‘ಮನೆ’ ಎಂಬ ಮನಸಿನ ಚಿತ್ರ – ಬಾಣಾವರ ಶಿವಕುಮಾರ್



ಹೆಂಡತಿ ಗಂಡನನ್ನು ಕುರಿತಾಗಿ ಹೇಳುವಾಗ ‘ನಮ್ಮ ಮನೆಯವರು’ ಎನ್ನುವುದಿದೆ. ಅದೇ ಗಂಡ ಹೆಂಡತಿಯ ಕುರಿತಾಗಿಯೂ ‘ನಮ್ಮ ಮನೆಯಾಕೆ’ ಎನ್ನುವುದಿದೆ. ಮನೆಯಲ್ಲಿ ಮನಬಿಚ್ಚಿ ಮಾತನಾಡಿದಂತೆ ಎಲ್ಲೆಂದರಲ್ಲಿ ಮಾತನಾಡಲು ಸಾಧ್ಯವಿಲ್ಲ.ಮನೆಯ ಸುಂದರ ಚಿತ್ರಣವನ್ನು ಹೃದಯದಲ್ಲಿ ಮೂಡಿಸುತ್ತಾರೆ ಲೇಖಕರಾದ ಬಾಣಾವರ ಶಿವಕುಮಾರ್ ಅವರು, ಮುಂದೆ ಓದಿ…

#ಮನೆ ಎಂಬ ಎರಡಕ್ಷರದೊಳಗೆ ಅದೆಂಥ ಬಾಂಧವ್ಯ ಆತ್ಮೀಯತೆ ಅನುರಾಗ ಅದೆಂತಹ ಬೆಸುಗೆ! ಅಚ್ಚರಿ ಎನಿಸುತ್ತದೆ ಅಲ್ಲವೇ?  ಮನೆ ಎಂಬ ಪರಿಕಲ್ಪನೆ ಅದು ಹೇಗೆ ಮೂಡಿತೋ! ಕಾಡೊಳಗೆ ಅಲೆದಾಡುತ್ತಿದ್ದ ಮನುಷ್ಯ ಅದಾವುದೋ ಕ್ಷಣದಲ್ಲಿ ತನ್ನದಾದ ಪುಟ್ಟ_ಗೂಡು ಕಟ್ಟುವ ಪ್ರಯತ್ನ ಮಾಡಿದ್ದು ಹೇಗಿರಬಹುದು ಅಥವಾ ಅವನಿಗೆ ತನ್ನದೇ ಆದ #ನೆಲೆಯೊಂದು ಬೇಕೆನಿಸಿದ್ದು ಅದಾವ ಕ್ಷಣದಲ್ಲಿರಬಹುದು… ಯೋಚಿಸ ಹೊರಟರೆ ಅಪ್ಯಾಯಮಾನ ಎನಿಸುತ್ತದೆ. ಮನೆ ಎಂಬ ಕಲ್ಪನೆಯೇ ಅಷ್ಟು ಚೆಂದ. ಮನೆ ಎಂದ ತಕ್ಷಣ ನೆಲೆ ಇದೆ ಎಂಬ ಅರ್ಥ ತಾನಾಗಿ ಬಂದುಬಿಡುತ್ತದೆ.

ಫೋಟೋ ಕೃಪೆ :google

ಪುರುಷ ಕಟ್ಟಡ ಕಟ್ಟಿದರೆ ಸ್ತ್ರೀ ಅದನ್ನು ಮನೆಯಾಗಿಸುತ್ತಾಳೆ ಎಂಬ ನಾಣ್ಣುಡಿಯೇ ಇದೆ. ಅದರರ್ಥ ಮನೆ ಎಂದರೆ ಅಲ್ಲಿ #ಪ್ರೀತಿ ಇರಬೇಕು, ವಾತ್ಸಲ್ಯವಿರಬೇಕು, ಅನುಬಂಧ ಇರಬೇಕು, ಕಡಿಯಲಾರದ ಅದಾವುದೋ ತಂತು ನಮ್ಮನ್ನು ಬೆಸೆದಿರಬೇಕು ಎಂದಾಯಿತು. ಪುರುಷ ಇದನ್ನೆಲ್ಲ ಮಾಡಲಾರ ಎಂದಲ್ಲ. ಆದರೆ ಅವನ ಪ್ರಯತ್ನ ಪರಿಪೂರ್ಣವಾಗುವುದು ಸ್ತ್ರೀಯ ಸಹಕಾರದಿಂದ. ಅವಳ ಹೊರತು ಅವನೇನು ಮಾಡಲು ಹೊರಟರೂ ಏಕಾಂಗಿ ಹೋರಾಟವಾಗುತ್ತದೆ ವಿನಃ ಅದು ಪೂರ್ತಿಯಾಗದು. ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ, ಮಗಳಾಗಿ ಎಲ್ಲವೂ ಆಗಬಲ್ಲ ಹೆಣ್ಣು ಮನೆಯಲ್ಲಿ ಇರಬೇಕು. ಹಾಗಿದ್ದರೆ ಮಾತ್ರ ಮನೆಗೆ ಬೆಲೆ. ಸ್ತ್ರೀಯ ಸ್ಪರ್ಶವಿರುವ ಮನೆ ನೋಡಿದ ತಕ್ಷಣ ಗೊತ್ತಾಗಿಬಿಡುತ್ತದೆ. ಅವಳಿಲ್ಲ ಎಂದಾದರೆ ಮನೆ ಬಿಕೋ ಎನ್ನುತ್ತಿರುತ್ತದೆ. ಅಮ್ಮ ನೆಂಟರ ಮನೆಗೆ ಹೋಗುತ್ತೇನೆಂದರೆ ಮಕ್ಕಳು ತಾವೂ ಜೊತೆಗೆ ಹೊರಡುವುದು ಅಥವಾ ಪರೀಕ್ಷೆಯೋ ಮತ್ತಿನ್ನೇನೋ ನೆಪವೊಡ್ಡಿ “ಅಮ್ಮ ಹೋಗಬೇಡ” ಎನ್ನುವುದಾಗಲಿ, ಹೆಂಡತಿ ತವರಿಗೆ ಹೊರಟರೆ ಗಂಡ ಸಿಡಿಮಿಡಿಗುಟ್ಟುವುದಾಗಲೀ ಇವೆಲ್ಲದರ ಹಿಂದೆ ಇರುವ ಭಾವ ಒಂದೇ ಅಲ್ಲವೇ!? ಅವರಿಲ್ಲದ ಮನೆ ಮನೆಯಲ್ಲ.

ಫೋಟೋ ಕೃಪೆ :google

ಹೆಂಡತಿ ಗಂಡನನ್ನು ಕುರಿತಾಗಿ ಹೇಳುವಾಗ ‘ನಮ್ಮ ಮನೆಯವರು’ ಎನ್ನುವುದಿದೆ. ಅದೇ ಗಂಡ ಹೆಂಡತಿಯ ಕುರಿತಾಗಿಯೂ ‘ನಮ್ಮ ಮನೆಯಾಕೆ’ ಎನ್ನುವುದಿದೆ. ಅಂದರೆ ಮನೆಯಲ್ಲಿ ಇರುವ ಉಳಿದವರು ಮನೆಯವರಲ್ಲವೇ? ಅದೊಂದು ಭಾವಾಭಿವ್ಯಕ್ತಿ ಅಷ್ಟೇ. ಮನೆಯೂ ಸಂಗಾತಿಯೂ ಎರಡೂ ಒಂದೇ ಅಂದರೆ ಸರಿಯಾದೀತೇನೋ! ನಮ್ಮ ಭಾವನೆಗಳನ್ನು ಪೂರ್ಣವಾಗಿ ತೋರಿಸಿಕೊಳ್ಳಲು ಸಾಧ್ಯವಾಗುವುದು ಸಂಗಾತಿಯಲ್ಲಿ ಮಾತ್ರ ತಾನೇ, ಅದೂ ಮನೆಯಲ್ಲಿ ದೊರೆಯುವ ಏಕಾಂತದಲ್ಲಿ. ಎಲ್ಲೆಂದರಲ್ಲಿ ಮನಸ್ಸು ಬಿಚ್ಚಿ ಮಾತನಾಡಲಾರೆವು ಅಥವಾ ಎಂಥ ಆಪ್ತ ಸ್ನೇಹಿತರಾದರೂ ಗಂಡ ಹೆಂಡತಿ ಪರಸ್ಪರ ಸುಖ ದುಃಖಗಳನ್ನು ಹಂಚಿಕೊಂಡಿದೆ ಹಂಚಿಕೊಳ್ಳಲಾಗದು.

ಫೋಟೋ ಕೃಪೆ :google

ನಾವು ಮನೆಯಲ್ಲಿ ಪ್ರೀತಿಸುವುದನ್ನು ಕಲಿಯುತ್ತೇವೆ, ತನ್ಮೂಲಕ ಪ್ರೀತಿಯಲ್ಲಿ ಬೆಳೆಯುತ್ತೇವೆ. ಪ್ರೀತಿಸುತ್ತಾ ಬದುಕುತ್ತೇವೆ. ಸಹವರ್ತಿಗಳ ಬಗೆಗೆ ಪ್ರೀತಿಯ, ಕಾಳಜಿಯ ಭಾವನೆ ಹೊಂದಲು ಸಾಧ್ಯವಾಗುವುದು ಅದ ಮನೆಯಲ್ಲಿ ದೊರೆಯುವ ಪ್ರೀತಿಯಿಂದಲೇ. ಎಷ್ಟು ಹೊತ್ತಿನಲ್ಲಿ ಬೇಕಾದರೂ, ಯಾವಾಗ ಬೇಕಾದರೂ ನಾವು ಗೂಡು ಸೇರಿಕೊಳ್ಳಬಲ್ಲೆವಾದರೆ ಅದು ನಮ್ಮ ಮನೆಗೆ ಮಾತ್ರ. ಅಲ್ಲಿ ಯಾರೂ ಏಕೆ ಬಂದೆ ಎಂದು ಕೇಳಲಾರರು. ಯಾಕೆ ತಡವಾಯಿತು ಎಂದು ಕೇಳಿಯಾರಷ್ಟೇ. ಅದೂ ಅಧಿಕಾರವಿದೆ ಎಂದಲ್ಲ. ನಮ್ಮ ಬಗ್ಗೆ ಕಾಳಜಿ ಇರುವುದರಿಂದ.

ಮನೆಯೊಳಗಿನ ವಾತಾವರಣ ಒಂದೊಮ್ಮೆ ಹದಗೆಟ್ಟಿತೆಂದರೆ ಆ ಪರಿಸರದಲ್ಲಿ ಬೆಳೆಯುವ ಮಕ್ಕಳು ಸಮಾಜದೊಡನೆ ಕೂಡಾ ಉತ್ತಮ ನಂಟು ಕಾಪಾಡಿಕೊಳ್ಳಲು ಕಷ್ಟ ಪಡಬೇಕಾಗುತ್ತದೆ. ಪ್ರೀತಿಯ ಕುರಿತು ಪಾಠ ಹೇಳಿಸಿಕೊಳ್ಳುವುದರಿಂದ ದೊರೆಯದ ಅನುಭವ ಪ್ರೀತಿಯಲ್ಲಿ ಬೆಳೆಸಲ್ಪಟ್ಟಾಗ ಮಾತ್ರ ದೊರೆಯುತ್ತದೆ. ಮನೆಯಲ್ಲಿ ಪ್ರೀತಿ ತುಂಬಿಕೊಂಡ ಮನಸ್ಸು ಬದುಕನ್ನು ಪ್ರೀತಿಸಬಲ್ಲದು, ಪರಿಸರವನ್ನು ಪ್ರೀತಿಸಬಲ್ಲದು. ಇಲ್ಲಿ ಪ್ರೀತಿ ಎಂದರೆ ಹದಿಹರೆಯದಲ್ಲಿ ಉಕ್ಕುವ ಭಾವನೆಗಳಲ್ಲ. ಅದಕ್ಕೂ ಮೀರಿದ ಸಾರ್ವಕಾಲಿಕವಾದ, ಸರ್ವಶಕ್ತವಾದ ಪ್ರೀತಿ. ವಿಶ್ವದ ಜನರನ್ನು ಪರಸ್ಪರ ಬೆಸೆದಿಡಬಲ್ಲ ಅನುಭೂತಿ.

ಫೋಟೋ ಕೃಪೆ :google

ತಮ್ಮ ಮೂಲ ಊರಿಂದ, ಹುಟ್ಟಿ ಬೆಳೆದ ಮನೆಯಿಂದ ದೂರವಿರುವ ಯಾರನ್ನೇ ಮಾತಾಡಿಸಿ ನೋಡಿ, ಮನೆಗೆ ಹೋಗಲು ತವಕಿಸುತ್ತಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲಂತೂ ತರಗತಿಗೆ ಒಂದೆರಡು ದಿನಗಳ ರಜೆಯಿದ್ದರೂ ಮನೆಗೆ ಓಡುವ ಹಂಬಲ! ಹೆತ್ತವರನ್ನು, ಒಡಹುಟ್ಟಿದವರನ್ನು ಕಾಣುವುದರ ಜೊತೆಗೆ ಮನೆಯೊಳಗೆ ಹಾಸುಹೊಕ್ಕಾಗಿರುವ ನಮ್ಮತನದ ಹುಡುಕಾಟ. ಅದೇನೆಂದು ಕೇಳಿದರೆ ಪದಗಳಿಗೆ ನಿಲುಕದ ಭಾವ.

ದಣಿವಾಗಿ ಮನೆಯೊಳಗೆ ಸೇರಿದರೆ ಹಾಯೆನಿಸದ ಮಂದಿ ಇರಲಾರು. ಆಫೀಸಿನ ಸಮಯ ಮುಗಿಯುತ್ತಲೂ ಮನೆ ಮನೆ ತಲುಪುವ ಧಾವಂತ ನಮ್ಮದು. ಮನೆಯ ನೀರಲ್ಲೂ ಒಂದು ಪ್ರೀತಿಯ ಸ್ಪರ್ಶ. ಪಟಪಟನೆ ಮುಖಕ್ಕೆ ನೀರೆರಚಿಕೊಂಡರೆ ಸರಿ,ದಣಿವೆಲ್ಲ ಮಾಯ. ಮನೆಮಂದಿಯ ಒಂದು ನಗು ಬಳಲಿಕೆಗೆ ಆಸರೆ. ಉಸ್ಸಪ್ಪಾ ಎಂದು ಮನೆಗೆ ಹೋದರೂ ಮತ್ತೆ ಮನೆ ಸಾಮಾನು, ತರಕಾರಿ ಎಂಬಿತ್ಯಾದಿ ಓಡಾಟ. ಅಡುಗೆ, ಮರುದಿನಕ್ಕೆ ಬೇಕಾದ ತಯಾರಿ ಇದೆಲ್ಲ ಕೆಲಸಗಳನ್ನು ಯಾರೂ ಕೇವಲ ಕರ್ತವ್ಯವೆಂಬ ಮಾತ್ರಕ್ಕೆ ಮಾಡುವುದಿಲ್ಲ. ಅದರಲ್ಲಿ ಮನೆ ಮಂದಿಯೆಲ್ಲರ ಕುರಿತಾದ ನೂರಾರು ಭಾವಗಳು ಮಿಳಿತವಾಗಿರುತ್ತದೆ. ಮನೆಯ ಗೋಡೆ ಗೋಡೆಗಳಿಗೂ ನಮ್ಮ ಭಾವನೆಗಳು ಅರ್ಥವಾಗುತ್ತವೇನೋ, ಅಲ್ಲವೇ?



ನಮ್ಮ ಮನೆಯ ತುಡಿತ ಎಲ್ಲರಿಗೂ ಇದ್ದದ್ದೇ. ಸ್ವಂತ ಮನೆ ಕಟ್ಟಿಸಬೇಕು. ಅದಕ್ಕೇನು ಹೆಸರಿಡುವುದು ಎಂಬ ಬಗ್ಗೆ ಸಾಕಷ್ಟು ಚರ್ಚಿಸುತ್ತೇವೆ. ಮಗುವಿಗೆ ಹೆಸರಿಟ್ಟಂತೆ ಅಕ್ಕರೆಯಿಂದ ಮನೆಗೂ ಹೆಸರಿಡುತ್ತೇವೆ. ಅದಕ್ಕೆ ಯಾವ ಬಣ್ಣದ ಸುಣ್ಣ ಹೊಡೆಸಬೇಕು, ಉಪಯೋಗಿಸುವ ಟೈಲ್ಸ್ ಯಾವ ಬಣ್ಣದ್ದಿರಬೇಕು ಇತ್ಯಾದಿ ಇತ್ಯಾದಿಯಾಗಿ ಮನೆ ಮಂದಿಯೆಲ್ಲ ಚರ್ಚಿಸಿ ತೀರ್ಮಾನಕ್ಕೆ ಬರುತ್ತಾರೆ. ಪುಟ್ಟ ಮಗುವಿಗೆ ಬಟ್ಟೆ ಕೊಂಡುಕೊಂಡ ಹಾಗೆ. ಹೊಸ ಜಗತ್ತಿನ ಅನಿವಾರ್ಯತೆಗೆ ತಕ್ಕಂತೆ ಫ್ಲಾಟ್ ನಲ್ಲಿ ವಾಸ್ತವ್ಯ ಹೂಡಿದ್ದರೂ ‘ನಮ್ಮ ಫ್ಲಾಟ್’ ಅನ್ನುವುದಿಲ್ಲ. ನಮ್ಮ ಮನೆ ಮನೆ ಅನ್ನುತ್ತಾರೆ.
ಸ್ನೇಹಿತರು, ನೆಂಟರಿಷ್ಟರನ್ನು ಮನೆಗೆ ಕರೆಯುವುದರಲ್ಲೂ ಒಂದು ಸಂಭ್ರಮ. ಕರೆದವರೆಲ್ಲ ಬರದೆ ಹೋದರೆ ಮನೆಯವರಿಗೆ ಯಾಕೋ ಖೇದ. ಬಂದರೆ ಸಂತೋಷ. ಬಂದವರಿಗೆ ಬೇಕು ಬೇಕಾದಂತೆ ಉಪಚರಿಸಿ ಕಳುಹಿಸುವುದರಲ್ಲೂ ಒಂದು ತೃಪ್ತಿ ಇರುತ್ತದೆ. ಇನ್ನು ಕೆಲವು ಬಾರಿ ಯಾರದ್ದಾದರೂ ಮನೆಗೆ ಹೋಗಬೇಕಾದರೆ ಅವರು ನಮ್ಮೊಂದಿಗೆ ಹೇಗೆ ಇರುತ್ತಾರೆ ಎಂಬುದನ್ನೂ ಗಮನಿಸುತ್ತೇವೆ. “ಅವರೇನು ಇದುವರೆಗೂ ಒಂದು ಬಾರಿಯೂ ನಮ್ಮ ಮನೆಗೆ ಬರಲಿಲ್ಲ. ನಾವು ಏಕೆ ಹೋಗಬೇಕು?” ಅಂದುಕೊಳ್ಳಬಹುದು ಅಥವಾ “ಅವರು ನಮ್ಮನೆಗೆ ಎಷ್ಟೋ ಸಲ ಬಂದಿದ್ದಾರೆ. ನಾವೇ ಇದುವರೆಗೂ ಹೋಗಿಲ್ಲ ಹೋಗಬೇಕು” ಅಂದುಕೊಳ್ಳುತ್ತೇವೆ. ಅಂದರೆ ಮನೆಗೂ ಆತ್ಮೀಯತೆಗೂ ಅವಿನಾಭಾವ ಸಂಬಂಧ. ಆತ್ಮೀಯರ ಮನೆಗಳಿಗೆ ಹೋಗುತ್ತೇವೆ. ಆತ್ಮೀಯರನ್ನು ಮನೆಗೆ ಕರೆಯುತ್ತೇವೆ!

ಫೋಟೋ ಕೃಪೆ :google

ಮನೆ ಮಗಳಿಗೆ ಮದುವೆ ಮಾಡಬೇಕಾದರೂ ವರನ ಮನೆ ನೋಡುವುದು ಎಂಬ ಶಾಸ್ತ್ರ ಇದೆ. ಎಲ್ಲವೂ ಹಿರಿಯರು ನೋಡಿ ಮಾಡಿಸುವ ಮದುವೆ ಆಗಿದ್ದ ಕಾಲದಲ್ಲಿ ಬಹುಶಃ ಮನೆ ಮಂದಿಯ ಮನಸ್ಸನ್ನರಿಯುವ ಪ್ರಯತ್ನ ಇದ್ದರೂ ಇರಬಹುದು ಈ ಶಾಸ್ತ್ರ. ಮನೆ ಎಷ್ಟು ವಿಶಾಲವಾಗಿದೆ. ಎಷ್ಟು ಒಪ್ಪ ಓರಣವಾಗಿದೆ ಎಂಬುದರ ಮೇಲೂ ಮನೆಯೊಳಗೆ ಇರುವ ಜನರ ಆಸಕ್ತಿ ಎಂಥದ್ದು ಎಂಬುದನ್ನು ತಿಳಿಯಬಹುದು. ಮನೆಯನ್ನು ಅಲಂಕರಿಸಿರುವ ರೀತಿ, #ಮನೆ ಮನೆ ಎದುರಿನ ಹೂತೋಟ, ತುಳಸಿ ಕಟ್ಟೆ ಇವೆಲ್ಲಕ್ಕೂ ಅದರದೇ ಆದ ಮರ್ಯಾದೆ ಇದೆ. ದೊಡ್ಡ ಮನೆ ಇದ್ದು ಸರಿಯಾಗಿ ಸ್ವಚ್ಛಗೊಳಿಸದೇ ಇದ್ದರೇನು ಪ್ರಯೋಜನ? ಅದೇ ಚಿಕ್ಕ ಮನೆಯಾದರೂ ಚೊಕ್ಕವಾಗಿದ್ದರೆ ಮನಸ್ಸಿಗೆ ಹಿತವಾಗಿರುತ್ತದೆ.


  • ಬಾಣಾವರ ಶಿವಕುಮಾರ್ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು )

0 0 votes
Article Rating

Leave a Reply

1 Comment
Inline Feedbacks
View all comments

[…] ಜ. #ಕಾರ್ಯಪ್ಪನವರ ಉತ್ತರ ತುಂಬಾ ಮಾರ್ಮಿಕವಾಗಿಯೂ […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW