* ಹೂಲಿಶೇಖರ್ (ಸಂಪಾದಕರು) aakritikannada.com
ಕತೆ ಓದುವ ಮೊದಲು…!
ಈ ಹಿಂದೆ ಯುವ ಕತೆಗಾರ್ತಿ ಕಾವ್ಯ ದೇವರಾಜ್ ಆಕೃತಿ ಕನ್ನಡ ಮ್ಯಾಗಝಿನ್ ನಲ್ಲಿ ಬರೆದಿದ್ದ ಸತ್ಯ ಕತೆಯೊಂದು ನಿಮ್ಮ ಕಣ್ಣೆದುರಿಗೆ ಬಂದು ಹೋಗಿತ್ತು. ಅದು ಲೇಖಕಿ ಬರೆದ ಮೊದಲ ಕತೆಯೂ ಆಗಿತ್ತು. ಅದಕ್ಕೆ ಓದುಗರಿಂದ ಅದ್ಭುತ ಪ್ರತಿಕ್ರಿಯೆಯೂ ಸಿಕ್ಕಿತ್ತು. ಕೆಲವು ಕಿರುತೆರೆಯ ನಿರ್ಮಾಪಕರು ಅದನ್ನು ಧಾರಾವಾಹಿ ಮಾಡಲು ಮುಂದೆ ಬಂದರು. ಆದರೆ ಸೂಕ್ತ ನಿರ್ಮಾಪಕರು ಸಿಗದೆ ಹಾಗೇ ಉಳಿಯಿತು. ಹಾಗೆಂದು ಕತೆಯ ಸತ್ವವೇನೂ ಕಡಿಮೆಯಾಗಿಲ್ಲ. ಈಗಲೂ , ಸಮರ್ಥ, ನ್ಯಾಯಯುತ ನಿರ್ಮಾಪಕರು ಮುಂದೆ ಬಂದಲ್ಲಿ ಲೇಖಕರು ತಮ್ಮ ಒಪ್ಪಿಗೆ ಕೊಡಲು ಈಗಲೂ ಸಿದ್ಧರಿದ್ದಾರೆ. ಈಗ ಆಕೃತಿ ಮ್ಯಾಗಝಿನ್ ನಲ್ಲಿ ಪ್ರಕಟವಾಗುತ್ತಿರುವ ಲೇಖಕಿ ಕಾವ್ಯ ದೇವರಾಜ ಅವರ ಈ ಕತೆ ಅವರು ಬರೆದ ದ್ವಿತೀಯ ಕತೆಯಾಗಿದೆ. ಇದೂ ಕೂಡ ಅವರು ಬದುಕಿನಲ್ಲಿ ಕಂಡ ಸತ್ಯ ಕತೆಯೂ ಆಗಿದೆ. ಕತೆಯ ಹೆಸರು ” ತೇಲಿ ಹೋದ ನೌಕೆ”. ಈ ಕತೆಯೂ ನಿಮಗೆ ಮೆಚ್ಚುಗೆಯಾಗುತ್ತದೆಂದು ನಾವು ಭಾವಿಸುತ್ತೇವೆ. ಒಂದು ಸಿನಿಮಾ ಮತ್ತು ಧಾರಾವಾಹಿ ಆಗುವ ದೊಡ್ಡ ಕ್ಯಾನವಾಸ್ ಈ ಕತೆಗೂ ಇದೆ ಎಂಬುದು ನಮ್ಮ ನಂಬಿಕೆ. ನಿಮಗೂ ಈ ಕತೆ ಮೆಚ್ಚುಗೆಯಾದಲ್ಲಿ ನಿಮ್ಮ ಅನಿಸಿಕೆಯನ್ನು ಆಕೃತಿಗೆ ಪೋಸ್ಟ ಮಾಡಿ. ನಿಮ್ಮ ಒಂದೊಂದು ಅನಿಸಿಕೆ ಈ ಯುವ ಕತೆಗಾರ್ತಿಗೆ ಬರವಣಿಗೆಯ ಆತ್ಮ ವಿಶ್ಸಾಸ ಮೂಡಿಸುತ್ತದೆ. ಈಗ ಓದಿ ” ತೇಲಿ ಹೋದ ನೌಕೆ”.
ಚಿಕ್ಕಮಗಳೂರಿನಲ್ಲಿ ಒಂದೇ ಸಮನೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ಈ ಮಳೆಯ ರುದ್ರನರ್ತನಕ್ಕೆ ಬೇಸತ್ತು.ಹೋಗಿರುವ ಕಾಫಿ ತೋಟದ ಮಾಲೀಕರು, ಚಾಮುಂಡಿ ಎಸ್ಟೇಟಿನ ಮಾಲೀಕ ಮುಕುಂದಯ್ಯ ತನ್ನ ಮ್ಯಾನೇಜರ್ ಎರಿಕ್ ಜೊತೆ ಈ ಹಾಳು ಮಳೆಗೆ ಕಾಫಿ ಹೂಗಳು ಉದುರಿ ಹೋಗುತ್ತಿವೆ.ಈ ವರ್ಷ ಲಾಭವಿರಲಿ ಅಸಲು ಎಣಿಸಿದರೆ ಸಾಕು ಎನಿಸುತ್ತಿದೆ ಎoದ. ಅದಕ್ಕೆ ಎರಿಕ್ ‘ಏನು ಮಾಡುವುದು ಸರ್… ಪಾಲಿಗೆ ಬಂದದ್ದೇ ಪಂಚಾಮೃತ. ಇನ್ನು ಈ ಆಳು ಕಾಳುಗಳು ಕೂಲಿ ಜಾಸ್ತಿ ಮಾಡಿ ಎಂದು ಬೊಬ್ಬೆ ಹೊಡೆಯದಿದ್ದರೆ. ಸಾಕು, ಹೇಗೋ ಒಂದು ವರ್ಷ ನಿಭಾಯಿಸುವ. ಇನ್ನು ಮುಂದಿದ್ದು ದೇವರಿಗೆ ಬಿಡುವ’ ಎನ್ನುವುದರಲ್ಲಿ, ಮುಕುಂದಯ್ಯನ ಮಡದಿ ಸುಶೀಲಾ ಎರಡು ಕಪ್ ಬಿಸಿ ಕಾಫಿ ತ೦ದು ಕೊಟ್ಟಳು. ಹಾಗೆ ಮಗು ಅಳುವ ಶಬ್ದ ಕೇಳಿ ತನ್ನ ಕೋಣೆಯ ಕಡೆ ನಡೆದಳು. ಇತ್ತ ಮುಕುಂದಯ್ಯ ಕಾಫಿ ಕುಡಿಯುತ್ತಾ ‘ಪೇಟೆ ಗೋವಿಂದ ಕಾಫಿ ಬೀಜದ ಹಣ ಕೊಡದೆ ಸತಾಯಿಸುತ್ತಿದ್ದಾನೆ. ನಾನೇ ನಾಳೆ ಪೇಟೆಗೆ ಹೋಗಿ ಗೋವಿಂದನ ಬಳಿ ಕಾಫಿ ಬೀಜದ ಹಣದ ಬಗ್ಗೆ ಮಾತನಾಡಿ ನಿರ್ಧಾರ ಮಾಡಿಕೊಂಡೇ ಬರುತ್ತೇನೆ. ಜೊತೆಗೆ ಸ್ವಲ್ಪ ಬ್ಯಾಂಕಿನ ವ್ಯವಹಾರವೂ ಇದೆ. ಎಲ್ಲ ಮುಗಿಸಿ ಬರುವುದು ಸಂಜೆ ಯಾಗಬಹುದು. ನಾಳೆ ನೀನೆ ನಿಂತು ತೋಟದ ಕೆಲಸ ನೋಡಿಕೋ’ ಎಂದ. ಎರಿಕ್ ಗೆ ಒಳಗೊಳಗೇ ಏನೋ ಖುಷಿಯಾಗಿ ಸಂತೋಷದಿಂದ ಒಪ್ಪಿಕೊಂಡ.
ಎರಿಕ್ ಒಂದೂವರೆ ವರ್ಷದಿಂದ ಮುಕುಂದಯ್ಯನ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಬೆಳಗ್ಗೆ ಬಂದರೆ ರಾತ್ರಿಯವರೆಗೂ ಒಂದೇ ಸಮನೆ ಅದು ಇದು ಎಂದು ಕೆಲಸ ಹುಡುಕಿ ಮಾಡುತ್ತಿದ್ದ, ಕೆಲಸದ ವಿಷಯದಲ್ಲಿ ತುಂಬಾ ಅಚ್ಚುಕಟ್ಟು ವ್ಯವಹಾರಗಳನ್ನು ಬಹಳ ಚಾಣಾಕ್ಷತೆಯಿಂದ ಮಾಡುತ್ತಿದ್ದ ಹಾಗಾಗಿ ಮುಕುಂದನಿಗೆ ಎರಿಕ್ ಎಂದರೆ ತುಂಬಾ ನಂಬಿಕೆ ಜೊತೆ ಜೊತೆಗೆ ವಿಶ್ವಾಸಿ ಕೂಡಾ. ಆದರೆ ಬುದ್ಧಿವಂತ ಎರಿಕ್, ಮುಕುಂದಯ್ಯನಿಗೆ ಹೇಗೆ ಯಾಮಾರಿಸಿ ಅವನಿಗೆ ಅನುಮಾನಬರದ ಹಾಗೆ ಅವನ ಖರ್ಚಿಗೆ ಸ್ವಲ್ಪ ಸ್ವಲ್ಪ ದುಡ್ಡು ಹೇಗೆ ಮಾಡಿಕೊಳ್ಳಬೇಕು ಎಂಬುದು ತಿಳಿದಿತ್ತು. ಆಗಲೋ… ಈಗಲೋ… ಎಂದು ಅವನ ತಾಯಿ ನೋಡಲು ಕೇರಳ ಹೋಗಿ ಬರುತ್ತಿದ್ದ. ಆದರೆ ಆರು ತಿಂಗಳ ಹಿಂದೆ ಅವನ ತಾಯಿ ತೀರಿ ಹೋದ ಮೇಲೆ ಸಂಪೂರ್ಣವಾಗಿ ಅತ್ತ ಹೋಗುವುದನ್ನೇ ನಿಲ್ಲಿಸಿ ಬಿಟ್ಟ. ಕುಡಿತದ ದಾಸರಾಗಿದ್ದರೂ ಹೊರಗಡೆ ಯಾರಿಗೂ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದ. ಸುಂದರ ಯುವಕ ವಯಸ್ಸು 29 ಆದರೂ ಮದುವೆಯಾಗಿರಲಿಲ್ಲ. ನೋಡಲು ಸುರದ್ರೂಪಿ ಅದರಿಂದ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಅವನನ್ನು ಪದೇ ಪದೇ ನೋಡುತ್ತಿದ್ದರು. ಇದೆಲ್ಲ ತಿಳಿದಿದ್ದ ಎರಿಕ್ ಮಾತ್ರ ಸುಮ್ಮನಿದ್ದ. ಅವನ ಮನಸ್ಸಿನಲ್ಲಿ ಇದ್ದದ್ದು ಬೇರೆ ಇನ್ನೆನ್ನೋ. ಒಟ್ಟಿನಲ್ಲಿ ನಾಳೆ ಮುಕುಂದ ಇರುವುದಿಲ್ಲ ಎಂದು ತಿಳಿದಿದ್ದರಿಂದ ಖುಷಿಯಾಗಿ ಮನೆಗೆ ಹೋಗುತ್ತಾ ದಾರಿಯಲ್ಲೇ ಸಾರಾಯಿ ಅಂಗಡಿ ಕಡೆ ಮುಖ ಮಾಡಿ ಅಲ್ಲೇ ಪಕ್ಕದಲ್ಲಿರುವ ಹೋಟೆಲ್ಗೆ ಹೋಗಿ ಊಟ ಮುಗಿಸಿ ಮನೆಗೆ ಹೋಗಿ ಮಲಗಿದ.
ಸುಶೀಲ ಎರಡು ವರ್ಷದ ತನ್ನ ಮುದ್ದು ಮಗಳು ಗೌರಿಗೆ ಊಟ ಮಾಡಿಸಿ ಆಡಿಸುತ್ತಿದ್ದಳು. ಮುಕುಂದಯ್ಯ ಎರಿಕ್ ಕಳಿಸಿ ಅವನು ತಂದಿದ್ದ ಲೆಕ್ಕಪತ್ರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಬಂದು ಮಗಳು ಆಡುತ್ತಿರುವುದನ್ನು ನೋಡುತ್ತಾ ಕುಳಿತ. ಇದನ್ನು ಗಮನಿಸಿದ ಸುಶೀಲ ‘ಅಡುಗೆ ಬಿಸಿಯಾಗಿದ್ದಾಗಲೇ ಊಟ ಮಾಡಿದರೆ ಚೆನ್ನಾ. ಬೇಗ ಕೈಕಾಲು ತೊಳೆದು ಊಟಕ್ಕೆ ಬನ್ನಿ’ ಎಂದು ಒಲ್ಲದ ಮನಸ್ಸಿನಲ್ಲೇ ನಗುತ್ತಾ ಗಂಡನನ್ನು ಕರೆದಳು. ಮುಕುಂದಯ್ಯ ‘ಹೌದೌದು… ಜೊತೆಗೆ ನನಗೆ ನಾಳೆ ಕೆಲಸ ಇದೆ. ಬೆಳಗ್ಗೆಯೇ ಹೋದರೆ ಪೇಟೆಗೆ ಬರುವುದು ಸಂಜೆ ಯಾಗಬಹುದು. ಬೆಳಗ್ಗೆ ಬೇಗ ಏಳಬೇಕು. ನಿನಗೇನಾದರೂ ಪೇಟೆಯಿಂದ ತರಬೇಕೆ?’ ಎಂದನು. ಸುಶೀಲ ಖುಷಿಯಿಂದ ‘ಏನೂ ಬೇಡ. ತಟ್ಟೆಗೆ ಊಟ ಬಡಿಸುತ್ತೇನೆ. ಬೇಗ ಬನ್ನಿ’ ಎಂದು ಹೇಳಿದಳು. ಅವನು ಬಂದೊಡನೆ ಇಬ್ಬರೂ ಜೊತೆಯಾಗಿ ಊಟ ಮಾಡಿ ಮಲಗಲು ಕೋಣೆಯ ಕಡೆ ಹೋದರು. ಗೌರಿಯನ್ನು ಕೆಲಸದವಳು ಅಷ್ಟರಲ್ಲಿ ಮಲಗಿಸಿದ್ದಳು. ಮುಕುಂದಯ್ಯನು ಮಲಗಿದ. ಸುಶೀಲಳು ಏನೋ ಯೋಚನೆ ಮಾಡುತ್ತಾ ಹಾಗೆ ಕಣ್ಣು ಮುಚ್ಚಿದಳು.
ಸುಶೀಲ ಹೇಳಿ ಕೇಳಿ ಒಂದು ಬಡ ತುಂಬು ಕುಟುಂಬದ ಹುಡುಗಿ. ಸುಶೀಲನ ತಂದೆಗೆ ನಾಲ್ಕು ಹೆಣ್ಣುಮಕ್ಕಳು. ಸುಶೀಲ ಎರಡನೇ ಮಗಳು ಮತ್ತು ಸೌಂದರ್ಯವತಿಯೂ ಹೌದು. ಅವಳ ಅಕ್ಕನನ್ನು ಕಡೂರಿನ ಆಚೆ ಒಬ್ಬ ಸಣ್ಣ ಹೋಟೆಲ್ ವ್ಯಾಪಾರಿಗೆ ಮದುವೆ ಮಾಡಿಕೊಡಲಾಗಿತ್ತು. ಇನ್ನೂ ಇಬ್ಬರು ಮದುವೆಯಾಗಬೇಕಿರುವ ತಂಗಿಯರಿದ್ದರು. ಅಪ್ಪ ಮಾಡುತ್ತಿದ್ದದ್ದು ಸಣ್ಣ ಜಮೀನು ಕೆಲಸ. ಹಾಗಾಗಿ ತಾಯಿಗೆ ಈ ನಾಲ್ಕು ಹೆಣ್ಣು ಮಕ್ಕಳ ಮದುವೆ ಮಾಡಿದರೆ ಸಾಕಾಗಿತ್ತು. ದೊಡ್ಡವಳದೆೇನೋ ಮುಗಿದಿತ್ತು. ಸುಶೀಲಗೆ ಗಂಡು ನೋಡುತ್ತಿದ್ದರು. ಆದರೆ ಅದೃಷ್ಟ ಅವಳಿಗೆ ಬಳಿಗೆ ಬಂದು ನಿಂತಿತ್ತು. ಊರ ಜಮೀನ್ದಾರನ ಮಗಳ ಮದುವೆಗೆ ಬಂದಿದ್ದ ಮುಕುಂದಯ್ಯ ಸುಶೀಲ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ಮದುವೆ ಆಗುವ ಇಂಗಿತವನ್ನು ಊರಿನ ಹಿರಿಯ ಗೌಡರ ಮುಖಾಂತರ ವ್ಯಕ್ತಪಡಿಸಿದ್ದ. ಊರ ಗೌಡರು ಸುಶೀಲೆ ತಂದೆಯ ಬಳಿ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ ಅವರು ಹಿಗ್ಗಿನಿಂದಲೇ ಒಪ್ಪಿಕೊಂಡು ಬಂದು, ತನ್ನ ಹೆಂಡತಿಯ ಬಳಿ ‘ಕಾಫಿ ಎಸ್ಟೇಟ್ ಮಾಲೀಕ ಅಂತೆ ಒಬ್ಬನೇ ಮಗ. ಆಳು- ಕಾಳು ಕಾರು ಆಸ್ತಿ ಪಾಸ್ತಿ ಎಲ್ಲಾ ಇದೆ. ನಮ್ಮ ಜಮೀನ್ದಾರನ ಮಗಳ ಮದುವೆಯಲ್ಲಿ ನಮ್ಮ ಸುಶೀಲನಾ ನೋಡಿ ಕೇಳಿ ಎಂದು ಗೌಡರ ಬಳಿ ಹೇಳಿ ಕಳುಹಿಸಿದ್ದಾರೆ’. ಎಂದೊಡನೆ ಹೆಂಡತಿ ಖುಷಿಯಾಗಿ ‘ಹೌದಾ…’ ಎಂದು ಬಾಯಿ ಬಿಡುತ್ತಾ ಹಾಗೆ ಸುಮ್ಮನಾದಳು. ಗಂಡ ‘ಏನಾಯ್ತು…ಹಿಂಗೆ ಯಾಕೆ ಸುಮ್ಮಗಾದೆ?. ಹೆಂಡತಿ ಅಲ್ಲಾರೀ ‘ಅವರು ಅಷ್ಟು ದೊಡ್ಡ ಮನೆತನದವರು. ಅವರ ಸಮನಾಗಿ ಮದುವೆ ಮಾಡೋಕ್ಕಾಗುತ್ತಾ? ಹೀಗೆ ಬೀಗುತ್ತಿದ್ದೀರಲ್ಲಾ. ಅದಕ್ಕೆಲ್ಲಾ ನಿಮ್ಮತ್ರ ಎಲ್ಲೈತೆ ದುಡ್ಡು’ ಎಂದಳು. ಗಂಡ ‘ಹೆೇ…ಹುಚ್ಚಿ. ನಾ, ಹೇಳೋದು ಪೂರ್ತಿ ಕೇಳು. ಅವರೇ ಪೂರ್ತಿ ಮದುವೆ ಖರ್ಚು ನೋಡ್ತಾರಂತೆ. ನಮ್ಮದೇನೂ ಖರ್ಚು ಇಲ್ಲ ಕಣೆ. ನಾನು ಹೂಂ, ಎಂದು ಬಂದೆೇನಿ’ ಅಂದ. ಹೆಂಡತಿ ‘ಹೌದಾ…’ಎಂದು ಕಣ್ಣೀರು ಹಾಕುತ್ತಾ ‘ನಮ್ಮ ಮಕ್ಕಳ ಬಾಳು, ನಮ್ಮಂತರಹ ಬಡತನದಲ್ಲಿ ಬೆಂದು ಹೋಗಲಿಲ್ಲವೆಂದರೆ ಅಷ್ಟೇ ಸಾಕು’ ಎಂದಳು.ಗಂಡ’ಹೆೇ…ನಮ್ಮ ಸುಶೀಲೆ,ಆ ಮನೆಯಲ್ಲಿ ರಾಣಿ ಇದ್ದ ಹಾಗೆ ಇರ್ತಾಳೆ ನೋಡು’ ಎಂದು ಅವನು
ಕಣ್ಣೀರು ಹಾಕಿದ. ಇದನ್ನೆಲ್ಲ ಬಾಗಿಲ ಹಿಂದೆಯೇ ನಿಂತು ಕೇಳಿಸಿಕೊಳ್ಳುತ್ತಿದ್ದ ಸುಶೀಲ ಮತ್ತು
ಅವಳ ತಂಗಿಯರು ಖುಷಿ ಪಟ್ಟು ಅಕ್ಕನನ್ನು ರೇಗಿಸಲು ಶುರು ಮಾಡಿದರು. ಸುಶೀಲ ನಾಚಿ ಕೆಂಪಗಾದಳು.
ಮುಕುಂದಯ್ಯನ ಮನೆಯಲ್ಲಿ ಮದುವೆ ತಯಾರಿ ಜೋರಾಗಿ ನಡೆದಿತ್ತು. ಇತ್ತ ಸುಶೀಲಳ ಮನೆಯಲ್ಲಿ ಸಾಧಾರಣವಾಗಿತ್ತು. ಸುಶೀಲ ಅಕ್ಕ- ಭಾವ, ನೆಂಟರು ಎಲ್ಲರೂ ಬಂದರು. ಹೆಣ್ಣಿನ ಮನೆಯ ಮದುವೆ ಖರ್ಚು ಮುಕುಂದಯ್ಯನೇ ಭರಿಸಿದ್ದ. ಆದರೆ ಮುಕುಂದಯ್ಯನನ್ನು ಸುಶೀಲಳ ತಂದೆ ಬಿಟ್ಟು ಯಾರೂ ನೋಡಿರಲಿಲ್ಲ. ಮದುವೆ ಊರ ರಾಮದೇವರ ದೇವಸ್ಥಾನದ ಪಕ್ಕದ ಛತ್ರದಲ್ಲಿ ನಿಗದಿಯಾಗಿತ್ತು. ಹುಡುಗಿಯ ಕಡೆಯವರು ಹಿಂದಿನ ರಾತ್ರಿಯೇ ಬಂದಿದ್ದರು. ಹುಡುಗನ ಕಡೆಯವರು ಬೆಳಗ್ಗೆ ಛತ್ರಕ್ಕೆ ಬಂದರು. ಹುಡುಗನಿಗೆ ಆರತಿ ಎತ್ತಿ ಪಾದಪೂಜೆ ಮಾಡಲು ಬಂದ ಸುಶೀಲಳ ತಾಯಿ ಮತ್ತು ಸಹೋದರಿಯರು ಒಮ್ಮೆಲೇ ತಂದೆಯ ಕಡೆ ತಿರುಗಿ ನೋಡಿದರ. ಮುಖದ ಮೇಲಿನ ಎಲ್ಲರ ನಗು ಮಾಯವಾಗಿತ್ತು. ತಂದೆ ‘ಸುಮ್ಮನಿರಿ…’ ಎಂದು ಸನ್ನೆ ಮಾಡಿದ. ಹೇಗೋ ಪಾದಪೂಜೆ ಮುಗಿಸಿ ಒಳಗೆ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಹೋಗಿ ಯಾರೂ ಏನೂ ಮಾತನಾಡಬೇಡಿ. ನಿಮ್ಮ ತಲೆಯಲ್ಲಿ ಏನಿದೆ ನನಗೆ ಗೊತ್ತು. ಹುಡುಗ ಚೆನ್ನಾಗಿಲ್ಲ ಅಂದ್ರೆ, ಏನು ಅಂದ-ಚೆಂದ ಎಷ್ಟು ದಿನ. ನಮ್ಮ ಹುಡುಗಿ ಅವರ ಮನೆಯಲ್ಲಿ ಖುಷಿಯಾಗಿದ್ರೆ ಸಾಕು ತಾನೇ. ಯಾರೂ ಸುಶೀಲಳ ಬಳಿ ಏನೂ ಮಾತನಾಡಬೇಡಿ’ ಎಂದನು. ಅದಕ್ಕೆ ಸುಶೀಲಳ ಅಕ್ಕ ‘ಅಪ್ಪ…ಅಂದ ಚೆಂದ ಬೇಡ. ಆದರೆ ಹುಡುಗನಿಗೆ ಸೀಳು ತುಟಿ ನನ್ನ ಸುಂದರ ತಂಗಿಗೆ ಇಂಥ ಕುರೂಪಿ ಹುಡುಗನೇ? ಅವಳಿಗೆ ನಾವು ಈಗ ಹೇಳದಿದ್ದರೂ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಗೊತ್ತಾಗದೆ ಇರುತ್ತಾ? ಅವಳು ನಿಜವಾಗಿಯೂ ಒಪ್ಪುವುದಿಲ್ಲ. ಬೇಡ, ಮದುವೆ ನಿಲ್ಲಿಸಿ’ ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿ ಯಾರೋ ಅಳುವ ಶಬ್ದ ಕೇಳುತ್ತದೆ. ಎಲ್ಲರೂ ಗಾಬರಿಯಿಂದ ಒಮ್ಮೆಲೇ ಹಿಂದೆ ತಿರುಗಿ ನೋಡುತ್ತಾರೆ. ಮದು ಮಗಳು ಸುಶೀಲೆ ಗೋಡೆಗೆ ಒರಗಿ, ಇವರ ಮಾತನ್ನು ಕೇಳಿಸಿಕೊಂಡು ಅಳುತ್ತಾ ನಿಂತಿರುತ್ತಾಳೆ. ಎಲ್ಲರಿಗೂ ಅರ್ಥವಾಯಿತು. ಇವಳಿಗೆ ವಿಷಯ ತಿಳಿದಿದೆ ಎಂದು ಅಪ್ಪ ಸುಶೀಲಳ ಬಳಿ ಹೋಗುತ್ತಾನೆ. ಸುಶೀಲೆ ‘ಅಪ್ಪ…ಈ ಸೀಳು ತುಟಿಯವನನ್ನು ನಾನು ಮದುವೆ ಆಗುವುದಿಲ್ಲ. ದಯವಿಟ್ಟು ಮದುವೆ ನಿಲ್ಲಿಸಿ’ ಎಂದು ಅಪ್ಪನ ಕಾಲ ಮೇಲೆ ಬಿದ್ದು ಅಳುತ್ತಾಳೆ. ಅಪ್ಪ ಮಗಳನ್ನು ಅಲ್ಲಿಯೇ ಕುರ್ಚಿಯಲ್ಲಿ ಕೂರಿಸಿ ‘ನೋಡು ಮಗಳೇ, ನೀನು ಅವನನ್ನು ಮದುವೆಯಾದರೆ ಸಿರಿ ಸಂಪತ್ತಿನಲ್ಲಿ ಖುಷಿಯಾಗಿರಬಹುದು. ನಿನ್ನ ಈ ಎರಡು ತಂಗಿಯರಿಗೂ ಏನಾದರೂ ದಾರಿಯಾಗಬಹುದು. ಹಠ ಮಾಡಬೇಡ. ಸುಮ್ಮನೆ ಮದುವೆಯಾಗು. ಎಲ್ಲರೂ ಖುಷಿಯಾಗಿರಬಹುದು’ ಎನ್ನುತ್ತಾನೆ. ಸುಶೀಲ ‘ಇಲ್ಲ… ನಾನು ಮದುವೆಯಾಗುವುದಿಲ್ಲ’ ಎಂದು ಮತ್ತೆ ಬಿಕ್ಕುತ್ತಾ ಜೋರಾಗಿ ಅಳುತ್ತಾಳೆ. ಅದಕ್ಕೆ ಅವಳ ತಂದೆ ‘ಸರಿ… ನಿನ್ನಿಷ್ಟ ಬಂದ ಹಾಗೆ ಮಾಡಿಕೊ. ಮದುವೆ ಮನೆಯಲ್ಲಿ ಮದುವೆ ನಿಂತರೆ ಮುಂದೆ ನಿನ್ನ ಯಾರು ಮದುವೆಯಾಗುತ್ತಾರೆ? ನಿನ್ನ ತಂಗಿಯ ಗತಿಯೇನು? ನಾನು ಈ ಅವಮಾನ ಸಹಿಸಿಕೊಂಡು ಬದುಕುವುದಾದರೂ ಹೇಗೆ? ನಾನು ಬದುಕುವುದಕ್ಕಿಂತ ಸಾಯುವುದೇ ಮೇಲು’ ಎಂದು ದೂರ ಸರಿದು ನಿಂತ. ಹೆಂಡತಿ ಅಳುತ್ತಾ ಮಗಳ ಮುಂದೆ ಬಂದು ಕೈ ಮುಗಿದು ನಿಂತು ‘ಅಪ್ಪ, ಹೇಳುವುದು ಸರಿ ನಿನಗೂ ಒಳ್ಳೆ ದಾರಿ ಸಿಗುತ್ತದೆ. ನಿನ್ನ ತಂಗಿಯರಿಗೂ ದಾರಿ ಸಿಗುತ್ತದೆ. ಒಪ್ಪಿಕೋ ನಮ್ಮನ್ನು ಬೀದಿಪಾಲು ಮಾಡಬೇಡ’ ಎಂದು ಕಣ್ಣೀರು ಹಾಕುತ್ತಾಳೆ. ಸುಶೀಲಾ ಬೇರೆ ದಾರಿ ಇಲ್ಲದೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ.
ಪುರೋಹಿತರು ಮದುಮಗಳನ್ನು ಕರೆದುಕೊಂಡು ಬರಲು ಹೇಳಿದರು. ತಾಯಿ ಮತ್ತು ಸಹೋದರಿಯರು ಸುಶೀಲೆಯನ್ನು ಕರೆದುಕೊಂಡು ಮಂಟಪಕ್ಕೆ ಬಂದರು. ತಂದೆ ನೆಮ್ಮದಿಯ ನಿಟ್ಟುಸಿರು ಬಿಟ್ಟನು. ಪುರೋಹಿತರು ಮದುಮಗ ಮತ್ತು ಮಗಳ ಮಧ್ಯದ ಅಂತರ ಪಟ ತೆಗೆಸಿ ತಾಳಿ ಕಟ್ಟಿಸಿದನು. ಸುಶೀಲ ಗಟ್ಟಿ ಮನಸ್ಸು ಮಾಡಿ ಒಲ್ಲದ ಮನಸ್ಸಿನಿಂದಲೇ ಮುಕುಂದಯ್ಯನ ಮುಖ ನೋಡಿದಳು ಅಷ್ಟೇ. ನನ್ನ ತಂದೆ ಈ ಕುರೂಪಿಯ ಆಸ್ತಿ ನೋಡಿ ನನ್ನನ್ನು ಇವನಿಗೆ ಕಟ್ಟಿದರಲ್ಲಾ? ನನ್ನ ತಾಯಿಯೂ ನನಗೆ ಬೆಂಬಲಿಸಲಿಲ್ಲ. ನನ್ನ ಸಹೋದರಿಯರು ನನಗೆ ಸಹಕಾರ ನೀಡಲಿಲ್ಲ ಎಂದು ತಂದೆ-ತಾಯಿ, ಸಹೋದರಿಯರ ಮೇಲೆ ತಾತ್ಸಾರ ಹುಟ್ಟಿತು. ನಾನೆಂದು ಇನ್ನೂ ಇವರ ಮುಖ ನೋಡುವುದಿಲ್ಲ ಎಂದು ಶಪಥವನ್ನು ಮನಸ್ಸಿನಲ್ಲೇ ಮಾಡಿಕೊಂಡಳು. ಗಂಡನ ಮನೆಗೆ ಕಳುಹಿಸುವ ಮುನ್ನ ಮದುಮಗ ಮತ್ತು ಮಗಳನ್ನು ಕೂರಿಸಿ ಸುಶೀಲಳ ತಾಯಿ ಹಸೆ ಹಚ್ಚುವಾಗಲೂ, ಅವಳು ಹೊರಡುವಗಲಾಗಲೂ ತಂದೆ-ತಾಯಿ ಮತ್ತು ಸಹೋದರಿಯರ ಕಡೆ ತಲೆ ಎತ್ತಿಯೂ ನೋಡಲಿಲ್ಲ. ಅವರು ಮಾತನಾಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅವಳು ಮಾತನಾಡಲಿಲ್ಲ. ಗಂಡನ
ಮನೆಗೆ ಬಂದವಳು,ತವರು ಮನೆ ಕಡೆ ಮುಖವೂ ಮಾಡಲಿಲ್ಲ. ಅವರೇ ಇವಳ ಮನೆಗೆ ಬಂದರೆ
ಇವಳು ಮಾತನಾಡಿಸಲಿಲ್ಲ. ಮುಕುಂದಯ್ಯನು ಏಕೆ ಏನು ಎಂದು ಸುಶೀಲಳನು ವಿಚಾರಿಸಿದರೂ ಅವಳು ನಮ್ಮ ಮನೆಯ ವಿಚಾರ ನಿಮಗೆ ಬೇಡ ಎಂದು ಬಾಯಿ ಮುಚ್ಚಿಸುತ್ತಿದ್ದಳು. ಕೊನೆಗೆ ಅವನು ಸುಮ್ಮನಾದ. ಬರುತಾ ಬರುತಾ ಸುಶೀಲೆಯ ತಂದೆ- ತಾಯಿ ಇವಳ ನಡವಳಿಕೆಯಿಂದ ನೊಂದು ಮಗಳ ಮನೆ ಕಡೆ ಬರುವುದನ್ನು ಬಿಟ್ಟರು.
ಇವಳಿಗೆ ಗಂಡನ ಮೇಲೆ ಪ್ರೀತಿ ಹುಟ್ಟಲೇ ಇಲ್ಲ. ಆದರೆ ವಿರೋಧಿಸಿ ಹೊರಬರುವ ಧೈರ್ಯವೂ ಇರಲಿಲ್ಲ, ಗಂಡ ಎಂದರೆ ಇವಳಿಗೆ ಅಸಡ್ಡೆ, ತಾತ್ಸಾರ ಯಾವಾಗಲೂ ಸಿಡಿಮಿಡಿ ಎನ್ನುತ್ತಿದ್ದಳು. ಆದರೆ ತನ್ನ ಸೌಂದರ್ಯವತಿ ಹೆಂಡತಿ ಕಂಡರೆ ಮುಕುಂದಯ್ಯನಿಗೆ ಎಲ್ಲಿಲ್ಲದ ಪ್ರೀತಿ. ಅವಳ ನಡವಳಿಕೆಯೇ ಹಾಗೆ ಇರಬಹುದೆಂದು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಅವಳಿಗೆ ಬೇಕಾದ್ದನ್ನು ತಂದುಕೊಡುತ್ತಿದ್ದ. ಅವಳನ್ನು ರಾಣಿಯಂತೆ ನೋಡಿಕೊಂಡ. ಸುಶೀಲ ನಿಜವಾಗಿಯೂ ಮುಕುಂದಯ್ಯ ಮನೆಯಲ್ಲಿ ರಾಣಿಯ ಹಾಗೆ ಇದ್ದಳು. ಹಾಗೂ ಹೀಗೂ ಅವಳ ಸಂಸಾರ ಯಾವುದೇ ತೊಂದರೆಗಳಿಲ್ಲದೇ ಸಾಗುತ್ತಿತ್ತು. ಮದುವೆಯಾದ ವರ್ಷಕ್ಕೆ ಹೆಣ್ಣು ಮಗು ಸುಶೀಲೆಯ ಮಡಿಲು ತುಂಬಿತ್ತು. ಆ ಮಗುವು ಅವಳಂತೆಯೇ ಮುದ್ದಾಗಿತ್ತು. ಅದಕ್ಕೆ ಗೌರಿ ಎಂದು ಅದರ ಐದನೇ ತಿಂಗಳಿನಲ್ಲಿ
ಮುಕುಂದಯ್ಯ ಅದ್ದೂರಿ ನಾಮಕರಣ ಮಾಡಿದ್ದನು. ಸದ್ಯಕ್ಕೆ ಮೇಲ ನೋಟಕ್ಕೆ ಇದು ಸುಖಿ ಕುಟುಂಬದಂತೆ ಕಂಡರೂ, ಸುಶೀಲೆಗೆ ತನ್ನ ಗಂಡನ ಸೌಂದರ್ಯದ ಬಗ್ಗೆ ಅಸಹ್ಯವಿತ್ತು. ಅವನ ಜೊತೆ ಹೊರ ಹೋಗಲು ಹಿಂಜರಿಯುತ್ತಿದ್ದಳು.
ಮುಕುಂದಯ್ಯ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿ ಪೂಜೆ ಮಾಡಿ ಅವನ ಲೆಕ್ಕ ಪತ್ರಗಳನ್ನೆಲ್ಲ
ತನ್ನ ಕೈ ಚೀಲದಲ್ಲಿ ಜೋಪಾನವಾಗಿ ಇಟ್ಟುಕೊಂಡ. ಅಷ್ಟರಲ್ಲಿ ಸುಶೀಲ ಕಾಫಿ ತಂದು ಮುಕುಂದಯ್ಯನಿಗೆ ಕೊಟ್ಟಳು. ಮುಕುಂದಯ್ಯ ಕಾಫಿಯನ್ನು ಕುಡಿಯುತ್ತಾ ಒಂದು ಲೆಕ್ಕಪತ್ರವನ್ನು ಅವಳ ಕೈಗಿಟ್ಟನು. ಮತ್ತು ಎರಿಕ್ ಬಂದಾಗ ಕೊಡು ಎಂದು ಹೇಳಿ ಸಂಜೆ ಬೇಗ ಬರುತ್ತೇನೆ. ಬರುತ್ತಾ ಏನಾದರೂ ತರುತ್ತೇನೆ ಎಂದು ಹೇಳಿ ಮಲಗಿದ್ದ ಮಗು ಗೌರಿಯನ್ನು ನೋಡಿ ಮುತ್ತು ಕೊಟ್ಟು ಹೊರಟನು. ಹೊರಗೆ ಜೀಪು ಕಾಯುತಿತು. ಸುಶೀಲಳು ಪತ್ರ ತೆಗೆದು ಜೋಪಾನವಾಗಿಟ್ಟು ಖುಷಿಯಿಂದ
ಬೇಗನೆ ಅವಳು ಸ್ನಾನ ಮುಗಿಸಿ ಒಳ್ಳೆ ಬಟ್ಟೆ ಧರಿಸಿ ಯಾರನ್ನೂ ಕಾಯುತ್ತಿರುವ ಹಾಗೆ ಚಡಪಡಿಸುತ್ತಿದ್ದಳು.ಈ ದಿನಕ್ಕಾಗಿ ಬಹಳ ದಿನದಿಂದ ಕಾಯುತ್ತಿದ್ದ ಹಾಗೆ. ಸ್ಕೂಟರ್ ಕೀ.. ಕೀ.. ಎಂದು ಶಬ್ದ ಬಂದೊಡನೆ ಕಿಟಕಿಯಿಂದ ಇಣುಕಿ ನೋಡಿ ನಿರೀಕ್ಷಿಸದವರು ಕಂಡಂತೆ ಖುಷಿಯಿಂದ ಕೋಣೆಯಿಂದ ಹೊರ ಬಂದಳು. ತನ್ನ ಮನೆ ಕೆಲಸದವರಿಗೆ ಅದು ಇದು ಕೆಲಸ ಹೇಳಿ ಅವರನ್ನೆಲ್ಲ ಕೆಲಸದಲ್ಲಿ ಮಗ್ನರಾಗುವoತೆ ಮಾಡಿ ಕೆಲಸದಾಕೆ ನಿಂಗಿಗೆ ಮಗು ಎದ್ದರೆ ಹಾಲು ಕುಡಿಸಿ ಸ್ನಾನ ಮಾಡಿಸುಬರುತ್ತೇನೆ ಎಂದು ಹೇಳಿ ಮನೆಯ ಪಕ್ಕದಲ್ಲಿದ್ದ ಗಂಡನ ಆಫೀಸಿನ ಕಡೆ ಪತ್ರ ಹಿಡಿದು ಹೊರಟಳು.ಆಫೀಸಿನಲ್ಲಿದ್ದ ಎರಿಕ್ ಯಾವುದೋ ಲೆಕ್ಕಪತ್ರ ಪರಿಶೀಲಿಸುತ್ತಿದ್ದ. ಸುಶೀಲ ಆಫೀಸಿನೊಳಗೆ ಬರುವುದನ್ನು ನೋಡಿ ಖುಷಿಯಿಂದ ನಕ್ಕನು ಅವನ ಕನಸು ಈಡೆೇರುತಿರುವ ಹಾಗೆ. ಸುಶೀಲ ಎರಿಕ್ ಗೆಇಂದು ಕೊನೆ ದಿನ ಸರಿಯಾಗಿ ಲೆಕ್ಕ ಪತ್ರ ನೋಡು ಎಂದಳು. ನಿನ್ನ ಗಂಡ ಮುಕುಂದಯ್ಯ ನಿನ್ನ ಕೈಲಿ ಯಾವುದೋ ಲೆಕ್ಕಪತ್ರ ಕೊಟ್ಟಂತಿದೆ ನೋಡಲು ಎಂದನು. ಸುಶೀಲ ಇನ್ನೇನು ಲೆಕ್ಕಪತ್ರ
ಕೊಡದೆ ಆಸ್ತಿ ಪತ್ರನಾ ಕೊಡ್ತಾನೆ ಅದೆಲ್ಲಾ ಬಿಡು ಇಂದು ಸಂಜೆಯೊಳಗೆ ನಾವು ಜಾಗ ಖಾಲಿ ಮಾಡಬೇಕು. ಇದು ನಮಗೆ ಸಿಕ್ಕಿರುವ ಒಳ್ಳೆಯ ಅವಕಾಶ. ಹತ್ತು ತಿಂಗಳಿಂದ ಕದ್ದುಮುಚ್ಚಿ ಭೇಟಿಯಾಗಿ ಸಾಕಾಗಿದೆ. ಇಲ್ಲಿಂದ ಎಲ್ಲಾದರೂ ದೂರ ಹೋಗಿ ನೆಮ್ಮದಿಯಾಗಿ ಬದುಕೋಣ. ಬಟ್ಟೆ ಬರೆ ಎಲ್ಲ ತೆಗೆದಿಟ್ಟಿದ್ದೇನೆ. ಸ್ವಲ್ಪ ಹಣ ಒಡವೆಯು ಇದೆ ಎಂದಳು. ಎರಿಕ್ ಸುಶೀಲಳ ಸಿದ್ಧತೆ ಕಂಡು ಬಹಳ ಆಶ್ಚರ್ಯಗೊಂಡ.
ಇವರಿಬ್ಬರು ಪ್ರೀತಿಯಲ್ಲಿ ಬಿದ್ದು ಇಷ್ಟು ಮುಂದುವರಿದಿದ್ದರೂ ಒಬ್ಬರಿಗೂ ವಿಷಯ ತಿಳಿದಿರಲಿಲ್ಲಎಲ್ಲರ ಮುಂದೆ ಇವರಿಬ್ಬರೂ ಮುಖ ಕೊಟ್ಟು ಮಾತನಾಡುವುದಿರಲಿ ತಲೆ ಎತ್ತಿಯೂ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ. ಮಗುವಿನ ನಾಮಕರಣ ಸಮಯದಲ್ಲಿ ಕೆಲಸಕ್ಕೆ ಸೇರಿದ್ದ ಎರಿಕ್ ಸುಶೀಲಳನ್ನು ನೋಡಿ ಎಷ್ಟು ಸುಂದರವಾಗಿದ್ದಾಳೆ. ಹೋಗಿ-ಹೋಗಿ ಈ ಕುರೂಪಿಯನ್ನು ಮದುವೆ ಯಾಗಿದ್ದಾಳಲ್ಲ ಎಂದು ನೋಡಿದ್ದನು. ಅವಳ ಸೌಂದರ್ಯ ಇವನ ಬುದ್ಧಿ ಕೆಡಿಸಿತ್ತು. ಆದರೆ
ಅವನು ಮೌನವಾಗಿಯೇ ಇದ್ದ. ಮುಕುಂದಯ್ಯ ಜೊತೆ ಎಸ್ಟೇಟ್ ನೋಡಲು ಹೋಗುವುದು. ಆಳುಕಾಳುಗಳ ಬಳಿ ಕೆಲಸ ಮಾಡಿಸುಹುದು. ಲೆಕ್ಕ ಪರಿಶೀಲಿಸುವುದು. ಅದು ಇದು ಎಂದು ಅವನ
ಜೊತೆಗೇ ಇರುತ್ತಿದ್ದ. ಸುಶೀಲಳು ಎರಿಕ್ ಸೌಂದರ್ಯಕ್ಕೆ ಮಾರು ಹೋಗಿದ್ದಳು. ಅವನನ್ನು ಮುಕುಂದನ ಜೊತೆ ಮನೆಗೆ ಬಂದಾಗ ಕದ್ದುಮುಚ್ಚಿ ಅವನನ್ನು ನೋಡುತ್ತಿದ್ದಳು. ಎರಿಕ್ ಮಗುವನ್ನು ಆಡಿಸುವ ನೆಪ ಮಾಡಿಕೊಂಡು ಯಾರಿಗೂ ತಿಳಿಯದಂತೆ ಸುಶೀಲಳ ಗಮನವನ್ನು ತನ್ನ ಕಡೆ ಎಳೆದು ಕೊಳ್ಳುತ್ತಿದ್ದನು. ಅವಳಿಗೂ ಅವನ ಮನಸ್ಸಿನಲ್ಲಿ ಏನಿದೆ ಎಂದು ಅರ್ಥವಾಗುವುದಕ್ಕೆ ತುಂಬ ಸಮಯವೇನೂ ಹಿಡಿಯಲಿಲ್ಲ. ಹೀಗಾಗಿ ಎರಿಕ್ ಸುಶೀಲಳನ್ನು ಅವನತ್ತ ಸೆಳೆಯಲು ಹೆಚ್ಚು ಕಸರತ್ತು ಮಾಡುವ ಅವಶ್ಯಕತೆ ಇರಲಿಲ್ಲ . ಮುಕುಂದಯ್ಯ ಪೇಟೆಗೆ ಹೋದಾಗ. ಕೆಲಸ ಕಾರ್ಯ ನಿಮಿತ್ತ ಊರಿಂದಾಚೆ ಹೋದಾಗ ಇವರಿಬ್ಬರ ಭೇಟಿ ಹೆಚ್ಚುತ್ತಿತ್ತು. ಆದರೆ ಯಾರೊಬ್ಬರಿಗೂ ಸಂಶಯ
ಹಾಗೆ ಇಬ್ಬರು ನಡೆದುಕೊಳ್ಳುತ್ತಿದ್ದರೂ ಕೊನೆಗೆ ಇಬ್ಬರು ಹೊಸ ಜೀವನ ಶುರು ಮಾಡುವುದೇ
ಸೂಕ್ತ ಎಂದು ತೀರ್ಮಾನಿಸಿದರು. ಮುಕುಂದಯ್ಯ ಯಾವ ದಿನ ಕೆಲಸದ ನಿಮಿತ್ತ ಹೊರ ಹೋಗುತ್ತಾನೋ ಅಂದೇ ಈ ಊರನ್ನು ಬಿಟ್ಟು ಯಾವುದಾದರೂ ದೂರ ದೂರಿಗೆ ಮಗು ಗೌರಿಯನ್ನು ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ್ದರು.
ಆ ಘಳಿಗೆ ಇಂದು ಕೂಡಿ ಬಂದಿತ್ತು. ಎರಿಕ್ ಮನೆಯಲ್ಲಿ ಬೇಗ ಎದ್ದು ತನ್ನ ಗಂಟುಮೂಟೆ ಕಟ್ಟಿ ಸುಶೀಲಳನ್ನು ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದ. ಪ್ರೀತಿಯಲ್ಲಿ ಬಿದ್ದವರಿಗೆ ಲೋಕ ಕಾಣುವುದಿಲ್ಲ ಎಂದು ಅದಕ್ಕೆ ಹೇಳುವುದೇನು?. ಇಲ್ಲಿ ಇವಳಿಗೆ ಮುಕುಂದಯ್ಯ, ಅವನ ಮನೆ, ಮಾನ, ಮರ್ಯಾದೆ ಇದು ಯಾವುದರ ಯೋಚನೆ ಇರಲಿಲ್ಲ. ಎರಿಕ್ ಗೂ ಇವಳಿಗೆ ಮದುವೆಯಾಗಿ ಮಗು ಇದೆ ಪರಸ್ತ್ರೀಯನ್ನು ಕಣ್ಣೆತ್ತಿ ನೋಡಬಾರದು ಎಂಬ ಸುಸಂಸ್ಕೃತವು ಇವನಿಗೂ ಇರಲಿಲ್ಲ. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದರೋ ಅಥವಾ ಒಬ್ಬರು ಮತ್ತೊಬ್ಬರ ಸೌಂದರ್ಯಕ್ಕೆ ಮಾರು ಹೋಗಿದ್ದರೋ ಆ ಶಿವನೇ ಬಲ್ಲ.
ಮಗುವನ್ನು ಕರೆದುಕೊಂಡು ದೇವಸ್ಥಾನದ ನೆಪ ಹೇಳಿ ಬಸ್ ಸ್ಟ್ಯಾಂಡ್ ಹತ್ತಿರ ಬರುವುದಾಗಿ ಹೇಳಿದಳು. ಒಳಗೊಳಗೇ ಇಲ್ಲಿಂದ ತಪ್ಪಿಸಿಕೊಂಡು ಯಾರಿಗೂ ಸಂಶಯ ಬರದಂತೆ ಹೊರಗೆ ಹೋದರೆ ಸಾಕು ಎಂದು ಅಂದುಕೊಂಡಳು. ಅವನ ಮುಖವನ್ನೊಮ್ಮೆ ನೋಡುತ್ತಾ ಏನೋ ಕೇಳಬೇಕೆನ್ನುವ ರೀತಿ ನಿಂತಳು.’ಎರಿಕ್ ಏನಾಯಿತು? ಏನು ಹೇಳು’ ಎಂದನು. ಸುಶೀಲ ‘ನಾವು ಇಲ್ಲಿಂದ ಹೋಗುವುದು ಎಲ್ಲಿಗೆ? ನಮ್ಮ ಧರ್ಮ ಬೇರೆ ಸಮಾಜದಲ್ಲಿ ಹೇಗೆ ಬಾಳುವುದು’ ಎಂದಳು. ಈಗ ಲೋಕದ ಅರಿವು ಬಂದಂತೆ! ಎರಿಕ್ ‘ನಿನಗ್ಯಾಕೆ ನನ್ನ ಮೇಲೆ ನಂಬಿಕೆ ಇಲ್ವಾ?’ ಎಂದನು. ಸುಶೀಲ ‘ಛೇ…ಛೇ …ಹಾಗಲ್ಲ…’ ಎಂದಳು. ಎರಿಕ್ ‘ಮತ್ತೇನು? ನಾವು ಕುಂದಾಪುರಕ್ಕೆ ಹೋಗೋಣ. ಅಲ್ಲಿ ಯಾರಿಗೆ ಗೊತ್ತು? ನೀನು ಮದುವೆಯಾಗಿ ಗಂಡನನ್ನು ಬಿಟ್ಟು ಬರುತ್ತಿರುವ ಬಗ್ಗೆ. ನನ್ನ, ನಿನ್ನ ಧರ್ಮ ಬೇರೆ ಎಂದು. ಅಲ್ಲಿ ನನ್ನ ಸ್ನೇಹಿತ ಇದ್ದಾನೆ. ಅವನಿಗೆ ಹೇಳಿ ಮನೆಯ ವ್ಯವಸ್ಥೆ ಮಾಡಿಸುತ್ತೇನೆ. ಒಂದೆರಡು ದಿನ ಹೋಟೆಲ್ ನಲ್ಲಿದ್ದರೆ ಆಯಿತು. ಅಲ್ಲಿನ ಜನ ನಾನು, ನೀನು ಗಂಡ ಹೆಂಡತಿ ಗೌರಿ ನಮ್ಮ ಮಗಳು ಎಂದುಕೊಳ್ಳುತ್ತಾರೆ. ಅವಳಿಗೆ ಗೌರಿ ಬದಲು ಬೇರೆ ಹೆಸರಿಡುವ’ ಎಂದು ಹೇಳುತ್ತಾನೆ. ಈಗ ಸುಶೀಲಳಿಗೆ ಸಮಾಧಾನವಾದರು ಒಳಗೊಳಗೇ ಭಯ ಪಡುತ್ತಾಳೆ. ಆದರೆ ಎರಿಕ್ ಬಿಟ್ಟು ಬದುಕುವ ಶಕ್ತಿ ಸುಶೀಲಳಿಗೆ ಇರಲಿಲ್ಲ.
‘ಸರಿ… ನಾನು ಮಗು ಕರೆದುಕೊಂಡು ಬರುತ್ತೇನೆ.’ ಎಂದು ಎರಿಕ್ ಕೈಯನ್ನು ಬಿಗಿಯಾಗಿ ಹಿಡಿದು ‘ಅವನ ಮುಖವನ್ನೊಮ್ಮೆ ನೋಡಿ ಬರುತ್ತೇನೆ’ ಎಂದು ಹೇಳಿ ಹೊರಟಳು. ಮನೆಯೊಳಗೆ ಹೋದೊಡನೆ ಮಗು ತನ್ನ ಪುಟ್ಟ ಹೆಜ್ಜೆಗಳನ್ನಿಡುತ್ತಾ ‘ಅಮ್ಮಾ…’ ಎಂದು ಸುಶೀಲಾ ಬಳಿ ಓಡಿ ಬಂದಿತು. ಗೌರಿಯನ್ನು ಎತ್ತಿಕೊಂಡಳು. ಸುಶೀಲಾಳಿಗೆ ಕೆಲಸದಾಕೆ ನಿಂಗಿ ‘ಅಮ್ಮ, ಮಗುವಿಗೆ ಹಾಲು ಕುಡಿಸಿ, ಸ್ನಾನ ಮಾಡಿಸಿ ಸ್ವಲ್ಪ ತಿಂಡಿಯನ್ನು ತಿನ್ನಿಸಿದ್ದೇನೆ. ನಿಮಗೂ ತರಲೆ?’ ಎಂದು ಕೇಳಿದಳು. ಸುಶೀಲ ‘ಬೇಡ. ದೇವಸ್ಥಾನಕ್ಕೆ ಹೋಗಿ ಬರುತ್ತೇನೆ.’ ಎಂದು ಹೇಳಿ ಮಗುವನ್ನು ಎತ್ತಿಕೊಂಡು ಕೋಣೆಯ ಕಡೆ ಹೋಗುತ್ತಾಳೆ. ಆದರೆ ಅವಳಿಗೆ ಬಟ್ಟೆಯನ್ನು ತೆಗೆದುಕೊಂಡು ಹೋಗುವುದು ಕಷ್ಟ ಎಂದನಿಸುತ್ತದೆ. ಅದಕ್ಕೆ ಹಣ ಮತ್ತು ಒಡವೆಗಳನ್ನು ಮಾತ್ರ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗುವ ರೀತಿ ಕಾಯಿ ಹಣ್ಣು, ಹೂವನ್ನು ತೆಗೆದುಕೊಂಡು ಮನೆಯಿಂದ ಹೊರಗೆ ನಡೆಯುತ್ತಾಳೆ. ಒಮ್ಮೆ ಮನೆಯ ಕಡೆ ಹಿಂದಿರುಗಿ ನೋಡಿ, ಇಂದಿಗೆ ಈ ಮನೆಯ ಋಣ ತೀರಿತು ಎಂದುಕೊಳ್ಳುತ್ತಾಳೆ. ಅವಳನ್ನು ಅಂದು ಹೇಳುವವರು, ಕೇಳುವವರು ಯಾರೂ ಇರಲಿಲ್ಲ.
ಮುಕುಂದಯ್ಯನ ತಂದೆ ತಾಯಿ ತೀರ್ಥಯಾತ್ರೆಗೆ ಹೋಗಿ ಹದಿನೈದು ದಿನಗಳಾಗಿತ್ತು.ಮುಕುಂದಯ್ಯನನ್ನು ಇಲ್ಲ. ಇನ್ಯಾರು? ತಡೆಯಲು ಸಾಧ್ಯ ಸುಶೀಲಳನ್ನು. ಅವಳು ಮಾತ್ರ ಗಂಡ, ಅತ್ತೆ, ಮಾವ, ಮನೆ ಯಾರ ಬಗ್ಗೆಯೂ ಯೋಚನೆ ಮಾಡದೆ ಮನೆಯಿಂದ ಬಸ್ ಸ್ಟ್ಯಾಂಡ್ ಕಡೆ ಹೊರಟಳು. ಆದರೆ ಅಷ್ಟರಲ್ಲಿ ಎರಿಕ್ ಒಂದು ಬಾಡಿಗೆ ಕಾರು ಮಾಡಿಕೊಂಡು ಅವಳ ಮನೆಯಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಲ್ಲಿಸಿಕೊಂಡಿದ್ದ. ಅವಳು ಬರುತ್ತಿದ್ದನ್ನು ಕಂಡೊಡನೆ ಕಾರು ಮುಂದೆ ಸರಿಸಲು ಹೇಳಿ ಅವಳ ಮುಂದೆ ನಿಲ್ಲಿಸಲು ಹೇಳಿದ. ಅವಳು ಕಾರು ಯಾವುದೆಂದು ತಿಳಿಯದೇ ಗಾಬರಿಯಿಂದ ನಿಂತಳು. ಕಾರಿನೊಳಗೆ ಎರಿಕ್ ಇರುವುದನ್ನು ಗಮನಿಸಿ ಬೇಗನೆ ಕಾರು ಹತ್ತಿದಳು. ಹತ್ತಿ ತಕ್ಷಣವೇ ಹಿಂದೆವರಿಗೆ ಕುಳಿತಳು. ಯಾರು ನಮ್ಮನ್ನು ಪರಿಚಯದವರು ನೋಡದಿದ್ದರೆ ಸಾಕು
ಎಂದು. ಎರಿಕ್ ‘ಧೈರ್ಯವಾಗಿರು. ಏನೂ ಆಗುವುದಿಲ್ಲ. ನಾನು ನಿನ್ನ ಜೊತೆ ಇದ್ಧೆನೇ ;ಎಂದು
ವಿಶ್ವಾಸ ತುಂಬಿದ. ಮಗುವನ್ನು ಎತ್ತಿಕೊಂಡು ಅದನ್ನು ಆಡಿಸುತ್ತ ಹಾಗೆ ಮಲಗಿಸಿದ. ಸುಶೀಲಾ ಎರಿಕ್ ಮತ್ತು ಮಗುವನ್ನು ಹಾಗೆ ನೋಡುತ್ತಾ ತನ್ನ ಹಿಂದಿನ ಕಥೆಯನ್ನು ನೆನೆಸಿಕೊಳ್ಳುತ್ತಾ
ಎರಿಕ್ ಭುಜಕ್ಕೆ ಒರಗಿ ಹಾಗೆ ಕಣ್ಣು ಮುಚ್ಚಿ ಮಲಗಿದವಳು ಏಳಲೇ ಇಲ್ಲ..
ಎರಿಕ್ ನೇ ಎದ್ದ ಮಗುವನ್ನು ಆಡಿಸಿ ಹಣ್ಣು ಬಿಸ್ಕೆಟ್ ತಿನ್ನಿಸಿ ಸಂಭಾಳಿಸಿದ. ಕುಂದಾಪುರ ತಲುಪಿದಾಗ ಸಂಜೆಯಾಯಿತು ಒಂದು ಲಾಡ್ಜ್ ಬಳಿ ಹೋಗಲು ಡ್ರೈವರ್ ಗೆ ಸೂಚಿಸಿದ. ಮತ್ತೆ ಮಗು ಹಸಿವಿನಿಂದ ಅಳುತ್ತಿತ್ತು. ಎರಿಕ್, ಸುಶೀಲಳನು ಲಾಡ್ಜ್ ಬಂದೊಡನೆ ಎಬ್ಬಿಸಿದ ಸುಶೀಲ ಮತ್ತು ಎರಿಕ್ ಬೆಳಗಿನಿಂದ ಏನೂ ತಿಂದಿರಲಿಲ್ಲ. ಅವರಿಬ್ಬರೂ ಸುಸ್ತಾಗಿದ್ದರು. ಮೊದಲು ಲಾಡ್ಜ್ ನಲ್ಲಿ ರೂಮ್ ಮಾಡಿ, ಬ್ಯಾಗ್ ನ್ನೆಲ್ಲಾರೂಮಿನ ಕಡೆಗೆ ತೆಗೆದುಕೊಂಡು ಹೊರಟರು. ಊಟ ತರಿಸಲು ಮ್ಯಾನೇಜರ್ ಗೆ ಹೇಳಿದ. ಮ್ಯಾನೇಜರ್ಗೆ ಮಗು ಅಳುವುದನ್ನು ನೋಡಲಾಗಲಿಲ್ಲ. ಪಕ್ಕದಲ್ಲಿರುವ ಟೀ ಅಂಗಡಿಯವನಿಗೆ ಒಂದು ಲೋಟ ಹಾಲನ್ನು ಹೇಳಿ, ರೂಂಬಾಯ್ ಜೊತೆ ಕೊಟ್ಟು ಕಳುಹಿಸಿದ. ಮಗು ಹಾಲು ಕುಡಿದ ನಂತರ ಸುಮ್ಮನಾಗಿ ಆಡಲು ಶುರು ಮಾಡಿತ್ತು ಅಷ್ಟರಲ್ಲಿ ಹುಡುಗ ಊಟವನ್ನು ತಂದುಕೊಟ್ಟ ಇಬ್ಬರು ಹಸಿದಿದ್ದರಿಂದ ಏನೂ ಮಾತನಾಡದೆ ಊಟವನ್ನು ಮಾಡಿದರು. ಎರಿಕ್ ‘ನಾನು, ಸ್ನೇಹಿತನನ್ನು ಭೇಟಿಯಾಗಿ ಬೇಗ ಬರುತ್ತೇನೆ. ಹೆದರಬೇಡ. ಇಲ್ಲಿ ಯಾವುದೇ ಭಯವಿಲ್ಲ. ನಿಶ್ಚಿಂತೆಯಾಗಿರು. ರೂಮ್ ಬಾಗಿಲು ಹಾಕಿಕೋ’ ಎಂದು ಹೇಳಿ ಹೊರಟನು. ಸುಶೀಲಳು ‘ಸರಿ’ ಎಂದು ಬಾಗಿಲು ಹಾಕಿ ಕೊಂಡಳು. ಮಗುವನ್ನು ಆಟ ಆಡಿಸಿ, ಸಂಜೆ ತಂದಿದ್ದ ಊಟವನ್ನು ಸ್ವಲ್ಪ ಎತ್ತಿಟ್ಟಿದ್ದಳು. ಮಗುವಿಗೆ ಅದನ್ನೇ ತಿನ್ನಿಸಿದಳು. ಮಗು ಆಡುತ್ತಾ ಹಾಗೇ ಮಲಗಿತು. ಎಷ್ಟೊತ್ತಾದರೂ ಎರಿಕ್ ಬರಲಿಲ್ಲ. ಅವನು ಬರುವುದು ತಡವಾಗಿಯಿತು. ಎರಿಕ್ ನನ್ನು’ ಏಕೆ ತಡವಾಗಿ ಬಂದೆ? ಏನಾಯಿತು? ಹೋದ ಕೆಲಸ’ ಎಂದು ಪ್ರಶ್ನೆ ಮೇಲೆ ಪ್ರಶ್ನೆಯನ್ನು ಮಾಡ ತೊಡಗಿದಳು. ಎರಿಕ್ ಸ್ವಲ್ಪ ‘ಇರು ಮಾರಾಯ್ತಿ. ಮೊದಲು ಕುಳಿತುಕೊಳ್ಳಲು ಬಿಡು’ ಎಂದು ಹೇಳಿ ‘ನನ್ನ ಸ್ನೇಹಿತ ಒಂದು ಖಾಲಿ ಮನೆಯನ್ನು ತೋರಿಸಿದ್ದಾನೆ. ತಿಂಗಳಿಗೆ ನೂರೆಂಬತ್ತು ರೂ ಬಾಡಿಗೆ. ಎಂಟು ನೂರು ಅಡ್ವಾನ್ಸ್. ಮುನ್ನೂರು ರೂಪಾಯಿ ಮುಂಗಡ ಕೊಟ್ಟು ಬಂದಿದ್ದೇನೆ. ಮಿಕ್ಕಿದ್ದು ಹದಿನೈದು ದಿನದೊಳಗೆ ಕೊಡಬೇಕು. ನಾಳೆ ಬೆಳಗ್ಗೆಯೇ ಅಲ್ಲಿಗೆ ಹೋಗುವ. ಮನೆಗೆ ಬೇಕಾದ ಸಾಮಾನುಗಳನ್ನು ನಾಳೆ ಪೇಟೆಗೆ ಹೋಗಿ ತೆಗೆದುಕೊಂಡು ಬರೋಣ’ ಎಂದನು. ಸುಶೀಲ ‘ಆಯಿತು. ನನಗೆ ಮತ್ತು ಮಗುವಿಗೂ ಬಟ್ಟೆ ಇಲ್ಲ. ನಾನೇನು ತಂದಿಲ್ಲ. ನನ್ನ ಹತ್ತಿರವೂ ಸ್ವಲ್ಪ ಹಣ ಇದೆ. ನಾಳೆ ಎಲ್ಲವನ್ನೂ ತರೋಣ’ ಎಂದಳು. ಎರಿಕ್ ನಿಟುಸಿರು ಬಿಡುತ್ತಾ..’ಸದ್ಯಕ್ಕೆ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾಳೆ ಮನೆ ಕೆಲಸ ಮುಗಿಸಿ. ನಾನು ಕೆಲಸ ಹುಡುಕುತ್ತೇನೆ’ ಎಂದನು. ಇಬ್ಬರೂ ಸಂತೋಷದಿಂದ ಹಾಗೇ ಮುಕುಂದಯ್ಯ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಈಗ ಹೇಗಿರುತ್ತದೆ? ಎಂದು ಮಾತನಾಡುತ್ತಿದ್ದರು. ತಕ್ಷಣ ಸುಶೀಲ ‘ಇನ್ನೂ ಆ ವಿಚಾರ ನಮಗೆ ಬೇಡ. ನನ್ನ ತಂದೆ, ತಾಯಿಯನ್ನು ಮರೆತ ನನಗೆ ಆ ಕುರೂಪಿಯೂ ಮರೆಯಲಾಗದೆ? ಅವನ ಆಸ್ತಿಯನ್ನು ತೋರಿಸಿ, ನನ್ನ ತಂದೆ ಬಳಿ ನನ್ನನ್ನು ಮದುವೆಯಾದ ಅವನ ವಿಚಾರ ಮಾತನಾಡುವುದು ಬೇಡ. ಇನ್ನು ನಾನು, ನೀನು ಮತ್ತು ನಮ್ಮ ಜೀವನ ಅಷ್ಟೇ’ ಎಂದಳು. ಕೋಪದಿಂದ ಎರಿಕ್ ‘ಆಯಿತು… ಆಯಿತು… ನೀನು ಸಮಾಧಾನವಾಗಿರು. ನಾಳೆ ತುಂಬಾ ಕೆಲಸ ಇದೆ. ಈಗ ಮಲಗು’ ಎಂದು ಅವಳ ತಲೆ ಸವರಿದ ಇಬ್ಬರಿಗೂ ನಿದ್ದೆ ಹತ್ತಿತ್ತು.
ಬೆಳಗಾಗುತ್ತಿದ್ದಂತೆ ಸುಶೀಲ ಮತ್ತು ಎರಿಕ್ ಎದ್ದು ಮುಖ ತೊಳೆದುಕೊಂಡರು ಅಷ್ಟರಲ್ಲಿ ಗೌರಿಯೂ ಎದ್ದಳು. ಅವಳಿಗೂ ಮುಖ ತೊಳಿಸಿ ರೂಮ್ ಖಾಲಿ ಮಾಡಿ ಮ್ಯಾನೇಜರ್ ಗೆ ಅರವತ್ತು ರೂಪಾಯಿ ಬಿಲ್ ಕೊಟ್ಟು ಹೊರಗೆ ಬಂದು ರಿಕ್ಷಾ ಕರೆದು ರಿಕ್ಷಾದಲ್ಲೇ ಹೊಸ ಬಾಡಿಗೆ ಮನೆ ಕಡೆಗೆ ನಡೆದರು. ಮಗು ಆಟವಾಡುತ್ತಿದ್ದನು ಗಮನಿಸಿದ. ರಿಕ್ಷಾವಾಲಾ ಮಗು ಮುದ್ದಾಗಿದೆ. ಏನು ಹೆಸರು ಎಂದ. ಸುಶೀಲ ಮತ್ತು ಎರಿಕ್ ಮುಖ ಮುಖ ನೋಡಿಕೊಂಡರು. ಎರಿಕ್ ಏನೋ ಹೊಳೆದವನಂತೆ ತಕ್ಷಣ “ಜೂಲಿ” ಮಗು ಹೆಸರು ಜೂಲಿ ಎಂದನು, ಮುದ್ದು ಗೌರಿ ಈಗ ಜೂಲಿಯಾದಳು ಮನೆ ಬoದಿತು ಆಟೋದವನಿಗೆ ಹನ್ನೆರಡು ರೂ ಕೊಟ್ಟು ಮನೆ ಕಡೆ ಬಂದರು, ಸುಶೀಲ ಎರಿಕ್ ನನ್ನು ನೋಡಿ ಜೂಲಿ ಹೆಸರು ಚೆನ್ನಾಗಿದೆ ಎಂದು ಮುಗುಳ್ನಕ್ಕಳು.
ಎರಿಕ್ ‘ನೀನೇ ಈ ಮನೆ ಮಹಾರಾಣಿ. ಕೀ ತೆಗೆದು ಮೊದಲು ನೀನು ಒಳಗೆ ನಡೆ’ ಎಂದು ಅವಳ ಬಳಿ ಇದ್ದ ಮಗುವನ್ನು ಎತ್ತಿಕೊಂಡುನು. ಅವಳು ಕೀ ತೆಗೆದು ಬಲಗಾಲಿಟ್ಟು ಗೃಹ ಪ್ರವೇಶ ಮಾಡಿದಳು. ಒಳಬಂದು ಸುತ್ತಮುತ್ತ ಕಣ್ಣು ಆಡಿಸಿದಳು ಹಿಂದಿನಿಂದ ಬಂದು ಅವಳ ಕಿವಿಯ ಬಳಿ ‘ಮನೆ ಚಿಕ್ಕದಾಯಿತು’ ಎಂದನು. ಸುಶೀಲ ಹಿಂದೆ ತಿರುಗಿ ಎರಿಕ್ ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ‘ಮನೆ ಹೇಗಾದರೂ ಇರಲಿ ನೀನು, ನನ್ನ ಜೊತೆ ಇದ್ದರೆ ಅಷ್ಟೇ ಸಾಕು. ಗುಡಿಸಲಾದರು ಸರಿ’ ಎಂದಳು. ಎರಿಕ್ ಸುಶೀಲಳನ್ನು ಅಪ್ಪಿ ಮುತ್ತನಿಟ್ಟನ್ನು ಸುಶೀಲ ನಾಚಿದಳು. ಸುಶೀಲ ಮನೆಯನ್ನು ನೋಡಿ ಬೀಗ ಹಾಕಿಕೊಂಡು ಜೂಲಿಯನ್ನು ಎತ್ತಿಕೊಂಡು ಮನೆ ಸಾಮಾನು ತರಲು ಹೊರಟರು. ಮೊದಲು ಅಲ್ಲೇ ಇದ್ದ ಹೋಟೆಲ್ ಹೊಟೇಲಿನಲ್ಲಿ ಮೂವರು ತಿಂಡಿ ಮುಗಿಸಿ ಒಂದು ಬಾಟಲಿಯಲಿ ಜೂಲಿಗೆ ಹಾಲು ಹಾಕಿಸಿಕೊಂಡು ಸೀಮೆ ಎಣ್ಣೆ ಸ್ಟವ್ . ದಿನಸಿ, ಸೀಮೆಎಣ್ಣೆ, ತರಕಾರಿ, ಚಾಪೆ,
ದಿಂಬು, ಹೊದಿಕೆ, ಮತ್ತು ಜೂಲಿ ಸುಶೀಲಗೆ ನಾಲ್ಕು ನಾಲ್ಕು ಜೊತೆ ಬಟ್ಟೆಯನ್ನು ತೆಗೆದುಕೊಂಡು ಮಧ್ಯಾಹ್ನದ ಊಟವನ್ನು ಮುಗಿಸಿಕೊಂಡು ಮನೆಗೆ ಹೋಗುವಷ್ಟರಲ್ಲಿ ಹತ್ತಿರ ಹತ್ತಿರ ನಾಲ್ಕು
ಗಂಟೆಯಾಯಿತು. ಮೂವರು ಸುಸ್ತಾಗಿದ್ದರು. ಸ್ವಲ್ಪ ವಿಶ್ರಮಿಸಿ ಮಗುವನ್ನು ಚಾಪೆ ಮೇಲೆ ಹಾಕಿ ಆಡಲು ಬಿಟ್ಟು ಇಬ್ಬರು ಎಲ್ಲಾ ಸಾಮಾನುಗಳನ್ನು ಅದರದರ ಜಾಗದಲ್ಲಿ ಪೇರಿಸುವುದರಲ್ಲಿ ಮಗ್ನರಾದರು. ಸತತ ಒಂದೂವರೆ ಗಂಟೆ ನಂತರ ಅವರ ಕೆಲಸ ಮುಗಿಯಿತು.
ಸುಶೀಲ ಮಗುವಿಗೆ ಹಾಲು ಮತ್ತು ಅವರಿಬ್ಬರಿಗು ಕಾಫಿ ಮಾಡಿಕೊಂಡು ಬಂದಳು. ಮಗುವಿಗೆ ಹಾಲು ಕುಡಿಸುತ್ತಾ ಅವರಿಬ್ಬರು ಕಾಫಿ ಕುಡಿದರು. ಎರಿಕ್ ‘ಹೇಗೋ ಮನೆ ಕೆಲಸ ಮುಗಿಯಿತಲ್ಲ. ನಾನು ನನ್ನ ಸ್ನೇಹಿತನನ್ನು ಭೇಟಿಯಾಗಿ ಕೆಲಸದ ವಿಚಾರ ಮಾತನಾಡಿಕೊಂಡು ಬರುತ್ತೇನೆ. ಅಡುಗೆ ಮಾಡಿರು’ ಎಂದು ಹೇಳಿ ಹೊರಟ ಸರಿ ಎಂದು ಸುಶೀಲಾ. ಅತ್ತ ಎರಿಕ್ ಹೋದೊಡನೆ ಮಗುವನ್ನು ಆಡಿಸುತ್ತಾ ಹಾಗೆ ಅಡುಗೆ ಮಾಡಿದಳು ಮಗುವಿಗೆ ಬಿಸಿಯಾಗಿದ್ದಾಗಲೇ ತಿನ್ನಿಸಿ ಅವಳು ಎರಿಕ್ ಗಾಗಿ ಕಾಯುತ್ತಾ ಬಾಗಿಲು ಕಡೆ ಮುಖ ಮಾಡಿ ಮಗುವಿನ ಜೊತೆ ಆಡುತ್ತಾ ಕುಳಿತಳು. ಗಂಟೆ ಒಂಬತ್ತಾದರೂ ಎರಿಕ್ ಬರಲಿಲ್ಲ. ಮಗು ನಿದ್ದೆ ಬಂದು ಅಳತೊಡಗಿತ್ತು. ಎತ್ತಿ ಭುಜದ ಮೇಲೆ ಹಾಕಿಕೊಂಡು ಮಲಗಿಸಿದಳು. ಮಗು ಮಲಗಿದ ನಂತರ ಚಾಪೆಯ ಮೇಲೆ ಹಾಕಿ ಮಗುವಿಗೆ ಹೊದ್ದಿಸಿ ಬಾಗಿಲ ಬಳಿ ಬಂದು ನಿಂತಳು. ಸ್ವಲ್ಪ ಸಮಯದ ಬಳಿಕ ಎರಿಕ್ ಬಂದ ಸುಶೀಲ ಕಾದು ಸುಸ್ತಾಗಿದ್ದಳು. ಅವನು ಬಂದೊಡನೆ ಖುಷಿಯಿಂದ ನನಗೆ ಕೆಲಸ ಸಿಕ್ಕಿತ್ತು. ಬಾಳೆ ಮತ್ತು ತೆಂಗು ಮಂಡಿಯಲ್ಲಿ ಲೆಕ್ಕ ಬರೆಯುವುದು. ತಿಂಗಳಿಗೆ ಆರುನೂರು ಸಂಬಳ ನಾಳೆಯಿಂದಲೇ ಕೆಲಸಕ್ಕೆ ಹೋಗಬೇಕು. ತಗೋ ಎಂದು ತಂದಿದ್ದ ಹಣ್ಣಿನ ಬ್ಯಾಗನ್ನು ಕೊಟ್ಟನು. ಹಾಗೆ ಆ ಬ್ಯಾಗಿನಲ್ಲಿ ಒಂದು ಸಾರಾಯಿ ಬಾಟಲ್ ಕೂಡ ಇತ್ತು. ಸುಶೀಲಗೆ ಎರಿಕ್ ಮದ್ಯ ವ್ಯಸನಿ ಎಂದು ಮುಂಚೆಯೇ ಗೊತ್ತಿತ್ತು. ಅವನು ಹೊಟ್ಟೆ ಹಸಿದಿದೆ. ಬೇಗ ರೆಡಿ ಮಾಡು ಕೈಕಾಲು ತೊಳೆದುಕೊಂಡು ಬರುತ್ತೇನೆ ಎಂದು ಹಾಗೆ ಊಟದ ಜೊತೆಗೆ ಆ ಬ್ಯಾಗಿನಲ್ಲಿ ಉಪ್ಪಿನಕಾಯಿ ಬಾಟೆಲ್ ಇದೆ. ಅದು ತೆಗೆದಿಡು ನಿನ್ನೆಯಿಂದ ಓಡಾಡಿ ಓಡಾಡಿ ಮೈಕೈ ನೋವಾಗಿದೆ ಎಂದನು. ಸುಶೀಲ ಸರಿ ಎಂದು ತಲೆಯಾಡಿಸಿ ಊಟಕ್ಕೆ ರೆಡಿ ಮಾಡಿದಳು. ಎರಿಕ್ ಬಂದನು ಒಂದು ಬಟ್ಟಲಿನಲ್ಲಿ ಉಪ್ಪಿನಕಾಯಿ ಅನ್ನ, ಸಾರು ತಂದು ಕೂತಳು.
ಅವನು ಎರಡು ಲೋಟಕ್ಕೆ ಸಾರಾಯಿ ಸುರಿದ ಸುಶೀಲ ಒಂದು ಲೋಟ ನಿನಗೆ, ಇನ್ನೊಂದು ಯಾರಿಗೆ ಎಂದು ಪ್ರಶ್ನಿಸುವಂತೆ ಅವನ ಮುಖ ನೋಡಿದಳು. ಎರಿಕ್ ಒಂದು ಲೋಟ ತೆಗೆದುಕೊಂಡು ಇನ್ನೊಂದನ್ನು ಸುಶೀಲಾಗೆ ಕೊಟ್ಟನು. ಸುಶೀಲ ‘ಬೇಡ ನನಗೆ ಅಭ್ಯಾಸವಿಲ್ಲ’ ಎಂದಳು. ‘ಏಕೆ? ಏನೂ ಆಗುವುದಿಲ್ಲ. ನೀನು ಸುಸ್ತಾಗಿದ್ದೀಯ ತಗೋ. ತುಂಬಾ ಚೆನ್ನಾಗಿರುತ್ತೆ. ಒಳ್ಳೆ ನಿದ್ದೆ ಬರುತ್ತೆ. ನಾನು ಕುಡಿಯುತ್ತಿಲ್ಲವ ಹಿಡಿ’ ಎಂದನು. ಸುಶೀಲ ‘ಬೇಡ’ ಎಂದಳು. ಆದರೆ ಎರಿಕ್ ಕೇಳಲಿಲ್ಲ. ‘ನೀನು ಕುಡಿಯುತ್ತೀಯೋ ಇಲ್ಲವಾ’ ಎಂದನು, ಸುಶೀಲಾ ಅವನ ಹಠಕ್ಕೆ ಮಣಿದು ಕುಡಿಯಬೇಕಾಯಿತ. ಕುಡಿದು ಊಟ ಮಾಡಿ ಮಲಗಿದರು.
ಬೆಳಗ್ಗೆ ಎದ್ದು ಎರಿಕ್ ಸ್ನಾನ ಮಾಡಿ ತಿಂಡಿ ಮುಗಿಸಿ ಸ್ವಲ್ಪ ಸಮಯ ಜೂಲಿಯೊಂದಿಗೆ ಆಡಿ ಕೆಲಸಕ್ಕೆ ಹೊರಟರೆ ಹೆಚ್ಚು ಕಡಿಮೆ ಮನೆ ಬರುವುದು ರಾತ್ರಿ ಯಾಗುತ್ತಿತ್ತು. ಅಷ್ಟರಲ್ಲಿ ಜೂಲಿ ಮಲಗಿರುತ್ತಿದ್ದಳು. ಇವನು ಬರುತಾ ದಿನ ಬಾಟಲಿ ಹಿಡಿದು ಬರುತ್ತಿದ್ದಾ. ಪ್ರಾರಂಭದಲ್ಲಿ ಒಲ್ಲೆ ಎನ್ನುತ್ತಿದ್ದ ಸುಶೀಲ ಈಗ ಸಾರಾಯಿ ಇಲ್ಲದೆ ಮಲಗುತ್ತಿರಲಿಲ್ಲ. ಅವಳೂ ಸಾರಾಯಿಗೆ ದಾಸಿಯಾದಳು. ಅವಳ ನೆರೆಹೊರೆಯವರಿಗೂ ಸ್ವಲ್ಪವೂ ಅನುಮಾನ ಬರಲಿಲ್ಲ. ಎಲ್ಲರೂ ಎರಿಕ್ ಸುಶೀಲ ದಂಪತಿಗಳು ಜೂಲಿ ಅವರ ಮಗಳು ಎಂದುಕೊಂಡರು. ಹೀಗೆ ಆರು ತಿಂಗಳು ಕಳೆಯುವಷ್ಟರಲ್ಲಿ ಸುಶೀಲ ಗರ್ಭಿಣಿಯಾದಳು. ಈಗ ಜೂಲಿಯ ಕಡೆ ಗಮನ ಸ್ವಲ್ಪ ಕಡಿಮೆಯಾಯಿತು. ಸುಶೀಲ ಮಗುವಿಗೆ ಸರಿಯಾಗಿ ಗಮನ ಕೊಡುತ್ತಿರಲಿಲ್ಲ. ಎರಿಕ್ ಈಗ ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಮನೆಯಲ್ಲಿದ್ದಾಗಲೆಲ್ಲ ಕುಡಿತವೇ ಅವರಿಗೆ ಖುಷಿ ಕೊಡುತ್ತಿತ್ತು. ಜೂಲಿ ಹಸಿವಿನಿಂದ ಅತ್ತರೆ ಮಗುವಿಗೆ ಸುಶೀಲ ಹಾಲು ಕೂಡ ನೀಡುತ್ತಿರಲಿಲ್ಲ. ಹೀಗೆ ನಡೆಯುತ್ತಿತ್ತು. ಒಂಬತ್ತು ತಿಂಗಳ ನಂತರ ಇನ್ನೊಂದು ಹೆಣ್ಣು ಮಗುವಿಗೆ ಸುಶೀಲ ಜನ್ಮ ನೀಡಿದಳು ಆ ಮಗುವಿಗೆ ಅದರ ಮೂರನೇ ತಿಂಗಳಿನಲ್ಲಿ ಬೇಬಿ ಎಂದು ನಾಮಕರಣವೂ ಆಯಿತು. ಅಕ್ಕ ಪಕ್ಕದವರು ಮತ್ತು ಬಾಳೆ, ಕಾಯಿ ಮಂಡಿಯವರನ್ನು ಕರೆದು ನಾಮಕರಣವನ್ನು ಮಾಡಿದರು. ಬೇಬಿ ಬಂದ ಮೇಲೆ ಜೂಲಿ ಅಪ್ಪ, ಅಮ್ಮನಿಂದ ಸ್ವಲ್ಪ ಜಾಸ್ತಿಯೇ ದೂರವಾಯಿತು. ಬೇಬಿಗೆ ಹತ್ತನೇ ತಿಂಗಳು ನಡೆಯುತ್ತಿತ್ತು. ಜೂಲಿಗೆ ದೊಡ್ಡ ಅಮ್ಮ ಎಂಬ ಸಾಂಕ್ರಾಮಿಕ ರೋಗ ಬಂದಿತು. ಜೂಲಿ ಮೈತುಂಬಾ ದೊಡ್ಡ ದೊಡ್ಡ ಬೊಬ್ಬೆಗಳಾಗಿ ಸರಿಯಾದ ಆರೈಕೆ ಸಿಗದೇ ಪರದಾಡಿತು. ಇದರ ಪರಿಣಾಮ ಎರಿಕ್ ಮತ್ತು ಸುಶೀಲಳ ಮುದ್ದು ಮಗಳಾಗಿದ್ದ ಬೇಬಿಗೆ ಹರಡಿತು. ಎಷ್ಟು ಶುಶ್ರೂಷೆ ಮಾಡಿದರೂ ಸಣ್ಣ ಮಗುವಾದ್ದರಿಂದ ನೋವನ್ನು ಮತ್ತು ವಿಪರೀತ ಜ್ವರವನ್ನು ತಡೆಯಲಾಗಲಿಲ್ಲ. ಪರಿಣಾಮ ಹಾಲು ಕೂಡಾ ಕುಡಿಯುತ್ತಿರಲಿಲ್ಲ. ಮುದ್ದಾಗಿದ್ದ ಬೇಬಿ ದೊಡ್ಡ ಅಮ್ಮನಿಗೆ ಶರಣಾಗಿ ಕೊನೆಯುಸಿರೆಳೆಯಿತು.
ಎರಿಕ್ ಮತ್ತು ಸುಶೀಲ ನೊಂದು ಕಣ್ಣೀರಿಟ್ಟು ದೂಷಿಸಿದ್ದು ಏನೂ ಅರಿಯದ ನಾಲ್ಕು ವರ್ಷದ ಜೂಲಿಯನ್ನು. ನಿನ್ನಿಂದ ನನ್ನ ಮಗು ದೂರವಾಯಿತು ಎಂದು ಹೊಡೆಯುತ್ತಿದ್ದಳು. ಜೂಲಿ ರೋಗದಿಂದ ಚೇತರಿಸಿಕೊಂಡಿತು. ಜೂಲಿಯನ್ನು ಸುಶೀಲ ಮತ್ತು ಎರಿಕ್ ಕಾಟಾಚಾರಕ್ಕೆ ಸಾಕುತ್ತಿದ್ದರು. ಸುಶೀಲ ಇದು ನನ್ನ ಮಗುವಲ್ಲ. ಬೇರೆಯವನ ಮಗು ಎಂದು ಮೂದಲಿಸುತ್ತಿದ್ದಳುಮಗುವನ್ನು ಕರೆದುಕೊಂಡು ಹೋಗಿ ಅಂಗನವಾಡಿಗೆ ಸೇರಿಸಿದರು. ಇವರಿಬ್ಬರ ಕುಡಿತ ಹೆಚ್ಚುತ್ತಾ ಹೋಯಿತು. ಮತ್ತೆ ಒಂದೂವರೆ ವರ್ಷಕ್ಕೆ ಸುಶೀಲ ಮತ್ತೆ ಒಂದು ಗಂಡು ಮಗುವಿಗೆ ಜನ್ಮ ನೀಡಿದಳು. ಜೂಲಿ ಒಂದನೇ ತರಗತಿಗೆ ಹೋಗುತ್ತಿದ್ದಳು. ಚೆನ್ನಾಗಿ ಓದುತ್ತಿದ್ದಳು. ಐದೂವರೆ ವರ್ಷದ ಆ ಪುಟ್ಟ ಹುಡುಗಿ ಶಾಲೆಯಿಂದ ಬಂದ ನoತರ ಸುಶೀಲ ಸಣ್ಣ ಪುಟ್ಟ ಮನೆ ಕೆಲಸ ಮಾಡಿಸುತ್ತಿದ್ದಳು. ಹೀಗೆ ಆ ಸಣ್ಣದಾದ ಮಗುವಿಗೆ ಮೂರು ವರ್ಷ ತುಂಬುವಷ್ಟರಲ್ಲಿ ಈ ಜೂಲಿ ನಾಲ್ಕನೇ ತರಗತಿಗೆ ಹೋಗುತ್ತಿತ್ತು. ಮನೆಗೆ ಬಂದು ಪಾತ್ರೆ ತೊಳೆಯುವುದು. ಶಾಲೆಗೆ ಹೋಗುವ ಮೊದಲು ಕಸ ಗುಡಿಸುವುದು. ತಮ್ಮ ಡೇವಿಡ್ನನ್ನು ನೋಡಿಕೊಳ್ಳುವುದು. ಹೀಗೆ ಬರು- ಬರುತಾ ಜೂಲಿ ತಂದೆ, ತಾಯಿ ಪ್ರೀತಿಯಿಂದ ದೂರವಾಯಿತು.
ಮುಕುಂದಯ್ಯನ ಮನೆಯಲ್ಲಿ ರಾಣಿಯಾಗಿ ಬೆಳೆಯಬೇಕಿದ್ದ ಮಗು ಎರಿಕ್ ಮತ್ತು ಸುಶೀಲಳ ದೆಸೆಯಿಂದ ಮನೆ ಕೆಲಸದವಳಾಗಬೇಕಾಯಿತು. ಸುಶೀಲ ಒಂದು ದಿನ ಇದ್ದಕ್ಕಿದ್ದ ಹಾಗೆ ಶಾಲೆಗೆ ಹೊರಟಿದ್ದ ಮಗುವಿನ ಪುಸ್ತಕ ಚೀಲವನ್ನು ಕಿತ್ತು ಓದಿ ನೀನು ಯಾರನ್ನು ಉದ್ಧಾರ ಮಾಡಬೇಕು. ಮನೆಯಲ್ಲೇ ಕೆಲಸ ಮಾಡಿಕೊಂಡು ಬಿದ್ದಿರು. ಪಾಪುನ ಸರಿಯಾಗಿ ನೋಡ್ಕೊ ಎಂದು ಗದರಿದಳು.
ಚೆನ್ನಾಗಿ ಓದುತ್ತಿದ್ದ ಆ ಮಗು ಶಾಲೆಯನ್ನು ಬಿಡಬೇಕಾಯಿತು. ಮನೆ ಕೆಲಸ, ಡೇವಿಡ್ ನೋಡಿಕೊಳ್ಳುವುದು, ಅವನ ಊಟ ಉಪಚಾರವನ್ನು ಜೂಲಿಯೇ ಮಾಡುತ್ತಿದ್ದಳು. ಇಷ್ಟಕ್ಕೂ ಸುಮ್ಮನಾಗದ ಸುಶೀಲ ಆ ಮಗುವನ್ನು ದುಡ್ಡಿಗಾಗಿ ಬೇರೆಯವರ ಮನೆ ಮುಸುರೆ ತಿಕ್ಕಲು ಕಳುಹಿಸಲು ಪ್ರಾರಂಭಿಸಿದಳು. ಅದರಿಂದ ಬಂದ ಹಣವನ್ನು ಸುಶೀಲ ಮತ್ತು ಎರಿಕ್ ಗುಂಡು -ತುಂಡಿಗೆ ಖರ್ಚು ಮಾಡಲು ನಿಂತರು. ಇದರ ಜೊತೆ ಎರಿಕ್ ಗೇ ಜೂಜು ಮತ್ತು ಹೆಣ್ಣಿನ ಹಿಂದೆ ಬಿದ್ದ ಇದರಿಂದ
ಅವನ ಸಂಬಳ ೯೦೦ ಕ್ಕೆ ಏರಿದ್ದರೂ ಅವನ ಖರ್ಚಿಗೆ ಸಾಲುತ್ತಿರಲಿಲ್ಲ. ಇದೆಲ್ಲಾ ಸುಶೀಲ ತಿಳಿದಿದ್ದರೂ ಹುಟ್ಟಿರುವುದೇ ಮೋಜು ಮಾಡಲು ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದಳು. ಡೇವಿಡ್ನನ್ನು ಶಾಲೆಗೆ ಸೇರಿಸಿದರು. ಹೀಗೆ ದಿನಗಳು ಕಳೆದವು. ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಜೂಲಿಯ ಸ್ಥಿತಿ ಮಾತ್ರ ಯಾರೂ ಕೇಳದಂತಾಗಿತ್ತು.
ಜೂಲಿ ಬೆಳೆದು ನಿಂತ ಹುಡುಗಿಯಾದಳು. ಸುಶೀಲ ಸುಖಾ ಸುಮ್ಮನೆ ಅವಳಿಗೆ ನೀನು ನನ್ನವನಿಗೆ ಹುಟ್ಟಿದವಳಲ್ಲ. ನನ್ನ ಮುಂದೆ ಇರಬೇಡ ಎಂದು ಹೊಡೆಯುತ್ತಿದ್ದಳು. ಜೂಲಿಗೆ ಹದಿಮೂರು
ವರ್ಷ ವಯಸ್ಸಾಗುವಷ್ಟರಲ್ಲಿ ಜೀವನ ಸಾಕಾಗಿ ಹೋಗಿತ್ತು. ಮೈನೆರೆದು ನಿಂತಿದ್ದ ಆ ಹುಡುಗಿಯನ್ನು ಆರೈಕೆ ಮಾಡುವ ಕನಿಷ್ಠ ಸೌಜನ್ಯವೂ ಸುಶೀಲಳಿಗೆ ಇರಲಿಲ್ಲ.ಆ ಹುಡುಗಿ ಒಂದು ದಿನ
ಧೈರ್ಯ ಮಾಡಿ ‘ಅಮ್ಮ ನಾನು ನಿನ್ನ ಮಗಳಲ್ಲವಾ? ಡೇವಿಡ್ ನ್ನು ಅಷ್ಟು ಚೆನ್ನಾಗಿ ನೋಡ್ಕೊತಿಯಾ? ಶಾಲೆಗೆ ಕಳಸ್ತಿಯಾ. ಅಪ್ಪ ಅವನಿಗಾಗಿ ದಿನ ಏನಾದರೂ ತರುತ್ತಾರೆ. ನನಗೆ ಮಾತ್ರ ಯಾಕೆ ಹೀಗೆ ನೋಡಿಕೊಳ್ಳುತ್ತಿದ್ದೀರಾ? ನಾನೇನು ತಪ್ಪು ಮಾಡಿದ್ದೀನಿ?’ ಎಂದು ಅಳುತ್ತಾ ಕೇಳಿದಳು. ಆಗ ಸಿಟ್ಟಿನಿಂದ ಸುಶೀಲ ನನ್ನ ಅಮ್ಮ ಎನ ಬೇಡ, ನಾನು ನಿನ್ನ ಅಮ್ಮನಲ್ಲ, ನೀನು ‘ನನ್ನ ಮಗಳೂ ಅಲ್ಲ. ನಿನ್ನ ಅಪ್ಪ ಎರಿಕ್ ಅಲ್ಲ. ಅವನ್ಯಾರೋ ಬೇರೆ, ನನ್ನ ಕರ್ಮ ನೀನು. ನಾನು ಮನೆ ಬಿಟ್ಟು ಬರುವಾಗ ನಿನ್ನ ಅಲ್ಲೇ ಬಿಟ್ಟು ಬರಬೇಕಿತ್ತು. ನಾನು ತಪ್ಪು ಮಾಡಿದೆ. ಎರಿಕ್ ನಿನ್ನ ಅಪ್ಪ ಅಲ್ಲ. ಅಂತ ಮತ್ತೆ ಚೀರುತ್ತಲೇ ಜೂಲಿಯನ್ನು ಹಿಡಿದು ನೀನು ನನ್ನ ಮಗಳು ಜೂಲಿಯಲ್ಲ. ನೀನು ಗೌರಿ… ಗೌರಿ…’ ಎಂದು ಹೊಡೆದಳು,. ಜಾಸ್ತಿ ಏನೂ ಅರ್ಥವಾಗದಿದ್ದರೂ ಜೂಲಿಗೆ ಎರಿಕ್ ತನ್ನ ಸ್ವಂತ ಅಪ್ಪ ಅಲ್ಲ. ನನ್ನ ಅಪ್ಪ ಬೇರೆ ಇದ್ದಾರೆ. ನನ್ನ ಹೆಸರು ಗೌರಿ ಎಂದು ಮಾತ್ರ ತಿಳಿಯಿತು. ಅಂದಿನಿಂದ ಜೂಲಿ ಮೌನವಾಗುತ್ತಾಳೆ. ಸುಶೀಲಾ, ಎರಿಕ್, ಡೇವಿಡ್ ಎಲ್ಲರಿಂದ ದೂರವಿರಲು ಜೂಲಿ ನಿರ್ಧರಿಸುತ್ತಾಳೆ. ಸುಶೀಲಳಿಗೂ ಅದೇ ಬೇಕಿತ್ತು.
ಅವಳು ಬೇರೆಯವರ ಮನೆ ಮುಸುರೆ ತಿಕ್ಕಿ ಹಣ ತಂದುಕೊಟ್ಟರೆ ಸಾಕಾಗಿತ್ತು. ಆದರೆ ಇತ್ತೀಚೆಗೆ ಎರಿಕ್ ತಲೆಯಲ್ಲಿ ಬೇರೆದೇನೋ ನಡೆಯುತ್ತಿತ್ತು. ಜೂಲಿ ಎಲ್ಲರಿಂದ ದೂರ ಹೋಗುತ್ತಿದ್ದರೆ ಎರಿಕ್ ಮಾತ್ರ ಸುಶೀಲ ಇಲ್ಲದ ಸಮಯ ನೋಡಿಕೊಂಡು ಜೂಲಿ ಬಳಿ ಹೋಗಿ ಪ್ರೀತಿಯಿಂದ ಮಾತನಾಡಿಸುವುದು ಅವಳಿಗೆ ಇಷ್ಟವಾದ ತಿಂಡಿ ತಂದುಕೊಡುವುದು ಮಾಡುತ್ತಿದ್ದ. ಜೂಲಿ ಈ ದಿಢೀರ್ ಪ್ರೀತಿಗೆ ಕಾರಣ ಗೊತ್ತಿಲ್ಲದೆ ಖುಷಿ ಪಡುವಷ್ಟು ಪೆದ್ದಳಾಗಿರಲಿಲ್ಲ. ನಮ್ಮ ಜೂಲಿ, ಅವನು ನನ್ನ ಅಪ್ಪನಲ್ಲ ಎಂದು ತಿಳಿದಾಗಿನಿಂದ ಅವನ ಮೇಲೆ ಅಸಹ್ಯ ಹುಟ್ಟಿತು, ಅವಳು ಅವನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು ಅವನು ಅವಳ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದ, ಎರಿಕ್ ನ ಈ ವರ್ತನೆ ಜೂಲಿಗೆ ಹಿಂಸೆ ಆಗಲಾರಂಭಿಸಿತು. ಅವನನ್ನು ನೋಡಿದರೆ ಭಯ ಪಡುತ್ತಿದ್ದಳು. ಜೂಲಿ ಅವನ ದೃಷ್ಟಿಗೆ ಬೇರೆ ಹೆಣ್ಣುಗಳಂತೆ ಜೂಲಿ ಕಾಣತೊಡಗಿದ್ದಳು. ಅದು ಜೂಲಿಗೆ ಅರ್ಥವಾಗಿತ್ತು. ಅವಳು ಅವನಿಗೆ ಹೆದರಿಹೋಗಿದ್ದಳು. ಅವಳು ಮನೆಗಿಂತ ಜಾಸ್ತಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಾ ಅಲ್ಲಿಯೇ ಹೆಚ್ಚು ಕಾಲ ಕಳೆಯತೊಡಗಿದಳು. ಒಂದು ದಿನ ಎರಿಕ್ ನ ವರ್ತನೆ ಸಹಿಸಲಾಗದ ಜೂಲಿ ಅವನ ಮುಂದೆಯೇ ತಾಯಿ ಸುಶೀಲಳಿಗೆ ಅಮ್ಮ ಇವನು ನನ್ನ ಬೇರೆ ರೀತಿ
ನೋಡುತ್ತಾನೆ. ನನಗೆ ಇಷ್ಟ ಆಗಲ್ಲ.ನೀನು ಮನೆಯಲ್ಲಿ ಇಲ್ಲದಿದ್ದಾಗ ನನ್ನ ಹತ್ತಿರ ಬಂದು ಕೆಟ್ಟದಾಗಿ ನಡೆದುಕೊಳ್ಳುತ್ತಾನೆ ಮತ್ತೆ ನಿನಗೆ ಆ ವಿಚಾರವನ್ನು ಹೇಳಬಾರದೆಂದು ಹೆದರಿಸುತ್ತಾನೆ
ಎಂದು ಅಳುತ್ತಾ ಹೇಳತೊಡಗಿದಳು. ಸುಶೀಲ ಎರಿಕ್ ಮುಖ ನೋಡಿದಳೇ ವಿನಃ ಅದನ್ನು ವಿರೋಧಿಸಲಿಲ್ಲ. ಇದರಿಂದ ಎರಿಕ್ ಈಗ ಸುಶೀಲಾ ಇಲ್ಲದ ಸಮಯಕ್ಕಾಗಿ ಜೂಲಿಯ ಹತ್ತಿರ ಹೋಗಲು ಕಾಯಬೇಕಿರಲಿಲ್ಲ. ಆದರೆ ಜೂಲಿ ಬೇರೆಯವರ ಮನೆ ಕೆಲಸ ಮುಗಿಸಿ ಮನೆಗೆ ಬಂದು ಎರಿಕ್ ಬರುವಷ್ಟರಲ್ಲಿ ಮನೆಗೆಲಸ ಮಾಡಿ ಕೋಣೆಗೆ ಹೋಗಿ ಚಿಲಕ ಹಾಕಿ ಕೂರುತ್ತಿದ್ದಳು.ಅವನಿಂದ ದೂರ
ವಿರಲು ಜೂಲಿ ಏನೇನು ಮಾಡಬೇಕು ಎoದು ಯೋಚಿಸುತ್ತಿದ್ದಳು.
ಎರಿಕ್ ಜೂಲಿಯನ್ನು ಮಾತ್ರ ನಾನು ಹೇಳಿದ ಹಾಗೆ ಕೇಳು.ನಾನು ನಿನ್ನನ್ನು ನಿನ್ನ ಅಮ್ಮನ ಹಾಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅಂತ ಪೀಡಿಸುತ್ತಿದ್ದ. ಜೂಲಿಗೆ ತಾಯಿಯ ಮೇಲೆ ಅಸಹ್ಯ ಹುಟ್ಟಿತು ಅಮ್ಮಾ ಎಂದು ಕರೆಯಲು ಹಿಂಜರಿದಳು. ಹೀಗೆ ಒಂದು ದಿನ ಒಂದು ಹೆಂಗಸು ಸುಶೀಲಳ ಬಳಿ ಬಂದು ನೋಡಿ ನನ್ನ ಮಗಳಿಗೆ ಮಗುವಾಗಿದೆ, ಅವರು ಬೇರೆ ಊರಿನಲ್ಲಿ ಇದ್ದಾರೆ, ಅವಳಿಗೆ ಮಗು ನೋಡಿಕೊಂಡು ಮನೆಕೆಲಸ ಮಾಡಿಕೊಂಡಿರಲು ಹುಡುಗಿ ಬೇಕು. ಯಾರೋ ನಿಮ್ಮ ಹುಡುಗಿ
ಚೆನ್ನಾಗಿ ಕೆಲಸ ಮಾಡುತ್ತದೆ ಎಂದರು. ನೀವು ಕೇಳಿದಷ್ಟು ಹಣ ಕೊಡುತ್ತೇವೆ ಎಂದರು. ದುಡ್ಡಿನ
ಆಸೆಗೆ ಸುಶೀಲ ಒಪ್ಪಿ ತಿಂಗಳಿಗೆ ಇಷ್ಟು ಅಂತ ಒಪ್ಪಂದ ಮಾಡಿಕೊಂಡು ಅವರಿಗೆ ಇವಳನ್ನು ಕಳುಹಿಸುವ ಮುನ್ನವೇ ಮುಂಗಡವಾಗಿ ಸ್ವಲ್ಪ ಹಣವನ್ನು ಕೊಡಬೇಕೆಂದು ತಿಳಿಸಿದಳು. ಅವರು
ಆಯಿತು ನಾಳೆ ಬಂದು ಕೊಟ್ಟು ಹುಡುಗಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೊರಟರು.ಇದನ್ನೆಲ್ಲ ಗಮನಿಸಿದ ಜೂಲಿ ಇದು ನಾನು ಈ ಮನೆ ಬಿಟ್ಟು ಹೋಗಿ ನನ್ನ ಜೀವನ ನೋಡಿಕೊಳ್ಳಲು ಒಳ್ಳೆಯ ಸಮಯ ಎಂದು ನಿರ್ಧರಿಸಿ ಒಂದು ಉಪಾಯ ಮಾಡಿದಳು, ಸುಶೀಲಳಿಗೆ ಗೊತ್ತಾಗದಂತೆ ಜೂಲಿ ಮನೆಗೆ ಬಂದ ಹೆಂಗಸನ್ನು ಭೇಟಿ ಮಾಡಿ ಆ ಹೆಂಗಸಿಗೆ.ನೋಡಿ…ನನ್ನ ತಾಯಿ ಕೆಟ್ಟವಳು. ನಿಮ್ಮ ಹತ್ತಿರ ಮುಂಗಡ ಹಣ ಪಡೆದು ನಂತರ ಅದು ಇದು ರಗಳೆ ಮಾಡಿ ನಿಮ್ಮ ಜೊತೆ ನನ್ನನ್ನು ಕಳುಹಿಸುವುದಿಲ್ಲ. ಹೀಗೆ ತುಂಬಾ ಜನಕ್ಕೆ ಮೋಸ ಮಾಡಿದ್ದಾಳೆ ಅವಳು. ನೀವು ನನಗೆ ತಿಂಗಳು-ತಿಂಗಳು ಸಂಬಳವನ್ನೂ ಕೊಡಬೇಡಿ. ನನ್ನ ತಾಯಿಗೆ ಮುಂಗಡ ಹಣವನ್ನೂ ಕೊಡಬೇಡಿ. ನಾನು ಇವತ್ತು ರಾತ್ರಿ ಮನೆ ಬಿಟ್ಟು ಬರುತ್ತೇನೆ. ನೀವು ಕರೆದುಕೊಂಡು ನಿಮ್ಮ ಮಗಳ ಮನೆಯಲ್ಲಿ ಬಿಡಿ. ಅವರು ನನಗೆ ಊಟ ತಿಂಡಿ ಕೊಟ್ಟರೆ ಸಾಕು. ನಾನು ಮಗುವನ್ನು ಚೆನ್ನಾಗಿ ನೋಡಿಕೊಂಡು ಮನೆ ಕೆಲಸವನ್ನು ಮಾಡ್ಕೊಂಡು ಇರ್ತೀನಿ. ದಯವಿಟ್ಟು ಬೇಡ ಅನ್ನಬೇಡಿ ಎಂದು ಅವರ ಮುಂದೆ ಕೈ ಮುಗಿದು ಅಳಲು ಪ್ರಾರಂಭಿಸಿದಳು. ಸುಶೀಲ ಜೂಲಿಯನ್ನು ಹೇಗೆ ನೋಡಿಕೊಳ್ಳುತ್ತಾಳೆoಬುದು ಆ ಹುಡುಗಿಯ ನೋವು ಅಲ್ಲಿರುವ ನೆರೆಹೊರೆಯ ಅವರಿಗೆಲ್ಲ ಚೆನ್ನಾಗಿ ಗೊತ್ತಿತ್ತು. ಅವಳನ್ನು ನೋಡಿ ಎಲ್ಲರೂ ಮರುಗುತ್ತಿದ್ದರು. ಅಂಥವರೇ ಈ ಹೆಂಗಸಿಗೆ ಈ ಹುಡುಗಿ ಜೂಲಿ ಪಾಪದ ಹುಡುಗಿ ಚೆನ್ನಾಗಿ ಕೆಲಸ ಮಾಡುತ್ತದೆ. ತಾಯಿಗೆ ವಿರುದ್ಧ ಸ್ವಭಾವವೆಂದು ಹೇಳಿದ್ದರು.
ಹೆಂಗಸಿಗೆ ಜೂಲಿಯನು ನೋಡಿ ಅಯ್ಯೋ ಎನಿಸಿತು ಸರಿ ಮಗು ಅಳಬೇಡ, ರಾತ್ರಿಯಾಗುತ್ತಿದ್ದಂತೆ ನಾನು ನಿನ್ನನ್ನು ನನ್ನ ಮಗಳ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದಳು. ಜೂಲಿಗೆ ತುಂಬಾಸಂತೋಷವಾಯಿತು ಅವಳು ಬುದ್ಧಿ ಬಂದ ನಂತರ ಖುಷಿ ಪಟ್ಟ ಮೊದಲ ದಿನ ಅದು,ಈ ನರಕದಿಂದ ಮುಕ್ತಿ ದೊರೆಯುವ ಕಾಲ ಬಂದಿತ್ತಲ್ಲ ಎಂದು ಆನಂದ ಭಾಷ್ಪ ಹಾಕುತಾ ಮನೆಗೆ ಹೋದಳು. ಅಷ್ಟರಲ್ಲಿ ಎರಿಕ್ ಮತ್ತು ಸುಶೀಲ ಕುಡಿಯುತ್ತ ಕುಳಿತಿದ್ದರು, ಒಳಗೆ ಬಂದ ಜೂಲಿಯನ್ನು ನೋಡಿ ಎರಿಕ್ ಎಲ್ಲಿಗೆ ಹೋಗಿದ್ದೆ ಇಷ್ಟು ಹೊತ್ತು? ಅಂದ, ಜೂಲಿ ಮನೆ ಕೆಲಸ ಇವತ್ತು
ಜಾಸ್ತಿ ಇತ್ತು ಎಂದು ಹೇಳಿ ಸೀದಾ ಕೋಣೆಗೆ ಹೋದಳು. ಡೇವಿಡ್ ಅವನ ಪಾಡಿಗೆ ಅವನಿರುತ್ತಿದ್ದ. ಯಾವುದಕ್ಕೂ ತಲೆ ಹಾಕುತ್ತಿರಲಿಲ್ಲ. ಸರಿಯಾಗಿ ಓದುತ್ತಿರಲಿಲ್ಲ. ಪೋಲಿ ಹುಡುಗರ ಸಹವಾಸ ಬೇರೆ ಮನೆಯಲ್ಲಿ ಅಪ್ಪ ಅಮ್ಮನ ಮುದ್ದು ಇನ್ನೇನು ಬೇಕು ಹಾಳಾಗಲು ಮನೆಗೆ ಲೇಟಾಗಿ ಬಂದು ತಿಂದು ಸುಮ್ಮನೆ ಮಲಗುತ್ತಿದ್ದ ಬೆಳಿಗ್ಗೆ ಎದ್ದು ಶಾಲೆಗೆಂದು ಹೋಗುತ್ತಿದ್ದ ಅಷ್ಟೆ ಹಾಗಾಗಿ ಡೇವಿಡ್ ಬಂದು ತಿಂದು ಮಲಗಿದರೆ ಸಾಕಾಗಿತ್ತು ಜೂಲಿಗೆ. ಎರಿಕ್ ಮತ್ತು ಸುಶೀಲ ಆಗಲೆ ಕಂಠಪೂರ್ತಿ ಕುಡಿದಿದ್ದರು ಇನ್ನು ಇವರು ತಿಂದು ಮಲಗಿದ್ರೆ ಇನ್ನು ಬೆಳಗ್ಗೆವರೆಗೂ ಕಣ್ಣು ಬಿಡುವುದಿಲ್ಲ ನಾನು ಯಾವುದೇ ತೊಂದರೆ ಇಲ್ಲದೆ ಬಟ್ಟೆ ತೆಗೆದುಕೊಂಡು ಹೋಗಬಹುದು ಎಂದು ಲೆಕ್ಕ ಹಾಕಿದಳು, ಅವಳು ಅಂದುಕೊಂಡಂತೆಯೇ ಎಲ್ಲವೂ ನಡೆಯಿತು. ಎಲ್ಲರೂ ಊಟ ಮಾಡಿ ಮಲಗಿ ಗೊರಕೆ ಹೊಡೆಯಲಾರಂಭಿಸಿದ ನಂತರ ಇತ್ತ ಜೂಲಿ ಒಂದು ಬಟ್ಟೆ ಹಾಸಿ ಅದಕ್ಕೆ ಅವಳ ಬಟ್ಟೆಗಳನ್ನೆಲ್ಲ
ತುಂಬಿಕೊಂಡು ಗಂಟುಕಟ್ಟಿ ‘ಈ ಮನೆ ಋಣ ಇಲ್ಲಿಗೆ ಮುಗಿಯಲಿ. ಎಲ್ಲರೂ ಸತ್ತರೂ ನನ್ನ ಪಾಲಿಗೆ ಯಾರೂ ಇಲ್ಲ’ ಎಂದು ಜೀವನದಲ್ಲಿ ಕಳೆದ ಕೆಟ್ಟ ಕ್ಷಣಗಳನ್ನು ಇಲ್ಲಿಯೇ ಬಿಟ್ಟು ಹೊಸ ಜೀವನ ಆರಂಭಿಸಲು ಮನೆ ಬಿಟ್ಟು ಜೂಲಿ ಹೆಂಗಸು ಇರುವ ಸ್ಥಳಕ್ಕೆ ಹೋದಳು, ಹೆಂಗಸು ಇವಳಿಗಾಗಿ ಕಾಯುತ್ತಿದ್ದಳು, ಜೂಲಿ ಯಾಕಮ್ಮ ತಡವಾಗಿ ಬಂದೆ ಒಳಗೆ ಬಾ ಇಷ್ಟು ಹೊತ್ತಲ್ಲಿ ಶಿವಮೊಗ್ಗಗೆ ಬಸ್ಸು ಸಿಗುವುದಿಲ್ಲ, ನೀನು ಊಟ ಮಾಡಿದಂತೆ ಕಾಣುತ್ತಿಲ್ಲ ಊಟ ಕೊಡುತ್ತೇನೆ ತಿಂದು ಮಲಗು ಬೆಳಗ್ಗೆಯೇ ಐದು ಮೂವತ್ತರ ಬಸ್ಸಿಗೆ ನಾವು ಹೋಗುವ ಎಂದಳು. ಜೂಲಿ ಸರಿ ಎಂದು ತಲೆ
ಆಡಿಸಿ ಅಮ್ಮಾ ಎಂದು ಕರೆದಳು, ಹೆಂಗಸು ಏನು ಹೇಳಮ್ಮ ಹೆದರಬೇಡ ಎಂದಳು. ಜೂಲಿ ಅಮ್ಮನನ್ನ ಹೆಸರು ಜೂಲಿ ಅಲ್ಲ. ಗೌರಿ…ನನ್ನ ಗೌರಿ ಅಂಥ ಕರೆದು ಮಾತನಾಡಿಸಿ ಎಂದಳು. ಹೆಂಗಸು ಮುಗುಳ್ನಕ್ಕು ಆಯಿತು ಗೌರಿ ಎಂದು ಊಟ ತರಲು ಒಳಗೆ ಹೋದಳು. ಬುದ್ಧಿ ಬಂದ ಮೇಲೆ ಗೌರಿಮೊದಲ ಬಾರಿ ಮನಸ್ಸಿನಿಂದ ಗೆಲುವಿನ ನಗೆ ನಗು ನಕ್ಕಳು.
#ಸಣಣಕತ