ಎಂಥ ಸಮಯವಿದು?…ಮರಗಳ ಕುರಿತು ಮಾತನಾಡುವುದು ಕೂಡ ಇಲ್ಲಿ ಅಪರಾಧವೆ!…ಬರ್ಟೋಲ್ಟ್ ಬ್ರೆಖ್ಟ್ ಅವರ ಸುಂದರ ಇಂಗ್ಲಿಷ್ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಕನ್ನಡ ಅನುವಾದಕ ಕೇಶವ ಮಳಗಿ ಅವರು, ಮುಂದೆ ಓದಿ…
ಮುಂದಿನ ತಲೆಮಾರಿಗೆ!
ಸತ್ಯವಾಗಿಯೂ ನಾನು ಬದುಕಿರುವುದು ಕರಾಳ ಕಾಲದಲಿ!
ಕಲಾವಂತಿಕೆಯಿಲ್ಲದ ಮಾತು ನಿರರ್ಥಕ.
ಹಣೆ ನುಣುಪಾಗಿರುವುದು ಅಸೂಕ್ಷ್ಮತೆಯನೆ ಅರಹುವುದು.
ಮುಗ್ಧತೆಯಲಿ ನಗುತಿರುವ ವ್ಯಕ್ತಿಗಿನ್ನೂ
ಭಯಾನಕ ಸುದ್ದಿ ತಲುಪಿಲ್ಲದಿರಬಹುದು!
ಎಂಥ ಸಮಯವಿದು?
ಮರಗಳ ಕುರಿತು ಮಾತನಾಡುವುದು ಕೂಡ ಇಲ್ಲಿ ಅಪರಾಧವೆ!
ಹಾಗೆಂದೇ ಅಸಂಖ್ಯ ಘೋರಗಳ ಕುರಿತು ನಾವು ಮೌನವಾಗಿರುವೆವು!
ನಿರುಮ್ಮಳವಾಗಿ ರಸ್ತೆ ದಾಟುವ ವ್ಯಕ್ತಿ
ಅಪಾಯದಲಿರುವ ಗೆಳೆಯರನು ಕೂಡಿಕೊಳ್ಳುವನೇನು?
‘ಹೊಟ್ಟೆಪಾಡಿಗೆ ದುಡಿಮೆ’, ಎನ್ನುವುದು ನಿಜವೇ
ಆದರೆ, ನಂಬು, ಅದು ಕೇವಲ ಕಾಕತಾಳೀಯ
ನಾನು ಮಾಡುವ ಯಾವ ಕೆಲಸವೂ ತುತ್ತು ಎತ್ತುವ
ಅರ್ಹತೆಯನು ನೀಡುವುದಿಲ್ಲ!
ಅದೃಷ್ಟದಿಂದಷ್ಟೇ ನಾನು ಉಳಿದುಕೊಂಡಿರುವೆ
(ವಿಧಿ ಕೈಕೊಟ್ಟರೆ ನನ್ನ ಕಥೆ ಮುಗಿದಂತೆಯೇ!)
‘ಉಣ್ಣು, ಕುಡಿ, ಉಳ್ಳವರ ನಡುವೆ ಸುಖಪಡು!’
ಎನ್ನುವರು ಅವರು.
ಆದರೆ ಹಸಿದವರಿಂದ ಕಸಿದ ಅನ್ನವನು
ನುಂಗುವುದು ಹೇಗೆ;
ಬಾಯಾರಿದವರ ನೀರು ಕಿತ್ತು
ಗುಟುಕರಿಸುವುದು ಹೇಗೆ?
ಹೀಗಿದ್ದರೂ, ನಾ ಉಣ್ಣುವೆ, ಕುಡಿಯುವೆ!
ನಾನು ವಿವೇಕಿಯಾಗಿರಲು ಕೂಡ ಬಯಸುವೆ.
ಹಳೆಯ ಹೊತ್ತಿಗೆಗಳು ಜ್ಞಾನವೇನೆಂದರೆಂದು ತಿಳಿಸುವವು ನಮಗೆ:
ಲೋಕದ ಕೋಲಾಹಲದಿಂದ ದೂರವಿರು;
ದೊರಕಿದ ಅಲ್ಪ ಅವಧಿಯಲಿ ನಿರ್ಭಯವಾಗಿ ಬದುಕು,
ಹಿಂಸೆಯಿಲ್ಲದೆ ನಿನ್ನ ದಾರಿಯ ಸವೆಸು,
ಕೆಡುಕನ್ನು ಒಳಿತಿನ ಮೂಲಕೇ ಸಾಧಿಸು.
ಜಾಣರು ತಮ್ಮ ಬಯಕೆಯನು ಪೂರ್ಣಗೊಳಿಸಿಕೊಳ್ಳುವುದಿಲ್ಲ,
ಬದಲಿಗೆ, ಮರೆತುಬಿಡುತ್ತಾರೆ.
ಆದರೆ, ನಾನು ಮುಚ್ಚಿಟ್ಟುಕೊಳ್ಳಲಾರೆ.
ಸತ್ಯವಾಗಿಯೂ ನಾನು ಬದುಕಿರುವುದು
ಕರಾಳ ಕಾಲದಲಿ!
ನಾವು ಸಿಲುಕಿ ಕೊಚ್ಚಿ ಹೋದ ಪ್ರವಾಹದ ಬಳಿಕ
ಮತ್ತೆ ಹುಟ್ಟುವ ನೀನು ಧ್ಯಾನಿಸು:
ನಮ್ಮ ಬಲಹೀನತೆಯ ಕುರಿತು ಮಾತನಾಡುವಾಗ
ನೀವು ತಪ್ಪಿಸಿಕೊಂಡ ನಮ್ಮ ಕಾಲದ
ಕರಾಳತೆಯನೂ ನೆನಪಿಸಿಕೋ.
ನಮ್ಮ ಚಪ್ಪಲಿಗಳಿಗಿಂತ ವೇಗದಲಿ ದೇಶ ಬದಲಾಗುತ್ತಿದ್ದುದನ್ನು,
ನಾವು ಎದುರಿಸಿದ ಹತಾಶ ವರ್ಗ ಸಂಘರ್ಷವನು,
ಅಲ್ಲಿದ್ದುದು ಬರಿಯ ದಬ್ಬಾಳಿಕೆ,
ಅನ್ಯಾಯವೇ ಹೊರತು
ಪ್ರತಿರೋಧದ ಮಾತೇ ಇರಲಿಲ್ಲ, ಎಂಬುದನ್ನು!
ಇದ್ದರೂ ನಾವು ಅರಿತಿದ್ದೆವು:
ಕೊಳಕು ದ್ವೇಷ ಕೂಡ
ಒಬ್ಬರನು ವಿರೂಪಗೊಳಿಸಬಲ್ಲುದು ಎಂಬುದನ್ನು;
ಅನ್ಯಾದ ವಿರುದ್ಧದ ಕೋಪ
ಧ್ವನಿಯನು ತಾರಕ್ಕೇರಿಸುತ್ತದೆಂದು,
ಸೌಜನ್ಯಕೆ ಅಡಿಪಾಯ ಹಾಕಲು ಬಯಸಿದ್ದ ನಾವು
ಸಭ್ಯರೇನೂ ಆಗಿರಲಿಲ್ಲವೆಂದು,
ಗೆಳೆಯನಕೆ ಹಾತೊರೆಯುತ್ತಿದ್ದ ನಾವು
ಸ್ವತಃ ಸ್ನೇಹಶೀಲರಾಗಿರಲಿಲ್ಲವೆಂದು.
ಆದರೆ, ಕೊನೆಗೂ ಕಾಲ ಕೂಡಿ ಬಂದಾಗ ನೀನು
ನಮ್ಮ ಕುರಿತು ಯೋಚಿಸುವಾಗ
ಕೊಂಚ ದಯಾಪರನಾಗಿರು ಮಾತ್ರ!
* ಮೂಲ ಕವಿ : ಬರ್ಟೋಲ್ಟ್ ಬ್ರೆಖ್ಟ್
(ಮೇ ದಿನದ ನೆನಪಿಗೆ. 1940 ಮತ್ತು 1967ರ ಅನುವಾದ ಆಧರಿಸಿ)
- ಕನ್ನಡಕ್ಕೆ ಅನುವಾದ : ಕೇಶವ ಮಳಗಿ