‘ಫಣಿಯಮ್ಮ’ ನನ್ನಇಷ್ಟದ ಪುಸ್ತಕಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಎಂ.ಕೆ.ಇಂದಿರಾ ಅವರ ‘ಫಣಿಯಮ್ಮ’ ಕಾದಂಬರಿ ಹಾಗೂ ಚಲನಚಿತ್ರವನ್ನು ನೋಡಿದಾಗ ಅದರಲ್ಲಿನ ಪಾತ್ರ ಲೇಖಕಿ ಅನಿತಾ ಪೈ ಅವರನ್ನು ಕಾಡಿದ ಬಗೆಯನ್ನು ಇಲ್ಲಿ ಚಿತ್ರಿಸಿದ್ದಾರೆ. ಎಲ್ಲರೂ ಓದಿ. ನೀವು ಪುಸ್ತಕಗಳನ್ನು ಓದುತ್ತಿದ್ದರೇ, ನಿಮ್ಮ ನೆಚ್ಚಿನ ಪುಸ್ತಕಗಳ ಬಗ್ಗೆ ಬರೆದು ಕಳುಹಿಸಿ …

ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಈ ಕಾದಂಬರಿಯನ್ನು ಓದಿದ್ದೆ. ಫಣಿಯಮ್ಮ ಚಲನಚಿತ್ರವನ್ನೂ ವೀಕ್ಷಿಸಿದ್ದೆ. ಅಂದಿನಿಂದ ಇಂದಿನವರೆಗೆ ನನ್ನ ಮನಸ್ಸಿನಲ್ಲಿ ಈ ಪಾತ್ರ ಅಚ್ಚಳಿಯದೇ ಉಳಿದುಬಿಟ್ಟಿದೆ‌. ನಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಲು ನಮ್ಮನ್ನು ಪ್ರೀತಿಸುವ ಜೀವನ ಸಂಗಾತಿ ಇದ್ದಾರೆ, ನೋವು ನಲಿವುಗಳಿಗೆ ಸ್ಪಂದಿಸುವ ನಮ್ಮ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳಿದ್ದಾರೆ. ಅವರು ತಮ್ಮ ತಮ್ಮ ಕೆಲಸಗಳಲ್ಲಿ ವ್ಯಸ್ತರಾದಾಗ ನಮಗೆ ನಾವು ಒಂಟಿ ಎಂಬ ಭಾವನೆ ಬರುತ್ತದೆ.

ಈಗಿನ ಕಾಲಕ್ಕೆ ತಕ್ಕಂತೆ ಬೇಕಾದ ಸುಖ ಸೌಲಭ್ಯಗಳಿವೆ, ಮನೋರಂಜನೆಗಳಿವೆ, ಮದುವೆ ಉಪನಯನಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ, ವರ್ಷಕ್ಕೊಮ್ಮೆ ಪ್ರವಾಸ ಹೋಗುತ್ತೇವೆ, ಆದರೂ ಒಮ್ಮೊಮ್ಮೆ ಬೇಜಾರು ಕಾಡುತ್ತದೆ. ಆ ಸಂದರ್ಭದಲ್ಲಿ ನನಗೆ ನೆನಪಾಗುವ ವ್ಯಕ್ತಿ ಈ ಫಣಿಯಮ್ಮ.

ನಮ್ಮ ಕುಟುಂಬದಲ್ಲೂ ಈ ಫಣಿಯಮ್ಮನಂತಹ ವ್ಯಕ್ತಿ ಇದ್ದದ್ದೂ ಅದಕ್ಕೆ ಒಂದು ಕಾರಣವಿರಬಹುದು. ನಮ್ಮ ಅಜ್ಜಿಯ(ತಂದೆಯ ತಾಯಿ) ಓರಗಿತ್ತಿ ಒಬ್ಬರಿಗೆ ಒಂಬತ್ತು ವರ್ಷಕ್ಕೆ ಮದುವೆಯಾಗಿ ಒಂದು ವರ್ಷದೊಳಗೆ ಗಂಡ ಅನಾರೋಗ್ಯದಿಂದ ತೀರಿಕೊಂಡಾಗ ಮುಂದಿನ ಎಪ್ಪತ್ತು ಎಂಬತ್ತು ವರ್ಷಗಳನ್ನು ವಿಧವೆಯಾಗಿ ಫಣಿಯಮ್ಮನಂತೆ ಜೀವನ ಸವೆಸಿದ್ದರು. ಯಾವುದೋ ಸಂದರ್ಭದಲ್ಲಿ ಗಂಡನ ಮನೆಗೆ ಹೋದಾಗ ತವರಿನಿಂದ ಬಂದ ಪತ್ರ ತಂದುಕೊಟ್ಟಿದ್ದು ಒಂದೇ ಗಂಡನ ಒಡನಾಟದ ಸವಿನೆನಪು. ಬೇಜಾರು ಎನಿಸಿದಾಗಲೆಲ್ಲ ನೆನಪಾಗುವವರೇ ಈ ಅಜ್ಜಿ ಮತ್ತು ಫಣಿಯಮ್ಮ.

೧೮೪೪ ರಲ್ಲಿ ಮಲೆನಾಡಿನ ಒಂದು ಹಳ್ಳಿಯಲ್ಲಿ ಜನಿಸಿದ ಈ ಫಣಿಯಮ್ಮ ಲೇಖಕಿಯ ಸಂಬಂಧಿ. ಎಂಟು ವರ್ಷಕ್ಕೆ ಮದುವೆ ಮಾಡಿದರು, ವರ್ಷದೊಳಗೆ ಗಂಡ ಹಾವು ಕಚ್ಚಿ ಸತ್ತು, ಇವರು ವಿಧವೆಯಾಗುತ್ತಾರೆ. ಹದಿಮೂರನೇ ವಯಸ್ಸಿಗೆ ಋತುಮತಿಯಾದಾಗ ಕೂದಲು ತೆಗೆಸಿ ಮಡಿ ಮಾಡಿ ಕತ್ತಲೆ ಕೋಣೆಗೆ‌ ನೂಕುತ್ತಾರೆ. ನೂರ ಎಂಟು ವರ್ಷಗಳು ಬದುಕಿದ ಇವರು ತಮ್ಮ ಜೀವನದ ಕೇವಲ ಎಂಟು ಸಂವತ್ಸರಗಳನ್ನು ತಾನಾಗಿ, ತನಗಾಗಿ ಬದುಕಿದರು. ಬಾಕಿ ನೂರು ವರ್ಷಗಳನ್ನು ಅಕ್ಕ, ತಂಗಿ, ಅಣ್ಣ, ತಮ್ಮ, ಅವರ ಮಕ್ಕಳು, ಮೊಮ್ಮಕ್ಕಳಿಗಾಗಿ ಸವೆಸಿದರು. ಬೆಳಗಿನಿಂದ ರಾತ್ರಿಯ ತನಕ ಕೆಲಸ ಮಾಡಿ ಗಂಧದ ಕೊರಡಿನಂತೆ ತಮ್ಮ ಜೀವ ತೇಯ್ದು ಬೇರೆಯವರಿಗೆ ಘಮವಿತ್ತರು. ತಮ್ಮ ವಯಸ್ಸಿನ ಎಲ್ಲರೂ ಬಾಯಿಗೆ ರುಚಿ ಕಂಡದ್ದು ಹೊಟ್ಟೆ ತುಂಬಾ ಉಂಡು, ವಿವಿಧ ವರ್ಣಗಳ ಉಡುಪು ಧರಿಸಿ ಸಂಭ್ರಮ ಪಡುತ್ತಿರುವಾಗ, ಇವರು ಮಾತ್ರ ಒಪ್ಪತ್ತು, ಅರೆ ಹೊಟ್ಟೆ ಉಂಡು, ಬರೀ ಬಿಳಿ ಬಟ್ಟೆ ತೊಟ್ಟುಕೊಂಡು ತಮ್ಮ ಜೀವನದ ಬಣ್ಣವನ್ನೇ ಕಳೆದುಕೊಂಡರು. ತಮ್ಮ ಎಂಬತ್ತನೇ ವಯಸ್ಸಿಗೆ ಆ ಒಪ್ಪತ್ತು ಊಟವನ್ನೂ ಬಿಟ್ಟು ಎರಡು ಬಾಳೆಹಣ್ಣು, ಮಜ್ಜಿಗೆಯಲ್ಲಿ ತಮ್ಮ ಉಳಿದ ಆಯಸ್ಸನ್ನು ಕಳೆದ ಮಹಾನ್ ಸಾದ್ವಿ ಇವರು. ಎಂಟನೇ‌ ವಯಸ್ಸಿನಿಂದ ಜೀವನದ ಕೊನೆ ಗಳಿಗೆಯವರೆಗೆ (೧೯೫೨) ದೇವರ ಧ್ಯಾನ, ಜಪ ತಪಗಳನ್ನು ತಪ್ಪದೇ ಅನುಸರಿಸಿ ಋಷಿ ಸದೃಶ ಜೀವನ ನಡೆಸಿದ, ಇವರ ತಾಳ್ಮೆ, ಸಹನೆ ಮೆಚ್ಚಬೇಕಾದ್ದೇ. ನನಗೆ ಕಾಡುವ ಪ್ರಶ್ನೆಗಳೆಂದರೆ ಇವರಿಗೆ ತಾವು ಒಂಟಿ ಎಂದು ಯಾವತ್ತೂ ಅನಿಸಿಲ್ಲವೇ, ಇವರಿಗೆ ಯಾವತ್ತೂ ಬೇಜಾರು (ಬೋರ್) ಆಗಿದ್ದೇ ಇಲ್ಲವೇ ಎಂಬುದು.

ಇನ್ನು ಲೇಖಕಿಯ ಬರಹದ ಬಗ್ಗೆ ಹೇಳಲು ಮಾತುಗಳೇ ಇಲ್ಲ. ನೂರೈವತ್ತು ವರ್ಷಗಳ‌ ಹಿಂದಿನ ಮಲೆನಾಡಿನ ಸ್ಥಿತಿ ಗತಿ, ಜೀವನ ಶೈಲಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅದನ್ನು ಓದಿಯೇ ತಿಳಿದುಕೊಳ್ಳಬೇಕು.


  • ಅನಿತಾ ಪೈ 
3 2 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW