ನಾಮದೇವ ಕಾಗದಗಾರ ಅವರು ವ್ಯಂಗ್ಯಚಿತ್ರಕಾರರು, ರೇಖಾಚಿತ್ರ, ವನ್ಯಜೀವಿ ಛಾಯಾಗ್ರಾಹಕ, ಕಲಾವಿದರಾಗಿದ್ದು, ಕುಂಚ-ಲೇಖನಿ-ಛಾಯಾಗ್ರಹಣ ಹೀಗೆ ಬಹುಮುಖ ಪ್ರತಿಭೆಯುಳ್ಳವರು. ಅವರ ಎರಡನೇಯ ಕೃತಿ ‘ನೆಲದ ನಂಟು’ ಪರಿಚಯವನ್ನು ಡಾ.ಪ್ರಕಾಶ ಬಾರ್ಕಿಯವರು ಓದುಗರಿಗೆ ಮಾಡಿದ್ದಾರೆ. ಮುಂದೆ ಓದಿ…
ರಾಣೇಬೆನ್ನೂರಿನ “ನಾಮದೇವ ಕಾಗದಗಾರ’ ( Namadev Kagadagar )ರ ಎರಡನೇ ಕೃತಿ “#ನೆಲದ_ನಂಟು” ಕೈ ಸೇರಿ ಮೂರು ದಿನವಾಯಿತು. ಬರಹಗಳು ಸರಾಗವಾಗಿ ಓದಿಸಿಕೊಳ್ಳುತ್ತಿವೆ. ಸುಂದರ ವಿಶಿಷ್ಟ ನಿರೂಪಣೆ ನಮ್ಮನ್ನು ಇನ್ನಷ್ಟು ಆಕರ್ಷಣೆಗೆ ಇಡುಮಾಡುತ್ತೆ.
ನನ್ನನ್ನು ಮೊದಲು ಸೆಳೆತಕ್ಕೆ ಒಳಗಾಗಿಸಿದ್ದು ಪುಸ್ತಕದ ಮುಖಪುಟ ಚಿತ್ರ. ನೆಲದಡಿಯಲ್ಲಿ ಗರ್ಭಾಕಾರದ ಚಿತ್ರ. ಸ್ವತಃ ಲೇಖಕರ ಕಲ್ಪನೆ ಅದ್ಭುತವೆನಿಸಿತು. “ನೆಲದ ನಂಟು”ಗೆ ಸಾರ್ಥಕ ಕಲ್ಪನಾ ಚಿತ್ರ. ಭೂಮಿಯೊಂದಿಗಿನ ಅನನ್ಯ ಬಂಧ.
ಲೇಖಕರು ವ್ಯಂಗ್ಯಚಿತ್ರಕಾರರು, ರೇಖಾಚಿತ್ರ, ವನ್ಯಜೀವಿ ಛಾಯಾಗ್ರಾಹಕ, ಕಲಾವಿದರಾಗಿದ್ದು, ಕುಂಚ-ಲೇಖನಿ-ಛಾಯಾಗ್ರಹಣದ ಸಮ್ಮಿಲನ. ಬಹುಮುಖ ಪ್ರತಿಭೆಯ ಲೇಖಕರು ಸದಾ ನಿಸರ್ಗದತ್ತಲೆ ತುಡಿಯುವ ಮನಸ್ಸು, ಜೀವಪರ ಕಾಳಜಿ ಹೊಂದಿದ ಹೃದಯವುಳ್ಳವರು. ಸದಾ ಸಮಾಜಮುಖಿ ಚಿಂತನೆ.

(ನಾಮದೇವ ಕಾಗದಗಾರ ಅವರು ರಚಿಸಿದ ಚಿತ್ರ)
ಪುಸ್ತಕದಲ್ಲಿನ ಅಷ್ಟೂ ಬರಹಗಳನ್ನು ಓದುಗರಿಗೆ ನೆರವಾಗಲೆಂದು ಏಳು ವಿಭಾಗಗಳಲ್ಲಿ ಇಪ್ಪತ್ತೆಂಟು ಲೇಖನಗಳನ್ನು ಹೆಣೆದು ಕೈಗಿಟ್ಟಿದ್ದಾರೆ.
ನಿಸರ್ಗ ತನ್ನೊಡಲಲಿ ಬಚ್ಙಿಟ್ಟಕೊಂಡ ಸಾವಿರಾರು ರಹಸ್ಯಗಳಲ್ಲಿ ಕೆಲವನ್ನು ಹೆಕ್ಕಿ ಲೇಖನವಾಗಿಸಿದ್ದಾರೆ. “ಮರಹತ್ತುವ ಮೇಕೆ”, “ಜಗದ ದೈತ್ಯ ಮರಗಳು”,ಕೀಟಗಳ ಸೋಜಿಗದ ಜಗತ್ತು, “ಪಕ್ಷಿಗಳ ರೋಮಾಂಚನಕಾರಿ ಜೀವನಶೈಲಿ”, “ಕೀಟಗಳ ಮಿಲನ ಮಹೋತ್ಸವದ” ರೋಚಕ ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಲೇಖನಕ್ಕಿಳಿಸಿದ್ದಾರೆ. ಓದುಗರನ್ನು ಒಮ್ಮೇಲೆ ಅಚ್ಚರಿಗೀಡುಮಾಡಿ, ನಿಸರ್ಗದತ್ತ ಕಣ್ಣರಳಿಸಿ ನೋಡುವ ದೃಷ್ಟಿಕೋನ ದಕ್ಕುವಂತೆ ಮಾಡಿದ್ದಾರೆ.

ನಾನು ಪಿ.ಯು.ಸಿಯಲ್ಲಿ ಓದಿದ #ತೇಜಸ್ವಿಯವರ “#ಸುಷ್ಮಾ_ಮತ್ತು_ಹಕ್ಕಿ_ಮರಿ” ಪಾಠ ಕಣ್ಣ ಪರಿಧಿಯ ಮುಂದೆ ಹಾದು ಹೋದಂತಾಯಿತು. ತೇಜಸ್ವಿಯವರು ಸ್ವತಃ ಹೇಳಿ ಬರೆಸಿದಂತ ಬರಹಗಳು. ಹಕ್ಕಿಗಳು ಗೂಡು ಕಟ್ಟುವ ರೀತಿ ನೀತಿಗಳ ವಿವರಗಳು ವರ್ಣನಾತೀತ. ಮಣ್ಣಿನಿಂದ, ಹುಲ್ಲಿನಿಂದ ಹೆಣೆದು, ನೆಲದ ಮೇಲೆ , ಮೀನಿನ ಮುಳ್ಳಿನಿಂದ ಈತ್ಯಾದಿ ಹಲವು ರೀತಿ ಗೂಡು ರಚಿಸುವ ಪಕ್ಷಿಗಳ ಜೀವನ ಶೈಲಿ ನಿಸರ್ಗದ ವೈಚಿತ್ರ್ಯಕ್ಕೆ ಸಾಕ್ಷಿ.ಇವುಗಳು ಶಾಲೆಯ ಪಠ್ಯದಲ್ಲಿ “ಪಾಠ”ಗಳಾದರೆ ಮಕ್ಕಳು ಪರಿಸರದತ್ತ ಸೂಕ್ಷ ಸಂವೇದನಾ ಶಕ್ತಿ ಬೆಳಸಿಕೊಳ್ಳುವುದರಲ್ಲಿ ಅಚ್ಚರಿಯಿಲ್ಲ.
ನಮ್ಮ ಪೂರ್ವಜರ ಮಾಹಿತಿ, ಭೂತಕಾಲವನ್ನು ಹಿಡಿದಿಟ್ಟು ಹಲವು ತಲೆಮಾರುಗಳಿಗೆ ಪೂರ್ವಚಿತ್ರಣ ವರ್ಗಾಯಿಸುವ “#ಹೆಳವರ” ಬಗೆಗಿನ ಲೇಖನ ಸಂಪೂರ್ಣ ಮಾಹಿತಿ ಕಣಜವಾಗಿದೆ. ಹಳೆಯ ಕೊಂಡಿ ಕಳಚಿ ಹೋಗುವ ಭೀತಿ ವ್ಯಕ್ತವಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಅವನತಿಗೆ ಸಾಗುವ ವಿಶಿಷ್ಟ ವರ್ಗಗಳ ಬಗೆಗಿನ ಕಳವಳವಿದೆ.
ತಂದೆ ಪದಗಳಿಗೆ ದಕ್ಕದ ಗದ್ಯ, ತಾಯಿ ಅಕ್ಷರ ಮೀರಿದ ಅತಿಥಿ, ಬದುಕ ದಾರಿಗೆ ದೀಪ ಎನ್ನುವ ಲೇಖಕ ತನ್ನ ತಂದೆ-ತಾಯಿಯ ಆರ್ದ್ರ ಭಾವವನ್ನು ಬರೆದುಕೊಂಡು ನಮ್ಮನ್ನು ಚಿಂತನೆಗೆ ದೂಡುತ್ತಾರೆ.
ಹಲವು ವಿಶಿಷ್ಟ ಸಾಧಕರ ಪರಿಚಯ ಮಾಡಿಸುತ್ತಾ ಪ್ರೇರೆಪಿಸುವ, ಅಲಕ್ಷಿತ ಐತಿಹಾಸಿಕ ಸ್ಥಳಗಳ ಸಂಪೂರ್ಣ ಮಾಹಿತಿ ದಾಖಲಿಸುತ್ತಾ ಸಂಬಂಧಪಟ್ಟವರನ್ನು ಸೆಳೆಯುವ ಪ್ರಯತ್ನವಿದೆ.
ಇವೆಲ್ಲ ಲೇಖನಗಳ ವಿಚಾರಧಾರೆ ಒಂದಾದರೆ, ” ಮಹಿಳಾ ದೌರ್ಜನ್ಯಕ್ಕೆ ಕೊನೆ ಎಂದು? ” ಪ್ರಶ್ನಿಸುವ ಬರಹ ಮೌನವಾಗಿ ಕಾಡುತ್ತದೆ.
“ಬದುಕಿನ ಮಗ್ಗಲುಗಳಿಗೆ ರೇಖೆ ರೂಪ”, “ಹಳ್ಳಿರಂಗ ಎಂಬುವ ರಾತ್ರಿ ಶಾಲೆ” , ಕದರಮಂಡಲಗಿ ಕಾಂತೇಶ, “#ಕಾಲ ಗರ್ಭದಲ್ಲಿ” , “ಆರೋಗ್ಯ ಪೂರಕ ಬರಹ”ಗಳ ಬರವಣಿಗೆಯಲ್ಲಿ ವಿಶಿಷ್ಟತೆಯಿದೆ. ಓದಿಸಿಕೊಂಡು ಹೋಗುವ ಶೈಲಿ ಇದೆ. ವ್ಯಕ್ತಿ ಚಿತ್ರಣ ಕಟ್ಟಿಕೊಡುವ ಲೇಖನ ಕ್ರಮ ಅಭಿನಂದನಾರ್ಹ. ಭಾವದಿಂದ ಬಳುವಳಿಯಾಗಿ ಬಂದ ಬರಹಗಳಲ್ಲಿ ತಲ್ಲಣವಿದೆ, ಮೌನವಿದೆ, ಹಸಿವು, ನೋವು, ನಿರಾಡಂಬರ, ಅಂತಃಕರಣವಿದೆ. ನಯನಕ್ಕೆ ನಿರ್ಭಾವುಕ ಭಾಷೆಯೆನಿಸುವ ನುಡಿಚಿತ್ರಗಳು, ಭಾವಬಿತ್ತಿಯೊಂದಿಗೆ ನೇರವಾಗಿ ಹೃದಯಕ್ಕಿಳಿಯುತ್ತವೆ.
ವಿದ್ಯಾರ್ಥಿಗಳು, ಸಮಾಜಮುಖಿ ಚಿಂತಕರು, ನಿಸರ್ಗದ ವೈಚಿತ್ರ್ಯ ಕೆದಕುವವರು, ಅಕ್ಷರ ಅಭಿಮಾನಿಗಳಿಗೆ “ನೆಲದ ನಂಟು” ಆತ್ಮೀಯ ಸಂಗಾತಿ. ಓದು, ಆಸ್ವಾದನೆ, ಆನಂದ ನೀಡಿ ಆಶ್ಚರ್ಯಗೊಳಿಸುವುದರಲ್ಲಿ ಮತ್ತೊಂದು ಮಾತಿಲ್ಲ. ಜೀವಪರ ನಿಲುವುಗಳು, ಸೂಕ್ಷ್ಮ ಸಂವೇದನಾ ಬರಹಗಳು ನಮ್ಮಿಂದ ವಿಭಿನ್ನವಾಗಿ ಓದಿಸಿಕೊಳ್ಳುತ್ತವೆ. ಸಂಗ್ರಹಯೋಗ್ಯ ಅಪರೂಪ ಲೇಖನಗಳ ಸರಮಾಲೆ “ನೆಲದ ನಂಟು”.

( ರವೀಂದ್ರ ಕಲಾಕ್ಷೇತ್ರದಲ್ಲಿ, ನಾಮದೇವ ಕಾಗದಗಾರ ಅವರು ರಚಿಸಿದ ವ್ಯಂಗ್ಯಚಿತ್ರಗಳು)
ಒಂದೆ ಗುಕ್ಕಿಗೆ ಓದಿಸಿಕೊಳ್ಳುವ ಪುಸ್ತಕದ ಕೊನೆಗೊಂದು ಭಾವ ಕಾಡದೆ ಇರದು. ಇನ್ನಷ್ಟೂ, ಮಗದಷ್ಟೂ ಬರಹಗಳಿಬೇಕಿತ್ತೆನ್ನುವ ಖಾಲಿತನ. ಪುಸ್ತಕ ಪ್ರೇಮಿಗಳು, ಸಾಹಿತ್ಯಾಭಿಮಾನಿಗಳು “ನೆಲದ ನಂಟು” ಕೈಗೆ ಅಂಟಿಸಿಕೊಳ್ಳಲು….

ಪುಸ್ತಕದ ಹೆಸರು: ನೆಲದ ನಂಟು.
ಲೇಖಕರು: ನಾಮದೇವ ಕಾಗದಗಾರ.
ಬೆಲೆ: 120 ರೂಪಾಯಿಗಳು.
ಪ್ರಕಾಶಕರು: ಕಾಗದ ಸಾಂಗತ್ಯ ವೇದಿಕೆ. ರಾಣೇಬೆನ್ನೂರು.
ಖರೀದಿಸಲು ಮತ್ತು ಅಭಿಪ್ರಾಯ ವ್ಯಕ್ತಪಡಿಸಲು:
ಸಂಪರ್ಕ :: 99804 30006.
- ಡಾ.ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
