‘ಕೇಳಿಸುತಿರು ನಿನ್ನ ಮುರಳೀನಾದವ’ ಕವನ – ಶಿವದೇವಿ ಅವನಿಶಚಂದ್ರ

ಕವಿಯತ್ರಿ ಶಿವದೇವಿ ಅವನಿಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಉರಿಗದಿರನ ಪ್ರಜ್ವಲತೆಗೆ
ಜಗವೆಲ್ಲ ಬಸವಳಿದಾಗ
ಮೆಲ್ಲನಿಳಿಯುವೆ ನೀ ನೀಲಕಾಂತ
ಗೌರಾಂಗಿಯ ಬೃಂದಾವನಕೆ ಸೆಳೆದು…

ಮತ್ತೆಲ್ಲ ಮೈಮರೆಸುವಾಟ
ಅತ್ತರಿನ ಪರಿಮಳದಿ ತೇಲಿಸಿ
ಇಟ್ಟ ಹೆಜ್ಜೆ ನೆಲಸೋಕದಂತೆ
ರಮಿಸುವಾಟ ಬರೀ ನೂಪುರನಾದ..

ಹಸನಾದ ನವನೀತ
ಕೆನೆಮೊಸರು ಹಾಲನ್ನ
ಹೊತ್ತು ತರುವಳು ರಾಧೆ
ತನ್ನ ಮಾಧವನ ಬಳಿಗೆ..
ಪ್ರೇಮ ಪಕ್ವಾನ್ನ….ಅಲ್ಲವೇ ಕೃಷ್ಣ..

ಬೃಂದಾವನದಲಿ ಯಾರಿಗುಂಟು ಖುಷಿ
ಯಾರಿಗಿಲ್ಲ..ಮನೆಮನೆಯ ತೋಷವೇ
ಹೂವಿನಲೆಯಾಗಿ ಹರಿದಂತೆ
ಕಂಕಣದ ಕಿಂಕಿಣಿ
ಅಂದುಗೆಯ ನಾದದಲಿ ಸ್ವರಲೋಕ
ತೆರೆದಂತೆ ಹರುಷ ಪಟವೇರಿಸಿ

ರಾಸಲೀಲೆಯ ನೃತ್ಯ
ಮೋಹನಾಂಗಿಯರಿಂದ
ಈ ದಿವ್ಯ ಲೋಕವೆಲ್ಲ ನಾಟ್ಯಮಯ
ಮಿತ್ರನಾಗಿರಲು ನೀ ಕೃಷ್ಣ ಜಗವೆ
ಆನಂದಮಯ….

ಅಚಿಂತ್ಯನೇ ನೀ ಬಸಿದುಕೊಳುವೆ
ಜಗದ ತಾಮಸವನೆಲ್ಲ
ರಾಸಲೀಲೆಯು ಒಂದು ಬರಿಯ ನೆಪ
ನಂದನಕೆ ಧಾವಿಸಲು ಮೋಹನ
ಮೂರುತಿ ನೀ ಕಣ್ತುಂಬಿಕೊಳಲು ರಾಧೆಯ
ಜಗವೇ ಪ್ರೇಮಮಯ!

ನಿಲ್ಲಿಸದಿರು ವೇಣುನಾದವ ಕೃಷ್ಣ
ಬರಲಾರೆನಲ್ಲಿಗೆ ನೀನಿರದ ಬೃಂದಾವನಕೆ
ನನಗೂ ಕೇಳಿಸು ಅಷ್ಟಿಷ್ಟು..
ಮೈಮರೆಯುವಂತೆ ನಿನ್ನ ಧ್ಯಾನದಲಿ..

ಕಾಣುವಿಚ್ಛೆಯಿಲ್ಲ..ಬರಿ
ನಿನ್ನ ಕನಸುವಿಚ್ಛೆ ಎನಗೆ..


  • ಶಿವದೇವಿ ಅವನಿಶಚಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading