ಕನ್ನಡದ ಖ್ಯಾತ ಪ್ರಸಾದಕ ‘ಮೇಕಪ್ ರಾಮಕೃಷ್ಣ’ ಅವರು ತೆರೆಯ ಮರೆಯ ಒಬ್ಬ ಖ್ಯಾತ ಕಲಾವಿದರು. ಅವರ ಸಾಧನೆಯ ಹಾದಿಯನ್ನು ಆಕೃತಿಕನ್ನಡದಲ್ಲಿ ಸೆರೆಹಿಡಿಯಲಾಗಿದೆ. ಕನ್ನಡದ ಖ್ಯಾತ ನಟಿ ಸೋನುಗೌಡ ಹಾಗೂ ಕಿರುತೆರೆಯ ಖ್ಯಾತ ನಟಿ ನೇಹಾಗೌಡ (ಗೊಂಬೆ) ಅವರ ಮುದ್ದಿನ ಅಪ್ಪ ಮೇಕಪ್ ರಾಮಕೃಷ್ಣ ಅವರ ಕುರಿತಾದ ಲೇಖನವನ್ನು ತಪ್ಪದೆ ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ನಾಟಕ ಅಥವಾ ಸಿನಿಮಾದಲ್ಲಿನ ಪಾತ್ರಧಾರಿಗಳು ಪ್ರೇಕ್ಷಕನನ್ನು ಆವರಿಸಿದಷ್ಟು ತೆರೆಯ ಹಿಂದಿನ ಕಲಾವಿದರು ಅವರಿಸುವುದಿಲ್ಲ . ತೆರೆಯ ಹಿಂದಿನ ಕಲಾವಿದರೆಂದರೆ ಉದಾಹರಣೆಗೆ ಪ್ರಸಾದಕರಾಗಿರಬಹುದು, ಬೆಳಕು ವಿನ್ಯಾಸಕಾರರಿರಬಹುದು, ಬರಹಗಾರರಿರಬಹುದು, ವಸ್ತ್ರವಿನ್ಯಾಸಕಾರನಿರಬಹುದು. ಇದು ಯಾಕೆ ಎನ್ನುವ ಪ್ರಶ್ನೆ, ಒಂದು ಕುತೂಹಲ ನನಗೆ ತುಂಬಾನೇ ಕಾಡಿದ್ದು ಇದೆ. ಆ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾಗ ನನಗೆ ಪರಿಚಯವಾದವರೇ ಹಿರಿಯ ರಂಗಭೂಮಿ ಕಲಾವಿದ ಹರಿಕೃಷ್ಣ ಸರ್ ಅವರು. ಅವರ ಸಹಾಯದಿಂದ ಪ್ರಸಾದಕರೊಬ್ಬರ ಫೋನ್ ನಂಬರ್ ಕೂಡಾ ಸಿಕ್ಕಿತು.
ಅಲ್ಲಿಗೆ ನಾನು ತಡಮಾಡಲಿಲ್ಲ. ಸೀದಾ ಅವರಿದ್ದ ಪದ್ಮನಾಭನಗರದಲ್ಲಿನ ಮನೆಗೆ ಹೋದೆ. ಅವರು ಮತ್ಯಾರು ಅಲ್ಲ, ನಮ್ಮೆಲ್ಲರ ಮೆಚ್ಚಿನ ಪ್ರಸಾದಕ ರಾಮಕೃಷ್ಣ ಅವರು. ಹೊರಜಗತ್ತಿಗೆ ಅವರು ‘ಮೇಕಪ್ ರಾಮಕೃಷ್ಣ’ ರೆಂದೇ ಖ್ಯಾತಿ ಪಡೆದವರು.
ನಾನು ಅವರಿಗೆ ಕೇಳಿದ ಮೊದಲ ಪ್ರಶ್ನೆಯೇ ಅದೇ ‘ನಾಟಕ ಅಥವಾ ಸಿನಿಮಾದಲ್ಲಿನ ಪಾತ್ರಧಾರಿಗಳು ಪ್ರೇಕ್ಷಕನನ್ನು ಆವರಿಸಿದಷ್ಟು ತೆರೆಯ ಹಿಂದಿನ ಕಲಾವಿದರು ಆಕರ್ಷಿಸುವುದಿಲ್ಲ ಯಾಕೆ ?’ ಅಂದಾಗ, ಅವರ ಮುಖದಲ್ಲಿ ಸಿಟ್ಟಾಗಲಿ, ಬೇಸರವಾಗಲಿ, ಅಸಮಾಧಾನವಾಗಲಿ ಕಾಣಲಿಲ್ಲ. ಬದಲಾಗಿ ಮುಖದಲ್ಲಿ ಸುಂದರವಾದ ನಗುವಿನ ಜೊತೆ ಅವರ ಮಾತು ಸಾಗಿತು. ‘ಯಾರೋ ಒಬ್ಬ ಪ್ರೇಕ್ಷಕ ಅಂತಲ್ಲ, ನಾನೇ ಒಬ್ಬ ಪ್ರೇಕ್ಷಕನಾಗಿ ಕೂತಾಗ ನಾನು ನೋಡುವುದು ಮೊದಲು ಪಾತ್ರಧಾರಿಗಳನ್ನು, ತೆರೆಯ ಮೇಲಿನ ಎಲ್ಲ ಪಾತ್ರಧಾರಿಗಳು ಪ್ರೇಕ್ಷಕನನ್ನು ಆವರಿಸಲು ಸಾಧ್ಯವಿಲ್ಲ. ಅಷ್ಟು ಪಾತ್ರಧಾರಿ ಮಧ್ಯೆ ಅತ್ಯದ್ಭುತವಾಗಿ ನಟಿಸುವ ಒಬ್ಬ ಕಲಾವಿದನ ಮೇಲೆ ಮಾತ್ರ ಪ್ರೇಕ್ಷಕನ ಕಣ್ಣು ಕೇಂದ್ರೀಕೃತವಾಗಿರುತ್ತದೆ. ಅಲ್ಲಿಯೂ ಪ್ರತಿಭೆ ಮುಖ್ಯವಾಗುತ್ತೆ. ಹೀಗಿರುವಾಗ ತೆರೆಯ ಹಿಂದಿನ ಕಲಾವಿದರನ್ನು ಪ್ರೇಕ್ಷಕ ಗುರುತಿಸಲಿಲ್ಲ ಎಂದರೆ ತಪ್ಪಾಗುತ್ತದೆ. ಯಾವುದೇ ಕೆಲಸವಾಗಲಿ ಅದು ವಿಭನ್ನವಾಗಿದೆ ಎಂದಾಗ ಪ್ರೇಕ್ಷಕ ಅವರನ್ನು ಗುರುತಿಸುತ್ತಾನೆ, ಬೆನ್ನು ತಟ್ಟೇ ತಟ್ಟುತ್ತಾನೆ. ಆದರೆ ಕಲಾವಿದನಾದವನಿಗೆ ತಾನು ಮಾಡುವ ಕೆಲಸದಲ್ಲಿ ಪ್ರೀತಿ, ಶ್ರದ್ದೆ,ತಾಳ್ಮೆ ಇರಬೇಕು.ಆಗ ಒಂದಲ್ಲ ಒಂದು ದಿನ ತೆರೆಯ ಹಿಂದಿನ ಕಲಾವಿದನು ಕೂಡಾ ಪ್ರೇಕ್ಷಕನನ್ನು ಅವರಿಸಿಕೊಳ್ಳುತ್ತಾನೆ ಎನ್ನುವುದು ಸುಳ್ಳಲ್ಲ .
ರಾಮಕೃಷ್ಣ ಅವರು ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಇದ್ದರೂ ಬಹುಬೇಡಿಕೆಯ ಪ್ರಸಾದಕರು. ತಮಗೆ ಎಂದೂ ಕೂಡಾ ಪ್ರಚಾರವನ್ನು ಬಯಸಲಿಲ್ಲ ಮತ್ತು ಪ್ರಚಾರ ಸಿಕ್ಕಿಲ್ಲ ಅಂತ ಬೇಸರವೂ ಆಗಲಿಲ್ಲ. ಹಿಡಿದ ಕಾಯಕವನ್ನು ಕಷ್ಟಪಟ್ಟು, ತುಂಬಾನೇ ಇಷ್ಟಪಟ್ಟು ಶ್ರದ್ದೆಯಿಂದ ಮಾಡಿದ ಕಲಾವಿದ.
(ಕುಟುಂಬದ ಜೊತೆಗೆ ರಾಮಕೃಷ್ಣ ಅವರು )
ತೆರೆಯ ಹಿಂದಿನ ಬದುಕು ಅವರಿಗೆ ಎಷ್ಟು ಖುಷಿ ಕೊಟ್ಟಿತು? ಮತ್ತು ಎಷ್ಟು ನೋವು ಕೊಟ್ಟಿತು?… ಅಂತ ಅವರನ್ನು ಕೇಳಿದಾಗ ಅವರ ಬದುಕಿನ ಸುಂದರ ಚಿತ್ರಣವನ್ನು ಆಕೃತಿಕನ್ನಡದಲ್ಲಿ ತೆರೆದಿಡುತ್ತಾ ಹೋದರು. ನನ್ನ ಅಪ್ಪ ಸರ್ಕಾರಿ ಉದ್ಯೋಗಿ ಆದ್ದರಿಂದ ಬೆಂಗಳೂರಿನ ಎಲ್ಲ ತಾಲ್ಲೂಕನ್ನು ಸುತ್ತಿದ್ದೀನಿ. ಕೊನೆಗೆ ನೆಲೆ ಕಂಡಿದ್ದು ಬೆಂಗಳೂರಿನಲ್ಲಿ, ಹಾಗಾಗಿ ನನ್ನ ಊರು ಬೆಂಗಳೂರು ಎಂದರೆ ತಪ್ಪಲಾಗರದು. ನಾನು ಡಿಗ್ರಿ ಓದಿದ್ದು ರೇಣುಕಾಚಾರ್ಯ ಕಾಲೇಜ. ಆ ಕಾಲೇಜಿನಲ್ಲಿ ಮಹಾಕಲಾವಿದರ ಸಂಗಮವಾಗಿತ್ತು. ಯಾಕೆಂದರೆ ನಾಗಾಭರಣ, ಚಂದ್ರಕುಮಾರ ಸೇರಿದಂತೆ ಹಲವಾರು ರಂಗಭೂಮಿ ಕಲಾವಿದರು ಅಲ್ಲಿ ಕಾಲೇಜ್ ವಿದ್ಯಾರ್ಥಿಗಳಾಗಿದ್ದರು. ಕಾಲೇಜ್ ಉಪನ್ಯಾಸಕರಾದ ಎಂ ಎಸ ನಾಗರಾಜ್ ,ರಾಮರಾವ್, ಬಸವನ ಗೌಡ್ರು ನಾಟಕದಲ್ಲಿ ಭಾಗವಹಿಸಲು ತುಂಬಾನೇ ಪ್ರೋತ್ಸಾಹ ನೀಡಿದರು. ಆ ಸಂದರ್ಭದಲ್ಲಿ ಉಳ್ಳಾಲ್ ಶೀಲ್ಡ್ ಅಂತರ ಕಾಲೇಜ್ ಸ್ಪರ್ಧೆಯಲ್ಲಿ ನಾನು ಭಾಗವಹಿಸುವುದರ ಮೂಲಕ ನನ್ನ ರಂಗಪಯಣ ಶುರುವಾಯಿತು.
ಪದವಿ ಎರಡನೆಯ ವರ್ಷವಿದ್ದಾಗ ರಾಜ್ಯ ಸಂಗೀತ ನಾಟಕ ಅಕಾಡೆಮಿಯವರು ನಲ್ವತ್ತು ದಿನದ ನಾಟಕ ಶಿಬಿರವನ್ನು ಆಯೋಜಿಸಿದ್ದರು. ನಾನು, ನಾಗಾಭರಣ, ಚಂದ್ರಕುಮಾರ ಸಿಂಗ್ ಎಲ್ಲ ನಾಟಕದ ಗೀಳು ಇರುವ ಸ್ನೇಹಿತರೆಲ್ಲ ಅಲ್ಲಿ ಹೋಗಿ ಸೇರಿಕೊಂಡೆವು . ಆ ಶಿಬಿರ ನಡೆಯುತ್ತಿದ್ದದ್ದು ಕಲಾಕ್ಷೇತ್ರದ ಆವರಣದಲ್ಲಿ, ಆಗ ಅಲ್ಲಿ ಮೇಕಪ್ ನಾಣಿ, ಬಿ ವಿ ಕಾರಂತರು, ಶ್ರೀರಂಗರು, ಪ್ರೇಮ ಕಾರಂತ, ಶಿವಾನಂದ ಸೇರಿದಂತೆ ಹಲವಾರು ಘಟಾನುಘಟಿಗಳು ಶಿಬಿರದಲ್ಲಿ ತರಗತಿಯನ್ನು ತಗೆದುಕೊಳ್ಳುತ್ತಿದ್ದರು.
ಆ ಶಿಬಿರದಿಂದ ನಾಟಕದಲ್ಲಿನ ಪರದೆ ಹಿಂದಿನ ಕೆಲಸ ಮತ್ತು ಪರದೆ ಮುಂದಿನ ಕೆಲಸವನ್ನು ಶಿಸ್ತುಬದ್ಧವಾಗಿ ಕಲಿತುಕೊಂಡೆವು. ಪರದೆ ಕಟ್ಟೋದು ಹೇಗೆ? ಮೇಕಪ್ ಮಾಡೋದು ಹೇಗೆ ? ಬೆಳಕಿನ ವಿನ್ಯಾಸ ಹೇಗಿರಬೇಕು ? ಪಾತ್ರದ ಬಟ್ಟೆಗಳು ಹೇಗಿರಬೇಕು? ನಾಟಕದ ನಿರ್ದೇಶನ,ನಟನೆ ಎಲ್ಲವನ್ನು ಈ ಶಿಬಿರ ಹೇಳಿ ಕೊಟ್ಟಿತು.
ನನಗೂ ಹಾಗೂ ಓದಿಗೂ ಅಷ್ಟಕಷ್ಟೆ ನಂಟು. ಹಾಗಾಗಿ ಲಾಸ್ಟ ಬೆಂಚ್ ವಿದ್ಯಾರ್ಥಿ ಅನ್ನೋದರಲ್ಲಿ ನನಗೇನು ಮುಜುಗುರ ಇಲ್ಲ. ಆದರೆ ನನಗೆ ನಾಟಕದಲ್ಲಿ ಏನು ಮಾಯೆ ಸೆಳೆಯಿತೋ ಗೊತ್ತಿಲ್ಲ. ನನಗೆ ನಾಟಕದ ಹುಚ್ಚು ಬಿಡಲೇ ಇಲ್ಲ, ಅದರಲ್ಲಿಯೇ ಏನಾದ್ರು ಮಾಡಬೇಕು ಅನ್ನೋ ತವಕ ಶುರುವಾಯಿತು. ಹೀಗೆ ಕಾಲೇಜ್ ನ ಯಾವ ಮೂಲೆಯಲ್ಲಾದರೂ ನಾಟಕ ಇರಲಿ ಹುಡುಕಿಕೊಂಡು ಹೋಗತ್ತಿದ್ದೆ. ನಾಟಕದ ತಂಡದ ಜೊತೆಗೆ ಯಾವಾಗಲೂ ಇರುತ್ತಿದ್ದೆ , ಆದ್ರೆ ಆರಂಭದ ದಿನಗಳಲ್ಲಿ ನನಗೆ ನಾಟಕದಲ್ಲಿ ಡೈಲಾಗ್ ಹೊಡೆಯೋದಂದ್ರೆ ಸೈಕಲ್ ಹೊಡೆದ ಹಾಗೆ ಆಗ್ತಿತ್ತು. ಅಷ್ಟು ಕಷ್ಟ ಪಡ್ತಿದ್ದೆ. ಅದನ್ನು ನೋಡಿದ ನಿರ್ದೇಶಕರು ಯಾರು ನನಗೆ ಮುಖ್ಯ ಪಾತ್ರಗಳನ್ನ ಕೊಡುವ ಧೈರ್ಯ ಮಾಡ್ತಿರಲಿಲ್ಲ. ಗುಂಪಿನಲ್ಲಿ ಬರ್ತಿದ್ದೆ, ಹೋಗ್ತಿದ್ದೆ. ಕೊನೆಗೆ ನಾಟಕದಲ್ಲಿಯೂ ಲಾಸ್ಟ್ ಬೆಂಚ್ ವಿದ್ಯಾರ್ಥಿಯಾಗಿ ಹೋಗಿದ್ದೆ. ಆದರೆ ಯಾವಾಗ ಮೇಕಪ್ ಕಲಿತ್ತೇನೋ ಆಗ ‘ನಾನೆ ಫಸ್ಟ್ ರ‍್ಯಾಂಕ್ ರಾಜು’ ತರ ಆದೆ. ನಾಟಕದಲ್ಲಿನ ಸಣ್ಣ ಪುಟ್ಟ ಕೆಲಸಗಳನ್ನ ತುಂಬಾ ಆಸಕ್ತಿವಹಿಸಿ ಮಾಡುತ್ತಿದ್ದೆ. ಬಹುಶಃ ಅದು ನನ್ನ ಕೈ ಹಿಡಿದಿರಬಹುದು. ಯಾರ ಯಾರ ಹಣೆಬರಹ ಹೇಗಿರುತ್ತೆ ನೋಡಿ… ‘ ಅಂತ ಜೋರಾಗಿ ನಗುತ್ತಾ ಮಾತು ಮುಂದೆವರಿಸಿದರು.
ಶಿಬಿರ ಮುಗಿದ ಮೇಲೆ ಶಿಬಿರಾರ್ಥಿಗಳೆಲ್ಲ ಸೇರಿ ‘ಶಕಶೈಲು’ ಎನ್ನುವ ತಂಡ ಕಟ್ಟಿದೆವು. ಅದರ ಹೆಸರನ್ನು ಸೂಚಿಸಿದ್ದು ಶ್ರೀರಂಗರು. ಆ ತಂಡದಿಂದ ಪ್ರದರ್ಶನಗೊಂಡ ಮೊದಲ ನಾಟಕ ‘ಜಸ್ಮವಾರನ’, ಅದನ್ನು ಬಿ. ಜಯಶ್ರೀ ಅವರು ನಿರ್ದೇಶನ ಮಾಡಿದ್ದರು. ಅನಂತರ ‘ಸತ್ತವರ ನೆರಳು’ ನಾಟಕ ಪ್ರದರ್ಶನವಾಯಿತು. ಮುಂದೆ ಇದೇ ತಂಡ ‘ಬೆನಕ’ವಾಗಿ ಪರಿವರ್ತನೆ ಆಯಿತು. ಆ ಮೇಲೆ ಬೆನಕ ತಂಡದಿಂದ ‘ಸತ್ತವರ ನೆರಳು’, ‘ಹಯವದನ’, ‘ಜೋಕುಮಾರ ಸ್ವಾಮಿ’, ‘ತಬರನ ಕತೆ’ ಹೀಗೆ ಹಲವಾರು ನಾಟಕಗಳು ಪ್ರದರ್ಶನವಾಯಿತು, ಅದರಲ್ಲಿ ನಾನು ಪಾತ್ರಗಳನ್ನು ಮಾಡಲು ಆರಂಭಿಸಿದೆ. ನನಗೆ ಸಿಗುತ್ತಿದ್ದ ಪಾತ್ರವೆಂದರೆ ಪ್ರದರ್ಶನ ದಿನ ಯಾವ ಕಲಾವಿದ ಗೈರು ಆಗ್ತಾನೋ ಆ ಪಾತ್ರ ನಾನು ಮಾಡುತ್ತಿದ್ದೆ. ಪಾತ್ರ ಸಿಕ್ಕಾಗ ಅಪ್ಪಾ…ದೇವರೇ…ಪಾತ್ರ ಸಿಕ್ತು ನನಗೆ ಅಂತ ಸಂತೋಷ ಪಡುತ್ತಿದ್ದೆ. ಅಲ್ಲಿ ಗಮನಿಸಬೇಕಾದ ಅಂಶ ಎಂದರೆ ಎಲ್ಲ ಪಾತ್ರಗಳ ಡೈಲಾಗ್ ಗಳು ಎಲ್ಲ ಕಲಾವಿದರ ಬಾಯಲ್ಲಿ ಸರಾಗವಾಗಿ ಹಾಯುತ್ತಿತ್ತು, ಆ ರೀತಿ ಕಲಾವಿದರು ತಮ್ಮನ್ನು ತಾನು ಸಿದ್ದ ಮಾಡಿಕೊಳ್ಳುತ್ತಿದ್ದರು. ಆಗ ಎಲ್ಲರಲ್ಲಿಯೂ ಕಲಿಯಬೇಕು ಎನ್ನುವ ತುಡಿತವಿತ್ತು.
ಬೆನಕ ಹಾಗೂ ಆರ್ .ನಾಗೇಶ್ ಅವರ ‘ರಂಗಸಂಪದ’ ತಂಡದಲ್ಲಿಯೂ ನಾನು ಬ್ಯುಸಿ ಆದೆ. ನಾನು ಯಾವುದನ್ನೂ ಬಿಡ್ತಿರಲಿಲ್ಲ. ಯಾರು ಕರೀತಾರೋ ಅಲ್ಲಿ ಹೋಗಿ ಕೆಲಸ ಮಾಡ್ತಿದ್ದೆ. ಪರದೆ ಕಟ್ಟೋಕೆ ಕರದ್ರೆ ಅಲ್ಲಿಗೆ ಹೋಗ್ತಿದ್ದೆ, ಕಾಸ್ಟಿಮ್ ಕಡೆಯವರು ಕರೆದರೆ ಅಲ್ಲಿ ಹೋಗ್ತಿದ್ದೆ, ಅದೇ ತರ ಮೇಕಪ್ ನಾಣಿಯವರು ಕರೆದ್ರೆ ಅವರ ಜೊತೆ ಹೋಗಿ ಕೆಲಸ ಮಾಡ್ತಿದ್ದೆ. ಹೀಗೆ ಕಲಿಕೆಗಳು ನನ್ನಲ್ಲಿಯ ಪ್ರತಿಭೆಯನ್ನು ಹೊರಗೆ ಹಾಕೋಕೆ ಸಹಾಯ ಮಾಡ್ತು ಅಂತಲೇ ಹೇಳಬಹುದು.
‘ಮೇಕಪ್ ನಾಣಿಯವರ ಕೈ ಕೆಳಗೆ ಪಳಗಿದ ಮೇಲೆ ಸಾಕಷ್ಟು ನಾಟಕಗಳಿಗೆ ಮೇಕಪ್ ಮಾಡೋ ಅವಕಾಶಗಳು ಸಿಕ್ತಾ ಹೋಯ್ತು. ನಾನು ಸ್ವತಂತ್ರವಾಗಿ ಮೇಕಪ್ ಮಾಡ್ಕೋಕೆ ಆರಂಭಿಸಿದ್ದು ‘ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿಯ ಒಂದು ಮಕ್ಕಳ ನಾಟಕ. ಆ ನಾಟಕದಲ್ಲಿ ಸುಮಾರು ನಲ್ವತ್ತು ಜನ ಮಕ್ಕಳಿಗೆ ಮೇಕಪ್ ಮಾಡಿದೆ. ಮುಂದೆ ನಟರಂಗ, ನಾಟ್ಯದರ್ಪಣ ಹೀಗೆ ಹಲವಾರು ಹವ್ಯಾಸಿ ನಾಟಕ ತಂಡಗಳು ಬಂದವು. ಪ್ರತಿಯೊಂದಕ್ಕೂ ನಾನೇ ಪ್ರಸಾದಕನಾಗಿದ್ದೆ. ಯಾವಾಗ ನನಗೆ ನಾಟಕದಲ್ಲಿ ಅವಕಾಶಗಳು ಹೆಚ್ಚಾದವೋ ಹವ್ಯಾಸಿಯಾಗಿದ್ದ ನಾಟಕ, ಮುಂದೆ ನನ್ನ ವೃತ್ತಿ ಬದುಕಾಗಿ ಬದಲಾಯಿತು’ ಎಂದು ತಾವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡರು.
ಹೊಟ್ಟೆ ಪಾಡು ಅಂತ ಬಂದಾಗ ನಾಟಕದಲ್ಲಿ ತೃಪ್ತಿ ಸಿಕ್ಕಿತಾ?… ಎನ್ನುವ ಪ್ರಶ್ನೆಗೆ ರಾಮಕೃಷ್ಣ ಅವರು ಒಂದು ಕ್ಷಣನೂ ಯೋಚಿಸದೆ, ‘ಖಂಡಿತವಾಗಿಯೂ ಸಿಕ್ಕಿತು. ಅದೇ ನನ್ನ ಉಸಿರಾದ ಮೇಲೆ ತೃಪ್ತಿ ಇರದೇ ಇರುತ್ತಾ?. ಆದರೆ ಅದರಲ್ಲಿಯೂ ಕಷ್ಟದ ದಿನಗಳು ಬಂದ್ವು, ಇಲ್ಲ ಅಂತಲ್ಲ. ಪ್ರಸಾದಕ ಅಂದ್ರೆ ಕೇವಲ ಬಣ್ಣ ಹಚ್ಚಿದರೆ ಆಗೋಲ್ಲ. ಅದಕ್ಕೆ ಬೇಕಾಗುವ ಮೇಕಪ್ ಕಿಟ್ ತಗೋಬೇಕು, ವಿಗ್ ತಗೋಬೇಕು ಸಾಕಷ್ಟು ಖರ್ಚುಗಳು ಇರುತ್ತೆ. ಅದಕ್ಕೆಲ್ಲ ಹಣ ಬೇಕು. ನಾಟಕದಲ್ಲಿ ಪ್ರಸಾದಕನಿಗೆ ಇಷ್ಟು ದುಡ್ಡು ಅಂತ ಕೊಡೋರು, ಆಗ ನನಗೆ ಏಳು ರೂಪಾಯಿ ಸಂಭಾವನೆ ಬರುತ್ತಿತ್ತು. ಅದರಲ್ಲಿ ಮುಕ್ಕಾಲು ಭಾಗ ಮೇಕಪ್ ಸಾಮಾನಿಗೆ ಖರ್ಚು ಮಾಡ್ತಿದ್ದೆ. ನನಗಾಗಿ ಏನು ಉಳಿತಿರಲಿಲ್ಲ, ಒಂದು ವೇಳೆ ಅದರಲ್ಲಿ ಉಳದ್ರೆ ನನಗೆ ಸ್ವಂತಕ್ಕೆ ಬಳಸ್ತಿದ್ದೆ. ನಾಟಕ ಅಂದ್ರೆ ಅಷ್ಟು ಹುಚ್ಚು ನನಗೆ ಇತ್ತು’ ಎಂದು ನಗುತ್ತ ಪಕ್ಕದಲ್ಲಿ ಕೂತಿದ್ದ ಹೆಂಡ್ತಿಯನ್ನೊಮ್ಮೆ ನೋಡಿದರು.
ಸಿನಿಮಾದತ್ತ ಪಯಣ :
ಹಿಂದೆ ಬಹುತೇಕ ಕನ್ನಡ ಸಿನಿಮಾಗಳ ಚಿತ್ರೀಕರಣ ಚನ್ನೈನಲ್ಲಿಯೇ ನಡೆಯುತ್ತಿತ್ತು. ಕಾರಣ ಆಗ ಕರ್ನಾಟಕದಲ್ಲಿ ಸರಿಯಾದ ತಂತ್ರಜ್ಞಾನದ ವ್ಯವಸ್ಥೆಗಳಿರಲಿಲ್ಲ. ಚನ್ನೈನಲ್ಲಿ ಚಿತ್ರೀಕರಣ ಹೆಚ್ಚಾಗಿ ಆಗುತ್ತಿದ್ದರಿಂದ ಅಲ್ಲಿಯ ಸ್ಥಳೀಯ ತಂತ್ರಜ್ಞರಿಗೆ ಹೆಚ್ಚು ಕೆಲಸ ಕೊಡುತ್ತಿದ್ದರು. ಅಲ್ಲಿ ಕನ್ನಡವರಿಗೆ ಅವಕಾಶ ಸಿಗುತ್ತಿದ್ದದ್ದು ಕಮ್ಮಿ. ಯಾವಾಗ ಕರ್ನಾಟಕ ಮುಖ್ಯಮಂತ್ರಿಗಳಾಗಿ ರಾಮಕೃಷ್ಣ ಹೆಗಡೆ ಅವರು ಬಂದ್ರೋ ಅವಾಗ ಕನ್ನಡ ಚಿತ್ರೀಕರಣಕ್ಕೆ ಬೇಕಾದ ಅನುಕೂಲತೆಯನ್ನು ಕರ್ನಾಟಕದಲ್ಲಿ ಒದಗಿಸಿಕೊಟ್ಟರು, ಇದರಿಂದಾಗಿ ಸ್ಥಳೀಯ ತಂತ್ರಜ್ಞರಿಗೆ ಕೆಲಸಗಳು ಒದಗಿ ಬಂದವು.
ಆ ಸಂದರ್ಭ ನನಗೆ ಅದೃಷ್ಟದ ಬಾಗಿಲು ತೆರೆಯಿತು ಅಂತಲೇ ಹೇಳಬಹುದು. ಯಾಕೆಂದರೆ ಬಿ.ವಿ. ಕಾರಂತರ ‘ಚೋಮನ ದುಡಿ’ ಸಿನಿಮಾದಲ್ಲಿ ಮೇಕಪ್ ಮಾಡುವ ಅವಕಾಶ ಸಿಗ್ತು. ಆ ಸಿನಿಮಾದಿಂದ ಸ್ವತಂತ್ರ್ಯ ಮೇಕಪ್ ಮ್ಯಾನ್ ಆಗಿ ಸಿನಿಮಾಕ್ಕೆ ಪ್ರವೇಶಿಸಿದೆ. ಅದೇ ನನ್ನ ಮೊದಲ ಚಿತ್ರ . ಅಲ್ಲಿಂದ ಒಂದು ಕಡೆ ನಾಟಕದಲ್ಲಿ ಬಿಡುವಿಲ್ಲದಷ್ಟು ಕೆಲಸ ಸಿಗ್ತು , ಇನ್ನೊಂದೆಡೆ ಸಿನಿಮಾದಲ್ಲಿ ಮೇಕಪ್ ಮಾಡುವ ಅವಕಾಶಗಳು ಸಿಗ್ತು. ಹೀಗೆ ಎರಡೆರಡೂ ಕಡೆ ಅವಕಾಶಗಳು ಸಿಕ್ಕಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆ ಸಂದರ್ಭದಲ್ಲಿ ಒಂದು ದೊಡ್ಡ ಸಮಸ್ಯೆ ಕೂಡಾ ನನಗೆ ಎದುರಾಯಿತು. ಅದೇನಪ್ಪ, ಅಂದ್ರೆ… ಒಬ್ಬನೇ ನಾಟಕನೂ ನೋಡ್ಕೋಬೇಕು, ಸಿನಿಮಾನೂ ನೋಡ್ಕೋಬೇಕು ಅಂದಾಗ ಎರಡು ಕಡೆ ಸಂಭಾಳಿಸುವುದು ನನಗೆ ಕಷ್ಟ ಆಯ್ತು. ಆಗ ನನಗೆ ಸಹಾಯಕರು ಯಾರು ಇರಲಿಲ್ಲ. ಎರಡು ದೋಣಿಯ ಮೇಲಿನ ಪಯಣ ಎಷ್ಟು ಕಷ್ಟ ಅಂತ ಅವಾಗ ಅರಿವಾಯಿತು. ಆದ್ರೂ ಸಂಭಾಳಿಸಿದ ಜಾಣ ನಾವಿಕ ನಾನು ಎಂದು ನಕ್ಕರು.
(ರಾಮಕೃಷ್ಣ ಅವರು ೨೦೧೬ ರಲ್ಲಿ ರಾಷ್ಟ್ರಪ್ರಶಸ್ತಿ ಸ್ವೀಕರಿಸುವ ಸಂದರ್ಭ)
‘ಚೋಮನ ದುಡಿ’ ಸಿನಿಮಾ ಚಿತ್ರೀಕರಣವೆಲ್ಲಾ ಬೆಟ್ಟಗುಡ್ಡಗಳ ಮಧ್ಯೆ ಹೆಚ್ಚಾಗಿ ಇದ್ದ ಕಾರಣ ಮೇಕಪ್ ಕಿಟ್ ನ್ನು ಹೊತ್ತಕೊಂಡು ಬೆಟ್ಟ ಹತ್ತಬೇಕು , ಇಳಿಬೇಕು. ಒಬ್ಬನದು ಮೇಕಪ್ ಮುಗಿತು ಅಂತ ಕೂತಕೋಳ್ಳೋಷ್ಟರಲ್ಲಿ ಇನ್ನೊಬ್ಬರು ‘ರಾಮಕೃಷ್ಣ ಬನ್ನಿ’… ಅಂತ ಕರೆಯೋರು. ಈ ಸಿನಿಮಾಕ್ಕಾಗಿ ೨೪ ಗಂಟೆಗಳಲ್ಲ , ಸುಮಾರು ೪೮ ಗಂಟೆ ನಾನೊಬ್ಬನೇ ಅಲ್ಲ ಎಲ್ಲರೂ ಕೆಲಸ ಮಾಡಿದ್ದೇವೆ . ಚಿತ್ರೀಕರಣದಲ್ಲಿ ಹಗಲು- ರಾತ್ರಿ- ನಿದ್ದೆ- ಊಟ ಇಲ್ಲದೆ ಕಷ್ಟಪಟ್ಟು ಮಾಡಿದಂತಹ ಚಿತ್ರ ಅದು. ಈಗಿನಂತೆ ಕ್ಯಾರವಾನ್ ವ್ಯವಸ್ಥೆಗಳು ಆಗ ಇರಲಿಲ್ಲ. ರಾತ್ರಿ ಆದ್ರೆ ಯಾವುದೊ ಸರಕಾರಿ ಶಾಲೆಯಲ್ಲಿ ಮಲಗ್ತಿದ್ವಿ, ಎಲ್ಲೋ ತಿಂತಿದ್ವಿ. ಆಗ ಕಾರ್ ಗಳ ವ್ಯವಸ್ಥೆ ಕೂಡಾ ಇರಲಿಲ್ಲ. ಇದ್ದ ಒಂದು ವ್ಯಾನ್ ನಲ್ಲಿ ಚಿತ್ರೀಕರಣದ ಸಾಮಾನುಗಳ ಮಧ್ಯೆ ನಾವು ಕೂತು ಹೋಗ್ತಿದ್ವಿ. ಇಂದಿನಂತೆ ಐಷಾರಾಮಿ ಬದುಕು ಇರಲಿಲ್ಲ. ಕಲಾವಿದರು, ತಂತ್ರಜ್ಞರು ಒಟ್ಟೊಟ್ಟಿಗೆ ಓಡಾಡ್ತಿದ್ವಿ, ಎಲ್ಲರೂ ಎಲ್ಲ ಕೆಲಸವನ್ನ ಮಾಡ್ತಾ ಇದ್ರು. ನಾವುಗಳು ತುಂಬಾ ಕಷ್ಟಪಟ್ಟು ಮೇಲೆ ಬಂದವರು. ಹೀಗೆ ಕಷ್ಟಪಟ್ಟು ಮಾಡಿದ ನನ್ನ ಮೊದಲ ಚಿತ್ರ ‘ಚೋಮನ ದುಡಿ’ಗೆ ರಾಷ್ಟ್ರಪ್ರಶಸ್ತಿ ಬಂತು. ಆಮೇಲೆ ರಾಷ್ಟ್ರಪ್ರಶಸ್ತಿ ಬಂದ ಮೇಲೆ ನ್ಯಾಷನಲ್ ಕಾಲೇಜನಲ್ಲಿ ಎಲ್ಲ ಕಲಾವಿದರಿಗೆ, ತಂತ್ರಜ್ಞರಿಗೆ ಸನ್ಮಾನ ಮಾಡಿದ್ರು, ಅದು ಎಲ್ಲೋ ನಮ್ಮನ್ನ ಇನ್ನಷ್ಟು ಕೆಲಸ ಮಾಡುವಂತೆ ಹುರುದುಂಬಿಸಿತು.
ಅಂದಹಾಗೆ ಇದನ್ನು ನೆನಪಿನಿಂದ ನಿಮಗೆ ಹೇಳಲೇಬೇಕು, ‘ಚೋಮನ ದುಡಿ’ ಸಿನಿಮಾವನ್ನು ನೋಡೋಕೆ ಸ್ವತಃ ಶಿವರಾಮ ಕಾರಂತರು ಬಂದಿದ್ದರು. ಸಿನಿಮಾವನ್ನು ಪೂರ್ತಿಯಾಗಿ ನೋಡಿದ ಮೇಲೆ ನಾನು ಅವರನ್ನು ಭೇಟಿ ಮಾಡಲು ಹೋದೆ. ಸರ್… ಈ ಸಿನಿಮಾದ ಪ್ರಸಾದಕ ನಾನು ಎಂದು ಅತ್ಯಂತ ಖುಷಿಯಿಂದ ಮುಂದೆ ಹೋಗಿ ನಿಂತೆ. ಶಿವರಾಮ ಕಾರಂತರು ತಮ್ಮ ಕೈಯಲ್ಲಿ ಉದ್ದದ ಕೊಡೆ ಹಿಡಿದಿದ್ದರು, ನನ್ನನ್ನು ಮೇಲಿಂದ ಕೆಳಗೆ ನೋಡಿ ‘ನನ್ನ ಚೋಮ ಬಿಳಿಯನ್ನಲ್ಲ, ಕರಿಯಾ’… ಅಂದರು. ಅದು ಕೇಳಿ ನನಗೆ ನಾಚಿಕೆ ಆಯಿತು. ಯಾಕೆಂದರೆ ಚೋಮನ ಪಾತ್ರ ಮಾಡಿದ ಕಲಾವಿದ ತುಂಬಾ ಬಿಳಿ ಇದ್ದ, ಅವನನ್ನು ಎಷ್ಟೇ ಕಪ್ಪು ಬಣ್ಣ ಹಚ್ಚಿದರೂ ಬಿಳಿ ಬಣ್ಣ ಮರೆಯಾಗುತ್ತಿರಲಿಲ್ಲ.ಅದನ್ನು ನೋಡಿ ಅವರು ಹಾಗೆ ಹೇಳಿದ್ದರು. ಅದು ಅವರೊಂದಿಗೆ ಮರೆಯಲಾಗದ ಅನುಭವ.
(ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಕುಟುಂಬದ ಜೊತೆಗೆ ಮೇಕಪ್ ರಾಮಕೃಷ್ಣ ಅವರ ಮಗಳು ಸೋನುಗೌಡ)
ತದನಂತರ ಎಲ್ಲೇ ಮೇಕಪ್ ಮಾಡೋಕೆ ಹೋದ್ರು ‘ಚೋಮನ ದುಡಿ’ ಸಿನಿಮಾ ಖ್ಯಾತಿಯ ‘ಮೇಕಪ್ ರಾಮಕೃಷ್ಣ’ ಅನ್ನೋ ಖ್ಯಾತಿ ನನ್ನ ಬೆನ್ನಿಗೆ ಅಂಟಿಕೊಂಡಿತು. ಸಿನಿಮಾ ಮಾಡುವ ಮೊದಲು ಸಾಕಷ್ಟು ನಾಟಕಗಳಿಗೆ ಮೇಕಪ್ ಮಾಡಿದ್ದೆ, ಆದ್ರೆ ಇಷ್ಟು ಹೆಸರು ಯಾವುದು ನನಗೆ ತಂದುಕೊಟ್ಟಿರಲಿಲ್ಲ . ಯಾವಾಗ ಈ ಒಂದು ಸಿನಿಮಾ ಮಾಡಿದೇನೋ ನನ್ನ ಜೀವನವೇ ಬದಲಾಯಿತು. ಮುಂದೆ ಜಿ ವಿ ಅಯ್ಯರ್ ಅವರ ನಾಲ್ಕು ಸಿನಿಮಾ ಮಾಡಿದೆ. ಗಿರೀಶ ಕಾಸರವಳ್ಳಿ ಅವರ ನಿರ್ದೇಶನದ ‘ಘಟಶ್ರಾದ್ಧ’ ಹಾಗೂ ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ‘ಗ್ರಹಣ’ ಸಿನಿಮಾದಲ್ಲಿ ಪ್ರಸಾದನ ಮಾಡಿದೆ, ಮುಂದೆ ಆ ಸಿನಿಮಾಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವು.ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಪ್ರಸಾದಕನಾದೆ.
(ರೆಬಲ್ ಸ್ಟಾರ್ ಅಂಬರೀಷ್ ಅವರಿಗೆ ಭೀಷ್ಮನ ಪಾತ್ರಕ್ಕೆ ಮೇಕಪ್ ಮಾಡಿದ ಸಂದರ್ಭದಲ್ಲಿ ಸೆರೆ ಹಿಡಿದ ಚಿತ್ರ )
ಅವರು ಮಾತು ಮುಂದೆವರೆಸಿ ಬಾಲಿವುಡ್ ನಲ್ಲಿ ಅರುಣಾ ವಿಕಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಗೇಹರಾಯಿ’ಹಿಂದಿ ಸಿನಿಮಾದಲ್ಲಿ ಅಭಿನಯಿಸಿದೆ. ಅದಕ್ಕೂ ಮೊದಲು ಒಂದು ಸಾಕ್ಷ್ಯಚಿತ್ರಕ್ಕೆ ನನ್ನನ್ನು ನಾಯಕನಾಗಿ ಮಾಡಿದ್ರು, ತಮಾಷೆ ನೋಡಿ…ನಾಟಕದಲ್ಲಿ ಪಾತ್ರ ಮಾಡೋಕೆ ಹರಸಾಹಸ ಪಡ್ತಿದ್ದೆ ಅಂತದರಲ್ಲಿ ಈ ಸಾಕ್ಷ್ಯಚಿತ್ರದಲ್ಲಿ ಒಮ್ಮೆಲೇ ನನಗೆ ನಾಯಕನ ಪಾತ್ರ ಸಿಗ್ತು, ಅದು ಕೂಡ ಬಾಲಿವುಡ್ ನಲ್ಲಿ ಎಂದು ಜೋರಾಗಿ ನಕ್ಕರು ರಾಮಕೃಷ್ಣ ಅವರು.
ವಿದೇಶದಲ್ಲಿನ ಚಿತ್ರೀಕರಣದ ಅನುಭವ :
ಅಯ್ಯೋ …ಬೇಡಾ ಆ ಕತೆ. ವಿದೇಶದಲ್ಲಿ ಚಿತ್ರೀಕರಣ ಅಂತ ಖುಷಿ ಆಗಿ ಹೋದ್ರೆ, ನನ್ನ ಪಾಡು ಯಾರಿಗೂ ಬೇಡ. ‘ಚೋಮನ ದುಡಿ’ ಸಿನಿಮಾಕ್ಕೆ ಕಾಡಿನಲ್ಲಿ ಒದ್ದಾಡಿ ಹೋದ್ರೆ, ‘ಅಮೇರಿಕ ಅಮೇರಿಕ’ ಸಿನಿಮಾದಿಂದ ಫಾರೆನ್ ಹುಚ್ಛೇ ಹೋಯ್ತು. ಯಾಕೆ ಗೊತ್ತಾ?….ಬಜೆಟ್ ಯಿಂದಾಗಿ ನಾನೊಬ್ಬನೇ ಮೇಕಪ್ ಮ್ಯಾನ್, ಯಾರು ಸಹಾಯಕರು ಇರಲಿಲ್ಲ. ಅಲ್ಲಿ ಚಳಿ, ಮಳೆ ವಿಚಿತ್ರ ವಾತಾವರಣದಲ್ಲಿ ಮೇಕಪ್ ಕಿಟ್ ಹೊತ್ತಕೊಂಡು ಹೋಗಬೇಕು. ಮೇಕಪ್ ಮಾಡಬೇಕು. ಹುಷಾರು ತಪ್ಪಿದ್ರೆ ಮುಗಿತು, ಇಲ್ಲಿತರ ಡಾಕ್ಟರ್ಸ್ ಗಳು ಸುಲಭವಾಗಿ ಸಿಗ್ತಾ ಇರಲಿಲ್ಲ. ಬೇಡ ನಮ್ಮ ಅವಸ್ಥೆ . ಆದರೂ ಅಂತದರಲ್ಲಿಯೇ ನನ್ನ ‘ನನ್ನ ಪ್ರೀತಿಯ ಹುಡುಗಿ ‘ , ‘ಪ್ಯಾರಿಸ್ ಪ್ರಣಯ’, ಸೇರಿದಂತೆ ಸುಮಾರು ಸಿನಿಮಾಗಳಿಂದ ಹಲವಾರು ವಿದೇಶಗಳನ್ನು ಸುತ್ತಾಡಿ ಬಂದೆ. ಅದೆಲ್ಲ ಕಷ್ಟ ಆದ್ರೂ ಒಂದು ರೀತಿಯ ಚಂದದ ಅನುಭವಗಳು ಎಂದು ಹಳೆ ನೆನಪಿಗೆ ಜಾರಿದರು.
ನಟ ಕಮಲಾ ಹಾಸನ್ ಅವರೊಂದಿಗೆ ಕೆಲಸ ಮಾಡಿದ ಅನುಭವ :
ಕಮಲ ಹಾಸನ್ ಅವರೇ ದೊಡ್ಡ ಯೂನಿವೆರ್ಸಿಟಿ ಇದ್ದ ಹಾಗೆ. ಅವರಿಂದ ಕಲಿಯೋದು ಬಹಳವೇ ಇತ್ತು, ಅವರಲ್ಲಿ ಸಮಯ ಪಾಲನೆ ಶಿಸ್ತು ತುಂಬಾನೇ ಇತ್ತು . ಅವರಿಗೆ ನಾನು ವೈಯಕ್ತಿಕ ಮೇಕಪ್ ಮ್ಯಾನ್ ಆದಾಗ ಸಾಕಷ್ಟು ಭಯ ಇತ್ತು. ನಾನು ನಾಟಕದ ಬುನಾದಿಯಿಂದ ಹೋದವನು. ಅವರು ಆ ಸಮಯದಲ್ಲಿ ದೊಡ್ಡ ನಟ, ಅವರಿಗೆ ಮೇಕಪ್ ಮಾಡೋದು ಸುಲಭವಾಗಿರಲಿಲ್ಲ. ಒಂದು ಸರಿ ‘ಸತ್ತವರ ನೆರಳು’ ನಾಟಕ ಬಾಂಬೆಯಲ್ಲಿ ಪ್ರದರ್ಶನ ಇತ್ತು. ಕಮಲ ಹಾಸನ್ ಅವರ ‘ಸಾಗರ ‘ ಹಿಂದಿ ಚಿತ್ರದ ಚಿತ್ರೀಕರಣ ಕೂಡಾ ಬಾಂಬೆಯಲ್ಲೇ ನಡೀತ್ತಿತ್ತು, ಎರಡರದು ಜವಾಬ್ದಾರಿನೂ ನಾನೇ ಒಪ್ಪಿಕೊಂಡೆ. ಆದರೆ ಅವತ್ತು ನನ್ನ ದುರದೃಷ್ಟವೆಂದ್ರೆ ಸಿನಿಮಾದ ಚಿತ್ರೀಕರಣ ಐದು ಗಂಟೆ ಮುಗಿಬೇಕಾದ್ದು , ನಾಲ್ಕು ಗಂಟೆಯಾದರೂ ಮುಗಿತಿಲ್ಲ. ಚಿತ್ರೀಕರಣ ಜಾಗದಿಂದ ನಾಟಕ ಜಾಗಕ್ಕೆ ಹೋಗೋಕೆ ಸಮಯಬೇಕು, ನನಗೆ ಬೆವರು ಇಳೀತಿದೆ. ಏನ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ, ಆಗಿದ್ದಾಗಲಿ ಅಂತ ಕಮಲಹಾಸನ್ ಅವರ ಹತ್ರ ಹೋಗಿ ‘ಸರ್ ….ಕಾರಂತರ ನಾಟಕದ ಶೋ, ಇಲ್ಲೇ ಬಾಂಬೆಯಲ್ಲಿ ಇದೆ, ಅದಕ್ಕೆ ಮೇಕಪ್ ಬೇರೆ ಒಪ್ಪಿಕೊಂಡಿದ್ದೀನಿ. ಅದರಲ್ಲಿ ಪಾತ್ರನೂ ಮಾಡ್ತಿದ್ದೀನಿ. ನೀವು ಅಲ್ಲಿಗೆ ಹೋಗೋಕೆ ಅನುಮತಿ ಕೊಟ್ರೆ ಈಗ ಹೊರಡ್ತೀನಿ ಅಂತ ರಾಗ ತಗದೆ, ಅದನ್ನು ಕೇಳಿ ಕಮಲ ಹಾಸನ್ ಅವರು ಜಾಸ್ತಿ ಏನು ಮಾತಾಡಲಿಲ್ಲ, ಹೋಗು ….ಆದ್ರೆ ಮತ್ತೆ ಇಲ್ಲಿ ಬರಬೇಡ ಅಂತ ಅತಿ ಸರಳ ಭಾಷೆಯಲ್ಲಿಯೇ ಹೇಳಿದ್ರು . ಅವರ ಮಾತಿಂದ ಬೇಸರವಂತೂ ಖಂಡಿತ ನನಗೆ ಆಗಲಿಲ್ಲ. ನಾನು ಸಿನಿಮಾ ಬಿಟ್ಟಿ ಇರೋಕೆ ಸಿದ್ಧನಿದ್ದೆ, ಆದರೆ ನಾಟಕ ಬಿಟ್ಟಿ ಇರೋ ಶಕ್ತಿ ಇರಲಿಲ್ಲ . ಹಾಗಾಗಿ ಅವರು ಹೇಳಿದ್ದೆ ತಡ ಗಂಟುಮೂಟೆ ಕಟ್ಟಿಕೊಂಡು ಅತಿ ಸಂತೋಷದಿಂದ ನಾಟಕಕ್ಕೆ ಓಡಿ ಬಂದೆ. ಕಮಲಾ ಹಾಸನ್ ಅವರ ಹತ್ರ ಬೈಸ್ಕೊಂಡ ಮೇಲೆ ಸಂತೋಷದಿಂದ ಇದ್ದಂತಹ ವ್ಯಕ್ತಿಯ ಅಂದ್ರೆ ಅದು ನಾನೆ ಅಂತ ನಗೋದಕ್ಕೆ ಶುರು ಮಾಡಿದರು.
ಕುಟುಂಬದ ಬಗ್ಗೆ :
ನನಗೆ ಮುದ್ದಾದ ಎರಡು ಹೆಣ್ಣುಮಕ್ಕಳಿದ್ದಾರೆ. ಸೋನುಗೌಡ ಮತ್ತು ನೇಹಾಗೌಡ. ಸೋನು ಗೌಡ ಕನ್ನಡದ ಸುಮಾರು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರೇ, ನೇಹಾ ಕಿರುತೆರೆಯ ನಟಿ. ನೇಹಾ ನಮ್ಮನೆಗಷ್ಟೇ ಗೊಂಬೆ ಆಗಿಲ್ಲ. ಕರ್ನಾಟಕದ ಮನೆ ಮನೆಯ ಪ್ರೀತಿಯ ಗೊಂಬೆ ಆಗಿದ್ದಾಳೆ. ಈಗ ನೇಹಾ ಅವರ ಗಂಡ ಅಂದರೆ ನನ್ನ ಅಳಿಯ ಚಂದನ್ ಕೂಡಾ ಕಿರುತೆರೆಗೆ ಬರಲು ಸಜ್ಜಾಗುತ್ತಿದ್ದಾರೆ. ಒಂದು ರೀತಿಯಲ್ಲಿ ನಮ್ಮದು ಕಲಾಕುಟುಂಬವಾಗಿದೆ. ಇನ್ನು ನಮ್ಮ ಶ್ರೀಮತಿ ನಮ್ಮೆಲ್ಲರಿಗೂ ಬೆನ್ನೆಲುಬಾಗಿ ನಿಂತಿದ್ದಾಳೆ. ಅವಳ ಪ್ರೋತ್ಸಾಹ ಇಲ್ಲದೆ ನಾನು ಏನು ಮಾಡಲು ಸಾಧ್ಯವಿರಲಿಲ್ಲ ಎನ್ನುತ್ತಾ ಹೆಂಡತಿಯ ಮುಖವನ್ನೊಮ್ಮೆ ನೋಡಿ ಮಂದಹಾಸ ಬೀರಿದರು.
****
ರಾಮಕೃಷ್ಣ ಅವರು ಸುಮಾರು ೫೦ ವರ್ಷದಿಂದ ನಿರಂತರವಾಗಿ ನಾಟಕ ಹಾಗೂ ಸಿನಿಮಾಗಳಿಗೆ ಪ್ರಸಾದಕರಾಗಿ, ನಟರಾಗಿ ಕಲಾಸೇವೆ ಮಾಡುತ್ತ ಬಂದಿದ್ದಾರೆ. ಸುಮಾರು ೬೦೦ ಸಿನಿಮಾಗಳಿಗೆ ಪ್ರಸಾದಕರಾಗಿ, 150 ಸಿನಿಮಾಗಳಲ್ಲಿ ನಟರಾಗಿ, 3000 ನಾಟಕಗಳಿಗೆ ಪ್ರಸಾದಕರಾಗಿ ಹಾಗೂ 200 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಂಬರೀಷ್ ಅವರಿಗೆ ವೈಯಕ್ತಿಕ ಪ್ರಸಾದಕರಾಗಿ ಮೂವತ್ಮೂರು ವರ್ಷಗಳ ಕಾಲ ಅವರ ಜೊತೆಗೆ ಒಂದು ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗೆ ನಟಿ ಜಯಮಾಲಾ, ಪ್ರಣಯ ರಾಜ ಶ್ರೀನಾಥ್ , ಉಪೇಂದ್ರ ಸೇರಿದಂತೆ ಹಲವಾರು ನಾಯಕ, ನಾಯಕಿಯರಿಗೆ ವೈಯಕ್ತಿಕ ಪ್ರಸಾದಕರಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರದು .
ಅವರ ಕಲಾಸೇವೆಯನ್ನು ಗುರುತಿಸಿ ೨೦೧೬ ರಲ್ಲಿ ಟಿ.ಎಸ್. ನಾಗಾಭರಣ ನಿರ್ದೇಶನದ ‘ಅಲ್ಲಮ್ಮ’ ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ, ೨೦೧೭ ರಲ್ಲಿ ಟೈಮ್ಸ್ ಕಫ್ತಾ ಪ್ರಶಸ್ತಿ, ಮೇಕಪ್ ನಾಣಿ ಪ್ರಶಸ್ತಿ, ನೇಪಥ್ಯ ಶಿಲ್ಪಿ ಪ್ರಶಸ್ತಿ, ಹಂಸಜ್ಯೋತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಸೇರಿದ್ದಷ್ಟೇ ಅಲ್ಲ, ಈಗ ೨೦೨೩ ರಲ್ಲಿ ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸದ್ಯದಲ್ಲೇ ಈ ಪ್ರಶಸ್ತಿಯನ್ನು ರಾಮಕೃಷ್ಣ ಅವರು ದೆಹಲಿಯಲ್ಲಿ ಸ್ವೀಕರಿಸಲಿದ್ದಾರೆ.
ಒಬ್ಬ ಸಾಧಕನಿಗೆ ತಾನು ಮಾಡುವ ಕೆಲಸದಲ್ಲಿ ಶ್ರದ್ದೆ, ಶ್ರಮ ಇದ್ದರೇ ಫಲ ಸಿಕ್ಕೇ ಸಿಗುತ್ತೆ ಅನ್ನುವುದು ಅವರ ಬಲವಾದ ನಂಬಿಕೆ.ಹಾಗಾಗಿ ರಾಮಕೃಷ್ಣ ಅವರು ಯಾವ ಪ್ರಚಾರ, ಪ್ರಶಸ್ತಿಯ ಹಿಂದೆ ಹೋಗದೆ ತಾವು ಮಾಡುವ ಕೆಲಸದಲ್ಲಿಯೇ ತೃಪ್ತಿ ಕಂಡುಕೊಂಡವರು. ಅಂತಹ ನಮ್ಮ ಹೆಮ್ಮೆಯ ಈ ಸಾಧಕ ಸತತವಾಗಿ ರಂಗಭೂಮಿ, ಸಿನಿಮಾದಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಾ ಬಂದಿದ್ದಾರೆ, ಅವರಿಗೆ ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’ ಇಲ್ಲಿಯವರೆಗೂ ಬಂದಿರದೆ ಇರುವುದು ಆಶ್ಚರ್ಯಕರ ಮತ್ತು ವಿಷಾದನೀಯ. ಈಗಲಾದರೂ ಕರ್ನಾಟಕ ಸರ್ಕಾರ ರಾಮಕೃಷ್ಣ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಿ ಮತ್ತು ಅವರಿಗೆ ಇನ್ನಷ್ಟು ಪ್ರಶಸ್ತಿಯ ಸುರಿಮಳೆ ಆಗಲಿ ಎಂದು ಆಕೃತಿಕನ್ನಡ ಶುಭ ಹಾರೈಸುತ್ತದೆ.
- ಶಾಲಿನಿ ಹೂಲಿ ಪ್ರದೀಪ್ – www.aakrutikannada.com ಪತ್ರಿಕೆಯ ಸಂಪಾದಕಿ, ಬೆಂಗಳೂರು.