‘ಪರ್ವ’ ಪುಸ್ತಕ ಪರಿಚಯ – ಪ್ರಭಾವತಿ ಎಸ್ ವಿ

ಭೈರಪ್ಪನವರು ಕನ್ನಡದಲ್ಲಿ ಬರೆಯುತ್ತಿರುವ ಭಾರತೀಯ ಲೇಖಕ. ಭೈರಪ್ಪನವರು ಕನ್ನಡದಲ್ಲಿ ಬರೆಯುತ್ತಿರುವ ಭಾರತೀಯ ಲೇಖಕ. ೧೯೫೮ ರಲ್ಲಿ ಪ್ರಕಟವಾದ ಅವರ ಧರ್ಮಶ್ರೀ *ಯಿಂದ *ಉತ್ತರ ಕಾಂಡ ದ ವರೆಗೆ ಅವರ ಎಲ್ಲಾ ಕೃತಿಗಳನ್ನೂ ಹಲವು ಬಾರಿ ಓದಿದ್ದೇನೆ. ವಿಮರ್ಶೆ ಬರೆದಿದ್ದೇನೆ. ಬದುಕನ್ನು ಅವರಂತೆ ಹಿಡಿದವರು ಬೇರೊಬ್ಬರಿಲ್ಲ. ಪ್ರಭಾವತಿ ಎಸ್ ವಿ ಅವರು ಬರೆದಿರುವ ಪುಸ್ತಕ ವಿಮರ್ಶೆಯನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಪರ್ವ
ಲೇಖಕರು : ಎಸ್ ಎಲ್ ಭೈರಪ್ಪ
ಮುದ್ರಣ: ೨೫ ನೇ ಮುದ್ರಣ ೨೦೨೧
ಪುಟ : ೭೩೪
ಬೆಲೆ : ೭೨೦

ಭೈರಪ್ಪನವರು ಕನ್ನಡದಲ್ಲಿ ಬರೆಯುತ್ತಿರುವ ಭಾರತೀಯ ಲೇಖಕ. ೧೯೫೮ ರಲ್ಲಿ ಪ್ರಕಟವಾದ ಅವರ ಧರ್ಮಶ್ರೀ *ಯಿಂದ *ಉತ್ತರ ಕಾಂಡ ದ ವರೆಗೆ ಅವರ ಎಲ್ಲಾ ಕೃತಿಗಳನ್ನೂ ಹಲವು ಬಾರಿ ಓದಿದ್ದೇನೆ . ವಿಮರ್ಶೆ ಬರೆದಿದ್ದೇನೆ . ಬದುಕನ್ನು ಅವರಂತೆ ಹಿಡಿದವರು ಬೇರೊಬ್ಬರಿಲ್ಲ. ಒಂದು ಗುಂಪಿನ ವಿಮರ್ಶಕರು ಉದ್ದಕ್ಕೂ ಅವರ ಬಗ್ಗೆ ಪೂರ್ವಾಗ್ರಹ ಪೀಡಿತ ದೃಷ್ಟಿ ಕೋನವನ್ನು ಹರಡುತ್ತಲೇ ಇದ್ದಾರೆ . ಆದರೆ ಅವರ ಜನಪ್ರಿಯತೆ ಏರುತ್ತಲೇ ಇದೆ . ಸಿನೆಮಾ ನಾಟಕ ಅನುವಾದ ಹೀಗೆ. ನೇಮಿಚಂದ್ರ ನೆಂಬ ಕವಿ ಹೇಳುವಂತೆ ಅವರು * ಭುವನದ ಭಾಗ್ಯ *

ಹನ್ನೆರಡನೇ ಶತಮಾನದಲ್ಲಿದ್ದ ನೇಮಿಚಂದ್ರ ನೆಂಬ ಕವಿಯು

” ಬೆಲೆಯಿಂದಕ್ಕುಮೆ ಕೃತಿ ಗಾವಿಲ .
ಭುವನದ ಭಾಗ್ಯದಿಂದಮಕ್ಕುಂ
ನೋಳ್ಪಂ ಬೆಲೆ ಗೊಟ್ಟು ತಾರಾ
ಮನೋಜನಂ ಮಲಯಾನಿಲನಂ ಮಧುವಂ “

ಎನ್ನುತ್ತಾನೆ ತನ್ನ *ನೇಮಿನಾಥ ಪುರಾಣ *ದಲ್ಲಿ. ಪಂಪ ಭಾರತ , ಕುಮಾರವ್ಯಾಸ ಭಾರತ , ಪರ್ವ – ಇವು ಐನೂರು ವರ್ಷ ಗಳಿಗೆ ಒಂದರಂತೆ ಅವತರಿಸಿದ ” ಭುವನದ ಭಾಗ್ಯ ” ಗಳು.

ಅವರ ಕಾದಂಬರಿಗಳು ಬದುಕಿನ ಶೋಧನೆಯೇ ಹೊರತು ಮನರಂಜನೆಯ ಮಾಧ್ಯಮವಲ್ಲ. ಬದುಕು ನಿಂತ ನೀರಲ್ಲ ಅಥವಾ ರೆಡಿಮೇಡ್ ಸರಕಲ್ಲ. ಬರೆಯುವವನ ನಿಯಂತ್ರಣವನ್ನು ಮೀರಿ ತಾನು ಎಳೆದ ಕಡೆಗೆ ಅವನು ಬರಬೇಕು ಅಥವಾ ಸತ್ಯದ ಕಡೆಗೆ ಅವನು ಬರಬೇಕು. ಹಾಗೆ ಮಾಡುವುದೇ ನಿಜವಾದ ಬರವಣಿಗೆ . ಇದು ತತ್ವ ಶಾಸ್ತ್ರದ ಹಿನ್ನೆಲೆ ಅರಿತವರಿಗೆ ಬೇಗ ಅರ್ಥ ವಾಗುತ್ತದೆ ಇಲ್ಲದವರಿಗೆ ಇದು ಅರ್ಥ ವಿಲ್ಲದ ಕಗ್ಗವಾಗುತ್ತದೆ.

ವಾಸ್ತವವಾಗಿ ೧೯೫೮ ರ ಹೊತ್ತಿಗೆ ಅ ನ ಕೃ ಆರಂಭಿಸಿದ ಜನಪ್ರಿಯ ಮಾದರಿಯ ಕಾದಂಬರಿ ರಚನೆ ಭರಭರಾಟೆಯಲ್ಲಿತ್ತು. ಪ್ರಗತಿ ಶೀಲ ಚಳವಳಿಯ ನಿರಂಜನ ತ ರಾ ಸು ಕಟ್ಟೀಮನಿ ಮೊದಲಾದವರು ಅದೇ ಮಾದರಿಯಲ್ಲಿ ಬರೆಯುತ್ತಿದ್ದರು . ಲೇಖಕಿಯರ ಒಂದು ದಂಡೇ ಇತ್ತು . ಅಂಥ ಸಂದರ್ಭದಲ್ಲಿ ಮತಾಂತರ ದಂತಹ ಜ್ವಲಂತ ಸಮಸ್ಯೆಯನ್ನು ಮುಟ್ಟುವ ಲೇಖಕ ವಿಭಿನ್ನವಾಗಿ ಆಲೋಚಿಸುವವನೇ ಆಗಿರುತ್ತಾನೆ . ಅದಕ್ಕೂ ಮೊದಲು ಅವರು ಬರೆದಿದ್ದ “ಗತಜನ್ಮ”. ” ಬೆಳಕು ಮೂಡಿತು”. ” ಭೀಮಕಾಯ “ಇವು ಗಂಭೀರ ಪ್ರಯತ್ನ ಗಳಲ್ಲ . ಅವರ ಮೇಲಿನ ಅಭಿಮಾನದಿಂದ ಅವೂ ಮರು ಮುದ್ರಣಗೊಂಡು ಚಲಾವಣೆಗೆ ಬಂದ ನಾಣ್ಯಗಳಾಗಿವೆ . ಅವರ ನಿಜವಾದ ಕಾದಂಬರಿ ಎಂದರೆ ಅವರೇ ಹೇಳುವಂತೆ ” ವಂಶವೃಕ್ಷ ” . “ಧರ್ಮಶ್ರೀ ” ಮತ್ತು “ದೂರ ಸರಿದರು ” ಗಂಭೀರ ವಸ್ತುವುಳ್ಳವು ಮತ್ತು ಮನಸ್ಸನ್ನು ಕಲಕುವಂಥವು . ಆದರೆ ವರದಿಯಾಗಿಬಿಡುವ ಅಪಾಯದಿಂದಾಗಿ ಕಲಾಕೃತಿಯಾಗುವಲ್ಲಿ ಸೋಲುತ್ತವೆ . ಆದರೆ ಅವೂ ಅನೇಕ ಮರುಮುದ್ರಣ ಮತ್ತು ಅನುವಾದಗಳನ್ನು ಕಂಡಿವೆ. ಅದೇ ಭೈರಪ್ಪನವರ ಹಿರಿಮೆ . ಮತ್ತು ಅದು ಅಭಿಮಾನವು ತಂದು ಕೊಡುವ ಒಂದು ಅಪಾಯವೂ ಹೌದು .

ವ್ಯಾಸ ಮಹರ್ಷಿಗಳ ಮಹಾಭಾರತ ವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ “ಪರ್ವ .” ಇದೊಂದು ಮರುಸೃಷ್ಟಿ .ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯೊಂದನ್ನು ಆಧುನಿಕ ಸಾಹಿತ್ಯ ಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ ಶ್ರೇಷ್ಠ ಕಾದಂಬರಿಕಾರರ ಪಕ್ವವಾದ ಮನಸ್ಸು ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ನೋಡಬಹುದು . ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ ಕಾದಂಬರಿಯ ಪುಟ ಪುಟ ಗಳಲ್ಲಿ ಸ್ಪೋಟಗೊಂಡಿದೆ . ಮೂಲ ಕೃತಿಯ ಅಲೌಕಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ , ಆದರ್ಶ ವಾಸ್ತವತೆಗಳನ್ನು ಮೇಳವಿಸಿ ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾ ಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ . ಕಾದಂಬರಿಕಾರರಿಗಿರುವ ಮಾನವ ಸ್ವಭಾವದ ನಿಕಟ ಪರಿಚಯ , ಈ ಪರಿಚಯವನ್ನು ತೋರುವಲ್ಲಿ ಅವರು ಮೆರೆಯುವ ಸಂಯಮ ಹಾಗೂ ಅಲಿಪ್ತತೆಗಳು ವ್ಯಾಸಗುಣಗಳೇ ಆಗಿವೆ . . ಫಲವಾಗಿ ಪರ್ವ ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ.

ಪ್ರಾರಂಭದಲ್ಲಿ ಬರುವ ಈ ಮಾತುಗಳು ಮೊದಲ ಮುದ್ರಣ ಕ್ಕೆ ಅಂದರೆ ೧೯೭೯ ರಲ್ಲಿ ಬರೆದವಾದರೂ ಇಂದಿಗೂ ಪ್ರಸ್ತುತವಾಗಿವೆ.

ಅವರ ಇದುವರೆಗಿನ ೨೫ ಕಾದಂಬರಿಗಳಲ್ಲಿ ಹದಿನೈದನೆಯದು” ಪರ್ವ ” . ಇಷ್ಟೂ ಕಾದಂಬರಿಗಳನ್ನು ಪರ್ವ ಪೂರ್ವ ದವು ಪರ್ವದ ನಂತರದವು ಎಂದು ಹಲವಾರು ವಿಮರ್ಶಕರು ಹೇಳಿರುವುದನ್ನು ನಾನು ಕೇಳಿದ್ದೇನೆ . ಅಂದರೆ ಪರ್ವ ಬರೆದ ನಂತರ ಅವರ ಬರವಣಿಗೆಯ ಪಕ್ವತೆ ಮತ್ತು ಮಾಗುವಿಕೆ ಎದ್ದು ಕಾಣುವಂತವು ಎಂದು ಸ್ಪಷ್ಟವಾಗಿ ಹೇಳಬಹುದು .ಪರ್ವ ಬರೆದಾಗ ಅವರಿಗೆ ೪೫ ವರ್ಷ ವಂತೆ . ಪರ್ವ ಬರೆಯಲು ಅವರು ನಡೆಸಿದ ಸಿದ್ದತೆ ಮತ್ತು ಕ್ಷೇತ್ರ ಕಾರ್ಯವನ್ನು ಕುರಿತು” ನಾನೇಕೆ ಬರೆಯುತ್ತೇನೆ ” ಎಂಬ ಪ್ರಬಂಧ ಸಂಕಲನದ ” ಪರ್ವ ಬರೆದದ್ದು “ಎಂಬ ಲೇಖನದಲ್ಲಿ ವಿವರವಾಗಿ ಹೇಳಿದ್ದಾರೆ. ವಾಸ್ತವವಾಗಿ ಈ ಲೇಖನ ಓದಿದ ನಂತರ ಪರ್ವ ಓದಿದರೆ ಚೆನ್ನಾಗಿ ಅರ್ಥವಾಗುತ್ತದೆ ಬೇಗ ಅರ್ಥ ವಾಗುತ್ತದೆ ಎಂಬುದು ನನ್ನ ಅನುಭವ . ಇದು ಇತರರ ಅನುಭವವೂ ಆಗಿರಬಹುದು. ಏಕೆಂದರೆ ಯಾರೋ ಕೊಟ್ಟ ಸಲಹೆಯಂತೆ ಇದನ್ನು ನಾನು ಮಾಡಿದ್ದು.

ಇಲ್ಲಿ ಕೃಷ್ಣನೂ ಸೇರಿದಂತೆ ಯಾರೂ ಅತಿ ಮಾನುಷರಿಲ್ಲ. ಧೂರ್ವಾಸರು ಐದು ವರಗಳನ್ನು ಕೊಡುವುದಿಲ್ಲ . ಅವರ ಸಂಪರ್ಕದಿಂದಲೇ ಹುಟ್ಟಿದವನು ಸೂರ್ಯನ ಅಂಶ ಕರ್ಣ . ಇದು ನಿಯೋಗವಲ್ಲ. ಏಕೆಂದರೆ ಕುಂತಿಗೆ ಇನ್ನೂ ಮದುವೆಯಾಗಿಲ್ಲ. ಆದ್ದರಿಂದಲೇ ಅವಳು ಮಗುವನ್ನು ಗಂಗೆಯಲ್ಲಿ ತೇಲಿ ಬಿಡಬೇಕಾಯಿತು . ಪಾಂಡುವನ್ನು ಮದುವೆ ಯಾದ ಮೇಲೆ ತಿಳಿಯಿತು ಅವನು ಷಂಡನೆಂದು . ಇದಕ್ಕೆ ಭೈರಪ್ಪನವರು ಕೊಡುವ ಕಾರಣ ಎಷ್ಟು ಮಟ್ಟಿಗೆ ವೈಜ್ಞಾನಿಕವೋ ನನಗೆ ತಿಳಿಯದು . ದಾಸಿಯರ ಜೊತೆ ವಯಸ್ಸು ಬರುವುದಕ್ಕೆ ಮುಂಚೆಯೇ ಅವನು ನಡೆಸಿದ ಅತಿ ಕಾಮುಕತೆಯಿಂದ ಅವನ ಪುರುಷತ್ವ ಹೋಯಿತು ಎಂದು ಭೈರಪ್ಪ ಹೇಳುತ್ತಾರೆ. ಕಿಂದಮ ಋಷಿಯ ಶಾಪದ ಪ್ರಸಂಗವನ್ನು ಕೈ ಬಿಡಲು ಇದನ್ನು ತಂದರೇ ಎಂದೂ ಯೋಚಿಸುವ ಸಾಧ್ಯತೆಯಿದೆ. ಮಾದ್ರಿಯನ್ನೂ ಮದುವೆಯಾಗಿ ಗಂಡನ ದೌರ್ಬಲ್ಯ ವನ್ನು ಅರಿತ ಅವಳು ಕುಂತಿಗೆ ಹತ್ತಿರ ವಾಗಿ * ಹೊರ ಹೋಗುವ ಬಾಗಿಲೇ ಇಲ್ಲದ ಈ ನರಕಕ್ಕೆ ನಮ್ಮನ್ನು ದೂಡಿ ತಾನು ಮುಂಬಾಗಿಲನ್ನು ಹೊರಗಿನಿಂದ ಮುಚ್ಚಿ ಕೊಂಡನಲ್ಲ ಆ ಭೀಷ್ಮ ಅವನಿಗೆ ರೌರವ ನರಕವಾಗಲಿ * ಅನ್ನುತ್ತಾಳೆ . ಭೀಷ್ಮ ಮಾಡಿದ ತಪ್ಪು ಇದೊಂದೇ ಅಲ್ಲ . ಯಾರನ್ನೂ ಕೇಳದೇ ಬ್ರಹ್ಮಚರ್ಯ ಸ್ವೀಕರಿಸಿದ್ದು , ಕಾಶಿರಾಜನ ಮೂವರು ಕನ್ಯೆಯರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ಹೊತ್ತು ತಂದದ್ದು , ಅವರಲ್ಲಿ ಮೊದಲನೆಯವಳು ಅಂಬೆ ತಾನು ಪ್ರೀತಿಸಿದ ಸಾಲ್ವನಲ್ಲಿಗೆ ಭೀಷ್ಮನ ಅನುಮತಿ ಪಡೆದೇ ಹೋಗಿ ತಿರಸ್ಕೃತಳಾಗಿ ಹಿಂದಿರುಗಿ ಇವನನ್ನೇ ಮದುವೆಯಾಗು ಎಂದದ್ದು ,ಇವನು ಒಪ್ಪದೇ ಅವಳ ಕೋಪಕ್ಕೆ ತಾಪಕ್ಕೆ ಗುರಿಯಾದದ್ದು , ಉಳಿದಿಬ್ಬರನ್ನು ತಮ್ಮನಿಗೆ ಮದುವೆ ಮಾಡಿಸಿದರೂ ಅವನು ಮಕ್ಕಳಿಲ್ಲದೇ ಸತ್ತಾಗ , ತಮ್ಮನ ಹೆಂಡತಿಯರಿಗೆ ನಿಯೋಗ ಮಾಡು ಎಂಬ ಸತ್ಯವತಿಯ ಮಾತಿಗೆ ಒಪ್ಪದೇ ಹೋದುದು, ಸತ್ಯ ವತಿಯ ತಂದೆ ದಾಶರಾಜನೇ ಬಂದು ತನ್ನ ಕೋರಿಕೆಯನ್ನು ಹಿಂಪಡೆದಿರುವುದಾಗಿ ಹೇಳಿದರೂ ಒಪ್ಪದೇ ಹೋದುದು , ಗಾಂಧಾರಿಯ ಒಪ್ಪಿಗೆ ಯಿಲ್ಲದೇ ಕುರುಡನಿಗೆ ಅವಳನ್ನು ಕಟ್ಟಿದ್ದು……. ಹೀಗೆ ಒಂದೇ ಎರಡೇ …. ಹಸ್ತಿನಾಪುರದ ಸಿಂಹಾಸನಕ್ಕಾಗಿ ಎಂದು ಮಾಡಿದ್ದೆಲ್ಲ ವ್ಯತಿರಿಕ್ತವಾಗಿ ಪರಿಣಮಿಸಿತು . ಇಷ್ಟೇ ಅಲ್ಲ ಏಕಲವ್ಯ ನ ಹೆಬ್ಬೆರಳು ತೆಗೆಸಿದ್ದೂ ಭೀಷ್ಮ ಅಂತೆ.

ಇದು ಹಸ್ತಿನಾಪುರದ ಸಿಂಹಾಸನಕ್ಕಾಗಿ ಮಾಡಿದ ತಂತ್ರ ವಂತೆ. ಇದು ಯುದ್ಧ ನಡೆಯುತ್ತಿರುವಾಗ ಅರ್ಜುನನಿಗೆ ಎದುರಾಗಿ ದ್ರೋಣನ ಕಡೆ ನಿಂತು ಸೇಡು ತೀರಿಸಿಕೊಳ್ಳಲು ಬಂದ ಏಕಲವ್ಯ ನಿಗೆ ದ್ರೋಣ ಹೇಳಿದ ಮಾತು . ಶರಶಯ್ಯೆಯ ಪ್ರಸ್ತಾಪ ವಿದೆ ಆದರೆ ಶರಶಯ್ಯೆಯಿಲ್ಲ. ಗದಾಯುದ್ಧ ವೂ ಇಲ್ಲ . ದುರ್ಯೋಧನ ಸಾಯುವುದೂ ಇಲ್ಲ . ದ್ರೋಣ ಸಾಯುವುದು ಯಾರೋ ಸಾಮಾನ್ಯ ಸೈನಿಕನ ವಿಷಪೂರಿತ ಬಾಣ ಚುಚ್ಚಿ . ಹೀಗೆ ಮಹಾಭಾರತದ ಅನೇಕ ಮಾಂತ್ರಿಕ ಸ್ಪರ್ಶಗಳು ಇಲ್ಲ ವಾಗಿ ಪಿಚ್ ಎನಿಸುತ್ತದೆ ಇದಕ್ಕೆ ನಮ್ಮ ಪಾರಂಪರಿಕ ನಂಬಿಕೆ ಯೂ ಕಾರಣವಿರಬಹುದು . ದುರ್ಯೋಧನನ ಅಂತ್ಯ ಇದಕ್ಕೆ ಒಳ್ಳೆಯ ಉದಾಹರಣೆ . ಇದ ನವ್ಯ ಸಾಹಿತ್ಯದ ಒಂದು ತಂತ್ರ . ಕತೆಗೆ opening end ಕೊಟ್ಟು ಬಿಟ್ಟು ಬಿಡುವುದು . ಅನಂತಮೂರ್ತಿ ಯವರ ” ಮೌನಿ” ಯಂತೆ .., ಶಾಂತಿನಾಥ ದೇಸಾಯಿ ಯವರ” ಕ್ಷಿತಿಜ” ದಂತೆ , ಆಲನಹಳ್ಳಿ ಯವರ ” ಸಂಬಂಧ” ದಂತೆ . ಕೃಪ ಹೇಳುತ್ತಾನೆ ಅವನು ಸತ್ತಿದ್ದಾನೆ ಎಂದು. ಅಶ್ವತ್ಥಾಮ ಹೇಳುತ್ತಾನೆ ನಾವೆಲ್ಲಾ ಇರುವಾಗ ಅವನು ಹೇಗೆ ಸಾಯಲು ಸಾಧ್ಯ ಎಂದು . ಧೃತರಾಷ್ರ ಹೇಳುತ್ತಾನೆ ತನ್ನ ಮಗ ಸೈನ್ಯ ತರಲು ಹೋಗಿದ್ದಾನೆ ಎಂದು . ಅಂತೂ ಅವನು ಏನಾದ ? ಸರ್ವಾಧಿಕಾರಿಗಳ ಅಂತ್ಯಕ್ಕೆ ಇದೊಂದು ಒಳ್ಳೆಯ ಪ್ರತಿಮೆ . ಹುಟ್ಟಿದಂದಿನಿಂದ ಮೆರೆದ ಅವನ ಅಂತ್ಯ (?) ಹೇಗಾಯಿತು ಏನಾಯಿತು ಎಲ್ಲಾಯಿತು ಎಂಬ ಯಾವ ಪ್ರಶ್ನೆ ಗೂ ಉತ್ತರ ಕೊಡದಿರುವುದೂ ಒಂದು ತಂತ್ರ ವೇ. ಭೀಷ್ಮ ರನ್ನು ಸುಟ್ಟ ಸ್ಥಳವನ್ನು ದುರ್ಯೋಧನ ಹುಡುಕುವಾಗ ಅವನ ಬಗ್ಗೆ ಪಾಪ ಅನಿಸುತ್ತದೆ . ತಾತನ ಪ್ರೀತಿಗೆ ಸಿಂಹಾಸನಕ್ಕೆ ಧರ್ಮರಾಯ ನಷ್ಟೇ ಅಧಿಕಾರ ಇವನಿಗೂ ಇದೆಯಲ್ಲವೇ ಅನಿಸಿಬಿಡುತ್ತದೆ . ಇದು ಗ್ರೀಕ್ ದುರಂತ ನಾಟಕ ಗಳ ತಿರುಳು . ಒಬ್ಬ ತತ್ವ ಶಾಸ್ತ್ರ ದ ವಿದ್ಯಾರ್ಥಿ ಮಾತ್ರ ತನ್ನ ಬರವಣಿಗೆಯಲ್ಲಿ ಇದನ್ನು ತರಬಲ್ಲ . ಭೈರಪ್ಪ ಇದನ್ನು ತಂದಿದ್ದಾರೆ. ಇದು ಪ್ರಜ್ಞಾಪೂರ್ವಕ ವಾಗಿ ಮಾಡಿದ್ದಲ್ಲವಂತೆ . ಅವರೇ ಹೇಳಿದ್ದಾರೆ ಅದೇನೋ ಯಾವುದಕ್ಕೂ ಇಲ್ಲದ ಮಹತ್ವ ಈ ಮುಂಡೇದಕ್ಕೆ ( ಪರ್ವಕ್ಕೆ ) ಬಂತು ಅಂತ ( ಯೂಟ್ಯೂಬ್‌ನ ಒಂದು ಸಂದರ್ಶನದಲ್ಲಿ ). ಅಲ್ಲಿ ಗೂ ತಮ್ಮ ಈ ಕೃತಿ ಯ ನಾಟಕ ರೂಪದ ಇಂಗ್ಲಿಷ್ ಅನುವಾದ ಪ್ರಪಂಚದ ಆದ್ಯಂತ ಹರಡಿ ಮಹಾಭಾರತದಲ್ಲಿ ಏನಿದೆ ಎಂದು ವಿಶ್ವಕ್ಕೆ ತಿಳಿಯಬೇಕು ಎಂಬ ಹಂಬಲ ಅವರಿಗಿದೆ .ಈ ಹಿಂದೆ ವಿಕ್ರಮ್ ಸಾರಾಭಾಯಿ ಮಗಳು ಮಲ್ಲಿಕಾ ಸಾರಾಭಾಯಿ ದ್ರೌಪದಿ ಯಾಗಿ ನಟಿಸಿದ್ದ ೯ ಗಂಟೆಗಳ ಸಿನೆಮಾ ಇಂಗ್ಲಿಷ್ ನಲ್ಲಿ ಬಂದಿತ್ತು . ಅದರಲ್ಲಿ ಪ್ರಪಂಚದ ಎಲ್ಲ ಭಾಷೆಗಳ ನಟರೂ ಭಾಗವಹಿಸಿದ್ದರು . ಆದರೆ ಈ ರೀತಿಯ ಸಂಚಲನವನ್ನು ಉಂಟುಮಾಡಿರಲಿಲ್ಲ . .


  • ಪ್ರಭಾವತಿ ಎಸ್ ವಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW