ನಾಡೋಜ ಸುಭದ್ರಮ್ಮ ಮನ್ಸೂರು

ಬಳ್ಳಾರಿ ರಂಗ ವಾರ್ತೆ –

ಗಾನ ಕೋಗಿಲೆ ನಾಡೋಜ ಸುಭದ್ರಮ್ಮ ಮನ್ಸೂರ ಅವರಿಗೆ ಈಗ ಎಂಭತ್ತು ವರ್ಷ. ಈ ನಿಮಿತ್ತ ನಾಡಿನ ಪ್ರತಿಷ್ಠಿತ ರಂಗ ತಂಡ ವಾದ ಬಳ್ಳಾರಿಯ ರಂಗತೋರಣವು ಅಮೃತಾಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬಳ್ಳಾರಿ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯಿತು. ಅಪಾರ ಸಂಖ್ಯಲ್ಲಿ ರಂಗಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸುಭದ್ರಮ್ಮನವರು ಹಾಡಿದ ೫೫ ರಂಗಗೀತೆಗಳ ಧ್ವನಿ ಸಾಂದ್ರಿಕೆಗಳನ್ನು [ಸಿ.ಡಿ.] ಹಾಗೂ ಪತ್ರಕರ್ತ ಗುಡಿಹಳ್ಳಿ ನಾಗರಾಜ ಅವರು ರಚಿಸಿದ ಗಾನ ಕೋಗಿಲೆ ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಈ ಎರಡು ಕೃತಿಗಳನ್ನು ಪಲ್ಲಕ್ಕಿಯಲ್ಲಿಟ್ಟುಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.

ನಾಡೋಜ ಸುಭದ್ರಮ್ಮ ಮನ್ಸೂರು ನಾಗರಿಕ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಶ್ರೀ ಸಿದ್ದನಗೌಡರು ಗೌರವ ಸನ್ಮಾನ ಪ್ರದಾನ ಮಾಡಿದರು. ರಂಗತೋರಣದ ಅಧ್ಯಕ್ಷ ಶ್ರೀ ಕೆ. ಚನ್ನಪ್ಪ ಅವರು ಉಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀ ಕಪ್ಪಗಲ್ಲು ಪ್ರಭುದೇವ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಸುಭದ್ರಮ್ಮ ಮನ್ಸೂರು ಅವರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ರಂಗತೋರಣದ ಅಡವೀ ಸ್ವಾಮಿ ವಂದಿಸಿದರು.


ಗಾನ ಕೋಗಿಲೆ ನಾಡೋಜ ಸುಭದ್ರಮ್ಮ ಮನ್ಸೂರು

ಸಂಗೀತದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು. ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಆದರೆ ಸಂಗೀತ ಮತ್ತು ಅಭಿನಯ ಎರಡರಲ್ಲೂ ಸಾಧನೆಯ ಶಿಖರವೇರಿದವರು ತುಂಬ ಕಡಿಮೆ. ಅಂಥ ಅಪರೂಪದವರಲ್ಲಿ ಸುಭದ್ರಮ್ಮ ಮನ್ಸೂರು ಅವರು ಮೊದಲಿಗರು.ಅವರು ಕನ್ನಡ ರಂಗಭೂಮಿಯ ಅಪ್ರತಿಮ ಕಲಾವಿದರು. ಅಸ್ಖಲಿತ ಮಾತುಗಾರಿಕೆ, ಅಮೋಘ ಅಭಿನಯ, ಸುಮಧುರ ಕಂಠದ ಹಾಡುಗಾರಿಕೆಗೆ ಮತ್ತೊಂದು ಹೆಸರೇ ಸುಭದ್ರಮ್ಮ ಮನ್ಸೂರು.

ಅಂತೆಯೇ ಅವರು ಗಾನ ಕೋಗಿಲೆಯೇ ಹೌದು. ಅಭಿನೇತ್ರಿಯೂ ಹೌದು. ೮೦ ವರ್ಷದ ಸುಭದ್ರಮ್ಮ ಮನ್ಸೂರು ಏಳು ದಶಕಗಳ ಕಾಲ ನಿರಂತರವಾಗಿ ವೃತ್ತಿ ನಟಿಯಾಗಿ ತಮ್ಮ ಜೀವನವನ್ನೇ ರಂಗಭೂಮಿಗಾಗಿ ಸಮರ್ಪಿಸಿಕೊಂಡಿದ್ದಾರೆ.

ಬಳ್ಳಾರಿಯ ಭಾಗ್ಯಮ್ಮ- ಜ್ವಾಲಾಪತಿ ದಂಪತಿಗಳಿಗೆ ೧೯೩೯ ರಲ್ಲಿ ಜನಿಸಿದ ಸುಭದ್ರಮ್ಮ ತನ್ನ ಹನ್ನೊಂದನೇ ವಯಸ್ಸಿಗೆ ಬಳ್ಳಾರಿಯಲ್ಲಿ ಕ್ಯಾಂಪ್‌ ಮಾಡಿದ್ದ ಶ್ರೀ ಸುಮಂಗಲಿ ನಾಟ್ಯ ಸಂಘಎಂಬ ನಾಟಕ ಕಂಪನಿಯಲ್ಲಿ ಬಾಲ ನಟಿಯಾಗಿ ಬಣ್ಮ ಹಚ್ಚಿದರು. ಅಲ್ಲಿ ಒಂದೊಂದಾಗಿ ಹಾಡು ಕಲಿತರು. ಕ್ರಮೇಣ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. ಅಭಿನಯ ಮತ್ತು ಹಾಡು ಒಟ್ಟೊಟ್ಟಿಗೇ ಕಲಿಯುತ್ತ ‘ಹಾಡು ನಟಿ’ ಯಾದರು. ಕರ್ನಾಟಕಾಂಧ್ರದ ಹಲವು ಹಳ್ಳಿ- ಪಟ್ಟಣಗಳಲ್ಲಿ ಎರಡು ವರ್ಷ ಕ್ಯಾಂಪ್‌ ಮಾಡಿ ಮುಂದುವರಿಸಿತು. ಅದೇ ಕಂಪನಿಯ ಹಿರಿಯ ನಟರಾಗಿದ್ದ ಲಿಂಗರಾಜ ಮನ್ಸೂರು – ಸುಭದ್ರಮ್ಮರ ನಡುವೆ ಪ್ರೇಮಾಂಕುರವಾಗಿ ೧೯೫೨ ರಲ್ಲಿ ಅವರ ವಿವಾಹವಾಯಿತು. ಸುಭದ್ರ ಇಲ್ಲಿಂದ ಸುಭದ್ರಮ್ಮ ಮನ್ಸೂರು ಆದರು.

ಲಿಂಗರಾಜ ಮನ್ಸೂರರು ಅದಾಗಲೇ ವೃತ್ತಿ ಕಂಪನಿ ನಾಟಕಗಳಲ್ಲಿ ಸುಪ್ರಸಿದ್ಧ ನಟರಾಗಿದ್ದರು. ಮುಂದಿನ ೧೭ ವರ್ಷಗಳ ಕಾಲಸುಭದ್ರ- ಮನ್ಸೂರು ದಂಪತಿ ಏಣಗಿ ಬಾಳಪ್ಪನವರ ಕಂಪನಿಗಳಲ್ಲಿ ಕಲಾ ವೈಭವ ನಾಟ್ಯ ಸಂಘ, ಮಾಸ್ಟರ ಹಿರಣ್ಣಯ್ಯ ಮಿತ್ರ ಮಂಡಳಿ, ಹಾಗೂ ಮಾಚ ಮತ್ತು ಹನುಮಂತ ಅವರ ಬೆನಕಟ್ಟಿ ನಾಟಕ ಕಂಪನಿಗಳಲ್ಲಿ ನಟ-ನಟಿಯರಾಗಿ ಸೇವೆ ಸಲ್ಲಿಸಿದರು. ಆ ಹದಿನೇಳು ವರ್ಷಗಳು ಸುಭದ್ರಮ್ಮನವರಿಗೆ ಅಭಿನಯದ ಕಲಿಕೆಯ ಜತೆಗೆ ಅದನ್ನು ರಂಗಕ್ಕೆ ತರುವ ಅವಧಿಯಾಗಿದ್ದರೆ ಲಿಂಗರಾಜ ಮನ್ಸೂರರಿಗೆ ತಮ್ಮ ಪ್ರಬುದ್ಧ ಅಭಿನಯ ಪ್ರದರ್ಶನಕ್ಕೆ ಆಖಾಡವಾಗಿತ್ತು.

ಹವ್ಯಾಸಿಗಳ ಅಗ್ರಗಣ್ಯ ವೃತ್ತಿ ನಟಿ

ಹದಿನೇಳು ವರ್ಷದ ನಾಟಕ ಕಂಪನಿ ಜೀವನ ಸಾಕೆನಿಸಿ ದಂಪತಿಗಳು ಬಳ್ಳಾರಿಗೆ ವಾಪಸ್ಸು ಬಂದು ನೆಲಸಿದರು. ಲಿಂಗರಾಜ ಅವರ ವಯಸ್ಸು ಐವತ್ತು ಮೀರಿತ್ತು. ಸುಭದ್ರಮ್ಮಗೆ ೨೭ ರ ಹರೆಯ. ಲಿಂಗರಾಜ ಅವರು ತಮ್ಮ ಅಭಿನಯ ಸಾಧ್ಯತೆಗಳನ್ನೆಲ್ಲ ನಾಟಕ ಕಂಪನಿಗಳಲ್ಲಿ ಸೂರೆ ಹೊಡೆದಾಗಿತ್ತು. ಅಷ್ಟಕ್ಕೂ ಗ್ರಾಮೀಣ ಮತ್ತು ಪಟ್ಟಣದ ಹವ್ಯಾಸಿ ರಂಗಭೂಮಿಯಲ್ಲಿವೃತ್ತಿ ನಟರಿಗೆ ಅವಕಾಸ ಇಲ್ಲ. ವೃತ್ತಿ ನಟಿಯರಿಗೆ ಹೇರಳ ಅವಕಾಸ ಇದೆ. ಇಲ್ಲಿಂದ ಮುಂದಿನದು ಲಿಂಗರಾಜ ಅವರಿಗೆ ವಿಶ್ರಾಂತ ಜೀವನ. ಸುಭದ್ರಮ್ಮನಿಗೆ ಬಿಡುವಿಲ್ಲದ ರಂಗ ಪಯಣ. ನಾಟಕ ಕಂಪನಿಗಳಲ್ಲಿಅಭಿನಯ ಹಾಡುಗಾರಿಕೆಯ ಹಲವು ಪಟ್ಟುಗಳನ್ನು ಕಲಿತು ಹೊರಬಂದಿದ್ದ ಸುಭದ್ರಮ್ಮಗೆ ಅದನ್ನು ಪ್ರಯೋಗಕ್ಕೊಡ್ಡುವ ದೊಡ್ಡ ಆಖಾಡ ಆಂದ್ರದ ಗಡಿ ಮತ್ತು ಕರ್ನಾಟಕದಾದ್ಯಂತ ಲಭಿಸಿತು. ಮುಂದಿನ ಐವತ್ತು ವರ್ಷಗಳ ಕಾಲ ಪಟ್ಟಣವೂ ಸೇರಿದ ಗ್ರಾಮೀಣ ಹವ್ಯಾಸಿ ರಂಗಭೂಮಿ ವೃತ್ತಿ ನಟಿಯರ ಪೈಕಿ ಕಳೆದ ಅರವತೈದುಅಗ್ರಗಣ್ಯರೆನಿಸಿದರು. ಅದು ಅರ್ಧ ಶತಮಾನದ ಕನ್ನಡ ರಂಗಭೂಮಿಯ ಚರಿತ್ರೆ.

ಪೌರಾಣಿಕ ನಾಟಕಗಳ ಕುಂತಿ, ಗಾಂಧಾರಿ, ದ್ರೌಪತಿ, ಉತ್ತರೆ, ಸೀತೆ, ಮಂಡೋದರಿ. ಮಲ್ಲಮ್ಮ, ನಂಬೆಕ್ಕ, ಸಾಮಾಜಿಕ ನಾಟಕಗಳ ನಾಯಕಿ, ಉಪನಾಯಕಿ, ಖಳನಾಯಕಿ, ಹಾಸ್ಯ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಹೆಸರು ಮಾಡಿದರು. ಅನೇಕ ರಂಗಶಿಬಿರಗಳಲ್ಲಿ ರಂಗಗೀತೆಗಳನ್ನು ಕಲಿಸಿದರು. ಚಿತ್ರರಂಗದಲ್ಲಿ ರಾಜಕುಮಾರ ಹೇಗೋ ರಂಗಭೂಮಿಯಲ್ಲಿ ಸುಭದ್ರಮ್ಮ ಮೆರೆದರು.

ಸುಭದ್ರಮ್ಮನವರ ಸುಮಧುರ ಕಂಠ ಅದೆಂಥ ಮೋಹಕ ಎಂದರೆ ಅವರೇನಾದರೂ ಚಿತ್ರ ರಂಗಕ್ಕೆ ಹೋಗಿದ್ದರೆ – ಅದರಲ್ಲೂ ಹಿಂದಿ ಚಿತ್ರರಂಗದಲ್ಲಿ ಹಾಡುಗಾರಿಕೆಗೆ ಅವಕಾಶ ಪಡೆದಿದ್ದರೆ ಲತಾ ಮಂಗೇಶ್ಕರ, ಆಶಾ ಭೋಸಲೆ ಅವರಷ್ಟೇ ಖ್ಯಾತಿ ಪಡೆಯುತ್ತಿದ್ದರು ಎನಿಸದಿರದು. ಕನ್ನಡಿಗರ ಸುದೈವ. ಅವರ ಅಮೋಘ ಕಂಠಸಿರಿಯನ್ನು ಕೇಳುವ ಭಾಗ್ಯ ಕನ್ನಡಿಗರದಾಗಿದೆ. ಸುಭದ್ರಮ್ಮ ರಂಗ ಪ್ರವೇಶ ಮಾಡಿರುವ ದಿನದಿಂದ ಇಲ್ಲಿಯವರೆಗೆ ೨೦೦ ಕ್ಕೂ ಅಧಿಕ ಶೀರ್ಷಿಕೆಯ ಸುಮಾರು ಹನ್ನೆರಡು ಸಾವಿರ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ಅವರ ಪ್ರತಿಭೆಯನ್ನು ಮತ್ತು ರಂಗಭೂಮಿಗೆ ಅವರು ಕೊಟ್ಟ ಕೊಡುಗೆಯನ್ನು ಮನ್ನಿಸಿ ಕನ್ನಡ ರಂಗಭೂಮಿಯ ಬಹುತೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮುಡಿಗೇರಿವೆ. ಗುಬ್ಬಿ ವೀರಣ್ಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಗಳಲ್ಲದೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ನೀಡುವ ನಾಡೋಜ ಪ್ರಶಸ್ತಿಯೂ ಇವರಿಗೆ ಸಂದಿದೆ.

***

ಲೇಖನ – ಗುಡಿಹಳ್ಳಿ ನಾಗರಾಜ

 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW