‘ನೋವಾಗುತ್ತದೆ’ ಕವನ – ಡಾ. ಲಕ್ಷ್ಮಣ ಕೌಂಟೆ

ಜಗದ ಸಂಬಂಧಗಳೆಲ್ಲ ತೋರಿಕೆಯವುಗಳೇ..? ಅವಸರ ಬದುಕಿನಲ್ಲಿ ಪ್ರೀತಿ, ಭಾವಗಳಿಗೆ ಬೆಲೆ ಇದೆಯೇ ? ನೋವಾಗುತ್ತದೆ….ಕವಿ ಡಾ.ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಅರಳಿದ ಭಾವಗಳ ತುಂಬಿದ ಕವನ, ತಪ್ಪದೆ ಓದಿ…

ತೀರ ಬೇಕಾದವರೂ
ಸನಿಹದವರು ಅಂತ ಅಂದುಕೊಂಡವರೇ
ಒಮ್ಮೊಮ್ಮೆ ಕಡೆಗಣಿಸಿದ ಅನುಭವವಾದಾಗ
ನೋವಾಗುತ್ತದೆ
ನೋಯುತ್ತದೆ ಎದೆಯೊಳಗೆ..!!

ಮೃದು ಹೃದಯಕ್ಕೇ ನಮ್ಮವರೇ
ಗುಂಡು ಪಿನ್ನು ಚುಚ್ಚಿದಂಥ
ಅನುಭವವಾಗುತ್ತದೆ..!!
ಮನಸ್ಸು ಒಳಗೊಳಗೇ ಅಳುತ್ತದೆ ಬಿಕ್ಕಳಿಸಿ ಬಿಕ್ಕಳಿಸಿ..!!
ನಯನಗಳಲ್ಲಿ ಅಶ್ರು ಬರಿಸ ಬಾರದೆಂದರೂ
ಅರಿವಿಗೂ ಬಾರದೆ ತೊಟ್ಟಿಕ್ಕುತ್ತವೆ ಹನಿಗಳು..

ಎಷ್ಟೇ ದೂರದಲ್ಲಿದ್ದವರದಾದರೂ ಸರಿಯೇ
ಮನಕ್ಕೆ ಸನಿಹವಾದವರ
ಸಾಂತ್ವನದ ಹಸ್ತಗಳ ಸ್ಪರ್ಶಕ್ಕಾಗಿ ಹಂಬಲಿಸುತ್ತದೆ ಮನಸ್ಸು..
ಪ್ರೀತಿಯಿಂದ ಕಿವಿಯೊಳಗೇ
ಪಿಸು ನುಡಿವ ಹುಸಿ ನಗೆ ನಗುವ
ನಲುಮೆಯ ಸವಿಮಾತಿಗೆ ಹಂಬಲಿಸುತ್ತದೆ ಹೃದಯ..

ಜಗದ ಸಂಬಂಧಗಳೆಲ್ಲ ತೋರಿಕೆಯವುಗಳೇ..?
ಎಲ್ಲ ಅವರವರ ಅವಸರಕ್ಕೆ ಕುದಿವರಾದರೆ
ಪ್ರೀತಿಗೆ ಭಾವಗಳಿಗೆ
ಉಳಿಯುತ್ತದೆ ಎಲ್ಲಿ ಬೆಲೆಯಾದರೂ..!!

ಘಳಿಗೆಗಳ ನಾಟಕ ನೋಡಲೇನೋ
ಸಂತಸ ಸಡಗರ ಸರಿಯೆ,
ಆದರೆ..
ಸುದೀರ್ಘ ಹಲವುಮುಖವಾಡಗಳ
ಬದುಕೆಂಬ ನಾಟಕ ನೋಡಿ ನೋಡಿ
ತಲೆ ಕೆಟ್ಟು ಹಿಡಿಯುತ್ತದೆ ಹುಚ್ಚು..

ಇಂದು ವ್ಯವಹಾರಗಳು
ಸಂತೆ-ಬಿಗ್ ಬಝಾರ್ ಗಳಲ್ಲೇ ನಡೆಯುವುದಿಲ್ಲ..
ಅವುಗಳು ಮನೆಯೊಳಗೂ
ಒಮ್ಮೊಮ್ಮೆ ಮನದೊಳಗೂ ನಡೆಯುತ್ತವೆ
ಅಂತಿಮವಾಗಿ ಗೆಲ್ಲುತ್ತವೆ ಲೆಕ್ಕಾಚಾರಗಳೇ..!!

ಭಾವಗಳೆಲ್ಲ ಅಭಾವಗಳಾಗಿ
ಮೌಲ್ಯ ಅಪಮೌಲ್ಯಗೊಂಡು
ನಿಸ್ಸಾರವಾಗಿ ಅಸಹ್ಯ ಅನ್ನಿಸುತ್ತವೆ..

ಋಷಿ ಮುನಿಗಳು ಕಾಡು ಪಾಲಾಗಿದ್ದು
ಸಿದ್ಧಾರ್ಥ ಬುದ್ಧನಾಗಿದ್ದು
ಮಹಾದೇವಿ ನೀರತಾವರೆಯಾಗಿ
ಎಲ್ಲರ ಅಕ್ಕಳಾಗಿದ್ದು
ವೆಂಕಟಪ್ಪ ಪುರಂಧರ ದಾಸರಾಗಿದ್ದು
ಮೀರಾ ತಂಬೂರಿ ಹಿಡಿದದ್ದು
ಇರಬೇಕೇನೋ ಇದಕ್ಕೆಯೇ..!!


  • ಡಾ. ಲಕ್ಷ್ಮಣ ಕೌಂಟೆ – ಕವಿ, ಲೇಖಕರು, ಉಪನ್ಯಾಸಕರು, ಕಲಬುರಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading