ಸುಖ ಸಂತಸ ಸಂಭ್ರಮ ಹುಟ್ಟಿಸುತ್ತಲೇ ಪ್ರೀತಿಗೊಂದು ಪರಿಭಾಷೆ ನೀಡಿಬಿಡೋಣ ಬಾರೆ…ಪ್ರಸನ್ನ ಎ. ಭಟ್ ಅವರ ಲೇಖನಿಯಲ್ಲಿ ಪ್ರೀತಿಗೊಂದು ಪರಿಭಾಷೆ, ತಪ್ಪದೆ ಮುಂದೆ ಓದಿ…
ಮೌನವನ್ಯಾಕೆ ಹೊತ್ತು ಸಾಗುತ್ತಿಹನು ಎಂದೆಯೇನೇ,
ನಮ್ಮಿಬ್ಬರ ಮನದ ನಡುವಿದ್ದ ಮೌನವನು
ಬಾಚಿ ಹಾಗೇ ಅವಚಿ ಬಿಗಿ ಹಿಡಿದು ತಬ್ಬಿ
ಹೊತ್ತು ನಡೆದಿಹೆ ನಾನು
ಕುಳಿರ ದಟ್ಟ ದಿಟ್ಟ ಕಾನನದ ನಡುವಿಗೆ,
ಅಲ್ಲೋ ಬೆಳಕಲ್ಲಿ ಖಗಮೃಗಗಳ ಕೂಗೂ ಇಂಚರ
ಮತ್ತೇರಿಸುವಂತೆಯೇ ಬೆಚ್ಚಿಸುವುದೂ ದಿಟವೇ,
ಇರುಳ ನಟ್ಟ ನಡುವೆ ಮಾತ್ರ ಸ್ನಿಗ್ಧ ನಿಶ್ಶಬ್ದ,
ಅಲ್ಲಿ ಹರಡಿಟ್ಟು ಬಂದಿದ್ದೇನೆ,
ಅವುಗಳಿಗದರಿಂದ ತೊಂದರೆ ಇಲ್ಲ ಎಂಬ ಕಾಣ್ಕೆ,
ನಮ್ಮ ಬಿಟ್ಟರೆ ಅವೆಲ್ಲಾ ಮೌನವನು
ಬೇಕಾಬಿಟ್ಟಿ ಪಾಲಿಸಿಲ್ಲ ಮತ್ತು ಪಾಲಿಸಲ್ಲ,
ಬೇಕಿದ್ದವು ಕಾಡ ದೇವಿಯನೇ ಸ್ತುತಿಸಿ ಪಡೆಯಲಿ ನನಗೇನು,
ನಮ್ಮಿಬ್ಬರ ನಡುವಿನ ಬಿಸಿ ಮೌನ ಸಹ್ಯವೆನಿಸಲೇ ಇಲ್ಲ,
ಪ್ರಶಾಂತತೆಯದೂ ಒಂಥರಾ ಮೌನವೇ,
ಆದರೆ ಅದಾದರೂ ನಿರಾಳವಿತ್ತು, ಇದು ಅಸಹ್ಯ,
ಹಾಗಾಗಿ ಹೀಗಾಡಿದೆ,
ಈಗಿನ್ನು ತಬ್ಬಿ ಮುದ್ದಾಡಿ ಬದುಕನು ಮಾತುಗಳಲೇ
ಹರಡಿಟ್ಟು ರೂಪುರೇಷೆಗಳ ಹೊಂದಿಸಿ ಬಗೆದು
ಹಿಡಿದ ಕೈಗಳ ಮತ್ತೂ ಬಿಗಿಯಾಗಿಸುತ್ತಲೇ
ಊರಿದ ಪಾದಗಳ ದೃಢತೆ ಹೆಚ್ಚಿಸುತ್ತಾ
ನಲಿದ ಮನಗಳ ಮತ್ತೂ ಸೊಬಗೆನಿಸಿ
ಹರಡಿದ ಪ್ರೀತಿಗೆ ಸಂಬಂಧದ ಚೌಕಟ್ಟು ಕಟ್ಟಿ
ಕುಟುಂಬವೆಂಬ ಎಲ್ಲೆ ಬೆಳೆಸುತ್ತಾ
ಸುಖ ಸಂತಸ ಸಂಭ್ರಮ ಹುಟ್ಟಿಸುತ್ತಲೇ
ಪ್ರೀತಿಗೊಂದು ಪರಿಭಾಷೆ ನೀಡಿಬಿಡೋಣ ಬಾರೆ,
ನಡುವಲ್ಲಿಷ್ಟು ಮೌನ ಬಂದುಬಿಟ್ಟರೆ ಇರಲಿ ಬಿಡು, ಅತಿಯಾದರಷ್ಟೇ ಅಮೃತವೂ ವಿಷ,
ಮಿತವಾದರೆ ವಿಷವೂ ಔಷಧಿಯೇ,
ಹಾಗೆ ಮೌನಕ್ಕೊಂದು ಸೊಬಗನು ಬಳಿದುಬಿಡೋಣ,
ತಂಪಗಿದ್ದೂ ಬೆಚ್ಚಗಾಗುವ ಪರಿಗೆ
ಪ್ರೀತಿಯೆಂಬ ಹೆಸರೇ ಇದ್ದು ಬಿಡಲಿ,ಅಲ್ಲವೇ….
- ಪ್ರಸನ್ನ ಎ. ಭಟ್
