ಮಹಾರಾಜರು ನುಡಿದ ಮಾತುಗಳು – ಡಾ.ಗಜಾನನ ಶರ್ಮ



 ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಭಾಷಣದಲ್ಲಿ ವಿದ್ಯುಚ್ಛಕ್ತಿಯ ಬಳಕೆಯಲ್ಲಿ ನಾವು ಎಂತಹ ಅದ್ಭುತ ಪ್ರಗತಿ ಸಾಧಿಸಿದ್ದೇವೆ, ವಿದ್ಯುತ್ ಕ್ಷೇತ್ರದಿಂದ ಸರ್ಕಾರಕ್ಕೆ ದೊರೆಯುವ ಆದಾಯ ವಾರ್ಷಿಕ ಒಂದು ಕೋಟಿ ರೂಪಾಯಿ ಮೊತ್ತವನ್ನು ತಲುಪಲಿದೆ ಎಂದು ಅವರು ವಿವರಿಸಿದ್ದಾರೆ. ಭಾಷಣವನ್ನು ಕನ್ನಡಕ್ಕೆ ಖ್ಯಾತ ಲೇಖಕರಾದ ಗಜಾನನ ಶರ್ಮಾ ಅವರು ಸವಿಸ್ತಾರವಾಗಿ ವಿವರಿಸಿದ್ದಾರೆ.ಮುಂದೆ ಓದಿ…

ಇದು ೧೯೩೯ರ ಫೆಬ್ರುವರಿ ಐದರಂದು ಜೋಗದ ಇಂದಿನ ರಾಜಾಕಲ್ಲು ಇರುವಲ್ಲಿ ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಾದ್ದೂರ್ ಜೋಗ್ ವಿದ್ಯುತ್ ಯೋಜನೆಗೆ ತಮ್ಮ ಅಮೃತ ಹಸ್ತದಿಂದ ಅಡಿಗಲ್ಲಿಟ್ಟ ಶುಭಸಂದರ್ಭದಲ್ಲಿ ನೀಡಿದ ಭಾಷಣ.

ಫೋಟೋ ಕೃಪೆ : aravindgundumane

“ಸನ್ಮಾನ್ಯ ಫೋರ್ಬ್ಸರೇ, ಮಹಿಳೆಯರೇ, ಮಹನೀಯರೇ ” ಎನ್ನುತ್ತ, ತಮ್ಮನ್ನು ನೋಡಲೆಂದು ಮಲೆನಾಡಿನ ಮೂಲೆ ಮೂಲೆಗಳಿಂದ ಬಂದು ಸೇರಿದ್ದ ಪ್ರಜೆಗಳನ್ನು ಉದ್ದೇಶಿಸಿ ಭಾಷಣವನ್ನು ಆರಂಭಿಸಿದ ಮಹಾರಾಜರು ನೀರಿನ ಮಹತ್ವ ತಿಳಿಸುವ ತೈತ್ತರೀಯ ಆರಣ್ಯಕೋಪನಿಷತ್ತಿನ ಮಂತ್ರವಾಕ್ಯವನ್ನು ಉಲ್ಲೇಖಿಸಿ, ಮಾತನ್ನು ಮುಂದುವರೆಸಿದರು.

“ಉಪನಿಷತ್ತಿನಲ್ಲಿ ಉಲ್ಲೇಖಿಸಲ್ಪಟ್ಟ ಘನಸತ್ಯವೊಂದಕ್ಕೆ ಸಾಕ್ಷಿಗಳಾಗಲು ನಾವಿಂದು ಇಲ್ಲಿ ಮತ್ತೊಮ್ಮೆ ಸೇರಿದ್ದೇವೆ.‘ಅನ್ನಮಾಪಃ, ಅಮೃತಮಾಪಃ, ಸ್ವರಡಾಪಃ, ವಿರಾಡಾಪಃ ಜ್ಯೋತಿಂಷ್ಯಾಪಃ ;
ನೀರೆಂದರೆ ಅನ್ನ, ನೀರೆಂದರೆ ಅಮೃತ, ನೀರೆಂದರೆ ಅಂತಸ್ತೇಜ, ನೀರೆಂದರೆ ವಿರಾಟ್ ಚೇತನ, ನೀರೆಂದರೆ ಬೆಳಕು’.



ನಾವು ಇತ್ತೀಚೆಗಷ್ಟೇ ಇದೇ ಮಾದರಿಯ ಇನ್ನೊಂದು ಯೋಜನೆಯ ಉದ್ಘಾಟನೆಗಾಗಿ #ಶಿಂಷಾಪುರದಲ್ಲಿ ಸೇರಿದ್ದೆವು. ಅದು ಮೈಸೂರು ರಾಜ್ಯದ ಪ್ರತಿಯೊಂದು ಮನೆಗೂ ವಿದ್ಯುತ್ ಬೆಳಕು ಮತ್ತು ಶಕ್ತಿಯನ್ನು ಒದಗಿಸುವ ಸಾರ್ಥಕ ಯೋಜನೆಯೊಂದರ ಪ್ರಥಮ ಹಂತವಾಗಿತ್ತು. ವಿದ್ಯುಚ್ಛಕ್ತಿಯ ಬಳಕೆಯಲ್ಲಿ ನಾವು ಎಂತಹ ಅದ್ಭುತ ಪ್ರಗತಿ ಸಾಧಿಸಿದ್ದೇವೆ ಎಂಬುದನ್ನು ಅರಿಯಲು ನಾವು ಇತ್ತೀಚಿನ ಕೆಲವು ಕಾಲವನ್ನು ಗಮನಿಸಿದರೆ ಸಾಕು. ಶಿಂಷಾಪುರದಲ್ಲಿ ಯೋಜನೆಯನ್ನು ಉದ್ಘಾಟಿಸುತ್ತ ನಾನು ಉಲ್ಲೇಖಿಸಿದ್ದಂತೆ, ಈಗಾಗಲೇ ನಾವು ೧೫೦ ಗ್ರಾಮ ಮತ್ತು ಪಟ್ಟಣಗಳಿಗೆ ಹಾಗೂ ಸುಮಾರು ೩೬,೦೦೦ ಸ್ಥಾವರಗಳಿಗೆ ಶಕ್ತಿ ಮತ್ತು ಬೆಳಕಿನ ಸಂಪರ್ಕ ಕಲ್ಪಿಸಿದ್ದೇವೆ. ಈಗಾಗಲೇ ಶ್ರೀಯುತ ಫೋರ್ಬ್ಸ್ ತಮ್ಮ ಭಾಷಣದಲ್ಲಿ ಹೇಳಿದಂತೆ, ಕಳೆದೊಂದು ವರ್ಷದ ಅಲ್ಪ ಅವಧಿಯಲ್ಲಿ ಈ ಸಂಖ್ಯೆ ೧೭೫ ಕ್ಕೆ ಮತ್ತು ೪೦,೫೦೦ ಕ್ಕೆ ಹೆಚ್ಚಿಸಲ್ಪಟ್ಟಿದೆ, ಅದನ್ನು ನಾವು ಅತಿ ಶೀಘ್ರದಲ್ಲಿ ೨೨೫ ಮತ್ತು ೫೦,೦೦೦ ಸಂಖ್ಯೆಗೆ ತಲುಪಿಸಲಿದ್ದೇವೆ ಎಂಬುದಕ್ಕೆ ಯಾವ ಸಂದೇಹವೂ ಬೇಡ. ಇಷ್ಟಲ್ಲದೆ ವಿದ್ಯುತ್ ಕ್ಷೇತ್ರದಿಂದ ಸರ್ಕಾರಕ್ಕೆ ದೊರೆಯುವ ಆದಾಯ ವಾರ್ಷಿಕ ಒಂದು ಕೋಟಿ ರೂಪಾಯಿ ಮೊತ್ತವನ್ನು ತಲುಪಲಿದೆ ಎಂಬುದನ್ನೂ ಅವರು ವಿವರಿಸಿದ್ದಾರೆ.

ಇದೆಲ್ಲದರ ಜೊತೆಗೆ ನಾವಿಂದು ಇಲ್ಲಿ ಉದ್ಘಾಟಿಸುತ್ತಿರುವ ಈ ಯೋಜನೆ ಯಾವ ದೃಷ್ಟಿಕೋನದಿಂದ ಅವಲೋಕಿಸಿದರೂ ಹೊಸತೂ ಅಲ್ಲ, ತಾತ್ಕಾಲಿಕವಾಗಿಯೋ ಗಡಿಬಿಡಿಯಲ್ಲಿಯೋ ಹುಟ್ಟುಹಾಕಲ್ಪಟ್ಟ ಯೋಜನೆಯೂ ಅಲ್ಲ. ಬದಲಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಈ ಯೋಜನೆ ಗರ್ಭಾವಸ್ಥೆಯಲ್ಲಿ ಕುಳಿತಿತ್ತು. ಮಹಾಯುದ್ದ ಮುಗಿದ ಆರಂಭದಲ್ಲಿಯೇ ಅಂದರೆ ೧೯೧೮ ರಲ್ಲಿಯೇ ಈ ಯೋಜನೆಗಾಗಿ ಮೊದಲ ಸರ್ವೆ ಮತ್ತು ಸಮೀಕ್ಷೆ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಹಲವು ಪರ್ಯಾಯಗಳನ್ನು ಪರಿಶೀಲಿಸಲಾಯಿತು. ಹಲವಾರು ತಾಂತ್ರಿಕ ಅಡಚಣೆಗಳನ್ನು ಎದುರಿಸಿ ಸಮರ್ಥವಾಗಿ ದಾಟಿಬರಲಾಯ್ತು. ನಮ್ಮ ನೆರೆಯ ಬೊಂಬಾಯಿ ಪ್ರಾಂತ್ಯದೊಂದಿಗೆ ಮಾತುಕತೆ ನಡೆಸಲಾಯಿತು. ಜೊತೆಗೆ ಜಲಪಾತದ ಸೌಂದರ್ಯ ಕಿಂಚಿತ್ತೂ ಹಾನಿಗೊಳ್ಳದಂತೆ ಅದನ್ನು ಹೇಗೆ, ಸಂರಕ್ಷಿಸಿಕೊಳ್ಳಬೇಕೆಂದು ಈ ಕೂಲಂಕಷ ಚರ್ಚೆಯನ್ನು ಈ ಸಂದರ್ಭದಲ್ಲಿ ನಡೆಸಲಾಯಿತು. ಇದೆಲ್ಲದರ ಸಮಗ್ರ ಫಲಿತಾಂಶವಾಗಿ ರೂಪಿಸಲ್ಪಟ್ಟ ಈ ಯೋಜನೆ ಜಲಪಾತದ ಸೌಂದರ್ಯದ ಸಂರಕ್ಷಣೆಯ ಜೊತೆ ಜೊತೆಗೆ ಮಿತವ್ಯಯ ಮತ್ತು ಶಕ್ತಿಯ ಸದ್ಬಳಕೆಯನ್ನು ಸಮರ್ಥವಾಗಿ ಯೋಜಿಸಿದೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ.

ಇನ್ನೊಂದು ದೃಷ್ಟಿಕೋನದಿಂದ ಅವಲೋಕಿಸಿದರೆ ಈ ಯೋಜನೆ ಇಷ್ಟು ವರ್ಷ #ಗರ್ಭಾವಸ್ಥೆಯಲ್ಲೇ ಉಳಿದು ಸಮಯ ವ್ಯರ್ಥವಾಯಿತೆಂದು ನಾವು ವ್ಯಥೆಪಡುವಂತಿಲ್ಲ. ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಕೈಗಾರಿಕೆ ಕೈಗಾರಿಕೆಗಳನ್ನು ಹುಟ್ಟುಹಾಕುತ್ತವೆ. ಅಂತೆಯೇ ಈ ಯೋಜನೆ ತಾನು ಆರಂಭಗೊಳ್ಳುವುದರ ಜೊತೆ ಇಡೀ ರಾಜ್ಯದ ಕೈಗಾರಿಕೀಕರಣದ ಸರಣಿಗೇ ನಾಂದಿ ಹಾಡಲಿದೆ, ಯಾಕೆಂದರೆ ಈ ಯೋಜನೆ ಗರ್ಭಾವಸ್ಥೆಯಲ್ಲಿದ್ದ ಅವಧಿಯಲ್ಲಿ ನಾವು ಉಕ್ಕು ಮತ್ತು ಸಿಮೆಂಟು ಕೈಗಾರಿಕೆಗಳನ್ನು ಆರಂಭಿಸಿದ್ದೇವೆ ಮತ್ತು ಭದ್ರಾವತಿಯ ಅವೆರಡೂ ಉತ್ಪನ್ನಗಳು ಈ ಯೋಜನೆಯ ಅನುಷ್ಠಾನ ಕಾರ್ಯದಲ್ಲಿ ಬಳಕೆಯಾಗಲಿವೆ. ಹಾಗೆಯೇ ಈ ಯೋಜನೆಯಿಂದ ನಿರ್ಮಾಣವಾಗುವ ಜಲಾಶಯದ ಪಾತ್ರದ ಅರಣ್ಯಗಳ ಮರಮಟ್ಟುಗಳು ಮತ್ತು ಅಂತಿಮವಾಗಿ ಇಲ್ಲಿ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿ ಪುನಃ ಆ ಕಾರ್ಖಾನೆಗಳ ವಿಸ್ತರಣೆಗೆ ಬಳಕೆಯಾಗಿ ಅವುಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಿದೆ.

ನಾನು ನನ್ನ ಮಾತು ಮುಗಿಸುವ ಮುನ್ನ ಬಹಳ ಕಾಲದ ಹಿಂದೆಯೇ ಇಂತಹದ್ದೊಂದು ಅದ್ಭುತ ಯೋಜನೆಯನ್ನು ಪರಿಕಲ್ಪಿಸಿದ ಮುತ್ಸದ್ದಿಗಳಿಗೆ, ಈ ಯೋಜನೆಗೆ ಹಣಕಾಸಿನ ಮೂಲವನ್ನು ಹುಡುಕಿಟ್ಟ ಆರ್ಥಿಕತಜ್ಞರಿಗೆ, ಈ ಯೋಜನೆಯನ್ನು ನನಸು ಮಾಡಲು ನಮಗೆ ಸಹಕಾರ ನೀಡುತ್ತಿರುವ ನೆರೆಹೊರೆಯ ಮಿತ್ರರಿಗೆ ಮತ್ತು ಶ್ರೀ ಫೋರ್ಬ್ಸ್ ಹಾಗೂ ಅವರ ಸಹೋದ್ಯೋಗಿಗಳ ತಾಂತ್ರಿಕ ಕೌಶಲ್ಯಕ್ಕೆ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ. ಜೊತೆಗೆ, ಇಂದು ಇಲ್ಲಿ ನಾನು ಇಡುತ್ತಿರುವ ಈ ಅಡಿಗಲ್ಲಿನ ಮೇಲೆ ಯೋಜನೆಯ ಆರಂಭಕ್ಕೆ ಕಾರಣರಾದ ಎಲ್ಲ ಇಂಜಿನಿಯರುಗಳು ಮತ್ತು ಹೈಡ್ರೋ ಎಲೆಕ್ಟ್ರಿಕ್ ಸಮಿತಿಯ ಸದಸ್ಯರ ಹೆಸರುಗಳನ್ನು ಕೆತ್ತಬೇಕೆಂಬ ಫೋರ್ಬ್ಸರ ಕೋರಿಕೆಗೆ ಸಂತೋಷದಿಂದ ಅನುಮತಿ ನೀಡುತ್ತಿದ್ದೇನೆ.

ಈ ಶುಭ ಸಂದರ್ಭದಲ್ಲಿ #ಜೋಗ್_ಫಾಲ್ಸ್ ಯೋಜನೆಯ ಅಡಿಗಲ್ಲನ್ನು ಇಡುವ ಮಂಗಳಕಾರ್ಯಕ್ಕೆ ತುಂಬು ಸಂತೋಷದಿಂದ ನಾನೀಗ ಮುಂದಾಗುತ್ತಿದ್ದೇನೆ.


  •  ಡಾ ಗಜಾನನ ಶರ್ಮ (ಹಿರಿಯ ಖ್ಯಾತ ಲೇಖಕರು, ಚಿಂತಕರು, ಸಾಹಿತಿಗಳು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW