ಮಹಾಪತನ ಪುಸ್ತಕ ಪರಿಚಯ – ಆತ್ಮ ಜೆ. ಎಸ್

ದುರ್ಯೋಧನ ಎಂದರೆ ದುಷ್ಟ ಬುದ್ದಿಯವನು ಎನ್ನುವ ಆಲೋಚನೆ ಬರುವುದು ಸಹಜ ಆದರೆ ಲೇಖಕ ಸಂತೋಷಕುಮಾರ ಮೆಹೆಂದಳೆ ಅವರು ಮಹಾಪತನ ಕೃತಿಯಲ್ಲಿ ದುರ್ಯೋಧನ ನಕಾರಾತ್ಮಕ ಗುಣವನ್ನು ಎತ್ತಿ ತೋರಿಸಿ ಅವನಲ್ಲಿ ದುಷ್ಟ ಬುದ್ದಿಯ ಮನೋಭಾವ ಬೆಳೆಯಲು ಕಾರಣವನ್ನು ಕೊನೆಯವರೆಗೆ ಹಿಡಿದಿಟ್ಟಿದಿಟ್ಟು ಓದುಗನ ಕುತೂಹಲವನ್ನು ಹೆಚ್ಚಿಸುತ್ತಾರೆ. ಕೃತಿಯ ಕುರಿತು ಆತ್ಮ ಜೆ. ಎಸ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಪುಸ್ತಕ : ಮಹಾಪತನ
ಲೇಖಕರು: ಸಂತೋಷಕುಮಾರ ಮೆಹೆಂದಳೆ
ಪ್ರಕಾಶಕರು : ಸ್ನೇಹ ಬುಕ್ ಹೌಸ್
ಪುಟ :೩೭೬
ಬೆಲೆ : 380.೦೦
ಖರೀದಿಗಾಗಿ : 9845031335

ಯಾರೂ ಸಹಿಸರು, ಅದರಲ್ಲಿಯೂ ಗೌರವ ಕೊಟ್ಟು ,ಅದೇ ನೆಲದಲ್ಲಿ ಎಲ್ಲರ ದೃಷ್ಟಿ ಬದಲಾಗುವ ಹಾಗೆ ನಡೆದುಕೊಂಡರೆ ಕೇಳುವುದೇ ಬೇಡ.ಇಂಥದ್ದೇ ಸಂದರ್ಭವನ್ನು ಎದುರಿಸಿದ ಸುಯೋಧನ ಛಲದಂಕಮಲ್ಲನಾಗಿ ಬದಲಾಗಿ ದುರ್ಯೋಧನನಾಗಿದ್ದು ಓದಿದರೆ, ಈವರೆಗೆ ಆತನ ಬಗೆಗೆ ನಮ್ಮಲ್ಲಿದ್ದ ದೃಷ್ಟಿಕೋನ ಬದಲಾಗದೆ ಹೋದರೆ ನಮ್ಮಲ್ಲಿಯೇ ಏನೋ ತೊಡಕಿದೆ ಎಂಬ ಭಾವ ಬರಲಾರದೆ ಇರದು..

ದುರ್ಯೋಧನ ಎಂದರೆ ದುಷ್ಟ ಬುದ್ದಿ ಎಂದೇ ಮೊದಲು ಮನಸ್ಸಿಗೆ ಬರುವ ಅಲೋಚನೆಯಾದ್ದರಿಂದ ಆತನ ಬಗೆಗೆ ಒಳ್ಳೆಯ ಮಾತನಾಡಿದರೆ ಸಹಜವಾಗಿ ಅನುಮಾನದ ದೃಷ್ಟಿಯಿಂದ ನೋಡುವಂತಾಗುತ್ತದೆ.ಆದರೆ ಸತ್ಯವನ್ನು ಕೊನೆಯವರೆಗೆ ಮರೆಮಾಚಿ ಆತನ ನಕಾರಾತ್ಮಕ ಗುಣವನ್ನು ಎತ್ತಿ ತೋರಿಸಿ ಆತನ ಕುರಿತಾಗಿ ದುಷ್ಟ ಬುದ್ದಿ ಎಂಬ ಮನೋಭಾವ ಬೆಳೆಯಲು ಕಾರಣವಾಗಿದ್ದು.ಹಾಗಾದರೆ ಆತನ ಲ್ಲಿಯೂ ಒಳ್ಳೆತನ ಇತ್ತಾ? ಪಾಂಡವರಲ್ಲಿ ಇದ್ದ ಒಳ್ಳೆಯ ಕೆಲವು ಗುಣಗಳನ್ನು ಪ್ರತಿಪಾದಿಸಲು,ಸಮರ್ಥನೆ ಮಾಡಲು ಅವರ ಸುತ್ತ ಇದ್ದ ಹಿತೈಷಿಗಳು ದುರ್ಯೋಧನನ ಪತನಕ್ಕೆ ಹೇಗೆ ಕಾರಣವಾದರು ಇದೆಲ್ಲದರ ಒಟ್ಟು ಸಾರವೇ #ಸಂತೋಷಕುಮಾರ್ಮಹೆಂದಳೆ ಅವರ #ಮಹಾ_ಪತನ..

ಮಹಾಭಾರತ ಎಂದರೆ ಸಂಘರ್ಷ.ಇಲ್ಲಿ ನಂಬಿಕೆಯ ಸಂಘರ್ಷ,ತಮ್ಮದೇ ಮಾತಿಗೆ ಕಟ್ಟು ಬಿದ್ದು ಆದ ಸಂಘರ್ಷ,ತನ್ನವರನ್ನು ನಂಬಿದವರಿಗೆ ಮೋಸ ಮಾಡದೆ ಇರಲು ತನ್ನದೇ ಕಾರಣ ಕೊಡುವಲ್ಲಿ ಸಂಘರ್ಷ, ತಂಗಿಗೆ ಕೆಡುಕಾದಾಗ ಅದನ್ನು ನೇರ ಎದುರಿಸಲಾಗದೆ ತನ್ನ ಪ್ರತಿಜ್ಞೆಯನ್ನು ಪೋಷಿಸಿ.ಅದರ ಲಾಭಕ್ಕಾಗಿ ಬದುಕು ಸವೆಸಿದ ಸಂಘರ್ಷ…ಪಟ್ಟಿ ಮಾಡುತ್ತಾ ಹೋದರೆ ಉದ್ದವಾಗುತ್ತದೆ.ಆದರೂ ಎಲ್ಲರೂ ಅವರವರ ನೇರಕ್ಕೆ ಸಮರ್ಥನೆ ಮಾಡಿಕೊಳ್ಳುತ್ತಾ ಇದಾವುದರ ಪರಿವೇ ಇಲ್ಲದೆ ತನ್ನವರಿಗೆ ಬದುಕನ್ನು ಮುಡಿಪಾಗಿಟ್ಟ ದುರ್ಯೋಧನನಿಗೆ ಕೊನೆಗೆ ವಿಧಿಯು ಮೋಸ ಮಾಡಿದ್ದು ಮಾತ್ರ ಬೇಸರದ ಸಂಗತಿ..

#ಮಹಾ_ಪತನ ಓದುತ್ತಾ ಹೋದ ಹಾಗೆ ನನ್ನೊಳಗೆ ಈವರೆಗೆ ಇದ್ದ ಕೆಲವರ ಸದಾಭಿಪ್ರಾಯ ಬದಲಾಗುತ್ತಾ ಹೋಯಿತು.

* ಕೃಷ್ಣ ಎಂದರೆ ದೈವಾಂಶ ಸಂಭೂತದ ಭಾವ ಬದಲಾಗಿ ಮೋಸದ ದಾಳ ಕೊನೆಯವರೆಗೂ ಉರುಳಿಸುದಾತ.
* ಭೀಷ್ಮ,ದ್ರೋಣಾಚಾರ್ಯರು ತಮ್ಮದೇ ಮಾತಿನ ಬಾಣದಲ್ಲಿ ಬಂಧಿಯಾಗಿ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿದ್ದು.
* ತನ್ನವರ ರಕ್ಷಣೆಗೆ ನಿಂತಂತೆ ಕೊನೆಯವರೆಗೂ ಜೊತೆಯಲ್ಲಿ ಇದ್ದಂತೆ ನಟಿಸಿ ಕತ್ತು ಕೊಯ್ದ ಶಕುನಿ..

ಇರುವ ವಿಚಾರವನ್ನು ನೇರವಾಗಿ ಹೇಳುವ,ಹಿರಿಯರನ್ನು ಗೌರವದಿಂದ ಪ್ರಶ್ನಿಸುವ ದುರ್ಯೋಧನನ ಮಾತುಗಳು ಹಲವು ಬಾರಿ ಪುನರ್ ಮನನ ಮಾಡುವ ಹಾಗೆ ಇದೆ.ಎಲ್ಲಿಯೂ ಅಧರ್ಮಕ್ಕೆ ಒತ್ತು ನೀಡದೇ, ನೈತಿಕತೆಯ ಅಧಃಪತನಕ್ಕೆ ಇಳಿಯದ ದುರ್ಯೋಧನ ಆ ದೃಷ್ಟಿಯಿಂದಲೇ ಹತ್ತಿರವಾಗುತ್ತಾನೆ.

ದುರ್ಯೋಧನನ ಕೆಟ್ಟ ಬುದ್ದಿ ಎಂಬಂತೆ ಅನ್ನಿಸುವುದೇ ದ್ಯೂತದಲ್ಲಿ ದ್ರೌಪದಿಯನ್ನು ಸಭೆಗೆ ತರುವುದರ ಮೂಲಕ.ಆದರೆ ಅದೇ ದ್ರೌಪತಿ ಧರ್ಮರಾಯನ ರಾಜಾಸೂಯ ಯಾಗದಲ್ಲಿ ದುರ್ಯೋಧನನಿಗೆ ಮಾಡಿದ ಅವಮಾನವೆ ಕಾರಣ ಎಂಬುದು ತೆರೆಯ ಹಿಂದೆಯೇ ಉಳಿಯುವುದು ವಿಷಾದನೀಯ.

ಪುಸ್ತಕ ಓದುತ್ತಾ ಹೋದ ಹಾಗೆ ನೇರ ನಡೆನುಡಿಯ ದುರ್ಯೋಧನ ನಮ್ಮ ಮನಸ್ಸನ್ನು ಆಕ್ರಮಿಸಿ ಕೊಂಡ ಹಾಗೆ, ಒಳ್ಳೆಯ,ಧರ್ಮಕ್ಕೆ ಹೆಸರಾದ ಧರ್ಮರಾಜ ನಮ್ಮ ಮನಸ್ಸಿನ ಆಳಕ್ಕೆ ಇಳಿಯುವುದೇ ಇಲ್ಲ. ಈವರೆಗೆ ನನ್ನ ಮನದಲ್ಲಿ ಇದ್ದ ದುರ್ಯೋಧನನ ಚಿತ್ರಣ ಬದಲಾಗಿದ್ದೆ ಹೀಗೆ.ಆತನ ಮನೋವಿಷ್ಲೇಷಣೆ ಬದಲಾದ ಹಾಗೆ ನಮ್ಮಲ್ಲಿರುವ ದುರ್ಯೋಧನನ ಚಿತ್ರವೂ ಬದಲಾಗುತ್ತದೆ.

ಮಹಾಪತನ ಪುಸ್ತಕ ಲೇಖಕ ಸಂತೋಷಕುಮಾರ ಮೆಹೆಂದಳೆ

ಮಹಾಭಾರತ ಎಂದರೆ ಗಲಾಟೆ,ಘರ್ಷಣೆ ಎಂಬ ಮನೋಭಾವದಲ್ಲಿಯೆ ಕಾಲೇಜಿನ ಪಠ್ಯಕ್ಕೆಂದು ರನ್ನನ ಗದಾಯುದ್ಧದ ಕೆಲವು ಭಾಗಗಳನ್ನು ಓದಿದ್ದವಳು.ತೀರಾ ಇತ್ತೀಚೆಗೆ ಕುಮಾರ ವ್ಯಾಸ ಭಾರತದ ಕೆಲವು ಕಥಾನಕಗಳನ್ನು ಗಮಕದ ಮೂಲಕ ಮಹಾಭಾರತದ ವಿಚಾರಗಳನ್ನು ತಿಳಿಯುವ ಪ್ರಯತ್ನ ಮಾಡಿದ್ದೆ. ಇದನ್ನು ಬಿಟ್ಟರೆ ಈವರೆಗೆ ಮಹಾಭಾರತದ ಪುಸ್ತಕ ಓದಿದವಳಲ್ಲ.ಕೆಲಸದ ನಡುವೆ ತಂದಿಟ್ಟ ಪುಸ್ತಕವೂ ಮರೆತೇ ಹೋಗಿತ್ತು..

ದಿನವಿಡೀ ಮೋಡ ಮುಸುಕಿದ ವಾತಾವರಣ ಉತ್ಸಾಹವನ್ನು ಕುಂದಿಸಿತ್ತು..ಜಡ್ಡುಗಟ್ಟಿದ ಮನಸ್ಸ ಚುರುಕು ಗಳಿಸಲು ಪುಸ್ತಕದ ಭಂಡಾರದಲ್ಲಿ ಕಣ್ಣಾಡಿಸಿದಾಗ ಕಂಡ ಪುಸ್ತಕವಿದು.

#ಮಹಾಪತನ ಓದಿ ಮಹಾಭಾರತದ ಬಗ್ಗೆ ,ದುರ್ಯೋಧನನ ಸ್ವಹಿತದ ಬಗ್ಗೆ ಇದ್ದ ನನ್ನ ಆಲೋಚನೆ ಪತನವಾಯಿತೆ ವಿನಃ ದುರ್ಯೋಧನನ ವ್ಯಕ್ತಿತ್ವವಲ್ಲ..ಹಾಗಾಗಿಯೇ ಈತ ಎಂದಿಗೂ ಎಲ್ಲರ ಮನದಲ್ಲಿ ಇರುವ #ಕುರುಕಲಾರ್ಕನುಮರ್ಕನಮಸ್ತ  ಮೇಯ್ದಿದರ್. ಇದೊಂದು ಸಾಲುಗಳನ್ನು ನನ್ನ ಪ್ರಾಚಾರ್ಯರು ವಿವಿಧ ವಿಶ್ಲೇಷಣೆಯ ಮೂಲಕ ಅಲಂಕಾರದ ವರ್ಣನೆ ಮಾಡಿದ್ದು ಇನ್ನೂ ಮನದಲ್ಲಿ ಅಚ್ಚಳಿಯದೆ ಹಾಗೆಯೇ ಇತ್ತು..

ಇಂದು ಮತ್ತದೇ ಭಾವ,ಕೆಲವೊಂದು ಸಾಲುಗಳನ್ನು ಪುನರ್ಮನನ ಮಾಡುತ್ತಾ ಓದಿ..ಆತನ ಮನಸ್ಥಿತಿಯಲ್ಲಿ ನಾನೂ ನಿಂತು ಆಲೋಚಿಸುವ ಹಾಗೆ ಮಾಡಿತ್ತು..ಪುಸ್ತಕ ಪೂರ್ತಿ ಓದಿ ಮುಗಿಸಿದ ಕ್ಷಣಕ್ಕೆ ಬಿಸಿಯಾದ ಹಿತವಾದ ಕಾಫೀ ಕುಡಿದ ಭಾವ.ಮನಸ್ಸಿಗೆ ಚುರುಕುತನ ಮೂಡಿಸುವ ಕಾಫೀ ಕುಡಿದರೆ ಸುಮಾರು ಹೊತ್ತಿನವರೆಗೆ ಬೇರೆ ಏನನ್ನೂ ಆಸ್ವಾದಿಸುವ ಮನಸ್ಸು ಬಾರದು. ಬಹುಶಃ ಮಹಾ ಪತನ ಆವರಿಸಿದ ಪರಿ ನೋಡಿದರೆ ಸದ್ಯಕ್ಕೆ ಮತ್ತೆ ಬೇರೆ ಪುಸ್ತಕ ಕೈಗೆತ್ತಿ ಕೊಳ್ಳುವ ಮನಸ್ಸು ಬಾರದು ನನಗೆ.ಓದಿದ ಪುಸ್ತಕ,ಸಾಹಿತ್ಯ ಇಡಿಯಾಗಿ ಆವರಿಸುವುದು ಎಂದರೆ ಹೀಗೆಯೇ ಇರಬೇಕು.

ದುರ್ಯೋಧನನ ಪತನವಾದರೂ ರವಿಯ ಹಾಗೆಯೇ ಮತ್ತೆ ಮತ್ತೆ ನಮ್ಮನ್ನಾಳುವ #ಮಹಾ_ಪತನ


  • ಆತ್ಮ ಜೆ. ಎಸ್, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW