ರಾತ್ರಿ ಒಂದು ಹಿಡಿ ಅನ್ನ ಉಳಿತಾ? ಹಾಗಿದ್ರೆ ಹೀಗೆ ಮಾಡಿ

ರಾತ್ರಿ ಎಷ್ಟೇ ಕೈ ಹಿಡಿತ ಇಡ್ಕೊಂಡು ಅಡುಗೆ ಮಾಡಿದ್ರೂ ಒಮ್ಮೊಮ್ಮೆ ಅನ್ನ ಒಂದು ಹಿಡಿ ಉಳಿದು ಬಿಡುತ್ತದೆ. ಆ ಅನ್ನ ಚಲ್ಲುವ ಬದಲು ನಂದಿನಿ ಹೆದ್ದುರ್ಗ ಅವರು ಹೇಳಿದ ರೀತಿ ಮಾಡಿ ನೋಡಿ…ಹೊಟ್ಟೆಗೂ ಹಿತ. ಆರೋಗ್ಯಕ್ಕೂ ಒಳ್ಳೇದು….

ಸಾಮನ್ಯವಾಗಿ ನಾನು ಊಟತಿಂಡಿಯ ಸಂಗತಿ ಯಾವತ್ತೂ ಸಾಮಾಜಿಕ ಜಾಲತಾಣದಲ್ಲಿ ಹಾಕಿಲ್ಲ. ಎಷ್ಟೊ ಮಂದಿಗೆ ಯಾವ ಯಾವುದೋ ಆರೋಗ್ಯ ಸಮಸ್ಯೆಯಿಂದಾಗಿ ಬಹುಕಾಲ ಪಥ್ಯದ ಊಟವನ್ನೇ ಮಾಡಬೇಕಾಗಿರ್ತದೆ.

ನಾಲಿಗೆ ಸೋಲುವಷ್ಟು ಕರುಳು ತುಂಬುವಷ್ಟು ಕಣ್ಣು‌ ಮನಸ್ಸು ತಣಿಯುವಷ್ಟು ವ್ಯಂಜನಗಳ ಫೋಟೋ ಹಾಕಿದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನೋಡುವಾಗ ಅವರ ಜೀವ ಎಷ್ಟೆಲ್ಲಾ ನೋಯಬಹುದು ಎನ್ನುವುದನ್ನು ವೈಯುಕ್ತಿಕವಾಗಿ ಬಹಳ ಹತ್ತಿರದಿಂದ ನೋಡಿದ್ದೇನೆ. ಮಧುಮೇಹದವರಿಗೆ, ಕ್ಯಾನ್ಸರ್ ಟ್ರೀಟ್ಮೆಂಟ್ ತಗೊಳ್ತಿರುವವರಿಗೆ, ಕಿಡ್ನಿ ಸಮಸ್ಯೆಯವರು, ಗುಣಪಡಿಸಲಾಗದ ಸಾಕಷ್ಟು ಆರೋಗ್ಯ ಸಮಸ್ಯೆ ಇರುವವರಿಗೆ ಹೀಗೆ ಬಗೆ ಬಗೆಯ ಊಟ ತಿಂಡಿಗಳನ್ನು ಬರೀ ನೋಡಿದ್ರೂ ಜೀವ ಮುದುಡಿ ಹೋಗ್ತದೆ.

ಮನಸ್ಸು ತುಂಬುವಷ್ಟು ಉಂಡು ನಾಳೆಯೇ ಸತ್ತುಬಿಡಬೇಕು ಅನ್ನುವ ಒಂದೇ ಯೋಚನೆ ಕೆಲವೊಮ್ಮೆ ಎಡೆಬಿಡದೆ ಇವರನ್ನು ಕಾಡುವುದುಂಟು. (ಅಡುಗೆ ಪೋಸ್ಟ್ ಹಾಕುವವರು ದಯವಿಟ್ಟು ಬೇಸರ ಮಾಡ್ಕೋಬಾರದು . ಧ್ಯಾನದಂತೆ ಅಡುಗೆ ಮಾಡಿ ಪ್ರೆಸೆಂಟೆಬಲ್ ಆಗಿ ಜೋಡಿಸಿ ಫೋಟೊ ಹಾಕುವುದು ಕವಿತೆಯಂತೇ. ಮೇಲಿನದ್ದು ನನ್ನ ವೈಯಕ್ತಿಕ ಅಭಿಪ್ರಾಯ,ಅತೀ ಸೂಕ್ಷ್ಮವಾಗಿ ಕೆಲವು ಸಂಗತಿ ಯೋಚಿಸುವುದು ಕೂಡ ಗೀಳು )

ಇವತ್ತು ನಾನು ಹಾಕಿರುವ ಈ ಅಡುಗೆ ಯಾವುದೇ ಬಗೆಯ ಆರೋಗ್ಯ ಸಮಸ್ಯೆ ಇರುವವರೂ ಸಮಾಧಾನದಲ್ಲಿ ತಿನ್ನಬಹುದಾದ, ತಿನ್ನಲೇಬೇಕಾದಂತಹ ರುಚಿಯಾದ ಮತ್ತು ಆರೋಗ್ಯಕ್ಕೆ ಹಿತವಾದ ಅಡುಗೆ.

ಅಡುಗೆ ಅಂದರೆ ಘನವಾದ ತಯಾರಿ ಏನೂ ಇಲ್ಲ. ಇದೊಂದು ಪ್ರೊಬಯಾಟಿಕ್ ಫುಡ್. ನಮ್ಮ ಹಳೆಯ ಪೀಳಿಗೆಯವರ ಮಾಡಿ ಬಿಟ್ಟಿದ್ದು.

ಕುಕ್ಕರಿನಲ್ಲಿ ಮಾಡಿದ ಅಥವಾ ಹಾಗೇ ಬೇಯಿಸಿದ, ಇಂಗಿಸಿದ ಯಾವುದೇ ಬಗೆಯ ಉಂಡು ಉಳಿದ ಅನ್ನಕ್ಕೆ ಅದು ಮುಳುಗುವಷ್ಟು ನೀರು ಹಾಕಿ ಒಂದು ದಿನ ಹಾಗೇ ಇಡಬೇಕು. ಮಾರನೆಯ ದಿನ ಕಡೆದ ಮೊಸರು, ಈರುಳ್ಳಿ,ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ‌ಹಾಕಿ ಉಪ್ಪು ಸೇರಿಸಿ ಕಿವುಚಿ ತಿನ್ನುವುದು.

ಅತ್ಯಂತ ತಂಪಾದ,ಕರುಳಿಗೆ ಹಿತವಾದ, ಹೊಟ್ಟೆಯೊಳಗಿನ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕವಾದ ಆಹಾರ ಇದು.

ಹೇಗೇ ಮಾಡಿದ್ರೂ ಹಿಡಿಯಷ್ಟು ಅನ್ನ ಉಳಿಯುವುದು ಮಾಮೂಲು. ಅಂತಹ ಅನ್ನವನ್ನು ನೆನೆಯಿಟ್ಟು ಹೀಗೆ ಮಾಡಿಕೊಳ್ಳಬಹುದು. ಕ್ರೂರ ಬೇಸಿಗೆಯ ಈ‌ ದಿನಗಳಲ್ಲಿ ಜೀವ ತಂಪಾದಂತೆ ಅನಿಸಿದ್ದನ್ನು ಅನುಭವಿಸಬಹುದು.

(pro biotic rich rice ಅಂತ ಗೂಗಲ್ ಸರ್ಚ್ ಕೊಟ್ಟರೆ ವಿವರ ತಿಳಿತದೆ.)


  • ನಂದಿನಿ ಹೆದ್ದುರ್ಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading