ಕೊನಾರ್ಕ್‌ ಸೂರ್ಯ ದೇವಾಲಯದ ದರ್ಶನ

ಕೊನಾರ್ಕ್‌ ಸೂರ್ಯ ದೇವಾಲಯವನ್ನು ನೋಡಬೇಕೆನ್ನುವುದು ಬಹಳ ವರ್ಷಗಳ ಹಂಬಲವಾಗಿತ್ತು. 2025 ರ ಫೆಬ್ರವರಿಯಲ್ಲಿ ಎಲ್ಲರೂ ಪ್ರಯಾಗರಾಜ್‌ನ ಕುಂಭಮೇಳಕ್ಕೆ ಹೊರಟರೆ ನಾವು ಕೊನಾರ್ಕ್‌ ಮತ್ತು ಪುರಿ ಜಗನ್ನಾಥನ ದರ್ಶನಕ್ಕಾಗಿ ಒರಿಸ್ಸಾದತ್ತ ಹೊರಟೆವು.ಅಲ್ಲಿಯ ಅನುಭವದ ಕುರಿತು ಲೇಖಕಿ ಗೀತಾ ಕುಂದಾಪುರ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾನು ಇತ್ತೀಚಚೆಗೆ ಪ್ರವಾಸ ಹೋಗಿದ್ದು ಭುವನೇಶ್ವರ, ಕೊನಾರ್ಕ್, ಪುರಿಗೆ. ಅಬ್ಭ…ಕೊನಾರ್ಕನ ಸೂರ್ಯ ದೇವಾಲಯದ architecture!!! ಎಂತವರನ್ನೂ ರೋಮಾಂಚನಗೊಳ್ಳುವಂತೆ ಮಾಡುತ್ತದೆ.

  • ಕೊನಾರ್ಕ್‌ ಸೂರ್ಯ ದೇವಾಲಯ ಅದ್ಭುತ ಸೌಂದರ್ಯದೊಂದಿಗೆ ನಿಗೂಢತೆ

ಭಾರತೀಯ ವಾಸ್ತುಶಿಲ್ಪ, ಕಲೆ, ಸಂಸ್ಕೃತಿ, ಪರಂಪರೆಗೆ ಅತ್ಯುತ್ತಮ ಉದಾಹರಣೆಯಂತಿರುವ ಕೊನಾರ್ಕ್‌ ಸೂರ್ಯ ದೇವಾಲಯವನ್ನು ನೋಡಬೇಕೆನ್ನುವುದು ಬಹಳ ವರ್ಷಗಳ ಹಂಬಲವಾಗಿತ್ತು. 2025 ರ ಫೆಬ್ರವರಿಯಲ್ಲಿ ಎಲ್ಲರೂ ಪ್ರಯಾಗರಾಜ್‌ನ ಕುಂಭಮೇಳಕ್ಕೆ ಹೊರಟರೆ ನಾವು ಕೊನಾರ್ಕ್‌ ಮತ್ತು ಪುರಿ ಜಗನ್ನಾಥನ ದರ್ಶನಕ್ಕಾಗಿ ಒರಿಸ್ಸಾದತ್ತ ಹೊರಟೆವು. ಮೊದಲ ದಿನ ಭುವನೇಶ್ವರದಲ್ಲಿರುವ 7-13 ನೇ ಶತಮಾನದಲ್ಲಿ ಕಟ್ಟಿದ ಹಲವು ದೇವಾಲಯಗಳನ್ನು ನೋಡಿದೆವು, ಇವುಗಳ ವಾಸ್ತುಶಿಲ್ಪವೂ ಬಹಳ ಆಕರ್ಷಕ, ಹಾಗೂ ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಅಂದ ಹಾಗೆ ಒರಿಸ್ಸಾ ರಾಜ್ಯವು ಹಿಂದೆ ಕಳಿಂಗ ರಾಜ್ಯವೆಂದು ಕರೆಯಲ್ಪಡುತ್ತಿತ್ತು.

ಎರಡನೆಯ ದಿನ ಕೊನಾರ್ಕನದತ್ತ ಹೊರಟೆವು. 13 ನೇ ಶತಮಾನದಲ್ಲಿ ಕಟ್ಟಿದ ಕೊನಾರ್ಕದ ಮಂದಿರವು ಸೂರ್ಯ ದೇವನಿಗಾಗಿ ಕಟ್ಟಿಸಿದ್ದು, ನಮ್ಮಲ್ಲಿ ಸೂರ್ಯ ದೇವಾಲಯಗಳು ಅಪರೂಪ. ಇದು ಪುರಿಯಿಂದ ಸುಮಾರು 35 ಕೀಮಿ ದೂರದಲ್ಲಿದೆ. ಫೆಬ್ರವರಿ ತಿಂಗಳಾದ್ದರಿಂದ ಬಿಸಿಲಿನ ಬೇಗೆ ಹೆಚ್ಚಿಲ್ಲದೆ ನಮ್ಮ ಮೇಲೆ ಸೂರ್ಯನ ಅನುಗ್ರಹವಿತ್ತು. ಅಲ್ಲಿಗೆ ಹೋಗುವ ಮೊದಲು ಗೂಗಲ್‌ ತಡಕಾಡಿ ಅಲ್ಪ, ಸ್ವಲ್ಪ ವಿಷಯ ಸಂಗ್ರಹಿಸಿದೆ. ಅಲ್ಲಿಯೂ ಒಳ್ಳೆಯ ಗೈಡ್ ಸಿಕ್ಕಿದ, ರೂ. 500 ಕೇಳಿದ, ಚೌಕಾಸಿ ಮಾಡಿದಾಗ ರೂ. 400ಕ್ಕೆ ಒಪ್ಪಿಕೊಂಡ.

ಪೂರ್ವ ಗಂಗಾ ರಾಜವಂಶದ ರಾಜ ನೃಸಿಂಹ ದೇವ I ಸೂರ್ಯದೇವನ ಭಕ್ತ, ಅವನೇ ಈ ಮಂದಿರದ ರೂವಾರಿ. ಮಂದಿರದ ವಾಸ್ತುಶಿಲ್ಪ ಎಂತವರನ್ನೂ ಆಕರ್ಷಿಸುತ್ತದೆ, ಮಾತ್ರವಲ್ಲ ಇದರ ಖಗೋಳಶಾಸ್ತ್ರ, ವಿಜ್ಞಾನ, ಎಂಜಿನಿಯರಿಂಗ್‌, ನಿಖರತೆ, ಆಶ್ಚರ್ಯಚಕಿತವಾಗುವಂತೆ ಮಾಡಿ ಇದರ ಚೌಕಟ್ಟು, ಸೌಂದರ್ಯ, ಸೂಕ್ಷ್ಮತೆ ರೋಮಾಂಚನಗೊಳ್ಳುವಂತೆ ಮಾಡುತ್ತದೆ. ಸಂದರ್ಶಿಸಿದವರ ಮನದಲ್ಲಿ ಚಿರಸ್ಥಾಯಿಯಾಗಿ ನಿಲ್ಲುತ್ತದೆ.

ಕೊನಾರ್ಕ್‌ ಶಬ್ಧದಲೇ ಎರಡು ಶಬ್ಧಗಳಿವೆ, ಕೊನಾ ಎಂದರೆ ಮೂಲೆ ಮತ್ತು ಅರ್ಕ ಎಂದರೆ ಸೂರ್ಯ ಎಂದರ್ಥ. ಇದನ್ನು ಕಟ್ಟಲು 1,200 ಕೆಲಸಗಾರರು 12 ವರ್ಷ (1243-1255) ತೆಗೆದುಕೊಂಡರಂತೆ. ಸೂರ್ಯನ ರಥದ ಆಕಾರದಲ್ಲಿರುವ ಈ ದೇವಾಲಯಕ್ಕೆ 24 ಚಕ್ರಗಳಿವೆ, 7 ಕುದುರೆಗಳಿಂದ ಎಳೆಯುತ್ತಿರುವಂತೆ ಕಟ್ಟಲಾಗಿದೆ. 24 ಚಕ್ರಗಳು ಅತ್ಯದ್ಭುತ, ಈ ಚಕ್ರವೇ ಕೊನಾರ್ಕ್‌ ದೇವಾಲಯದ ಹೆಗ್ಗುರುತಾಗಿದೆ. ಚಕ್ರಗಳು ಸುಮಾರು 12 ಅಡಿ ಉದ್ದಗಲವಿದ್ದು ಚಕ್ರದಲ್ಲಿ 8 ಕೆತ್ತನೆಗಳಿರುವ ಗೆರೆಗಳಿವೆ. 12 ಜೊತೆ ಚಕ್ರಗಳು ವರ್ಷದ 12 ತಿಂಗಳನ್ನು ಸೂಚಿಸುವಂತೆ (ತಿಂಗಳಿಗೆ 2 ಪಕ್ಷ, ಶುಕ್ಲ ಪಕ್ಷ, ಕೃಷ್ಣ ಪಕ್ಷ), ಚಕ್ರದೊಳಗಿರುವ 8 ಗೆರೆಗಳು ದಿನವನ್ನು 8 ಪ್ರಹರಗಳಾಗಿ ವಿಭಾಗ ಮಾಡುತ್ತವೆ, ಸಮಯವನ್ನು ಸರಿಯಾಗಿ ಲೆಕ್ಕ ಹಾಕುವ ಲೆಕ್ಕಾಚಾರವಿಲ್ಲಿದೆ. ಇಲ್ಲಿನ ಸೂಕ್ಷ್ಮಾತಿಸೂಕ್ಷ್ಮ ಕೆತ್ತನೆಗಳು, ಖಗೋಳಶಾಸ್ತ್ರದ ಲೆಕ್ಕಾಚಾರ ಎಲ್ಲರನ್ನು ಆಶ್ಚರ್ಯ ಚಕಿತನಾಗುವಂತೆ ಮಾಡುತ್ತದೆ. ಇದರ ಬಗ್ಗೆ ಕವಿ ರಬೀಂದ್ರನಾಥ ಟಾಗೋರ್‌ ಹೀಗೆ ಬರೆಯುತ್ತಾರೆ ʻಕಲ್ಲಿನ ಭಾಷೆಯು ಮನುಷ್ಯನ ಭಾಷೆಯನ್ನು ಮೀರಿ ನಿಲ್ಲುತ್ತದೆʼ.

ಮಂದಿರದ ಮುಖ್ಯ ವಾಸ್ತುಶಿಲ್ಪಿ ʻಬಿಶು ಮಹರಾನʼ. ಮಂದಿರದ ವಾಸ್ತುಶಿಲ್ಪವು ಕಳಿಂಗ ಶೈಲಿಯಲ್ಲಿದೆ. ಮಂದಿರವು 26.2 ಎಕರೆ ವಿಸ್ತೀರ್ಣವುಳ್ಳ ಜಾಗದಲ್ಲಿದೆ.

ಇಲ್ಲಿ ಮುಖ್ಯವಾಗಿ ನೋಡಬೇಕಾದದ್ದು :

  • ನಾಟ್ಯ ಮಂಟಪ : ಮೊದಲಿಗೆ ಸಿಗುವುದೇ ನಾಟ್ಯ ಮಂಟಪ, ಇಲ್ಲಿ ಸುಂದರ ಕೆತ್ತನೆಯುಳ್ಳ 16 ಕಂಬಗಳಿವೆ, ಇವು ಮೂರು ಭಾಗಗಳಿದ್ದು ಉತ್ತರಾಯಣ, ದಕ್ಷಿಣಾಯನ, ಮಧ್ಯಕಾಲದಲ್ಲಿ ಸೂರ್ಯನ ಕಿರಣಗಳು ಕಾಲಕ್ಕನುಗುಣವಾಗಿ ಇದರ ಮೂಲಕ ಹಾದು ಹೋಗುತ್ತದೆ. ಕಂಬಗಳು ಅತ್ಯಂತ ಸುಂದರ ಕೆತ್ತನೆಗಳಿಂದ ಕೂಡಿದ್ದು ಇದರಲ್ಲಿ ವಾದ್ಯಗಳನ್ನು ನುಡಿಸುವ, ಹಾಡು ಹೇಳುವ, ನೃತ್ಯ ಮಾಡುತ್ತಿರುವ, ಅಲಂಕರಿಸಿಕೊಳ್ಳುತ್ತಿರುವ ಮಹಿಳೆಯರ ಕೆತ್ತನೆಗಳಿವೆ. ಈ ಮಂಟಪಕ್ಕೆ ಮುಚ್ಚಿಗೆಯಿಲ್ಲ. ಇದರ ಎದುರು ಭಾಗದಲ್ಲಿ ಮನುಷ್ಯ, ಮನುಷ್ಯನ ಮೇಲೆ ಆನೆ, ಆನೆಯ ಮೇಲೆ ಸಿಂಹವಿರುವ ಎರಡು ದೊಡ್ಡ ಕಲ್ಲಿನ ಮೂರ್ತಿಗಳಿವೆ (ಮನುಷ್ಯನನ್ನು ಸಂಪತ್ತು, ಅಹಂ ಸವಾರಿ ಮಾಡಿದೆ ಎಂಬ ಅರ್ಥವಂತೆ).
  • ಸೂರ್ಯ ಮಂದಿರ : ಕಳಿಂಗ ವಾಸ್ತುಶಿಲ್ಪದ ಇತರ ಮಂದಿರಗಳಲ್ಲಿರುವಂತೆ ಇಲ್ಲಿಯೂ ಮಂದಿರವು ಎರಡು ಭಾಗದಲ್ಲಿದೆ, ಮುಂಭಾಗದಲ್ಲಿ ಸಭಾಂಗಣ (ಜಗಮೋಹನ ಎಂದೂ ಕರೆಯುತ್ತಾರೆ) ಅದಕ್ಕೆ ಜೋಡಿಸಿಕೊಂಡು ಗರ್ಭಗುಡಿ. ಇಡೀ ಮಂದಿರವು ಸೂರ್ಯನ ರಥದ ಆಕಾರದಲ್ಲಿದೆ. ಸಭಾಂಗಣದ ಗೋಡೆಗಳ ಎತ್ತರ ಸುಮಾರು 100 ಅಡಿ. ರಥವನ್ನು 7 ಕಲ್ಲಿನ ಕುದುರೆಗಳು ಎಳೆಯುವಂತಿದೆ, ಒಂದು ಕಡೆ 4, ಮತ್ತೊಂದು ಕಡೆ 3 ಕುದುರೆಗಳು, ಸುತ್ತ 24 ಚಕ್ರಗಳು. ಇದನ್ನು ಏನಿದ್ದರೂ ಹೊರಗಡೆಯಿಂದಷ್ಟೇ ನೋಡಬಹುದು, ಒಳಗೆ ಪ್ರವೇಶವಿಲ್ಲ. ಇದನ್ನು ʻಕಪ್ಪು ಪಗೋಡʼ ಎಂದೂ ಯೂರೋಪಿನ ವರ್ತಕರು ಕರೆಯುತ್ತಿದ್ದರಂತೆ.

ವಿಶ್ವಪ್ರಸಿದ್ಧ ಕೊನಾರ್ಕ ಮಂದಿರಕ್ಕೆ ಗರ್ಭಗುಡಿ ಇಲ್ಲ, ಇದು ಕೆಳಗೆ ಉದುರಿದೆ, ಸುಮಾರು 229 ಅಡಿ ಎತ್ತರವಿತ್ತೆಂದು ಹೇಳಲಾದ ಗರ್ಭಗುಡಿಯ ಮೇಲ್ಬಾಗ 1837ರಲ್ಲಿ ಉದುರಿತು, ಇದಕ್ಕೆ ಹಲವಾರು ಕಾರಣಗಳನ್ನು ಉಹಿಸಲಾಗುತ್ತಿದೆ. ಕೆಳಗುರುಳಿದ ಕೆಲವು ಬಂಡೆಗಳನ್ನು ಈಗಲೂ ನೋಡಬಹುದು.

ಮಂದಿರದ ಮೂರು ಭಾಗದಲ್ಲಿ ಮೂರು ಸೂರ್ಯನ ಮೂರ್ತಿಗಳಿವೆ. ಎಡಗಡೆ ಇರುವ ಸೂರ್ಯನ ಮೂರ್ತಿಯು ಬಾಲಕನಂತೆ ಕಾಣಿಸುತ್ತಿದ್ದು ಇದರ ಮೇಲೆ ಧಾರಾಳವಾಗಿ ಬೆಳಗ್ಗಿನ ಸೂರ್ಯನ ಕಿರಣಗಳು ಬೀಳುತ್ತವೆ. ಹಿಂದಿನ ಭಾಗದಲ್ಲಿ ಎರಡನೆಯ ಸೂರ್ಯನ ಮೂರ್ತಿ, ಮಧ್ಯಾಹ್ನ ಸೂರ್ಯನ ಬಿಸಿಲು ಇದರ ಮೇಲೆ ಬೀಳುತ್ತದೆ. ಇಲ್ಲಿರುವ ಸೂರ್ಯನ ಮುಖದಲ್ಲಿ ಯೌವನದ ಛಾಯೆ ಕಾಣಿಸುತ್ತದೆ. ಬಲಭಾಗದ ಗೋಡೆಯಲ್ಲಿ ಮೂರನೆಯ ಸೂರ್ಯನ ಮೂರ್ತಿಯಿದೆ, ಸೂರ್ಯನು ಕುದುರೆಯ ಮೇಲೆ ಕೂತಿರುವಂತೆ ಕೆತ್ತಲಾಗಿದೆ. ಸೂರ್ಯನ ಮುಖದಲ್ಲಿ ಮುಪ್ಪಿನ ಛಾಯೆ ಅಂದರೆ ದಣಿದಂತೆ ಕಾಣಿಸುತ್ತಿದೆ, ಸಂಜೆಯ ಸೂರ್ಯನ ಕಿರಣಗಳು ಈ ಸೂರ್ಯನ ಮೂರ್ತಿಯ ಮೇಲೆ ಬೀಳುತ್ತದೆ.

ಮಂದಿರದ ತಳಭಾಗದಲ್ಲಿರುವ ಗೋಡೆಗಳಲ್ಲಿ ಎಲೆ, ಹೂವು, ಪ್ರಾಣಿಗಳು, ಅಪ್ಸರೆಯರ ಮೂರ್ತಿಗಳಿವೆ. ಕೆಲವು ಕಡೆ ಜನಜೀವನವನ್ನು ಬಿಂಬಿಸುವ ಕೆತ್ತನೆಗಳಿವೆ, ಬೇಟೆಯಾಡುತ್ತಿರುವ ದೃಶ್ಯ, ಭಾರ ಹೊರುತ್ತಿರುವ ಕೆಲಸದವರು, ಉತ್ಸವ, ಜಾತ್ರೆಯ ದೃಶ್ಯ, ಯಾತ್ರೆಯ ದೃಶ್ಯ, ವೀಣೆಯನ್ನು ನುಡಿಸುತ್ತಿರುವ ಮಹಿಳೆ, ಮರದಡಿಯಲಿ ತಲೆಕೂದಲನ್ನು ಒಣಗಿಸಿಕೊಳ್ಳುತ್ತಿರುವ ಮಹಿಳೆ, ನೃತ್ತಿಸುತ್ತಿರುವ ಮಹಿಳೆಯರ ಕೆತ್ತನೆಗಳಿವೆ. ಅಲ್ಲದೆ ಗುರುಗಳಿಂದ ಆಶೀರ್ವಾದ ಪಡೆಯುತ್ತಿರುವ ರಾಜನ ಕೆತ್ತನೆಯೂ ಇದೆ.

ಮಧ್ಯದ ಭಾಗದ ಗೋಡೆಯಲ್ಲಿ ಕಾಮ ಪ್ರಚೋದಕ, ಭೋಗಾಸಕ್ತ ಮಿಥುನ ಕೆತ್ತನೆಗಳಿವೆ.

ಮೇಲ್ಬಾಗದ ಗೋಡೆಗಳಲ್ಲಿ ಇಂದ್ರ, ಅಗ್ನಿ, ವಾಯು, ಕುಬೇರನ ಮೂರ್ತಿಗಳಲ್ಲದೆ ವಿಷ್ಣು, ಗಜಲಕ್ಷ್ಮಿ, ಪಾರ್ವತಿ, ಕೃಷ್ಣ, ನೃಸಿಂಹ, ಮಹಿಷಾಸುರ ಮರ್ಧಿನಿಯ ಮೂರ್ತಿಗಳಿವೆ.

  • ಛಾಯಾದೇವಿ ಮಂದಿರ ಛಾಯಾದೇವಿ : ಸೂರ್ಯನ ಹೆಂಡತಿ, ಮಾಯಾದೇವಿ ಎನ್ನುವ ಹೆಸರೂ ಇದೆ. ಮಂದಿರವು ಬಹಳ ಜೀರ್ಣಾವಸ್ಥೆಯಲ್ಲಿದೆ. ಗರ್ಭಗುಡಿಗೆ ಗೇಟ್‌ ಇದ್ದು ಹೊರಗಿನಿಂದ ಹಣಕಬಹುದು, ಒಳಗೆ ಒಂದು ಎರಡಡಿ ಉದ್ದ, ಅಗಲದ ಕೆತ್ತನೆ ಇರುವ ಕಲ್ಲಿದೆ. ಆಶ್ಚರ್ಯದ ವಿಷಯವೆಂದರೆ ಇದನ್ನು 11ನೇ ಶತಮಾನದಲ್ಲಿ ಕಟ್ಟಲಾಯಿತಂತೆ. ಅಸಲಿಗೆ ಮೊದಲು ಕಟ್ಟಿಸಿದ ಸೂರ್ಯ ದೇವಾಲಯವಿದು, ನಂತರ ಇದನ್ನು ಛಾಯಾದೇವಿಗಾಗಿ ಮೀಸಲಿಡಾಯಿತು ಎನ್ನುವ ಮಾತೂ ಇದೆ. ಗೋಡೆಗಳ ಮೇಲೆ ಸೂರ್ಯ, ವಾಯು, ಅಗ್ನಿ, ವಿಷ್ಣುವಿನ ಕೆತ್ತನೆಗಳಿವೆ.
  •  ಭೋಗ ಮಂಟಪ, ನವಗ್ರಹ ಮಂದಿರ, ವೈಷ್ಣವ ಮಂದಿರ, ಮ್ಯೂಸಿಯಮ್ ಗಳೂ ಇವೆಯಿಲ್ಲಿ.

ಇತಿಹಾಸದೊಂದಿಗೆ ನಿಗೂಢತೆ  ಮಂದಿರವನ್ನು ಕಟ್ಟಲು ಮಹಾರಾಜ ನೃಸಿಂಹ 12 ವರ್ಷಗಳ ಗಡವು ಕೊಟ್ಟಿದ್ದ, ಇದರೊಂದಿಗೆ ಕಾರ್ಯ ಸಾಧ್ಯವಾಗದಿದ್ದರೆ ಎಲ್ಲಾ 1,200 ಶಿಲ್ಪಿಗಳನ್ನು ಮುಗಿಸುವ ಬೆದರಿಕೆಯನ್ನು ಕೊಟ್ಟಿದ್ದ. ರಾಜ ಕೊಟ್ಟ ಗಡವಿನ ಸಮಯ ಮುಗಿಯುತ್ತಾ ಬಂದರೂ ಗರ್ಭಗುಡಿಯೊಳಗೆ ಮೂರ್ತಿಯನ್ನು ಕೂರಿಸುವ ಕೆಲಸ ಅಸಾಧ್ಯವಾಯಿತು. ಅದೇ ಹೊತ್ತಿನಲ್ಲಿ ಧರ್ಮಪಾದನೆನ್ನುವ 12 ವರ್ಷದ ಹುಡುಗನೊಬ್ಬ ತಾನು ಮುಖ್ಯ ಶಿಲ್ಪಿ ಬಿಶು ಮಹರಾನನ ಮಗನೆಂದು ಹೇಳಿಕೊಂಡು ಬಂದು ಅಸಾಧ್ಯವಾದ ಕೆಲಸ ಪೂರೈಸಿದ. ರಾಜನ ಅಹಂಕಾರ ಮುರಿಯಲು, ಹಾಗೂ ಉಳಿದ ಶಿಲ್ಪಿಗಳ ಮರ್ಯಾದೆ ಉಳಿಸಲು ಪಕ್ಕದ ಚಂದ್ರಭಾಗ ನದಿಗೆ ಹಾರಿ ಪ್ರಾಣ ಕಳೆದುಕೊಂಡ. ಅಪಶಕುನದಂತಾಗಿ ಮಂದಿರದಲ್ಲಿ ಪೂಜೆ ನಡೆಯಲೇ ಇಲ್ಲ ಎನ್ನುತ್ತಾರೆ ಕೆಲವರು, ಇದಕ್ಕೆಲ್ಲಾ ಸರಿಯಾದ ಪುರಾವೆ ಇಲ್ಲ.

ಮಂದಿರಕ್ಕೆ ಉಪಯೋಗಿಸಿದ ಕಲ್ಲಗಳನ್ನು ಹೊರದೇಶದಿಂದ ತರಲಾಯಿತು. ಅಲ್ಲದೆ ಧಾರಾಳವಾಗಿ ಲೋಡ್‌ ಸ್ಟೋನ್‌ ಉಪಯೋಗಿಸಿ ಕಟ್ಟಿದರು, ಇದು ನೈಸರ್ಗಿಕ ಮ್ಯಾಗ್ನೇಟ್‌ನಂತೆ ಕೆಲಸ ಮಾಡುತ್ತದೆ, ಇದರಿಂದ ಮುಖ್ಯ ಸೂರ್ಯ ದೇವರ ಮೂರ್ತಿಯು ಗರ್ಭಗುಡಿಯೊಳಗೆ ತೇಲುವಂತೆ ಮಾಡಿದ್ದರು.

ಮೊದಲು ಸಮುದ್ರವು ಮಂದಿರದ ಹತ್ತಿರವಿತ್ತು (ಈಗ ಸಮುದ್ರದ ನೀರು ಬತ್ತಿ ಹಿಂದಕ್ಕೆ ಸರಿದಿದೆ), ಹಿಂದೆ ವ್ಯವಹಾರ, ವೈವಾಟು ಎಲ್ಲವೂ ಸಮುದ್ರಯಾನದ ಮೂಲಕ ನಡೆಯುತ್ತಿತ್ತು. ಮಂದಿರದ ಒಳಗಿರುವ ಮ್ಯಾಗ್ನೇಟ್‌ ಹಡುಗಿನ ದಿಕ್ಸೂಚಿಗಳ ದಿಕ್ಕನ್ನೇ ತಪ್ಪಿಸುತ್ತಿದ್ದವು. ಇದನ್ನು ಕಂಡ ಪೋರ್ಚುಗೀಸರು ಮಂದಿರದ ಒಳಗಿರುವ ಮ್ಯಾಗ್ನೇಟ್‌ ಮತ್ತು ಮೂರ್ತಿಯನ್ನು ಕಿತ್ತೆಸೆದರು ಎನ್ನುತ್ತಾರೆ.

ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ರಾಜನೊಬ್ಬ ಸಿಟ್ಟಿನಲ್ಲಿ 1568ರಲ್ಲಿ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಬಂದ. ದ್ವೇಷದಿಂದ ಇಲ್ಲಿನ ಕೊನಾರ್ಕ ಮಂದಿರವಲ್ಲದೆ ಇತ್ತ ಮಂದಿರಗಳನ್ನು ನಾಶ ಮಾಡಿದ ಎನ್ನುವ ಸುದ್ಧಿಯೂ ಹರಿದಾಡುತ್ತಿದೆ.

ಪೋರ್ಚುಗೀಸರಿಂದ ಇಲ್ಲಿನ ಹಲವಾರು ನೃತ್ಯಗಾರ್ತಿಯರು ಹತವಾದರು. ಅವರ ಗೆಜ್ಜೆಯ ಶಬ್ಧ, ನಗು, ಮಾತುಗಳು ಈಗಲೂ ರಾತ್ರಿಯಲ್ಲಿ ಕೇಳಿಬರುತ್ತದಂತೆ.

  • ನೇಪತ್ಯಕ್ಕೆ ಸರಿದ ಮಂದಿರ ಮತ್ತೆ ವಿಶ್ವ ಪ್ರಸಿದ್ಧಿ ಪಡೆದದ್ದು

ಎಷ್ಟೇ ಶ್ರದ್ಧೆ, ಶ್ರಮ, ಲೆಕ್ಕಾಚಾರ ಹಾಕಿ ಕಟ್ಟಿದರೂ ಮಂದಿರವು ಸದಾ ಒಂದಲ್ಲ ಒಂದು ತೊಂದರೆಗೆ ಒಳಗಾಯಿತು. ಜನರಿಗೆ ಮಂದಿರದ ಬಗ್ಗೆ ಶ್ರದ್ಧೆ, ಭಕ್ತಿ ಕಡಿಮೆಯಾದಾಗ ಜನ, ಮನದಿಂದ ದೂರವಾಯಿತು. ಧೂಳು, ಮಣ್ಣು, ಕಳೆ ಗಿಡಗಳಿಂದ ತುಂಬಿತು. ಇದರ ಬೆಲೆಯನ್ನು ಅರಿತ ಬ್ರಿಟಿಷರು ಇದರ ಸಂರಕ್ಷಣೆಗೆ ಮುಂದಾದರು. ಮೊದಲಿಗೆ ಇದರ ಎಲ್ಲಾ ದ್ವಾರಗಳನ್ನು ಮುಚ್ಚಿ ಮರಳನ್ನು ತುಂಬಿಸಿದರು, ನಂತರ ಸ್ವಚ್ಛಗೊಳಿಸಿದರು, ಇದಕ್ಕೆ ಮೂರು ವರ್ಷಗಳೇ ಬೇಕಾದವು. 1939ರಲ್ಲಿ ಇದರ ಜವಾಬ್ದಾರಿಯನ್ನು ಭಾರತದ ಪುರತತ್ವ ಇಲಾಖೆ ವಹಿಸಿಕೊಂಡಿತು. 1948ರಲ್ಲಿ ಯೂನಿಸ್ಕೋ ವರ್ಲ್ಡ್‌ ಹೆರಿಟೇಜ್‌ ಸೈಟ್‌ ಎಂದು ಗುರುತಿಸಲ್ಪಟ್ಟಿತು.

ಗರ್ಭಗುಡಿಯೇ ಇಲ್ಲದ ಮಂದಿರವಾದರೇನಂತೆ ಇದನ್ನು ಸಂದರ್ಶಿಸಲು ದೇಶ, ವಿದೇಶಗಳಿಂದ ಪ್ರವಾಸಿಗರೇ ದಂಡೇ ಬರುತ್ತಿದೆ ಈಗ. ಹಾಗೆಯೇ ಇದರ ಸೌಂದರ್ಯ, ವಿಜ್ಞಾನಕ್ಕೆ ಕೈ ಮುಗಿಯದವರಿಲ್ಲವೇನೋ.

ಮಂದಿರವನ್ನು ನೋಡಲು 2-3 ಗಂಟೆಯಾದರೂ ಬೇಕು, ರೂ. 50 ಇದರ ಪ್ರವೇಶ ದರ. ಸಂಜೆಯ ಹೊತ್ತಿನಲ್ಲಿ ಲೈಟ್‌ ಶೋ ಸಹ ನಡೆಯುತ್ತದೆ.


  • ಗೀತಾ ಕುಂದಾಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW