''ಪೂವಲ್ಲಿ'' ನಾಡಿನ ದೇಶ ಭಕ್ತರು

– ಹೂಲಿಶೇಖರ


ಭಾರತ ದೇಶದ ೭೨ ನೇ ಸ್ವಾತಂತ್ರ್ಯ ದಿನದ ನೆನಪಿಗೆ ಈ ಲೇಖನ

ಏನಿದು ”ಪೂವಲ್ಲಿ” ಎಂದು ಅನೇಕರು ಕೇಳಬಹುದು. ಇದು ನನಗೆ ಜನ್ಮ ಕೊಟ್ಟ ಊರು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಪುರಾಣ ಪ್ರಸಿದ್ಧ ಊರು. ”ಮಾಹಿಷ್ಪತಿ ನಗರ” ಎಂದು ಕರೆಯಲ್ಪಡುತ್ತಿದ್ದ ಈ ಊರು ಒಂದಾನೊಂದು ಕಾಲಕ್ಕೆ ಕಾರ್ತಿವೀರಾರ್ಜುನನ ರಾಜಧಾನಿಯಾಗಿತ್ತಂತೆ. ದೇವಿ ಯಲ್ಲಮ್ಮನ ಕತೆಯಲ್ಲಿ ಬರುವ ಈ ಕಾರ್ತಿವೀರಾರ್ಜುನ ಜಮದಗ್ನಿ ಋಷಿಯ ಆಶ್ರಮದಿಂದ ಕಾಮಧೇನವನ್ನು ಕದ್ದೊಯ್ಯುತ್ತಾನೆ. ಕೋಪಿಷ್ಠನಾದ ಜಮದಗ್ನಿ ಮಗ ಪರಶುರಾಮನಿಗೆ ಇವನ ರುಂಡ ಕಡಿದು ಕಾಮಧೇನುವನ್ನು ವಾಪಸು ತರಲು ಹೇಳುತ್ತಾನೆ. ತಂದೆಯ ಆಜ್ಞೆಯಂತೆ ಪರಶುರಾಮ ಕಾರ್ತಿವೀರಾರ್ಜುನನ ರುಂಡ ಕತ್ತರಿಸುತ್ತಾನೆ. ಮುಂದೆ ಈ ಊರಿಗೆ ”ಪೂವಲ್ಲಿ” ಎಂಬ ಹೆಸರು ಬರುತ್ತದೆ. ಪೂವಲ್ಲಿ ಮುಂದೆ ”ಹೂವಾಲಿ”ಯಾಗುತ್ತದೆ. ಈ ಹೂವಾಲಿಯೇ ಇವತ್ತಿನ ”ಹೂಲಿ” ಊರಾಗಿದೆ.

ನನ್ನ ಅಪ್ಪ ಯಾವಾಗಲೂ ಹೇಳುತ್ತಿದ್ದರು. ‘ನಲವತ್ತೆರಡರ ಚಳುವಳಿ ಕಾಲದೊಳಗ ನಮ್ಮೂರು ಉರಿಯುತ್ತಿರುವ ನಿಗಿನಿಗಿ ಕೆಂಡವಾಗಿತ್ತು’ ಅಂತ. ಯಾಕಂದ್ರೆ ಪ್ರತಿಯೊಂದು ಮನಿಯೊಳಗೆ ಮುದುಕ ಇರಲಿ. ಸಣ್ಣ ಹುಡುಗ ಇರಲಿ. ಅವರಲ್ಲಿ ಒಬ್ಬನಾದರೂ ಸ್ವಾತಂತ್ರ್ಯ ಹೋರಾಟಗಾರನಾಗಿರುತ್ತಿದ್ದ. ನಾವ್ಯಾರೂ ಗಾಂಧೀನ ನೋಡಿರಲಿಲ್ಲ. ನಾವು ನೋಡಿದ್ದು ನಮ್ಮ ಊರು ಹೂಲಿಯ ಸುತ್ತ ಮುತ್ತ ಇದ್ದ ಹೋರಾಟಗಾರರನ್ನು ಮಾತ್ರ. ಅವರಲ್ಲಿ ನಮ್ಮೂರಿನವರೇ ಆದ ಶ್ರೀ ವೆಂಕರಡ್ಡಿ ಹೂಲಿಯವರು ಮುಂಚೂಣಿ ಯಲ್ಲಿದ್ದರು. ಅವರ ಜತೆಗೆ ಶ್ರೀ ಗೋವಿಂದರಡ್ಡಿ ತಿಮ್ಮರಡ್ಡಿಯವರು, ಶ್ರೀ ದೊಡ್ಡಮಲ್ಲಪ್ಪ ಕಾರಲಕಟ್ಟಿ, ಶ್ರೀ ರಂಗಪ್ಪ ಚಿಕ್ಕರಡ್ಡಿ, ಶ್ರೀ ಹನುಮಂತಪ್ಪ ಚಿಕ್ಕರಡ್ಡಿ, ಶ್ರೀ ಬಾಳಾಸಾಹೇಬ ಕುಲಕರ್ಣಿಯವರು, ಶ್ರೀ ಪಾಂಡೂ ಅವರು ಹೀಗೆ ಇನ್ನೂ ಅನೇಕರು ವೆಂಕರಡ್ಡಿ ಹೂಲಿ ಅವರ ಬೆನ್ನ ಹಿಂದೆ ನಿಂತು, ಚಳುವಳಿ ಹೋರಾಟದ ಬೆಂಬಲಕ್ಕೆ ನಿಂತಿದ್ದರು. ಈ ಹೋರಾಟದ ಹಿಂದೆ ಇದ್ದವರು ಹಲವು ಅನಾಮಧೇಯರೂ ಇದ್ದರು. ಊರಿನ ಕುಂಬಾರ ಕೇರಿ, ಕುರುಬಗೇರಿ, ಬಡಿಗೇರ ಓಣಿ, ಪ್ಯಾಟೀ ಓಣಿ, ತಳವಾರ ಓಣಿ, ಪೂಜಾರ ಓಣಿ, ಹರಿಜನ ಕೇರಿ ಹೀಗೆ ಊರಿನ ಎಲ್ಲಾ ಓಣಿಗಳಲ್ಲಿದ್ದ ರೈತರು, ಆಯಗಾರರು, ಕೂಲಿಯವರು, ಯುವಕರು, ಹೆಣ್ಣುಮಕ್ಕಳು ಹೀಗೆ ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ಪಾಲುಗೊಂಡಿದ್ದರು. ಇಡೀ ಊರಲ್ಲಿ ಒಂದೇ ಒಂದು ಸಾರಾಯಿ ಅಂಗಡಿ ಇದ್ದಿರಲಿಲ್ಲ. ಚಾದಂಗಡಿ ಕೂಡ ಇರಲಿಲ್ಲ. ಸ್ವಾತಂತ್ರ್ಯ ಬಂದ ಮೇಲೆಯೇ ಅವೆಲ್ಲ ಬಂದದ್ದು. ಎಲ್ಲರಿಗೂ ಮುಂಚೂಣಿಯಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದವರು ಶ್ರೀ ವೆಂಕರಡ್ಡಿ ಹೂಲಿಯವರು. ಹಾಗಾಗಿ ಅವರ ಮೇಲೆ ಸರಕಾರದ ಕಣ್ಣು ಬಿತ್ತು.

ಊರಲ್ಲಿ ಪ್ರಭಾತಫೇರಿ, ಸ್ವಾತಂತ್ರ್ಯಗೀತೆಗಳ ಹಾಡು, ಭಾಷಣಗಳು, ಭಜನೆಗಳು ನಿರಂತರವಾಗಿ ಸುರುವಾದಾಗ ಇಲ್ಲಿದ್ದ ಅಂಗ್ರೇಜಿಗಳಿಗೆ ತಳಮಳ ಸುರುವಾಯಿತು. ಸವದತ್ತಿ ಮಾಮಲೇದಾರರ ಮೂಲಕ ಬೆಳಗಾವಿಯಲ್ಲಿದ್ದ ಕಲೆಕ್ಟರಿಗೆ ಮಾಹಿತಿ ಹೋದ ಕೂಡಲೇ ಚಳುವಳಿಯನ್ನು ಬಗ್ಗು ಬಡಿಯಲು ಅವರು ಹುಕುಂ ಕೊಟ್ಟರು. ಅದೇ ವೇಳೆಯಲ್ಲಿ ಹೂಲಿಯ ಸುತ್ತಮುತ್ತಲಿನ ಪ್ರದೇಶಗಳೂ ಈ ಚಳುವಳಿಯಿಂದ ಪ್ರಭಾವಿತವಾದವು. ಪಕ್ಕದ ಊರುಗಳಾದ ಹಿರೇಕುಂಬಿ, ಚುಳುಕಿ, ಶಿರಸಂಗಿ, ಮುನವಳ್ಳಿ, ಸವದತ್ತಿ, ಹೊಸೂರು, ಕರೀಕಟ್ಟಿ , ಯರಗಟ್ಟಿ ಇನ್ನೂ ಅನೇಕ ಊರುಗಳಿಂದ ಹೋರಾಟಗಾರರ ಬೆಂಬಲ ಸಿಕ್ಕಿತು. ಅದಾಗಲೇ ಗಾಂಧೀಜಿಯವರು ಎಲ್ಲರಿಗೂ ಮಹಾತ್ಮರಾಗಿದ್ದರು. ಹಿರೇಕುಂಬಿಯ ಗವಿಸಿದ್ದಪ್ಪ ಬೆಳವಡಿಯವರು ತಮ್ಮ ಭಾಗದಲ್ಲಿ ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸಿದರು. ಏಣಗಿಯ ನಾಟಕ ಶಿರೋಮಣಿ ಬಾಳಪ್ಪನವರು ದೇಶ ಭಕ್ತಿ ಉಕ್ಕಿಸುವ ನಾಟಕಗಳನ್ನೇ ಆಡತೊಡಗಿದರು. ‘ಸಾವಿರ ಪದಗಳ ಸರದಾರ ಹುಕ್ಕೇರಿ ಬಾಳಪ್ಪನವರು ದೇಶ ಭಕ್ತಿಯ ಹಾಡುಗಳನ್ನು ಹಾಡತೊಡಗಿದರು. ಅಣಗಿ ಬಾಳಪ್ಪನವರ ಖಾದೀ ಸೀರೆ’ ನಾಟಕ ಪ್ರಸಿದ್ಧವಾಯಿತು.

ಸಂಪಗಾಂವದ ಶ್ರೀ ಚನ್ನಪ್ಪ ವಾಲಿಯರು ವೆಂಕರಡ್ಡಿಯವರಿಗೆ ಕೈ ಜೋಡಿಸಿ ನಿಂತರು. ಇಡೀ ಸವದತ್ತಿ ತಾಲೂಕು ಖಾದೀಮಯವಾಯಿತು. ಮುನವಳ್ಳಿ, ಯರಗಟ್ಟಿ ಮತ್ತು ಗುರ್ಲಹೊಸೂರಿನಲ್ಲಿ ಖಾದೀ ಮಗ್ಗಗಳು ಸುರುವಾದವು. ವೆಂಕರಡ್ಡಿ ಹೂಲಿಯವರನ್ನು ಮತ್ತು ಸಂಪಗಾಂವದ ಚನ್ನಪ್ಪ ವಾಲಿಯವರನ್ನು ಮತ್ತು ಅವರ ಬೆಂಬಲಿಗರನ್ನು ಹಿಡಿಯಲು ಇಂಗ್ಲೀಷರು ಸಿದ್ಧರಾದರು. ಅದನ್ನು ಗಮನಿಸಿದ ಚಳುವಳಿಗಾರರು ಈ ನೇತಾರರೊಂದಿಗೆ ಗುಡ್ಡ ಬಿದ್ದು ನಾಪತ್ತೆಯಾದರು. ಹೂಲಿಯ ವರವಿ ಕೊಳ್ಳ, ಮುನವಳ್ಳಿ, ಸೊಗಲ, ಶಿರಸಂಗಿ ಗುಡ್ಡಗಳಲ್ಲಿ ಅವರೆಲ್ಲ ಅಡಗಿದರು. ಅವರನ್ನು ಹಿಡಿಯಲು ಪೋಲೀಸ್‌ ಸಿಪಾಯಿಗಳು ಸಾಕಷ್ಟು ಪ್ರಯತ್ನಿಸಿದರು. ರಾತ್ರಿಯೆನ್ನದೆ ಊರಲ್ಲಿಯ ಚಳುವಳಿಗಾರರ ಮನೆಗೆ ಮುತ್ತಿಗೆ ಹಾಕಿದರು. ಯಾರೂ ಕೈಗೆ ಸಿಗದ್ದರಿಂದ ಮಾಮಲೇದಾರ ಮತ್ತು ಫೌಜುದಾರರು ಕೋಪಿಸಿಕೊಂಡು ಮನೆಯ ಮಕ್ಕಳು-ಹೆಂಗಸರನ್ನು ಪೀಡಿಸಿದರು.

ಚಳುವಳಿಗಾರರು ಎಲ್ಲಿ ಹೋದರೆಂದು ಸರಕಾರದ ಚಿಂತೆಯಾಗಿದ್ದರೆ ಅವರನ್ನು ಅತ್ಯಂತ ರಹಸ್ಯವಾಗಿ ಗುಡ್ಡದಲ್ಲಿ ಅಡಗಿಸಿಟ್ಟವರು ಊರಿನ ಅನಾಮಧೇಯ ಹೋರಾಟಗಾರರು. ಗುಡ್ಡದಲ್ಲಿ ದನ ಕಾಯುವವರು, ಕಲ್ಲು ಒಡೆಯುವ ಮಂದಿ, ಉರುವಲು ಕಟ್ಟಿಗೆ ಹುಡುಕುತ್ತ ಹೋದವರೇ ಚಳುವಳಿಗಾರರ ರಕ್ಷಣೆಗೆ ನಿಂತರು. ದಿನ ನಿತ್ಯ ಪಾಳೆಯ ಪ್ರಕಾರ ಅವರಿಗೆ ಊರಿಂದ ರೊಟ್ಟಿ ಕಟ್ಟಿಕೊಂಡು ರಹಸ್ಯವಾಗಿ ಕೊಟ್ಟು ಬರುವ ಒಂದು ಗುಂಪು ನಮ್ಮೂರಲ್ಲೇ ಇತ್ತು. ಊರಿನ ಬಹುತೇಕ ಮನೆಗಳಲ್ಲಿ ಆಗ ದೇಸೀ ಬಂದೂಕುಗಳು, ಪಿಸ್ತೂಲುಗಳು, ಬಂಡಿಗುಡುಗೋಲುಗಳು, ಹಿತ್ತಾಳಿ ಕುಡುಗೋಲುಗಳು, ಜಂಬೆಗಳು, ಕತ್ತಿಗಳು ಇದ್ದವು. ಬಾಲಕನಾಗಿದ್ದ ನಾನೇ ಹಲವು ಮನೆಗಳಲ್ಲಿ ನೋಡಿದ್ದೆ. ಊರಿನ ಕಮ್ಮಾರರೊಬ್ಬರು ದೇಸೀ ಪಿಸ್ತೂಲಿಗಳನ್ನು ಗುಟ್ಟಾಗಿ ತಯಾರಿಸುತ್ತಿದ್ದರಂತೆ. ಇದರಿಂದ ಊರಿಗೆ ಯಾವತ್ತೂ ಕೆಂಪು ಮೋತಿ ಸರಕಾರದ ಮುತ್ತಿಗೆ ತಪ್ಪುತ್ತಿರಲಿಲ್ಲ.

ಅನಾಮಧೇಯ ಹೋರಾಟಗಾರರ ಗುಂಪಿನಲ್ಲಿ ನನ್ನ ತಂದೆ ಶ್ರೀ ಬಸಪ್ಪ ಹೂಲಿ ಇದ್ದರು. ೧೯೦೨ ರಲ್ಲಿ ಹುಟ್ಟಿದ್ದ ನನ್ನ ಅಪ್ಪ ಓದಿದ್ದು ಬರೀ ಒಂದನೇ ಈಯತ್ತೆ. ಆದರೂ ಮಹಾಭಾರತ, ರಾಮಾಯಣ ಗ್ರಂಥಗಳ ಕತೆಗಳನ್ನು ರಸವತ್ತಾಗಿ ಹೇಳುತ್ತಿದ್ದರು. ಗುಡ್ಡದಲ್ಲಿ ಅಡಗಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಸರಿರಾತ್ರಿ ಅಲ್ಲಿಗೆ ಹೋಗಿ ಊಟಕೊಟ್ಟು ಬರುವ ಕೆಲಸ ನನ್ನ ಅಪ್ಪನದಾಗಿತ್ತು. ಒಮ್ಮೆಯಂತೂ ಪೋಲೀಸರ ಕಣ್ಣು ತಪ್ಪಿಸಲು ಇವರು ಸೀರೆ ಉಟ್ಟು ಸೆರಗಿನಲ್ಲಿ ರೊಟ್ಟಿಯ ಗುಳುಬುಟ್ಟಿ ಇಟ್ಟುಕೊಂಡು ವರವೀ ಕೊಳ್ಳದತ್ತ ಗುಡ್ಡ ಹತ್ತಿ ಹೋಗುತ್ತಿದ್ದರಂತೆ. ರಾತ್ರಿ ಗಸ್ತಿಯಲ್ಲಿದ್ದ ಸಿಪಾಯಿಗಳು ಇವರನ್ನು ತಡೆದರು. ಊರ ಅಜ್ಜನ ಮಠಕ್ಕ ಬಂದಿದ್ನಿರಿ. ನಮ್ಮ ಮನಿಯಾವ್ರು ಇಲ್ಲೇ ಹೊರಕಡೀಗಿಗೆ ಹೋಗ್ಯಾರಿ ಎಂದು ಥೇಟ್‌ ಹೆಣ್ಣಿನ ದನಿಯಲ್ಲಿ ಹೇಳಿದಾಗ ಸಿಪಾಯಿಗಳು ಸುಮ್ಮನಾದರಂತೆ. ಸಂಗ್ಯಾ-ಬಾಳ್ಯಾ ಆಟದಲ್ಲಿ ದೂತೀ ಪಾತ್ರ ಮಾಡುತ್ತಿದ್ದ ನನ್ನ ಅಪ್ಪನ ಗುರುತು ಪೋಲೀಸರಿಗೆ ತಿಳಿಯದೆ ಸುಮ್ಮನಾಗಿದ್ದರಂತೆ. ಗುಡ್ಡದಲ್ಲಿ ವೆಂಕರಡ್ಡಿಯವರು, ವಾಲೀ ಚನ್ನಪ್ಪನವರು ಮತ್ತು ಅವರ ಬೆಂಬಲಿಗರು ಎಲ್ಲಿದ್ದಾರೆಂದು ಊಟ ಕೊಟ್ಟು ಬರುವವರಿಗಷ್ಟೇ ಗೊತ್ತಿರುತ್ತಿತ್ತು.

ಇದನ್ನರಿತ ಬ್ರಿಟಿಷರು ಕೊನೆಗೂ ಎಲ್ಲರನ್ನೂ ಹಿಡಿದು ಹಿಂಡಿಲಗಾ ಜೇಲಿಗೆ ಒಯ್ದು ಬಿಟ್ಟರು. ನನ್ನ ಅಪ್ಪ ನಾಟಕ ಕಲಾವಿದ ಎಂದು ತಿಳಿದು ಬರೇ ಮೂರು ತಿಂಗಳು ಹಿಂಡಲಗಾದಲ್ಲಿಟ್ಟು ಉಳಿದವರನ್ನು ಅಲ್ಲಿಯೇ ಇಟ್ಟುಕೊಂಡರು. ವೆಂಕರಡ್ಡಿಯವರು, ಗೋವಿಂದರೆಡ್ಡಿಯವರು, ರಂಗಪ್ಪನವರು, ವಾಲೀ ಚೆನ್ನಪ್ಪನವರು. ಅವರಿಗೆ ತಿಂಗಳುಗಟ್ಟಲೇ ಜೈಲಾಯಿತಂತೆ. ಅದು ಅವರಿಗೆ ಹೊಸದೂ ಆಗಿರಲಿಲ್ಲ. ಇದಕ್ಕೂ ಮೊದಲು ಸಾಕಷ್ಟು ಬಾರಿ ಅವರು ಜೇಲಿನ ರುಚಿ ಕಂಡು ಬಂದಿದ್ದರು. ವೆಂಕರಡ್ಡಿಯವರ ಬಗ್ಗೆ ಸ್ವತಃ ಗಾಂಧೀಜಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಅಪ್ಪ ಇದರ ಬಗ್ಗೆ ಹುರುಪಿನಿಂದ ನನಗೆ ಹೇಳುತ್ತಿದ್ದರು. .

೧೯೪೨ ಆಗಷ್ಟ ಒಂಭತ್ತರಂದು ಮಧ್ಯಪ್ರದೇಶದ ಸೇವಾಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರೀ ಸಮಿತಿಯಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯ ಘೋಷಣೆಯಾಯಿತು. ಅಲ್ಲಿಂದ ಇಡೀ ದೇಶಾದ್ಯಂತ ಪರತಂತ್ರದ ವಿರುದ್ಧ ತೀವ್ರ ಚಳುವಳಿ ಆರಂಭವಾದವು. ಅದರ ಪರಿಣಾಮ ದೇಶದ ಎಲ್ಲ ಹಳ್ಳಿಗಳನ್ನೂ ಆವರಿಸಿತು. ಅದಕ್ಕೆ ನಮ್ಮೂರೂ ಹೊರತಾಗಲಿಲ್ಲ. ಈ ಚಳುವಳಿಯಲ್ಲಿ ನನ್ನ ಅಪ್ಪ ಭಾಗವಹಿಸಿದ್ದರೆಂಬುದು ನನಗೆ ಅಭಿಮಾನ ತರುವ ಸಂಗತಿ. ಈ ಕಾರಣಕ್ಕಾಗಿಯೇ ನಾನು ಕೆಲ ವರ್ಷಗಳ ಹಿಂದೆ ”ಕ್ವಿಟ್‌ ಇಂಡಿಯಾ” ಚಳುವಳಿಯ ಘೋಷಣೆ ಹೊರಡಿಸಿದ ಪವಿತ್ರ ಸ್ಥಳವಾದ ಸೇವಾಗ್ರಾಮಕ್ಕೆ ಭೇಟಿ ನೀಡಿ ಬಂದೆ. ಅಲ್ಲಿ ಮಹಾತ್ಮಾ ಗಾಂಧೀಜಿಯವರು ಇದ್ದ ಕೋಣೆ ನೋಡಿದೆ. ಅವರೇ ಕಟ್ಟಿಕೊಂಡ ಕುಟೀರ ನೋಡಿ ಭಾವುಕನಾದೆ. . ಈಗಲೂ ಅಲ್ಲಿನ ಮನೆಗೆಳಿಗೆ ಕಪ್ಪು ಹಂಚಿನ ಹೊದಿಕೆಯಿದೆ. ಅದರಲ್ಲಿ ಒಂದನ್ನು ಸ್ವತಃ ಗಾಂಧೀಜಿಯರೇ ಕಟ್ಟಿದ್ದಾರೆ. ಅದಕ್ಕೆ ‘ಆದಿ ಕುಟೀರ’ ಎಂದು ಹೆಸರಿಟ್ಟಿದ್ದಾರೆ.

ಈಗ ಸ್ವಾತಂತ್ರ್ಯ ಸಿಕ್ಕು ೭೨ ವರ್ಷಗಳಾಗಿವೆ. ದೇಶಕ್ಕೆ ಏನಾಯಿತು. ಏನಿಲ್ಲ ಅನ್ನುವುದು ಬೇರೆ ವಿಚಾರ. ಆದರ ಒಬ್ಬ ದೇಶಾಭಿಮಾನಿಯ ಮಗನಾಗಿ, ದೇಶಭಕ್ತರ ಊರಲ್ಲಿ ಹುಟ್ಟಿದ ನನಗೆ ಅಂದಿನ ಚಳುವಳಿಗಾರರ ಬಗ್ಗೆ ಅನುಪಮ ಭಕ್ತಿಯಿದೆ. ಅಭಿಮಾನವಿದೆ. ಪ್ರೀತಿ ಇದೆ. ಆದ್ದರಿಂದ ಈ ಸಂದರ್ಭದಲ್ಲಿ ನಾನು ನನ್ನ ಊರಿನ ದೇಶಭಕ್ತರನ್ನು ಮತ್ತು ನನ್ನ ಅಪ್ಪನನ್ನು ನೆನಪಿಸಿ ಕೊಂಡಿದ್ದೇನೆ. ಇವರು ಯಾರೂ ಹೆಚ್ಚು ಓದಿದವರಲ್ಲ. ಎರಡೆತ್ತೆ, ಮೂರೆತ್ತೆಗೇ ಶಾಲೆ ಬಿಟ್ಟವರು. ಶ್ರೀಮಂತರೂ ಅಲ್ಲ. ಒಣ ಬೇಸಾಯದಲ್ಲಿ ಜೀವನ ಮಾಡುವವರು. ಇವತ್ತಿನ ಹಾಗೆ ಸೋಮಾರಿ ಕಟ್ಟೆಯಲ್ಲಿ ಕೂತು ಪ್ರಪಂಚದ ರಾಜಕೀಯ ಮಾತಾಡುವವರಲ್ಲ. ಆದರೂ ಅವರಲ್ಲಿದ್ದ ದೇಶಭಕ್ತಿಗೆ ಇವತ್ತಿನ ಅಗ್ರಶ್ರೇಣಿಯಲ್ಲಿ ಓದಿದವರೂ ತಲೆಬಾಗಬೇಕು. ನನ್ನ ಊರಿನ ಜನ ಚಿನ್ನದಂಥವರು. ಅಪ್ಪಟ ದೇಶ ಪ್ರೇಮಿಗಳು. ಅವರ ಬಗ್ಗೆ ಹೇಳಲು ಹೆಮ್ಮೆ ಅನಿಸುತ್ತದೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW