ಸೋಪಾನ ಬಾವಿಗಳು – ವಸಂತ ಗಣೇಶ್

ಸಾಮಾನ್ಯವಾಗಿ ನಾವು ಕೆಳಗಿನಿಂದ ಮೇಲಕ್ಕೆ ಅಂತಸ್ತುಗಳನ್ನು ಕಟ್ಟುತ್ತೇವೆ. ಆದರೆ ರಾಣಿ ಕಿ ವಾವ್ ನಲ್ಲಿ ಮೇಲಿನಿಂದ ಕೆಳಕ್ಕೆ ಏಳು ಅಂತಸ್ತುಗಳನ್ನು ಕಟ್ಟಲಾಗಿದೆ. ಹಾಗಾಗಿ ಇದೊಂದು ತಲೆಕೆಳಗಾದ ಬಾವಿ ಎನ್ನಬಹುದು. ಸೋಪಾನ ಬಾವಿಗಳ ಕುರಿತು ವಸಂತ ಗಣೇಶ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಮನುಷ್ಯನ ಆವಶ್ಯಕತೆಗಳಲ್ಲಿ ಮುಖ್ಯವಾದವುಗಳಲ್ಲಿ ನೀರೂ ಕೂಡ ಒಂದು. ಈ ನೀರು ಕೆರೆ, ಕಟ್ಟೆ, ನದಿ, ಝರಿ, ತೊರೆಗಳಲ್ಲಿ ಬಾವಿಗಳಲ್ಲಿ ದೊರೆಯುತ್ತದೆ. ಇತ್ತೀಚೆಗೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆಯಾದರೂ ಹಿಂದೆಲ್ಲ ನೀರು ಈಗಿನಂತೆ ನಳದಲ್ಲಿ ( ನಲ್ಲಿ) ಬರುತ್ತಿರಲಿಲ್ಲ. ಊರಿನಲ್ಲಿ ಅಲ್ಲಲ್ಲಿ ಇದ್ದ ಬಾವಿಗಳಿಂದ ನೀರನ್ನು ತರಬೇಕಿತ್ತು.

ಮೊದ ಮೊದಲಿನ ಬಾವಿಗಳನ್ನು ಕಲ್ಲಿನಿಂದ ಮಾಡಲಾಗುತ್ತಿತ್ತು, ನಂತರದ ಬಾವಿಗಳನ್ನು ಗಾರೆ, ಕಲ್ಲುಮಣ್ಣು ಮತ್ತು ಲ್ಯಾಮಿನಾರ್ ಕಲ್ಲುಗಳಿಂದ ಮಾಡಲಾಗಿದೆ. ಹರಪ್ಪ ಮೊಹೆಂಜೊದಾರೊ ನಾಗರೀಕತೆಯ ಕಾಲದಲ್ಲಿ ಬಾವಿಗಳ ಪತ್ತೆಯಾಗಿದೆ. ಅವು ಸೋಪಾನ ಬಾವಿಗಳನ್ನು ಸ್ವಲ್ಪ ಮಟ್ಟಿಗೆ ಹೋಲುತ್ತವೆ ಎನ್ನಲಾಗಿದೆ. ಇವೇ ಬಾವಿಗಳು ಮುಂದೆ ಸೋಪಾನ ಬಾವಿಗಳಿಗೆ ಪ್ರೇರಣೆಯಾಗಿರಬಹುದು. ಮೊಹೆಂಜದಾರೋ ನಗರದ ಕೇವಲ ಒಂದು ವಿಭಾಗದಲ್ಲಿ ಸುಮಾರು 700 ಬಾವಿಗಳನ್ನು ಕಂಡುಹಿಡಿಯಲಾಗಿದೆ. ಸಿಲಿಂಡರಾಕಾರದ ಇಟ್ಟಿಗೆಯಿಂದ ಮಾಡಿದ ಬಾವಿಗಳನ್ನು ಸಿಂಧೂ ಕಣಿವೆಯ ನಾಗರಿಕತೆಯ ಜನರು ಕಂಡುಹಿಡಿದಿದ್ದಾರೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಅಂತಹ ಬಾವಿಗಳಲ್ಲಿ ಹಲವಾರು ವಿಧಗಳು ಇತ್ತು, ಕೆಲವು ಬಾವಿಗಳಿಗೆ ರಾಟೆ ಅಳವಡಿಸಿದ್ದರೆ, ಇನ್ನು ಕೆಲವು ನೆಲ ಬಾವಿಗಳು ಇದ್ದವು. ಮತ್ತೆ ಕೆಲವು ಸೋಪಾನ (ಮೆಟ್ಟಿಲು) ಬಾವಿಗಳು ಇದ್ದವು. 11 ನೇ ಶತಮಾನದ ಹೊತ್ತಿಗೆ ಸೋಪಾನ ಬಾವಿಗಳ ಯೋಜನೆ ಮತ್ತು ವಿನ್ಯಾಸಕ್ಕೆ ವಾಸ್ತುಶಿಲ್ಪವೂ ಸೇರಿಕೊಂಡಿತು. ಹೀಗೆ ಇದ್ದಂತಹ ಸೋಪಾನ ಬಾವಿಗಳು ಇಡೀ ಊರಿನ ಜನರಿಗೆ ನೀರನ್ನು ಒದಗಿಸುವ ಜೊತೆಗೆ ತಮ್ಮ ಸುಂದರ ಕೆತ್ತನೆಗಳಿಂದ ಪ್ರಸಿದ್ಧವಾಗಿವೆ. ಮತ್ತೆ ಕೆಲವು ಬಾವಿಗಳಿಗೆ ಇತಿಹಾಸ ಕೂಡ ಇದೆ.

ಅಂತಹ ಅನೇಕ ಬಾವಿಗಳು ನೀರಿನ ಆಸರೆ ಒದಗಿಸಿ ಪ್ರಯೋಜನಕಾರಿಯಾಗಿದ್ದುದರ ಜೊತೆಗೆ ಗಮನಾರ್ಹವಾದ ವಾಸ್ತುಶಿಲ್ಪದ ಕೆತ್ತನೆಗಳಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಿಂದೆ ಈ ಸೋಪಾನ ಬಾವಿಗಳು ಪ್ರಯಾಣಿಕರಿಗೆ ಮಾರ್ಗ ಮಧ್ಯದಲ್ಲಿ ವಿಶ್ರಾಂತಿ ಗೃಹದ ರೀತಿಯಲ್ಲಿ ಉಪಯೋಗವಾಗುತ್ತಿದ್ದವು.

ಅಂತಹ ಕೆಲವು ಸೋಪಾನ ಬಾವಿಗಳ ಕುರಿತು ಕಿರು ಮಾಹಿತಿ ನೀಡುವ ಒಂದು ಪ್ರಯತ್ನ ಮಾಡುತ್ತಿದ್ದೇನೆ.

ಫೋಟೋ ಕೃಪೆ :google

#ರಾಣಿ_ಕಿ_ವಾವ್

ಗುಜರಾತಿ ಭಾಷೆಯಲ್ಲಿ , (ಮೆಟ್ಟಿಲು) ಸೋಪಾನ ಬಾವಿಯನ್ನು ವಾವ್ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಇದನ್ನು ಬಾವೊಲಿ ಎಂದು ಕರೆಯಲಾಗುತ್ತದೆ ಬಾವಡಿ, ಬಾವ್ರಿ ಎಂದು ಸಹ ಉಚ್ಚರಿಸುತ್ತಾರೆ.

5ನೇ ಶತಮಾನದಿಂದ 19 ನೇ ಶತಮಾನದ ನಡುವೆ ನಿರ್ಮಿಸಲಾದ ಸೋಪಾನ ಬಾವಿಗಳು ಪಶ್ಚಿಮ ಭಾರತದಲ್ಲಿ ಸಾಮಾನ್ಯವಾಗಿದೆ. ಗುಜರಾತ್ ನಲ್ಲಿ 120 ಕ್ಕೂ ಹೆಚ್ಚು ಇಂತಹ ಸೋಪಾನ ಬಾವಿಗಳು ಇವೆಯೆಂದು ವರದಿಯಾಗಿವೆ, ಅವುಗಳಲ್ಲಿ ರಾಣಿ ಕಿ ವಾವ್, ಅದಾಲಾಜ್‌ ನಲ್ಲಿರುವ ಬಾವಿಗಳು ಅತ್ಯಂತ ಜನಪ್ರಿಯವಾಗಿದೆ.

ರಾಣಿ ಕಿ ವಾವ್ ಎಂದರೆ ರಾಣಿಯ ಬಾವಿ, ರಾಣಿ ಕಟ್ಟಿಸಿದ ಬಾವಿ ಎಂದರ್ಥ. ನಮ್ಮ RBI ನ 100 ರೂಪಾಯಿ ನೋಟಿನ ಹಿಂಬದಿಯಲ್ಲಿ ಇರುವುದು ಇದೇ #ರಾಣಿ_ಕಿ_ವಾವ್ ನ ಚಿತ್ರ. ಈ ರಾಣಿ_ಕಿ_ವಾವ್ ನ್ನು ಇತ್ತೀಚೆಗೆ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ (ಜೂನ್ 2014). ಇದು ನಮ್ಮ ಭಾರತದ ಗುಜರಾತ್ ರಾಜ್ಯದ ಪಟಾಣ್ ಪಟ್ಟಣದ ಸರಸ್ವತಿ ನದಿ ದಂಡೆಯ ಮೇಲಿದೆ. ಇದನ್ನು ಏಳು ಅಂತಸ್ತುಗಳಲ್ಲಿ ಕಟ್ಟಲಾಗಿದೆ ಮತ್ತು ಇದೊಂದು ಚಿತ್ತಾಕರ್ಷಕ ಬಾವಿಯಾಗಿದೆ. ಈ ಸೋಪಾನ ಬಾವಿ ಮಾರು-ಗುರ್ಜರ ವಾಸ್ತುಶಿಲ್ಪ ಶೈಲಿಯಲ್ಲಿದೆ. ಇಲ್ಲಿನ ವಾಸ್ತುಶಿಲ್ಪ ಮತ್ತು ಶಿಲ್ಪಗಳು ಮೌಂಟ್ ಅಬುನಲ್ಲಿರುವ ವಿಮಲ ವಸಾಹಿ ದೇವಾಲಯ ಮತ್ತು ಮೊಧೇರಾದಲ್ಲಿರುವ ಸೂರ್ಯ ದೇವಾಲಯವನ್ನು ಹೋಲುತ್ತವೆ.

ಸಾಮಾನ್ಯವಾಗಿ ರಾಜರು ತಮ್ಮ ಗತಿಸಿದ ಪತ್ನಿಯರ ನೆನಪಿಗಾಗಿ ಸ್ಮಾರಕಗಳನ್ನು ನಿರ್ಮಿಸುತ್ತಾರೆ. ಆದರೆ ಇದು ರಾಣಿ ಒಬ್ಬಳು ತನ್ನ ಗತಿಸಿದ ಪತಿಗಾಗಿ (ರಾಜ) ನಿರ್ಮಿಸಿರುವ ಸ್ಮಾರಕವಾಗಿದೆ.

ಹತ್ತನೆ ಶತಮಾನದಲ್ಲಿ ಸೋಲಂಕಿ ರಾಜ ವಂಶದ ಉದಯಮತಿ ಎನ್ನುವ ರಾಣಿ ಗತಿಸಿದ ತನ್ನ ಪತಿ ಭೀಮದೇವನ ನೆನಪಿಗಾಗಿ ನಿರ್ಮಿಸಿದ್ದಾರೆ. ಅಗಲಿದ ಪತಿಯ ನೆನಪಿಗಾಗಿ ಜನರಿಗೆ ಉಪಯೋಗ ಆಗುವಂತಹ ಕಟ್ಟಡ ಒಂದನ್ನು ನಿರ್ಮಿಸುವ ಯೋಚನೆಯಲ್ಲಿ ಇರುತ್ತಾರೆ. ಆ ಸಮಯದಲ್ಲಿ ರಾಜ್ಯದಲ್ಲಿ ನೀರಿಗಾಗಿ ಬರ ಇರುತ್ತದೆ. ಹಾಗಾಗಿ ರಾಜನ ನೆನಪಿಗಾಗಿ ಬಾವಿಯೊಂದನ್ನು ನಿರ್ಮಿಸಲು ನಿರ್ಧರಿಸುತ್ತಾರೆ.

ಫೋಟೋ ಕೃಪೆ : google

ಇದೊಂದು ಉತ್ಕೃಷ್ಟವಾದ ವಾಸ್ತುಶಿಲ್ಪದ ಪ್ರತೀಕವಾಗಿದೆ. ಸಾಮಾನ್ಯವಾಗಿ ನಾವು ಕೆಳಗಿನಿಂದ ಮೇಲಕ್ಕೆ ಅಂತಸ್ತುಗಳನ್ನು ಕಟ್ಟುತ್ತೇವೆ. ಆದರೆ #ರಾಣಿ_ಕಿ_ವಾವ್ ನಲ್ಲಿ ಮೇಲಿನಿಂದ ಕೆಳಕ್ಕೆ ಏಳು ಅಂತಸ್ತುಗಳನ್ನು ಕಟ್ಟಲಾಗಿದೆ. ಹಾಗಾಗಿ ಇದೊಂದು ತಲೆಕೆಳಗಾದ ಬಾವಿ ಎನ್ನಬಹುದು. ಇದನ್ನು ನೋಡಿದಾಗ ಮೊದಲ ನೋಟಕ್ಕೆ ಇದೊಂದು ದೇವಾಲಯ ಎನಿಸುತ್ತದೆ. ಇದನ್ನು ಕಟ್ಟಲು ಸುಮಾರು ಇಪ್ಪತ್ತು ವರ್ಷಗಳ ಕಾಲ ತೆಗೆದುಕೊಂಡಿದೆ. ಇದು ಸುಮಾರು ವರ್ಷಗಳ ಕಾಲ ಸಾವಿರಾರು ಜನರಿಗೆ ನೀರನ್ನು ಪೂರೈಸಿದೆ. ಇದರ ಉದ್ದ ಸುಮಾರು 65 ಮೀಟರ್ ಅಗಲ 22 ಮೀಟರ್ ಮತ್ತು ಆಳ ಸುಮಾರು 27 ಮೀಟರ್. ಒಂದು ಅಂದಾಜಿನ ಪ್ರಕಾರ #ರಾಣಿ_ಕಿ_ವಾವ್ ನಲ್ಲಿ ದಶಾವತಾರದ ಶಿಲ್ಪಗಳು ಸೇರಿದಂತೆ ಒಟ್ಟು 800 ಶಿಲ್ಪಗಳಿವೆ. ಆಳಕ್ಕೆ ಇಳಿದು ನೀರು ತರಲು ಅನುಕೂಲ ಆಗುವಂತೆ ಮೆಟ್ಟಿಲುಗಳಿವೆ. ಆಳಕ್ಕೆ ಇಳಿದಂತೆಲ್ಲ ಬಾವಿಯ ಅಗಲ ವಿಸ್ತಾರವಾಗುತ್ತಾ ಹೋಗುತ್ತದೆ. ರಾಣಿ ಕೀ ವಾವ್ ನ ಒಂದು ಸ್ಥಳದಲ್ಲಿ ಗುಪ್ತವಾದ 30 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗವಿದೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ಇದನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

ಗೋಡೆಗಳು, ಕಂಬಗಳು, ಸ್ತಂಭಗಳು, ಆವರಣಗಳು ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಗೋಡೆಗಳಲ್ಲಿನ ಗೂಡುಗಳು ಸುಂದರವಾದ ಮತ್ತು ಸೂಕ್ಷ್ಮವಾದ ಆಕೃತಿಗಳು ಮತ್ತು ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿವೆ. ಮೆಟ್ಟಿಲು ಬಾವಿಯಲ್ಲಿ 212 ಕಂಬಗಳಿವೆ.

ಕಾಲಾನಂತರದಲ್ಲಿ ಸರಸ್ವತಿ ನದಿಯಲ್ಲಿ ಬಂದ ಪ್ರವಾಹದಿಂದ ಈ ರಾಣಿ ಕೀ ವಾವ್ ಹೂಳಿನಿಂದ ಮುಚ್ಚಿಹೋಗಿತ್ತು. 1980 ರ ದಶಕದಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ನಡೆದ ಉತ್ಖನನದಲ್ಲಿ ಹೂಳನ್ನು ತೆಗೆದು ಇದನ್ನು ಪುನರುಜ್ಜೀವನ ಗೊಳಿಸಿದರು. ಸರಸ್ವತಿ ನದಿಯಲ್ಲಿ ಪ್ರವಾಹ ಬಂದರೂ ಮುಚ್ಚದಂತೆ ರಕ್ಷಣೆಯನ್ನೂ ಒದಗಿಸಲಾಗಿದೆ.
ಇದನ್ನು ಭಾರತದ ಸೋಪಾನ ಬಾವಿಗಳ ರಾಣಿ ಎಂದೂ ಕರೆಯುತ್ತಾರೆ.


  • ವಸಂತ ಗಣೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW