‘ಕಾಲಾಯ ತಸ್ಮೈ ನಮಃ’ ಸಣ್ಣಕತೆ

ಹೆಣ್ಣು ಮಕ್ಕಳು ನೀರಿನಂತೆ ಎಲ್ಲಿ ಹೋದರಲ್ಲಿ ಹೊಂದಿಕೊಂಡು ಹೋಗಬೇಕು, ಸಮಯ ಸಂದರ್ಭ ನಮ್ಮ ಅನುಕೂಲಕ್ಕೆ ತಕ್ಕಂತೆ ಬರುವುದಿಲ್ಲ. ಕಾಲಾಯ ತಸ್ಮೈ ನಮಃ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಬೇಕು ಎನ್ನುವ ನೀತಿಕತೆ ಮಂಗಳ ಶಂಕರ್ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ….

ಸ್ಥಿತಿವಂತರ ಮನೆಯಲ್ಲಿ ಮುದ್ದಿನ ಮಗಳಾಗಿ ಬೆಳೆದ ಮಲ್ಲಿಗೆ ಹೆಸರಿಗೆ ತಕ್ಕಂತೆ ಮೃದು ಭಾಷಿಣಿ ಅಂಕೆಯಲ್ಲಿಟ್ಟ ಹೆಣ್ಣು ಮಜ್ಜಿಗೆಯಲ್ಲಿಟ್ಟ ಬೆಣ್ಣೆ ಕೆಡುವುದಿಲ್ಲ ಎನ್ನುವ ಮಾತಿಗೆ ಉದಾಹರಣೆಯಂತೆ ಬೆಳೆದ ಮಲ್ಲಿಗೆಗೆ ಹಿರಿಯರೆಂದರೆ ಮಕ್ಕಳೆಂದರೆ ಬಲು ಇಷ್ಟ ತುಂಬಿದ ಮನೆಯಲ್ಲಿ ಬೆಳೆದ ಮುದ್ದಿನ ಮಗಳವಳು.

ಅದೇ ಊರಿನ ಶ್ರೀಕಂಠಯ್ಯನವರ ಮಗ ಪೇಟೆಯಲ್ಲಿ ಓದಿ ಸರ್ಕಾರಿ ಕೆಲಸದಲ್ಲಿದ್ದನಾದ್ದರಿಂದ ಮಲ್ಲಿಗೆಯನ್ನು ಅವನಿಗೆ ಕೊಟ್ಟು ಮದುವೆ ಮಾಡಿದರೆ ಮನೆ ಮಗಳು ಕಣ್ಣ ಮುಂದೆಯೇ ಇರುತ್ತಾಳೆಂದು ತಾಳೆಹಾಕಿ ಮನೆ ಮಂದಿ ತೀರ್ಮಾನಿಸಿ ಒಂದು ಶುಭದಿನ ಅವರ ಮನೆಗೆ ಹೋಗಿ ಮದುವೆಯ ಪ್ರಸ್ತಾಪ ಮಾಡಿದರು ಮಲ್ಲಿಗೆಯ ತಾತ -ಅಜ್ಜಿ.

ಸ್ಥಿತಿವಂತರ ಮನೆಯ ಸಂಬಂಧ ಹೇಗೋ ಏನೋ ಎಂಬ ಅಲೋಚನೆ ಬಂದರೂ ಮನೆ ಬಾಗಿಲಿಗೆ ಬಂದು ಕೇಳಿದಾಗ ಆಗದು ಎನ್ನಲಾಗದೆ ಮನೆಯವರೊಂದಿಗೆ ಮಗನೊಂದಿಗೆ ಮಾತನಾಡಿ ವಿಷಯ ತಿಳಿಸುವುದಾಗಿ ಹೇಳಿ ಬಂದ ಹಿರಿಯರನ್ನು ಉಪಚರಿಸಿ ಬೀಗ್ಳೊಟ್ಟರು ಶ್ರೀಕಂಠಯ್ಯ ಮತ್ತು ಸರಸಮ್ಮದಂಪತಿಗಳು.

ಮಗ ಸುಂದರ ರಜೆಯ ಮೇಲೆ ಬಂದಾಗ ಮಲ್ಲಿಗೆಯ ತಾತ ಅಜ್ಜಿ ಬಂದು ಸಂಬಂಧ ಬೆಳೆಸುವ ಪ್ರಸ್ತಾಪ ಮಾಡಿದ ಬಗ್ಗೆ ತಿಳಿಸಿ ನೀನು ಒಪ್ಪುವುದಾದರೆ ಹೆಣ್ಣು ನೋಡುವ ಶಾಸ್ತ್ರ ಮಾಡೋಣ ಜಾತಕವೇನೋ ಹೊಂದಿಕೆಯಾಗಿದೆ ಸ್ಥಿತಿವಂತರ ಮನೆ ಮುಂದೆ ನಿನಗೇ ಒಳ್ಳೆಯದು ಎಂದು ಹೇಳಿ ಮಗನ ಉತ್ತರಕ್ಕೆ ಕಾದರು ಸರಸಮ್ಮ ದಂಪತಿಗಳು.

ಮಗ ನನಗೀಗಲೆ ಮದುವೆಯಾಗುವ ಮನಸ್ಸಿಲ್ಲ ನಾನು ಮುಂದೆ ಓದಬೇಕೆಂದಿರುವೆ ಮದುವೆಯ ಸಂಕೋಲೆ ಬೇಕೆ ಎಂದಾಗ ತಂದೆ ನೋಡು ಮನೆಬಾಗಿಲಿಗೆ ಬಂದ ಸಂಬಂಧ ಬೇಡವೆನ್ನಬೇಡ, ನಾಳೆ ಕಷ್ಟ ಸುಖ ಎಂದರೆ ಹೆಗಲು ಕೊಡುವ ಮನೆತನ ಅವರದು, ಹುಡುಗಿ ಕಣ್ಣ ಮುಂದಿರಲೆಂದು ನಮ್ಮ ಸಂಬಂಧಕ್ಕೆ ಪ್ರಯತ್ನಿಸಿದ್ದಾರೆ, ಒಮ್ಮೆ ಹುಡುಗಿ ನೋಡಿ ತೀರ್ಮಾನ ಮಾಡು ಎಂದರು. ಸುಂದರ ಯೋಚಿಸಿ ಆಯಿತು, ನೀನು ಹೇಳಿದಂತೆಯೇ ಆಗಲೆಂದ ಮೇಲೆ ಹುಡುಗಿಯ ಮನೆಯವರಿಗೆ ಹುಡುಗಿ ತೋರಿಸುವ ಶಾಸ್ತ್ರ ಆಗಲೆಂದು ತಿಳಿಸಿದರು.

ಮಲ್ಲಿಗೆಗೆ ವಿಷಯ ತಿಳಿಸಿದ ತಂದೆ ತಾಯಿ ಅಜ್ಜಿ ತಾತ ಮುಂದಿನ ಸಿದ್ದತೆಮಾಡಿಕೊಂಡರು ಹುಡುಗನ ಮನೆಯವರು ಬಂದಾಗ ಅವರೇಕಾಳು ಉಪ್ಪಿಟ್ಟು ಕೇಸರಿಬಾತ್ ಬೋಂಡ ಜೊತೆಗೆ ಬಾದಾಮಿ ಹಾಲು ಕೊಟ್ಟರಾಯಿತೆಂದು ಸೀತಮ್ಮ ಹೇಳಿದರು ತಾವು ಹೋಗಿ ಹಣ್ಣು ಹಂಪಲು ಹೂವು ಎಲೆ ಅಡಿಕೆ ತರುವೆನೆಂದು ರಾಮಸ್ವಾಮಿಗಳು ಹೇಳಿದರು ಅಜ್ಜಿ ವೆಂಕಮ್ಮ ಮೊಮ್ಮಗಳಿಗೆ ಕಾಶಿಪೀತಾಂಬರ ಮುತ್ತಿನ ಓಲೆ ಝುಮುಕಿ ಸರ ಹಾಕಿಕೊಂಡು ಲಕ್ಷಣವಾಗಿ ಸಿದ್ದವಾಗು ಎಂದು ಮೊಮ್ಮಗಳಿಗೆ ಹೇಳಿದರು.

ಇದ್ದಕ್ಕಿದ್ದಂತೆ ತನಗೆ ಮದುವೆ ಮಾಡುವ ತರಾತುರಿ ನೋಡಿ ಕಕ್ಕಾಬಿಕ್ಕಿಯಾಗಿದ್ದ ಮಲ್ಲಿ ಇದೆಲ್ಲಾ ಯಾಕೀಗ ಎಂದಾಗ ಅಜ್ಜಿ ನೋಡು ಹುಡುಗ ವಿದ್ಯಾವಂತ ನೋಡಲು ಕಟ್ಟು ಮಸ್ತಾಗಿದ್ದಾನೆ, ಕೆಲಸದಲ್ಲೂ ಇದ್ದಾನೆ ಕಂಡು ಕೇಳಿರುವ ಮನೆತಸ್ಥರು ನೀನು ನಮ್ಮ ಕಣ್ಣಮುಂದೆಯೇ ಇರ್ತ್ತೀಯ ಎಲ್ಲೋ ಕಾಣದೂರಿಗೆ ಹೋಗಿ ಪರದಾಡೋ ಹಾಗಿರಲ್ಲ ಇನ್ನೇನ್ಬೇಕು ನಿನಗೆ ನಾ ಹೇಳಿದಂತೆ ತಯಾರಾಗು ಎಂದು ಅಜ್ಜಿ ದನಿ ಏರಿಸಿ ಹೇಳಿದಾಗ ಆಗಲೆಂದು ತಲೆಆಡಿಸಿದಳು ಮಲ್ಲಿಗೆ. ಹೆಣ್ಣು ನೋಡುವ ಶಾಸ್ತ್ರ ಆಯಿತು. ಗಂಡಿನ ಮನೆಯವರು ಒಪ್ಪಿಗೆಯನ್ನೂ ಕೊಟ್ಟರು. ಮುಂದಿನ ತಯಾರಿ ನೆಡೆದು ಸುಮಹೂರ್ತದಲ್ಲಿ ಮಲ್ಲಿಗೆ ಸುಂದರನ ಮಡದಿಯಾಗಿ ಗಂಡನ ಮನೆಯ ಹೊಸಿಲ ಸೇರು ಒದ್ದು ಮನೆಗೆ ಅಡಿಇಟ್ಟಳು.

ಮದುವೆಯ ಗಲಾಟೆ ಮುಗಿದು ಮನೆಯಲ್ಲಿ ಇವರು ನಾಲ್ಕೇ ಜನ ಉಳಿದರು. ಸುಂದರ ಕೆಲಸಕ್ಕೆ ಹೋದ ಮೇಲಂತೂ ಮನೆ ಬಿಕೋ ಬಿಕೋ ಎನ್ನುತ್ತಿತ್ತು. ತುಂಬಿದ ಮನೆಯಿಂದ ಬಂದವಳಿಗೆ ಒಂಟಿಭಾವ ಕಾಡತೊಡಗಿತು. ಮನೆಯಲ್ಲಿ ಮಾತಿಲ್ಲ, ಕತೆ ಇಲ್ಲಾ, ಅವರವರ ಪಾಡಿಗೆ ಕೆಲಸ ಕಾರ್ಯಮಾಡುತ್ತಿದ್ದರು. ಮಲ್ಲಿಗೆಗೆ ತನ್ನ ತವರಿಗೆ ಬಂದು ಹೋಗುತ್ತಿದ್ದ ಜನ ಮನೆ ಮಂದಿಯ ಮಾತುಕತೆ ಮನೆಗೆ ಬಂದು ಹೋಗುವವರು ಎಲ್ಲಾ ನೆನಪಾಗಿ ಕಣ್ಣಾಲಿಗಳು ತುಂಬುತ್ತಿತ್ತು. ಆದರೆ ಅಜ್ಜಿ ಹೆಣ್ಣು ಮಕ್ಕಳು ನೀರಿನಂತೆ ಎಲ್ಲಿ ಹೋದರಲ್ಲಿ ಹೊಂದಿಕೊಂಡು ಹೋಗಬೇಕು, ಹೆಣ್ಣು ಮಕ್ಕಳು ಮನೆಗೆ ಮನೆಯವರಿಗೆ ಹರುಷ ತರುವ ಪೈರಿನಂತಿರಬೇಕು, ಮನೆ ಮನಗಳನ್ನು ಬೆಳಗುವ ನಂದಾದೀಪವಾಗಬೇಕು ಎಂಬ ಮಾತು ನೆನಪಾಗಿ ಮನದ ನೋವು ಮನದಲ್ಲೇ ಇರಿಸಿ ಈ ಮನೆಗೆ ಹೊಂದಿಕೊಂಡು ಹೋಗಲೇಬೇಕೆಂದು ಕೊಂಡಳು ಇದಕ್ಕೇ ಅಲ್ಲವೇ ಹೇಳುವುದು ಕಾಲಾಯ ತಸ್ಮೈ ನಮಃ ಅಂತ


  • ಮಂಗಳ ಶಂಕರ್ – ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading