ಕುಂಟಿನಿಯವರ “ಪುರುಷಾವತಾರ”

ಗೋಪಾಲಕೃಷ್ಣ ಕುಂಟಿನಿ ಅವರ ‘ಪುರುಷಾವತಾರ’ ಪುಸ್ತಕದ ಕುರಿತು ಖ್ಯಾತ ಲೇಖಕ ಸುಬ್ರಾಯ ಚೊಕ್ಕಾಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಪುರುಷಾವತಾರ
ಲೇಖಕರು : ಗೋಪಾಲಕೃಷ್ಣ ಕುಂಟಿನಿ
ಪ್ರಕಾಶಕರು:ಸಪ್ನ ಬುಕ್ ಹೌಸ್
ಬೆಲೆ : 135.00

ರಾಬರ್ಟ್ ಫ್ರಾಸ್ಟನ ಒಂದು ಕವಿತೆ ಇದೆ.”The Road not taken”ಅಂತ.ಅದರಲ್ಲಿ ಕವಿ ಕಾಡಿನ ಹಾದಿಯಲ್ಲಿ ಹೋಗುತ್ತಿರುವಾಗ ಎದುರಲ್ಲಿ ಹಾದಿ ಕವಲೊಡೆಯುತ್ತದೆ.ಒಂದು ಹಾದಿ ಸವೆದದ್ದು,ಇನ್ನೊಂದು ಸವೆಯದ ಹಾದಿ.ಕವಿ ಮೊದಲು ಸವೆದ ಹಾದಿಯಲ್ಲಿ ಸ್ವಲ್ಪ ಸಾಗಿ ಆಮೇಲೆ ಹಿಂದಿರುಗಿ ಸವೆಯದ ಹಾದಿಯಲ್ಲಿ ಹೋಗುತ್ತಾನೆ ಕೊನೆಯಲ್ಲಿನ ಅವನ ನಿಟ್ಟುಸಿರು ತಾನು ಈಗ ಹಿಡಿದ ಸರಿಯೆಂದೇ ಅಥವಾ ತಪ್ಪಾಯ್ತೆಂದೇ ಎನ್ನುವ ಸಂದಿಗ್ಧದಲ್ಲಿ ಕವಿತೆ ವಿರಮಿಸುತ್ತದೆ.

ಕುಂಟಿನಿಯವರು ಕೂಡಾ ಮೊದಲು ಸವೆದ ಹಾದಿಯನ್ನು ಕ್ರಮಿಸಿದವರು, ಆಮೇಲೆ ಹಿಂದಿರುಗಿ ಸವೆಯದ ಹಾದಿ ಹಿಡಿದು ಮುಂದುವರಿಯುತ್ತಿರುವವರು. ಅವರ ಕಥೆಗಳಂತೆ ಪುರುಷಾವತಾರ ಎನ್ನುವ ಈ ಕಾದಂಬರಿಯು ಕೂಡಾ ನನ್ನ ಈ ಮಾತಿಗೆ ಸಾಕ್ಷಿಯಾಗಿದೆ.
ಕನ್ನಡ ಕಥೆ ಕಾದಂಬರಿಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿ ನೋಡಬಹುದು. ಮೊದಲ ರೀತಿಯಲ್ಲಿ ಗಟ್ಟಿಯಾದ ಕಥಾ ವಸ್ತುವಿನ (Plot) ಆಂತರ್ಯದಲ್ಲಿ-ಹಾಲಿನಲ್ಲಿ ಅಡಗಿರುವ ತುಪ್ಪದ ಹಾಗೆ – ವಸ್ತುವು (Theme) ಇದ್ದು ನಿರೂಪಣಾ ತಂತ್ರದ ಮೂಲಕ ಅದು ನಮಗೆ ಹೊಳೆಯುತ್ತಾ ಹೋಗುತ್ತದೆ.ಎರಡನೇ ರೀತಿಯಲ್ಲಿ ವಸ್ತುವೇ ಮುಖ್ಯವಾಗಿದ್ದು ಅದನ್ನು ಸ್ಪಷ್ಟಪಡಿಸಲೆನ್ನುವ ಹಾಗೆ ಕಥಾವಸ್ತುವಿನ ಹಂದರವಿರುತ್ತದೆ. ಕನ್ನಡದಲ್ಲಿ, ತ ರಾ ಸು ಅವರ “0-0=0,ಶ್ರೀಕಾಂತ, ವೀರಭದ್ರ ಮೊದಲಾದವರ ಕಥೆಗಳು, ಶೌರಿಯ “ಹಳದಿ ಮೀನು”,ಕುಸುಮಾಕರ ದೇವರಗೆಣ್ಣೂರರ ಕೊನೆಯ ಕಾದಂಬರಿ(ಹೆಸರು ಮರೆತೆ)ಮೊದಲಾದವುಗಳೊಂದಿಗೆ ಕುಂಟಿನಿಯವರ ಈ ಕಾದಂಬರಿಯನ್ನೂ ಸೇರಿಸಬಹುದು.
“ದಾಟಿಕೊಳ್ಳುವುದು” ಈ ಕಾದಂಬರಿಯ ಮುಖ್ಯ ವಸ್ತು. ದಾಟಿಕೊಳ್ಳುವ ಆಸಕ್ತಿ, ಕುತೂಹಲ ಹಾಗೂ ಎದುರಾಗುವ ಸಂಕಷ್ಟಗಳನ್ನು ಗುರುತಿಸಲು ಈ ಕಾದಂಬರಿಯು ಯತ್ನಿಸುತ್ತದೆ.ಪ್ರೇಮ ಕಾಮಗಳ ಆಚೆ,-ಇಲ್ಲಿ ಬರುವ ಸ್ಯಾಂಡಿ ಹೇಳುವ ಝೀರೋ ಟ್ರಿಪ್ಪಿನ ದೇಹ ಮನಸ್ಸುಗಳ ಆಚೆ, ದಾಟಿ ಕೊಳ್ಳಲು ಮಾಡುವ ಪ್ರಯತ್ನಗಳು ಇಲ್ಲಿವೆ.ಅದು, ಕಾಣುವ ಲೋಕದ ಆಚೆಗಿನ ಕಾಣದ ಲೋಕವನ್ನು ಕಾಣಲು ಮಾಡುವ ಪ್ರಯತ್ನ ಅಥವಾ ಕಾಣದುದನ್ನು ತೆಕ್ಕೆಗೊಗ್ಗಿಸುವ ಹಾದಿಯ ಹುಡುಕಾಟ.ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ತುರುಸು!

‘ಪುರುಷಾವತಾರ’ ಲೇಖಕ ಗೋಪಾಲಕೃಷ್ಣ ಕುಂಟಿನಿ

ಈ ಅಮೂರ್ತ ಅನುಭವವನ್ನು ಮೂರ್ತಗೊಳಿಸುವ ಕಥಾ ಹಂದರ ಇಲ್ಲಿದೆ.ಅದನ್ನು ಇಲ್ಲಿ ಬರುವ ಒಂಟಿ ಪಾಲದ ರೂಪಕವು ಸಮರ್ಥವಾಗಿ ಹಿಡಿದಿಡುತ್ತದೆ.ಚೀಪು,ವಿಕಾಸು,ವಿನುತಾ ಎನ್ನುವ ಮೂವರು ನಾಗರಿಕ ಲೋಕದ ಮಾನವ ಶಾಸ್ತ್ರಜ್ಞರು ಇರುವ ,ಕಾಣುವ ಲೋಕದಿಂದ ದೂರವಾದ, ಸನ್ಯಾಸಿ ಮೂಲೆ ಅರಣ್ಯದಲ್ಲಿರುವ ಗುಹೆಯ ಸಂಶೋಧನೆಗಾಗಿ ನಡೆಸುವ ಪಯಣ, ಹೊಳೆಗೆ ಅಡ್ಡವಾಗಿ ಹಾಕಿದ ಒಂಟಿ ಮರದ ,ಕೈತಾಂಗು ಇಲ್ಲದ ಪಾಲವನ್ನು ಹೇಗೋ ದಾಟಿಕೊಂಡು ಆಚೆಯ ಅರಣ್ಯ ಸೇರಿದಾಗ ಅವರಿಗೆ ಸಿಗುವ ಗುರಯ್ಯನ ಮೂಲಕ ಅವರಿಗೆ ಬೇರೆಯದೇ ಲೋಕದ ದರ್ಶನವಾಗುತ್ತದೆ. ಅದು ಅವರಿಗೆ ಅನೂಹ್ಯವೂ ನಿಗೂಢವೂ ಆದ ಲೋಕ.ಆಮೇಲೆ ಆ ವಿಚಿತ್ರ ಪುರುಷ ಗುರಯ್ಯನ ಸಹಕಾರದಿಂದ ಕಂಡು ಹಿಡಿದ ಗುಹೆ ಹಾಗೂ ಅಲ್ಲಿ ಕಾಣಿಸಿಕೊಂಡ ನಗ್ನದೇಹಿ ಯೋಗಿಯೊಬ್ಬನ ಮೂಲಕ ಪಡೆದುಕೊಂಡ ದರ್ಶನವು ಈ ಕಾದಂಬರಿಯ ಕಥಾವಸ್ತುವಾಗಿದೆ. ಅವರ ಈ ಪಯಣವು ಕಾಲದಲ್ಲಿನ ಹಿಂಪಯಣ ಎಂದೂ ಹೇಳಬಹುದು.ನಗ್ನದೇಹಿ ಇವರೊಡನೆ ಕೇಳುವ,”ರಾಮ ರಾವಣರ ಯುದ್ಧ ಮುಗಿಯಿತಾ” ಎನ್ನುವ ಮಾತು ಇದನ್ನೇ ಸೂಚಿಸುತ್ತದೆ.
ಈ ಕಾದಂಬರಿಯನ್ನು ಓದುತ್ತಿದ್ದಂತೆ ನನಗೆ ಕಾರಂತರ “ಬೆಟ್ಟದ ಜೀವ”ಕಾದಂಬರಿಯು ನೆನಪಾಯಿತು ಅದರಲ್ಲೂ ಇಲ್ಲಿನಂತೆಯೆ ನಾಗರಿಕ ಲೋಕದ ಶಿವರಾಮನು ಒಂಟಿ ಪಾಲವನ್ನು ಮಂಗನ ಹಾಗೆ ಕಸರತ್ತು ಮಾಡಿ ದಾಟಿ ಆಚಿನ ಅರಣ್ಯವನ್ನು ಸೇರುತ್ತಾನೆ.ಆ ಅರಣ್ಯದ ನಡುವೆ ಅವನು ಭೇಟಿಮಾಡುವ ಗೋಪಾಲಯ್ಯನ ಉದಾತ್ತ ವ್ಯಕ್ತಿತ್ವ ಅವನಿಗೆ ಹೊಸದೇ ಆದ ಅನಿರ್ವಚನೀಯ ಅನುಭವವನ್ನು ನೀಡುತ್ತದೆ.ಈ ಎರಡೂ ಸಂದರ್ಭಗಳಲ್ಲಿ ಒಂಟಿ ಪಾಲದ ರೂಪಕದ ಮೂಲಕ ಅವರು ಪಡೆಯುವ ಹೊಸ ಅನುಭವವು ಗಮನಾರ್ಹ.ಕಾರಂತರು ಲೌಕಿಕ ನಿಷ್ಟರಾಗಿರುವುದು ಹಾಗೂ ಕುಂಟಿನಿ ಅಲೌಕಿಕದತ್ತ ಮುಖಮಾಡಿರುವುದಷ್ಟೇ ವ್ಯತ್ಯಾಸ.

ಕಾದಂಬರಿಯೊಂದರಲ್ಲಿ ವಸ್ತುವೇ ಮುಖ್ಯವಾಗಿ ಕಥಾವಸ್ತುವು ನಂತರದ್ದಾದಾಗ ಎದುರಾಗುವ ಸಲೀಸು ಸಂವಹನದ ತೊಡಕುಗಳು ಇಲ್ಲಿಯೂ ಇವೆ.ಆದರೆ ಕುಂಟಿನಿ ಹಿಡಿದಿರುವ ಈ ಹೊಸ ಹಾದಿಯ ಪಯಣ ಕುತೂಹಲಕಾರಿಯಾಗಿದೆ.ಅದನ್ನು ಅರ್ಥೈಸಿಕೊಳ್ಳಲು ನಾವೂ ಅವರ ಜತೆ ಹೆಜ್ಜೆ ಹಾಕಬೇಕಾಗಿದೆ.

  • ಸುಬ್ರಾಯ ಚೊಕ್ಕಾಡಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW