ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಹಾಸ್ಟೆಲ್ ಗಳ ವ್ಯವಸ್ಥೆ ಮಾಡಿಕೊಟ್ಟಿದೆ, ಆದರೆ ಭ್ರಷ್ಟ ಅಧಿಕಾರಿಗಳ ಕುತಂತ್ರಕ್ಕೆ ಕೆಲ ಹಾಸ್ಟೆಲ್ ಗಳು ಸಿಲುಕಿ ನೂರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ನುಚ್ಚುನೂರು ಮಾಡುತ್ತಿರುವುದರ ಕುರಿತು ಯುವ ಲೇಖಕ ವಿಕಾಸ್. ಫ್. ಮಡಿವಾಳರ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
“ನೋಡು ಅಣ್ಣ ತಿನ್ನೊ ಅನ್ನಕ್ಕೂ ಕಲ್ಲು ಹಾಕಿದ್ದಾರೆ ” ನನ್ನ ತಂಗಿ ಹೇಳಿದ ಮಾತಿದು. ಬೆಳಗ್ಗೆ ಕಾಲೇಜಿಗೆ ಬರುವ ಹೊತ್ತಾಗಿತ್ತು. ಬಸ್ಸಿನ ಸೀಟಿಗೆ ಕೆಲಹೊತ್ತು ಒರಗಿ ಆಗತಾನೆ ಕಣ್ಣು ಮುಚ್ಚಿದ್ದೆ. ಅನಿವಾರ್ಯಕ್ಕೊ ಅಥವಾ ಅನಗತ್ಯಕ್ಕೊ ನನಗೆ ನಿದ್ದೆ ಬರುವುದು ಸಹಜವಾಗಿತ್ತು. ಕನಸಿನಲ್ಲಿ ರಂಬೆ, ಊರ್ವಶಿ ಬರದಿದ್ದರೂ ನನ್ನವಳ ಮೇಲೆ ಕನಸು ಕಾಣುತ್ತಿದ್ದೆ. ಇನ್ನೇನು ನಿದ್ದೆಯ ಮಂಪರಿನಲ್ಲಿ ತೇಲುವಷ್ಟರಲ್ಲಿ ನನ್ನ ಗೆಳೆಯ ನನ್ನನ್ನು ಹೊಡಿದೆಬ್ಬಿಸಿ ಕಾಲೇಜು ಬಂದಿದೆಯೆಂದು ಬಸ್ಸಿನಿಂದ ಹೊರಗೆ ನೂಕಿದ. ಒಂದೆರಡು ಹೆಜ್ಜೆ ಮುಂದೆ ಇಟ್ಟಿದ್ದೆ ತಡ, ನನ್ನ ತಂಗಿ ಹಿಂದಿನಿಂದ ಬಂದು ತಲೆಗೆ ಹೊಡೆದುಬಿಟ್ಟಳು. ಕೋಪಿತಳಾಗಿದ್ದ ಅವಳನ್ನು ಸಮಾಧಾನ ಪಡಿಸಲು ಕೆಲ ಸಮಯ ಕಳೆದೆ. ಆಗಲೆ ಆಕೆ ಅವಳ ಹಾಸ್ಟೆಲಿನ ಬದುಕಿನ ಬಗ್ಗೆ ಒಂದು ಸಣ್ಣ ವಿವರಣೆ ಕೊಟ್ಟಳು.
ಬೇರೆ ಬೇರೆ ಊರಿನಿಂದ ಬಂದ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗಬಾರದೆಂದು, ಬಸ್ಸುಗಳ ಕೊರತೆಯಿಂದ ಬಳಲಬಾರದೆಂದು, ಸಮಯದ ಸದುಪಯೋಗವಾಗಬೇಕೆಂದು ನಮ್ಮ ಸರ್ಕಾರ ಹಾಸ್ಟೆಲ್ಲುಗಳ ವ್ಯವಸ್ಥೆ ಮಾಡಿಸಿದೆ. ವಿದ್ಯಾರ್ಥಿಗಳಿಗೆ ಯಾವುದೆ ಕುಂದು ಕೊರತೆಗಳಾಗಬಾರದೆಂದು ಪ್ರತಿ ಜಿಲ್ಲೆ, ತಾಲೂಕು ಹಾಗೂ ಶಿಕ್ಷಣ ಸಂಸ್ಥೆಗಳಿರುವ ಪ್ರದೇಶದಲ್ಲಿ ಹಾಸ್ಟೆಲ್ ಗಳನ್ನು ಕಟ್ಟಿಸಿದೆ. ವಿದ್ಯಾರ್ಥಿಗಳ ದೈನಂದಿನ ಕೆಲಸಕ್ಕೆ ಉಪಯೋಗವಾಗುವ ವಸ್ತುಗಳಿಂದ ಹಿಡಿದು, ಊಟದ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ ಮತ್ತು ಇತರೆ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸರ್ಕಾರದ ಉದ್ದೇಶ ಒಳ್ಳೆಯದೆ ಆದರೆ ಈ ಉದ್ದೇಶವನ್ನು ಕೆಲ ಅನಾಚಾರಿಗಳು ತಮ್ಮ ದುರದ್ದೂದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ನಮ್ಮ ದೌರ್ಬಾಗ್ಯ. ಈ ನೀಚರ ಸ್ವಾರ್ಥಕ್ಕೆ, ಈ ದುರಾಚಾರಿಗಳ ಅತಿ ಆಸೆಗೆ ಅದೆಷ್ಟೊ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಅದೆಷ್ಟೊ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಲಿನ ಮೂಲ ಸೌಕರ್ಯ ಸಿಗದೆ ಒದ್ದಾಡಿದ್ದಾರೆ. ಅದೆಷ್ಟೊ ವಿದ್ಯಾರ್ಥಿಗಳ ಜೀವನ ಕಾಣದ ಕೈಗಳಿಗೆ ಬಲಿಯಾಗಿದೆ. ಈಗಲಾದರು ನಮ್ಮ ಸಮಾಜ ಈ ತೊಂದರೆಗಳನ್ನು ಎತ್ತಿ ಹಿಡಿಯಬೇಕು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ನನ್ನ ಆಸೆ.
ಫೋಟೋ ಕೃಪೆ : apollovet
ಹಾಸ್ಟೆಲ್ಲಿನ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಬೇಕೆಂಬ ವಿಚಾರದಿಂದ ಹಾಸ್ಟೆಲಿನಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಿದೆ. ಊಟ ತಯಾರಿಸಲು ಬೇಕಾಗುವ ಅಕ್ಕಿ ಬೆಳೆ ತರಕಾರಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಒದಗಿಸಿದ್ದಾರೂ ಕೆಲ ಸಾಮಗ್ರಿಗಳು ಹಾಸ್ಟೆಲ್ಲುಗಳ ಮೆಟ್ಟಿಲು ಹತ್ತದೆ ಕೆಲ ಭ್ರಷ್ಟಾಚಾರಿಗಳ ಮನೆಬಾಗಿಲಿಗೆ ಹೋಗುತ್ತಿದೆ. ವಿದ್ಯಾರ್ಥಿಗಳ ಹಸಿವನ್ನು ನೀಗಿಸಬೇಕಿದ್ದ ಅವರುಗಳು, ತಮ್ಮ ತಮ್ಮ ಹಸಿವನ್ನು ನೀಗಿಸುತ್ತಿದ್ದಾರೆ. ಹಾಸ್ಟೆಲಿಗೆ ಬರುವ ಅಳಿದುಳಿದ ಸಾಮಗ್ರಿಗಳಲ್ಲಿ ಕಲ್ಲು ಕಡಿ ಸಿಗುವುದು ಸರ್ವೆ ಸಾಮಾನ್ಯವಾಗಿದೆ. ಇನ್ನು ಹಾಲಿನ ಸೌಲಭ್ಯಕ್ಕೆ ಹೇಳುವುದಾದರೆ, ಹಾಲಿಗೆ ನೀರು ಬೆರೆಸಿರುವರೊ, ಇಲ್ಲ ನೀರಿಗೆ ಹಾಲು ಬೆರೆಸಿರುವರೊ ಎಂಬ ಪ್ರಶ್ನೆ ಮೂಡಿಸುವಷ್ಟು ಹಾಲು ತಿಳಿಯಾಗಿರುತ್ತದೆ. ಫ್ಯಾನುಗಳು ಹಾಳಾದರೆ ಸರಿ ಮಾಡಿಸುವುದು ಮುಂದಿನ ವಾರವೆ. ಕೆಲವೊಂದು ಕಡೆ ಬಲ್ಪುಗಳು ಕೈ ಕೊಟ್ಟು ಅದೆಷ್ಟೊ ದಿನಗಳು ಉರುಳಿ ಹೋಗಿದೆ. ಆಹಾರ ಪದಾರ್ಥದಲಷ್ಟೆಯಲ್ಲ ಹಾಸ್ಟೆಲ್ ಲಿಸ್ಟಿನಲ್ಲು ದೊಡ್ಡ ಹಗರಣ ನಡೆದಿರುವುದು ಕಂಡು ಬರುತ್ತದೆ. ಹಾಸ್ಟೆಲ್ ಲಿಸ್ಟಿನಲ್ಲಿ ಒಬ್ಬ ವಿದ್ಯಾರ್ಥಿಯ ಹೆಸರಿದ್ದರು ಆ ವಿದ್ಯಾರ್ಥಿಯನ್ನು ಬಿಟ್ಟು ಯಾವುದೊ ಪ್ರಭಾವಿ ವ್ಯಕ್ತಿ ಹೇಳಿದನೆಂದು ಬೇರೊಬ್ಬ ವಿದ್ಯಾರ್ಥಿಗೆ ಸೀಟು ಕೊಟ್ಟ ಉದಾಹರಣೆಗಳು ತುಂಬಾ ಇವೆ. ಇವರು ಸರಕಾರದ ಕೆಲಸಗಾರರೊ ಇಲ್ಲ ಪ್ರಭಾವಿ ವ್ಯಕ್ತಿಗಳ ಮನೆ ಆಳುಗಳೊ ಎಂಬುದು ನನಗಿನ್ನು ತಿಳಿದಿಲ್ಲ.
ಬಡ ವಿದ್ಯಾರ್ಥಿಗಳು ಶಾಲಾ ಕಾಲೇಜಿನ ವೆಚ್ಚವನ್ನು ಭರಿಸಲಾಗುವುದಿಲ್ಲವೆಂದು, ನಮ್ಮ ಸರ್ಕಾರ ವಿದ್ಯಾರ್ಥಿವೇತನವನ್ನು ಕೊಡಲು ಶುರುಮಾಡಿದೆ. ಆದರೆ ಈ ವಿದ್ಯಾರ್ಥಿವೇತನದ ಮೇಲು ಕೆಲ ದುಷ್ಟರ ಕಣ್ಣು ಬಿದ್ದ ಕಾರಣ, ವಿದ್ಯಾರ್ಥಿಗಳ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಬೇಕಾದವರೆ ಅವರ ಬದುಕಿಗೆ ಎಳ್ಳು ನೀರು ಬಿಟ್ಟರೆ ವಿದ್ಯಾರ್ಥಿಗಳ ಬದುಕನ್ನು ಯಾರು ಬದಲಿಸಬೇಕು. ಇಂತಹ ಹಗರಣಗಳನ್ನು, ಅವ್ಯವಹಾರವನ್ನು ವಿದ್ಯಾರ್ಥಿಗಳು ಕಣ್ಣು ಮುಂದೆ ಕಂಡರೂ, ಕೆಲ ದುಷ್ಟರ ದರ್ಪಕ್ಕೆ ದಬ್ಬಾಳಿಕೆಗೆ ಹೆದರಿ ಮೌನಕ್ಕೆ ಶರಣಾಗಿದ್ದಾರೆ.
ಫೋಟೋ ಕೃಪೆ : deccanchronicle
ಹಾಸ್ಟೆಲ್ಲುಗಳ ಬದುಕೆ ಹಾಗೆ ಕೆಲವೊಂದು ಹಾಸ್ಟೆಲ್ಲುಗಳ ರೂಪು ರೇಶೆಗಳನ್ನು ವರ್ಣಿಸಲು ಮಾತು ಸಿಗುವುದಿಲ್ಲ. ಅವುಗಳ ಸ್ವಚತೆ ನೀತಿ ನಿಯಮಗಳು ವಿದ್ಯಾರ್ಥಿಗಳಿಗೆ ಕೊಟ್ಟ ಸೌಲತ್ತುಗಳನ್ನು ಎಷ್ಟು ಹೊಗಳಿದರು ಸಾಲದು. ಆದರೆ ಭ್ರಷ್ಟಾಚಾರಿಗಳ ಕುತಂತ್ರಿಗಳ ದುಷ್ಟರ ಕೈಚಳಕದಿಂದ ಕೆಲ ಹಾಸ್ಟೆಲ್ಲುಗಳ ಮಾನ ಬೀದಿಗೆ ಬಿದ್ದಿದೆ. ಇದು ಸರಕಾರಕ್ಕೆ ಕಪ್ಪು ಚುಕ್ಕೆ ಇದ್ದಂತೆ.
ಇಂದಿನ ಯುವಕರೆ ಮುಂದಿನ ಪ್ರಜೆಗಳೆನ್ನುವ ಸರಕಾರಕೊಂದು ನನ್ನದೊಂದು ಮನವಿ. ಈಗಲೂ ಕಾಲ ಮಿಂಚಿಲ್ಲ, ಈಗಲಾದರೂ ಅವ್ಯವಹಾರಗಳನ್ನು ನಡೆಸುತ್ತಿರುವ ಕೆಲ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ವಜಾಗೊಳಿಸಬೇಕು. ಪ್ರತಿ ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಹಾಸ್ಟೆಲಿನಲ್ಲಿ ಏನಾದರು ತೊಂದರೆಯಾದರೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪರ್ಯಾದು ಕೊಡುವ ಅನುಕೂಲ ಒದಗಿಸಬೇಕು. ಭ್ರಷ್ಟಾಚಾರದ ಬಗ್ಗೆ ಅದರಿಂದಾಗುವ ತೊಂದರೆಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಇಡುವ ಪ್ರತಿ ಹೆಜ್ಜೆಯ ಹಿಂದೆ ನೆರಳಾಗಿ ಧೈರ್ಯ ತುಂಬಬೇಕು. ಇದರಿಂದ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಾಗಿ ಮುಂದೆ ಕಾಣುವ ಅವ್ಯವಹಾರಗಳ ವಿರುದ್ಧ ದನಿಯಗುತ್ತಾರೆ. ಭ್ರಷ್ಟಾಚಾರಿಗಳ ಉಪಟಳ ಕಡಿಮೆಯಾಗಿ ನಾವು ಕಂಡ ಕನಸಿನ ಭಾರತಕ್ಕೆ ನಾಂದಿ ಹಾಡಿದಂತಾಗುತ್ತದೆ. ನಮ್ಮಿಂದ ಶುರುವಾದ ಒಂದು ಸಣ್ಣ ಬದಲಾವಣೆಯಿಂದ ಮುಂದೊಂದು ದಿನ ಎಲ್ಲರೆದುರು ನನ್ನ ಭಾರತ ತಲೆ ಎತ್ತಿ ನಿಲ್ಲುವಂತಾಗುತ್ತದೆ ಎಂಬುದು ನನ್ನ ನಂಬಿಕೆ.
ಇಂತಿ ನಿಮ್ಮ ಪ್ರೀತಿಯ.
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ