‘ಉಡ’ ಇದು ನಮ್ಮ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದ ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪರೂಪದ ಪ್ರಾಣಿ. ಈ ಜೀವಿಯ ಬಗ್ಗೆ ಲೇಖಕರಾದ ಲೇಖನ ನಾಗರಾಜ್ ಸಾಕಷ್ಟು ಮಾಹಿತಿಯನ್ನು ನಿಮ್ಮ ಮುಂದೆ ಇಟ್ಟಿದ್ದಾರೆ. ಓದಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ…
ನಮ್ಮ ಭೂಮಿ ಮೇಲಿನ ಅಸಂಖ್ಯಾತ ಜೀವ ಸಂಕುಲಗಳಲ್ಲಿ ಇಲ್ಲಿಯವರೆಗೆ ಉಳಿದಿರುವ, ಅಳಿದಿರುವ ಜೀವಿಗಳು ಬಹಳಷ್ಟು. ಕೆಲವು ಜೀವಿಗಳ ಹೆಸರನ್ನು ಕೇಳಿದ್ದೇವೆ. ಚಿತ್ರಗಳಲ್ಲಿಯೂ ನೋಡಿರುತ್ತೇವೆ. ಆದರೆ ನಿಜವಾಗಿ ನೋಡಬೇಕೆಂದರೆ ಸಾಧ್ಯವಿಲ್ಲ. ಯಾಕೆಂದರೆ ಅವುಗಳು ಇಂದು ಹೆಸರಿನಲ್ಲಿ, ಚಿತ್ರಗಳಲ್ಲಿ ಮಾತ್ರ ಉಳಿದಿರುವಂತಹ ಜೀವಿಗಳು. ಉದಾ: ದೈತ್ಯಾಕಾರದ ‘ಡೈನೋಸರ್’ ಗಳಾಗಿರಬಹುದು. ಒಂದೇ ದೇಹ ಎರಡು ತಲೆಗಳನ್ನು ಹೊಂದಿರುವ ‘ಗಂಡುಭೇರುಂಡ’ ವಿಚಿತ್ರ ಪಕ್ಷಿಗಳು, ಬಿಳಿಯ ಬಣ್ಣದ ವಿಶೇಷ ಶಾರ್ದೂಲಗಳು. ಹೀಗೆ ತುಂಬಾ ವಿಶಿಷ್ಟ ಜೀವಿಗಳು ಇಂದು ನಮಗೆಲ್ಲಾ ಬರೀ ನೆನಪು ಮಾತ್ರ. ಅಂತಹುದೇ ಒಂದು ವಿಸ್ಮಯಕಾರಿ ಜೀವಿ “ಉಡ”(Monitor lizard). ಇಂದು ಮಾನವನ ದುರಾಸೆ, ದುರಾಲೋಚನೆಗಳಿಂದ ಅಳಿವಿನಂಚಿನಲ್ಲಿರುವ ಜೀವಿ. ಉಡ ಎಂಬ ಜೀವಿಯನ್ನು ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿರುವ ಎಲ್ಲರೂ ನೋಡಿರುತ್ತಾರೆ. ಅದರ ಬಗ್ಗೆ ಕೇಳಿಯೂ ಇರುತ್ತಾರೆ. ಇದರ ದೇಹವು ಚಪ್ಪಟೆಯಾಗಿ, ಮೂತಿ ಚೂಪಾಗಿರುವುದರಿಂದ ಇದನ್ನು ‘ಚೂಪಿ ಅಥವಾ ಚಾಪಿ’ ಎಂತಲೂ ನಮ್ಮ ಕಡೆ ಕರೆಯುವುದುಂಟು. ನಮ್ಮದು ಅರಣ್ಯ ಪ್ರದೇಶವಾಗಿದ್ದರಿಂದ ಅದನ್ನು ಬಹಳಷ್ಟು ಸಲ ನೋಡಿದ್ದೇನೆ. ಹಾಗೂ ಕಾಲೇಜ್ ನಲ್ಲಿ ಓದುವಾಗಲು ಕೂಡ ಇತಿಹಾಸದಲ್ಲಿ ಉಡದ ಹಿಡಿತ ಹಾಗು ಅದರ ಸಾಹಸ, ಅಂದಿನ ರಾಜರುಗಳು, ಸೇನಾಧಿಪತಿಗಳು ತಮ್ಮ ರಾಜ್ಯ ರಕ್ಷಣೆಗಾಗಿ ಉಡವನ್ನು ಬಳಿಸಿಕೊಂಡ ಕಥೆಗಳನ್ನು ಓದಿದ್ದೇನೆ.
ಫೋಟೋ ಕೃಪೆ : Flickr
ಆದರೆ ನನಗೆ ಉಡದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಈ ಬಾರಿ ಗಣೇಶ ಚತುರ್ಥಿಗೆಂದು ಊರಿಗೆ ಹೋದಾಗ. ನಾನು ಚಿಕ್ಕಂದಿನಿಂದಲೂ ನಮ್ಮ ಮನೆಯ ಸುತ್ತ-ಮುತ್ತ ಓಡಾಡುತ್ತಿದ್ದ ಉಡವೊಂದು ನಮ್ಮ ಮನೆಯ ಅಂಗಳದಲ್ಲಿ ಅಡ್ಡಾಡುತ್ತಿತ್ತು. ನೋಡೋಕೆ ಅದರ ಆಕಾರ, ಚಲನ-ವಲನವೆಲ್ಲಾ ಚಿಕ್ಕ ಡೈನೋಸರ್ ನಂತೆಯೆ ಕಾಣಿಸುತ್ತಿತ್ತು. ಆಗ ಅದರ ಬಗ್ಗೆ ಮಾಹಿತಿ ಸಂಗ್ರಹಿಸಲು ಹುಡುಕಿದಾಗ ತುಂಬಾ ವಿಚಿತ್ರ, ವಿಶಿಷ್ಟ, ವಿಸ್ಮಯಕಾರಿ ಸಂಗತಿಗಳು ಉಡದ ಬಗ್ಗೆ ಗೊತ್ತಾಯಿತು. ‘ಉಡ’ ಇದು ನಮ್ಮ ಕರ್ನಾಟಕದಲ್ಲಿ ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪರೂಪದ ಪ್ರಾಣಿ. ಇದು ಒಂದು ಕಶೇರುಕ ಸರೀಸೃಪ ಜೀವಿ, ಹೋಲಿಕೆಯಲ್ಲಿ ದೊಡ್ಡ ಹಲ್ಲಿಯಂತೆ, ಚಿಕ್ಕ ಡೈನೋಸರ್ ನಂತೆಯೆ ಇದರ ಆಕಾರ.
ಬರೀ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ಮಾತ್ರ ಡೈನೋಸರ್ ನಂತಹ ಜೀವಿಗಳನ್ನು ನೋಡಿದವರು, ನಿಜವಾಗಿಯೂ ಉಡವನ್ನು ನೋಡಿದರೆ ಭಯ ಭೀತರಾಗುವುದು ಖಂಡಿತ. ಎಷ್ಟೋ ಬಾರಿ ನಮ್ಮ ಕಡೆ ಉಡವನ್ನು ನೋಡಿ ಮುಂದೊಂದು ದಿನ ಇದು ಸಂಪೂರ್ಣವಾಗಿ ದೊಡ್ಡದಾದರೆ ಡೈನೋಸಾರ್ ಗಳಾಗುತ್ತವೆ ಅಂತಾ ಕೆಲವರು ಹೆದರಿಸಿದ್ದುಂಟು. ನೋಡಲು ಸ್ವಲ್ಪ ಭಯವಾದರೂ ಇದು ಅಪಾಯಕಾರಿಯಲ್ಲ. ಅಮಾಯಕ ಜೀವಿ. ಉಡ ಸರಿ ಸುಮಾರು ತನ್ನ ಜೀವಿತಾವಧಿಯಲ್ಲಿ ೧೭೫ ರಿಂದ ೨೦೦ ಸೇಂ.ಮೀ ನಷ್ಟು ಉದ್ದಕ್ಕೆ ಬೆಳೆಯುತ್ತದೆಯಂತೆ. ಅದರ ಬಾಲವೆ ಸುಮಾರು ೧೦೦ ಸೇಂ.ಮೀ ನಷ್ಟು ಉದ್ದಕ್ಕೆ ಇರುತ್ತದೆ. ದೇಹಾಕಾರವು, ಚೂಪಾದ ಮೂತಿ, ಉದ್ದವಾದ ತಲೆ, ನುಣುಪಾದ ಹುರುಪುಗಳಿಂದ ಕೂಡಿದ ದೇಹ, ಕಾಲುಗಳಲ್ಲಿ ಬಲವಾದ ಉಗುರುಗಳಿರುತ್ತವೆ. ಹಾಗೂ ಹಾವಿನಂತೆ ಇದಕ್ಕೂ ನಾಲಿಗೆಯಲ್ಲಿ ಎರಡು ಸೀಳಿರುತ್ತದೆ. ಆದರೆ ಇದು ಹಾವಿನಷ್ಟು ಅಪಾಯಕಾರಿಯಲ್ಲ. ವಿಸ್ಮಯಕಾರಿ ವಿಷಯವೆಂದರೆ ಇದು ಸುಮಾರು ೭೦೦ ರಿಂದ ೮೦೦ ವರ್ಷಗಳವರೆಗೆ ಬದುಕುವ ದೀರ್ಘಾಯುಷಿ ಜೀವಿಯಂತೆ. ಅಷ್ಟೆ ಅಲ್ಲದೇ ತನ್ನ ಜೀವಿತಾವಧಿಯಲ್ಲಿ ಹನಿ ನೀರನ್ನೂ ಕೂಡ ಕುಡಿಯದೆ ಜೀವಿಸಬಲ್ಲ ವಿಶಿಷ್ಟ ಜೀವಿಯಂತೆ. ನಂಬಲು ಅಸಾಧ್ಯವಾದರು ವನ್ಯಜೀವಿ ತಜ್ಞರು ನಿಜವೆನ್ನುತ್ತಾರೆ.
ಫೋಟೋ ಕೃಪೆ : You Tube
ಬಾಯಾರಿಕೆಯಾದಾಗ ಮರ-ಗಿಡಗಳಿಂದ ಬರುವ ಸ್ವಚ್ಛಂದ, ತಂಪಾದ ಗಾಳಿಯನ್ನು ಉಸಿರಿನಿಂದ ಎಳೆದುಕೊಂಡು ದೇಹಕ್ಕೆ ಹೀರಿಕೊಳ್ಳುತ್ತವೆಯಂತೆ. ಆದ್ದರಿಂದಲೇ ಉಡಗಳು ತುಂಬಾ ವರ್ಷಗಳವರೆಗೆ ಬದುಕುತ್ತವೆಯೆಂದರೆ ನಂಬಬಹುದು. ಅಂದಿನ ಕಾಲದಲ್ಲಿ ನಮ್ಮ ಪೂರ್ವಜರು ಸಹ ಸ್ವಚ್ಛ ಪರಿಸರದಲ್ಲಿ ಜೀವನ ನಡೆಸುತ್ತಾ, ನಿಷ್ಕಲ್ಮಶ ಗಾಳಿಯನ್ನು ಸೇವಿಸುತ್ತಾ ೨೦೦ – ೩೦೦ ವರ್ಷಗಳವರೆಗೆ ಸ್ವಸ್ಥವಾಗಿ ಜೀವಿಸಿದ ಉದಾಹರಣೆಗಳಿವೆ. ವಿಶೇಷವೆಂದರೆ ಇದು ಉಭಯವಾಸಿ ಕೂಡ ಹೌದು. ನೆಲದಲ್ಲಿ ಆರಾಮವಾಗಿ ನಡೆಯಬಲ್ಲದು. ಮರವನ್ನು ಸುಲಭವಾಗಿ ಏರಬಲ್ಲದು. ನೀರಿನಲ್ಲಿ ಸರಾಗವಾಗಿ ಈಜಬಲ್ಲದು. ಮಣ್ಣಿನ ಒಳಗಡೆಯೂ ಕೂಡ ಚಿಕ್ಕ ಗುಹೆಯಂತೆ ಮಾಡಿ ವಾಸಿಸಬಲ್ಲದು. ಹೆಚ್ಚಿನದಾಗಿ ಉಡಗಳು ಕಾಡಿನಲ್ಲಿ ಸರೋವರದ ದಡಗಳಲ್ಲಿ ಮಣ್ಣಿನ ಬಿಲದಲ್ಲಿ ಇಲ್ಲವೆ ಮರದ ಪೊಟರೆಗಳಲ್ಲಿ ವಾಸಿಸುತ್ತದೆ.
ಅಪಾಯದ ಸೂಚನೆ ಬಂದಾಗ ಕೂಡಲೆ ನೀರಿನೊಳಗೆ ಜಿಗಿಯುತ್ತವೆ. ಇಲ್ಲವೆ ಹತ್ತಿರದಲ್ಲಿರುವ ಮರವನ್ನು ಏರಿ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತವೆ. ಶತ್ರುಗಳೊಂದಿಗೆ ಹೋರಾಡುವಾಗ ಆವೇಶದಿಂದ ನಾಲಿಗೆಯನ್ನು ಹೊರಹಾಕಿ, ಬಾಲವನ್ನು ಬಡಿಯುತ್ತ ಹಾವುಗಳಂತೆ ಬುಸುಗುಡುತ್ತದೆ. ಎಷ್ಟೇ ಬಲಪ್ರಯೋಗ ಮಾಡಿದರು ಉಡವನ್ನು ಮನುಷ್ಯರ ಕೈಯಿಂದ ಮಣಿಸುವುದು ಕಷ್ಟ. ತುಂಬಾ ಬುದ್ಧಿಪ್ರಯೋಗ ಅತ್ಯಗತ್ಯ. ಅದಕ್ಕೆ ನಾಯಿಬೇಟೆ ಮಾಡಿ ಹಿಡಿಯುತ್ತಾರೆ. ಅಪಾಯ ಬಂದಾಗ ರಕ್ಷಣೆಗೆಂದೆ ದೇವರು ಇದಕ್ಕೆ ಸಕಲ ಮಾರ್ಗೋಪಾಯಗಳನ್ನು ಕೊಟ್ಟಿದ್ದರೂ ಸಹ, ಅಷ್ಟೆ ದೌರ್ಬಲ್ಯವನ್ನು ಕೊಟ್ಟಿದ್ದಾನೆ.
ಫೋಟೋ ಕೃಪೆ : Fine Art America
ಹೌದು, ಉಡಕ್ಕೆ ಅಪಾಯದಿಂದ ಪಾರಾಗಲು ಎಷ್ಟೆ ಬುದ್ಧಿವಂತಿಕೆಯಿದ್ದರೂ ಅಷ್ಟೆ ಕಡಿಮೆ ನೆನಪಿನ ಶಕ್ತಿ ಉಡದ ಬಲಹೀನತೆಯಾಗಿದೆ. ಉಡ ಒಮ್ಮೆ ತನ್ನ ವಾಸಸ್ಥಳದಿಂದ ೫೦೦ ಮೀಟರನಷ್ಟು ದೂರಕ್ಕೆ ಚಲಿಸಿದರೆ ಮತ್ತೆ ಪುನಃ ಅದೇ ಸ್ಥಳಕ್ಕೆ ಬರಲು ಅದಕ್ಕೆ ದಾರಿ ಗೊತ್ತಾಗುವುದಿಲ್ಲವಂತೆ ಅಷ್ಟೊಂದು ಮಹಾ ಮರೆಗುಳಿತನ ಉಡದ ಮತಿಹೀನತೆಯಾಗಿದೆ. ಒಮ್ಮೆ ಸ್ಥಳ ಬದಲಾವಣೆಯಾದರೆ, ಮತ್ತೊಮ್ಮೆ ಮೂಲಸ್ಥಳಕ್ಕೆ ಬರಬೇಕೆಂದರೆ ಉಡಗಳು ಹರ ಸಾಹಸ ಪಡಬೇಕಾಗುತ್ತದೆಯೆಂತೆ. ಪಾಪ… ಕೆಲವೊಮ್ಮೆ ಮಣ್ಣಿನಲ್ಲಿ ಮೊಟ್ಟೆಯಿಟ್ಟು, ತುಂಬಾ ದೂರ ಹೊರಟು ಹೋದರೆ ಮತ್ತೆ ತಿರುಗಿ ಬರುತ್ತವೆ ಎಂಬುವುದು ಅನುಮಾನ. ಮೊಟ್ಟೆಗಳು ರಕ್ಷಣೆಯಿಲ್ಲದೆ ಇತರ ಜೀವಿಗಳ ಪಾಲಾಗುವುದೇ ಹೆಚ್ಚು. ಆದ್ದರಿಂದಲೆ ಉಡದ ಸಂತತಿ ಬೆಳವಣಿಗೆ ತುಂಬಾ ಕಡಿಮೆಯೆನ್ನಬಹುದು. ಇವುಗಳು ಒಮ್ಮೆ ೮ ರಿಂದ ೧೦ ಮೊಟ್ಟೆಗಳನ್ನಿಡುತ್ತವೆ. ಮಣ್ಣಿನಲ್ಲಿ ಗುಹೆಯ ಥರ ಮಾಡಿ, ಇಲ್ಲವೆ ಗೆದ್ದಲಿನ ಹುತ್ತಗಳಲ್ಲಿ ಮೊಟ್ಟೆಗಳನ್ನಿಟ್ಟು ೪೫ ರಿಂದ ೫೦ ದಿನಗಳ ಕಾಲ ಕಾವು ಕೊಟ್ಟ ನಂತರ ಮೊಟ್ಟೆಗಳು ಒಡೆದು ಮರಿಗಳು ಹೊರ ಬರುತ್ತವೆ. ಮರಿಗಳು ಬೆಳಕಿನ ಸ್ಪರ್ಶವಿಲ್ಲದೆ ಕತ್ತಲೆಯಲ್ಲಿ ಜನನವಾಗುವುದರಿಂದ ಮೊದಲು ದೃಷ್ಟಿಹೀನವಾಗಿರುತ್ತವೆಯಂತೆ. ನಂತರ ತಾಯಿ ಉಡವು ಒಂದೊಂದೆ ಮರಿಗಳನ್ನು ತಂದು ಸೂರ್ಯನ ಕಿರಣಗಳ ಸ್ಪರ್ಶಕ್ಕೆ ಬಿಟ್ಟು ಹಾರೈಕೆ ಮಾಡುತ್ತದೆ. ತನ್ನ ಮರಿಗಳಿಗೆ ಪೂರ್ತಿಯಾಗಿ ದೃಷ್ಟಿ ಬಂದು ಪ್ರಬಲವಾಗುವವರೆಗೂ ಜೊತೆಗೆ ಇರುತ್ತದೆ. ಇದರ ಸಂತಾನೋತ್ಪತ್ತಿ ಸಮಯ ಎಪ್ರಿಲ್ ನಿಂದ ಅಕ್ಟೋಬರವರೆಗೆ ಎಂದು ತಜ್ಞರು ಹೇಳುತ್ತಾರೆ.
ಫೋಟೋ ಕೃಪೆ : You Tube
ಇದರ ಆಹಾರ ಪಕ್ಷಿಗಳ ಮೊಟ್ಟೆ, ಏಡಿ, ಚಿಕ್ಕ ಆಮೆ, ವಿಷಜಂತುಗಳು ಹಾಗೂ ಸತ್ತ ಪ್ರಾಣಿಗಳ ಅವಶೇಷಗಳು ಇತರೆ. ನೋಡೋಕೆ ಸ್ವಲ್ಪ ಒರಟಾಗಿದ್ದರು ಉಡ ಮಾನವನಿಗೆ ಅಪಯಕಾರಿಯಲ್ಲ. ಸಹಕಾರಿ ಜೀವಿ. ಯಾಕೆಂದರೆ ಬೆಳೆಗಳಿಗೆ ಹಾನಿಯುಂಟು ಮಾಡುವ ಕ್ರೀಮಿ-ಕೀಟ, ಹುಳು-ಹಪ್ಪಟೆಗಳನ್ನು ಸಹ ಹಿಡಿದು ತಿನ್ನುತ್ತದೆ. ಅಪಾಯಕಾರಿ ವಿಷಜಂತುಗಳನ್ನು ಕಡಿಮೆ ಮಾಡುತ್ತದೆ. ಆದರೆ ಮಾನವರೆ ಇದನ್ನು ಅರಿಯದೇ ಅವಿವೇಕಿಗಳಾಗಿದ್ದಾರೆ. ಕೆಟ್ಟ ಆಲೋಚನೆಗಳಿಂದ, ವಾಮಾಚಾರ, ಅನಾಚಾರ, ನಾನಾಚಾರವೆಂಬ ಮೂಢನಂಬಿಕೆಗಳಿಗೆ ಉಡವನ್ನು ಹಿಡಿದು ಕೊಲ್ಲುವುದು, ಮಾಂಸಕ್ಕಾಗಿ ಬೇಟೆಯಾಡುವುದು. ಇದರ ಪರಿಣಾಮ ಇಂದು ಈ ಅಪರೂಪದ ಜೀವಿ ಅಳಿವಿನಲ್ಲಿದೆ. ಇದ್ದರೂ ಮನುಷ್ಯನ ಕಣ್ಣು ತಪ್ಪಿಸಿ ಭಯದಲ್ಲೆ ಕಾಡುಗಳಲ್ಲಿ ಬದುಕುತ್ತಿದೆ. ಕಾನೂನಿನ ಪ್ರಕಾರ ಪ್ರಾಣಿ ಬೇಟೆ ಅದರಲ್ಲೂ ಉಡದ ಬೇಟೆಯಾಡುವುದು ದೊಡ್ಡ ಅಪರಾಧ. ಇದು ಗೊತ್ತಿದ್ದರೂ ಕೆಲವರು ಇನ್ನು ಬೇಟೆಯಾಡುವುದನ್ನು ನಿಲ್ಲಿಸಿಲ್ಲ. ಇದರ ಬಗ್ಗೆ ಅರಣ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ.
ಫೋಟೋ ಕೃಪೆ : Shutterstock
ವೈಜ್ಞಾನಿಕವಾಗಿ ಉಡವನ್ನು ಬೇರೆ-ಬೇರೆ ಪ್ರದೇಶಕ್ಕನುಗುಣವಾಗಿ ೮೦ ಕ್ಕೂ ಹೆಚ್ಚು ಪ್ರಭೇದಗಳು ಇದೆ ಎಂದು ಹೇಳುತ್ತಾರೆ. ಕೆಲವು ಕಡೆ ವಿಷಕಾರಿ ಉಡದ ಸಂತತಿಯು ಇದೆ ಎನ್ನುತ್ತಾರೆ. ಬಿಹಾರ,ಪಶ್ಚಿಮ ಬಂಗಾಳ, ಪಂಜಾಬ್ ಗಳಲ್ಲಿ ಕೆಲವು ಪ್ರದೇಶಗಳಲ್ಲಿ ವಿಷಕಾರಿ ಉಡಗಳು ಇದೆಯೆನ್ನುತ್ತಾರೆ. ಮರುಭೂಮಿಗಳಲ್ಲಿ ಕಾಣಸಿಗುವ ಉಡಗಳ ಪ್ರಭೇದಗಳೆ ಬೇರೆಯಾಗಿದೆ. ಆಯಾ ಜಾಗದ ಹವಾಮಾನಕ್ಕನುಗುಣವಾಗಿ ಉಡಗಳು ಜೀವಿಸುತ್ತವೆ ಎನ್ನಲಾಗಿದೆ. ಇನ್ನೂ ಇತಿಹಾಸ ಪುಟದಲ್ಲಿ ಉಡದ ವಿಷಯ ಬಹಳಷ್ಟು ಜನ ಕೇಳಿರ್ತಾರೆ. ‘ಉಡದ ಪಟ್ಟು ಮಹಾಪಟ್ಟು’ ಎನ್ನುವ ಮಾತೆ ಇದೆ.’ಚೇಳಿನ ಕಡಿತ, ಉಡದ ಹಿಡಿತ’ ಎರಡು ಭಯಂಕರವಾಗಿರುತ್ತದೆ. ಉಡ ಒಮ್ಮೆ ಏನನ್ನಾದರು ಹಿಡಿದರೆ ಎಷ್ಟೆ ಸಾಹಸ ಮಾಡಿದರು ಬಿಡುವ ಮಾತಿಲ್ಲ. ಮರವನ್ನು ಏರಿ ಗಟ್ಟಿಯಾಗಿ ಹಿಡಿದರೆ ಮತ್ತೆ ಬಿಡಿಸಲು ಸಾಧ್ಯವಿಲ್ಲಾ. ಅಷ್ಟೊಂದು ಬಲವಾದ ಕಾಲಿನ ಉಗುರುಗಳು, ಬಲಿಷ್ಟವಾದ ಮೂಳೆಗಳು ಉಡಕ್ಕಿದೆ. ಉಡದ ಬಿಗಿಯಾದ ಹಿಡಿತದ ಬಗ್ಗೆ ತಿಳಿದಿದ್ದ ಅಂದಿನ ರಾಜರು ಗುಪ್ತ ಮಾರ್ಗದಲ್ಲಿ ಕೋಟೆಗಳನ್ನು ಹತ್ತಿ ರಾಜ್ಯವನ್ನು ಆಕ್ರಮಿಸುವಾಗ ಉಡವನ್ನು ಬಳಸುತ್ತಿದ್ದರು. ಉಡದ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಕೋಟೆಗೆ ಹತ್ತಿಸುತ್ತಿದ್ದರು. ನಂತರ ಉಡವು ಕೋಟೆಯ ಒಂದು ಮೂಲೆಯಲ್ಲಿ ಹೋಗಿ ಬಿಗಿಯಾಗಿ ಹಿಡಿದು ಸ್ತಬ್ಧವಾಗಿರುತ್ತಿತ್ತು. ನಂತರ ಸೈನಿಕರು ಒಬ್ಬಬ್ಬರಾಗಿ ಹಗ್ಗದ ಮೂಲಕ ಕೋಟೆಯನ್ನು ಹತ್ತಿ ಆಕ್ರಮಣ ಮಾಡಿ,ರಾಜ್ಯವನ್ನು ವಶಪಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಶಿವಾಜಿಯ ಸೈನ್ಯದ ಮುಖ್ಯಸ್ಥನಾಗಿದ್ದ ತಾನಾಜಿಯು ರಾಯಗಢ ಕೋಟೆಯನ್ನು ಮುತ್ತಿಗೆ ಹಾಕುವಾಗ ತಾನು ಸಾಕಿದ್ದ ‘ಯಶ್ವಂತಿ’ ಎಂಬ ಉಡದ ಸಹಾಯದಿಂದ ಆಕ್ರಮಣ ಮಾಡಿದ್ದನು ಎಂಬುವುದು ಇತಿಹಾಸದಲ್ಲಿದೆ. ಉಡದ ರೂಪ,ಆಕಾರ,ಬಲಿಷ್ಟವಾದ ಉಗುರುಗಳು, ಚಲವಲನಗಳನ್ನು ಗಮನಿಸಿದಾಗ ಉಡದ ಬಗ್ಗೆ ನಮಗೆ ಅರಿವಾಗುತ್ತದೆ.ಇಂತಹ ಇತಿಹಾಸ ಪ್ರಸಿದ್ಧ ಜೀವಿಯೊಂದು ಇಂದು ನಮ್ಮ ಮುಂದೆ ಕಣ್ಮರೆಯಾಗುತ್ತಿದೆ ಎನ್ನುವುದೇ ಬೇಸರದ ವಿಷಯ.
ಫೋಟೋ ಕೃಪೆ : Twitter
ನಮ್ಮ ಹತ್ತಾರು ತಲೆಮಾರುಗಳನ್ನು ನೋಡುವ ಅಪರೂಪದ ದೀರ್ಘಾಯುಷಿ ಜೀವಿ. ದೇಹ ಒರಟಾಗಿದ್ದರೂ, ಅಮಾಯಕ ಮನಸ್ಸಿನ ಜೀವಿ ಉಡ. ಇದನ್ನು ಮನೆಯ ಸುತ್ತ-ಮುತ್ತ ನೋಡಿದರೆ ಹೆದರಿಸಿ ಓಡಿಸುವುದು. ನಾಯಿಬಿಟ್ಟು ಬೇಟೆಯಾಡುವುದು ಒಳ್ಳೇಯದಲ್ಲ. ಸ್ಥಳ ಬದಲಾವಣೆ ಆಗದಂತೆ ನೋಡಿಕೊಂಡರೆ ನಮಗೆ ಒಳ್ಳೇಯದು. ನಮ್ಮ ಸುತ್ತಲೂ ಇರುವ ಅಪಾಯಕಾರಿ ವಿಷಜಂತುಗಳನ್ನು ಹಿಡಿಯುತ್ತದೆ. ಬೆಳೆಗಳಿಗೆ ಹಾನಿ ಮಾಡುವ ಕ್ರೀಮಿ-ಕೀಟಗಳನ್ನು ತಿನ್ನುತ್ತದೆ. ಮನುಷ್ಯರಿಗೆ ಸುಮ್ಮನೆ ತೊಂದರೆ ಕೊಡುವಂತಹ ಜೀವಿಯೂ ಇದಲ್ಲ. ಆದರೂ ಮನುಷ್ಯ ಇಂದು ಇಂತಹ ಮೂಕ ಜೀವಿಗಳ ಮೇಲೆ ಪ್ರಬಲನ್ನೆಂದುಕೊಂಡು ತನ್ನ ದೌರ್ಬಲ್ಯವನ್ನು ತೋರಿಸುತ್ತಿದ್ದಾನೆ. ಆದಷ್ಟು ಇಂತಹ ಜೀವಿಗಳ ಮೇಲೆ ಆಗುವ ತೊಂದರೆಗಳನ್ನು ನಾವು ತಡೆಯುವಲ್ಲಿ ಸಹಕಾರಿಯಾಗಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನಮಗೆ ಇದು ಬರಿ ನೆನಪಾಗಿ ಉಳಿಯುತ್ತದೆ. ಇಂತಹ ಜೀವಿಗಳ ಮೇಲೆ ಯಾರಾದರು ಬೇಟೆಯಾಡುವುದನ್ನು ಕಂಡರೆ ಕೂಡಲೆ ಹತ್ತಿರದ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ. ಮೂಕ ಜೀವಿಗಳು ಸಹ ನಮ್ಮಂತೆಯೆ ಬದುಕಲು ಭೂಮಿಗೆ ಬಂದಿರುವುದು ಎನ್ನುವುದು ಎಲ್ಲರ ಮನಸ್ಸಲಿರಲಿ.
- ಲೇಖನ ನಾಗರಾಜ್