ರಾತ್ರಿ ಹನ್ನೆರಡು ಗಂಟೆ ಕತೆ – ಪ್ರಿಯಾ ಆರ್.ಪಿ 



ಗಡಿಯಾರದಲ್ಲಿ ಆಗ ಹನ್ನೆರಡು ಗಂಟೆ, ಯಾರೋ ನನ್ನ ಹೊದಿಕೆಯನ್ನು ಎಳೆದಂತಾಯಿತು, ಕಣ್ಣು ತೆರೆದು ನೋಡಿದರೆ ಸುತ್ತಲೂ ಯಾರು ಇಲ್ಲ…ಅದು ದೆವ್ವನಾ? ಅಥವಾ ನನ್ನ ಭ್ರಮೇನಾ?… ಪರಿಣಿತಳಿಗೆ ಭಯ ಶುರುವಾಯಿತು ಮುಂದೇನಾಯಿತು ಓದಿ ಪ್ರಿಯಾ ಆರ್.ಪಿ  ಅವರು ಬರೆದ ಸಣ್ಣಕತೆ….

ರಾತ್ರಿ ಗಂಟೆ ಹನ್ನೆರಡು ಆಗಿದೆ ಎಂದು ತಿಳಿಸಲು ಗಡಿಯಾರ ಒಮ್ಮೆ ಜೋರಾಗಿ ತನ್ನ ಇರುವಿಕೆಯನ್ನ ತೋರಿಸಿತು. ಆಗಷ್ಟೇ ನಿದ್ದೆಗೆ ಜಾರಿದ್ದ ಅವಳು ಗಡಿಯಾರದ ಸದ್ದಿಗೆ ಮತ್ತೊಮ್ಮೆ ರೊಗ್ಗೊದ್ದು ಮುದುಡಿ ಮಲಗಿದಳು. ಆಗಷ್ಟೇ ನಿದ್ದೆ ಆವರಿಸಿದ ಅವಳಿಗೆ ತನ್ನ ಸುತ್ತು ಏನು ನಡೆಯುತ್ತಿದೆ ಎಂಬ ಅರಿವಿರಲಿಲ್ಲ. ಆಕೆಯ ಮೈ ಮೇಲಿನ ಹೊದಿಕೆ ನಿಧಾನವಾಗಿ, ಕೆಳಗೆ ಜಾರಲು ಈಕೆ ಅದನ್ನ ಸರಿ ಮಾಡಿಕೊಳ್ಳಲು, ಒಂದು ಐದಾರು ಬಾರಿ ಇದೆ ನಡೆಯಿತು. ನೋಡುವಷ್ಟು ಒಮ್ಮೆ ಜೋರಾಗಿ ಎಳೆದುಕೊಂಡು ಮಲಗಿದಳು. ಸ್ವಲ್ಪ ಹೊತ್ತೊಗೆ ಮತ್ತೆ ಅಷ್ಟೇ ಜೋರಾಗಿ ಅವಳ ಹೊದಿಕೆ ಕೆಳಗೆ ಬಿದ್ದಿತ್ತು.

ತಾನು ಕಾಣುತ್ತಿರುವುದು ಕನಸಲ್ಲ ಎಂಬುದನ್ನ ಖಚಿತಪಡಿಸಿಕೊಳ್ಳಲು ನಿಧಾನವಾಗಿ ಕಣ್ಬಿಟ್ಟವಳಿಗೆ ಉಸಿರೇ ನಿಂತು ಹೋದಂತ ಅನುಭವ. ತಾನು ನೋಡುತ್ತಿರುವುದು ಸುಳ್ಳೋ ನಿಜವೋ ಎಂದು ತಿಳಿದುಕೊಳ್ಳಲು ಒಮ್ಮೆ ಕಿರುಚ ಬೇಕು ಎನಿಸಿತು. ಆದರೆ ಆಕೆಯ ಧನಿ ಅವಳಿಗೆ ಸಾತ್ ನೀಡಲಿಲ್ಲ. ಹಣೆಯ ಮೇಲಿನ ಬೆವರು ನಿಧಾನವಾಗಿ ಭೂಮಿ ಸೇರುತ್ತಿದ್ದರು ಅದನ್ನ ಒರೆಸಿಕೊಳ್ಳಲು ಅವಳ ಕೈ ನಡುಗುತ್ತಿದ್ದವು. ಅಲ್ಲಿಂದ ಎದ್ದು ಓಡಲು ಅವಳ ಕಾಲುಗಳು ಸ್ವಾದೀನವೆ ಇಲ್ಲದಂತೆ ಇದ್ದವು. ಗಂಟಲ ಪಸ್ಸೆ ಒಣಗುತ್ತಿತ್ತು, ಆದದ್ದು ಆಗಲಿ ಒಮ್ಮೆ ಕಿರುಚಿ ನೋಡಿಯೇ ಬಿಡೋಣ ಎಂದು ಬಾಯಿ ತೆರೆಯಲು ಹೋದವಳಿಗೆ ರಪ್ ಎಂದು ಕೆನ್ನೆ ಮೇಲೆ ಒಂದು ಏಟು ಬಿದ್ದಿತ್ತು.

ಫೋಟೋ ಕೃಪೆ : medicalnewstoday

ಹೊಡೆದ ರಭಸಕ್ಕೆ ಕುಳಿತ ಬಂಘಿಯಲ್ಲೇ ಮತ್ತೆ ಹಾಸಿಗೆಯ ಮೇಲೆ ಉರುಳಿದಳು. ಮತ್ತೆ ಸವರಿಸಿ ಕಣ್ಬಿಟ್ಟವಳಿಗೆ ಕಂಡಿದ್ದು, ಎಷ್ಟೋ ದಿನದಿಂದ ಹಸಿದಿರುವ ತೋಳಗಳಂತೆ ತನ್ನನ್ನೇ ನೋಡುತ್ತಿರುವ ಐದಾರು ಬಿಳಿ ನೆರಳುಗಳು. ಆಕ್ಷಣಕ್ಕೆ ಆಕೆಗೆ ಅನಿಸಿದ್ದು ಒಂದೇ, ತಾನು ಬದುಕಿ ಉಳಿದರೆ ಸಾಕು ಎಂದು. ನಿಧಾನವಾಗಿ ಮೇಲೆ ಎದ್ದವಳು, ಅದರುತ್ತಿರುವ ಕಂಠದಲ್ಲೇ ” ಯಾರು, ಯಾರು ನೀವೆಲ್ಲ ” ಎಂದು ಕೇಳಿದಳು.

ಅವಳ ಪ್ರಶ್ನೆಗೆ ತಮ್ಮಲ್ಲೇ ನಕ್ಕಿದವರು, ” ನಾವು ಯಾರಾ? ಭಲೇ ಹುಡುಗಿ… ಬೆಳಗ್ಗೆಯಷ್ಟೇ ನಮನ್ನ ಕಂಡರೆ ಭಯ ಇಲ್ಲ, ನನ್ನ ಕೂದಲು ಸಹ ಮುಟ್ಟೋಕೆ ಆಗಲ್ಲ ಎಂದವಳು, ಈಗ ನಮಗೆ ಹೆದರು ಯಾರು ಯಾರು ನೀವು ಅಂತ ಕೇಳುತ್ತಿದ್ದೀಯ…. ” ಎಂದು ಅವಳಂತೆ ಅನುಕರಣೆ ಮಾಡಿದವು.

ಇನ್ನೊಂದು ನೆರಳು ಅವಳ ಕೆನ್ನೆಗೆ ಮತ್ತೊಂದು ಏಟು ಕೊಟ್ಟು, ” ಬೆಳಗ್ಗೆ ಭಾಷಣ ಬಿಗಿಯುವಾಗ ಭಯ ಇರಲಿಲ್ವಾ ಈಗ ಭಯ ಆಗ್ತಿದೀಯಾ, ಏನೋ ದೊಡ್ಡದಾಗಿ ಹೇಳಿದೆ ಯಾವ ದೆವ್ವ ಭೂತ, ಪೀಡೆ, ಪಿಶಾಚಿ ಕೊಡ ನನ್ನ ಮುಟ್ಟೋಕೆ ಈಗಲ್ಲ ಅಂತ, ಈಗ ಈಗ ಹೇಳು, ಅದೇ ಮಾತನ್ನ ” ಎಂದು ಕೆನ್ನೆಗಳು ಊದುವವರೆಗೂ ಹೊಡೆದವು.

ಹೊಡೆಸಿಕೊಂಡವಳು ಅಂದಿನ ದಿನವನ್ನ ನೆನೆಸಿಕೊಂಡಳು………



ಆಕೆ ಪರಿಣಿತ, ಓರ್ವ ಬಯೋಲೊಜಿಸ್ಟ್. ತಂದೆ ತಾಯಿಯ ಮುದ್ದು ಕೂಸು. ಅಣ್ಣ ವಿಜಯ್ ನಾ ಮುದ್ದು ತಂಗಿ. ವಿಜಯ್ ಮತ್ತು ಆಕೆಗೆ ಎಂಟು ವರ್ಷಗಳ ಅಂತರ. ಹಾಗಾಗಿ ಆಕೆ ತಂದೆ ತಾಯಿಗಿಂತ ಅಣ್ಣನ ಸುಪರ್ದಿಗೆಯಲ್ಲೇ ಬೆಳೆದಿದ್ದು ಹೆಚ್ಚು. ವಿಜಯ್ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ. ಹಾಗಿ ಅವನ ತಂಗಿಯನ್ನು ಕೂಡ ಬಹಳ ಗಟ್ಟಿಗಿತ್ತಿಯಾಗಿ ಬೆಳೆಸಿದ.

ವಿಜಯ್ನ ಮಡದಿ ದೇವಿಕಾ, ಓರ್ವ ಶಿಕ್ಷಕಿ. ಇನ್ನು ಇವರ ಪ್ರೀತಿಯ ಕುಡಿ ಪ್ರಾಣ ಮೂರು ವರ್ಷದ ಮುದ್ದು ಪೋರಿ. ಪರಿಣಿತ ಚಿಕ್ಕಂದಿನಿಂದಲೂ ಕೂಡ ಬಹಳ ಧೈರ್ಯವಂತೆ ಯಾಗಿ ಬೆಳೆದವಳು. ದೇವರೇ ಆಗಲಿ ದೆವ್ವವೇ ಆಗಲಿ ಅದು ಯಾವುದು ಇಲ್ಲ, ಅದೆಲ್ಲವೂ ನಮ್ಮ ಕಾರ್ಯದ ಪ್ರತಿಫಲ ಎಂದು ಭವಿಸಿದ್ದವಳು ಅವಳು. ಯಾವುದೇ ಹಬ್ಬಹರಿದಿನಗಳಲ್ಲಿಯೂ ಆಕೆ ಬುದ್ಧಿ ಬಂದಾಗಿನಿಂದ ದೇವಸ್ಥಾನದ ಮೆಟ್ಟಿಲು ಹತ್ತಿಲ್ಲ. ಸ್ವರ್ಗವೆ ಆಗಲಿ ನರಕವೆ ಆಗಲಿ ಅದು ನಾವು ಮಾಡುವ ಕೆಲಸಕ್ಕೆ ಸಿಗುವ ಫಲ ಅದನ್ನು ಕೂಡ ಸಾಯುವ ಮುಂಚೆಯೆ ನೋಡುತ್ತೇವೆ ಎಂದುಕೊಂಡಿದ್ದವಳು ಅವಳು. ಅವಳ ಎಲ್ಲಾ ಕೆಲಸಕ್ಕೂ ಅವಳ ಅಣ್ಣನದ್ದೇ ಸಾತು. ಒಬ್ಬೊಬ್ಬರ ಯೋಚನೆ ಒಂದೊಂದು ತರಹ ಎಂದು ತಂಗಿಗೆ ಆತ ಸುಪೋರ್ಟ್ ಮಾಡುತ್ತಿದ್ದ.

ಇಂತಹದ್ದೇ ಒಂದು ಸಂಧರ್ಭದಲ್ಲಿ ವಿಜಯ್ಗೆ ಒಂದು ಹಳ್ಳಿಗೆ ಟ್ರಾನ್ಸ್ಫರ್ ಆಗಿತ್ತು. ಆತ ತನ್ನ ಹೆಂಡತಿ ಮಗಳ ಜೊತೆಗೆ ಅಲ್ಲಿಗೆ ಹೊರತು ನಿಂತ. ಪರಿಣಿತ ಕೂಡ ಆ ಊರಿನಲ್ಲಿ ತಾನು ಮಾಡುತ್ತಿರುವ ರೀಸರ್ಚ್ ಸಹಾಯ ಆಗುವಂತೆ ತುಂಬಾ ಗಿಡಗಳ ರಾಶಿ ಇರುವ ಬೆಟ್ಟ ಇದೆ ಎಂದು ತಿಳಿದು ಅವಳು ಕೂಡ ಹೊರಟು ನಿಂತಳು. ವಿಜಯ್ ತನ್ನ ತಂದೆ ತಾಯಿಗೆ ಅವಳನ್ನು ಕೂಡ ತಮ್ಮ ಜೊತೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಅವಳನ್ನು ಕೂಡ ಕರೆದುಕೊಂಡು ಬಂದಿದ್ದ.

ಫೋಟೋ ಕೃಪೆ : 1075koolfm

ಊರಿನ ಹೆಬ್ಬಾಗಿಲಿಗೆ ಬಂದಾಗ ಅಲ್ಲೇ ಇದ್ದ ಅರ್ಚಕರು ಅವರನ್ನ ತಡೆದು, ಈ ಊರಿನಲ್ಲಿ ತುಂಬಾ ಗಾಳಿ ಕಾಟ ಇದೆ ಹಾಗಾಗಿ ಈ ದೇವಿ ದೇವಸ್ಥಾನಕ್ಕೆ ಬಂದು ಪೂಜೆ ಮಡಿಸಿ ತಾಯತ ಕಟ್ಟಿಸಿಕೊಳ್ಳಿ ಎಂದು ಹೇಳಿದರು. ಅವರವರ ನಂಬಿಕೆ ಅವರಿಗೆ ಎನ್ನುವಂತೆ ಎಲ್ಲರು ಹೋದರು ಪರಿಣಿತಾಳನ್ನ ಹೊರತುಪಡಿಸಿ. ಅರ್ಚಕರೇ ಖುದ್ದಾಗಿ ಬಂದು ಕರೆದಾಗಲೂ ಆಕೆ ಒಳಗೆ ಬರದೇ, ” ನನಗೆ ಇದರಲ್ಲಿ ನಂಬಿಕೆ ಇಲ್ಲ. ಯಾವ ದೆವ್ವ, ಭೂತ, ಪೀಡೆ, ಪಿಶಾಚಿಯಾಗಲಿ ನನ್ನನ್ನು ಏನು ಮಾಡೋಕೆ ಆಗಲ್ಲ. ಈ ದೆವ್ವ ಭೂತ ಅಂತ ಏನು ಇಲ್ಲ, ಇದ್ದರು ನನ್ನ ಒಂದು ಕೂದಲು ಸಹ ಕೇಳೋಕೆ ಆಗಲ್ಲ. ಅಕಸ್ಮಾತಾಗಿ ನೀವು ಹೇಳುವಂತೆ ದೆವ್ವ ಭೂತ ಇದ್ದರೆ ನನ್ನ ಎದುರಿಗೆ ಬರೋಕೆ ಹೇಳಿ, ಆಗ ಬೇಕಾದ್ರೆ ನಂಬುವೆ ” ಎಂದು ಅಸಡ್ಡೆಯಲ್ಲಿ ಹೇಳಿದ್ದಳು. ಈಗ ಅವಳೇ ತಾನು ಬೆಳಗ್ಗೆ ಆಡಿದ ಮಾತುಗಳಿಗೆ ತನ್ನನ್ನು ತಾನು ಶಪಿಸಿಕೊಳ್ಳುತ್ತಿದ್ದಳು.

ಅವಳ ಕೂದಲು ಹಿಡಿದು ಮೇಲೆ ಎತ್ತಿ ” ಈಗ ಭಯ ಆಗ್ತಿದೀಯಾ, ಮಾತು ಆಡಬೇಕಾದ್ರೆ ನೆನಪಾಗಲಿಲ್ವ ” ಎಂದು ಅಲ್ಲೇ ಇದ್ದ ನೀರಿನ ಜುಗ್ಗನ್ನ ಅವಳ ಮೇಲೆ ಎಸೆದವು. ಅದು ಇಷ್ಟು ಆಗುತ್ತೋ ಅಷ್ಟ್ರಲ್ಲಿ ಮಟ್ಟಿಗೆ ಅವಳನ್ನ ಹಿಂಸಿಸಿದರು. ಸ್ವಲ್ಪ ಹೊತ್ತಿಗ್ಗೆ ಕಿಟ್ಟಿಗೆಯ ಒಳಗಿಂದ ಬಂದ ಇನ್ನಂದು ಬಿಳಿ ನೆರಳು, ” ಸಾಕು ಹಿಂಸೆ ಮಾಡಿದ್ದು, ಹೊರಡಿ ಎಲ್ಲಾ ತುಂಬಾ ಆಗೋಯ್ತು. ಅವರವರ ನಂಬಿಕೆ ಅವರಿಗೆ ಇನ್ನು ಹೆಚ್ಚು ಮಾಡಿದರೆ ನಾನು ಸುಮ್ಮನೆ ಇರೋದಿಲ್ಲ ” ಎಂದು ಅಬ್ಬರಿಸಿತು.

” ಇವನೊಬ್ಬ ಗುಂಪಿಗೆ ಸೇರದವ, ತಾನು ಕೊಡ ಏನು ಮಾಡೋಲ್ಲ ಬೇರೆಯವರಿಗೂ ಏನು ಮಾಡೋಕೆ ಬಿಡಲ್ಲ, ಅದರಲ್ಲೂ ಹೆಣ್ಣುಮಕ್ಕಳು ಅಂದ್ರೆ ಇನ್ನು ಹೆಚ್ಚು ಪ್ರೀತಿ ” ಎಂದು ತಮ್ಮಲ್ಲೇ ಹೇಳಿಕೊಂಡು ಪರಿಣಿತಾಳಿಗೆ ಮೂರ್ಛೆ ತಪ್ಪುವಂತೆ ಹೊಡೆದು, ನಗುತ್ತಾ ಕೇಕೆ ಹಾಕುತ್ತ ಅಲ್ಲಿಂದ ಹೋರಟವು.



ತನ್ನ ಮೇಲೆ ಯಾರೋ ನೀರು ಹಾಕಿದಂತೆ ಭಾಸವಾಗಿ ಕಣ್ಬಿಟ್ಟವಳಿಗೆ ಕಂಡಿದ್ದು, ತುಂಬಿದ ಕಣ್ಣುಗಳಲ್ಲಿ, ಗಾಭರಿಯಿಂದ ತನ್ನನ್ನೇ ತದೇಕವಾಗಿ ನೋಡುತ್ತಿದ್ದ ಅವಳ ಅಣ್ಣ. ಅವನನ್ನ ತಬ್ಬಿಕೊಂಡು ರಾತ್ರಿ ಆಗಿದ್ದನೆಲ್ಲ ತಡಬಡಿಸುತ್ತ ಹೇಳಿ ತನಗೆ ಆ ತಾಯತ ಬೇಕು ಎಂದು ಪುಟ್ಟ ಮಗುವಂತೆ ಅಳುತ್ತಾ ಹೇಳಿದಳು. ವಿಜಯ್ ಅವಳನ್ನ ಸಮಾಧಾನ ಮಾಡಿ, ರಾತ್ರಿ ಆಕೆ ಕಂಡಿದ್ದು ಕನಸು ನಿದ್ದೆಯಲ್ಲಿ ಇಲ್ಲಿ ಬಂದು ಮಲಗಿದ್ದೀಯ ಅನಿಸುತ್ತೆ ಎಂದು ಹೇಳಿ ಅವಳನ್ನ ಸಮಾಧಾನ ಮಾಡಿ ಅಲ್ಲಿಂದ ಹೋಗಿದ್ದರು.

ರಾತ್ರಿಯ ಯೋಚನೆಯಲ್ಲಿ ಮಲಗಿದ್ದವಳಿಗೆ ತಾನು ರಾತ್ರಿ ಕಂಡಿದ್ದು ನಿಜವೋ… ಸುಳ್ಳೋ… ಎಂದು ಯೋಚಿಸುತ್ತ ಕುಳಿತವಳಿಗೆ ಮಂಚದ ಅಡಿಯಲ್ಲಿ ಬಿದ್ದಿದ್ದ ನೀರಿನ ಜಗ್, ಮತ್ತೆ ಚೆಲ್ಲಿದ್ದ ನೀರನ್ನ ನೋಡಿ ನಿಜವೇ? ಎಂದು ತಿಳಿಯಿತು. ಜೊತೆಗೆ ಅಲ್ಲಿಯೇ ಬಿದ್ದಿದ್ದ ಲೆಟರ್ ಸಹ. ಹಾಸಿಗೆಯ ಮೇಲೆ ಲೆಟರ್ ಓದುತ್ತ ಕುಳಿತವಳಿಗೆ ತನ್ನ ಮುಂದಿನ ತೊಂದರೆಯ ಅರಿವಾಗಿತ್ತು.

” ಒಬ್ಬೊಬ್ಬರ ಅನಿಸಿಕೆ ಒಂದೊಂದು ತರಹ. ನಮಗೆ ಕೆಲವು ವಿಷಯಗಳಲ್ಲಿ ನಂಬಿಕೆ ಇಲ್ಲ, ಅಂದ ಮೇಲೆ ಅದನ್ನ ಬಿಟ್ಟು ಸುಮ್ಮನೆ ಆಗಿ ಬಿಡಬೇಕು. ಇಲ್ಲವಾದಲ್ಲಿ ನಂಬಿಕೆ ಬರಿಸಲು ಈ ರೀತಿಯ ಕೆಲಸಗಳು ನಡೆಯುತ್ತವೆ. ಹೆದರಿಕೆ ಬೇಡ, ಇನ್ನು ಮುಂದೆ ಸದಾ ನಿನ್ನ ಕಾವಲಿಗೆ ನಾನಿರುವೆ, ಅದು ಕೂಡ ಯಾವಾಗಲು ನಿನ್ನ ಜೊತೆಗೆ.

– ಇಂತಿ
ನಿನ್ನವನು
(ಲೆಟರ್ ಓದಿ ಮುಗಿಸಿದವಳಿಗೆ ತನ ಭುಜದ ಮೇಲೆ ತಲೆ ಇಟ್ಟಿದ ಅದೇ ಬಿಳಿ ನೆರಳಿನ ಬಗ್ಗೆ ತಿಳಿಯಲೇ ಇಲ್ಲ.)


  • ಪ್ರಿಯಾ ಆರ್.ಪಿ  (ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ, ಕತೆ ಬರೆಯುವುದನ್ನು ಹತ್ತನೇಯ ತರಗತಿಯಲ್ಲಿರುವಾಗಲೇ ಸಾಹಿತ್ಯದತ್ತ ಆಸಕ್ತಿ ಹುಟ್ಟಿಸಿಕೊಂಡವರು, ಸಾಕಷ್ಟು ಸಣ್ಣ ಕತೆಗಳನ್ನು ಬರೆದಿದ್ದಾರೆ ).

3 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW