿವರಿಸಿದ್ದಾರೆ.

ಮುಂದೆ ಹಲವಾರು ಸಾಹಿತಿಗಳು ರಾಜೀವನನ್ನು ಗುರುತಿಸಿದ್ದು, ತಮ್ಮೂರಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದ್ದು, ಎಂ.ಎ ನಂತರದ ವೃತ್ತಿ ಜೀವನಕ್ಕಾಗಿ ಮಹಾ ನಗರಗಳಲ್ಲಿ ನೆಲೆಸಿದರೂ, ಪ್ರವೃತ್ತಿಯನ್ನು ಬಿಡದೇ ಕಾಪಾಡಿ ಕೊಂಡಿದ್ದು ಹೀಗೆ ಬದುಕನ್ನು ಕೆದಕಿದಷ್ಟೂ ಸಿಗುವ ಹಲವಾರು ಸಂಗತಿಗಳನ್ನು ರಾಜೀವ ನೆನಪಿಸಿ ಹೇಳುವಂತಿದೆ.
ರಾಜೀವ ಪ್ರಕೃತಿ ಹಾಗೂ ಸಮಾಜದೊಡನೆ ಸ್ಪಂದಿಸುತ್ತಾ ಹೇಗೆ ಬೆಳೆಯುತ್ತಾನೆ ಎಂಬುದನ್ನು ಇಲ್ಲಿ ಸವಿವರವಾಗಿ ಬರೆದಿದ್ದಾರೆ. ಬಹುಪಾಲು ತಾವೇ ಆ ನಾಯಕ ಎನ್ನುವ ಕೆಲವರ ಮಾತನ್ನು ಸಹಾ ಅವರು ಅಲ್ಲಗಳೆಯುವುದಿಲ್ಲ. ಯಾವುದೇ ಸೃಜನ ಶೀಲ ಲೇಖಕನ ಬರವಣಿಗೆಯಲ್ಲಿ ಆತನ ಸ್ವಂತ ಅನುಭವ ಅಥವಾ ತೀರ ಹತ್ತಿರದಿಂದ ಕಂಡ ವಿಚಾರಗಳಿದ್ದರೆ ಮಾತ್ರ ಆ ಬರವಣಿಗೆಯಲ್ಲಿ ಜೀವಂತಿಕೆ ಇರುವುದಕ್ಕೆ ಸಾಧ್ಯ ಎನ್ನುತ್ತಾರೆ.
ಈ ಕಾದಂಬರಿಯಲ್ಲಿ ವಿಶೇಷವಾದ ಯಾವುದೇ ಪಾತ್ರವಿರದೇ ಕೇವಲ ರಾಜೀವನ ಮೂಲಕ ಸಮಾಜದ ಹಾಗೂ ಸುತ್ತಲ ಪರಿಸರದ ಪರಿಚಯ ಮಾಡುತ್ತಾ ಒಂದು ಸುಧೀರ್ಘ ಪ್ರಬಂಧದ ಮಾದರಿಯಲ್ಲಿ ಕಥೆಯು ಸಾಗುತ್ತದೆ. ಅಂದಿನ- ಇಂದಿನ ಬದಲಾವಣೆಯ ಜಗದ ನಿಯಮಕ್ಕೆ ತನ್ನನ್ನು ಒಪ್ಪಿಸಿ ಕೊಳ್ಳುತ್ತಾ ತಾನೊಂದು ಮಜಲಿಗೆ ತಲುಪಿದ ನೆನಪನ್ನು ಓದುಗರೊಂದಿಗೆ ಹಂಚಿ ಕೊಳ್ಳುವ ರೀತಿ ಸೊಗಸಾಗಿದೆ.
ನೀವೂ ಓದಿ ನೋಡಿ….
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ನೂಪುರಗಾನ’ ಕೃತಿ ಪರಿಚಯ
- ಪಾರ್ಲರ್ ಹುಡುಗಿಯೂ, ಮರಳು ಗಾಡಿನ ಮಹಲು ಕೃತಿ ಪರಿಚಯ …
- ತಮ್ಮಣ್ಣ ಬೀಗಾರ ಅವರ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
