ನಮ್ಮ ಸುತ್ತಮುತ್ತ ಪ್ರೀತಿಯ ಗೋಡೆಯನ್ನು ಕಟ್ಟಿಕೊಂಡಿರಬೇಕೆ ಹೊರತು ವೈರತ್ವದ ಗೋಡೆಯನ್ನಲ್ಲ. ವೈರತ್ವವನ್ನು ಬಿಟ್ಟು ಬಿಟ್ಟು ಎಲ್ಲರು ಸುಖವಾಗಿರಲೆಂದು ಬಯಸುವ ಹಿರಿಯ ಕನ್ನಡ ಉಪನ್ಯಾಸಕರು ಪ್ರೊ. ಸಿದ್ದು ಸಾವಳಸಂಗ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
“ವೈರವತ್ವವನ್ನು ಸಾಧಿಸಿಕೊಂಡು ಹೋಗಲು ಜೀವನ ದೀರ್ಘವಾಗಿದೆ ಎಂದು ನಾನು ಭಾವಿಸಿಯೇ ಇಲ್ಲ” ಎಂದು ನಾಡೋಜ ಪಾಪು ಅವರು ಹೇಳುತ್ತಿದ್ದರು. ಜಗತ್ತು ಬಹಳ ವಿಶಾಲವಾಗಿದೆ. ಇಲ್ಲಿ ಅನೇಕ ಭಿನ್ನ ಅಭಿರುಚಿಗಳನ್ನು ಹೊಂದಿದ, ಬೇರೆ ಬೇರೆ ಜಾತಿ ಧರ್ಮಗಳಿಗೆ ಸೇರಿದ ಜನರಿದ್ದಾರೆ. ಎಲ್ಲರ ಆಲೋಚನೆಗಳು ಬೇರೆಬೇರೆಯಾಗಿವೆ. ಹೀಗಾಗಿ ನಾವು ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗಬೇಕಾಗಿದೆ. ನಮ್ಮಿಂದ ಜಗತ್ತಿಗೆ ಏನೂ ಆಗಬೇಕಾಗಿಲ್ಲ. ಆದರೆ ನಾವು ಇದೇ ಜಗತ್ತಿನಲ್ಲಿ ಬದುಕಬೇಕಾಗಿದೆ.
ನಮ್ಮ ಸುತ್ತಮುತ್ತ ಪ್ರೀತಿಯ ಗೋಡೆಯನ್ನು ಕಟ್ಟಿಕೊಂಡಿರಬೇಕೆ ಹೊರತು ವೈರತ್ವದ ಗೋಡೆಯನ್ನಲ್ಲ. ಈ ವೈರತ್ವದಿಂದ ನಾವು ಏನನ್ನೂ ಸಾಧಿಸುವುದಿಲ್ಲ. ಬದಲಾಗಿ ನಮ್ಮ ನೆಮ್ಮದಿ ಹಾಗೂ ಸಂಬಂಧಗಳು ಹಾಳಾಗುತ್ತವೆ. ನಿಧಾನಕ್ಕೆ ನಮ್ಮ ನೆಮ್ಮದಿ ಹಾಳಾಗುತ್ತ ಹೊರಟಂತೆ ನಾವು ಕುಗ್ಗುತ್ತೇವೆ. ಮುಂದೆ ಅಸಹಾಯಕರಾಗಿ ಬಿಡುತ್ತೇವೆ. ಪ್ರಪಂಚದಲ್ಲಿ ಎಲ್ಲರನ್ನು ಪ್ರೀತಿಸಲು ಪ್ರಾರಂಭಿಸಿ ನೋಡಿ. ನಿಮ್ಮ ವೈರಿಯನ್ನೂ ಸಹ. ಆಗ ನಿಮಗೆ ಯಾರ ಭಯವೂ ಇರುವುದಿಲ್ಲ. ನೀವು ಸುಖದಿಂದ ಜೀವನ ಸಾಗಿಸಬಹುದು. ಪ್ರೀತಿಯಿಂದ ಇಡೀ ಜಗತ್ತನ್ನೇ ಗೆಲ್ಲಬಹುದು. ಭಯಂಕರ ನರರಾಕ್ಷಸನಾಗಿದ್ದ ಅಂಗುಲಿಮಾಲಾನನ್ನು ಭಗವಾನ್ ಭುದ್ಧದೇವ ಪ್ರೀತಿಯಿಂದಲೇ ಗೆದ್ದದ್ದು. ಅವನನ್ನು ಮನುಷ್ಯನಾಗಿ ಪರಿವರ್ತನೆ ಮಾಡಿದ್ದು.
‘ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ ? ಮೋಡ ಕಟ್ಟೀತು ಹೇಗೆ ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ ?’ ಎಂದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಒಂದು ಪದ್ಯ ಅತ್ಯಂತ ಜನಪ್ರಿಯವಾಗಿದೆ. ಪ್ರೀತಿಯಿಲ್ಲದ ಮೇಲೆ ಏನೂ ಇಲ್ಲ. ಪ್ರೀತಿಗೆ ಸಾವನ್ನೂ ಸಹ ಗೆಲ್ಲುವ ಶಕ್ತಿ ಇದೆ. ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’ ಎಂದು ವರಕವಿ ಬೇಂದ್ರೆ ಹೇಳಿದ್ದಾರಲ್ಲವೆ. ಹಣದಿಂದ ಬಡವನಿದ್ದವನು ಅವನು ಬಡವನಲ್ಲ. ಪ್ರೀತಿಯಿಂದ ಬಡವನಿದ್ದವನು ಅವನು ನಿಜವಾದ ಬಡವ. ಪ್ರೀತಿಯೊಂದೇ ದಂಪತಿಗಳನ್ನು ಬೆಸೆಯುವ ಕೊಂಡಿ. ‘ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗಿ ಇಚ್ಛೆಯನು ಅರಿತು ನಡೆವ ಸತಿಯಾಗೆ…’ ಸರ್ವಜ್ಞ ಹೇಳಿದಂತೆ ಸ್ವರ್ಗವೂ ಸಹ ಪ್ರೀತಿಯಿಂದ ಬಳಿಯಲ್ಲಿ ಬರುತ್ತದೆ. ಮತ್ತಿನ್ನೇನು ಬೇಕು.
ವೈರತ್ವವನ್ನು ಬಿಟ್ಟುಬಿಟ್ಟು ಎಲ್ಲರು ಸುಖವಾಗಿರಲೆಂದು ಬಯಸಿ. ಎಲ್ಲರನ್ನು ಪ್ರೀತಿಯಿಂದ ನೋಡಿ. ಆಗ ಸರ್ವೇಜನ ಸುಖಿನೋಭವಂತು ಅಲ್ಲವೆ… !
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ
