ಕವಿ ಚಾಮರಸರ ಜನ್ಮ ಸ್ಥಳದಲ್ಲಿ ‘ನನ್ನನುಭವ’…




ಗದಗ ಜಿಲ್ಲೆಯಿಂದ ಸುಮಾರು ೨೨ಕಿಮೀ ಅಂತರದಲ್ಲಿರುವ ಪುಟ್ಟ ಗ್ರಾಮ ‘ನಾರಾಯಣಪೂರ’. ಈ ಗ್ರಾಮಕ್ಕೆ ಗತಕಾಲದ ಇತಿಹಾಸವಿದೆ. ಲೇಖಕ ಪ್ರವೀಣ ಮ ಹೊಸಮನಿ ಅವರು ಅಲ್ಲಿ ಅವರಿಗಾದ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ತಪ್ಪದೆ ಓದಿ…

“ನನ್ನನುಭವ”.. ವಿಜಯಪುರದಿಂದ ದೂರದ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಸ್ನೇಹಿತನ ಮದುವೆಗೆಂದು ಪ್ರಯಾಣ ಬೆಳಸಿ ಮದುವೆಯ ನಂತರ ಆಕಸ್ಮಿಕವಾಗಿ ಜಂಗಮವಾಣಿಯ ಕರೆ ಆ ಕಡೆಯಿಂದ ಬಂತು..ಬಂದಿದ್ದೆ ತಡ ಲೋऽऽನೀನೂ ಇಲ್ಲೇ ಗದಗ ಸಮೀಪಾನೆ ಬಂದಿದಿಯಾ ಅಂತೆ ಮಗನೆऽऽ ನಮ್ಮೂರು, ಗದಗ ಬಂದಬಿಟ್ಟ ಹೋಗಪ್ಪ ಬಾಳ ದಿನಾ ಆಯ್ತ ಇಬ್ಬ್ರು ಸೇರಿ ಅಂತ ನನ್ನ ಗೆಳೆಯ ಖುಷಿಯಿಂದ ಕರೆದ.

ನಾನೂ ಕೂಡಾ ‘ಬರ್ತಿದಿನಿ ಲೋऽऽ… ಆ ಕಡೆಗೆ’ ಅಂತಾ ಹೇಳಿದಾಗ ಎಲ್ಲಿಲ್ಲದ ಉತ್ಸಾಹದಿಂದ ‘ಬಾ… ಲೋ… ನಾನ್ ಮೋಟಾರ್ ಸೈಕಲ್ ತಗೊಂಡ ಬಂದು ಬಸ್ ಸ್ಟಾಪ್ ಅಲ್ಲಿ ಇರತೀನಿ ಅನ್ನೋವಷ್ಟರಲ್ಲಿ ಗದಗ ಜಿಲ್ಲೆಗೆ ಬಂದೆ. ವರ್ಷಗಳುರುಳಿದ ಮೇಲೆ ನಾನೂ ನನ್ನ ಗೆಳೆಯ ಸಿಕ್ಕ ಖುಷಿ ಮನಸ್ಸಿಗೆ ಆನಂದ ತಂದಕೊಟ್ತು.. ನಿಮ್ಮ ಆತ್ಮೀಯರನ್ನ ಆಗಾಗ ಭೇಟಿ ಮಾಡಿ ಅದರ ಅನುಭವವೇ ಬೇರೆ.. ನಾನೂ ಭೇಟಿ ನೀಡಿದ ನನ್ನ ಗೆಳೆಯನ ಊರೇ “ನಾರಾಯಣಪೂರ” ಗ್ರಾಮದ ಪ್ರವೇಶದಲ್ಲಿಯೇ ರಸ್ತೆ ಮಾರ್ಗದ ಹಲಗೆಯ ಮೇಲೆ “ಕವಿ ಚಾಮರಸರ ಜನ್ಮ ಸ್ಥಳ ನಾರಾಯಣಪೂರ” ಅಂತ ಬರವಣಿಗೆ ಕಂಡು, ಈ ಗ್ರಾಮಕ್ಕೊಂದು ವಿಶೇಷತೆ ಇದೆ ಎಂದಿನಿಸಿತು.

ಗ್ರಾಮದ ಭಾಗಶಃ ಮನೆಗಳು ಕೂಡಾ ಹಳೆಯ ಕಾಲದ ತೊಲಬಾಗಿಲು, ಮನೆಯೊಳಗೆ ಮನೆಯ ಒಳ ಚಾವಣಿಯೂ ಕೂಡಾ ಕಟ್ಟಿಗೆಯದೆ, ಪ್ರತಿಯೊಂದು ಮನೆಯೂ ಗೌಡರ ಮನೆಯಂತೆಯೇ ವಿಭಿನ್ನ ಶೈಲಿಯ ಬಾಗಿಲು ಮನೆಯ ನೋಟಕ್ಕೆ ಸಿರಿಯಂತೆ ಕಾಣುವಂತೆ ಈ ಪುಟ್ಟ ಗ್ರಾಮದ ಮನೆಗಳು ಇದ್ದವು. ಜನರ ಆಡುಮಾತು,ಅವರ ಪ್ರೀತಿ ತುಂಬಾನೆ ವಿಶಿಷ್ಟ. ಆ ಮನೆಯಲ್ಲಿ ನನಗೆ ಖುಷಿ ಕೊಟ್ಟ ಆ ಒಂದು ಮಾತು “ಮಗ್ಗऽऽ ದೂರ ಊರಿಂದ ಬಂದೈತ್ಲಾ ಬಾಳ ಹೊತ್ತ ಆಗೈತಿ ಊಟಾ ಹಚ್ಟಿಕೊಡತಿನಿ ಇಬ್ಬ್ರು ಬರ್ರಿ ಅಪ್ಪಚಿऽऽ” ಆ ಅವ್ವನ ಮಾತು ಮನತುಂಬಿದಂತಾಯ್ತು. ಗೆಳೆಯನ ಅಪ್ಪನಲ್ಲಿ ನನ್ನಪ್ಪನ ಪ್ರೀತಿ ಕಂಡೆ, ಅಲ್ಲಿಂದ ವಾಪಸ್ ವಿಜಯಪುರಕ್ಕೆ ಬರುವ ಸಮಯದಲ್ಲಿ ‘ಹುಡುಗ ದೂರ ಹೊಕ್ಕತಿ ಏನ್ರೆ ಮಾಡಿ ಕಟ್ಟಲೇ’ ಅಂದು ಕಟ್ಕೊಂಡ ತಂದಿಟ್ಟು …”ಹೋಗಬಾರತಿಯಾ ಪಾ… ಬಾ ಮತ್ತ ಇಕಾಡಿ, ರೊಕ್ಕದು ಅದಾವಿಲ್ಲ ದೂರಾ-ಬಾರಾ ದಾರಿ ಮೊದ್ಲೇ” ಅಂತ ಹೇಳಿ ರೊಕ್ಕ ಇಟ್ಟ ಕಳಸದ ನಮ್ಮಪ್ಪ..

ಈ ಅನುಭವ ನೀಡಿದ ನನ್ನ ಪ್ರೀತಿಯ ಆತ್ಮೀಯ ಗೆಳೆಯನಿಗೆ ನಾನೂ ಸದಾ ಚಿರಋಣಿಯಾಗಿರುವೆ.. ಈ ಗ್ರಾಮದ ಗೊತ್ತಿದ್ದ ಕೊಂಚ ಮಾಹಿತಿ ನಿಮ್ಮಲ್ಲಿ ಹಂಚಿಕೊಂಡಿರುವೆ. ಗದಗ ಜಿಲ್ಲೆಯಿಂದ ಸುಮಾರು ೨೨ಕಿಮೀ ಅಂತರದಲ್ಲಿರುವ ಪುಟ್ಟ ಗ್ರಾಮ ‘ನಾರಾಯಣಪೂರ’ ಸರಿಸುಮಾರು(ಅಂದಾಜು) ೩೦೦ ರಿಂದ ೫೦೦ ಮನೆಗಳುಳ್ಳ ಚಿಕ್ಕ ಹಳ್ಳಿ. ಈ ಗ್ರಾಮಕ್ಕೆ ಗತಕಾಲದ ಇತಿಹಾಸವಿರುವುದು ಮತ್ತೊಂದು ಸಂಗತಿ. ಕ್ರಿ.ಶ ೧೪೩೦ ರ ಕಾಲ ಕವಿ ‘ ಚಾಮರಸ ‘ ರ ಜನ್ಮಸ್ಥಳ ಎಂಬುದು ಈ ಗ್ರಾಮದ ವಿಶೇಷತೆ. ವೀರಶೈವ ಧರ್ಮದ ಇವರು ಅಲ್ಲಮನ ಕಥೆ “ಪ್ರಭುಲಿಂಗಲೀಲೆ ” ಯ ಕಾವ್ಯದ ಕರ್ತೃ ಕವಿ ‘ಚಾಮರಸ’. ಇವರು ನಡುಗನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು,೧೨ನೇಯ ಶತಮಾನದ ಸಂತ ಅನುಭಾವಿ ಕವಿಯಾದ ಅಲ್ಲಮಪ್ರಭುವಿನ ಜೀವನಾಧಾರಿತ ಸಾಧನೆಗಳನ್ನ ಕೇಂದ್ರವಾಗಿಟ್ಟುಕೊಂಡು “ಪ್ರಭುಲಿಂಗಲೀಲೆ” ಎಂಬ ಕಾವ್ಯವನ್ನು ರಚಿಸಿ ಪ್ರಸಿದ್ಧಿ ಪಡೆದ ಮೇರು ಕವಿ ಚಾಮರಸರು.

ಈ ಕವಿಯ ಬರವಣಿಗೆಯ ವಿಶೇಷತೆ ಎಂತೆಂದರೆ ಇವರು ಯುದ್ಧದಲ್ಲಿ ಮಡಿದ ಹಾಗೂ ದಿನವಿಡಿ ಕದನ, ಜನನ- ಮರಣಗಳ ಬಗೆಗಿನ ಬರವಣಿಗೆಯೇ ಇವರ ಲೇಖನಿಯಿಂದ ದೂರವಿಟ್ಟಿರುವದು ಇವರ ಕಟ್ಟುನಿಟ್ಟಿನ ಬರವಣಿಗೆಯ ವಿಶೇಷತೆ..ಇವರ “ಪ್ರಭುಲಿಂಗಲೀಲೆ”ಯ ಕಾವ್ಯ ೧೫ ಅಧ್ಯಾಯಗಳು ಸರಿಸುಮಾರು ೬೦೦ ಪದ್ಯಗಳನ್ನೊಳಗೊಂಡಿದ್ದು ಕಾವ್ಯವು ನಡುಗನ್ನಡ ಭಾಷೆಯ ‘ಭಾಮಿನಿಷಟ್ಪದಿ’ಯಲ್ಲಿ ರಚಿತವಾಗುವದರ ಜೊತೆಗೆ ಉತ್ತಮ ಪ್ರಭಾವಶಾಲಿಯು ಆಗಿದೆ.. ಈ ಕಾವ್ಯವು ಸಂಸ್ಕೃತ, ತೆಲುಗು ಹಾಗೂ ಮರಾಠಿ ಭಾಷೆಗಳಲ್ಲಿ ಪರಿವರ್ತನೆ ಹೊಂದಿ ಕೀರ್ತಿ ಪಡೆದ ಕನ್ನಡದ ಕಾವ್ಯವಾಗಿದೆ. ಇದಿಷ್ಟು ನಾ ಅರಿತ ಮಾಹಿತಿ ಧನ್ಯವಾದಗಳು.


  • ಪ್ರವೀಣ ಮ ಹೊಸಮನಿ (ನಾಗಠಾಣ) ವಿಜಯಪುರ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading