ನಿಸ್ವಾರ್ಥವಾಗಿ ಪ್ರೀತಿಸುವ ನಿನ್ನ ಪುಟ್ಟ ಹೃದಯ ಒಂದು ದಿನ ಸ್ತಬ್ದವಾದಾಗ ನಾವು ಒದ್ದಾಡಿದ್ದು ನಿನಗೆ ಖುಷಿ ತಂದಿತೇ ಪೋನಿ…ಯಾಕೆ ಮನೆಗೆ ಬಂದೆ? ಯಾಕೆ ನಮ್ಮ ಮೇಲೆ ಪ್ರೀತಿ ತೋರಿಸಿದೆ, ಯಾಕೆ ಹೇಳದೆ ಕೇಳದೆ ಹೊರಟು ಹೋದೆ… ಒಂದು ಭಾವುಕ ಪ್ರೀತಿಯ ಲೇಖನ, ಲೇಖಕ ಶಶಿಕುಮಾರ್ ಎಂ ಎ ಅವರು ಬರೆದಿದ್ದಾರೆ ತಪ್ಪದೆ ಓದಿ…
ಪುಟ್ಟದಾದ ಮುದ್ದು ಮುದ್ದಾದ ಹತ್ತಿಯಂತಹ ಮೃದುವಾದ ಬೆಳ್ಳನೆಯ ಕೂದಲನ್ನು ಹೊಂದಿದ್ದ ನಾಯಿಮರಿ ನಮ್ಮ ಮನೆಗೆ ಹೊಸ ಅತಿಥಿಯಾಗಿ ಭಾನುವಾರ ಬೆಳಿಗ್ಗೆ ಶುಭ ಮಹೋರ್ತದಲ್ಲಿ ಬಲಗಾಲಿಟ್ಟು ಪ್ರವೇಶಿಸಿತು.
ಶನಿವಾರವೆ ಮನೆ ಮಂದಿಯೆಲ್ಲಾ ಮಾತನಾಡಿ ಹತ್ತಾರು ಹೆಸರುಗಳನ್ನು ಶೇಖರಿಸಿ ಅದರಲ್ಲಿ “ಪೋನಿ” ಎಂಬ ಸೂಕ್ತವಾದ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಶನಿವಾರವೆ ಅದಕ್ಕೆಂದು ಜಾಗವನ್ನು ನಿಗದಿ ಪಡಿಸಿ ನೋಡಿ ಕೊಳ್ಳುವ ತಯಾರಿಕೆಯು ನಡೆದಿತ್ತು. ನನ್ನ ಐದು ವರ್ಷದ ಮಗಳಂತು ಇಡಿ ರಾತ್ರಿ ನಿದ್ರಿಸಲಿಲ್ಲ.
ಫೋಟೋ ಕೃಪೆ : google
ಪೋನಿ ಮುದ್ದು ಮುದ್ದಾಗಿ ಆಡಲು ಶುರುಮಾಡಿತು. ಮನೆಯಲ್ಲೆಲ್ಲಾ ಅದರದೆ ಓಡಾಟ ಅದರ ಹಿಂದೆ ನನ್ನ ಮಗಳು ಓಡಾಟ. ರಾತ್ರಿ ಮಗಳ ಪಕ್ಕದಲ್ಲೆ ಅದರ ನಿದ್ರೆ. ವಾಕಿಂಗ್, ಹಾಲು, ಹಾರ್ಲಿಕ್ಸ್ ಎಂದೆಲ್ಲಾ ಉಪಚಾರ ನಡೆದು ಸ್ವಲ್ಪ ದೊಡ್ಡದಾಗಿ ಮನೆಯ ಮುಂದೆ ಆಡಾಡುವವರಿಗೆಲ್ಲ ಇದರ ಅವಾಜ್ ಹಾಕುತ್ತಿತ್ತು. ಮಕ್ಕಳು ಮೂರು ಚಕ್ರದ ಸೈಕಲ್ ಹೊಡೆಯುವ ಹಾಗಿಲ್ಲ ಓಡುತ ಆಡುವ ಹಾಗಿಲ್ಲ. ಬೇಸತ್ತ ಮಕ್ಕಳು ಅವರ ಅಮ್ಮಂದಿರು ನಮಗೆ ಲಗ್ಗೆ ಇಟ್ಟರು. ಸಂಜೆಯ ವೇಳೆ ಕಟ್ಟಿಹಾಕುವಂತೆ ಅವರುಗಳೆ ತೀರ್ಮಾನ ಮಾಡಿ ನಮಗೆ ಎಚ್ಚರಿಕೆ ಕೊಟ್ಟು ಹೋದರು. ಪೋನಿ ಮತ್ತಷ್ಟು ಬೆಳೆದಂತೆ ಗಲಾಟೆ ಹೆಚ್ಚಾಗುತ್ತಾ ಬಂತು. ಅಕ್ಕ ಪಕ್ಕದವರ ತಾಳ್ಮೆ ಕಟ್ಟೆ ಒಡೆದು ಕೋಪಕ್ಕೆ ತಿರುಗಿ ದ್ವೇಷ,ನಿಷ್ಟೂರವಾಯಿತು.
ಆ ದಿನ ನಾವು ಮನೆಮಂದಿಯೆಲ್ಲ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರ್ಜರಿಯಾದ ಊಟ ಮಾಡಿ ಹಿಂದಿರುಗಿದೆವು. ಪೋನಿಯ ಸದ್ದಿಲ್ಲ ಮಲಗಿರ ಬಹುದೆಂದು ಕಾಂಪೌಂಡ್ ನ ಗಿಡಗಳು ಸಂದಿಯಲೆಲ್ಲ ಹುಡುಕಾಡಿದರೂ ಶಬ್ದವಿಲ್ಲ. ನನ್ನ ಮಗಳ ಕಣ್ಣುಗಳು ಹನಿಗೂಡಿದವು ಗಂಟಲು ಒಣಗಿ ಮಾತು ಹೊರಡದಂತಾಯಿತು. ಅಪ್ಪ ಅಪ್ಪ ಎಂದು ತನ್ನೆದೆಯೊಳಗಿನ ಸಂಕಟವನ್ನು
ಅನುಭವಿಸಲು ಆಗಿದೆ ಹೇಳಲು ಆಗದೆ ದುಃಖದಲ್ಲಿ ನರಳುತ್ತಿದ್ದರು. ಎತ್ತಿಕೊಂಡು ಸಮಾಧಾನ ಮಾಡುತ್ತಿದ್ದೆ.
ಫೋಟೋ ಕೃಪೆ : google
ಯಾರೊ ಒಬ್ಬರು ಸಾರ್ ನಿಮ್ಮ ಮನೆಯ ನಾಯಿ ಪಕ್ಕದ ಬೀದಿಯ ತುದಿಯಲ್ಲಿ ಸತ್ತು ಬಿದ್ದಿದೆ ಹೋಗಿ ನೋಡಿ ಎಂದರು. ಉಸಿರು ಬಿಗಿಹಿಡಿದು ಓಡಿಹೋದೆ ನಮ್ಮ ಪೋನಿ ಸ್ವರ್ಗ ಸೇರಿ ಬಹಳ ಹೊತ್ತಾಗಿತ್ತು. ನಮ್ಮ ಮನೆಯ ಕಾಂಪೌಂಡ್ ಒಳಗೆ ಮಕ್ಕಳ ಆಟದ ಚೆಂಡು ಬಿದ್ದಿತೆಂದು ಕಬ್ಬಿಣದ ಗೇಟನ್ನು ತೆಗೆದೊಡನೆ ಪೋನಿ ಹೊರಗೆ ಜಿಗಿದಿದೆ.
ಹುಡುಗರು ತಮ್ಮ ಚೆಂಡನ್ನು ತೆಗೆದು ಕೊಂಡಿರುವರು ಆದರೆ ಪೋನಿಗೆ ಯಾವುದೋ ಬೈಕ್ ಗುದ್ದರಿಸಿ ಸ್ತಳದಲ್ಲೆ ಪ್ರಾಣತೆತ್ತಿತ್ತು. ಸಾವಿನ ಮನೆಯ ಶೋಕ ಮೂರು ಬೀದಿಗೆ ಕೇಳುವಂತಿತ್ತು. ಕತ್ತಲಾದ ಮೇಲೆ ಅದನ್ನು ಮಣ್ಣುಮಾಡಿ ಬಂದಾಯಿತು. ಪೋನಿಯ ಫೋಟೋಗಳು ಇಂದಿಗು ನಮ್ಮ ಮನೆಯ ಗೋಡೆಯಲ್ಲಿ ತೂರಾಡುತ್ತಿದೆ.
- ಶಶಿಕುಮಾರ್ ಎಂ ಎ – ವೃತ್ತಿಯಲ್ಲಿ ರೈಲ್ವೆ ಉದ್ಯೋಗಿಯಾಗಿದ್ದು, ಹವ್ಯಾಸಗಳು ಚುಟುಕು,ಕವನ, ನ್ಯಾನೊ ಕಥೆ, ಚಿಕ್ಕ ಕಥೆಗಳನ್ನು ಬರೆಯುವುದು, ಫೋಟೋಗ್ರಫಿ, ಮೈಸೂರು.